ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೪
ಚಂಡಮಾರುತಕ್ಕೆ ಸಿಲುಕಿದ ದ್ರೌಪದಿಯು ಮೂರ್ಛಿತಳಾದುದು (೧-೫). ಯುಧಿಷ್ಠಿರನ ವಿಲಾಪ (೬-೧೫). ದ್ರೌಪದಿಯು ಎಚ್ಚರಗೊಳ್ಳಲು, ಭೀಮನು ಘಟೋತ್ಕಚನನ್ನು ಸ್ಮರಿಸಿ ಕರೆಸಿಕೊಂಡಿದುದು (೧೬-೨೭).
03144001 ವೈಶಂಪಾಯನ ಉವಾಚ|
03144001a ತತಃ ಪ್ರಯಾತಮಾತ್ರೇಷು ಪಾಂಡವೇಷು ಮಹಾತ್ಮಸು|
03144001c ಪದ್ಭ್ಯಾಮನುಚಿತಾ ಗಂತುಂ ದ್ರೌಪದೀ ಸಮುಪಾವಿಶತ್||
ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ಅನಂತರ ಪ್ರಯಾಣಮಾಡುತ್ತಿದ್ದರಷ್ಟೇ ಕಾಲ್ನಡುಗೆಗೆ ಅನುಚಿತಳಾದ ದ್ರೌಪದಿಯು ಕುಸಿದು ಬಿದ್ದಳು.
03144002a ಶ್ರಾಂತಾ ದುಃಖಪರೀತಾ ಚ ವಾತವರ್ಷೇಣ ತೇನ ಚ|
03144002c ಸೌಕುಮಾರ್ಯಾಚ್ಚ ಪಾಂಚಾಲೀ ಸಮ್ಮುಮೋಹ ಯಶಸ್ವಿನೀ||
ಭಿರುಗಾಳಿ ಮತ್ತು ಮಳೆಗೆ ಸಿಲುಕಿ ಆಯಾಸಗೊಂಡವಳೂ ದುಃಖಿತಳೂ ಆದ ಆ ಸುಕುಮಾರಿ ಯಶಸ್ವಿನೀ ಪಾಂಚಾಲಿಯು ಮೂರ್ಛೆತಪ್ಪಿ ಬಿದ್ದಳು.
03144003a ಸಾ ಪಾತ್ಯಮಾನಾ ಮೋಹೇನ ಬಾಹುಭ್ಯಾಮಸಿತೇಕ್ಷಣಾ|
03144003c ವೃತ್ತಾಭ್ಯಾಮನುರೂಪಾಭ್ಯಾಮೂರೂ ಸಮವಲಂಬತ||
ಮೂರ್ಛೆತಪ್ಪಿ ಬಿದ್ದ ಆ ಕಪ್ಪು ಕಣ್ಣಿನವಳು ತನ್ನ ಎರಡೂ ತೋಳುಗಳಿಂದ ತೊಡೆಗಳನ್ನು ಬಳಸಿ ಹಿಡಿದು ಬಿದ್ದಳು.
03144004a ಆಲಂಬಮಾನಾ ಸಹಿತಾವೂರೂ ಗಜಕರೋಪಮೌ|
03144004c ಪಪಾತ ಸಹಸಾ ಭೂಮೌ ವೇಪಂತೀ ಕದಲೀ ಯಥಾ||
ಆನೆಯ ಸೊಂಡಿಲಿನಂತಿದ್ದ ಆ ತೊಡೆಗಳನ್ನು ಹಿಡಿದು ನಡುಗುತ್ತಾ ಬಾಳೆಯ ಮರದಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು.
03144005a ತಾಂ ಪತಂತೀಂ ವರಾರೋಹಾಂ ಸಜ್ಜಮಾನಾಂ ಲತಾಮಿವ|
03144005c ನಕುಲಃ ಸಮಭಿದ್ರುತ್ಯ ಪರಿಜಗ್ರಾಹ ವೀರ್ಯವಾನ್||
ಬಳ್ಳಿಯಂತೆ ಬಗ್ಗಿ ಬೀಳುತ್ತಿರುವ ಆ ವರಾರೋಹೆಯನ್ನು ನೋಡಿದ ವೀರ್ಯವಾನ್ ನಕುಲನು ಬೇಗನೇ ಹೋಗಿ ಅವಳನ್ನು ಹಿಡಿದುಕೊಂಡನು.
03144006 ನಕುಲ ಉವಾಚ|
03144006a ರಾಜನ್ಪಾಂಚಾಲರಾಜಸ್ಯ ಸುತೇಯಮಸಿತೇಕ್ಷಣಾ|
03144006c ಶ್ರಾಂತಾ ನಿಪತಿತಾ ಭೂಮೌ ತಾಮವೇಕ್ಷಸ್ವ ಭಾರತ||
ನಕುಲನು ಹೇಳಿದನು: “ರಾಜನ್! ಪಾಂಚಾಲರಾಜನ ಮಗಳು ಕಪ್ಪು ಕಣ್ಣಿನವಳು ಆಯಾಸಗೊಂಡು ನೆಲದ ಮೇಲೆ ಬಿದ್ದಿದ್ದಾಳೆ. ಭಾರತ! ಅವಳನ್ನು ಸ್ವಲ್ಪ ನೋಡಿಕೋ!
03144007a ಅದುಃಖಾರ್ಹಾ ಪರಂ ದುಃಖಂ ಪ್ರಾಪ್ತೇಯಂ ಮೃದುಗಾಮಿನೀ|
03144007c ಆಶ್ವಾಸಯ ಮಹಾರಾಜ ತಾಮಿಮಾಂ ಶ್ರಮಕರ್ಶಿತಾಂ||
ದುಃಖಕ್ಕೆ ಅರ್ಹಳಾಗಿರದ ಈ ಮೃದುವಾಗಿ ನಡೆಯುವವಳು ಪರಮ ದುಃಖವನ್ನು ಹೊಂದಿದ್ದಾಳೆ. ಮಹಾರಾಜ! ಆಯಾಸಗೊಂಡು ಪೀಡಿತಳಾದ ಇವಳಿಗೆ ಆಶ್ವಾಸನೆ ನೀಡು.””
03144008 ವೈಶಂಪಾಯನ ಉವಾಚ|
03144008a ರಾಜಾ ತು ವಚನಾತ್ತಸ್ಯ ಭೃಶಂ ದುಃಖಸಮನ್ವಿತಃ|
03144008c ಭೀಮಶ್ಚ ಸಹದೇವಶ್ಚ ಸಹಸಾ ಸಮುಪಾದ್ರವನ್||
ವೈಶಂಪಾಯನನು ಹೇಳಿದನು: “ಅವನ ಮಾತುಗಳಿಂದ ರಾಜನು ತುಂಬಾ ದುಃಖಭರಿತನಾದನು. ಭೀಮನೂ ಸಹದೇವನೂ ತಕ್ಷಣವೇ ಅವಳ ಬಳಿ ಓಡಿ ಬಂದರು.
03144009a ತಾಮವೇಕ್ಷ್ಯ ತು ಕೌಂತೇಯೋ ವಿವರ್ಣವದನಾಂ ಕೃಶಾಂ|
03144009c ಅಮ್ಕಮಾನೀಯ ಧರ್ಮಾತ್ಮಾ ಪರ್ಯದೇವಯದಾತುರಃ||
ಬಡಕಲಾಗಿದ್ದ ಆಯಾಸಗೊಂಡು ಮುಖದ ಬಣ್ಣವನ್ನೇ ಕಳೆದುಕೊಂಡಿದ್ದ ಅವಳನ್ನು ನೋಡಿದ ಕೌಂತೇಯನು ಅವಳನ್ನು ತನ್ನ ತೊಡೆಯ ಮೇಲೆ ಎತ್ತಿಟ್ಟುಕೊಂಡು ದುಃಖದಿಂದ ವಿಲಪಿಸಿದನು.
03144010a ಕಥಂ ವೇಶ್ಮಸು ಗುಪ್ತೇಷು ಸ್ವಾಸ್ತೀರ್ಣಶಯನೋಚಿತಾ|
03144010c ಶೇತೇ ನಿಪತಿತಾ ಭೂಮೌ ಸುಖಾರ್ಹಾ ವರವರ್ಣಿನೀ||
“ಚೆನ್ನಾಗಿ ಹಾಸಿದ ಹಾಸಿಗೆಯ ಮೇಲೆ ಪಹರಿಗಳಿರುವ ಮನೆಯಲ್ಲಿ ಮಲಗುವ ಸುಖಕ್ಕೆ ಅರ್ಹಳಾದ ಈ ವರವರ್ಣಿನಿಯು ಈಗ ಹೇಗೆ ಭೂಮಿಯ ಮೇಲೆ ಬಿದ್ದು ಮಲಗಿದ್ದಾಳೆ?
03144011a ಸುಕುಮಾರೌ ಕಥಂ ಪಾದೌ ಮುಖಂ ಚ ಕಮಲಪ್ರಭಂ|
03144011c ಮತ್ಕೃತೇಽದ್ಯ ವರಾರ್ಹಾಯಾಃ ಶ್ಯಾಮತಾಂ ಸಮುಪಾಗತಂ||
ವರಗಳಿಗೆ ಅರ್ಹಳಾದ ಇವಳ ಕೋಮಲವಾದ ಕಾಲುಗಳು ಮತ್ತು ಕಮಲದಂತಿದ್ದ ಮುಖ ನಾನು ಮಾಡಿದ ಕರ್ಮಗಳಿಂದಾಗಿ ಇಂದು ಹೇಗೆ ಕಪ್ಪಾಗಿವೆ?
03144012a ಕಿಮಿದಂ ದ್ಯೂತಕಾಮೇನ ಮಯಾ ಕೃತಮಬುದ್ಧಿನಾ|
03144012c ಆದಾಯ ಕೃಷ್ಣಾಂ ಚರತಾ ವನೇ ಮೃಗಗಣಾಯುತೇ||
ನನ್ನ ದ್ಯೂತವನ್ನಾಡುವ ಚಟದಿಂದ ಬುದ್ಧಿಯನ್ನು ಉಪಯೋಗಿಸದೇ ಮಾಡಿದ ಕರ್ಮದ ಮೂಲಕ ಕೃಷ್ಣೆಗೆ ಈ ಮೃಗಗಣಗಳಿಂದ ಕೂಡಿದ ವನದಲ್ಲಿ ತಿರುಗುವ ಪರಿಸ್ಥಿತಿಯನ್ನು ನಾನೇಕೆ ತಂದುಕೊಟ್ಟೆ?
03144013a ಸುಖಂ ಪ್ರಾಪ್ಸ್ಯತಿ ಪಾಂಚಾಲೀ ಪಾಂಡವಾನ್ಪ್ರಾಪ್ಯ ವೈ ಪತೀನ್|
03144013c ಇತಿ ದ್ರುಪದರಾಜೇನ ಪಿತ್ರಾ ದತ್ತಾಯತೇಕ್ಷಣಾ||
ಪಾಂಡವರನ್ನು ಗಂಡಂದಿರನ್ನಾಗಿ ಪಡೆದ ದ್ರೌಪದಿಯು ಇನ್ನು ಸುಖವನ್ನೇ ಹೊಂದುತ್ತಾಳೆ ಎಂದು ಹೇಳಿ ದ್ರುಪದರಾಜನು ಈ ಕಪ್ಪುಕಣ್ಣಿನವಳನ್ನು ಕೊಟ್ಟಿದ್ದನು.
03144014a ತತ್ಸರ್ವಮನವಾಪ್ಯೈವ ಶ್ರಮಶೋಕಾದ್ಧಿ ಕರ್ಶಿತಾ|
03144014c ಶೇತೇ ನಿಪತಿತಾ ಭೂಮೌ ಪಾಪಸ್ಯ ಮಮ ಕರ್ಮಭಿಃ||
ಹಾಗೆ ಏನನ್ನೂ ಇವಳು ಪಡೆಯಲಿಲ್ಲ. ನನ್ನ ಪಾಪ ಕರ್ಮಗಳಿಂದಾಗಿ ಆಯಾಸ ಮತ್ತು ಶೋಕದಿಂದ ಸೊರಗಿ ಇವಳು ಬಿದ್ದು ನೆಲದಮೇಲೆ ಮಲಗಿಕೊಂಡಿದ್ದಾಳೆ!”
03144015a ತಥಾ ಲಾಲಪ್ಯಮಾನೇ ತು ಧರ್ಮರಾಜೇ ಯುಧಿಷ್ಠಿರೇ|
03144015c ಧೌಮ್ಯಪ್ರಭೃತಯಃ ಸರ್ವೇ ತತ್ರಾಜಗ್ಮುರ್ದ್ವಿಜೋತ್ತಮಾಃ||
ಈ ರೀತಿಯಾಗಿ ಧರ್ಮರಾಜ ಯುಧಿಷ್ಠಿರನು ವಿಲಪಿಸುತ್ತಿರಲು ಧೌಮ್ಯನೇ ಮೊದಲಾದ ಎಲ್ಲ ಬ್ರಾಹ್ಮಣೋತ್ತಮರೂ ಅಲ್ಲಿಗೆ ಬಂದರು.
03144016a ತೇ ಸಮಾಶ್ವಾಸಯಾಮಾಸುರಾಶೀರ್ಭಿಶ್ಚಾಪ್ಯಪೂಜಯನ್|
03144016c ರಕ್ಷೋಘ್ನಾಂಶ್ಚ ತಥಾ ಮಂತ್ರಾಂ ಜೇಪುಶ್ಚಕ್ರುಶ್ಚ ತೇ ಕ್ರಿಯಾಃ||
ಅವನಿಗೆ ಆಶ್ವಾಸನೆಯಿತ್ತು ಆಶೀರ್ವಚನಗಳಿಂದ ಗೌರವಿಸಿ ರಾಕ್ಷೋಘ್ನ ಮತ್ತು ಹಾಗೆಯೇ ಇತರ ಮಂತ್ರಗಳನ್ನು ಜಪಿಸಿದರು ಮತ್ತು ಕ್ರಿಯೆಗಳನ್ನು ನಡೆಸಿದರು.
03144017a ಪಠ್ಯಮಾನೇಷು ಮಂತ್ರೇಷು ಶಾಂತ್ಯರ್ಥಂ ಪರಮರ್ಷಿಭಿಃ|
03144017c ಸ್ಪೃಶ್ಯಮಾನಾ ಕರೈಃ ಶೀತೈಃ ಪಾಂಡವೈಶ್ಚ ಮುಹುರ್ಮುಹುಃ||
03144018a ಸೇವ್ಯಮಾನಾ ಚ ಶೀತೇನ ಜಲಮಿಶ್ರೇಣ ವಾಯುನಾ|
03144018c ಪಾಂಚಾಲೀ ಸುಖಮಾಸಾದ್ಯ ಲೇಭೇ ಚೇತಃ ಶನೈಃ ಶನೈಃ||
ಶಾಂತಿಗೋಸ್ಕರವಾಗಿ ಆ ಪರಮಋಷಿಗಳು ಈ ರೀತಿ ಮಂತ್ರಗಳನ್ನು ಪಠಿಸುತ್ತಿರಲು ಪಾಂಡವರು ತಮ್ಮ ಶೀತಲ ಕೈಗಳಿಂದ ಅವಳನ್ನು ಮತ್ತೆ ಮತ್ತೆ ಸವರುತ್ತಿರಲು, ಜಲಮಿಶ್ರಣವಾದ ತಣ್ಣಗಿನ ಗಾಳಿಯು ಬೀಸುತ್ತಿರಲು ಸುಖವನ್ನು ಹೊಂದಿದ ಪಾಂಚಾಲಿಯು ಮೆಲ್ಲನೇ ಚೇತರಿಸಿಕೊಂಡಳು.
03144019a ಪರಿಗೃಹ್ಯ ಚ ತಾಂ ದೀನಾಂ ಕೃಷ್ಣಾಮಜಿನಸಂಸ್ತರೇ|
03144019c ತದಾ ವಿಶ್ರಾಮಯಾಮಾಸುರ್ಲಬ್ಧಸಂಜ್ಞಾಂ ತಪಸ್ವಿನೀಂ||
ಕೃಷ್ಣಾಜಿನವನ್ನು ಹಾಸಿ ಅದರ ಮೇಲೆ ಕೃಷ್ಣೆ ದ್ರೌಪದಿಯನ್ನು ಮಲಗಿಸಿದರು ಮತ್ತು ಆ ತಪಸ್ವಿನಿಯು ಸಂಪೂರ್ಣವಾಗಿ ಎಚ್ಚರವಾಗುವವರೆಗೆ ವಿಶ್ರಾಂತಿಯನ್ನು ನೀಡಿದರು.
03144020a ತಸ್ಯಾ ಯಮೌ ರಕ್ತತಲೌ ಪಾದೌ ಪೂಜಿತಲಕ್ಷಣೌ|
03144020c ಕರಾಭ್ಯಾಂ ಕಿಣಜಾತಾಭ್ಯಾಂ ಶನಕೈಃ ಸಂವವಾಹತುಃ||
ಅವಳಿ ನಕುಲ ಸಹದೇವರು ಕೆಳ ಕೆಂಪಾಗಿದ್ದ, ಮಂಗಳ ಲಕ್ಷಣಗಳಿಂದ ಕೂಡಿದ್ದ ಅವಳ ಪಾದಗಳನ್ನು ತಮ್ಮ ಎರಡೂ ಕೈಗಳಿಂದ ಮೆಲ್ಲನೆ ಒತ್ತುತ್ತಿದ್ದರು.
03144021a ಪರ್ಯಾಶ್ವಾಸಯದಪ್ಯೇನಾಂ ಧರ್ಮರಾಜೋ ಯುಧಿಷ್ಠಿರಃ|
03144021c ಉವಾಚ ಚ ಕುರುಶ್ರೇಷ್ಠೋ ಭೀಮಸೇನಮಿದಂ ವಚಃ||
ಧರ್ಮರಾಜ ಯುಧಿಷ್ಠಿರನು ಅವಳಿಗೆ ಸಾಂತ್ವನವನ್ನು ನೀಡಿದನು. ಆಗ ಆ ಕುರುಶ್ರೇಷ್ಠನು ಭೀಮನಿಗೆ ಈ ಮಾತುಗಳನ್ನಾಡಿದನು.
03144022a ಬಹವಃ ಪರ್ವತಾ ಭೀಮ ವಿಷಮಾ ಹಿಮದುರ್ಗಮಾಃ|
03144022c ತೇಷು ಕೃಷ್ಣಾ ಮಹಾಬಾಹೋ ಕಥಂ ನು ವಿಚರಿಷ್ಯತಿ||
“ಮಹಾಬಾಹು ಬೀಮ! ಬಹಳಷ್ಟು ವಿಷಮವಾದ ಹಿಮದಿಂದ ಕೂಡಿ ದುರ್ಗಮವಾದ ಪರ್ವತಗಳಿವೆ. ಕೃಷ್ಣೆಯು ಹೇಗೆತಾನೇ ಅವುಗಳನ್ನು ಏರಿ ಪ್ರಯಾಣಿಸಬಲ್ಲಳು?”
03144023 ಭೀಮಸೇನ ಉವಾಚ|
03144023a ತ್ವಾಂ ರಾಜನ್ರಾಜಪುತ್ರೀಂ ಚ ಯಮೌ ಚ ಪುರುಷರ್ಷಭೌ|
03144023c ಸ್ವಯಂ ನೇಷ್ಯಾಮಿ ರಾಜೇಂದ್ರ ಮಾ ವಿಷಾದೇ ಮನಃ ಕೃಥಾಃ||
ಭೀಮಸೇನನು ಹೇಳಿದನು: “ರಾಜನ್! ರಾಜೇಂದ್ರ! ನಿನ್ನನ್ನು, ರಾಜಪುತ್ರಿಯನ್ನು ಮತ್ತು ಪುರುಷರ್ಷಭರಾದ ಈ ನಕುಲ ಸಹದೇವರನ್ನು ಸ್ವಯಂ ನಾನೇ ಎತ್ತಿಕೊಂಡು ಹೋಗುತ್ತೇನೆ. ನಿನ್ನ ಮನಸ್ಸು ದುಃಖಿಸದಿರಲಿ!
03144024a ಅಥ ವಾಸೌ ಮಯಾ ಜಾತೋ ವಿಹಗೋ ಮದ್ಬಲೋಪಮಃ|
03144024c ವಹೇದನಘ ಸರ್ವಾನ್ನೋ ವಚನಾತ್ತೇ ಘತೋತ್ಕಚಃ||
ಅಥವಾ ಅನಘ! ನೀನು ಹೇಳುವುದಾದರೆ ನನ್ನ ಹಾಗೆಯೇ ಬಲಶಾಲಿಯಾದ, ಹಾರಿಹೋಗಬಲ್ಲ ನನ್ನ ಮಗ ಘಟೋತ್ಕನು ನಮ್ಮೆಲ್ಲರನ್ನೂ ಎತ್ತಿಕೊಂಡು ಹೋಗುತ್ತಾನೆ.””
03144025 ವೈಶಂಪಾಯನ ಉವಾಚ|
03144025a ಅನುಜ್ಞಾತೋ ಧರ್ಮರಾಜ್ಞಾ ಪುತ್ರಂ ಸಸ್ಮಾರ ರಾಕ್ಷಸಂ|
03144025c ಘಟೋತ್ಕಚಶ್ಚ ಧರ್ಮಾತ್ಮಾ ಸ್ಮೃತಮಾತ್ರಃ ಪಿತುಸ್ತದಾ||
03144025e ಕೃತಾಂಜಲಿರುಪಾತಿಷ್ಠದಭಿವಾದ್ಯಾಥ ಪಾಂಡವಾನ್||
ವೈಶಂಪಾಯನನು ಹೇಳಿದನು: “ಧರ್ಮರಾಜನ ಅನುಮತಿಯನ್ನು ಪಡೆದು ಅವನು ತನ್ನ ರಾಕ್ಷಸ ಮಗನನ್ನು ಸ್ಮರಿಸಿದನು. ತನ್ನ ತಂದೆಯು ಸ್ಮರಿಸಿದ ಕೂಡಲೇ ಧರ್ಮಾತ್ಮ ಘಟೋತ್ಕಚನು ಕೈಜೋಡಿಸಿ ಪಾಂಡವರಿಗೆ ನಮಸ್ಕರಿಸಿ ನಿಂತುಕೊಂಡನು.
03144026a ಬ್ರಾಹ್ಮಣಾಂಶ್ಚ ಮಹಾಬಾಹುಃ ಸ ಚ ತೈರಭಿನಂದಿತಃ|
03144026c ಉವಾಚ ಭೀಮಸೇನಂ ಸ ಪಿತರಂ ಸತ್ಯವಿಕ್ರಮಃ||
ಆ ಮಹಾಬಾಹುವು ಬ್ರಾಹ್ಮಣರಿಗೂ ವಂದಿಸಿದನು ಮತ್ತು ಅವರಿಂದ ಸ್ವಾಗತಿಸಲ್ಪಟ್ಟನು. ಆ ಸತ್ಯವಿಕ್ರಮನು ತನ್ನ ತಂದೆ ಭೀಮಸೇನನಿಗೆ ಹೇಳಿದನು:
03144027a ಸ್ಮೃತೋಽಸ್ಮಿ ಭವತಾ ಶೀಘ್ರಂ ಶುಶ್ರೂಷುರಹಮಾಗತಃ|
03144027c ಆಜ್ಞಾಪಯ ಮಹಾಬಾಹೋ ಸರ್ವಂ ಕರ್ತಾಸ್ಮ್ಯಸಂಶಯಂ||
03144027e ತಚ್ಛೃತ್ವಾ ಭೀಮಸೇನಸ್ತು ರಾಕ್ಷಸಂ ಪರಿಷಸ್ವಜೇ||
“ನೀನು ನನ್ನನ್ನು ಸ್ಮರಿಸಿದ ಕೂಡಲೇ ನಿನ್ನ ಸೇವೆಗೆಂದು ಇಲ್ಲಿಗೆ ಬಂದಿದ್ದೇನೆ. ಮಹಾಬಾಹೋ! ಆಜ್ಞಾಪಿಸು. ಎಲ್ಲವನ್ನೂ ನಿಸ್ಸಂಶಯವಾಗಿ ಮಾಡುತ್ತೇನೆ.” ಅದನ್ನು ಕೇಳಿದ ಭೀಮಸೇನನು ಆ ರಾಕ್ಷಸನನ್ನು ಬಿಗಿದಪ್ಪಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತ್ನಾಲ್ಕನೆಯ ಅಧ್ಯಾಯವು.