ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೫೦
ಅರ್ಜುನನ ಧ್ವಜದಲ್ಲಿ ನೆಲೆಸುತ್ತೇನೆ ಎಂದು ಭರವಸೆಯನ್ನಿತ್ತು ಹನುಮಂತನು ಅಂತರ್ಧಾನನಾದುದು (೧-೧೫). ಮುಂದುವರೆದು ಭೀಮನು ಸೌಗಂಧಿಕಾವನವನ್ನು ಕಂಡುದು (೧೬-೨೮).
03150001 ವೈಶಂಪಾಯನ ಉವಾಚ|
03150001a ತತಃ ಸಂಹೃತ್ಯ ವಿಪುಲಂ ತದ್ವಪುಃ ಕಾಮವರ್ಧಿತಂ|
03150001c ಭೀಮಸೇನಂ ಪುನರ್ದೋರ್ಭ್ಯಾಂ ಪರ್ಯಷ್ವಜತ ವಾನರಃ||
ªÉʱವೈಶಂಪಾಯನನು ಹೇಳಿದನು: “ಆಗ ಆ ಕಪಿಯು ಬೇಕಾದಷ್ಟು ಬೆಳೆಸಿದ್ದ ತನ್ನ ದೇಹವನ್ನು ಕುಗ್ಗಿಸಿ, ಭೀಮಸೇನನನ್ನು ತನ್ನ ಬಾಹುಗಳಿಂದ ಅಪ್ಪಿಕೊಂಡನು.
03150002a ಪರಿಷ್ವಕ್ತಸ್ಯ ತಸ್ಯಾಶು ಭ್ರಾತ್ರಾ ಭೀಮಸ್ಯ ಭಾರತ|
03150002c ಶ್ರಮೋ ನಾಶಮುಪಾಗಚ್ಚತ್ಸರ್ವಂ ಚಾಸೀತ್ಪ್ರದಕ್ಷಿಣಂ||
ಅಣ್ಣನು ಹೀಗೆ ಅಪ್ಪಿಕೊಳ್ಳಲು ಭಾರತ ಭೀಮನ ಆಯಾಸವು ನಾಶವಾಯಿತು ಮತ್ತು ಪುನಃ ಎಲ್ಲವೂ ಒಳ್ಳೆಯದೆನಿಸಿತು.
03150003a ತತಃ ಪುನರಥೋವಾಚ ಪರ್ಯಶ್ರುನಯನೋ ಹರಿಃ|
03150003c ಭೀಮಮಾಭಾಷ್ಯ ಸೌಹಾರ್ದಾದ್ಬಾಷ್ಪಗದ್ಗದಯಾ ಗಿರಾ||
ಕಣ್ಣೀರು ತುಂಬಿದ ಕಣ್ಣುಗಳಿಂದ ಆ ವಾನರನು ಪುನಃ ಸ್ನೇಹಭಾವದಿಂದ, ಕಣ್ಣೀರಿನಿಂದ ಕಟ್ಟಿದ ಕಂಠದಿಂದ ಭೀಮನಿಗೆ ಹೇಳಿದನು:
03150004a ಗಚ್ಚ ವೀರ ಸ್ವಮಾವಾಸಂ ಸ್ಮರ್ತವ್ಯೋಽಸ್ಮಿ ಕಥಾಂತರೇ|
03150004c ಇಹಸ್ಥಶ್ಚ ಕುರುಶ್ರೇಷ್ಠ ನ ನಿವೇದ್ಯೋಽಸ್ಮಿ ಕಸ್ಯ ಚಿತ್||
“ಕುರುಶ್ರೇಷ್ಠ! ವೀರ! ನಿನ್ನ ಮನೆಗೆ ಹೋಗು. ನಂತರವೂ ನನ್ನನ್ನು ನೆನಪಿಸಿಕೋ. ಆದರೆ ನಾನು ಇಲ್ಲಿರುವೆನೆಂದು ಯಾರಿಗೂ ಹೇಳಬೇಡ.
03150005a ಧನದಸ್ಯಾಲಯಾಚ್ಚಾಪಿ ವಿಸೃಷ್ಟಾನಾಂ ಮಹಾಬಲ|
03150005c ದೇಶಕಾಲ ಇಹಾಯಾತುಂ ದೇವಗಂಧರ್ವಯೋಷಿತಾಂ||
ಮಹಾಬಲ! ಧನದ ಕುಬೇರನ ಮನೆಯಿಂದ ದೇವತೆಗಳು ಮತ್ತು ಗಂಧರ್ವರು ಹೊರಟು ಬರುವ ಸ್ಥಳ ಮತ್ತು ಸಮಯವಿದು.
03150006a ಮಮಾಪಿ ಸಫಲಂ ಚಕ್ಷುಃ ಸ್ಮಾರಿತಶ್ಚಾಸ್ಮಿ ರಾಘವಂ|
03150006c ಮಾನುಷಂ ಗಾತ್ರಸಂಸ್ಪರ್ಶಂ ಗತ್ವಾ ಭೀಮ ತ್ವಯಾ ಸಹ||
ನನ್ನ ಕಣ್ಣುಗಳೂ ಸಫಲವಾದವು. ಭೀಮ! ನಿನ್ನೊಂದಿಗಿದ್ದು, ಇನ್ನೊಬ್ಬ ಮನುಷ್ಯನ ದೇಹವನ್ನು ಸ್ಪರ್ಷಿಸಿ ನನಗೆ ರಾಘವನ ನೆನಪು ಮರಳಿ ಬಂದಿತು.
03150007a ತದಸ್ಮದ್ದರ್ಶನಂ ವೀರ ಕೌಂತೇಯಾಮೋಘಮಸ್ತು ತೇ|
03150007c ಭ್ರಾತೃತ್ವಂ ತ್ವಂ ಪುರಸ್ಕೃತ್ಯ ವರಂ ವರಯ ಭಾರತ||
ಭಾರತ! ವೀರ! ಕೌಂತೇಯ! ನನ್ನ ಈ ದರ್ಶನವು ನಿನಗೆ ಮಂಗಳವನ್ನುಂಟುಮಾಡಲಿ. ನನ್ನ ಭ್ರಾತೃತ್ವವನ್ನು ಗೌರವಿಸಿ ವರವನ್ನು ಕೇಳು.
03150008a ಯದಿ ತಾವನ್ಮಯಾ ಕ್ಷುದ್ರಾ ಗತ್ವಾ ವಾರಣಸಾಹ್ವಯಂ|
03150008c ಧಾರ್ತರಾಷ್ಟ್ರಾ ನಿಹಂತವ್ಯಾ ಯಾವದೇತತ್ಕರೋಮ್ಯಹಂ||
03150009a ಶಿಲಯಾ ನಗರಂ ವಾ ತನ್ಮರ್ದಿತವ್ಯಂ ಮಯಾ ಯದಿ|
03150009c ಯಾವದದ್ಯ ಕರೋಮ್ಯೇತತ್ಕಾಮಂ ತವ ಮಹಾಬಲ||
ನಾನು ಹಸ್ತಿನಾಪುರಕ್ಕೆ ಹೋಗಿ ಕ್ಷುದ್ರ ಧಾರ್ತರಾಷ್ಟ್ರರನ್ನು ಸಂಹರಿಸಬೇಕೆಂದರೆ ಅದನ್ನೂ ಮಾಡುತ್ತೇನೆ. ಅಥವಾ ಬಂಡೆಯಿಂದ ಆ ನಗರವನ್ನು ಧ್ವಂಸಗೊಳಿಸುತ್ತೇನೆ. ಮಹಾಬಲ! ಇಂದು ನೀನು ಬಯಸಿದುದನ್ನು ನಾನು ಮಾಡಿಕೊಡುತ್ತೇನೆ.”
03150010a ಭೀಮಸೇನಸ್ತು ತದ್ವಾಕ್ಯಂ ಶ್ರುತ್ವಾ ತಸ್ಯ ಮಹಾತ್ಮನಃ|
03150010c ಪ್ರತ್ಯುವಾಚ ಹನೂಮಂತಂ ಪ್ರಹೃಷ್ಟೇನಾಂತರಾತ್ಮನಾ||
ಆ ಮಹಾತ್ಮನ ಮಾತುಗಳನ್ನು ಕೇಳಿದ ಭೀಮಸೇನನು ಒಳಗಿಂದೊಳಗೇ ಸಂತೋಷಗೊಂಡು ಹನುಮಂತನಿಗೆ ಉತ್ತರಿಸಿದನು:
03150011a ಕೃತಮೇವ ತ್ವಯಾ ಸರ್ವಂ ಮಮ ವಾನರಪುಂಗವ|
03150011c ಸ್ವಸ್ತಿ ತೇಽಸ್ತು ಮಹಾಬಾಹೋ ಕ್ಷಾಮಯೇ ತ್ವಾಂ ಪ್ರಸೀದ ಮೇ||
“ವಾನರ ಪುಂಗವ! ನನಗೆ ನೀನು ಈಗಾಗಲೇ ಇಲ್ಲವನ್ನೂ ಮಾಡಿದ್ದೀಯೆ. ಮಹಾಬಾಹೋ! ನಿನಗೆ ಮಂಗಳವಾಗಲಿ! ನನ್ನನ್ನು ಕ್ಷಮಿಸು. ನನ್ನಮೇಲೆ ನಿನ್ನ ಕರುಣೆಯಿರಲಿ.
03150012a ಸನಾಥಾಃ ಪಾಂಡವಾಃ ಸರ್ವೇ ತ್ವಯಾ ನಾಥೇನ ವೀರ್ಯವನ್|
03150012c ತವೈವ ತೇಜಸಾ ಸರ್ವಾನ್ವಿಜೇಷ್ಯಾಮೋ ವಯಂ ರಿಪೂನ್||
ನಿನ್ನಂಥ ವೀರನಲ್ಲಿ ಅನಾಥರಾದ ಪಾಂಡವರೆಲ್ಲರೂ ನಾಥನನ್ನು ಪಡೆದಿದ್ದಾರೆ. ನಿನ್ನ ತೇಜಸ್ಸಿನಿಂದಲೇ ನಾವು ಎಲ್ಲ ಶತ್ರುಗಳನ್ನೂ ಜಯಿಸುತ್ತೇವೆ.”
03150013a ಏವಮುಕ್ತಸ್ತು ಹನುಮಾನ್ಭೀಮಸೇನಮಭಾಷತ|
03150013c ಭ್ರಾತೃತ್ವಾತ್ಸೌಹೃದಾಚ್ಚಾಪಿ ಕರಿಷ್ಯಾಮಿ ತವ ಪ್ರಿಯಂ||
ಭೀಮಸೇನ ಈ ಮಾತುಗಳಿಗೆ ಹನುಮಂತನು ಹೇಳಿದನು: “ನಿನ್ನಲ್ಲಿರುವ ಭ್ರಾತೃತ್ವ ಮತ್ತು ಸ್ನೇಹದಿಂದ ನಿನಗೊಂದು ಪ್ರಿಯವಾದುದನ್ನು ಮಾಡುತ್ತೇನೆ.
03150014a ಚಮೂಂ ವಿಗಾಹ್ಯ ಶತ್ರೂಣಾಂ ಶರಶಕ್ತಿಸಮಾಕುಲಾಂ|
03150014c ಯದಾ ಸಿಂಹರವಂ ವೀರ ಕರಿಷ್ಯಸಿ ಮಹಾಬಲ||
03150014e ತದಾಹಂ ಬೃಂಹಯಿಷ್ಯಾಮಿ ಸ್ವರವೇಣ ರವಂ ತವ||
ಶತ್ರುಗಳ ಸೇನೆಯನ್ನು ಬಾಣ ಮತ್ತು ಈಟಿಗಳಿಂದ ಆಕ್ರಮಣ ಮಾಡಿದಾಗ ಮಹಾಬಲ ವೀರ ನೀನು ಸಿಂಹನಾದವನ್ನು ಮಾಡಿದಾಗ ನಾನೂ ಕೂಡ ದೊಡ್ಡದಾಗಿ ನಿನ್ನ ಕೂಗಿಗೆ ತಕ್ಕುದಾಗಿ ಕೂಗುತ್ತೇನೆ.
03150015a ವಿಜಯಸ್ಯ ಧ್ವಜಸ್ಥಶ್ಚ ನಾದಾನ್ಮೋಕ್ಷ್ಯಾಮಿ ದಾರುಣಾನ್|
03150015c ಶತ್ರೂಣಾಂ ತೇ ಪ್ರಾಣಹರಾನಿತ್ಯುಕ್ತ್ವಾಂತರಧೀಯತ||
ವಿಜಯ ಅರ್ಜುನನ ಧ್ವಜದಲ್ಲಿದ್ದುಕೊಂಡು ನಿನ್ನ ಶತ್ರುಗಳಲ್ಲಿ ಭಯವನ್ನುಂಟುಮಾಡುವಂತೆ ಘರ್ಜಿಸುತ್ತೇನೆ” ಎಂದು ಹೇಳಿ ಅಲ್ಲಿಯೇ ಅಂತರ್ಧಾನನಾದನು.
03150016a ಗತೇ ತಸ್ಮಿನ್ ಹರಿವರೇ ಭೀಮೋಽಪಿ ಬಲಿನಾಂ ವರಃ|
03150016c ತೇನ ಮಾರ್ಗೇಣ ವಿಪುಲಂ ವ್ಯಚರದ್ಗಂಧಮಾದನಂ||
ಆ ವಾನರ ಶ್ರೇಷ್ಠನು ಹೊರಟುಹೋದನಂತರ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನಾದರೋ ಅದೇ ಮಾರ್ಗದಲ್ಲಿ ವಿಪುಲ ಗಂಧಮಾದನದ ಕಡೆ ನಡೆದನು.
03150017a ಅನುಸ್ಮರನ್ವಪುಸ್ತಸ್ಯ ಶ್ರಿಯಂ ಚಾಪ್ರತಿಮಾಂ ಭುವಿ|
03150017c ಮಾಹಾತ್ಮ್ಯಮನುಭಾವಂ ಚ ಸ್ಮರನ್ದಾಶರಥೇರ್ಯಯೌ||
ಭುವಿಯಲ್ಲಿ ಅಪ್ರತಿಮವಾಗಿದ್ದ ಅವನ ದೇಹವನ್ನೂ ಮತ್ತು ಕಾಂತಿಯನ್ನೂ, ದಾಶರಥಿ ರಾಮನೊಂದಿಗೆ ಅವನಿಗಾಗಿದ್ದ ಅನುಭವವನ್ನೂ ನೆನಪಿಸಿಕೊಳ್ಳುತ್ತಾ ಮುಂದುವರೆದನು.
03150018a ಸ ತಾನಿ ರಮಣೀಯಾನಿ ವನಾನ್ಯುಪವನಾನಿ ಚ|
03150018c ವಿಲೋಡಯಾಮಾಸ ತದಾ ಸೌಗಂಧಿಕವನೇಪ್ಸಯಾ||
ಸೌಗಂಧಿಕಾ ವನದ ಕಡೆ ಭಿರುಸಾಗಿ ನಡೆಯುತ್ತಿರುವಾಗ ಆ ರಮಣೀಯ ವನ ಮತ್ತು ಉಪವನಗಳು ಅಲ್ಲಾಡಿದವು.
03150019a ಫುಲ್ಲಪದ್ಮವಿಚಿತ್ರಾಣಿ ಪುಷ್ಪಿತಾನಿ ವನಾನಿ ಚ|
03150019c ಮತ್ತವಾರಣಯೂಥಾನಿ ಪಂಕಕ್ಲಿನ್ನಾನಿ ಭಾರತ||
03150019e ವರ್ಷತಾಮಿವ ಮೇಘಾನಾಂ ವೃಂದಾನಿ ದದೃಶೇ ತದಾ||
ಭಾರತ! ಅಲ್ಲಿ ಅವನು ಬಹುಬಣ್ಣಗಳ ಅರಳಿದ ಕಮಲದ ಹೂವುಗಳಿರುವ ವನಗಳನ್ನು, ಮೈಮೇಲೆ ಕೆಸರನ್ನು ಎರಚಿಕೊಂಡು ಮಳೆಗಾಲದ ಮೋಡಗಳ ಗುಂಪಿನಂತೆ ತೋರುತ್ತಿದ್ದ ಮದಿಸಿದ ಆನೆಗಳ ಹಿಂಡುಗಳನ್ನು ಕಂಡನು.
03150020a ಹರಿಣೈಶ್ಚಂಚಲಾಪಾಂಗೈರ್ಹರಿಣೀಸಹಿತೈರ್ವನೇ|
03150020c ಸಶಷ್ಪಕವಲೈಃ ಶ್ರೀಮಾನ್ಪಥಿ ದೃಷ್ಟೋ ದ್ರುತಂ ಯಯೌ||
ದಾರಿಯಲ್ಲಿ ಜಿಂಕೆಗಳು ಮತ್ತು ಜಿಂಕೆ ಮರಿಗಳು, ಬಾಯಿತುಂಬ ಹುಲ್ಲನ್ನು ತಿನ್ನುತ್ತಾ ತಮ್ಮ ಸುಂದರ ಕಣ್ಣುಗಳಿಂದ ಜೋರಾಗಿ ಮುಂದುವರೆಯುತ್ತಿದ್ದ ಆ ಶ್ರೀಮಂತನನ್ನು ನೋಡಿದವು.
03150021a ಮಹಿಷೈಶ್ಚ ವರಾಹೈಶ್ಚ ಶಾರ್ದೂಲೈಶ್ಚ ನಿಷೇವಿತಂ|
03150021c ವ್ಯಪೇತಭೀರ್ಗಿರಿಂ ಶೌರ್ಯಾದ್ಭೀಮಸೇನೋ ವ್ಯಗಾಹತ||
03150022a ಕುಸುಮಾನತಶಾಖೈಶ್ಚ ತಾಂಪ್ರಪಲ್ಲವಕೋಮಲೈಃ|
03150022c ಯಾಚ್ಯಮಾನ ಇವಾರಣ್ಯೇ ದ್ರುಮೈರ್ಮಾರುತಕಂಪಿತೈಃ||
ಅನಂತರ ಭಯವೇ ಇಲ್ಲದ ಆ ಭೀಮಸೇನನು ಶೌರ್ಯದಿಂದ ಕಾಡುಕೋಣ, ಹಂದಿ ಮತ್ತು ಹುಲಿಗಳು ವಾಸಿಸುತ್ತಿದ್ದ ಗಿರಿಯ ಮೇಲೆ ಬಿದ್ದನು. ಅವನನ್ನು ಸ್ವಾಗತಿಸುತ್ತಿವೆಯೋ ಎನ್ನುವಂತೆ ಆ ಅರಣ್ಯದಲ್ಲಿಯ ಮರಗಳು ಗಾಳಿಬೀಸಿ ಹೂತುಂಬಿದ ರೆಂಬೆಗಳನ್ನು ಬೀಸಿ ಕೋಮಲ ಪುಷ್ಪಗಳನ್ನು ಅವನ ಮೇಲೆ ಸುರಿಸುತ್ತಿದ್ದವು.
03150023a ಕೃತಪದ್ಮಾಂಜಲಿಪುಟಾ ಮತ್ತಷಟ್ಪದಸೇವಿತಾಃ|
03150023c ಪ್ರಿಯತೀರ್ಥವನಾ ಮಾರ್ಗೇ ಪದ್ಮಿನೀಃ ಸಮತಿಕ್ರಮನ್||
03150024a ಸಜ್ಜಮಾನಮನೋದೃಷ್ಟಿಃ ಫುಲ್ಲೇಷು ಗಿರಿಸಾನುಷು|
03150024c ದ್ರೌಪದೀವಾಕ್ಯಪಾಥೇಯೋ ಭೀಮಃ ಶೀಘ್ರತರಂ ಯಯೌ||
ದಾರಿಯಲ್ಲಿ ಕೈಮುಗಿದು ನಿಂತಿವೆಯೋ ಎಂದು ತೋರುತ್ತಿರುವ ದುಂಬಿಗಳು ಸುತ್ತುವರೆದಿದ್ದ ಕಮಲಗಳ ಸರೋವರಗಳನ್ನು, ಸುಂದರ ತೀರ್ಥಗಳನ್ನು ದಾಟಿದನು. ಅವನ ಮನಸ್ಸು ಮತ್ತು ದೃಷ್ಟಿ ಹೂವನ್ನು ಹೊತ್ತಿದ್ದ ಪರ್ವತದ ಮೇಲೆಯೇ ಇತ್ತು. ದ್ರೌಪದಿಯ ಮಾತುಗಳನ್ನೇ ಮೆಲಕುಹಾಕುತ್ತಾ ಭೀಮನು ಶೀಘ್ರವಾಗಿ ಮುಂದುವರೆದನು.
03150025a ಪರಿವೃತ್ತೇಽಹನಿ ತತಃ ಪ್ರಕೀರ್ಣಹರಿಣೇ ವನೇ|
03150025c ಕಾಂಚನೈರ್ವಿಮಲೈಃ ಪದ್ಮೈರ್ದದರ್ಶ ವಿಪುಲಾಂ ನದೀಂ||
03150026a ಮತ್ತಕಾರಂಡವಯುತಾಂ ಚಕ್ರವಾಕೋಪಶೋಭಿತಾಂ|
03150026c ರಚಿತಾಮಿವ ತಸ್ಯಾದ್ರೇರ್ಮಾಲಾಂ ವಿಮಲಪಮ್ಕಜಾಂ||
ದಿನವು ಮುಂದುವರೆದ ಹಾಗೆ ಅವನು ಜಿಂಕೆಗಳು ತುಂಬಿಕೊಂಡಿದ್ದ ವನದಲ್ಲಿ ಶುದ್ಧವಾದ ಕಾಂಚನ ಪದ್ಮಗಳು ತುಂಬಿಕೊಂಡಿದ್ದ, ಮತ್ತ ಕಾರಂಡಗಳಿಂದ ಕೂಡಿದ್ದ, ಚಕ್ರವಾಕಗಳಿಂದ ಶೋಭಿಸುತ್ತಿದ್ದ, ಆ ಪರ್ವತಕ್ಕೆ ಶುದ್ಧ ಕಮಲಗಳ ಮಾಲೆಯನ್ನು ರಚಿಸಲಾಗಿದೆಯೋ ಎನ್ನುವಂತೆ ಇರುವ ನದಿಯನ್ನು ಕಂಡನು.
03150027a ತಸ್ಯಾಂ ನದ್ಯಾಂ ಮಹಾಸತ್ತ್ವಃ ಸೌಗಂಧಿಕವನಂ ಮಹತ್|
03150027c ಅಪಶ್ಯತ್ಪ್ರೀತಿಜನನಂ ಬಾಲಾರ್ಕಸದೃಶದ್ಯುತಿ||
ಆ ನದಿಯ ತಿರುವಿನಲ್ಲಿ ಮಹಾಸತ್ವನು ಸೌಗಂಧಿಕಾ ಮಹಾವನವನ್ನು ಕಂಡನು ಮತ್ತು ಕೂಡಲೇ ಅವನಲ್ಲಿ ಕಾಂತಿಯಲ್ಲಿ ಉದಯಿಸುವ ಸೂರ್ಯನಂತಿರುವ ಸಂತೋಷವು ಹುಟ್ಟಿತು.
03150028a ತದ್ದೃಷ್ಟ್ವಾ ಲಬ್ಧಕಾಮಃ ಸ ಮನಸಾ ಪಾಂಡುನಂದನಃ|
03150028c ವನವಾಸಪರಿಕ್ಲಿಷ್ಟಾಂ ಜಗಾಮ ಮನಸಾ ಪ್ರಿಯಾಂ||
ಅದನ್ನು ಕಂಡ ಪಾಂಡುನಂದನನು ತಾನು ಬಯಸಿದ್ದುದು ದೊರೆಯಿತೆಂದು ಯೋಚಿಸಿದನು ಮತ್ತು ಅವನ ಮನಸ್ಸು ವನದಲ್ಲಿ ಕಷ್ಟಪಡುತ್ತಿರುವ ತನ್ನ ಪ್ರಿಯೆಯ ಕಡೆ ಹೋಯಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ಪಂಚಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ತನೆಯ ಅಧ್ಯಾಯವು.