Aranyaka Parva: Chapter 142

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೪೨

ಅರ್ಜುನನಿಲ್ಲದ ಶೋಕವನ್ನು ವ್ಯಕ್ತಪಡಿಸುತ್ತಾ ಯುಧಿಷ್ಠಿರನು ಗಂಧಮಾದನ ಪರ್ವತವನ್ನು ಪ್ರವೇಶಿಸಿದುದು (೧-೨೮).

03142001 ಯುಧಿಷ್ಠಿರ ಉವಾಚ|

03142001a ಭೀಮಸೇನ ಯಮೌ ಚೋಭೌ ಪಾಂಚಾಲಿ ಚ ನಿಬೋಧತ|

03142001c ನಾಸ್ತಿ ಭೂತಸ್ಯ ನಾಶೋ ವೈ ಪಶ್ಯತಾಸ್ಮಾನ್ವನೇಚರಾನ್||

ಯುಧಿಷ್ಠಿರನು ಹೇಳಿದನು: “ಭೀಮಸೇನ! ನಕುಲ ಸಹದೇವರೇ! ಮತ್ತು ಪಾಂಚಾಲಿ ದ್ರೌಪದಿ! ಕೇಳಿರಿ. ವನದಲ್ಲಿ ನಡೆಯುತ್ತಿರುವ ನಮ್ಮನ್ನು ನೋಡಿಕೊಳ್ಳಿ. ಹಿಂದಿನದು ನಾಶವಾಗುವುದಿಲ್ಲ.

03142002a ದುರ್ಬಲಾಃ ಕ್ಲೇಶಿತಾಃ ಸ್ಮೇತಿ ಯದ್ಬ್ರವೀಥೇತರೇತರಂ|

03142002c ಅಶಕ್ಯೇಽಪಿ ವ್ರಜಾಮೇತಿ ಧನಂಜಯದಿದೃಕ್ಷಯಾ||

ನಾವು ದುರ್ಬಲರೆಂದು, ನೋವಿಗೊಳಗಾದವರೆಂದೂ ಪರಸ್ಪರರಲ್ಲಿ ಹೇಳಿಕೊಳ್ಳಬಹುದು. ಆದರೂ ಧನಂಜಯನನ್ನು ನೋಡಲು ನಾವು ಅಶಕ್ಯರಾದರೂ ಈ ಪ್ರಯಾಣವನ್ನು ಮಾಡುತ್ತಿದ್ದೇವೆ.

03142003a ತನ್ಮೇ ದಹತಿ ಗಾತ್ರಾಣಿ ತೂಲರಾಶಿಮಿವಾನಲಃ|

03142003c ಯಚ್ಚ ವೀರಂ ನ ಪಶ್ಯಾಮಿ ಧನಂಜಯಮುಪಾಂತಿಕೇ||

ವೀರ ಧನಂಜಯನು ನಮ್ಮ ಹತ್ತಿರ ಕಾಣುತ್ತಿಲ್ಲವೆನ್ನುವುದು ನನ್ನ ದೇಹವನ್ನು ಅಗ್ನಿಯು ಹತ್ತಿಯ ರಾಶಿಯನ್ನು ಸುಡುವಂತೆ ಸುಡುತ್ತಿದೆ.

03142004a ತಸ್ಯ ದರ್ಶನತೃಷ್ಣಂ ಮಾಂ ಸಾನುಜಂ ವನಮಾಸ್ಥಿತಂ|

03142004c ಯಾಜ್ಞಸೇನ್ಯಾಃ ಪರಾಮರ್ಶಃ ಸ ಚ ವೀರ ದಹತ್ಯುತ||

ವೀರ! ಅವನನ್ನು ನೋಡುವ ತವಕ, ಅನುಜರೊಂದಿಗೆ ವನದಲ್ಲಿರುವುದು, ಯಾಜ್ಞಸೇನಿ ದ್ರೌಪದಿಯ ಮಾನಭಂಗ ಇವು ನನ್ನನ್ನು ಸುಡುತ್ತಿವೆ.

03142005a ನಕುಲಾತ್ಪೂರ್ವಜಂ ಪಾರ್ಥಂ ನ ಪಶ್ಯಾಮ್ಯಮಿತೌಜಸಂ|

03142005c ಅಜೇಯಮುಗ್ರಧನ್ವಾನಂ ತೇನ ತಪ್ಯೇ ವೃಕೋದರ||

ವೃಕೋದರ! ನಕುಲನ ಮೊದಲು ಹುಟ್ಟಿದ ಆ ಅಮಿತ ತೇಜಸ್ವಿ, ಅಜೇಯ, ಉಗ್ರಧನ್ವಿ ಪಾರ್ಥನನ್ನು ನೋಡದೇ ಪರಿತಪಿಸುತ್ತಿದ್ದೇನೆ.

03142006a ತೀರ್ಥಾನಿ ಚೈವ ರಮ್ಯಾಣಿ ವನಾನಿ ಚ ಸರಾಂಸಿ ಚ|

03142006c ಚರಾಮಿ ಸಹ ಯುಷ್ಮಾಭಿಸ್ತಸ್ಯ ದರ್ಶನಕಾಂಕ್ಷಯಾ||

ನಿಮ್ಮ ಒಟ್ಟಿಗೇ, ಅವನನ್ನು ಕಾಣುವ ಆಸೆಯಿಂದ, ತೀರ್ಥಗಳಿಗೂ, ರಮ್ಯ ವನಗಳಿಗೂ, ಸರೋವರಗಳಿಗೂ ಹೋಗಿದ್ದೇನೆ.

03142007a ಪಂಚ ವರ್ಷಾಣ್ಯಹಂ ವೀರಂ ಸತ್ಯಸಂಧಂ ಧನಂಜಯಂ|

03142007c ಯನ್ನ ಪಶ್ಯಾಮಿ ಬೀಭತ್ಸುಂ ತೇನ ತಪ್ಯೇ ವೃಕೋದರ||

ವೀರ ಸತ್ಯಸಂಧ ಧನಂಜಯನನ್ನು ನೋಡದೇ ಐದು ವರ್ಷಗಳಾಯಿತು. ವೃಕೋದರ! ಬೀಭತ್ಸುವನ್ನು ನೋಡದೇ ಪರಿತಪಿಸುತ್ತಿದ್ದೇನೆ.

03142008a ತಂ ವೈ ಶ್ಯಾಮಂ ಗುಡಾಕೇಶಂ ಸಿಂಹವಿಕ್ರಾಂತಗಾಮಿನಂ|

03142008c ನ ಪಶ್ಯಾಮಿ ಮಹಾಬಾಹುಂ ತೇನ ತಪ್ಯೇ ವೃಕೋದರ||

ವೃಕೋದರ! ಆ ಶ್ಯಾಮವರ್ಣದ ಗುಡಾಕೇಶನನ್ನು, ಸಿಂಹದ ವಿಕ್ರಾಂತ ನಡುಗೆಯುಳ್ಳ ಅ ಮಹಾಬಾಹುವನ್ನು ನೋಡದೇ ನಾನು ಪರಿತಪಿಸುತ್ತಿದ್ದೇನೆ.

03142009a ಕೃತಾಸ್ತ್ರಂ ನಿಪುಣಂ ಯುದ್ಧೇ ಪ್ರತಿಮಾನಂ ಧನುಷ್ಮತಾಂ|

03142009c ನ ಪಶ್ಯಾಮಿ ನರಶ್ರೇಷ್ಠಂ ತೇನ ತಪ್ಯೇ ವೃಕೋದರ||

ವೃಕೋದರ! ಆ ನರಶ್ರೇಷ್ಠ, ಅಸ್ತ್ರಗಳನ್ನು ಸಿದ್ಧಿಮಾಡಿಕೊಂಡಿರುವ ಯುದ್ಧದಲ್ಲಿ ಅಪ್ರತಿಮನಾದ, ಧನುಷ್ಮಂತನನ್ನು ನೋಡದೇ ಪರಿತಪಿಸುತ್ತೇನೆ.

03142010a ಚರಂತಮರಿಸಂಘೇಷು ಕಾಲಂ ಕ್ರುದ್ಧಮಿವಾಂತಕಂ|

03142010c ಪ್ರಭಿನ್ನಮಿವ ಮಾತಂಗಂ ಸಿಂಹಸ್ಕಂಧಂ ಧನಂಜಯಂ||

ಆ ಸಿಂಹಸ್ಕಂಧ ಧನಂಜಯನು ತನ್ನ ಶತ್ರುಗಳ ನಡುವೆ ಕೋಪಗೊಂಡ ಅಂತಕ ಕಾಲನಂತೆ ಮತ್ತು ಮದವೇರಿದ ಆನೆಯಂತೆ ನಡೆಯುತ್ತಾನೆ.

03142011a ಯಃ ಸ ಶಕ್ರಾದನವರೋ ವೀರ್ಯೇಣ ದ್ರವಿಣೇನ ಚ|

03142011c ಯಮಯೋಃ ಪೂರ್ವಜಃ ಪಾರ್ಥಃ ಶ್ವೇತಾಶ್ವೋಽಮಿತವಿಕ್ರಮಃ||

03142012a ದುಃಖೇನ ಮಹತಾವಿಷ್ಟಃ ಸ್ವಕೃತೇನಾನಿವರ್ತಿನಾ|

03142012c ಅಜೇಯಮುಗ್ರಧನ್ವಾನಂ ತಂ ನ ಪಶ್ಯಾಮಿ ಫಲ್ಗುನಂ||

ನಾನೇ ಹಿಂದೆ ಮಾಡಿದ ತಪ್ಪುಗಳಿಂದಾಗಿ ವೀರ್ಯ ಮತ್ತು ಶಕ್ತಿಯಲ್ಲಿ ಶಕ್ರನಿಗೂ ಕಡಿಮೆಯಿಲ್ಲದ, ಅವಳಿಗಳಾದ ನಕುಲ ಸಹದೇವರ ಅಣ್ಣ ಶ್ವೇತಾಶ್ವ, ಅಮಿತವಿಕ್ರಮಿ, ಅಜೇಯ, ಉಗ್ರಧನ್ವಿ, ಪಾರ್ಥ ಫಲ್ಗುನನನ್ನು ನಾನು ನೋಡಲಿಕ್ಕಾಗುವುದಿಲ್ಲ ಎಂದು ಮಹಾ ದುಃಖವು ನನ್ನನ್ನು ಆವರಿಸಿದೆ.

03142013a ಸತತಂ ಯಃ ಕ್ಷಮಾಶೀಲಃ ಕ್ಷಿಪ್ಯಮಾಣೋಽಪ್ಯಣೀಯಸಾ|

03142013c ಋಜುಮಾರ್ಗಪ್ರಪನ್ನಸ್ಯ ಶರ್ಮದಾತಾಭಯಸ್ಯ ಚ||

03142014a ಸ ತು ಜಿಹ್ಮಪ್ರವೃತ್ತಸ್ಯ ಮಾಯಯಾಭಿಜಿಘಾಂಸತಃ|

03142014c ಅಪಿ ವಜ್ರಧರಸ್ಯಾಪಿ ಭವೇತ್ಕಾಲವಿಷೋಪಮಃ||

ತನಗಿಂತಲೂ ಕೀಳಾಗಿರುವವನು ಅಪಮಾನಿಸಿದರೂ ಅವನು ಯಾವಾಗಲೂ ಕ್ಷಮಾಶೀಲನು. ಸರಿಯಾದ ಮಾರ್ಗದಲ್ಲಿ ನಡೆಯುವವರಿಗೆ ಅವನು ಆಶ್ರಯ ಮತ್ತು ರಕ್ಷಣೆಯನ್ನು ನೀಡುವವನು. ಆದರೆ ಕೆಟ್ಟದಾಗಿ ಮಾತನಾಡುವವರಿಗೆ ಮತ್ತು ಮೋಸದಿಂದ ಕೊಲ್ಲಲು ಪ್ರಯತ್ನಿಸುವವರಿಗೆ ಅವನು ವಜ್ರಧರ ಇಂದ್ರನಿಗಿಂತಲೂ ಹೆಚ್ಚಿನ ಕಾಲವಿಷದಂತೆ.

03142015a ಶತ್ರೋರಪಿ ಪ್ರಪನ್ನಸ್ಯ ಸೋಽನೃಶಂಸಃ ಪ್ರತಾಪವಾನ್|

03142015c ದಾತಾಭಯಸ್ಯ ಬೀಭತ್ಸುರಮಿತಾತ್ಮಾ ಮಹಾಬಲಃ||

ಶತ್ರುವೂ ಶರಣುಬಂದರೆ ಆ ಪ್ರತಾಪಿ, ಅಮಿತಾತ್ಮ, ಮಹಾಬಲಿ ಬೀಭತ್ಸುವು ಅವರಿಗೆ ಕರುಣೆತೋರಿಸಿ ಅಭಯವನ್ನು ನೀಡುತ್ತಾನೆ.

03142016a ಸರ್ವೇಷಾಮಾಶ್ರಯೋಽಸ್ಮಾಕಂ ರಣೇಽರೀಣಾಂ ಪ್ರಮರ್ದಿತಾ|

03142016c ಆಹರ್ತಾ ಸರ್ವರತ್ನಾನಾಂ ಸರ್ವೇಷಾಂ ನಃ ಸುಖಾವಹಃ||

ಅವನು ನಮ್ಮೆಲ್ಲರ ಆಶ್ರಯ. ರಣದಲ್ಲಿ ಅರಿಗಳನ್ನು ಸದೆಬಡಿಯುವವನು ಎಲ್ಲ ರತ್ನಗಳನ್ನೂ ತಂದು ನಮ್ಮೆಲ್ಲರಿಗೆ ಸುಖವನ್ನು ನೀಡಿದವನು.

03142017a ರತ್ನಾನಿ ಯಸ್ಯ ವೀರ್ಯೇಣ ದಿವ್ಯಾನ್ಯಾಸನ್ಪುರಾ ಮಮ|

03142017c ಬಹೂನಿ ಬಹುಜಾತಾನಿ ಯಾನಿ ಪ್ರಾಪ್ತಃ ಸುಯೋಧನಃ||

ಅವನ ವೀರ್ಯದಿಂದ ಹಿಂದೆ ನಾನು ಬಹಳಷ್ಟು ಬಹುಜಾತಿಯ ದಿವ್ಯ ರತ್ನಗಳನ್ನು ಪಡೆದಿದ್ದೆ. ಅವೆಲ್ಲವೂ ಸುಯೋಧನನಿಗೆ ಪ್ರಾಪ್ತವಾಗಿವೆ.

03142018a ಯಸ್ಯ ಬಾಹುಬಲಾದ್ವೀರ ಸಭಾ ಚಾಸೀತ್ಪುರಾ ಮಮ|

03142018c ಸರ್ವರತ್ನಮಯೀ ಖ್ಯಾತಾ ತ್ರಿಷು ಲೋಕೇಷು ಪಾಂಡವ||

ವೀರ! ಪಾಂಡವ! ಅವನ ಬಾಹುಬಲದಿಂದ ಹಿಂದೆ ನನ್ನಲ್ಲಿ ಎಲ್ಲೆಲ್ಲೂ ರತ್ನಗಳಿಂದ ತುಂಬಿದ ಮೂರು ಲೋಕಗಳಲ್ಲಿಯೂ ವಿಖ್ಯಾತವಾಗಿದ್ದ ಸಭೆಯಿತ್ತು.

03142019a ವಾಸುದೇವಸಮಂ ವೀರ್ಯೇ ಕಾರ್ತವೀರ್ಯಸಮಂ ಯುಧಿ|

03142019c ಅಜೇಯಮಜಿತಂ ಯುದ್ಧೇ ತಂ ನ ಪಶ್ಯಾಮಿ ಫಲ್ಗುನಂ||

ವೀರ್ಯದಲ್ಲಿ ವಾಸುದೇವ ಕೃಷ್ಣನ ಸಮನಾದ, ಯುದ್ಧದಲ್ಲಿ ಕಾರ್ತವೀರ್ಯನ ಸಮನಾದ, ಯುದ್ಧದ ಅಜೇಯನೂ ಗೆಲ್ಲಲಸಾಧ್ಯನೂ ಆದ ಆ ಫಲ್ಗುನನನ್ನು ಕಾಣುತ್ತಿಲ್ಲವಲ್ಲ!

03142020a ಸಂಕರ್ಷಣಂ ಮಹಾವೀರ್ಯಂ ತ್ವಾಂ ಚ ಭೀಮಾಪರಾಜಿತಂ|

03142020c ಅನುಜಾತಃ ಸ ವೀರ್ಯೇಣ ವಾಸುದೇವಂ ಚ ಶತ್ರುಹಾ||

ಆ ಶತ್ರುಹನು ಮಹಾವೀರ ಸಂಕರ್ಷಣ ಬಲರಾಮನ, ಅಪರಾಜಿತನಾದ ಭೀಮ ನಿನ್ನ, ಮತ್ತು ವಾಸುದೇವನ ನಂತರ ಹುಟ್ಟಿದನು.

03142021a ಯಸ್ಯ ಬಾಹುಬಲೇ ತುಲ್ಯಃ ಪ್ರಭಾವೇ ಚ ಪುರಂದರಃ|

03142021c ಜವೇ ವಾಯುರ್ಮುಖೇ ಸೋಮಃ ಕ್ರೋಧೇ ಮೃತ್ಯುಃ ಸನಾತನಃ||

ಪುರಂದರ ಇಂದ್ರನೂ ಕೂಡ ಅವನ ಬಾಹುಬಲ-ಪ್ರಭಾವಗಳಿಗೆ, ವಾಯುವು ಅವನ ವೇಗಕ್ಕೆ, ಚಂದ್ರನು ಅವನ ಸೌಂದರ್ಯಕ್ಕೆ ಮತ್ತು ಸನಾತನನಾದ ಮೃತ್ಯುವೂ ಅವನ ಕ್ರೋಧಕ್ಕೆ ಸರಿಸಮರಲ್ಲ!

03142022a ತೇ ವಯಂ ತಂ ನರವ್ಯಾಘ್ರಂ ಸರ್ವೇ ವೀರ ದಿದೃಕ್ಷವಃ|

03142022c ಪ್ರವೇಕ್ಷ್ಯಾಮೋ ಮಹಾಬಾಹೋ ಪರ್ವತಂ ಗಂಧಮಾದನಂ||

03142023a ವಿಶಾಲಾ ಬದರೀ ಯತ್ರ ನರನಾರಾಯಣಾಶ್ರಮಃ|

ವೀರ! ಮಹಾಬಾಹೋ! ಆ ನರವ್ಯಾಘ್ರನನ್ನು ಕಾಣಲೋಸುಗ ನಾವೆಲ್ಲರೂ, ವಿಶಾಲ ಬದರೀ ವೃಕ್ಷವೂ ನರ-ನಾರಾಯಣರ ಆಶ್ರಮವೂ ಇರುವ ಗಂಧಮಾದನ ಪರ್ವತವನ್ನು ಪ್ರವೇಶಿಸೋಣ.

03142023c ತಂ ಸದಾಧ್ಯುಷಿತಂ ಯಕ್ಷೈರ್ದ್ರಕ್ಷ್ಯಾಮೋ ಗಿರಿಮುತ್ತಮಂ||

03142024a ಕುಬೇರನಲಿನೀಂ ರಮ್ಯಾಂ ರಾಕ್ಷಸೈರಭಿರಕ್ಷಿತಾಂ|

03142024c ಪದ್ಭಿರೇವ ಗಮಿಷ್ಯಾಮಸ್ತಪ್ಯಮಾನಾ ಮಹತ್ತಪಃ||

ಸದಾ ಯಕ್ಷರಿಂದೊಡಗೂಡಿದ, ರಾಕ್ಷಸರ ರಕ್ಷಣೆಯಲ್ಲಿರುವ ಕುಬೇರನ ಸುಂದರ ತಾವರೆಯ ಕೊಳವನ್ನುಳ್ಳ ನಾವು ನೋಡುತ್ತಿರುವ ಆ ಉತ್ತಮ ಗಿರಿಗೆ ಮಹಾತಪಸ್ಸಿನಲ್ಲಿ ನಿರತರಾಗಿ ಕಾಲ್ನಡುಗೆಯಲ್ಲಿಯೇ ಹೋಗೋಣ.

03142025a ನಾತಪ್ತತಪಸಾ ಶಕ್ಯೋ ದೇಶೋ ಗಂತುಂ ವೃಕೋದರ|

03142025c ನ ನೃಶಂಸೇನ ಲುಬ್ಧೇನ ನಾಪ್ರಶಾಂತೇನ ಭಾರತ||

ವೃಕೋದರ! ತಪಸ್ಸನ್ನು ತಪಿಸದೇ ಇದ್ದವನಿಂದ, ಕ್ರೂರಿಯಾದವನಿಂದ, ಆಸೆಬುರುಕನಾದವನಿಂದ, ಮತ್ತು ಶಾಂತನಾಗಿಲ್ಲದಿರುವವನಿಂದ ಆ ಪ್ರದೇಶಕ್ಕೆ ಹೋಗಲು ಶಕ್ಯವಿಲ್ಲ. ಭಾರತ!

03142026a ತತ್ರ ಸರ್ವೇ ಗಮಿಷ್ಯಾಮೋ ಭೀಮಾರ್ಜುನಪದೈಷಿಣಃ|

03142026c ಸಾಯುಧಾ ಬದ್ಧನಿಸ್ತ್ರಿಂಶಾಃ ಸಹ ವಿಪ್ರೈರ್ಮಹಾವ್ರತೈಃ||

ಭೀಮ! ಅಲ್ಲಿಗೆ ನಾವೆಲ್ಲರೂ ಅರ್ಜುನನ ಹೆಜ್ಜೆಗುರುತುಗಳನ್ನೇ ಹಿಡಿದು ಆಯುಧಗಳೊಂದಿಗೆ ಖಡ್ಗಗಳನ್ನು ಕಟ್ಟಿಕೊಂಡು ಮಹಾವ್ರತರಾದ ಬ್ರಾಹ್ಮಣರೊಂದಿಗೆ ಹೋಗೋಣ.

03142027a ಮಕ್ಷಿಕಾನ್ಮಶಕಾನ್ದಂಶಾನ್ವ್ಯಾಘ್ರಾನ್ಸಿಂಹಾನ್ಸರೀಸೃಪಾನ್|

03142027c ಪ್ರಾಪ್ನೋತ್ಯನಿಯತಃ ಪಾರ್ಥ ನಿಯತಸ್ತಾನ್ನ ಪಶ್ಯತಿ||

ನಿಯತ್ತಾಗಿ ಇಲ್ಲದಿರುವವರಿಗೆ ನೊಣ, ನುಸಿ, ಹುಲಿ, ಸಿಂಹ ಮತ್ತು ಹಾವುಗಳು ಕಾಣುತ್ತವೆ. ಆದೇ ನಿಯತರಾಗಿದ್ದವರಿಗೆ ಏನೂ ಕಾಣುವುದಿಲ್ಲ ಪಾರ್ಥ!

03142028a ತೇ ವಯಂ ನಿಯತಾತ್ಮಾನಃ ಪರ್ವತಂ ಗಂಧಮಾದನಂ|

03142028c ಪ್ರವೇಕ್ಷ್ಯಾಮೋ ಮಿತಾಹಾರಾ ಧನಂಜಯದಿದೃಕ್ಷವಃ||

ಆದುದರಿಂದ ನಾವು ನಿಯತಾತ್ಮರಾಗಿದ್ದುಕೊಂಡು, ಮಿತಾಹಾರಿಗಳಾಗಿದ್ದುಕೊಂಡು ಧನಂಜಯನನ್ನು ನೋಡಲು ಗಂಧಮಾದನ ಪರ್ವತವನ್ನು ಪ್ರವೇಶಿಸೋಣ[1].””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ದ್ವಿಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತೆರಡನೆಯ ಅಧ್ಯಾಯವು.

Image result for indian motifs cranes

[1]ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯದ ನಂತರ ಅಧ್ಯಾಯ ೧೪೨ರಲ್ಲಿ ನರಕಾಸುರ ವಧೆಯ ಕುರಿತು ಲೋಮಶನು ಯುಧಿಷ್ಠಿರನಿಗೆ ಹೇಳಿದ ಕಥೆಯಿದೆ. ಪುಣೆಯ ಸಂಪುಟದಲ್ಲಿರದ ಇದನ್ನು ಅನುಬಂಧದಲ್ಲಿ ನೀಡಲಾಗಿದೆ.

Comments are closed.