ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೫೩
ಭಿರುಗಾಳಿ ಬೀಸಲು ಯುಧಿಷ್ಠಿರನು ಭೀಮನನ್ನು ಕಾಣದೇ ದ್ರೌಪದಿಯನ್ನು ಕೇಳಿದುದು (೧-೯). ದ್ರೌಪದಿಯಿಂದ ವಿಷಯವನ್ನು ತಿಳಿದ ಯುಧಿಷ್ಠಿರನು ಘಟೋತ್ಕಚನ ಸಹಾಯದಿಂದ ಭೀಮನಿದ್ದಲ್ಲಿಗೆ ಹೋಗಿ ರಾಕ್ಷಸರನ್ನು ಸಂತವಿಸಿದುದು (೧೦-೩೧).
03153001 ವೈಶಂಪಾಯನ ಉವಾಚ|
03153001a ತತಸ್ತಾನಿ ಮಹಾರ್ಹಾಣಿ ದಿವ್ಯಾನಿ ಭರತರ್ಷಭ|
03153001c ಬಹೂನಿ ಬಹುರೂಪಾಣಿ ವಿರಜಾಂಸಿ ಸಮಾದದೇ||
ªÉʱÀವೈಶಂಪಾಯನನು ಹೇಳಿದನು: “ಅನಂತರ ಭರತರ್ಷಭನು ಆ ಮಹಾಮೌಲ್ಯದ, ಬಹುರೂಪಗಳ, ಧೂಳಿಲ್ಲದ ತುಂಬಾ ದಿವ್ಯ ಪುಷ್ಪಗಳನ್ನು ಒಟ್ಟುಮಾಡಿಕೊಂಡನು.
03153002a ತತೋ ವಾಯುರ್ಮಹಾಂ ಶೀಘ್ರೋ ನೀಚೈಃ ಶರ್ಕರಕರ್ಷಣಃ|
03153002c ಪ್ರಾದುರಾಸೀತ್ಖರಸ್ಪರ್ಶಃ ಸಂಗ್ರಾಮಮಭಿಚೋದಯನ್||
ಆಗ ಶೀಘ್ರವಾಗಿ ಬೀಸುವ, ಧೂಳನ್ನು ಮೇಲಕ್ಕೆತ್ತಿ ಹಾಕುವ, ತಾಗಿದರೆ ಕೊರೆಯುವ, ಸಂಗ್ರಾಮದ ಸುಳಿವನ್ನು ಕೊಡುವ ಭಿರುಗಾಳಿಯು ಬೀಸತೊಡಗಿತು.
03153003a ಪಪಾತ ಮಹತೀ ಚೋಲ್ಕಾ ಸನಿರ್ಘಾತಾ ಮಹಾಪ್ರಭಾ|
03153003c ನಿಷ್ಪ್ರಭಶ್ಚಾಭವತ್ಸೂರ್ಯಶ್ಚನ್ನರಶ್ಮಿಸ್ತಮೋವೃತಃ||
ಮಹಾಪ್ರಭೆಯುಳ್ಳ ಅತಿದೊಡ್ಡ ಉಲ್ಕೆಯೊಂದು ಆ ಭಿರುಗಾಳಿಯಲ್ಲಿ ಬಿದ್ದಿತು. ಅದರಿಂದಾಗಿ ಸೂರ್ಯನು ತನ್ನ ಪ್ರಭೆಯನ್ನು ಕಳೆದುಕೊಂಡನು ಮತ್ತು ಎಲ್ಲೆಡೆಯೂ ಕತ್ತಲೆಯು ಆವರಿಸಿತು.
03153004a ನಿರ್ಘಾತಶ್ಚಾಭವದ್ಭೀಮೋ ಭೀಮೇ ವಿಕ್ರಮಮಾಸ್ಥಿತೇ|
03153004c ಚಚಾಲ ಪೃಥಿವೀ ಚಾಪಿ ಪಾಂಸುವರ್ಷಂ ಪಪಾತ ಚ||
ಭೀಮನು ಆ ವಿಕ್ರಮಕಾರ್ಯವನ್ನೆಸಗುತ್ತಿರಲು ಭಯಂಕರವಾದ ಸುಂಟರಗಾಳಿಯು ಬೀಸಿಬಂದು ಭೂಮಿಯನ್ನೇ ಅಡುಗಿಸಿತು ಮತ್ತು ಧೂಳಿನ ಮಳೆಯನ್ನು ಸುರಿಸಿತು.
03153005a ಸಲೋಹಿತಾ ದಿಶಶ್ಚಾಸನ್ಖರವಾಚೋ ಮೃಗದ್ವಿಜಾಃ|
03153005c ತಮೋವೃತಮಭೂತ್ಸರ್ವಂ ನ ಪ್ರಜ್ಞಾಯತ ಕಿಂ ಚನ||
ಆಕಾಶವು ಕೆಂಪಾಯಿತು, ಮೃಗಪಕ್ಷಿಗಳು ಚೀರಾಡಿದವು, ಎಲ್ಲಕಡೆಯೂ ಕತ್ತಲೆಯು ಆವರಿಸಿತು ಮತ್ತು ಏನೂ ಕಾಣಿಸುತ್ತಿರಲಿಲ್ಲ.
03153006a ತದದ್ಭುತಮಭಿಪ್ರೇಕ್ಷ್ಯ ಧರ್ಮಪುತ್ರೋ ಯುಧಿಷ್ಠಿರಃ|
03153006c ಉವಾಚ ವದತಾಂ ಶ್ರೇಷ್ಠಃ ಕೋಽಸ್ಮಾನಭಿಭವಿಷ್ಯತಿ||
ಆ ಅದ್ಭುತವನ್ನು ನೋಡಿ ಮಾತನಾಡುವವರಲ್ಲಿ ಶ್ರೇಷ್ಠ ಧರ್ಮಪುತ್ರ ಯುಧಿಷ್ಠಿರನು ಹೇಳಿದನು: “ಯಾರೋ ನಮ್ಮನ್ನು ಧಾಳಿಯಿಡುತ್ತಿದ್ದಾರೆ.
03153007a ಸಜ್ಜೀಭವತ ಭದ್ರಂ ವಃ ಪಾಂಡವಾ ಯುದ್ಧದುರ್ಮದಾಃ|
03153007c ಯಥಾರೂಪಾಣಿ ಪಶ್ಯಾಮಿ ಸ್ವಭ್ಯಗ್ರೋ ನಃ ಪರಾಕ್ರಮಃ||
ಸುರಕ್ಷಿತರಾಗಿರಿ! ಯುದ್ಧದುರ್ಮದ ಪಾಂಡವರೇ! ಸಿದ್ಧರಾಗಿರಿ! ಕಾಣುತ್ತಿರುವುದನ್ನು ನೋಡಿದರೆ ಪರಾಕ್ರಮದಲ್ಲಿ ನಾವೇ ಮೇಲಾಗುತ್ತೇವೆ ಎಂದು ತೋರುತ್ತದೆ!”
03153008a ಏವಮುಕ್ತ್ವಾ ತತೋ ರಾಜಾ ವೀಕ್ಷಾಂ ಚಕ್ರೇ ಸಮಂತತಃ|
03153008c ಅಪಶ್ಯಮಾನೋ ಭೀಮಂ ಚ ಧರ್ಮರಾಜೋ ಯುಧಿಷ್ಠಿರಃ||
ಹೀಗೆ ಹೇಳಿದ ರಾಜನು ಸುತ್ತಲೂ ನೋಡಿದನು. ಆಗ ಧರ್ಮರಾಜ ಯುಧಿಷ್ಠಿರನು ಭೀಮನನ್ನು ಕಾಣಲಿಲ್ಲ.
03153009a ತತ್ರ ಕೃಷ್ಣಾಂ ಯಮೌ ಚೈವ ಸಮೀಪಸ್ಥಾನರಿಂದಮಃ|
03153009c ಪಪ್ರಚ್ಚ ಭ್ರಾತರಂ ಭೀಮಂ ಭೀಮಕರ್ಮಾಣಮಾಹವೇ||
ಆ ಅರಿಂದಮನು ಅಲ್ಲಿ ಹತ್ತಿರದಲ್ಲಿ ನಿಂತಿದ್ದ ಕೃಷ್ಣೆ ಮತ್ತು ಯಮಳರಲ್ಲಿ ತನ್ನ ತಮ್ಮ ಮಹಾಯುದ್ಧದಲ್ಲಿ ಭಯಂಕರವಾಗಿ ಹೋರಾಡುವ ಭೀಮನ ಕುರಿತು ಕೇಳಿದನು
03153010a ಕಚ್ಚಿನ್ನ ಭೀಮಃ ಪಾಂಚಾಲಿ ಕಿಂ ಚಿತ್ಕೃತ್ಯಂ ಚಿಕೀರ್ಷತಿ|
03153010c ಕೃತವಾನಪಿ ವಾ ವೀರಃ ಸಾಹಸಂ ಸಾಹಸಪ್ರಿಯಃ||
“ಪಾಂಚಾಲೀ! ಭೀಮನು ಏನನ್ನಾದರೂ ಮಾಡಲು ಬಯಸಿದನೇ? ಅಥವಾ ಆ ಸಾಹಸಪ್ರಿಯ ವೀರನು ಏನಾದರೂ ಸಾಹಸಕೃತ್ಯವನ್ನು ಮಾಡಿದನೇ?
03153011a ಇಮೇ ಹ್ಯಕಸ್ಮಾದುತ್ಪಾತಾ ಮಹಾಸಮರದರ್ಶಿನಃ|
03153011c ದರ್ಶಯಂತೋ ಭಯಂ ತೀವ್ರಂ ಪ್ರಾದುರ್ಭೂತಾಃ ಸಮಂತತಃ||
ಯಾಕೆಂದರೆ ಅಕಸ್ಮಾತ್ತಾಗಿ ಎಲ್ಲೆಡೆಯಲ್ಲಿಯೂ ಕಂಡುಬರುವ ತೀವ್ರ ಭಯವನ್ನುಂಟುಮಾಡುವ ಈ ಉತ್ಪಾತಗಳು ಮಹಾ ಸಮರವನ್ನು ಸೂಚಿಸುತ್ತವೆ.”
03153012a ತಂ ತಥಾ ವಾದಿನಂ ಕೃಷ್ಣಾ ಪ್ರತ್ಯುವಾಚ ಮನಸ್ವಿನೀ|
03153012c ಪ್ರಿಯಾ ಪ್ರಿಯಂ ಚಿಕೀರ್ಷಂತೀ ಮಹಿಷೀ ಚಾರುಹಾಸಿನೀ||
ಆಗ ಮಾತನಾಡುವ ಮನಸ್ವಿನೀ ಪ್ರಿತಿಯ ರಾಣಿ, ಚಾರುಹಾಸಿನಿ ಕೃಷ್ಣೆಯು ತನ್ನ ಪ್ರಿಯನಿಗೆ ಸಂತೋಷಗೊಳಿಸಲು ಹೇಳಿದಳು:
03153013a ಯತ್ತತ್ಸೌಗಂಧಿಕಂ ರಾಜನ್ನಾಹೃತಂ ಮಾತರಿಶ್ವನಾ|
03153013c ತನ್ಮಯಾ ಭೀಮಸೇನಸ್ಯ ಪ್ರೀತಯಾದ್ಯೋಪಪಾದಿತಂ||
“ರಾಜನ್! ಇಂದು ನನಗೆ ಸಂತೋಷವನ್ನು ನೀಡಿದ, ಗಾಳಿಯಲ್ಲಿ ತೇಲಿಬಂದ ಸೌಗಂಧಿಕಾ ಪುಷ್ಪಗಳನ್ನು ತರಲು ಭೀಮಸೇನನಿಗೆ ಒಪ್ಪಿಸಿದ್ದೆ.
03153014a ಅಪಿ ಚೋಕ್ತೋ ಮಯಾ ವೀರೋ ಯದಿ ಪಶ್ಯೇದ್ಬಹೂನ್ಯಪಿ|
03153014c ತಾನಿ ಸರ್ವಾಣ್ಯುಪಾದಾಯ ಶೀಘ್ರಮಾಗಮ್ಯತಾಮಿತಿ||
ಒಂದು ವೇಳೆ ಅಂಥಹ ಪುಷ್ಪಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ಕಂಡರೆ ಶೀಘ್ರವಾಗಿ ಅವುಗಳೆಲ್ಲವನ್ನೂ ತರಲು ಆ ವೀರನಿಗೆ ಹೇಳಿದ್ದೆ.
03153015a ಸ ತು ನೂನಂ ಮಹಾಬಾಹುಃ ಪ್ರಿಯಾರ್ಥಂ ಮಮ ಪಾಂಡವಃ|
03153015c ಪ್ರಾಗುದೀಚೀಂ ದಿಶಂ ರಾಜಂಸ್ತಾನ್ಯಾಹರ್ತುಮಿತೋ ಗತಃ||
ರಾಜನ್! ನನಗೆ ಪ್ರಿಯವಾದುದನ್ನು ಮಾಡಲು ಆ ಮಹಾಬಾಹು ಪಾಂಡವನು ಅವುಗಳನ್ನು ತರಲು ಈಶಾನ್ಯದಿಕ್ಕಿಗೆ ನಿಜವಾಗಿಯೂ ಹೋಗಿರಬಹುದು.”
03153016a ಉಕ್ತಸ್ತ್ವೇವಂ ತಯಾ ರಾಜಾ ಯಮಾವಿದಮಥಾಬ್ರವೀತ್|
03153016c ಗಚ್ಚಾಮ ಸಹಿತಾಸ್ತೂರ್ಣಂ ಯೇನ ಯಾತೋ ವೃಕೋದರಃ||
ಅವಳ ಮಾತುಗಳನ್ನು ಕೇಳಿದೊಡನೆಯೇ ರಾಜನು ಯಮಳರಿಗೆ ಹೇಳಿದನು: “ಹಾಗಿದ್ದರೆ ನಾವು ಕೂಡಲೇ ವೃಕೋದರ ಭೀಮನು ಹೋದಲ್ಲಿಗೆ ಒಟ್ಟಿಗೇ ಹೋಗೋಣ.
03153017a ವಹಂತು ರಾಕ್ಷಸಾ ವಿಪ್ರಾನ್ಯಥಾಶ್ರಾಂತಾನ್ಯಥಾಕೃಶಾನ್|
03153017c ತ್ವಮಪ್ಯಮರಸಂಕಾಶ ವಹ ಕೃಷ್ಣಾಂ ಘಟೋತ್ಕಚ||
ರಾಕ್ಷಸರು ಯಾರೆಲ್ಲ ಆಯಾಸಗೊಂಡಿದ್ದಾರೋ, ಕೃಶರಾಗಿದ್ದಾರೋ ಅಂಥಹ ಬ್ರಾಹ್ಮಣರನ್ನು ಹೊತ್ತುಕೊಂಡು ಹೋಗಲಿ, ಮತ್ತು ಘಟೋತ್ಕಚ, ಅಮರರಂತಿರುವ ನೀನು ಕೃಷ್ಣೆ ದ್ರೌಪದಿಯನ್ನು ಎತ್ತಿಕೊಂಡು ಹೋಗು.
03153018a ವ್ಯಕ್ತಂ ದೂರಮಿತೋ ಭೀಮಃ ಪ್ರವಿಷ್ಟ ಇತಿ ಮೇ ಮತಿಃ|
03153018c ಚಿರಂ ಚ ತಸ್ಯ ಕಾಲೋಽಯಂ ಸ ಚ ವಾಯುಸಮೋ ಜವೇ||
ವೇಗದಲ್ಲಿ ವಾಯುವಿನ ಸಮನಾಗಿರುವ ಭೀಮನು ಹೋಗಿ ಬಹಳ ಸಮಯವಾಗಿರುವುದರಿಂದ ಖಂಡಿತವಾಗಿಯೂ ಅವನು ಬಹಳ ದೂರ ಹೋಗಿದ್ದಾನೆ ಎಂದು ನನಗನ್ನಿಸುತ್ತದೆ.
03153019a ತರಸ್ವೀ ವೈನತೇಯಸ್ಯ ಸದೃಶೋ ಭುವಿ ಲಂಘನೇ|
03153019c ಉತ್ಪತೇದಪಿ ಚಾಕಾಶಂ ನಿಪತೇಚ್ಚ ಯಥೇಚ್ಚಕಂ||
ಅವನು ಭೂಮಿಯಲ್ಲಿ ಗರುಡನಂತೆ ಹಾರಿಹೋಗುತ್ತಾನೆ. ಅವನು ಆಕಾಶದಲ್ಲಿ ಹಾರಿ ಬೇಕಾದಲ್ಲಿ ಇಳಿಯುತ್ತಾನೆ.
03153020a ತಮನ್ವಿಯಾಮ ಭವತಾಂ ಪ್ರಭಾವಾದ್ರಜನೀಚರಾಃ|
03153020c ಪುರಾ ಸ ನಾಪರಾಧ್ನೋತಿ ಸಿದ್ಧಾನಾಂ ಬ್ರಹ್ಮವಾದಿನಾಂ||
ರಜನೀಚರ ರಾಕ್ಷಸರೇ! ನಿಮ್ಮ ಪ್ರಭಾವದಿಂದ ನಾವು ಬ್ರಹ್ಮವಾದಿಗಳಾದ ಸಿದ್ಧರನ್ನು ಉಲ್ಲಂಘಿಸುವುದರ ಮೊದಲೇ ಅವನಿರುವಲ್ಲಿಗೆ ಹೋಗೋಣ.”
03153021a ತಥೇತ್ಯುಕ್ತ್ವಾ ತು ತೇ ಸರ್ವೇ ಹೈಡಿಂಬಪ್ರಮುಖಾಸ್ತದಾ|
03153021c ಉದ್ದೇಶಜ್ಞಾಃ ಕುಬೇರಸ್ಯ ನಲಿನ್ಯಾ ಭರತರ್ಷಭ||
03153022a ಆದಾಯ ಪಾಂಡವಾಂಶ್ಚೈವ ತಾಂಶ್ಚ ವಿಪ್ರಾನನೇಕಶಃ|
03153022c ಲೋಮಶೇನೈವ ಸಹಿತಾಃ ಪ್ರಯಯುಃ ಪ್ರೀತಮಾನಸಾಃ||
ಅವರೆಲ್ಲರೂ “ಹಾಗೆಯೇ ಆಗಲಿ” ಎಂದರು. ಭರತರ್ಷಭ! ಹೈಡಿಂಬಿ ಘಟೋತ್ಕಚನ ನಾಯಕತ್ವದಲ್ಲಿ ಕುಬೇರನ ಸರೋವರವಿರುವ ಸ್ಥಳವನ್ನು ಅರಿತಿದ್ದ ಆ ರಾಕ್ಷಸರು ಪಾಂಡವರನ್ನೂ, ಲೋಮಹರ್ಷಣನೊಂದಿಗೆ ಇತರ ಅನೇಕ ಬ್ರಾಹ್ಮಣರನ್ನೂ ಎತ್ತಿಕೊಂಡು ಸಂತೋಷದಿಂದ ಹೊರಟರು.
03153023a ತೇ ಗತ್ವಾ ಸಹಿತಾಃ ಸರ್ವೇ ದದೃಶುಸ್ತತ್ರ ಕಾನನೇ|
03153023c ಪ್ರಫುಲ್ಲಪಮ್ಕಜವತೀಂ ನಲಿನೀಂ ಸುಮನೋಹರಾಂ||
ಹೀಗೆ ಎಲ್ಲರೂ ಒಟ್ಟಿಗೇ ಹೋಗಿ ಅಲ್ಲಿ ಕಾಡಿನಲ್ಲಿ ಅರಳುತ್ತಿರುವ ಕಮಲಗಳಿಂದ ತುಂಬಿದ್ದ ಸುಮನೋಹರ ಸರೋವರವನ್ನು ಕಂಡರು.
03153024a ತಂ ಚ ಭೀಮಂ ಮಹಾತ್ಮಾನಂ ತಸ್ಯಾಸ್ತೀರೇ ವ್ಯವಸ್ಥಿತಂ|
03153024c ದದೃಶುರ್ನಿಹತಾಂಶ್ಚೈವ ಯಕ್ಷಾನ್ಸುವಿಪುಲೇಕ್ಷಣಾನ್||
ಅಲ್ಲಿ ಅವರು ಸರೋವರದ ತೀರದ ಮೇಲೆ ನಿಂತಿರುವ ಮಹಾತ್ಮ ಭೀಮನನ್ನು ಮತ್ತು ಅವನಿಂದ ನಿಹತರಾದ ತೆರದ ಕಣ್ಣುಗಳ ಯಕ್ಷರನ್ನೂ ಕಂಡರು.
03153025a ಉದ್ಯಮ್ಯ ಚ ಗದಾಂ ದೋರ್ಭ್ಯಾಂ ನದೀತೀರೇ ವ್ಯವಸ್ಥಿತಂ|
03153025c ಪ್ರಜಾಸಂಕ್ಷೇಪಸಮಯೇ ದಂಡಹಸ್ತಮಿವಾಂತಕಂ||
ಪ್ರಜೆಗಳನ್ನು ನಾಶಗೊಳಿಸುವ ಸಮಯದಲ್ಲಿ ಅಂತಕ ಯಮನು ತನ್ನ ದಂಡವನ್ನು ಹೇಗೋ ಹಾಗೆ ಗದೆಯನ್ನು ಎತ್ತಿ ಹಿಡಿದು ನದೀತೀರದಲ್ಲಿ ನಿಂತಿದ್ದ ಭೀಮನನ್ನು ಕಂಡರು.
03153026a ತಂ ದೃಷ್ಟ್ವಾ ಧರ್ಮರಾಜಸ್ತು ಪರಿಷ್ವಜ್ಯ ಪುನಃ ಪುನಃ|
03153026c ಉವಾಚ ಶ್ಲಕ್ಷ್ಣಯಾ ವಾಚಾ ಕೌಂತೇಯ ಕಿಮಿದಂ ಕೃತಂ||
ಅವನನ್ನು ಕಂಡ ಧರ್ಮರಾಜನು ಪುನಃ ಪುನಃ ಅವನನ್ನು ಆಲಂಗಿಸಿದನು ಮತ್ತು ಮೃದುವಾದ ಮಾತುಗಳಲ್ಲಿ ಕೇಳಿದನು: “ಕೌಂತೇಯ! ಇದೇನು ಮಾಡಿದೆ?
03153027a ಸಾಹಸಂ ಬತ ಭದ್ರಂ ತೇ ದೇವಾನಾಮಪಿ ಚಾಪ್ರಿಯಂ|
03153027c ಪುನರೇವಂ ನ ಕರ್ತವ್ಯಂ ಮಮ ಚೇದಿಚ್ಚಸಿ ಪ್ರಿಯಂ||
ದೇವರಿಗೆ ಅಪ್ರಿಯವಾದ ಈ ಸಾಹಸವನ್ನೇಕೆ ಮಾಡಿದೆ? ನನಗೆ ಸಂತೋಷವಾದುದನ್ನು ಮಾಡಲು ಬಯಸುವೆಯಾದರೆ ಇಂತಹ ಕಾರ್ಯವನ್ನು ಪುನಃ ಮಾಡಬೇಡ!”
03153028a ಅನುಶಾಸ್ಯ ಚ ಕೌಂತೇಯಂ ಪದ್ಮಾನಿ ಪ್ರತಿಗೃಃಯ ಚ|
03153028c ತಸ್ಯಾಮೇವ ನಲಿನ್ಯಾಂ ತೇ ವಿಜಹ್ರುರಮರೋಪಮಾಃ||
ಈ ರೀತಿ ಕೌಂತೇಯನನ್ನು ನಿಯಂತ್ರಿಸಿ ಅವರು ಪದ್ಮಗಳನ್ನು ಒಟ್ಟುಗೂಡಿಸಿಕೊಂಡು ಆ ಸರೋವರದಲ್ಲಿ ಅಮರರಂತೆ ವಿಹರಿಸಿದರು.
03153029a ಏತಸ್ಮಿನ್ನೇವ ಕಾಲೇ ತು ಪ್ರಗೃಹೀತಶಿಲಾಯುಧಾಃ|
03153029c ಪ್ರಾದುರಾಸನ್ಮಹಾಕಾಯಾಸ್ತಸ್ಯೋದ್ಯಾನಸ್ಯ ರಕ್ಷಿಣಃ||
ಅದೇ ಸಮಯದಲ್ಲಿ ಆ ಉದ್ಯಾನವನದ ರಕ್ಷಣೆಯಲ್ಲಿದ್ದ ಮಹಾಕಾಯರು ಶಿಲಾಯುಧಗಳನ್ನು ಹಿಡಿದು ಅಲ್ಲಿಗೆ ಆಗಮಿಸಿದರು.
03153030a ತೇ ದೃಷ್ಟ್ವಾ ಧರ್ಮರಾಜಾನಂ ದೇವರ್ಷಿಂ ಚಾಪಿ ಲೋಮಶಂ|
03153030c ನಕುಲಂ ಸಹದೇವಂ ಚ ತಥಾನ್ಯಾನ್ಬ್ರಾಹ್ಮಣರ್ಷಭಾನ್||
03153030e ವಿನಯೇನಾನತಾಃ ಸರ್ವೇ ಪ್ರಣಿಪೇತುಶ್ಚ ಭಾರತ|
ಭಾರತ! ಧರ್ಮರಾಜನನ್ನು, ದೇವರ್ಷಿ ಲೋಮಶನನ್ನು, ನಕುಲ ಸಹದೇವರನ್ನು ಮತ್ತು ಇತರ ಬ್ರಾಹ್ಮಣರ್ಷಭರನ್ನು ಕಂಡು ಅವರೆಲ್ಲರೂ ವಿನಯದಿಂದ ತಲೆಬಾಗಿ ನಮಸ್ಕರಿಸಿದರು.
03153031a ಸಾಂತ್ವಿತಾ ಧರ್ಮರಾಜೇನ ಪ್ರಸೇದುಃ ಕ್ಷಣದಾಚರಾಃ||
03153031c ವಿದಿತಾಶ್ಚ ಕುಬೇರಸ್ಯ ತತಸ್ತೇ ನರಪುಂಗವಾಃ|
03153031e ಊಷುರ್ನಾತಿಚಿರಂ ಕಾಲಂ ರಮಮಾಣಾಃ ಕುರೂದ್ವಹಾಃ||
ಧರ್ಮರಾಜನು ಆ ರಾಕ್ಷಸರನ್ನು ಸಂತವಿಸಿದಾಗ ಅವರು ಶಾಂತರಾದರು. ಅನಂತರ ಆ ಕುರೂದ್ಧಹ ನರಪುಂಗವರು ಕುಬೇರನಿಗೆ ತಿಳಿದಿದ್ದಹಾಗೆ ಅಲ್ಲಿಯೇ ಕೆಲ ಸಮಯ ಉಳಿದು ರಮಿಸಿದರು[1].”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ತ್ರಿಪಂಚಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ಮೂರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೩/೧೦೦, ಅಧ್ಯಾಯಗಳು-೪೫೦/೧೯೯೫, ಶ್ಲೋಕಗಳು-೧೪೭೩೧/೭೩೭೮೪
[1]ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯದ ನಂತರದ ಇನ್ನೊಂದು ಅಧ್ಯಾಯದಲ್ಲಿ (ಅಧ್ಯಾಯ ೧೫೬) ಅಶರೀರವಾಣಿಯಂತೆ ಪಾಂಡವರು ಪುನಃ ನರನಾರಾಯಣರ ಆಶ್ರಮಕ್ಕೆ ಹಿಂದಿರುಗಿದ ವಿಷಯವಿದೆ. ಪುಣೆಯ ಸಂಪುಟದಲ್ಲಿ ಇಲ್ಲದಿರುವ ಈ ೨೧ ಶ್ಲೋಕಗಳನ್ನು ಅನುಬಂಧ ೫ರಲ್ಲಿ ನೀಡಲಾಗಿದೆ.