Aranyaka Parva: Chapter 182

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೨

ತಾರ್ಕ್ಷ್ಯ ಅರಿಷ್ಟನೇಮಿ

ಯುಧಿಷ್ಠಿರನು ದ್ವಿಜಮುಖ್ಯರ ಮಹಾತ್ಮೆಯನ್ನು ಕೇಳಲು ಮಾರ್ಕಂಡೇಯನು ತಾರ್ಕ್ಷ್ಯ ಅರಿಷ್ಟನೇಮಿಯ ಚರಿತೆಯನ್ನು ಹೇಳುವುದು (೧-೨೧).

03182001 ವೈಶಂಪಾಯನ ಉವಾಚ|

03182001a ಮಾರ್ಕಂಡೇಯಂ ಮಹಾತ್ಮಾನಮೂಚುಃ ಪಾಂಡುಸುತಾಸ್ತದಾ|

03182001c ಮಾಹಾತ್ಮ್ಯಂ ದ್ವಿಜಮುಖ್ಯಾನಾಂ ಶ್ರೋತುಮಿಚ್ಚಾಮ ಕಥ್ಯತಾಂ||

ವೈಶಂಪಾಯನನು ಹೇಳಿದನು: “ಅನಂತರ ಮಹಾತ್ಮ ಮಾರ್ಕಂಡೇಯನಿಗೆ ಪಾಂಡುಸುತನು ಹೇಳಿದನು: “ದ್ವಿಜಮುಖ್ಯರ ಮಹಾತ್ಮೆಯನ್ನು ನಾವು ಕೇಳಬಯಸುತ್ತೇವೆ. ಹೇಳು.”

03182002a ಏವಮುಕ್ತಃ ಸ ಭಗವಾನ್ಮಾರ್ಕಂಡೇಯೋ ಮಹಾತಪಾಃ|

03182002c ಉವಾಚ ಸುಮಹಾತೇಜಾಃ ಸರ್ವಶಾಸ್ತ್ರವಿಶಾರದಃ||

ಈ ಮಾತುಗಳಿಗೆ ಆ ಮಹಾತಪಸ್ವಿ, ಮಹಾತೇಜಸ್ವಿ, ಸರ್ವಶಾಸ್ತ್ರವಿಶಾರದ ಭಗವಾನ್ ಮಾರ್ಕಂಡೇಯನು ಹೇಳಿದನು:

03182003a ಹೈಹಯಾನಾಂ ಕುಲಕರೋ ರಾಜಾ ಪರಪುರಂಜಯಃ|

03182003c ಕುಮಾರೋ ರೂಪಸಂಪನ್ನೋ ಮೃಗಯಾಮಚರದ್ಬಲೀ||

“ಹೈಹಯರ ಕುಲಕರ ಪರಪುರಂಜಯ ಕುಮಾರ ರೂಪಸಂಪನ್ನ ರಾಜನೊಬ್ಬನಿದ್ದನು. ಒಮ್ಮೆ ಅವನು ಬೇಟೆಗೆ ಹೋದನು.

03182004a ಚರಮಾಣಸ್ತು ಸೋಽರಣ್ಯೇ ತೃಣವೀರುತ್ಸಮಾವೃತೇ|

03182004c ಕೃಷ್ಣಾಜಿನೋತ್ತರಾಸಂಗಂ ದದರ್ಶ ಮುನಿಮಂತಿಕೇ||

03182004e ಸ ತೇನ ನಿಹತೋಽರಣ್ಯೇ ಮನ್ಯಮಾನೇನ ವೈ ಮೃಗಂ||

ಎತ್ತರಕ್ಕೆ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳಿಂದ ಕೂಡಿದ್ದ ಆ ಅರಣ್ಯದಲ್ಲಿ ತಿರುಗುತ್ತಿರುವಾಗ ಹತ್ತಿರದಲ್ಲಿ ಕೃಷ್ಣಾಜಿನವನ್ನು ಮೇಲುಹೊದಿಗೆಯಾಗಿ ಹೊದೆದಿದ್ದ ಮುನಿಯೋರ್ವನನ್ನು ನೋಡಿ, ಅವನು ಜಿಂಕೆಯೆಂದು ತಿಳಿದು ಆ ಅರಣ್ಯದಲ್ಲಿಯೇ ಅವನನ್ನು ಕೊಂದನು.

03182005a ವ್ಯಥಿತಃ ಕರ್ಮ ತತ್ಕೃತ್ವಾ ಶೋಕೋಪಹತಚೇತನಃ|

03182005c ಜಗಾಮ ಹೈಹಯಾನಾಂ ವೈ ಸಕಾಶಂ ಪ್ರಥಿತಾತ್ಮನಾಂ||

ಪೃಥಿವೀಪತೇ! ಆ ಕೆಲಸವನ್ನು ಮಾಡಿ ವ್ಯಥಿತನಾಗಿ ಶೋಕದಿಂದ ಚೇತನವನ್ನು ಕಳೆದುಕೊಂಡ ಅವನು ಪ್ರಥಿತಾತ್ಮ ಹೈಹಯರ ಬಳಿ ಹೋದನು.

03182006a ರಾಜ್ಞಾಂ ರಾಜೀವನೇತ್ರೋಸೌ ಕುಮಾರಃ ಪೃಥಿವೀಪತೇ|

03182006c ತೇಷಾಂ ಚ ತದ್ಯಥಾವೃತ್ತಂ ಕಥಯಾಮಾಸ ವೈ ತದಾ||

ಆ ರಾಜೀವನೇತ್ರ, ಕುಮಾರ ರಾಜನು ಅವರಿಗೆ ನಡೆದ ಹಾಗೆ ಎಲ್ಲವನ್ನೂ ವರದಿಮಾಡಿದನು.

03182007a ತಂ ಚಾಪಿ ಹಿಂಸಿತಂ ತಾತ ಮುನಿಂ ಮೂಲಫಲಾಶಿನಂ|

03182007c ಶ್ರುತ್ವಾ ದೃಷ್ಟ್ವಾ ಚ ತೇ ತತ್ರ ಬಭೂವುರ್ದೀನಮಾನಸಾಃ||

ಮಗೂ! ಫಲಮೂಲಗಳನ್ನು ಸೇವಿಸುತ್ತಿದ್ದ ಆ ಮುನಿಯು ಹಿಂಸೆಗೊಳಗಾಗಿದ್ದುದನ್ನು ಕೇಳಿ ಮತ್ತು ಅಲ್ಲಿ ನೋಡಿ ದುಃಖಪರರಾದರು.

03182008a ಕಸ್ಯಾಯಮಿತಿ ತೇ ಸರ್ವೇ ಮಾರ್ಗಮಾಣಾಸ್ತತಸ್ತತಃ|

03182008c ಜಗ್ಮುಶ್ಚಾರಿಷ್ಟನೇಮೇಸ್ತೇ ತಾರ್ಕ್ಷ್ಯಸ್ಯಾಶ್ರಮಮಂಜಸಾ||

ಇವನು ಯಾರ ಮಗನೆಂದು ದಾರಿಯಲ್ಲಿ ಎಲ್ಲರೊಡನೆ ವಿಚಾರಿಸುತ್ತಾ ಅವರು ತಾರ್ಕ್ಷ್ಯ ಅರಿಷ್ಟನೇಮಿಯ ಆಶ್ರಮಕ್ಕೆ ಬಂದರು.

03182009a ತೇಽಭಿವಾದ್ಯ ಮಹಾತ್ಮಾನಂ ತಂ ಮುನಿಂ ಸಂಶಿತವ್ರತಂ|

03182009c ತಸ್ಥುಃ ಸರ್ವೇ ಸ ತು ಮುನಿಸ್ತೇಷಾಂ ಪೂಜಾಮಥಾಹರತ್||

ಅವರು ಆ ಸಂಶಿತವ್ರತ ಮುನಿಗೆ ನಮಸ್ಕರಿಸಿದರು. ಆ ಮುನಿಯು ಅವರಿಗೆ ಪೂಜೆಯನ್ನು ತಿರುಗಿ ನೀಡುತ್ತಿರಲು ಅವರೆಲ್ಲರೂ ಅಲ್ಲಿಯೇ ನಿಂತುಕೊಂಡರು.

03182010a ತೇ ತಂ ಊಚುರ್ಮಹಾತ್ಮಾನಂ ನ ವಯಂ ಸತ್ಕ್ರಿಯಾಂ ಮುನೇ|

03182010c ತ್ವತ್ತೋಽರ್ಹಾಃ ಕರ್ಮದೋಷೇಣ ಬ್ರಾಹ್ಮಣೋ ಹಿಂಸಿತೋ ಹಿ ನಃ||

ಅನಂತರ ಅವರು ಆ ಮಹಾತ್ಮ ಮುನಿಗೆ ಹೇಳಿದರು: “ಮುನೇ! ನಿನ್ನ ಈ ಸತ್ಕ್ರಿಯೆಗೆ ನಾವು ಅರ್ಹರಲ್ಲ. ಕರ್ಮದೋಷದಿಂದ ನಾವು ಬ್ರಾಹ್ಮಣನನ್ನು ಹಿಂಸಿಸಲಿಲ್ಲವೇ?”

03182011a ತಾನಬ್ರವೀತ್ಸ ವಿಪ್ರರ್ಷಿಃ ಕಥಂ ವೋ ಬ್ರಾಹ್ಮಣೋ ಹತಃ|

03182011c ಕ್ವ ಚಾಸೌ ಬ್ರೂತ ಸಹಿತಾಃ ಪಶ್ಯಧ್ವಂ ಮೇ ತಪೋಬಲಂ||

ಆ ವಿಪ್ರರ್ಷಿಯು ಅವರಿಗೆ ಹೇಳಿದನು: “ನೀವು ಹೇಗೆ ಬ್ರಾಹ್ಮಣನನ್ನು ಕೊಂದಿರಿ? ನೀವೆಲ್ಲರೂ ಹೇಳಿರಿ ಅವನೆಲ್ಲಿ? ನನ್ನ ತಪೋಬಲವನ್ನು ನೋಡಿರಿ.”

03182012a ತೇ ತು ತತ್ಸರ್ವಮಖಿಲಮಾಖ್ಯಾಯಾಸ್ಮೈ ಯಥಾತಥಂ|

03182012c ನಾಪಶ್ಯಂಸ್ತಮೃಷಿಂ ತತ್ರ ಗತಾಸುಂ ತೇ ಸಮಾಗತಾಃ||

03182012e ಅನ್ವೇಷಮಾಣಾಃ ಸವ್ರೀಡಾಃ ಸ್ವಪ್ನವದ್ಗತಮಾನಸಾಃ||

ಅವರು ಅವನಿಗೆ ನಡೆದುದೆಲ್ಲವನ್ನೂ ಹೇಳಿದರು. ಆದರೆ ಅವರೆಲ್ಲರೂ ಒಟ್ಟೆಗೆ ಅಲ್ಲಿಗೆ ಹೋದಾಗ ತೀರಿಕೊಂಡಿದ್ದ ಋಷಿಯು, ಎಷ್ಟೇ ಹುಡುಕಿದರೂ ಅವರಿಗೆ ಕಾಣಲಿಲ್ಲ. ಇದರಿಂದ ಅವರೆಲ್ಲರೂ ತಾವು ಸ್ವಪ್ನವನ್ನು ಕಾಣುತ್ತಿದ್ದೇವೋ ಎಂದು ನಾಚಿಕೊಂಡರು.

03182013a ತಾನಬ್ರವೀತ್ತತ್ರ ಮುನಿಸ್ತಾರ್ಕ್ಷ್ಯಃ ಪರಪುರಂಜಯಃ|

03182013c ಸ್ಯಾದಯಂ ಬ್ರಾಹ್ಮಣಃ ಸೋಽಥ ಯೋ ಯುಷ್ಮಾಭಿರ್ವಿನಾಶಿತಃ||

03182013e ಪುತ್ರೋ ಹ್ಯಯಂ ಮಮ ನೃಪಾಸ್ತಪೋಬಲಸಮನ್ವಿತಃ||

ಆಗ ಪರಪುರಂಜಯ ಮುನಿ ತಾರ್ಕ್ಷ್ಯನು ಅವರಿಗೆ ಹೇಳಿದನು: “ಇವನೇ ನೀವು ಕೊಂದಿರುವ ಬ್ರಾಹ್ಮಣನಿರಬಹುದೇ? ನೃಪರೇ! ಇವನು ನನ್ನ ಮಗ. ತಪೋಬಲಸಮನ್ವಿತ.”

03182014a ತೇ ತು ದೃಷ್ಟ್ವೈವ ತಮೃಷಿಂ ವಿಸ್ಮಯಂ ಪರಮಂ ಗತಾಃ|

03182014c ಮಹದಾಶ್ಚರ್ಯಮಿತಿ ವೈ ವಿಬ್ರುವಾಣಾ ಮಹೀಪತೇ||

ಅವರು ಆ ಋಷಿಯನ್ನು ನೋಡಿ ಪರಮ ವಿಸ್ಮಿತರಾದರು. ಮಹೀಪತೇ! “ಮಹಾ ಆಶ್ಚರ್ಯವಿದು” ಎಂದು ಹೇಳಿದರು.

03182015a ಮೃತೋ ಹ್ಯಯಮತೋ ದೃಷ್ಟಃ ಕಥಂ ಜೀವಿತಮಾಪ್ತವಾನ್|

03182015c ಕಿಮೇತತ್ತಪಸೋ ವೀರ್ಯಂ ಯೇನಾಯಂ ಜೀವಿತಃ ಪುನಃ||

03182015e ಶ್ರೋತುಮಿಚ್ಚಾಮ ವಿಪ್ರರ್ಷೇ ಯದಿ ಶ್ರೋತವ್ಯಮಿತ್ಯುತ||

“ಅವನು ತೀರಿಕೊಂಡಿದ್ದುದನ್ನು ನಾವು ನೋಡಿದ್ದೇವೆ. ಅವನು ಹೇಗೆ ಪುನಃ ಜೀವಂತನಾಗಿ ಬಂದಿದ್ದಾನೆ? ಅವನು ಪುನಃ ಜೀವಿತನಾಗಲು ತಪಸ್ಸಿನ ವೀರ್ಯವು ಕಾರಣವೇ? ವಿಪ್ರರ್ಷೇ! ನಿನಗೆ ಇದನ್ನು ತಿಳಿಸಬೇಕೆಂದಿದ್ದರೆ ನಾವು ಕೇಳಬಯಸುತ್ತೇವೆ.”

03182016a ಸ ತಾನುವಾಚ ನಾಸ್ಮಾಕಂ ಮೃತ್ಯುಃ ಪ್ರಭವತೇ ನೃಪಾಃ|

03182016c ಕಾರಣಂ ವಃ ಪ್ರವಕ್ಷ್ಯಾಮಿ ಹೇತುಯೋಗಂ ಸಮಾಸತಃ||

ಆಗ ಅವನು ಹೇಳಿದನು: “ನೃಪರೇ! ಮೃತ್ಯುವು ನಮ್ಮ ಮೇಲೆ ಪ್ರಭಾವಬೀರುವುದಿಲ್ಲ. ಇದರ ಕುರಿತು ಸಂಕ್ಷಿಪ್ತವಾಗಿ ಕಾರಣವನ್ನು ಹೇಳುತ್ತೇನೆ.

03182017a ಸತ್ಯಮೇವಾಭಿಜಾನೀಮೋ ನಾನೃತೇ ಕುರ್ಮಹೇ ಮನಃ|

03182017c ಸ್ವಧರ್ಮಮನುತಿಷ್ಠಾಮಸ್ತಸ್ಮಾನ್ಮೃತ್ಯುಭಯಂ ನ ನಃ||

ನಾವು ಸತ್ಯವನ್ನು ಮಾತ್ರ ಗುರುತಿಸುತ್ತೇವೆ. ನಾವು ಸುಳ್ಳನ್ನು ಮನಸ್ಸಿನಲ್ಲಿಯೂ ಯೋಚಿಸುವುದಿಲ್ಲ. ನಾವು ಸ್ವಧರ್ಮದಲ್ಲಿಯೇ ನಿರತರಾಗಿದ್ದೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.

03182018a ಯದ್ಬ್ರಾಹ್ಮಣಾನಾಂ ಕುಶಲಂ ತದೇಷಾಂ ಕಥಯಾಮಹೇ|

03182018c ನೈಷಾಂ ದುಶ್ಚರಿತಂ ಬ್ರೂಮಸ್ತಸ್ಮಾನ್ಮೃತ್ಯುಭಯಂ ನ ನಃ||

ಯಾವುದು ಬ್ರಾಹ್ಮಣರಿಗೆ ಕುಶಲವೋ ಅದನ್ನೇ ನಾವು ಮಾತನಾಡುತ್ತೇವೆ. ಅವರ ದುಶ್ಚರಿತಗಳ ಕುರಿತು ಮಾತನಾಡುವುದಿಲ್ಲ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.

03182019a ಅತಿಥೀನನ್ನಪಾನೇನ ಭೃತ್ಯಾನತ್ಯಶನೇನ ಚ|

03182019c ತೇಜಸ್ವಿದೇಶವಾಸಾಚ್ಚ ತಸ್ಮಾನ್ಮೃತ್ಯುಭಯಂ ನ ನಃ||

ಅನ್ನಪಾನೀಯಗಳಿಂದ ಅತಿಥಿಗಳನ್ನು ಸತ್ಕರಿಸುತ್ತೇವೆ. ಭೃತ್ಯರಿಗೆ ಅತಿಯಾಗಿ ಉಣಿಸುತ್ತೇವೆ. ತೇಜಸ್ವಿಗಳ ದೇಶದಲ್ಲಿ ವಾಸಿಸುತ್ತೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.

03182020a ಏತದ್ವೈ ಲೇಶಮಾತ್ರಂ ವಃ ಸಮಾಖ್ಯಾತಂ ವಿಮತ್ಸರಾಃ|

03182020c ಗಚ್ಚಧ್ವಂ ಸಹಿತಾಃ ಸರ್ವೇ ನ ಪಾಪಾದ್ಭಯಮಸ್ತಿ ವಃ||

ಇದನ್ನು ಸ್ವಲ್ಪವಾಗಿಯೇ ನಿಮಗೆ ಹೇಳಿದ್ದೇನೆ. ಈಗ ಮತ್ಸರವಿಲ್ಲದೇ ಎಲ್ಲರೂ ಒಟ್ಟಿಗೇ ಹಿಂದಿರುಗಿ. ಪಾಪದ ಭಯವಿಲ್ಲದಿರಲಿ.”

03182021a ಏವಮಸ್ತ್ವಿತಿ ತೇ ಸರ್ವೇ ಪ್ರತಿಪೂಜ್ಯ ಮಹಾಮುನಿಂ|

03182021c ಸ್ವದೇಶಮಗಮನ್ ಹೃಷ್ಟಾ ರಾಜಾನೋ ಭರತರ್ಷಭ||

ಭರತರ್ಷಭ! “ಹಾಗೆಯೇ ಆಗಲಿ” ಎಂದು ಹೇಳಿ ಅವರು ಎಲ್ಲ ರಾಜರೂ ಆ ಮಹಾಮುನಿಯನ್ನು ಪೂಜಿಸಿ ಸಂತೋಷದಿಂದ ಸ್ವರಾಜ್ಯಕ್ಕೆ ಮರಳಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಬ್ರಾಹ್ಮಣಮಾಹಾತ್ಮಕಥನೇ ದ್ವಿಶೀತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಬ್ರಾಹ್ಮಣಮಾಹಾತ್ಮಕಥನದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.

Related image

Comments are closed.