ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೫೨
ಭೀಮನಿಂದ ಸೋತ ರಾಕ್ಷಸರು ಹಿಂದೆಸರಿದುದು (೧-೨೦). ಕುಬೇರನು ಭೀಮನು ಬೇಕಾದಷ್ಟು ಪುಷ್ಪಗಳನ್ನು ಕೊಂಡೊಯ್ಯಲೆಂದು ಅನುಮತಿಯನ್ನು ನೀಡಿದುದು (೨೧-೨೫).
03152001 ಭೀಮ ಉವಾಚ|
03152001a ಪಾಂಡವೋ ಭೀಮಸೇನೋಽಹಂ ಧರ್ಮಪುತ್ರಾದನಂತರಃ|
03152001c ವಿಶಾಲಾಂ ಬದರೀಂ ಪ್ರಾಪ್ತೋ ಭ್ರಾತೃಭಿಃ ಸಹ ರಾಕ್ಷಸಾಃ||
ಭೀಮನು ಹೇಳಿದನು: “ರಾಕ್ಷಸರೇ! ನಾನು ಪಾಂಡವ ಭೀಮಸೇನ. ಧರ್ಮಪುತ್ರನ ತಮ್ಮ. ಸಹೋದರರೊಂದಿಗೆ ವಿಶಾಲವಾದ ಬದರಿಗೆ ಬಂದಿದ್ದೇನೆ.
03152002a ಅಪಶ್ಯತ್ತತ್ರ ಪಂಚಾಲೀ ಸೌಗಂಧಿಕಮನುತ್ತಮಂ|
03152002c ಅನಿಲೋಢಮಿತೋ ನೂನಂ ಸಾ ಬಹೂನಿ ಪರೀಪ್ಸತಿ||
ಅಲ್ಲಿ ಪಾಂಚಾಲೀ ದ್ರೌಪದಿಯು ಗಾಳಿಯಲ್ಲಿ ಬೀಸಿ ಬಂದ ಅನುತ್ತಮ ಸೌಗಂಧಿಕಾ ಪುಷ್ಪವನ್ನು ಕಂಡಳು. ತಕ್ಷಣವೇ ಅವಳು ಅಂಥಹ ಬಹಳಷ್ಟು ಪುಷ್ಪಗಳನ್ನು ಬಯಸಿದಳು.
03152003a ತಸ್ಯಾ ಮಾಮನವದ್ಯಾಂಗ್ಯಾ ಧರ್ಮಪತ್ನ್ಯಾಃ ಪ್ರಿಯೇ ಸ್ಥಿತಂ|
03152003c ಪುಷ್ಪಾಹಾರಮಿಹ ಪ್ರಾಪ್ತಂ ನಿಬೋಧತ ನಿಶಾಚರಾಃ||
ನಿಶಾಚರರೇ! ನನ್ನ ಆ ಅನವದ್ಯಾಂಗೀ ಧರ್ಮಪತ್ನಿ ಪ್ರಿಯೆಗೋಸ್ಕರವಾಗಿ ಪುಷ್ಪಗಳನ್ನು ಕೊಂಡೊಯ್ಯಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಯಿರಿ.”
03152004 ರಾಕ್ಷಸಾ ಊಚುಃ|
03152004a ಆಕ್ರೀಡೋಽಯಂ ಕುಬೇರಸ್ಯ ದಯಿತಃ ಪುರುಷರ್ಷಭ|
03152004c ನೇಹ ಶಕ್ಯಂ ಮನುಷ್ಯೇಣ ವಿಹರ್ತುಂ ಮರ್ತ್ಯಧರ್ಮಿಣಾ||
ರಾಕ್ಷಸರು ಹೇಳಿದರು: “ಪುರುಷರ್ಷಭ! ಇದು ಕುಬೇರನ ಅತೀ ಅಚ್ಚುಮೆಚ್ಚಿನ ಕ್ರೀಡಾಸ್ಥಳ. ಮೃತ್ಯುಧರ್ಮಿಗಳಾದ ಮನುಷ್ಯರು ಇಲ್ಲಿ ವಿಹರಿಸಲು ಶಕ್ಯವಿಲ್ಲ.
03152005a ದೇವರ್ಷಯಸ್ತಥಾ ಯಕ್ಷಾ ದೇವಾಶ್ಚಾತ್ರ ವೃಕೋದರ|
03152005c ಆಮಂತ್ರ್ಯ ಯಕ್ಷಪ್ರವರಂ ಪಿಬಂತಿ ವಿಹರಂತಿ ಚ||
03152005e ಗಂಧರ್ವಾಪ್ಸರಸಶ್ಚೈವ ವಿಹರಂತ್ಯತ್ರ ಪಾಂಡವ||
ವೃಕೋದರ! ದೇವರ್ಷಿಗಳೂ, ಯಕ್ಷರೂ, ದೇವತೆಗಳೂ, ಯಕ್ಷಪ್ರವರ ಕುಬೇರನ ಅನುಮತಿಯಿಂದ ಮಾತ್ರ ಇಲ್ಲಿಯ ನೀರನ್ನು ಕುಡಿಯಬಲ್ಲರು ಮತ್ತು ಇಲ್ಲಿ ವಿಹರಿಸಬಲ್ಲರು. ಪಾಂಡವ! ಹೀಗೆ ಗಂಧರ್ವ ಅಪ್ಸರೆಯರೂ ಇಲ್ಲಿ ವಿಹರಿಸುತ್ತಾರೆ.
03152006a ಅನ್ಯಾಯೇನೇಹ ಯಃ ಕಶ್ಚಿದವಮನ್ಯ ಧನೇಶ್ವರಂ|
03152006c ವಿಹರ್ತುಮಿಚ್ಚೇದ್ದುರ್ವೃತ್ತಃ ಸ ವಿನಶ್ಯೇದಸಂಶಯಂ||
ಧನೇಶ್ವರನನ್ನು ಅಪಮಾನಿಸಿ ಇಲ್ಲಿ ಯಾರಾದರೂ ವಿಹರಿಸಲು ಬಯಸಿದರೆ ಆ ಕೆಟ್ಟ ಕೆಲಸವನ್ನು ಮಾಡುವವನು ವಿನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03152007a ತಮನಾದೃತ್ಯ ಪದ್ಮಾನಿ ಜಿಹೀರ್ಷಸಿ ಬಲಾದಿತಃ|
03152007c ಧರ್ಮರಾಜಸ್ಯ ಚಾತ್ಮಾನಂ ಬ್ರವೀಷಿ ಭ್ರಾತರಂ ಕಥಂ||
ಅವನನ್ನು ತಿರಸ್ಕರಿಸಿ ಬಲಾತ್ಕಾರವಾಗಿ ಇಲ್ಲಿಂದ ಹೂವುಗಳನ್ನು ಅಪಹರಿಸಿಕೊಂಡು ಹೋಗಲು ಬಯಸುವ ನೀನು ಹೇಗೆ ತಾನೆ ಧರ್ಮರಾಜನ ತಮ್ಮನೆಂದು ಹೇಳಿಕೊಳ್ಳುತ್ತೀಯೆ?”
03152008 ಭೀಮ ಉವಾಚ|
03152008a ರಾಕ್ಷಸಾಸ್ತಂ ನ ಪಶ್ಯಾಮಿ ಧನೇಶ್ವರಮಿಹಾಂತಿಕೇ|
03152008c ದೃಷ್ಟ್ವಾಪಿ ಚ ಮಹಾರಾಜಂ ನಾಹಂ ಯಾಚಿತುಮುತ್ಸಹೇ||
ಭೀಮನು ಹೇಳಿದನು: “ರಾಕ್ಷಸರೇ! ಇಲ್ಲಿ ಹತ್ತಿರದಲ್ಲಿ ಎಲ್ಲಿಯೂ ನಾನು ಧನೇಶ್ವರ ಕುಬೇರನನ್ನು ಕಾಣುತ್ತಿಲ್ಲ. ಒಂದು ವೇಳೆ ಅವನನ್ನು ನೋಡಿದರೂ ಆ ಮಹಾರಾಜನಲ್ಲಿ ಬೇಡುವ ಕಷ್ಟವನ್ನು ಮಾಡುವುದಿಲ್ಲ.
03152009a ನ ಹಿ ಯಾಚಂತಿ ರಾಜಾನ ಏಷ ಧರ್ಮಃ ಸನಾತನಃ|
03152009c ನ ಚಾಹಂ ಹಾತುಮಿಚ್ಚಾಮಿ ಕ್ಷಾತ್ರಧರ್ಮಂ ಕಥಂ ಚನ||
ಯಾಕೆಂದರೆ ರಾಜರು ಬೇಡುವುದಿಲ್ಲ. ಇದೇ ಸನಾತನ ಧರ್ಮ. ಮತ್ತು ನಾನು ಆ ಕ್ಷಾತ್ರಧರ್ಮವನ್ನು ತೊರೆಯಲು ಎಂದೂ ಬಯಸುವುದಿಲ್ಲ.
03152010a ಇಯಂ ಚ ನಲಿನೀ ರಮ್ಯಾ ಜಾತಾ ಪರ್ವತನಿರ್ಝರೇ|
03152010c ನೇಯಂ ಭವನಮಾಸಾದ್ಯ ಕುಬೇರಸ್ಯ ಮಹಾತ್ಮನಃ||
03152011a ತುಲ್ಯಾ ಹಿ ಸರ್ವಭೂತಾನಾಮಿಯಂ ವೈಶ್ರವಣಸ್ಯ ಚ|
03152011c ಏವಂಗತೇಷು ದ್ರವ್ಯೇಷು ಕಃ ಕಂ ಯಾಚಿತುಮರ್ಹತಿ||
ಈ ರಮ್ಯ ಸರೋವರವು ಪರ್ವತಗಳ ಝರಿಗಳಿಂದ ಹುಟ್ಟಿದೆ ಮತ್ತು ಮಹಾತ್ಮ ಕುಬೇರನ ಪ್ರದೇಶಕ್ಕೆ ಸೇರಿಲ್ಲ. ವೈಶ್ರವಣ ಕುಬೇರನನ್ನೂ ಸೇರಿ ಸರ್ವರೂ ಇದಕ್ಕೆ ಸರಿಸಮನಾಗಿ ಒಡೆಯರೇ. ಹೀಗಿರುವಾಗ ಯಾರು ಯಾರಲ್ಲಿ ಏಕೆ ಬೇಡಬೇಕು?””
03152012 ವೈಶಂಪಾಯನ ಉವಾಚ|
03152012a ಇತ್ಯುಕ್ತ್ವಾ ರಾಕ್ಷಸಾನ್ಸರ್ವಾನ್ಭೀಮಸೇನೋ ವ್ಯಗಾಹತ|
03152012c ತತಃ ಸ ರಾಕ್ಷಸೈರ್ವಾಚಾ ಪ್ರತಿಷಿದ್ಧಃ ಪ್ರತಾಪವಾನ್||
03152012e ಮಾ ಮೈವಮಿತಿ ಸಕ್ರೋಧೈರ್ಭರ್ತ್ಸಯದ್ಭಿಃ ಸಮಂತತಃ||
ವೈಶಂಪಾಯನನು ಹೇಳಿದನು: “ಹೀಗೆ ಎಲ್ಲ ರಾಕ್ಷಸರಿಗೂ ಹೇಳಿ ಭೀಮಸೇನನು ಸರೋವರದಲ್ಲಿ ಧುಮುಕಿದನು. ಆಗ ರಾಕ್ಷಸರೆಲ್ಲರೂ ಸರೋವರವನ್ನು ಸುತ್ತುವರೆದು ಬೇಡ ಬೇಡ ಎಂದು ಸಿಟ್ಟಿನಿಂದ ಹೇಳುತ್ತಾ ಆ ಪ್ರತಾಪವಂತನನ್ನು ತಡೆದರು ಮತ್ತು ಬೈದರು.
03152013a ಕದರ್ಥೀಕೃತ್ಯ ತು ಸ ತಾನ್ರಾಕ್ಷಸಾನ್ಭೀಮವಿಕ್ರಮಃ|
03152013c ವ್ಯಗಾಹತ ಮಹಾತೇಜಾಸ್ತೇ ತಂ ಸರ್ವೇ ನ್ಯವಾರಯನ್||
ಅವನನ್ನು ತಡೆಯುತ್ತಿರುವ ಆ ಎಲ್ಲ ರಾಕ್ಷಸರನ್ನು ಗಮನಿಸದೇ ಆ ಮಹಾತೇಜಸ್ವಿ ಭೀಮವಿಕ್ರಮನು ಸರೋವರದಲ್ಲಿಳಿದನು.
03152014a ಗೃಹ್ಣೀತ ಬಧ್ನೀತ ನಿಕೃಂತತೇಮಂ|
ಪಚಾಮ ಖಾದಾಮ ಚ ಭೀಮಸೇನಂ|
03152014c ಕ್ರುದ್ಧಾ ಬ್ರುವಂತೋಽನುಯಯುರ್ದ್ರುತಂ ತೇ|
ಶಸ್ತ್ರಾಣಿ ಚೋದ್ಯಮ್ಯ ವಿವೃತ್ತನೇತ್ರಾಃ||
“ಅವನನ್ನು ಹಿಡಿಯಿರಿ, ಕಟ್ಟಿರಿ, ಕೊಲ್ಲಿರಿ! ಭೀಮಸೇನನನ್ನು ಅಡುಗೆಮಾಡಿ ತಿನ್ನೋಣ!” ಎಂದು ಕೂಗುತ್ತಾ ಕೃದ್ಧರಾದ ಅವರು, ಶಸ್ತ್ರಗಳನ್ನು ಮೇಲಕ್ಕೆತ್ತಿ ಕಣ್ಣುಗಳನ್ನು ತಿರುಗಿಸುತ್ತಾ ಅವನನ್ನು ಬೆನ್ನಟ್ಟಿದರು.
03152015a ತತಃ ಸ ಗುರ್ವೀಂ ಯಮದಂಡಕಲ್ಪಾಂ|
ಮಹಾಗದಾಂ ಕಾಂಚನಪಟ್ಟನದ್ಧಾಂ|
03152015c ಪ್ರಗೃಹ್ಯ ತಾನಭ್ಯಪತತ್ತರಸ್ವೀ|
ತತೋಽಬ್ರವೀತ್ತಿಷ್ಠತ ತಿಷ್ಠತೇತಿ||
ಆಗ ಅವನು ತನ್ನ ಅತಿ ಭಾರವಾಗಿದ್ದ ಯಮದಂಡದಂತಿರುವ ಬಂಗಾರದ ಪಟ್ಟಿಯಿಂದ ಸುತ್ತಲ್ಪಟ್ಟ ಮಹಾ ಗದೆಯನ್ನು ಎತ್ತಿ ಹಿಡಿದನು. ನಿಲ್ಲಿ ನಿಲ್ಲಿ ಎಂದು ಕೂಗುತ್ತಾ ಆ ಸಿಟ್ಟಿಗೆದ್ದ ಬೀಮನು ಅವರ ಮೇಲೆರಗಿದನು.
03152016a ತೇ ತಂ ತದಾ ತೋಮರಪಟ್ಟಿಶಾದ್ಯೈರ್|
ವ್ಯಾವಿಧ್ಯ ಶಸ್ತ್ರೈಃ ಸಹಸಾಭಿಪೇತುಃ|
03152016c ಜಿಘಾಂಸವಃ ಕ್ರೋಧವಶಾಃ ಸುಭೀಮಾ|
ಭೀಮಂ ಸಮಂತಾತ್ಪರಿವವ್ರುರುಗ್ರಾಃ||
ಆಗ ಅವರು ತಮ್ಮ ತೋಮರ ಪಟ್ಟಿಶಗಳಿಂದ ಒಂದೇ ಸಮನೆ ಅವನ ಮೇಲೆರಗಿದರು. ತುಂಬಾ ಭಯಂಕರರಾಗಿದ್ದ ಕ್ರೋಧವಶರು ಕೋಪದಿಂದ ಭೀಮನನ್ನು ಸುತ್ತುವರೆದರು.
03152017a ವಾತೇನ ಕುಂತ್ಯಾಂ ಬಲವಾನ್ಸ ಜಾತಃ|
ಶೂರಸ್ತರಸ್ವೀ ದ್ವಿಷತಾಂ ನಿಹಂತಾ|
03152017c ಸತ್ಯೇ ಚ ಧರ್ಮೇ ಚ ರತಃ ಸದೈವ|
ಪರಾಕ್ರಮೇ ಶತ್ರುಭಿರಪ್ರಧೃಷ್ಯಃ||
ವಾಯುವಿನಿಂದ ಕುಂತಿಯಲ್ಲಿ ಜನಿಸಿದ, ವಿರೋಧಿಗಳನ್ನು ಸಂಹರಿಸಲು ಚಡಪಡಿಸುವ, ಸತ್ಯ ಮತ್ತು ಧರ್ಮಗಳಲ್ಲಿ ಸದಾ ನಿರತನಾಗಿದ್ದ ಆ ಬಲವಾನ ಶೂರನು ಪರಾಕ್ರಮದಿಂದ ಶತ್ರುಗಳ ದಾರಿಯನ್ನೇ ಕಡಿದನು.
03152018a ತೇಷಾಂ ಸ ಮಾರ್ಗಾನ್ವಿವಿಧಾನ್ಮಹಾತ್ಮಾ|
ನಿಹತ್ಯ ಶಸ್ತ್ರಾಣಿ ಚ ಶಾತ್ರವಾಣಾಂ|
03152018c ಯಥಾಪ್ರವೀರಾನ್ನಿಜಘಾನ ವೀರಃ|
ಪರಹ್ಶತಾನ್ಪುಷ್ಕರಿಣೀಸಮೀಪೇ||
ಅವರ ಶಸ್ತ್ರಗಳನ್ನೇ ಮುರಿದು ಹಾಕಿ ಆ ಮಹಾತ್ಮರ ವಿವಿಧ ಮಾರ್ಗಗಳನ್ನೂ ತಡೆದು, ಸರೋವರದ ಸಮೀಪದಲ್ಲಿ ನೂರಕ್ಕೂ ಹೆಚ್ಚು ಪ್ರಮುಖರನ್ನು ಆ ವೀರನು ಸಂಹರಿಸಿದನು.
03152019a ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ|
ವಿದ್ಯಾಬಲಂ ಬಾಹುಬಲಂ ತಥೈವ|
03152019c ಅಶಕ್ನುವಂತಃ ಸಹಿತಾಃ ಸಮಂತಾದ್|
ಧತಪ್ರವೀರಾಃ ಸಹಸಾ ನಿವೃತ್ತಾಃ||
ಆಗ ಅವನ ವೀರ್ಯ ಮತ್ತು ಬಲವನ್ನು, ಹಾಗೆಯೇ ವಿದ್ಯಾಬಲ ಮತ್ತು ಬಾಹುಬಲವನ್ನು ಕಂಡು ತಮ್ಮ ಸಂಖ್ಯೆಯಿಂದಲೂ ಅವನನ್ನು ಎದುರಿಸಲಾಗದೇ ನಾಯಕರನ್ನು ಕಳೆದುಕೊಂಡು ಅವರು ತಕ್ಷಣವೇ ಹಿಂಗಾಲಿಕ್ಕಿದರು.
03152020a ವಿದೀರ್ಯಮಾಣಾಸ್ತತ ಏವ ತೂರ್ಣಂ|
ಆಕಾಶಮಾಸ್ಥಾಯ ವಿಮೂಢಸಂಜ್ಞಾಃ|
03152020c ಕೈಲಾಸಶೃಂಗಾಣ್ಯಭಿದುದ್ರುವುಸ್ತೇ|
ಭೀಮಾರ್ದಿತಾಃ ಕ್ರೋಧವಶಾಃ ಪ್ರಭಗ್ನಾಃ||
ಸಂಪೂರ್ಣವಾಗಿ ಪೀಡೆಗೊಳಗಾಗಿ ತಮ್ಮ ಚೇತನವನ್ನೇ ಕಳೆದುಕೊಂಡ ಆ ಸೇನೆಯು ತಕ್ಷಣವೇ ಆಕಾಶ ಮಾರ್ಗವನ್ನೇರಿತು. ಭೀಮನಿಂದ ಸದೆಬಡಿಯಲ್ಪಟ್ಟ ಕ್ರೋಧವಶರು ಭಗ್ನರಾಗಿ ಕೈಶಾಸಶಿಖರರದ ಕಡೆ ಓಡಿದರು.
03152021a ಸ ಶಕ್ರವದ್ದಾನವದೈತ್ಯಸಂಘಾನ್|
ವಿಕ್ರಮ್ಯ ಜಿತ್ವಾ ಚ ರಣೇಽರಿಸಂಘಾನ್|
03152021c ವಿಗಾಹ್ಯ ತಾಂ ಪುಷ್ಕರಿಣೀಂ ಜಿತಾರಿಃ|
ಕಾಮಾಯ ಜಗ್ರಾಹ ತತೋಽಂಬುಜಾನಿ||
ರಣದಲ್ಲಿ ತನ್ನ ವಿಕ್ರಮದಿಂದ ಶತ್ರುಗಳನ್ನು ಗೆದ್ದ ಇಂದ್ರನಂತೆ ಆ ದಾನವ ದೈತ್ಯರನ್ನು ಕೆಳಗುರುಳಿಸಿದನು. ಶತ್ರುಗಳನ್ನು ಸೋಲಿಸಿದ ಅವನು ಆ ಸರೋವರಕ್ಕೆ ಧುಮುಕಿ ತನಗಿಷ್ಟಬಂದಹಾಗೆ ಆ ನೀರಲ್ಲಿ ಬೆಳೆದಿದ್ದ ಹೂವುಗಳನ್ನು ಕಿತ್ತನು.
03152022a ತತಃ ಸ ಪೀತ್ವಾಮೃತಕಲ್ಪಮಂಭೋ|
ಭೂಯೋ ಬಭೂವೋತ್ತಮವೀರ್ಯತೇಜಾಃ|
03152022c ಉತ್ಪಾಟ್ಯ ಜಗ್ರಾಹ ತತೋಽಂಬುಜಾನಿ|
ಸೌಗಂಧಿಕಾನ್ಯುತ್ತಮಗಂಧವಂತಿ||
ಅನಂತರ ಅವನು ಅಮೃತಸಮಾನ ನೀರನ್ನು ಕುಡಿದು ವೀರ್ಯ ಮತ್ತು ತೇಜಸ್ಸಿನಲ್ಲಿ ಇನ್ನೂ ಉತ್ತಮನಾದನು. ಅವನು ಅತ್ಯುತ್ತಮ ಸುಗಂಧವನ್ನು ಹೊಂದಿದ್ದ ನೀರಿನಲ್ಲಿ ಹುಟ್ಟಿದ್ದ ಸೌಗಂಧಿಕಗಳನ್ನು ಕಿತ್ತು ಒಟ್ಟುಹಾಕಿದನು.
03152023a ತತಸ್ತು ತೇ ಕ್ರೋಧವಶಾಃ ಸಮೇತ್ಯ|
ಧನೇಶ್ವರಂ ಭೀಮಬಲಪ್ರಣುನ್ನಾಃ|
03152023c ಭೀಮಸ್ಯ ವೀರ್ಯಂ ಚ ಬಲಂ ಚ ಸಂಖ್ಯೇ|
ಯಥಾವದಾಚಖ್ಯುರತೀವ ದೀನಾಃ||
ಭೀಮನ ಬಲಕ್ಕೆ ಸಿಲುಕಿ ಸೋತ ಕ್ರೋಧವಶರು ಒಂದಾಗಿ ಧನೇಶ್ವರ ಕುಬೇರನನ್ನು ಭೇಟಿಯಾದರು. ಅತೀವ ದೀನರಾಗಿದ್ದ ಅವರು ಯುದ್ಧದಲ್ಲಿ ಭೀಮನಿಗಿದ್ದ ವೀರ್ಯ ಮತ್ತು ಬಲಗಳ ಕುರಿತು ಹೇಗಿತ್ತೋ ಹಾಗೆ ಹೇಳಿದರು.
03152024a ತೇಷಾಂ ವಚಸ್ತತ್ತು ನಿಶಮ್ಯ ದೇವಃ|
ಪ್ರಹಸ್ಯ ರಕ್ಷಾಂಶಿ ತತೋಽಭ್ಯುವಾಚ|
03152024c ಗೃಹ್ಣಾತು ಭೀಮೋ ಜಲಜಾನಿ ಕಾಮಂ|
ಕೃಷ್ಣಾನಿಮಿತ್ತಂ ವಿದಿತಂ ಮಮೈತತ್||
ಅವರ ಮಾತುಗಳನ್ನು ಕೇಳಿದ ದೇವನು ನಗುತ್ತಾ ರಾಕ್ಷಸರಿಗೆ ಹೇಳಿದನು: “ಸರೋವರದಲ್ಲಿ ಹುಟ್ಟಿದ ಪುಷ್ಪಗಳನ್ನು ಭೀಮನು ತನಗೆ ಬೇಕಾದಷ್ಟು ತೆಗೆದುಕೊಂಡು ಹೋಗುತ್ತಾನೆ. ಕೃಷ್ಣೆಯ ಉದ್ದೇಶವನ್ನು ನಾನು ತಿಳಿದಿದ್ದೇನೆ.”
03152025a ತತೋಽಭ್ಯನುಜ್ಞಾಯ ಧನೇಶ್ವರಂ ತೇ|
ಜಗ್ಮುಃ ಕುರೂಣಾಂ ಪ್ರವರಂ ವಿರೋಷಾಃ|
03152025c ಭೀಮಂ ಚ ತಸ್ಯಾಂ ದದೃಶುರ್ನಲಿನ್ಯಾಂ|
ಯಥೋಪಜೋಷಂ ವಿಹರಂತಮೇಕಂ||
ಅನಂತರ ಧನೇಶ್ವರ ಕುಬೇರನು ಅವರಿಗೆ ಅನುಮತಿಯನ್ನಿತ್ತನು. ಅವರು ರೋಷವನ್ನು ತೊರೆದು ಕುರುಗಳ ನಾಯಕನಲ್ಲಿಗೆ ಹೋದರು. ಅಲ್ಲಿ ಸರೋವರದಲ್ಲಿ ಒಬ್ಬನೇ ತನಗಿಷ್ಟಬಂದಂತೆ ಆಡುತ್ತಿದ್ದ ಭೀಮನನ್ನು ನೋಡಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ದ್ವಿಪಂಚಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ತೆರಡನೆಯ ಅಧ್ಯಾಯವು.