ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೮
ಹನುಮಂತನು ಭೀಮನಿಗೆ ಯುಗಧರ್ಮಗಳ ಕುರಿತು ವಿವರಿಸಿದುದು (೧-೩೯).
03148001 ವೈಶಂಪಾಯನ ಉವಾಚ|
03148001a ಏವಮುಕ್ತೋ ಮಹಾಬಾಹುರ್ಭೀಮಸೇನಃ ಪ್ರತಾಪವಾನ್|
03148001c ಪ್ರಣಿಪತ್ಯ ತತಃ ಪ್ರೀತ್ಯಾ ಭ್ರಾತರಂ ಹೃಷ್ಟಮಾನಸಃ||
03148001e ಉವಾಚ ಶ್ಲಕ್ಷ್ಣಯಾ ವಾಚಾ ಹನೂಮಂತಂ ಕಪೀಶ್ವರಂ||
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ಮಹಾಬಾಹು ಪ್ರತಾಪಿ ಭೀಮಸೇನನು ಪ್ರೀತಿಯಿಂದ ಅವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಸಂತೋಷದಿಂದ ಮೃದುವಾದ ಮಾತುಗಳಿಂದ ತನ್ನ ಅಣ್ಣ ಕಪೀಶ್ವರ ಹನೂಮಂತನಿಗೆ ಹೇಳಿದನು:
03148002a ಮಯಾ ಧನ್ಯತರೋ ನಾಸ್ತಿ ಯದಾರ್ಯಂ ದೃಷ್ಟವಾನಹಂ|
03148002c ಅನುಗ್ರಹೋ ಮೇ ಸುಮಹಾಂಸ್ತೃಪ್ತಿಶ್ಚ ತವ ದರ್ಶನಾತ್||
“ನಿನ್ನನ್ನು ನೋಡಿದ ನನ್ನಷ್ಟು ಧನ್ಯನು ಇನ್ನು ಯಾರೂ ಇರಲಿಕ್ಕಿಲ್ಲ. ನಿನ್ನ ದರ್ಶನದಿಂದ ನಾನು ತುಂಬಾ ಅನುಗ್ರಹೀತನಾಗಿದ್ದೇನೆ ಮತ್ತು ಮಹಾ ತೃಪ್ತಿಯನ್ನು ಪಡೆದಿದ್ದೇನೆ.
03148003a ಏವಂ ತು ಕೃತಮಿಚ್ಚಾಮಿ ತ್ವಯಾರ್ಯಾದ್ಯ ಪ್ರಿಯಂ ಮಮ|
03148003c ಯತ್ತೇ ತದಾಸೀತ್ಪ್ಲವತಃ ಸಾಗರಂ ಮಕರಾಲಯಂ||
03148003e ರೂಪಮಪ್ರತಿಮಂ ವೀರ ತದಿಚ್ಚಾಮಿ ನಿರೀಕ್ಷಿತುಂ||
03148004a ಏವಂ ತುಷ್ಟೋ ಭವಿಷ್ಯಾಮಿ ಶ್ರದ್ಧಾಸ್ಯಾಮಿ ಚ ತೇ ವಚಃ|
ಆರ್ಯ! ಇಂದು ನಿನಗೆ ಪ್ರಿಯಕರವಾದ ಇದನ್ನೂ ಕೂಡ ಮಾಡುತ್ತೀಯೆಂದು ಬಯಸುತ್ತೇನೆ. ವೀರ! ಮಕರಾಲಯ ಸಾಗರವನ್ನು ಜಿಗಿಯುವಾಗ ನೀನು ಯಾವ ರೂಪವನ್ನು ಧರಿಸಿದ್ದೆಯೋ ಆ ರೂಪವನ್ನು ನೋಡಲು ಬಯಸುತ್ತೇನೆ. ಹೀಗೆ ನಾನು ಸಂತುಷ್ಟನಾಗುತ್ತೇನೆ ಮತ್ತು ನಿನ್ನ ಮಾತುಗಳನ್ನು ನಂಬುತ್ತೇನೆ.”
03148004c ಏವಮುಕ್ತಃ ಸ ತೇಜಸ್ವೀ ಪ್ರಹಸ್ಯ ಹರಿರಬ್ರವೀತ್||
ಇದನ್ನು ಕೇಳಿದ ಆ ತೇಜಸ್ವಿ ಕಪಿಯು ನಗುತ್ತಾ ಹೇಳಿದನು:
03148005a ನ ತಚ್ಛಕ್ಯಂ ತ್ವಯಾ ದ್ರಷ್ಟುಂ ರೂಪಂ ನಾನ್ಯೇನ ಕೇನ ಚಿತ್|
03148005c ಕಾಲಾವಸ್ಥಾ ತದಾ ಹ್ಯನ್ಯಾ ವರ್ತತೇ ಸಾ ನ ಸಾಂಪ್ರತಂ||
“ಆ ರೂಪವನ್ನು ನೀನಾಗಲೀ ಅಥವಾ ಇನ್ನ್ಯಾರೇ ಆಗಲೀ ನೋಡಲಿಕ್ಕಾಗುವುದಿಲ್ಲ. ಯಾಕೆಂದರೆ ಆಗ ಇದ್ದಿದ್ದ ಕಾಲಾವಸ್ಥೆಯೇ ಬೇರೆಯಾಗಿತ್ತು. ಅದು ಈಗ ಇಲ್ಲ.
03148006a ಅನ್ಯಃ ಕೃತಯುಗೇ ಕಾಲಸ್ತ್ರೇತಾಯಾಂ ದ್ವಾಪರೇಽಪರಃ|
03148006c ಅಯಂ ಪ್ರಧ್ವಂಸನಃ ಕಾಲೋ ನಾದ್ಯ ತದ್ರೂಪಮಸ್ತಿ ಮೇ||
03148007a ಭೂಮಿರ್ನದ್ಯೋ ನಗಾಃ ಶೈಲಾಃ ಸಿದ್ಧಾ ದೇವಾ ಮಹರ್ಷಯಃ|
03148007c ಕಾಲಂ ಸಮನುವರ್ತಂತೇ ಯಥಾ ಭಾವಾ ಯುಗೇ ಯುಗೇ||
03148007e ಬಲವರ್ಷ್ಮಪ್ರಭಾವಾ ಹಿ ಪ್ರಹೀಯಂತ್ಯುದ್ಭವಂತಿ ಚ||
ಕೃತಯುಗವು ತ್ರೇತಾಯುಗಕ್ಕಿಂತ ಬೇರೆ ಮತ್ತು ಅದಕ್ಕಿಂತಲೂ ಬೇರೆ ದ್ವಾಪರಯುಗ. ಇದು ಕ್ಷೀಣಿಸುತ್ತಿರುವ ಕಾಲ. ಈಗ ನನಗೆ ಆ ರೂಪವಿಲ್ಲ. ಭೂಮಿ, ನದಿಗಳೂ, ಪರ್ವತಗಳು, ಶಿಖರಗಳು, ಸಿದ್ಧರು, ದೇವತೆಗಳು ಮತ್ತು ಮಹರ್ಷಿಗಳು ಕಾಲಕ್ಕೆ ತಕ್ಕಂತೆ ವರ್ತಿಸುತ್ತಾರೆ. ಯುಗಯುಗದ ಭಾವದಂತೆ ಜೀವಿಗಳ ಶಕ್ತಿ, ಗಾತ್ರ, ಮತ್ತು ಪ್ರಭಾವಗಳು ಕ್ಷೀಣಿಸುತ್ತವೆ ಮತ್ತು ಪುನಃ ವೃದ್ಧಿಯಾಗುತ್ತವೆ.
03148008a ತದಲಂ ತವ ತದ್ರೂಪಂ ದ್ರಷ್ಟುಂ ಕುರುಕುಲೋದ್ವಹ|
03148008c ಯುಗಂ ಸಮನುವರ್ತಾಮಿ ಕಾಲೋ ಹಿ ದುರತಿಕ್ರಮಃ||
ಕುರುಕುಲೋದ್ವಹ! ಆದುದರಿಂದ ನನ್ನ ಆ ರೂಪವನ್ನು ನೋಡುವ ನಿನ್ನ ಈ ಬಯಕೆಯು ಸಾಕು. ನಾನೂ ಕೂಡ ಯುಗವನ್ನು ಅನುಸರಿಸುತ್ತೇನೆ. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.”
03148009 ಭೀಮ ಉವಾಚ|
03148009a ಯುಗಸಂಖ್ಯಾಂ ಸಮಾಚಕ್ಷ್ವ ಆಚಾರಂ ಚ ಯುಗೇ ಯುಗೇ|
03148009c ಧರ್ಮಕಾಮಾರ್ಥಭಾವಾಂಶ್ಚ ವರ್ಷ್ಮ ವೀರ್ಯಂ ಭವಾಭವೌ||
ಭೀಮನು ಹೇಳಿದನು: “ಯುಗಗಳ ಸಂಖ್ಯೆಯನ್ನೂ ಮತ್ತು ಯುಗಯುಗಗಳಲ್ಲಿರುವ ಆಚಾರಗಳನ್ನೂ, ಧರ್ಮ, ಕಾಮ ಮತ್ತು ಅರ್ಥಗಳ ಭಾವವನ್ನೂ, ಗಾತ್ರ, ವೀರ್ಯ ಮತ್ತು ಇರುವುದು ಮತ್ತು ಇಲ್ಲದಿರುವುದರ ಕುರಿತು ಹೇಳು.”
03148010 ಹನೂಮಾನುವಾಚ|
03148010a ಕೃತಂ ನಾಮ ಯುಗಂ ತಾತ ಯತ್ರ ಧರ್ಮಃ ಸನಾತನಃ|
03148010c ಕೃತಮೇವ ನ ಕರ್ತವ್ಯಂ ತಸ್ಮಿನ್ಕಾಲೇ ಯುಗೋತ್ತಮೇ||
“ಮಗೂ! ಕೃತ ಎಂಬ ಹೆಸರಿನ ಯುಗದಲ್ಲಿ ಸನಾತನ ಧರ್ಮವಿದೆ. ಮಾಡಬೇಕಾದುದು ಯಾವುದೂ ಇರದೇ ಎಲ್ಲವನ್ನೂ ಮಾಡಿಯಾಗಿರುತ್ತದೆಯಾದುದರಿಂದ ಆ ಕಾಲವನ್ನು ಉತ್ತಮ ಯುಗವೆಂದು ಕರೆಯುತ್ತಾರೆ.
03148011a ನ ತತ್ರ ಧರ್ಮಾಃ ಸೀದಂತಿ ನ ಕ್ಷೀಯಂತೇ ಚ ವೈ ಪ್ರಜಾಃ|
03148011c ತತಃ ಕೃತಯುಗಂ ನಾಮ ಕಾಲೇನ ಗುಣತಾಂ ಗತಂ||
ಅಲ್ಲಿ ಧರ್ಮವು ಕ್ಷೀಣಿಸುವುದಿಲ್ಲ. ಜೀವಿಗಳು ಕ್ಷೀಣಿಸುವುದಿಲ್ಲ. ಆದುದರಿಂದ ಅದಕ್ಕೆ ಕೃತಯುಗವೆಂದು ಹೆಸರು. ಕಾಲಾಂತರದಲ್ಲಿ ಇದು ಅತ್ಯಂತ ಉತ್ತಮವೆಂದೆನಿಸಿಕೊಂಡಿತು.
03148012a ದೇವದಾನವಗಂಧರ್ವಯಕ್ಷರಾಕ್ಷಸಪನ್ನಗಾಃ|
03148012c ನಾಸನ್ಕೃತಯುಗೇ ತಾತ ತದಾ ನ ಕ್ರಯವಿಕ್ರಯಾಃ||
ಕೃತಯುಗದಲ್ಲಿ ದೇವತೆಗಳು, ದಾನವರು, ಗಂಧರ್ವರು, ಯಕ್ಷರು, ರಾಕ್ಷಸರು ಮತ್ತು ನಾಗಗಳು ಯಾರೂ ಇರುವುದಿಲ್ಲ. ಮಗೂ ಅಲ್ಲಿ ಕ್ರಯವಿಕ್ರಯಗಳೂ ಇರುವುದಿಲ್ಲ.
03148013a ನ ಸಾಮಯಜುಋಗ್ವರ್ಣಾಃ ಕ್ರಿಯಾ ನಾಸೀಚ್ಚ ಮಾನವೀ|
03148013c ಅಭಿಧ್ಯಾಯ ಫಲಂ ತತ್ರ ಧರ್ಮಃ ಸಂನ್ಯಾಸ ಏವ ಚ||
ಸಾಮ, ಯಜುರ್ ಮತ್ತು ಋಕ್ ಗಳೆಂಬ ವಿಂಗಡಣೆಯಿಲ್ಲ, ಮಾನವೀಯ ಶ್ರಮವೂ ಅಲ್ಲಿಲ್ಲ. ನೆನೆಸಿದ ಹಾಗೆ ಫಲವು ದೊರೆಯುತ್ತದೆ ಮತ್ತು ಸನ್ಯಾಸವೇ ಅಲ್ಲಿಯ ಧರ್ಮ.
03148014a ನ ತಸ್ಮಿನ್ಯುಗಸಂಸರ್ಗೇ ವ್ಯಾಧಯೋ ನೇಂದ್ರಿಯಕ್ಷಯಃ|
03148014c ನಾಸೂಯಾ ನಾಪಿ ರುದಿತಂ ನ ದರ್ಪೋ ನಾಪಿ ಪೈಶುನಂ||
03148015a ನ ವಿಗ್ರಹಃ ಕುತಸ್ತಂದ್ರೀ ನ ದ್ವೇಷೋ ನಾಪಿ ವೈಕೃತಂ|
03148015c ನ ಭಯಂ ನ ಚ ಸಂತಾಪೋ ನ ಚೇರ್ಷ್ಯಾ ನ ಚ ಮತ್ಸರಃ||
ಆ ಯುಗಸಂಸರ್ಗದಲ್ಲಿ ವ್ಯಾಧಿಯಿರುವುದಿಲ್ಲ. ಇಂದ್ರಿಯ ಕ್ಷೀಣವಾಗುವುದಿಲ್ಲ. ಅಸೂಯೆಯಾಗಲೀ, ಕಣ್ಣೀರಾಗಲೀ, ದರ್ಪವಾಗಲೀ, ಶ್ರಮವಾಗಲೀ, ಹತೋಟಿಯಲ್ಲಿ ಇಟ್ಟುಕೊಳ್ಳುವುದಾಗಲೀ, ಸೋಮಾರಿತನವಾಗಲೀ, ದ್ವೇಷವಾಗಲೀ, ಮೋಸವಾಗಲೀ, ಭಯವಾಗಲೀ, ಸಂತಾಪವಾಗಲೀ, ಹೊಟ್ಟೆಕಿಚ್ಚಾಗಲೀ, ಮತ್ಸರವಾಗಲೀ ಇರುವುದಿಲ್ಲ.
03148016a ತತಃ ಪರಮಕಂ ಬ್ರಹ್ಮ ಯಾ ಗತಿರ್ಯೋಗಿನಾಂ ಪರಾ|
03148016c ಆತ್ಮಾ ಚ ಸರ್ವಭೂತಾನಾಂ ಶುಕ್ಲೋ ನಾರಾಯಣಸ್ತದಾ||
ಆಗ ಪರಬ್ರಹ್ಮನೇ ಯೋಗಿಗಳು ಹೊಂದುವ ಪರಮಗತಿ. ಸರ್ವಭೂತಗಳ ಆತ್ಮನು ಶುಕ್ಲ ನಾರಾಯಣನು.
03148017a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ಕೃತಲಕ್ಷಣಾಃ|
03148017c ಕೃತೇ ಯುಗೇ ಸಮಭವನ್ಸ್ವಕರ್ಮನಿರತಾಃ ಪ್ರಜಾಃ||
ಕೃತಯುಗದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಲಕ್ಷಣಗಳಲ್ಲಿ ಒಂದೇ ಆಗಿರುತ್ತಾರೆ ಮತ್ತು ಪ್ರಜೆಗಳು ತಮ್ಮ ಕರ್ಮಗಳಲ್ಲಿ ನಿರತರಾಗಿರುತ್ತಾರೆ.
03148018a ಸಮಾಶ್ರಮಂ ಸಮಾಚಾರಂ ಸಮಜ್ಞಾನಮತೀಬಲಂ|
03148018c ತದಾ ಹಿ ಸಮಕರ್ಮಾಣೋ ವರ್ಣಾ ಧರ್ಮಾನವಾಪ್ನುವನ್||
ಆಶ್ರಮಗಳು ಒಂದೇಸಮನಾಗಿರುತ್ತವೆ. ಆಚಾರಗಳು ಒಂದೇ ಸಮನಾಗಿರುತ್ತವೆ. ಜ್ಞಾನ, ಬುದ್ಧಿ ಮತ್ತು ಬಲಗಳು ಒಂದೇ ಸಮನಾಗಿರುತ್ತವೆ. ಮತ್ತು ವರ್ಣಗಳು ಒಂದೇ ರೀತಿಯ ಧರ್ಮವನ್ನು ಅನುಸರಿಸುತ್ತವೆ.
03148019a ಏಕವೇದಸಮಾಯುಕ್ತಾ ಏಕಮಂತ್ರವಿಧಿಕ್ರಿಯಾಃ|
03148019c ಪೃಥಗ್ಧರ್ಮಾಸ್ತ್ವೇಕವೇದಾ ಧರ್ಮಮೇಕಮನುವ್ರತಾಃ||
ಒಂದೇ ಒಂದು ವೇದವನ್ನು ಹೊಂದಿದ್ದು, ವಿಧಿಕ್ರಿಯೆಗಳಲ್ಲಿ ಒಂದೇ ಮಂತ್ರವನ್ನು ಬಳಸಿ ಅವರು ಎಲ್ಲರೂ ಒಂದೇ ಒಂದು ಧರ್ಮವನ್ನು ಒಂದೇ ವೇದವನ್ನು ಅನುಸರಿಸುತ್ತಿದ್ದರು. ಒಂದೇ ಧರ್ಮದಂತೆ ನಡೆದುಕೊಳ್ಳುತ್ತಿದ್ದರು.
03148020a ಚಾತುರಾಶ್ರಮ್ಯಯುಕ್ತೇನ ಕರ್ಮಣಾ ಕಾಲಯೋಗಿನಾ|
03148020c ಅಕಾಮಫಲಸಮ್ಯೋಗಾತ್ಪ್ರಾಪ್ನುವಂತಿ ಪರಾಂ ಗತಿಂ||
ಕಾಲಕ್ಕೆ ಸರಿಯಾದ ನಾಲ್ಕು ಆಶ್ರಮಗಳನ್ನು ಅನುಸರಿಸಿ ಯಾವುದೇ ಫಲವನ್ನು ಬಯಸದೇ ಮಾಡುವ ಕರ್ಮಗಳಿಂದ ಪರಮ ಗತಿಯನ್ನು ಹೊಂದುತ್ತಿದ್ದರು.
03148021a ಆತ್ಮಯೋಗಸಮಾಯುಕ್ತೋ ಧರ್ಮೋಽಯಂ ಕೃತಲಕ್ಷಣಃ|
03148021c ಕೃತೇ ಯುಗೇ ಚತುಷ್ಪಾದಶ್ಚಾತುರ್ವರ್ಣ್ಯಸ್ಯ ಶಾಶ್ವತಃ||
ಕೃತಯುಗದಲ್ಲಿ ಆತ್ಮಯೋಗದಿಂದೊಡಗೂಡಿದ ಇದೇ ಧರ್ಮವನ್ನು ನಾಲ್ಕೂ ವರ್ಣದವರು ನಾಲ್ಕೂ ಪಾದಗಳಲ್ಲಿ ಶಾಶ್ವತವಾಗಿ ಅನುಸರಿಸುತ್ತಿದ್ದರು.
03148022a ಏತತ್ಕೃತಯುಗಂ ನಾಮ ತ್ರೈಗುಣ್ಯಪರಿವರ್ಜಿತಂ|
03148022c ತ್ರೇತಾಮಪಿ ನಿಬೋಧ ತ್ವಂ ಯಸ್ಮಿನ್ಸತ್ರಂ ಪ್ರವರ್ತತೇ||
ತ್ರಿಗುಣಗಳನ್ನು ವರ್ಜಿಸಿದ ಇದರ ಹೆಸರು ಕೃತಯುಗ. ಈಗ ಯಾಗಗಳು ಕಂಡುಬರುವ ತ್ರೇತಾಯುಗದ ಕುರಿತು ಕೇಳು.
03148023a ಪಾದೇನ ಹ್ರಸತೇ ಧರ್ಮೋ ರಕ್ತತಾಂ ಯಾತಿ ಚಾಚ್ಯುತಃ|
03148023c ಸತ್ಯಪ್ರವೃತ್ತಾಶ್ಚ ನರಾಃ ಕ್ರಿಯಾಧರ್ಮಪರಾಯಣಾಃ||
ಧರ್ಮವು ಒಂದು ಪಾದ ಕಡಿಮೆಯಾಗುತ್ತದೆ. ಮತ್ತು ಅಚ್ಯುತ ನಾರಾಯಣನು ಕೆಂಪುಬಣ್ಣದವನಾಗುತ್ತಾನೆ. ಮನುಷ್ಯರು ಸತ್ಯವ್ರತರಾಗಿದ್ದು ಧರ್ಮಕಾರ್ಯಗಳಲ್ಲಿ ನಿರತರಾಗಿರುತ್ತಾರೆ.
03148024a ತತೋ ಯಜ್ಞಾಃ ಪ್ರವರ್ತಂತೇ ಧರ್ಮಾಶ್ಚ ವಿವಿಧಾಃ ಕ್ರಿಯಾಃ|
03148024c ತ್ರೇತಾಯಾಂ ಭಾವಸಂಕಲ್ಪಾಃ ಕ್ರಿಯಾದಾನಫಲೋದಯಾಃ||
ತ್ರೇತಾಯುಗದಲ್ಲಿ ಯಜ್ಞಗಳು ಮತ್ತು ಧರ್ಮದ ವಿವಿಧ ಕಾರ್ಯಗಳು ನಡೆಯುತ್ತವೆ. ಭಾವಸಂಕಲ್ಪದಿಂದ ಫಲವನ್ನು ನೀಡುವ ದಾನಾದಿ ಕ್ರಿಯೆಗಳು ನಡೆಯುತ್ತವೆ.
03148025a ಪ್ರಚಲಂತಿ ನ ವೈ ಧರ್ಮಾತ್ತಪೋದಾನಪರಾಯಣಾಃ|
03148025c ಸ್ವಧರ್ಮಸ್ಥಾಃ ಕ್ರಿಯಾವಂತೋ ಜನಾಸ್ತ್ರೇತಾಯುಗೇಽಭವನ್||
ತ್ರೇತಾಯುಗದಲ್ಲಿ ಧರ್ಮ, ತಪಸ್ಸು, ಮತ್ತು ದಾನಗಳಲ್ಲಿ ನಿರತರಾಗಿದ್ದು ಸ್ವಧರ್ಮದಲ್ಲಿಯೇ ಇದ್ದುಕೊಂಡು ಕ್ರಿಯಾವಂತರಾಗಿ ಧರ್ಮದಿಂದ ವಿಚಲಿತರಾಗುವುದಿಲ್ಲ.
03148026a ದ್ವಾಪರೇಽಪಿ ಯುಗೇ ಧರ್ಮೋ ದ್ವಿಭಾಗೋನಃ ಪ್ರವರ್ತತೇ|
03148026c ವಿಷ್ಣುರ್ವೈ ಪೀತತಾಂ ಯಾತಿ ಚತುರ್ಧಾ ವೇದ ಏವ ಚ||
ದ್ವಾಪರಯುಗದಲ್ಲಿ ಧರ್ಮವು ಅರ್ಧಭಾಗದಲ್ಲಿ ಮಾತ್ರ ನಡೆಯುತ್ತದೆ. ವಿಷ್ಣುವು ಹಳದಿಬಣ್ಣವನ್ನು ಹೊಂದುತ್ತಾನೆ ಮತ್ತು ವೇದಗಳೂ ಕೂಡ ನಾಲ್ಕು ಭಾಗಗಳಾಗಿ ವಿಭಜಿಸಲ್ಪಡುತ್ತದೆ.
03148027a ತತೋಽನ್ಯೇ ಚ ಚತುರ್ವೇದಾಸ್ತ್ರಿವೇದಾಶ್ಚ ತಥಾಪರೇ|
03148027c ದ್ವಿವೇದಾಶ್ಚೈಕವೇದಾಶ್ಚಾಪ್ಯನೃಚಶ್ಚ ತಥಾಪರೇ||
ಕೆಲವರು ನಾಲ್ಕೂ ವೇದಗಳನ್ನೂ ತಿಳಿದಿರುತ್ತಾರೆ, ಮತ್ತೆ ಕೆಲವರು ಮೂರು ಅಥವಾ ಎರಡು ಅಥವಾ ಒಂದನ್ನೇ ತಿಳಿದುಕೊಂಡಿರುತ್ತಾರೆ. ಇನ್ನುಳಿದವರಿಗೆ ವೇದಗಳೇ ತಿಳಿದಿರುವುದಿಲ್ಲ.
03148028a ಏವಂ ಶಾಸ್ತ್ರೇಷು ಭಿನ್ನೇಷು ಬಹುಧಾ ನೀಯತೇ ಕ್ರಿಯಾ|
03148028c ತಪೋದಾನಪ್ರವೃತ್ತಾ ಚ ರಾಜಸೀ ಭವತಿ ಪ್ರಜಾ||
ಈ ರೀತಿ ಶಾಸ್ತ್ರಗಳು ಭಿನ್ನವಾಗಿ ಬಹಳ ರೀತಿಯ ಕ್ರಿಯೆಗಳು ನಡೆಯುತ್ತವೆ. ತಪೋದಾನಪ್ರವೃತ್ತರಾದ ಪ್ರಜೆಗಳು ರಾಜಸ ಭಾವವನ್ನು ತಳೆಯುತ್ತಾರೆ.
03148029a ಏಕವೇದಸ್ಯ ಚಾಜ್ಞಾನಾದ್ವೇದಾಸ್ತೇ ಬಹವಃ ಕೃತಾಃ|
03148029c ಸತ್ಯಸ್ಯ ಚೇಹ ವಿಭ್ರಂಶಾತ್ಸತ್ಯೇ ಕಶ್ಚಿದವಸ್ಥಿತಃ||
ಒಂದೇ ವೇದವನ್ನು ಅರಿತಿಲ್ಲವಾದುದರಿಂದ ವೇದಗಳು ಬಹಳಾಗಿ ವಿಂಗಡಣೆಗೊಳ್ಳುತ್ತವೆ. ಸತ್ಯವು ಒಂದೇ ಆಗಿಲ್ಲದಿದುರಿಂದ ಕೆಲವರು ಮಾತ್ರ ಸತ್ಯದಲ್ಲಿ ನೆಲೆಸಿರುತ್ತಾರೆ.
03148030a ಸತ್ಯಾತ್ಪ್ರಚ್ಯವಮಾನಾನಾಂ ವ್ಯಾಧಯೋ ಬಹವೋಽಭವನ್|
03148030c ಕಾಮಾಶ್ಚೋಪದ್ರವಾಶ್ಚೈವ ತದಾ ದೈವತಕಾರಿತಾಃ||
03148031a ಯೈರರ್ದ್ಯಮಾನಾಃ ಸುಭೃಶಂ ತಪಸ್ತಪ್ಯಂತಿ ಮಾನವಾಃ|
03148031c ಕಾಮಕಾಮಾಃ ಸ್ವರ್ಗಕಾಮಾ ಯಜ್ಞಾಂಸ್ತನ್ವಂತಿ ಚಾಪರೇ||
ಸತ್ಯದಿಂದ ಪ್ರಚಲಿತರಾದವರಿಗೆ ಬಹಳಷ್ಟು ವ್ಯಾಧಿಗಳು ಉಂಟಾಗುತ್ತವೆ. ವಿಧಿಯ ಕಾರಣದಿಂದ ಕಾಮ ಮತ್ತು ಉಪದ್ರವಗಳು ಉಂಟಾಗುತ್ತವೆ. ಇದರಿಂದಾಗಿ ಕೆಲವು ಮಾನವರು ತುಂಬಾ ಕಠಿಣ ತಪಸ್ಸಿನಲ್ಲಿ ನಿರತರಾಗಿರುತ್ತಾರೆ ಮತ್ತು ಇನ್ನುಳಿದವರು ಆಸೆಗಳಿಂದ ಪ್ರಚೋದಿತರಾಗಿ ಸ್ವರ್ಗವನ್ನು ಬಯಸಿ ಯಜ್ಞ-ಯಾಗಾದಿಗಳನ್ನು ಕೈಗೊಳ್ಳುತ್ತಾರೆ.
03148032a ಏವಂ ದ್ವಾಪರಮಾಸಾದ್ಯ ಪ್ರಜಾಃ ಕ್ಷೀಯಂತ್ಯಧರ್ಮತಃ|
03148032c ಪಾದೇನೈಕೇನ ಕೌಂತೇಯ ಧರ್ಮಃ ಕಲಿಯುಗೇ ಸ್ಥಿತಃ||
03148033a ತಾಮಸಂ ಯುಗಮಾಸಾದ್ಯ ಕೃಷ್ಣೋ ಭವತಿ ಕೇಶವಃ|
03148033c ವೇದಾಚಾರಾಃ ಪ್ರಶಾಮ್ಯಂತಿ ಧರ್ಮಯಜ್ಞಕ್ರಿಯಾಸ್ತಥಾ||
ದ್ವಾಪರಯುಗದಲ್ಲಿ ಹೀಗೆ ಅಧರ್ಮದಿಂದ ಪ್ರಜೆಗಳು ಕ್ಷೀಣಿಸುತ್ತಾರೆ. ಕೌಂತೇಯ! ಕಲಿಯುಗದಲ್ಲಿ ಧರ್ಮವು ಒಂದೇ ಕಾಲಿನ ಮೇಲೆ ನಿಂತಿರುತ್ತದೆ. ಈ ತಾಮಸ ಯುಗವು ಬಂದಾಗ ಕೇಶವ ನಾರಾಯಣನು ಕಪ್ಪುಬಣ್ಣದವನಾಗುತ್ತಾನೆ. ವೇದಾಚಾರಗಳೂ ಧರ್ಮ ಯಜ್ಞಗಳೂ ಅಳಿದುಹೋಗುತ್ತವೆ.
03148034a ಈತಯೋ ವ್ಯಾಧಯಸ್ತಂದ್ರೀ ದೋಷಾಃ ಕ್ರೋಧಾದಯಸ್ತಥಾ|
03148034c ಉಪದ್ರವಾಶ್ಚ ವರ್ತಂತೇ ಆಧಯೋ ವ್ಯಾಧಯಸ್ತಥಾ||
ಬೆಳೆಗಳು ನಾಶವಾಗುತ್ತವೆ. ವ್ಯಾಧಿಗಳು, ಸೋಮಾರಿತನ, ಮತ್ತು ಕ್ರೋಧಾದಿ ದೋಷಗಳು, ಉಪದ್ರವಗಳು ನಡೆಯುತ್ತವೆ. ರೋಗ ವ್ಯಾಧಿಗಳು ಇರುತ್ತವೆ.
03148035a ಯುಗೇಷ್ವಾವರ್ತಮಾನೇಷು ಧರ್ಮೋ ವ್ಯಾವರ್ತತೇ ಪುನಃ|
03148035c ಧರ್ಮೇ ವ್ಯಾವರ್ತಮಾನೇ ತು ಲೋಕೋ ವ್ಯಾವರ್ತತೇ ಪುನಃ||
ಒಂದನ್ನು ಅನುಸರಿಸಿ ಬರುವ ಯುಗಗಳಲ್ಲಿ ಪ್ರತಿಬಾರಿಯೂ ಧರ್ಮವು ಕ್ಷೀಣವಾಗುತ್ತದೆ. ಧರ್ಮವು ಕ್ಷೀಣವಾಗುತ್ತಿದ್ದಂತೆ ಜನರೂ ಕ್ಷೀಣರಾಗುತ್ತಾರೆ.
03148036a ಲೋಕೇ ಕ್ಷೀಣೇ ಕ್ಷಯಂ ಯಾಂತಿ ಭಾವಾ ಲೋಕಪ್ರವರ್ತಕಾಃ|
03148036c ಯುಗಕ್ಷಯಕೃತಾ ಧರ್ಮಾಃ ಪ್ರಾರ್ಥನಾನಿ ವಿಕುರ್ವತೇ||
ಜನರು ಕ್ಷೀಣರಾಗುತ್ತಿದ್ದಂತೆ ಪ್ರಪಂಚವನ್ನು ವಿಕಸನದತ್ತ ತೆಗೆದುಕೊಂಡು ಹೋಗುವ ಶಕ್ತಿಗಳು ಕ್ಷೀಣವಾಗುತ್ತವೆ. ಈ ಯುಗಕ್ಷಯದಿಂದಾಗಿ ಧರ್ಮಗಳು ಪ್ರಾರ್ಥನೆಗಳಾಗಿ ವಿಕಾರಗೊಳ್ಳುತ್ತವೆ.
03148037a ಏತತ್ಕಲಿಯುಗಂ ನಾಮ ಅಚಿರಾದ್ಯತ್ಪ್ರವರ್ತತೇ|
03148037c ಯುಗಾನುವರ್ತನಂ ತ್ವೇತತ್ಕುರ್ವಂತಿ ಚಿರಜೀವಿನಃ||
ಈ ಕಲಿಯುಗ ಎನ್ನುವುದು ಸ್ವಲ್ಪವೇ ಸಮಯದಲ್ಲಿ ಬರುತ್ತದೆ. ಚಿರಂಜೀವಿಗಳು ಈ ಯುಗಗಳು ಬದಲಾದ ಹಾಗೆಲ್ಲ ತಾವೂ ಬದಲಾಗುತ್ತಾರೆ.
03148038a ಯಚ್ಚ ತೇ ಮತ್ಪರಿಜ್ಞಾನೇ ಕೌತೂಹಲಮರಿಂದಮ|
03148038c ಅನರ್ಥಕೇಷು ಕೋ ಭಾವಃ ಪುರುಷಸ್ಯ ವಿಜಾನತಃ||
ಅರಿಂದಮ! ನನ್ನನ್ನು ಸರಿಯಾಗಿ ತಿಳಿದುಕೊಳ್ಳುವ ನಿನ್ನ ಈ ಕುತೂಹಲವು ತಿಳಿದುಕೊಂಡಿರುವ ಮನುಷ್ಯನು ಅನರ್ಥವಾಗಿರುವುದರಲ್ಲಿ ಏಕೆ ಆಸಕ್ತಿಯನ್ನು ತೋರಿಸುತ್ತಾನೆ ಎನ್ನುವಂತಿದೆ.
03148039a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ|
03148039c ಯುಗಸಂಖ್ಯಾಂ ಮಹಾಬಾಹೋ ಸ್ವಸ್ತಿ ಪ್ರಾಪ್ನುಹಿ ಗಮ್ಯತಾಂ||
ನೀನು ನನ್ನಲ್ಲಿ ಕೇಳಿದುದೆಲ್ಲವನ್ನೂ ಯುಗಸಂಖ್ಯೆಗಳನ್ನೂ ನಾನು ನಿನಗೆ ಹೇಳಿದ್ದೇನೆ. ಮಹಾಬಾಹೋ! ನಿನಗೆ ಮಂಗಳವಾಗಲಿ. ಈಗ ಹೊರಟು ಹೋಗು!”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದೇ ಅಷ್ಟಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಹನುಮದ್ಭೀಮಸಂವಾದವೆಂಬ ನೂರಾನಲ್ವತ್ತೆಂಟನೆಯ ಅಧ್ಯಾಯವು.