ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೫೧
ವನವನ್ನು ಕಾಯುತ್ತಿದ್ದ ಕುಬೇರನ ಅನುಚರರಾದ ಕ್ರೋಧವಶರೆಂಬ ನೂರಾರು ಸಹಸ್ರಾರು ರಾಕ್ಷಸರು ಸೌಗಂಧಿಕಾ ಪುಷ್ಪಗಳನ್ನು ಕೀಳಲು ಮುಂದಾದ ಭೀಮನನ್ನು ತಡೆದುದು (೧-೧೫).
03151001 ವೈಶಂಪಾಯನ ಉವಾಚ|
03151001a ಸ ಗತ್ವಾ ನಲಿನೀಂ ರಮ್ಯಾಂ ರಾಕ್ಷಸೈರಭಿರಕ್ಷಿತಾಂ|
03151001c ಕೈಲಾಸಶಿಖರೇ ರಮ್ಯೇ ದದರ್ಶ ಶುಭಕಾನನೇ||
03151002a ಕುಬೇರಭವನಾಭ್ಯಾಶೇ ಜಾತಾಂ ಪರ್ವತನಿರ್ಝರೇ|
03151002c ಸುರಮ್ಯಾಂ ವಿಪುಲಚ್ಚಾಯಾಂ ನಾನಾದ್ರುಮಲತಾವೃತಾಂ||
03151003a ಹರಿತಾಂಬುಜಸಂಚನ್ನಾಂ ದಿವ್ಯಾಂ ಕನಕಪುಷ್ಕರಾಂ|
03151003c ಪವಿತ್ರಭೂತಾಂ ಲೋಕಸ್ಯ ಶುಭಾಮದ್ಭುತದರ್ಶನಾಂ||
ªÉʱ ವೈಶಂಪಾಯನನು ಹೇಳಿದನು: “ಹೋಗಿ ಕೈಲಾಸ ಶಿಖರದ ಆ ಶುಭಕಾನನದಲ್ಲಿ ಸುಂದರವಾಗಿ ಕಾಣುತ್ತಿದ್ದ, ಕುಬೇರನ ಮನೆಯ ಪಕ್ಕದಲ್ಲಿದ್ದ, ಪರ್ವತದ ಜಲಪಾತಗಳಿಂದ ಹುಟ್ಟಿದ್ದ, ನಾನಾ ದ್ರುಮಲತೆಗಳಿಂದ ಸುತ್ತುವರೆಯಲ್ಪಟ್ಟು ಸಾಕಷ್ಟು ನೆರಳಿನಲ್ಲಿದ್ದ ಸುರಮ್ಯವಾದ, ಹಳದೀ ಬಣ್ಣದ ನೈದಿಲೆಗಳಿಂದ ಮತ್ತು ತೇಲಾಡುತ್ತಿರುವ ಲೋಕವನ್ನೇ ಸುಂದರಗೊಳಿಸಬಲ್ಲ ಬಂಗಾರದ ಕಮಲಗಳಿಂದ ಕೂಡಿದ್ದ, ದಿವ್ಯವಾದ, ನೋಡಲಿಕ್ಕೆ ಅದ್ಭುತವಾಗಿದ್ದ, ರಾಕ್ಷಸರಿಂದ ರಕ್ಷಿಸಲ್ಪಟ್ಟ ಆ ರಮ್ಯ ಸರೋವರಕ್ಕೆ ಹೋದನು.
03151004a ತತ್ರಾಮೃತರಸಂ ಶೀತಂ ಲಘು ಕುಂತೀಸುತಃ ಶುಭಂ|
03151004c ದದರ್ಶ ವಿಮಲಂ ತೋಯಂ ಶಿವಂ ಬಹು ಚ ಪಾಂಡವಃ||
ಅಲ್ಲಿ ಕುಂತೀಸುತ ಪಾಂಡವನು ಅಮೃತದಂತೆ ರುಚಿಯಾಗಿದ್ದ ತಣ್ಣಗಿನ, ಹಗುರಾಗಿದ್ದ, ಶುಭವಾಗಿದ್ದ, ಶುದ್ಧವಾಗಿದ್ದ, ಬಹಳ ಮಂಗಳಕರವಾಗಿದ್ದ ನೀರನ್ನು ಕಂಡನು.
03151005a ತಾಂ ತು ಪುಷ್ಕರಿಣೀಂ ರಮ್ಯಾಂ ಪದ್ಮಸೌಗಂಧಿಕಾಯುತಾಂ|
03151005c ಜಾತರೂಪಮಯೈಃ ಪದ್ಮೈಶ್ಚನ್ನಾಂ ಪರಮಗಂಧಿಭಿಃ||
03151006a ವೈಡೂರ್ಯವರನಾಲೈಶ್ಚ ಬಹುಚಿತ್ರೈರ್ಮನೋಹರೈಃ|
03151006c ಹಂಸಕಾರಂಡವೋದ್ಧೂತೈಃ ಸೃಜದ್ಭಿರಮಲಂ ರಜಃ||
ಆ ಸುಂದರ ಸರೋವರವು ವೈಡೂರ್ಯದ ತೊಟ್ಟುಗಳುಳ್ಳ. ಬಹುಬಣ್ಣದ, ಮನೋಹರವಾದ, ಸೌಗಂಧಿಕಾ ಪದ್ಮಗಳಿಂದ, ಪರಮ ಸುಗಂಧದಿಂದ ಕೂಡಿದ್ದ ಬಂಗಾರದ ಪದ್ಮಗಳಿಂದ ತುಂಬಿಕೊಂಡಿತ್ತು ಮತ್ತು ಹಂಸ ಕಾರಂಡಗಳಿಂದ ಕದಡಿಸಲ್ಪಟ್ಟು ಬಿಳೀ ಹೂಧೂಳಿಯನ್ನು ಹೊಮ್ಮುತ್ತಿತ್ತು.
03151007a ಆಕ್ರೀಡಂ ಯಕ್ಷರಾಜಸ್ಯ ಕುಬೇರಸ್ಯ ಮಹಾತ್ಮನಃ|
03151007c ಗಂಧರ್ವೈರಪ್ಸರೋಭಿಶ್ಚ ದೇವೈಶ್ಚ ಪರಮಾರ್ಚಿತಾಂ||
03151008a ಸೇವಿತಾಮೃಷಿಭಿರ್ದಿವ್ಯಾಂ ಯಕ್ಷೈಃ ಕಿಂಪುರುಷೈಸ್ತಥಾ|
03151008c ರಾಕ್ಷಸೈಃ ಕಿನ್ನರೈಶ್ಚೈವ ಗುಪ್ತಾಂ ವೈಶ್ರವಣೇನ ಚ||
ಅದು ಯಕ್ಷರಾಜ ಮಹಾತ್ಮ ಕುಬೇರನ ಆಟದ ಸ್ಥಳವಾಗಿತ್ತು. ಅದನ್ನು ಗಂಧರ್ವ, ಅಪ್ಸರ ಮತ್ತು ದೇವತೆಗಳು ಅತಿಯಾಗಿ ಬಯಸುತ್ತಿದ್ದರು. ದೇವರ್ಷಿಗಳಿಂದ, ಯಕ್ಷರಿಂದ, ಹಾಗೆಯೇ ಕಿಂಪುರುಷರಿಂದ, ರಾಕ್ಷಸರಿಂದ, ಕಿನ್ನರರಿಂದ ಸೇವಿಸಲ್ಪಟ್ಟ ಅದನ್ನು ವೈಶ್ರವಣನು ರಕ್ಷಿಸುತ್ತಿದ್ದನು.
03151009a ತಾಂ ಚ ದೃಷ್ಟ್ವೈವ ಕೌಂತೇಯೋ ಭೀಮಸೇನೋ ಮಹಾಬಲಃ|
03151009c ಬಭೂವ ಪರಮಪ್ರೀತೋ ದಿವ್ಯಂ ಸಂಪ್ರೇಕ್ಷ್ಯ ತತ್ಸರಃ||
ಆ ದಿವ್ಯ ಸರೋವರದ ಬಳಿಹೋಗಿ ಅದನ್ನು ನೋಡಿದೊಡನೆಯೇ ಕೌಂತೇಯ ಮಹಾಬಲ ಭೀಮಸೇನನು ಪರಮ ಸಂಪ್ರೀತನಾದನು.
03151010a ತಚ್ಚ ಕ್ರೋಧವಶಾ ನಾಮ ರಾಕ್ಷಸಾ ರಾಜಶಾಸನಾತ್|
03151010c ರಕ್ಷಂತಿ ಶತಸಾಹಸ್ರಾಶ್ಚಿತ್ರಾಯುಧಪರಿಚ್ಚದಾಃ||
ಕ್ರೋಧವಶರೆಂಬ ಹೆಸರಿನ ನೂರಾರು ಸಹಸ್ರಾರು ರಾಕ್ಷಸರು ವಿಚಿತ್ರ ಆಯುಧಗಳನ್ನು ಹಿಡಿದು ಅವರ ರಾಜನ ಶಾಸನದಂತೆ ಅದನ್ನು ಕಾಯುತ್ತಿದ್ದರು.
03151011a ತೇ ತು ದೃಷ್ಟ್ವೈವ ಕೌಂತೇಯಮಜಿನೈಃ ಪರಿವಾರಿತಂ|
03151011c ರುಕ್ಮಾಂಗದಧರಂ ವೀರಂ ಭೀಮಂ ಭೀಮಪರಾಕ್ರಮಂ||
03151012a ಸಾಯುಧಂ ಬದ್ಧನಿಸ್ತ್ರಿಂಶಮಶಮ್ಕಿತಮರಿಂದಮಂ|
03151012c ಪುಷ್ಕರೇಪ್ಸುಮುಪಾಯಾಂತಮನ್ಯೋನ್ಯಮಭಿಚುಕ್ರುಶುಃ||
ಹೂಗಳನ್ನು ಕೀಳಲು ಮುಂದಾಗುತ್ತಿದ್ದ ಜಿನವನ್ನು ಧರಿಸಿದ್ದ ಕೌಂತೇಯ ವೀರ ಭೀಮಪರಾಕ್ರಮಿ ರುಕ್ಮಾಂಗದಧರ, ಆಯುಧಗಳನ್ನು ಹಿಡಿದಿದ್ದ, ಖಡ್ಗವನ್ನು ಹಿಡಿದಿದ್ದ ಭಯವನ್ನೇ ತೋರಿಸದಿದ್ದ ಆ ಅರಿಂದಮ ಭೀಮನನ್ನು ನೋಡಿದೊಡನೆಯೇ ಅವರು ಪರಸ್ಪರರಲ್ಲಿ ಕೂಗಾಡಲು ತೊಡಗಿದರು.
03151013a ಅಯಂ ಪುರುಷಶಾರ್ದೂಲಃ ಸಾಯುಧೋಽಜಿನಸಂವೃತಃ|
03151013c ಯಚ್ಚಿಕೀರ್ಷುರಿಹ ಪ್ರಾಪ್ತಸ್ತತ್ಸಂಪ್ರಷ್ಟುಮಿಹಾರ್ಹಥ||
“ಜಿನವನ್ನು ಸುತ್ತಿಕೊಂಡು ಆಯುಧಗಳನ್ನು ಹಿಡಿದಿರುವ ಈ ಪುರುಷಶರ್ದೂಲನನ್ನು ಅವನು ಯಾರು ಮತ್ತು ಇಲ್ಲಿಗೆ ಏಕೆ ಬಂದಿದ್ದಾನೆಂದು ಕೇಳಿ!”
03151014a ತತಃ ಸರ್ವೇ ಮಹಾಬಾಹುಂ ಸಮಾಸಾದ್ಯ ವೃಕೋದರಂ|
03151014c ತೇಜೋಯುಕ್ತಮಪೃಚ್ಚಂತ ಕಸ್ತ್ವಮಾಖ್ಯಾತುಮರ್ಹಸಿ||
ಆಗ ಅವರೆಲ್ಲರೂ ಮಹಾಬಾಹು ವೃಕೋದರನ ಬಳಿಬಂದು ಆ ತೇಜೋಯುಕ್ತನನ್ನು ಕೇಳಿದರು: “ನೀನು ಯಾರೆಂದು ಹೇಳು!
03151015a ಮುನಿವೇಷಧರಶ್ಚಾಸಿ ಚೀರವಾಸಾಶ್ಚ ಲಕ್ಷ್ಯಸೇ|
03151015c ಯದರ್ಥಮಸಿ ಸಂಪ್ರಾಪ್ತಸ್ತದಾಚಕ್ಷ್ವ ಮಹಾದ್ಯುತೇ||
ನೀನು ಮುನಿಗಳ ವೇಷವನ್ನು ಧರಿಸಿದ್ದೀಯೆ ಮತ್ತು ನಾರುಡೆಗಳನ್ನು ಉಟ್ಟಿರುವಂತೆ ಕಾಣುತ್ತಿದ್ದೀಯೆ. ಮಹಾದ್ಯುತೇ! ನೀನು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀಯೆ. ಹೇಳು!”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ಏಕಪಂಚಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ತೊಂದನೆಯ ಅಧ್ಯಾಯವು.