ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೭
ಭೀಮನು ದಾರಿಯನ್ನು ಕೇಳಲು ಬೇಕಾದರೆ ತನ್ನ ಮೇಲೆ ಹಾರಿಹೋಗೆಂದು ಹನುಮಂತನು ಹೇಳುವುದು (೧-೭). ತನ್ನ ಬಾಲವನ್ನು ಎತ್ತಿ ಸರಿಸಿ ಮುಂದೆ ಸಾಗಬೇಕೆಂದು ಕೇಳಿಕೊಳ್ಳಲು ಭೀಮನು ಹನುಮಂತನ ಬಾಲವನ್ನು ಸರಿಸಲು ಪ್ರಯತ್ನಿಸಿ ಸೋತುದು (೮-೧೯). ನಾಚಿಕೊಂಡ ಭೀಮನು ಯಾರೆಂದು ಕೇಳಲು ಹನುಮಂತನು ತನ್ನ ನಿಜಸ್ವರೂಪವನ್ನು ಹೇಳಿದುದು; ಸಂಕ್ಷಿಪ್ತ ರಾಮಾಯಣ (೨೦-೪೧).
03147001 ವೈಶಂಪಾಯನ ಉವಾಚ|
03147001a ಏತಚ್ಛೃತ್ವಾ ವಚಸ್ತಸ್ಯ ವಾನರೇಂದ್ರಸ್ಯ ಧೀಮತಃ|
03147001c ಭೀಮಸೇನಸ್ತದಾ ವೀರಃ ಪ್ರೋವಾಚಾಮಿತ್ರಕರ್ಶನಃ||
ವೈಶಂಪಾಯನನು ಹೇಳಿದನು: “ಆ ಧೀಮಂತ ವಾನರೇಂದ್ರನ ಮಾತುಗಳನ್ನು ಕೇಳಿ ಅಮಿತ್ರಕರ್ಶನ ವೀರ ಭೀಮಸೇನನು ಉತ್ತರಿಸಿದನು:
03147002a ಕೋ ಭವಾನ್ಕಿಂನಿಮಿತ್ತಂ ವಾ ವಾನರಂ ವಪುರಾಶ್ರಿತಃ|
03147002c ಬ್ರಾಹ್ಮಣಾನಂತರೋ ವರ್ಣಃ ಕ್ಷತ್ರಿಯಸ್ತ್ವಾನುಪೃಚ್ಚತಿ||
03147003a ಕೌರವಃ ಸೋಮವಂಶೀಯಃ ಕುಂತ್ಯಾ ಗರ್ಭೇಣ ಧಾರಿತಃ|
03147003c ಪಾಂಡವೋ ವಾಯುತನಯೋ ಭೀಮಸೇನ ಇತಿ ಶ್ರುತಃ||
“ನೀನು ಯಾರು? ಯಾವ ಕಾರಣಕ್ಕೆ ನೀನು ಈ ರೀತಿ ಕಪಿಯ ರೂಪವನ್ನು ತಳೆದಿರುವೆ? ಬ್ರಾಹ್ಮಣರ ನಂತರದ ಜಾತಿಯ ಕ್ಷತ್ರಿಯನು ನಾನು. ನಿನ್ನನ್ನು ಪ್ರಶ್ನಿಸುತ್ತಿದ್ದೇನೆ. ಕೌರವ, ಸೋಮವಂಶದವನು, ಕುಂತಿಯ ಗರ್ಭದಲ್ಲಿ ಹುಟ್ಟಿದ, ಪಾಂಡವ, ವಾಯುತನಯ ಭೀಮಸೇನನೆಂದು ಕರೆಯುತ್ತಾರೆ.”
03147004a ಸ ವಾಕ್ಯಂ ಭೀಮಸೇನಸ್ಯ ಸ್ಮಿತೇನ ಪ್ರತಿಗೃಹ್ಯ ತತ್|
03147004c ಹನೂಮಾನ್ವಾಯುತನಯೋ ವಾಯುಪುತ್ರಮಭಾಷತ||
ಭೀಮಸೇನನ ಆ ಮಾತುಗಳನ್ನು ನಸುನಕ್ಕು ಸ್ವೀಕರಿಸಿದ ವಾಯುತನಯ ಹನುಮಂತನು ವಾಯುಪುತ್ರನಿಗೆ ಹೇಳಿದನು:
03147005a ವಾನರೋಽಹಂ ನ ತೇ ಮಾರ್ಗಂ ಪ್ರದಾಸ್ಯಾಮಿ ಯಥೇಪ್ಸಿತಂ|
03147005c ಸಾಧು ಗಚ್ಚ ನಿವರ್ತಸ್ವ ಮಾ ತ್ವಂ ಪ್ರಾಪ್ಸ್ಯಸಿ ವೈಶಸಂ||
“ನಾನೊಬ್ಬ ವಾನರ ಮತ್ತು ನೀನು ಬಯಸಿದ ದಾರಿಯನ್ನು ನಾನು ನೀಡುವುದಿಲ್ಲ. ನೀನು ಹಿಂದಿರುಗಿ ಹೋದರೆ ಒಳ್ಳೆಯದು. ಇಲ್ಲವಾದರೆ ನಿನ್ನ ನಾಶವನ್ನು ಹೊಂದುತ್ತೀಯೆ.”
03147006 ಭೀಮ ಉವಾಚ|
03147006a ವೈಶಸಂ ವಾಸ್ತು ಯದ್ವಾನ್ಯನ್ನ ತ್ವಾ ಪೃಚ್ಚಾಮಿ ವಾನರ|
03147006c ಪ್ರಯಚ್ಚೋತ್ತಿಷ್ಠ ಮಾರ್ಗಂ ಮೇ ಮಾ ತ್ವಂ ಪ್ರಾಪ್ಸ್ಯಸಿ ವೈಶಸಂ||
ಭೀಮನು ಹೇಳಿದನು: “ವಾನರ! ನನ್ನ ನಾಶವಾಗುತ್ತದೆಯೋ ಇಲ್ಲವೋ ಎಂದು ನಾನು ನಿನ್ನಲ್ಲಿ ಕೇಳುತ್ತಿಲ್ಲ. ಎದ್ದೇಳು ಮತ್ತು ನನಗೆ ದಾರಿಯನ್ನು ಮಾಡಿಕೊಡು. ಇಲ್ಲವಾದರೆ ನೀನೇ ನಿನ್ನ ನಾಶವನ್ನು ಹೊಂದುತ್ತೀಯೆ.”
03147007 ಹನೂಮಾನುವಾಚ|
03147007a ನಾಸ್ತಿ ಶಕ್ತಿರ್ಮಮೋತ್ಥಾತುಂ ವ್ಯಾಧಿನಾ ಕ್ಲೇಶಿತೋ ಹ್ಯಹಂ|
03147007c ಯದ್ಯವಶ್ಯಂ ಪ್ರಯಾತವ್ಯಂ ಲಂಘಯಿತ್ವಾ ಪ್ರಯಾಹಿ ಮಾಂ||
ಹನುಮಂತನು ಹೇಳಿದನು: “ನಾನು ವ್ಯಾಧಿಯಿಂದ ಪೀಡಿತನಾಗಿದ್ದೇನೆ. ಏಳುವುದಕ್ಕೆ ಆಗುತ್ತಿಲ್ಲ. ಒಂದುವೇಳೆ ನಿನಗೆ ಮುಂದೆ ಹೋಗಬೇಕಾದರೆ ನನ್ನ ಮೇಲೆ ಹಾರಿ ಹೋಗು (ನನ್ನನ್ನು ದಾಟಿ ಹೋಗು).”
03147008 ಭೀಮ ಉವಾಚ|
03147008a ನಿರ್ಗುಣಃ ಪರಮಾತ್ಮೇತಿ ದೇಹಂ ತೇ ವ್ಯಾಪ್ಯ ತಿಷ್ಠತಿ|
03147008c ತಮಹಂ ಜ್ಞಾನವಿಜ್ಞೇಯಂ ನಾವಮನ್ಯೇ ನ ಲಂಘಯೇ||
ಭೀಮನು ಹೇಳಿದನು: “ನಿರ್ಗುಣನೆನಿಸಿಕೊಂಡ ಪರಮಾತ್ಮನು ನಿನ್ನ ದೇಹದಲ್ಲಿ ವ್ಯಾಪ್ತವಾಗಿದ್ದಾನೆ. ವಿಶೇಷ ಜ್ಞಾನದಿಂದ ಮಾತ್ರ ತಿಳಿಯಬಹುದಾದಂಥಹ ಅವನನ್ನು ದಾಟಿ ಅವನನ್ನು ಅಪಮಾನಿಸಲು ಬಯಸುವುದಿಲ್ಲ.
03147009a ಯದ್ಯಾಗಮೈರ್ನ ವಿಂದೇಯಂ ತಮಹಂ ಭೂತಭಾವನಂ|
03147009c ಕ್ರಮೇಯಂ ತ್ವಾಂ ಗಿರಿಂ ಚೇಮಂ ಹನೂಮಾನಿವ ಸಾಗರಂ||
ಆ ಭೂತಭಾವನನ ಕುರಿತು ಅಧ್ಯಯನ ಮಾಡಿ ತಿಳಿದುಕೊಳ್ಳದೇ ಇದ್ದಿದ್ದರೆ ನಾನೂ ಕೂಡ ಹನುಮಂತನು ಸಾಗರವನ್ನೇ ಹೇಗೆ ಹಾರಿ ದಾಟಿದನೋ ಹಾಗೆ ನಿನ್ನನ್ನೂ ಈ ಪರ್ವತವನ್ನೂ ದಾಟಿ ಹೋಗುತ್ತಿದ್ದೆ!”
03147010 ಹನೂಮಾನುವಾಚ|
03147010a ಕ ಏಷ ಹನುಮಾನ್ನಾಮ ಸಾಗರೋ ಯೇನ ಲಂಘಿತಃ|
03147010c ಪೃಚ್ಚಾಮಿ ತ್ವಾ ಕುರುಶ್ರೇಷ್ಠ ಕಥ್ಯತಾಂ ಯದಿ ಶಕ್ಯತೇ||
ಹನುಮಂತನು ಹೇಳಿದನು: “ಸಾಗರವನ್ನು ಲಂಘಿಸಿ ದಾಟಿದ ಆ ಹನುಮಂತನೆನ್ನುವನು ಯಾರು? ಕುರುಶ್ರೇಷ್ಠ! ಇದನ್ನು ಕೇಳುತ್ತಿದ್ದೇನೆ. ನಿನಗೆ ಸಾಧ್ಯವಾದರೆ ಉತ್ತರಿಸು.”
03147011 ಭೀಮ ಉವಾಚ|
03147011a ಭ್ರಾತಾ ಮಮ ಗುಣಶ್ಲಾಘ್ಯೋ ಬುದ್ಧಿಸತ್ತ್ವಬಲಾನ್ವಿತಃ|
03147011c ರಾಮಾಯಣೇಽತಿವಿಖ್ಯಾತಃ ಶೂರೋ ವಾನರಪುಂಗವಃ||
ಭೀಮನು ಹೇಳಿದನು: “ಗುಣವಂತನೂ, ಬುದ್ಧಿ, ಸತ್ವ ಬಲಾನ್ವಿತನೂ ಆದ ಅವನು ನನ್ನ ಅಣ್ಣ. ರಾಮಾಯಣದಲ್ಲಿ ಶೂರನೆಂದೂ, ವಾನರಪುಂಗವನೆಂದೂ ಖ್ಯಾತಿಗೊಂಡವನು.
03147012a ರಾಮಪತ್ನೀಕೃತೇ ಯೇನ ಶತಯೋಜನಮಾಯತಃ|
03147012c ಸಾಗರಃ ಪ್ಲವಗೇಂದ್ರೇಣ ಕ್ರಮೇಣೈಕೇನ ಲಂಘಿತಃ||
ರಾಮನ ಪತ್ನಿಯ ಸಲುವಾಗಿ ಆ ಕಪೀಂದ್ಅರನು ನೂರುಯೋಜನ ಅಗಲ ಸಾಗರವನ್ನು ಒಂದೇ ಒಂದು ನೆಗೆತವನ್ನು ಹಾರಿ ದಾಟಿದನು.
03147013a ಸ ಮೇ ಭ್ರಾತಾ ಮಹಾವೀರ್ಯಸ್ತುಲ್ಯೋಽಹಂ ತಸ್ಯ ತೇಜಸಾ|
03147013c ಬಲೇ ಪರಾಕ್ರಮೇ ಯುದ್ಧೇ ಶಕ್ತೋಽಹಂ ತವ ನಿಗ್ರಹೇ||
ಆ ಮಹಾವೀರನು ನನ್ನ ಅಣ್ಣ. ನಾನೂ ಕೂಡ ತೇಜಸ್ಸು, ಬಲ ಮತ್ತು ಪರಾಕ್ರಮಗಳಲ್ಲಿ ಅವನಂತೆಯೇ ಇದ್ದೇನೆ. ನಿನ್ನನ್ನು ಯುದ್ಧದಲ್ಲಿ ನಿಗ್ರಹಿಸಲು ಸಮರ್ಥನಾಗಿದ್ದೇನೆ.
03147014a ಉತ್ತಿಷ್ಠ ದೇಹಿ ಮೇ ಮಾರ್ಗಂ ಪಶ್ಯ ವಾ ಮೇಽದ್ಯ ಪೌರುಷಂ|
03147014c ಮಚ್ಚಾಸನಮಕುರ್ವಾಣಂ ಮಾ ತ್ವಾ ನೇಷ್ಯೇ ಯಮಕ್ಷಯಂ||
ಎದ್ದೇಳು. ನನಗೆ ದಾರಿಯನ್ನು ಬಿಟ್ಟುಕೊಡು. ಇಲ್ಲವಾದರೆ ಇಂದು ನನ್ನ ಪೌರುಷವನ್ನು ನೋಡು. ನನ್ನ ಆಜ್ಞೆಯನ್ನು ಪಾಲಿಸದೇ ಯಮಲೋಕಕ್ಕೆ ಪ್ರಯಾಣಮಾಡಬೇಡ!””
03147015 ವೈಶಂಪಾಯನ ಉವಾಚ|
03147015a ವಿಜ್ಞಾಯ ತಂ ಬಲೋನ್ಮತ್ತಂ ಬಾಹುವೀರ್ಯೇಣ ಗರ್ವಿತಂ|
03147015c ಹೃದಯೇನಾವಹಸ್ಯೈನಂ ಹನೂಮಾನ್ವಾಕ್ಯಮಬ್ರವೀತ್||
ವೈಶಂಪಾಯನನು ಹೇಳಿದನು: “ಅವನು ಬಲೋನ್ಮತ್ತನಾಗಿದ್ದಾನೆ ಮತ್ತು ಬಾಹುವೀರ್ಯದಿಂದ ಗರ್ವಿತನಾಗಿದ್ದಾನೆ ಎಂದು ತಿಳಿದು ಹನುಮಂತನು ಹೃದಯದಲ್ಲಿಯೇ ಅವನ ಕುರಿತು ನಕ್ಕು ಹೇಳಿದನು:
03147016a ಪ್ರಸೀದ ನಾಸ್ತಿ ಮೇ ಶಕ್ತಿರುತ್ಥಾತುಂ ಜರಯಾನಘ|
03147016c ಮಮಾನುಕಂಪಯಾ ತ್ವೇತತ್ಪುಚ್ಚಮುತ್ಸಾರ್ಯ ಗಮ್ಯತಾಂ||
“ನನ್ನ ಮೇಲೆ ಕೃಪೆತೋರು! ನನಗೆ ಏಳಲು ಆಗುತ್ತಿಲ್ಲ! ಅನಘ! ನಾನು ಮುದುಕ! ನನ್ನ ಮೇಲೆ ಅನುಕಂಪ ತೋರಿಸಿ ನನ್ನ ಈ ಬಾಲವನ್ನು ಎತ್ತಿ ಸರಿಸಿ ಮುಂದೆ ಸಾಗಬೇಕು!”
03147017a ಸಾವಜ್ಞಮಥ ವಾಮೇನ ಸ್ಮಯಂ ಜಗ್ರಾಹ ಪಾಣಿನಾ|
03147017c ನ ಚಾಶಕಚ್ಚಾಲಯಿತುಂ ಭೀಮಃ ಪುಚ್ಚಂ ಮಹಾಕಪೇಃ||
ತುಚ್ಛಭಾವನೆಯ ಮುಗುಳ್ನಗೆಯನ್ನು ನಗುತ್ತಾ ಭೀಮನು ತನ್ನ ಎಡಗೈಯಿಂದ ಆ ಮಹಾಕಪಿಯ ಬಾಲವನ್ನು ಹಿಡಿದನು. ಆದರೆ ಅದನ್ನು ಅಲುಗಾಡಿಸಲೂ ಅವನಿಗೆ ಆಗಲಿಲ್ಲ.
03147018a ಉಚ್ಚಿಕ್ಷೇಪ ಪುನರ್ದೋರ್ಭ್ಯಾಮಿಂದ್ರಾಯುಧಮಿವೋಚ್ಚ್ರಿತಂ|
03147018c ನೋದ್ಧರ್ತುಮಶಕದ್ಭೀಮೋ ದೋರ್ಭ್ಯಾಮಪಿ ಮಹಾಬಲಃ||
ಅನಂತರ ಇಂದ್ರಾಯುಧದಂತೆ ಎತ್ತರವಾಗಿ ಬೆಳೆದಿದ್ದ ಅದನ್ನು ತನ್ನ ಎರಡೂ ಕೈಗಳಿಂದ ಎಳೆದಾಡಿದನು. ತನ್ನ ಎರಡೂ ಕೈಗಳಿಂದಲೂ ಆ ಮಹಾಬಲಿ ಭೀಮನು ಅದನ್ನು ಎತ್ತಲು ಅಶಕ್ತನಾದನು.
03147019a ಉತ್ಕ್ಷಿಪ್ತಭ್ರೂರ್ವಿವೃತ್ತಾಕ್ಷಃ ಸಂಹತಭ್ರುಕುಟೀಮುಖಃ|
03147019c ಸ್ವಿನ್ನಗಾತ್ರೋಽಭವದ್ಭೀಮೋ ನ ಚೋದ್ಧರ್ತುಂ ಶಶಾಕ ಹ||
ಕಣ್ಣಿನ ಹುಬ್ಬುಗಳನ್ನು ಬಿಗಿದು, ಕಣ್ಣುಗಳನ್ನು ಅಗಲುಮಾಡಿ, ಕಣ್ಣುಗಳನ್ನು ಮೇಲೆ ಕಳಗೆ ಮಾಡಿ ಎತ್ತಿದರೂ ಅವನ ಬಾಹುಗಳು ಬೆವರಿದವೇ ಹೊರತು ಆ ಭೀಮನು ಅದನ್ನು ಹಂದಾಡಿಸಲೂ ಅಶಕ್ತನಾದನು.
03147020a ಯತ್ನವಾನಪಿ ತು ಶ್ರೀಮಾಽಲ್ಲಾಂಗೂಲೋದ್ಧರಣೋದ್ಧುತಃ|
03147020c ಕಪೇಃ ಪಾರ್ಶ್ವಗತೋ ಭೀಮಸ್ತಸ್ಥೌ ವ್ರೀಡಾದಧೋಮುಖಃ||
ಬಹಳಷ್ಟು ಪ್ರಯತ್ನಿಸಿ ಸೋತುಹೋದ ಭೀಮನು ಆ ಮಹಾಕಪಿಯ ಪಕ್ಕದಲ್ಲಿ ನಾಚಿಕೆಯಿಂದ ತಲೆಬಾಗಿಸಿ ನಿಂತುಕೊಂಡನು.
03147021a ಪ್ರಣಿಪತ್ಯ ಚ ಕೌಂತೇಯಃ ಪ್ರಾಂಜಲಿರ್ವಾಕ್ಯಮಬ್ರವೀತ್|
03147021c ಪ್ರಸೀದ ಕಪಿಶಾರ್ದೂಲ ದುರುಕ್ತಂ ಕ್ಷಮ್ಯತಾಂ ಮಮ||
ಕೌಂತೇಯನು ಅಂಜಲೀ ಬದ್ಧನಾಗಿ ಕೈಮುಗಿದು ಹೇಳಿದನು: “ಕಪಿಶಾರ್ದೂಲ! ಕೃಪೆತೋರು! ನನ್ನ ಅಪಮಾನದ ಮಾತುಗಳನ್ನು ಕ್ಷಮಿಸು.
03147022a ಸಿದ್ಧೋ ವಾ ಯದಿ ವಾ ದೇವೋ ಗಂಧರ್ವೋ ವಾಥ ಗುಹ್ಯಕಃ|
03147022c ಪೃಷ್ಟಃ ಸನ್ಕಾಮಯಾ ಬ್ರೂಹಿ ಕಸ್ತ್ವಂ ವಾನರರೂಪಧೃಕ್||
ವಾನರರೂಪವನ್ನು ಧರಿಸಿರುವ ನೀನು ಯಾರು? ಸಿದ್ಧನೋ, ಅಥವಾ ದೇವತೆಯೋ, ಗಂಧರ್ವನೋ ಅಥವಾ ಗುಹ್ಯಕನೋ? ನಾನು ಕೇಳಿದ ಪ್ರಶ್ನೆಗೆ ಉತ್ತರಿಸುವ ಕೃಪೆತೋರು.”
03147023 ಹನೂಮಾನುವಾಚ|
03147023a ಯತ್ತೇ ಮಮ ಪರಿಜ್ಞಾನೇ ಕೌತೂಹಲಮರಿಂದಮ|
03147023c ತತ್ಸರ್ವಮಖಿಲೇನ ತ್ವಂ ಶೃಣು ಪಾಂಡವನಂದನ||
ಹನುಮಂತನು ಹೇಳಿದನು: “ಅರಿಂದಮ! ಪಾಂಡವನಂದನ! ನನ್ನ ಕುರಿತು ತಿಳಿದುಕೊಳ್ಳಲು ನಿನಗೆ ಎಷ್ಟು ಕುತೂಹಲವಿದೆಯೋ ಅವೆಲ್ಲವನ್ನೂ ನಿನಗೆ ಹೇಳುತ್ತೇನೆ. ಕೇಳು.
03147024a ಅಹಂ ಕೇಸರಿಣಃ ಕ್ಷೇತ್ರೇ ವಾಯುನಾ ಜಗದಾಯುಷಾ|
03147024c ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ||
ನಾನು ಕೇಸರಿಯ ಗರ್ಭದಲ್ಲಿ ವಾಯುವಿನಿಂದ ಹುಟ್ಟಿದ್ದೇನೆ ಮತ್ತು ಕಮಲಪತ್ರಾಕ್ಷ! ಹನೂಮಾನ್ ಎಂಬ ಹೆಸರಿನ ನಾನೊಬ್ಬ ವಾನರ.
03147025a ಸೂರ್ಯಪುತ್ರಂ ಚ ಸುಗ್ರೀವಂ ಶಕ್ರಪುತ್ರಂ ಚ ವಾಲಿನಂ|
03147025c ಸರ್ವವಾನರರಾಜಾನೌ ಸರ್ವವಾನರಯೂಥಪಾಃ||
03147026a ಉಪತಸ್ಥುರ್ಮಹಾವೀರ್ಯಾ ಮಮ ಚಾಮಿತ್ರಕರ್ಶನ|
03147026c ಸುಗ್ರೀವೇಣಾಭವತ್ಪ್ರೀತಿರನಿಲಸ್ಯಾಗ್ನಿನಾ ಯಥಾ||
ವಾನರರೆಲ್ಲರ ರಾಜರಾದ ಸೂರ್ಯಪುತ್ರ ಸುಗ್ರೀವ ಮತ್ತು ಇಂದ್ರನ ಮಗ ವಾಲಿ ಇಬ್ಬರನ್ನೂ ಎಲ್ಲ ಮಹಾವೀರ ವಾನರ ಪಂಗಡಗಳೂ ಸೇವಿಸುತ್ತಿದ್ದವು. ಆ ಅಮಿತ್ರಕರ್ಷಣ ಸುಗ್ರೀವ ಮತ್ತು ನಾನು ಬೆಂಕಿಯೊಂದಿಗೆ ಗಾಳಿಯು ಹೇಗೋ ಹಾಗೆ ಪ್ರೀತಿಯಿಂದ ಅನ್ಯೋನ್ಯರಾಗಿದ್ದೆವು.
03147027a ನಿಕೃತಃ ಸ ತತೋ ಭ್ರಾತ್ರಾ ಕಸ್ಮಿಂಶ್ಚಿತ್ಕಾರಣಾಂತರೇ|
03147027c ಋಶ್ಯಮೂಕೇ ಮಯಾ ಸಾರ್ಧಂ ಸುಗ್ರೀವೋ ನ್ಯವಸಚ್ಚಿರಂ||
ಯಾವುದೋ ಕಾರಣಾಂತರದಿಂದ ತನ್ನ ಅಣ್ಣನಿಂದ ಮೋಸಗೊಂಡು ಸುಗ್ರೀವನು ನನ್ನೊಡನೆ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿದ್ದನು.
03147028a ಅಥ ದಾಶರಥಿರ್ವೀರೋ ರಾಮೋ ನಾಮ ಮಹಾಬಲಃ|
03147028c ವಿಷ್ಣುರ್ಮಾನುಷರೂಪೇಣ ಚಚಾರ ವಸುಧಾಮಿಮಾಂ||
ಆಗ ದಶರಥನ ಮಗ ರಾಮನೆಂಬ ಹೆಸರಿನ ವೀರ ಮಹಾಬಲಶಾಲಿ, ಮನುಷ್ಯರೂಪದಲ್ಲಿದ್ದ ವಿಷ್ಣುವು ಈ ಭೂಮಿಯುಲ್ಲಿ ಅಲೆದಾಡುತ್ತಿದ್ದನು.
03147029a ಸ ಪಿತುಃ ಪ್ರಿಯಮನ್ವಿಚ್ಚನ್ಸಹಭಾರ್ಯಃ ಸಹಾನುಜಃ|
03147029c ಸಧನುರ್ಧನ್ವಿನಾಂ ಶ್ರೇಷ್ಠೋ ದಂಡಕಾರಣ್ಯಮಾಶ್ರಿತಃ||
ತನ್ನ ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಧನ್ವಿಗಳಲ್ಲಿ ಶ್ರೇಷ್ಠನಾದ ಅವನು ಪತ್ನಿಯೊಂದಿಗೆ ಮತ್ತು ತಮ್ಮನೊಂದಿಗೆ ದಂಡಕಾರಣ್ಯದಲ್ಲಿ ವಾಸಿಸಿದನು.
03147030a ತಸ್ಯ ಭಾರ್ಯಾ ಜನಸ್ಥಾನಾದ್ರಾವಣೇನ ಹೃತಾ ಬಲಾತ್|
03147030c ವಂಚಯಿತ್ವಾ ಮಹಾಬುದ್ಧಿಂ ಮೃಗರೂಪೇಣ ರಾಘವಂ||
ಜನಸ್ಥಾನದಲ್ಲಿ ಜಿಂಕೆಯ ರೂಪದಲ್ಲಿ ಆ ಮಹಾಬುದ್ಧಿ ರಾಘವನನ್ನು ಮೋಸಗೊಳಿಸಿ ಅವನ ಪತ್ನಿಯನ್ನು ರಾವಣನು ಬಲಾತ್ಕಾರವಾಗಿ ಅಪಹರಿಸಿದನು.
03147031a ಹೃತದಾರಃ ಸಹ ಭ್ರಾತ್ರಾ ಪತ್ನೀಂ ಮಾರ್ಗನ್ಸ ರಾಘವಃ|
03147031c ದೃಷ್ಟವಾಂ ಶೈಲಶಿಖರೇ ಸುಗ್ರೀವಂ ವಾನರರ್ಷಭಂ||
ಪತ್ನಿಯನ್ನು ಕಳೆದುಕೊಂಡ ರಾಘವನು ಅವಳನ್ನು ಹುಡುಕುತ್ತಾ ಪರ್ವತಶಿಖರದಲ್ಲಿದ್ದ ವಾನರರ್ಷಭ ಸುಗ್ರೀವನನ್ನು ಕಂಡನು.
03147032a ತೇನ ತಸ್ಯಾಭವತ್ಸಖ್ಯಂ ರಾಘವಸ್ಯ ಮಹಾತ್ಮನಃ|
03147032c ಸ ಹತ್ವಾ ವಾಲಿನಂ ರಾಜ್ಯೇ ಸುಗ್ರೀವಂ ಪ್ರತ್ಯಪಾದಯತ್||
03147032e ಸ ಹರೀನ್ಪ್ರೇಷಯಾಮಾಸ ಸೀತಾಯಾಃ ಪರಿಮಾರ್ಗಣೇ||
ಅಲ್ಲಿ ಅವನೊಂದಿಗೆ ಮಹಾತ್ಮ ರಾಘವನ ಸಖ್ಯವಾಯಿತು. ಅವನು ವಾಲಿಯನ್ನು ಕೊಂದು ರಾಜ್ಯವನ್ನು ಸುಗ್ರೀವನಿಗಿತ್ತನು. ಅನಂತರ ಅವನು ಸೀತೆಯನ್ನು ಹುಡುಕಲು ಕಪಿಗಳನ್ನು ಕಳುಹಿಸಿದನು.
03147033a ತತೋ ವಾನರಕೋಟೀಭಿರ್ಯಾಂ ವಯಂ ಪ್ರಸ್ಥಿತಾ ದಿಶಂ|
03147033c ತತ್ರ ಪ್ರವೃತ್ತಿಃ ಸೀತಾಯಾ ಗೃಧ್ರೇಣ ಪ್ರತಿಪಾದಿತಾ||
ಕೋಟಿಗಟ್ಟಲೆ ವಾನರರೊಂದಿಗೆ ಕಳುಹಿಸಲ್ಪಟ್ಟ ನಾವೂ ಕೂಡ ಒಂದು ದಿಕ್ಕಿನಲ್ಲಿ ಹೊರಟಿದ್ದೆವು. ಅಲ್ಲಿ ಒಂದು ಹದ್ದು ನಮಗೆ ಸೀತೆಯ ಕುರಿತು ವಿಷಯವನ್ನು ತಿಳಿಸಿತು.
03147034a ತತೋಽಹಂ ಕಾರ್ಯಸಿದ್ಧ್ಯರ್ಥಂ ರಾಮಸ್ಯಾಕ್ಲಿಷ್ಟಕರ್ಮಣಃ|
03147034c ಶತಯೋಜನವಿಸ್ತೀರ್ಣಮರ್ಣವಂ ಸಹಸಾಪ್ಲುತಃ||
ಆಗ ಅಕ್ಲಿಷ್ಟಕರ್ಮಿ ರಾಮನ ಸಿದ್ದಿಗೋಸ್ಕರವಾಗಿ ನಾನು ನೂರು ಯೋಜನ ವಿಸ್ತೀರ್ಣದ ಮಹಾಸಾಗರವನ್ನು ಒಂದೇ ಜಿಗಿತದಲ್ಲಿ ಹಾರಿ ದಾಟಿದೆನು.
03147035a ದೃಷ್ಟಾ ಸಾ ಚ ಮಯಾ ದೇವೀ ರಾವಣಸ್ಯ ನಿವೇಶನೇ|
03147035c ಪ್ರತ್ಯಾಗತಶ್ಚಾಪಿ ಪುನರ್ನಾಮ ತತ್ರ ಪ್ರಕಾಶ್ಯ ವೈ||
ಅಲ್ಲಿ ರಾವಣನ ರಾಜ್ಯದಲ್ಲಿ ಆ ದೇವಿಯನ್ನು ನೋಡಿದೆನು ಮತ್ತು ನನ್ನ ಹೆಸರನ್ನು ಅಲ್ಲಿ ಪುನಃ ಪ್ರಕಟಿಸಿ ಹಿಂದಿರುಗಿದೆನು[1].
03147036a ತತೋ ರಾಮೇಣ ವೀರೇಣ ಹತ್ವಾ ತಾನ್ಸರ್ವರಾಕ್ಷಸಾನ್|
03147036c ಪುನಃ ಪ್ರತ್ಯಾಹೃತಾ ಭಾರ್ಯಾ ನಷ್ಟಾ ವೇದಶ್ರುತಿರ್ಯಥಾ||
ಅನಂತರ ವೀರ ರಾಮನು ಆ ಎಲ್ಲ ರಾಕ್ಷಸರನ್ನು ಸಂಹರಿಸಿ, ವೇದಶ್ರುತಿಗಳಂತೆ ಕಳೆದುಹೋಗಿದ್ದ ತನ್ನ ಭಾರ್ಯೆಯನ್ನು ಪುನಃ ಸ್ವೀಕರಿಸಿದನು.
03147037a ತತಃ ಪ್ರತಿಷ್ಠಿತೇ ರಾಮೇ ವೀರೋಽಯಂ ಯಾಚಿತೋ ಮಯಾ|
03147037c ಯಾವದ್ರಾಮಕಥಾ ವೀರ ಭವೇಲ್ಲೋಕೇಷು ಶತ್ರುಹನ್||
03147037e ತಾವಜ್ಜೀವೇಯಮಿತ್ಯೇವಂ ತಥಾಸ್ತ್ವಿತಿ ಚ ಸೋಽಬ್ರವೀತ್||
ವೀರ ರಾಮನು ಹಿಂದಿರುಗಿದ ನಂತರ ನಾನು ಅವನಲ್ಲಿ ಕೇಳಿಕೊಂಡಿದ್ದೆನು: “ವೀರ! ಶತ್ರುಹರ! ಎಲ್ಲಿಯವರೆಗೆ ರಾಮಕಥೆಯು ಲೋಕಗಳಲ್ಲಿರುವುದೋ ಅಲ್ಲಿಯ ವರೆಗೆ ನಾನು ಜೀವಿಸಿರಲಿ!” ಎಂದು. ಅದಕ್ಕೆ ಅವನು ಹಾಗೆಯೇ ಆಗಲಿ ಎಂದಿದ್ದನು.
03147038a ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ|
03147038c ರಾಜ್ಯಂ ಕಾರಿತವಾನ್ರಾಮಸ್ತತಸ್ತು ತ್ರಿದಿವಂ ಗತಃ||
ಹನ್ನೊಂದು ಸಾವಿರ ವರ್ಷಗಳು ರಾಜ್ಯಭಾರವನ್ನು ಮಾಡಿ ರಾಮನು ದೇವಲೋಕವನ್ನು ಸೇರಿದನು.
03147039a ತದಿಹಾಪ್ಸರಸಸ್ತಾತ ಗಂಧರ್ವಾಶ್ಚ ಸದಾನಘ|
03147039c ತಸ್ಯ ವೀರಸ್ಯ ಚರಿತಂ ಗಾಯಂತ್ಯೋ ರಮಯಂತಿ ಮಾಂ||
ಅನಘ! ಮಗೂ! ಈಗ ಇಲ್ಲಿ ಅಪ್ಸರೆಯರೂ ಗಂಧರ್ವರೂ ಆ ವೀರನ ಚರಿತ್ರೆಯನ್ನು ಹಾಡುತ್ತಾ ನನ್ನನ್ನು ರಂಜಿಸುತ್ತಾರೆ.
03147040a ಅಯಂ ಚ ಮಾರ್ಗೋ ಮರ್ತ್ಯಾನಾಮಗಮ್ಯಃ ಕುರುನಂದನ|
03147040c ತತೋಽಹಂ ರುದ್ಧವಾನ್ಮಾರ್ಗಂ ತವೇಮಂ ದೇವಸೇವಿತಂ||
03147040e ಧರ್ಷಯೇದ್ವಾ ಶಪೇದ್ವಾಪಿ ಮಾ ಕಶ್ಚಿದಿತಿ ಭಾರತ||
ಕುರುನಂದನ! ಈ ಮಾರ್ಗವಾದರೋ ಮನುಷ್ಯರು ಹೋಗುವಂಥಹುದಲ್ಲ. ಅದಕ್ಕಾಗಿಯೇ ನಾನು ಈ ಮಾರ್ಗದಲ್ಲಿ ಹೋಗುವವರನ್ನು ತಡೆಯುತ್ತೇನೆ. ಭಾರತ! ದೇವಸೇವಿತ ಈ ಮಾರ್ಗದಲ್ಲಿ ಯಾರೂ ನಿನ್ನನ್ನು ಘಾತಿಗೊಳಿಸಬಾರದು ಅಥವಾ ಶಪಿಸಬಾರದು.
03147041a ದಿವ್ಯೋ ದೇವಪಥೋ ಹ್ಯೇಷ ನಾತ್ರ ಗಚ್ಚಂತಿ ಮಾನುಷಾಃ|
03147041c ಯದರ್ಥಮಾಗತಶ್ಚಾಸಿ ತತ್ಸರೋಽಭ್ಯರ್ಣ ಏವ ಹಿ||
ಇದು ದೇವತೆಗಳು ಬಳಸುವ ದಿವ್ಯ ಮಾರ್ಗ. ಅಲ್ಲಿ ಮನುಷ್ಯರು ಹೋಗುವುದಿಲ್ಲ. ಆದರೆ ನೀನು ಯಾವ ಸರೋವರಕ್ಕಾಗಿ ಬಂದಿರುವೆಯೋ ಅದು ಹತ್ತಿರದಲ್ಲಿಯೇ ಇದೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಹನುಮದ್ಭೀಮಸಂವಾದವೆಂಬ ನೂರಾನಲ್ವತ್ತೇಳನೆಯ ಅಧ್ಯಾಯವು.
[1]ರಾವಣಸ್ಯ ನಿವೇಶನ ಎನ್ನುವುದನ್ನು ರಾವಣನ ಅರಮನೆ ಎಂದು ಅರ್ಥೈಸಿಕೊಳ್ಳದೇ ಅವನ ರಾಜ್ಯ ಎಂದು ಅರ್ಥೈಸಿಕೊಳ್ಳಬೇಕು. ಏಕೆಂದರೆ, ಸೀತೆಯು ರಾವಣನ ಅರಮನೆಯನ್ನು ಪ್ರವೇಶಿಸಿಯೇ ಇರಲಿಲ್ಲ.