ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೩
ಗಂಧಮಾದನ ಪರ್ವತವನ್ನು ಏರುವಾಗ ಚಂಡಮಾರುತಕ್ಕೆ ಪಾಂಡವರು ಸಿಲುಕಿದುದು (೧-೨೧).
03143001 ವೈಶಂಪಾಯನ ಉವಾಚ|
03143001a ತೇ ಶೂರಾಸ್ತತಧನ್ವಾನಸ್ತೂಣವಂತಃ ಸಮಾರ್ಗಣಾಃ|
03143001c ಬದ್ಧಗೋಧಾಂಗುಲಿತ್ರಾಣಾಃ ಖದ್ಗವಂತೋಽಮಿತೌಜಸಃ||
03143002a ಪರಿಗೃಹ್ಯ ದ್ವಿಜಶ್ರೇಷ್ಠಾಂ ಶ್ರೇಷ್ಠಾಃ ಸರ್ವಧನುಷ್ಮತಾಂ|
03143002c ಪಾಂಚಾಲೀಸಹಿತಾ ರಾಜನ್ಪ್ರಯಯುರ್ಗಂಧಮಾದನಂ||
ವೈಶಂಪಾಯನನು ಹೇಳಿದನು: “ರಾಜನ್! ಅನಂತರ ಆ ಅಮಿತೌಜಸ ಎಲ್ಲ ಧನುಷ್ಮತರಲ್ಲಿಯೂ ಶ್ರೇಷ್ಠರಾದ ಶೂರ ಧನ್ವಿಗಳು ಬಾಣ-ಬತ್ತಳಿಕೆಗಳನ್ನು ಏರಿಸಿಕೊಂಡು, ಬೆರಳು ಮತ್ತು ಕೈಗಳಿಗೆ ಪಟ್ಟಿಗಳನ್ನು ಕಟ್ಟಿಕೊಂಡು, ಖಡ್ಗಗಳನ್ನು ಧರಿಸಿ ಬ್ರಾಹ್ಮಣಶ್ರೇಷ್ಠರನ್ನು ಕರೆದುಕೊಂಡು ಪಾಂಚಾಲಿಯ ಸಹಿತ ಗಂಧಮಾದನ ಪರ್ವತದ ಕಡೆ ಹೊರಟರು.
03143003a ಸರಾಂಸಿ ಸರಿತಶ್ಚೈವ ಪರ್ವತಾಂಶ್ಚ ವನಾನಿ ಚ|
03143003c ವೃಕ್ಷಾಂಶ್ಚ ಬಹುಲಚ್ಚಾಯಾನ್ದದೃಶುರ್ಗಿರಿಮೂರ್ಧನಿ||
03143003e ನಿತ್ಯಪುಷ್ಪಫಲಾನ್ದೇಶಾನ್ದೇವರ್ಷಿಗಣಸೇವಿತಾನ್||
ಅವರು ಸರೋವರಗಳನ್ನು, ನದಿಗಳನ್ನು, ಪರ್ವತಗಳನ್ನು, ಪರ್ವತಗಳ ಮೇಲೆ ಬಹಳಷ್ಟು ನೆರಳನ್ನು ನೀಡುವ ಮತ್ತು ನಿತ್ಯವೂ ಪುಷ್ಪ-ಫಲಗಳನ್ನು ನೀಡುವ ಮರಗಳುಳ್ಳ ವನಗಳನ್ನು, ದೇವರ್ಷಿಗಣಗಳು ಸೇವಿಸುತ್ತಿರುವ ಪ್ರದೇಶಗಳನ್ನು ಕಂಡರು.
03143004a ಆತ್ಮನ್ಯಾತ್ಮಾನಮಾಧಾಯ ವೀರಾ ಮೂಲಫಲಾಶನಾಃ|
03143004c ಚೇರುರುಚ್ಚಾವಚಾಕಾರಾನ್ದೇಶಾನ್ವಿಷಮಸಂಕಟಾನ್||
03143004e ಪಶ್ಯಂತೋ ಮೃಗಜಾತಾನಿ ಬಹೂನಿ ವಿವಿಧಾನಿ ಚ||
ತಮ್ಮ ಆತ್ಮಗಳಲ್ಲಿ ಆತ್ಮವನ್ನಿಟ್ಟುಕೊಂಡು ಆ ವೀರರು ಫಲಮೂಲಗಳನ್ನು ತಿಂದುಕೊಂಡು, ಎತ್ತರ ತಗ್ಗುಗಳಿರುವ ವಿಷಮ ಪ್ರದೇಶಗಳನ್ನು ಕಷ್ಟಗಳಿಂದ ಪಾರುಮಾಡಿಕೊಂಡು ಬಹಳ ವಿಧದ ಜಾತಿಗಳ ಮೃಗಗಳನ್ನು ನೋಡುತ್ತಾ ಮುಂದುವರೆದರು.
03143005a ಋಷಿಸಿದ್ಧಾಮರಯುತಂ ಗಂಧರ್ವಾಪ್ಸರಸಾಂ ಪ್ರಿಯಂ|
03143005c ವಿವಿಶುಸ್ತೇ ಮಹಾತ್ಮಾನಃ ಕಿನ್ನರಾಚರಿತಂ ಗಿರಿಂ||
ಆ ಮಹಾತ್ಮರು ಹೀಗೆ ಮುಂದುವರೆದು ಋಷಿ, ಸಿದ್ಧ, ಅಮರರಿಂದ ಕೂಡಿದ, ಗಂಧರ್ವ-ಅಪ್ಸರೆಯರಿಗೆ ಪ್ರಿಯವಾದ ಕಿನ್ನರರು ಸಂಚರಿಸುತ್ತಿರುವ ಗಿರಿಯನ್ನು ಪ್ರವೇಶಿಸಿದರು.
03143006a ಪ್ರವಿಶತ್ಸ್ವಥ ವೀರೇಷು ಪರ್ವತಂ ಗಂಧಮಾದನಂ|
03143006c ಚಂಡವಾತಂ ಮಹದ್ವರ್ಷಂ ಪ್ರಾದುರಾಸೀದ್ವಿಶಾಂ ಪತೇ||
ವಿಶಾಂಪತೇ! ಆ ವೀರರು ಗಂಧಮಾದನ ಪರ್ವತವನ್ನು ಪ್ರವೇಶಿಸುತ್ತಿರುವಾಗ ಅಲ್ಲಿ ಮಳೆಯನ್ನು ಸುರಿಸುವ ಮಹಾ ಚಂಡಮಾರುತವು ಬೀಸಿತು.
03143007a ತತೋ ರೇಣುಃ ಸಮುದ್ಭೂತಃ ಸಪತ್ರಬಹುಲೋ ಮಹಾನ್|
03143007c ಪೃಥಿವೀಂ ಚಾಂತರಿಕ್ಷಂ ಚ ದ್ಯಾಂ ಚೈವ ತಮಸಾವೃಣೋತ್||
ಬಹಳಷ್ಟು ಧೂಳು ತರಗೆಲೆಗಳಿಂದ ಕೂಡಿದ ಮಹಾ ಚಂಡಮಾರುತವು ಭೂಮಿ-ಅಂತರಿಕ್ಷಗಳನ್ನು ಮುಚ್ಚುತ್ತದೆಯೋ ಎನ್ನುವಂತೆ ಎದ್ದಿತು.
03143008a ನ ಸ್ಮ ಪ್ರಜ್ಞಾಯತೇ ಕಿಂ ಚಿದಾವೃತೇ ವ್ಯೋಮ್ನಿ ರೇಣುನಾ|
03143008c ನ ಚಾಪಿ ಶೇಕುಸ್ತೇ ಕರ್ತುಮನ್ಯೋನ್ಯಸ್ಯಾಭಿಭಾಷಣಂ||
ಆಕಾಶವು ಧೂಳಿನಿಂದ ಮುಚ್ಚಿಕೊಂಡಿರಲು ಏನೂ ಕಾಣುತ್ತಿರಲಿಲ್ಲ. ಅವರು ಪರಸ್ಪರರಲ್ಲಿ ಮಾತನಾಡಲೂ ಸಾಧ್ಯವಾಗಲಿಲ್ಲ.
03143009a ನ ಚಾಪಶ್ಯಂತ ತೇಽನ್ಯೋನ್ಯಂ ತಮಸಾ ಹತಚಕ್ಷುಷಃ|
03143009c ಆಕೃಷ್ಯಮಾಣಾ ವಾತೇನ ಸಾಶ್ಮಚೂರ್ಣೇನ ಭಾರತ||
ಭಾರತ! ಅವರ ಕಣ್ಣುಗಳು ಕತ್ತಲೆಯಿಂದ ಕುರುಡಾಗಿ ಒಬ್ಬರನ್ನೊಬ್ಬರು ನೋಡಲಿಕ್ಕೂ ಆಗಲಿಲ್ಲ ಮತ್ತು ಕಲ್ಲು-ಧೂಳುಗಳಿಂದ ತುಂಬಿದ್ದ ಭಿರುಗಾಳಿಯ ಸೆಳೆತಕ್ಕೆ ಸಿಲುಕಿ ಎಲ್ಲರೂ ಚೆಲ್ಲಾಪಿಲ್ಲಿಯಾದರು.
03143010a ದ್ರುಮಾಣಾಂ ವಾತಭಗ್ನಾನಾಂ ಪತತಾಂ ಭೂತಲೇ ಭೃಶಂ|
03143010c ಅನ್ಯೇಷಾಂ ಚ ಮಹೀಜಾನಾಂ ಶಬ್ಧಃ ಸಮಭವನ್ಮಹಾನ್||
ಭಿರುಗಾಳಿಗೆ ಸಿಕ್ಕಿ ತುಂಡಾಗಿ ಮರಗಿಡಗಳು ಭೂಮಿಗೆ ರಭಸದಿಂದ ಬೀಳುತ್ತಿರಲು ಕಿವುಡು ಮಾಡುವ ಮಹಾ ಶಬ್ಧವು ಉಂಟಾಯಿತು.
03143011a ದ್ಯೌಃ ಸ್ವಿತ್ಪತತಿ ಕಿಂ ಭೂಮೌ ದೀರ್ಯಂತೇ ಪರ್ವತಾ ನು ಕಿಂ|
03143011c ಇತಿ ತೇ ಮೇನಿರೇ ಸರ್ವೇ ಪವನೇನ ವಿಮೋಹಿತಾಃ||
ಆ ಭಿರುಗಾಳಿಯಿಂದ ಮೋಹಿತರಾದ ಅವರೆಲ್ಲರೂ ಆಕಾಶವೇ ಭೂಮಿಯ ಮೇಲೆ ಬೀಳುತ್ತಿದೆಯೋ ಅಥವಾ ಪರ್ವತವೇ ಒಡೆದು ಸೀಳಾಗುತ್ತದೆಯೋ ಎಂದು ತಿಳಿದುಕೊಂಡರು.
03143012a ತೇ ಯಥಾನಂತರಾನ್ವೃಕ್ಷಾನ್ವಲ್ಮೀಕಾನ್ವಿಷಮಾಣಿ ಚ|
03143012c ಪಾಣಿಭಿಃ ಪರಿಮಾರ್ಗಂತೋ ಭೀತಾ ವಾಯೋರ್ನಿಲಿಲ್ಯಿರೇ||
ಆ ಚಂಡಮಾರುತಕ್ಕೆ ಹೆದರಿ ಅವರು ಅಲ್ಲಲ್ಲಿ ಕೈಚಾಚಿ ಹುಡುಕಾಡಿ ಹತ್ತಿರ ಸಿಕ್ಕಿದ ಮರವನ್ನೋ, ಹುತ್ತವನ್ನೋ, ಅಥವಾ ಬಿಲಗಳನ್ನೋ ಹಿಡಿದು ಕೆಳಗೆ ಬಿದ್ದರು.
03143013a ತತಃ ಕಾರ್ಮುಕಮುದ್ಯಮ್ಯ ಭೀಮಸೇನೋ ಮಹಾಬಲಃ|
03143013c ಕೃಷ್ಣಾಮಾದಾಯ ಸಂಗತ್ಯಾ ತಸ್ಥಾವಾಶ್ರಿತ್ಯ ಪಾದಪಂ||
ಆಗ ಮಹಾಬಲಿ ಭೀಮಸೇನನು ತನ್ನ ಧನುಸ್ಸನ್ನು ಎತ್ತಿ ಹಿಡಿದು ಹೇಗೋ ಮಾಡಿ ದ್ರೌಪದಿಯನ್ನು ಹಿಡಿದುಕೊಂಡು ಒಂದು ಮರದ ಕೆಳಗೆ ಆಶ್ರಯಪಡೆದನು.
03143014a ಧರ್ಮರಾಜಶ್ಚ ಧೌಮ್ಯಶ್ಚ ನಿಲಿಲ್ಯಾತೇ ಮಹಾವನೇ|
03143014c ಅಗ್ನಿಹೋತ್ರಾಣ್ಯುಪಾದಾಯ ಸಹದೇವಸ್ತು ಪರ್ವತೇ||
ಧರ್ಮರಾಜ ಮತ್ತು ಧೌಮ್ಯರು ಮಹಾವನದಲ್ಲಿ ಮಲಗಿಕೊಂಡರು ಮತ್ತು ಅಗ್ನಿಹೋತ್ರವನ್ನು ಹಿಡಿದುಕೊಂಡಿದ್ದ ಸಹದೇವನು ಪರ್ವತದ ಮೇಲೆ ನಿಂತುಕೊಂಡನು.
03143015a ನಕುಲೋ ಬ್ರಾಹ್ಮಣಾಶ್ಚಾನ್ಯೇ ಲೋಮಶಶ್ಚ ಮಹಾತಪಾಃ|
03143015c ವೃಕ್ಷಾನಾಸಾದ್ಯ ಸಂತ್ರಸ್ತಾಸ್ತತ್ರ ತತ್ರ ನಿಲಿಲ್ಯಿರೇ||
ನಕುಲ, ಮಹಾತಪಸ್ವಿ ಲೋಮಶ ಮತ್ತು ಇತರ ಬ್ರಾಹ್ಮಣರು ಅಲ್ಲಾಡುತ್ತಿರುವ ಮರಗಳನ್ನು ಹಿಡಿದು ಅಲ್ಲಲ್ಲಿ ಮಲಗಿಕೊಂಡಿದ್ದರು.
03143016a ಮಂದೀಭೂತೇ ಚ ಪವನೇ ತಸ್ಮಿನ್ರಜಸಿ ಶಾಮ್ಯತಿ|
03143016c ಮಹದ್ಭಿಃ ಪೃಷತೈಸ್ತೂರ್ಣಂ ವರ್ಷಮಭ್ಯಾಜಗಾಮ ಹ||
ಆಗ ಗಾಳಿಯು ಕಡಿಮೆಯಾಗಿ, ಧೂಳು ಕೆಳಗೆ ಕುಳಿತುಕೊಳ್ಳಲು, ದೊಡ್ಡ ಮೋಡವೇ ಒಡೆದಂತೆ ಜೋರಾಗಿ ಧಾರಾಕಾರವಾಗಿ ಮಳೆಸುರಿಯಿತು.
03143017a ತತೋಽಶ್ಮಸಹಿತಾ ಧಾರಾಃ ಸಂವೃಣ್ವಂತ್ಯಃ ಸಮಂತತಃ|
03143017c ಪ್ರಪೇತುರನಿಶಂ ತತ್ರ ಶೀಘ್ರವಾತಸಮೀರಿತಾಃ||
ಆನೆಕಲ್ಲುಗಳ ಸಹಿತ ಭಿರುಗಾಳಿಯ ಹೊಡೆತಕ್ಕೆ ಸಿಕ್ಕು ಸುರಿಯುತ್ತಿರುವ ಮಳೆಯಿಂದ ತಕ್ಷಣವೇ ಭೂಮಿಯ ಮೇಲೆ ಎಲ್ಲಕಡೆಯಲ್ಲಿಯೂ ನೀರಿನ ಪ್ರವಾಹ ತುಂಬಿಕೊಂಡಿತು.
03143018a ತತಃ ಸಾಗರಗಾ ಆಪಃ ಕೀರ್ಯಮಾಣಾಃ ಸಮಂತತಃ|
03143018c ಪ್ರಾದುರಾಸನ್ಸಕಲುಸಾಃ ಫೇನವತ್ಯೋ ವಿಶಾಂ ಪತೇ||
ವಿಶಾಂಪತೇ! ನದಿಗಳು ನೀರಿನಿಂದ ತುಂಬಿಕೊಂಡು ಕೆಸರು ಮತ್ತು ನೊರೆಗಳಿಂದ ಕೂಡಿದ ನೀರಿನ ಪ್ರವಾಹಗಳು ಎಲ್ಲ ಕಡೆಯಿಂದಲೂ ಹರಿಯತೊಡಗಿದವು.
03143019a ವಹಂತ್ಯೋ ವಾರಿ ಬಹುಲಂ ಫೇನೋಡುಪಪರಿಪ್ಲುತಂ|
03143019c ಪರಿಸಸ್ರುರ್ಮಹಾಶಬ್ಧಾಃ ಪ್ರಕರ್ಷಂತ್ಯೋ ಮಹೀರುಹಾನ್||
ಜೋರಾಗಿ ರಭಸದಿಂದ ಹರಿಯುತ್ತಿರುವ ಆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಮರಗಳು ಮತ್ತು ಮಣ್ಣು ತುಂಬಿಕೊಂಡಿದ್ದವು.
03143020a ತಸ್ಮಿನ್ನುಪರತೇ ವರ್ಷೇ ವಾತೇ ಚ ಸಮತಾಂ ಗತೇ|
03143020c ಗತೇ ಹ್ಯಂಭಸಿ ನಿಮ್ನಾನಿ ಪ್ರಾದುರ್ಭೂತೇ ದಿವಾಕರೇ||
03143021a ನಿರ್ಜಗ್ಮುಸ್ತೇ ಶನೈಃ ಸರ್ವೇ ಸಮಾಜಗ್ಮುಶ್ಚ ಭಾರತ|
03143021c ಪ್ರತಸ್ಥುಶ್ಚ ಪುನರ್ವೀರಾಃ ಪರ್ವತಂ ಗಂಧಮಾದನಂ||
ಮಳೆಯು ನಿಂತು, ಗಾಳಿಯು ಕಡಿಮೆಯಾಗಿ, ನೀರು ಕೆಳಗೆ ಹರಿದು ಹೋದ ನಂತರ ಸೂರ್ಯನು ಪುನಃ ಕಾಣಿಸಿಕೊಂಡನು ಮತ್ತು ಆ ವೀರರೆಲ್ಲರೂ ಮತ್ತೆ ಒಂದುಗೂಡಿಕೊಂಡು ಗಂಧಮಾದನ ಪರ್ವತವನ್ನು ಏರತೊಡಗಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ತ್ರಿಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತ್ಮೂರನೆಯ ಅಧ್ಯಾಯವು.