ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೧
ಪಾಂಡವರು ದ್ರೌಪದಿಯೊಡನೆ ಸುಬಾಹುವಿನ ರಾಜ್ಯವನ್ನು ದಾಟಿ ಮುಂದುವರೆದುದು (೧-೩೦).
03141001 ಯುಧಿಷ್ಠಿರ ಉವಾಚ|
03141001a ಅಂತರ್ಹಿತಾನಿ ಭೂತಾನಿ ರಕ್ಷಾಂಸಿ ಬಲವಂತಿ ಚ|
03141001c ಅಗ್ನಿನಾ ತಪಸಾ ಚೈವ ಶಕ್ಯಂ ಗಂತುಂ ವೃಕೋದರ||
ಯುಧಿಷ್ಠಿರನು ಹೇಳಿದನು: “ವೃಕೋದರ! ಅಂತರ್ಹಿತ ಭೂತಗಳು ಮತ್ತು ಬಲಾನ್ವಿತ ರಾಕ್ಷಸರಿದ್ದಾರೆ. ಅಗ್ನಿ ಮತ್ತು ತಪಸ್ಸಿನಿಂದ ಹೋಗಲು ಶಕ್ಯರಾಗುತ್ತೇವೆ.
03141002a ಸನ್ನಿವರ್ತಯ ಕೌಂತೇಯ ಕ್ಷುತ್ಪಿಪಾಸೇ ಬಲಾನ್ವಯಾತ್|
03141002c ತತೋ ಬಲಂ ಚ ದಾಕ್ಷ್ಯಂ ಚ ಸಂಶ್ರಯಸ್ವ ಕುರೂದ್ವಹ||
ಕೌಂತೇಯ! ಬಲವನ್ನುಪಯೋಗಿಸಿ ಹಸಿವೆ ಬಾಯಾರಿಕೆಗಳನ್ನು ನಿವಾರಿಸು. ಕುರೂದ್ವಹ! ಆದುದರಿಂದ ನಿನ್ನ ಬಲ ಮತ್ತು ದಕ್ಷತೆಯನ್ನು ಅವಲಂಬಿಸು.
03141003a ಋಷೇಸ್ತ್ವಯಾ ಶ್ರುತಂ ವಾಕ್ಯಂ ಕೈಲಾಸಂ ಪರ್ವತಂ ಪ್ರತಿ|
03141003c ಬುದ್ಧ್ಯಾ ಪ್ರಪಶ್ಯ ಕೌಂತೇಯ ಕಥಂ ಕೃಷ್ಣಾ ಗಮಿಷ್ಯತಿ||
ಕೌಂತೇಯ! ಕೈಲಾಸ ಪರ್ವತದ ಕುರಿತು ಕೇಳಿದ ಋಷಿಯ ಮಾತುಗಳನ್ನು ಮನಸ್ಸಿನಲ್ಲಿಯೇ ಚರ್ಚೆಮಾಡಿ, ಕೃಷ್ಣೆಯು ಹೇಗೆ ಹೋಗುತ್ತಾಳೆ ಎನ್ನುವುದನ್ನು ಯೋಚಿಸು.
03141004a ಅಥ ವಾ ಸಹದೇವೇನ ಧೌಮ್ಯೇನ ಚ ಸಹಾಭಿಭೋ|
03141004c ಸೂದೈಃ ಪೌರೋಗವೈಶ್ಚೈವ ಸರ್ವೈಶ್ಚ ಪರಿಚಾರಕೈಃ||
03141005a ರಥೈರಶ್ವೈಶ್ಚ ಯೇ ಚಾನ್ಯೇ ವಿಪ್ರಾಃ ಕ್ಲೇಶಾಸಹಾಃ ಪಥಿ|
03141005c ಸರ್ವೈಸ್ತ್ವಂ ಸಹಿತೋ ಭೀಮ ನಿವರ್ತಸ್ವಾಯತೇಕ್ಷಣ||
03141006a ತ್ರಯೋ ವಯಂ ಗಮಿಷ್ಯಾಮೋ ಲಘ್ವಾಹಾರಾ ಯತವ್ರತಾಃ|
03141006c ಅಹಂ ಚ ನಕುಲಶ್ಚೈವ ಲೋಮಶಶ್ಚ ಮಹಾತಪಾಃ||
ವಿಭೋ! ಭೀಮ! ಆಯತೇಕ್ಷಣ! ಅವಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ನೀನು ಯೋಚಿಸಿದರೆ ಸಹದೇವ ಮತ್ತು ಧೌಮ್ಯರೊಡನೆ ಅಡುಗೆಯವರನ್ನು, ಎಲ್ಲ ಸೇವಕರೂ, ಪರಿಚಾರಕರು, ರಥಗಳು, ಕುದುರೆಗಳು ಮತ್ತು ಮುಂದಿನ ಪ್ರಯಾಣದ ಕಷ್ಟಗಳನ್ನು ಸಹಿಸಲು ಅಶಕ್ತರಾದ ಇತರ ವಿಪ್ರರು ಇವರೆಲ್ಲರೊಂದಿಗೆ ಹಿಂದಿರುಗು. ನಾವು ಮೂವರು - ನಾನು, ನಕುಲ ಮತ್ತು ಮಹಾತಪಸ್ವಿ ಲೋಮಶರು - ಅಲ್ಪಾಹಾರಿಗಳಾಗಿ, ಯತವ್ರತರಾಗಿ ಮುಂದುವರೆಯುತ್ತೇವೆ.
03141007a ಮಮಾಗಮನಮಾಕಾಂಕ್ಷನ್ಗಂಗಾದ್ವಾರೇ ಸಮಾಹಿತಃ|
03141007c ವಸೇಹ ದ್ರೌಪದೀಂ ರಕ್ಷನ್ಯಾವದಾಗಮನಂ ಮಮ||
ಗಂಗಾದ್ವಾರದಲ್ಲಿ ದ್ರೌಪದಿಯನ್ನು ರಕ್ಷಿಸಿಕೊಂಡು ನಾನು ಬರುವವರೆಗೆ ವಾಸಿಸಿಕೊಂಡಿರು. ನನ್ನ ಬರವನ್ನೇ ನಿರೀಕ್ಷಿಸಿಕೊಂಡಿರು.”
03141008 ಭೀಮ ಉವಾಚ|
03141008a ರಾಜಪುತ್ರೀ ಶ್ರಮೇಣಾರ್ತಾ ದುಃಖಾರ್ತಾ ಚೈವ ಭಾರತ|
03141008c ವ್ರಜತ್ಯೇವ ಹಿ ಕಲ್ಯಾಣೀ ಶ್ವೇತವಾಹದಿದೃಕ್ಷಯಾ||
ಭೀಮನು ಹೇಳಿದನು: “ಭಾರತ! ರಾಜಪುತ್ರಿಯು ಆಯಾಸಗೊಂಡವಳೂ ದುಃಖಾರ್ತಳೂ ಆಗಿದ್ದಾಳೆ. ಆದರೂ ಈ ಕಲ್ಯಾಣಿಯು ಶ್ವೇತವಾಹನ ಅರ್ಜುನನನ್ನು ನೋಡಲೋಸುಗ ಖಂಡಿತವಾಗಿಯೂ ಪ್ರಯಾಣಮಾಡುತ್ತಾಳೆ.
03141009a ತವ ಚಾಪ್ಯರತಿಸ್ತೀವ್ರಾ ವರ್ಧತೇ ತಮಪಶ್ಯತಃ|
03141009c ಕಿಂ ಪುನಃ ಸಹದೇವಂ ಚ ಮಾಂ ಚ ಕೃಷ್ಣಾಂ ಚ ಭಾರತ||
ಭಾರತ! ಅರ್ಜುನನನ್ನು ನೋಡದೇ ನಿನಗಾಗಿರುವ ದುಃಖಕ್ಕಿಂತಲೂ ಹೆಚ್ಚು ದುಃಖವು ನನಗೂ, ಸಹದೇವನಿಗೂ ಮತ್ತು ಕೃಷ್ಣೆಗೂ ಆಗಿರುವುದು.
03141010a ರಥಾಃ ಕಾಮಂ ನಿವರ್ತಂತಾಂ ಸರ್ವೇ ಚ ಪರಿಚಾರಕಾಃ|
03141010c ಸೂದಾಃ ಪೌರೋಗವಾಶ್ಚೈವ ಮನ್ಯತೇ ಯತ್ರ ನೋ ಭವಾನ್||
ನಿನ್ನ ಅಭಿಪ್ರಾಯದಂತೆ ಬೇಕಾದರೆ ರಥಗಳು, ಎಲ್ಲ ಪರಿಚಾರಕರೂ, ಅಡುಗೆಯವರೂ ಮತ್ತು ಅವರ ಮೇಲ್ವಿಚಾರಕರೂ ಹಿಂದಿರುಗಲಿ.
03141011a ನ ಹ್ಯಹಂ ಹಾತುಮಿಚ್ಚಾಮಿ ಭವಂತಮಿಹ ಕರ್ಹಿ ಚಿತ್|
03141011c ಶೈಲೇಽಸ್ಮಿನ್ರಾಕ್ಷಸಾಕೀರ್ಣೇ ದುರ್ಗೇಷು ವಿಷಮೇಷು ಚ||
ನಾನೂ ಕೂಡ ನಿನ್ನನ್ನು ಈ ರಾಕ್ಷಸರಿಂದ ತುಂಬಿದ, ವಿಷಮ ದುರ್ಗಗಳಿಂದ ಕೂಡಿದ ಪರ್ವತದ ಮೇಲೆ ಬಿಟ್ಟುಬಿಡಲು ಇಚ್ಛಿಸುವುದಿಲ್ಲ.
03141012a ಇಯಂ ಚಾಪಿ ಮಹಾಭಾಗಾ ರಾಜಪುತ್ರೀ ಯತವ್ರತಾ|
03141012c ತ್ವಾಮೃತೇ ಪುರುಷವ್ಯಾಘ್ರ ನೋತ್ಸಹೇದ್ವಿನಿವರ್ತಿತುಂ||
03141013a ತಥೈವ ಸಹದೇವೋಽಯಂ ಸತತಂ ತ್ವಾಮನುವ್ರತಃ|
03141013c ನ ಜಾತು ವಿನಿವರ್ತೇತ ಮತಜ್ಞೋ ಹ್ಯಹಮಸ್ಯ ವೈ||
ಪುರುಷವ್ಯಾಘ್ರ! ಈ ಮಹಾಭಾಗೆ, ಯತವ್ರತೆ ರಾಜಪುತ್ರಿಯೂ ಕೂಡ ನೀನಿಲ್ಲದೇ ಹಿಂದಿರುಗಲು ಇಷ್ಟಪಡುವುದಿಲ್ಲ. ಹಾಗೆಯೇ ನಿನ್ನ ಸತತ ಅನುವ್ರತನಾದ ಈ ಸಹದೇವನೂ ಕೂಡ ಹಿಂದಿರುಗಲು ಬಯಸುವುದಲ್ಲ. ಅವನ ಮನಸ್ಸು ಇದೇ ಎಂದು ನನಗೆ ಗೊತ್ತು.
03141014a ಅಪಿ ಚಾತ್ರ ಮಹಾರಾಜ ಸವ್ಯಸಾಚಿದಿದೃಕ್ಷಯಾ|
03141014c ಸರ್ವೇ ಲಾಲಸಭೂತಾಃ ಸ್ಮ ತಸ್ಮಾದ್ಯಾಸ್ಯಾಮಹೇ ಸಹ||
ಮಹಾರಾಜ! ಅದೂ ಅಲ್ಲದೇ ನಾವೆಲ್ಲರೂ ಕೂಡ ಸವ್ಯಸಾಚಿ ಅರ್ಜುನನನ್ನು ನೋಡಲು ಲಾಲಸರಾಗಿದ್ದೇವೆ. ಆದುದರಿಂದ ನಾವೆಲ್ಲರೂ ಒಟ್ಟಿಗೇ ಪ್ರಯಾಣಮಾಡೋಣ.
03141015a ಯದ್ಯಶಕ್ಯೋ ರಥೈರ್ಗಂತುಂ ಶೈಲೋಽಯಂ ಬಹುಕಂದರಃ|
03141015c ಪದ್ಭಿರೇವ ಗಮಿಷ್ಯಾಮೋ ಮಾ ರಾಜನ್ವಿಮನಾ ಭವ||
ಬಹಳಷ್ಟು ಕಂದರಗಳಿಂದ ಕೂಡಿದ ಈ ಪರ್ವತವನ್ನು ರಥಗಳ ಮೇಲೆ ಹೋಗಲು ಸಾಧ್ಯವಿಲ್ಲ. ರಾಜನ್! ಕಾಲ್ನಡುಗೆಯಲ್ಲಿಯೇ ಹೋಗೋಣ. ಚಿಂತಿಸಬೇಡ.
03141016a ಅಹಂ ವಹಿಷ್ಯೇ ಪಾಂಚಾಲೀಂ ಯತ್ರ ಯತ್ರ ನ ಶಕ್ಷ್ಯತಿ|
03141016c ಇತಿ ಮೇ ವರ್ತತೇ ಬುದ್ಧಿರ್ಮಾ ರಾಜನ್ವಿಮನಾ ಭವ||
ಪಾಂಚಾಲಿಯು ಎಲ್ಲೆಲ್ಲಿ ಹೋಗಲು ಅಶಕ್ತಳೋ ಅಲ್ಲಿ ನಾನು ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ನನಗೆ ಹೀಗೆ ಅನ್ನಿಸುತ್ತದೆ. ರಾಜನ್! ಚಿಂತಿಸಬೇಡ!
03141017a ಸುಕುಮಾರೌ ತಥಾ ವೀರೌ ಮಾದ್ರೀನಂದಿಕರಾವುಭೌ|
03141017c ದುರ್ಗೇ ಸಂತಾರಯಿಷ್ಯಾಮಿ ಯದ್ಯಶಕ್ತೌ ಭವಿಷ್ಯತಃ||
ಸುಕುಮಾರ ವೀರ ಮಾದ್ರೀಪುತ್ರರಿಬ್ಬರನ್ನೂ ಕೂಡ, ಅವರಿಗೆ ಅಶಕ್ತವಾದ ಕಷ್ಟ ಪ್ರದೇಶಗಳಿಗೆ ನಾನು ಎತ್ತಿಕೊಂಡು ಹೋಗುತ್ತೇನೆ.”
03141018 ಯುಧಿಷ್ಠಿರ ಉವಾಚ|
03141018a ಏವಂ ತೇ ಭಾಷಮಾಣಸ್ಯ ಬಲಂ ಭೀಮಾಭಿವರ್ಧತಾಂ|
03141018c ಯಸ್ತ್ವಮುತ್ಸಹಸೇ ವೋಢುಂ ದ್ರೌಪದೀಂ ವಿಪುಲೇಽಧ್ವನಿ||
03141019a ಯಮಜೌ ಚಾಪಿ ಭದ್ರಂ ತೇ ನೈತದನ್ಯತ್ರ ವಿದ್ಯತೇ|
03141019c ಬಲಂ ಚ ತೇ ಯಶಶ್ಚೈವ ಧರ್ಮಃ ಕೀರ್ತಿಶ್ಚ ವರ್ಧತಾಂ||
03141020a ಯಸ್ತ್ವಮುತ್ಸಹಸೇ ನೇತುಂ ಭ್ರಾತರೌ ಸಹ ಕೃಷ್ಣಯಾ|
03141020c ಮಾ ತೇ ಗ್ಲಾನಿರ್ಮಹಾಬಾಹೋ ಮಾ ಚ ತೇಽಸ್ತು ಪರಾಭವಃ||
ಯುಧಿಷ್ಠಿರನು ಹೇಳಿದನು: “ಭೀಮ! ನಿನ್ನ ಈ ಮಾತುಗಳು ನಿನ್ನ ಬಲವನ್ನು ವರ್ಧಿಸುತ್ತವೆ. ದ್ರೌಪದಿಯನ್ನು ಮತ್ತು ನಕುಲ ಸಹದೇವರನ್ನು ಈ ದೂರದ ದಾರಿಯಲ್ಲಿ ಎತ್ತಿಕೊಂಡು ಹೋಗಲು ಉತ್ಸುಕನಾಗಿದ್ದೀಯೆ. ನಿನಗೆ ಮಂಗಳವಾಗಲಿ. ಬೇರೆ ಯಾರಿಗೂ ಈ ರೀತಿ ಮಾಡಲು ಸಾಧ್ಯವಿಲ್ಲ. ಕೃಷ್ಣೆಯೊಂದಿಗೆ ಈ ಸಹೋದರರೀರ್ವರನ್ನೂ ಎತ್ತಿಕೊಂಡು ಒಯ್ದರೆ ನಿನ್ನ ಬಲವೂ, ಯಶಸ್ಸೂ, ಧರ್ಮವೂ, ಕೀರ್ತಿಯೂ ಹೆಚ್ಚಾಗುತ್ತವೆ. ಮಹಾಬಾಹು! ನಿನಗೆ ಆಯಾಸವಾಗದಿರಲಿ ಮತ್ತು ನಿನಗೆ ಸೋಲಾಗದಿರಲಿ.””
03141021 ವೈಶಂಪಾಯನ ಉವಾಚ|
03141021a ತತಃ ಕೃಷ್ಣಾಬ್ರವೀದ್ವಾಕ್ಯಂ ಪ್ರಹಸಂತೀ ಮನೋರಮಾ|
03141021c ಗಮಿಷ್ಯಾಮಿ ನ ಸಂತಾಪಃ ಕಾರ್ಯೋ ಮಾಂ ಪ್ರತಿ ಭಾರತ||
ವೈಶಂಪಾಯನನು ಹೇಳಿದನು: “ಆಗ ಮನೋರಮೆ ಕೃಷ್ಣೆಯು ನಗುತ್ತಾ ಹೇಳಿದಳು: “ಭಾರತ! ನಾನು ನಡೆಯುತ್ತೇನೆ. ನನ್ನ ಕುರಿತು ಚಿಂತಿಸಬೇಡ.”
03141022 ಲೋಮಶ ಉವಾಚ|
03141022a ತಪಸಾ ಶಕ್ಯತೇ ಗಂತುಂ ಪರ್ವತೋ ಗಂಧಮಾದನಃ|
03141022c ತಪಸಾ ಚೈವ ಕೌಂತೇಯ ಸರ್ವೇ ಯೋಕ್ಷ್ಯಾಮಹೇ ವಯಂ||
03141023a ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾರ್ಥಿವ|
03141023c ಅಹಂ ಚ ತ್ವಂ ಚ ಕೌಂತೇಯ ದ್ರಕ್ಷ್ಯಾಮಃ ಶ್ವೇತವಾಹನಂ||
ಲೋಮಶನು ಹೇಳಿದನು: “ಕೌಂತೇಯ! ತಪಸ್ಸಿನಿಂದ ಗಂಧಮಾದನ ಪರ್ವತಕ್ಕೆ ಹೋಗಲು ಸಾಧ್ಯವಾಗುತ್ತದೆ. ಪಾರ್ಥಿವ! ಕೌಂತೇಯ! ನೀನು, ನಾನು, ನಕುಲ, ಸಹದೇವ ಮತ್ತು ಭೀಮಸೇನ ನಾವೆಲ್ಲರೂ ತಪಸ್ಸಿನಲ್ಲಿ ತೊಡಗೋಣ ಮತ್ತು ನಾವು ಶ್ವೇತವಾಹನ ಅರ್ಜುನನನ್ನು ನೋಡಬಹುದು.””
03141024 ವೈಶಂಪಾಯನ ಉವಾಚ|
03141024a ಏವಂ ಸಂಭಾಷಮಾಣಾಸ್ತೇ ಸುಬಾಹೋರ್ವಿಷಯಂ ಮಹತ್|
03141024c ದದೃಶುರ್ಮುದಿತಾ ರಾಜನ್ಪ್ರಭೂತಗಜವಾಜಿಮತ್||
03141025a ಕಿರಾತತಂಗಣಾಕೀರ್ಣಂ ಕುಣಿಂದಶತಸಂಕುಲಂ|
03141025c ಹಿಮವತ್ಯಮರೈರ್ಜುಷ್ಟಂ ಬಹ್ವಾಶ್ಚರ್ಯಸಮಾಕುಲಂ||
ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗ ಅವರು ಸಂತೋಷದಿಂದ ಆನೆ ಕುದುರೆಗಳಿಂದ ಕೂಡಿದ, ಕಿರಾತರು ಮತ್ತು ತಂಗಣರು ವಾಸಿಸುವ, ನೂರಾರು ಕುಣಿಂದರು ವಾಸಿಸುವ, ಅಮರರು ಇಷ್ಟಪಡುವ, ಹಿಮಾಲಯದಲ್ಲಿರುವ ಬಹಳ ಅಶ್ಚರ್ಯಕರವಾದ ಸುಬಾಹುವಿನ ಮಹಾ ದೇಶವನ್ನು ಕಂಡರು.
03141026a ಸುಬಾಹುಶ್ಚಾಪಿ ತಾನ್ದೃಷ್ಟ್ವಾ ಪೂಜಯಾ ಪ್ರತ್ಯಗೃಹ್ಣತ|
03141026c ವಿಷಯಾಂತೇ ಕುಣಿಂದಾನಾಮೀಶ್ವರಃ ಪ್ರೀತಿಪೂರ್ವಕಂ||
ಕುಣಿಂದರ ರಾಜ ಸುಬಾಹುವೂ ಕೂಡ ತನ್ನ ರಾಜ್ಯದ ಗಡಿಯಲ್ಲಿ ಅವರನ್ನು ಕಂಡು ಪ್ರೀತಿಪೂರ್ವಕವಾಗಿ ಪೂಜಿಸಿ ಸ್ವಾಗತಿಸಿದನು.
03141027a ತತ್ರ ತೇ ಪೂಜಿತಾಸ್ತೇನ ಸರ್ವ ಏವ ಸುಖೋಷಿತಾಃ|
03141027c ಪ್ರತಸ್ಥುರ್ವಿಮಲೇ ಸೂರ್ಯೇ ಹಿಮವಂತಂ ಗಿರಿಂ ಪ್ರತಿ||
ಅವರು ಎಲ್ಲರೂ ಪೂಜಿಸಲ್ಪಟ್ಟು ಅಲ್ಲಿಯೇ ಸುಖದಿಂದ ಉಳಿದುಕೊಂಡರು. ಸೂರ್ಯನು ಬೆಳಕುನೀಡಿದಾಗ ಅವರು ಹಿಮಾಲಯ ಪರ್ವತದ ಕಡೆ ಹೊರಟರು.
03141028a ಇಂದ್ರಸೇನಮುಖಾಂಶ್ಚೈವ ಭೃತ್ಯಾನ್ಪೌರೋಗವಾಂಸ್ತಥಾ|
03141028c ಸೂದಾಂಶ್ಚ ಪರಿಬರ್ಹಂ ಚ ದ್ರೌಪದ್ಯಾಃ ಸರ್ವಶೋ ನೃಪ||
03141029a ರಾಜ್ಞಃ ಕುಣಿಂದಾಧಿಪತೇಃ ಪರಿದಾಯ ಮಹಾರಥಾಃ|
ರಾಜ! ಆ ಮಹಾರಥಿಗಳು ಇಂದ್ರಸೇನನ ನಾಯಕತ್ವದಲ್ಲಿ ಎಲ್ಲ ಸೇವಕರೂ, ಮೇಲ್ವಿಚಾರಕರೂ, ಅಡುಗೆಯವರೂ ಮತ್ತು ದ್ರೌಪದಿಯ ಪರಿಚಾರಕರೆಲ್ಲರನ್ನೂ ರಾಜ ಕುಣಿಂದಾಧಿಪತಿಗೆ ಒಪ್ಪಿಸಿದರು.
03141029c ಪದ್ಭಿರೇವ ಮಹಾವೀರ್ಯಾ ಯಯುಃ ಕೌರವನಂದನಾಃ||
03141030a ತೇ ಶನೈಃ ಪ್ರಾದ್ರವನ್ಸರ್ವೇ ಕೃಷ್ಣಯಾ ಸಹ ಪಾಂಡವಾಃ|
03141030c ತಸ್ಮಾದ್ದೇಶಾತ್ಸುಸಂಹೃಷ್ಟಾ ದ್ರಷ್ಟುಕಾಮಾ ಧನಂಜಯಂ||
ದ್ರೌಪದಿಯೊಡನೆ ಮಹಾವೀರ ಕೌರವನಂದ ಪಾಂಡವರೆಲ್ಲರೂ ಆ ದೇಶದಿಂದ ಕಾಲ್ನಡುಗೆಯಲ್ಲಿ ನಿಧಾನವಾಗಿ, ಧನಂಜಯನನ್ನು ಕಾಣುವ ಸಂತೋಷದಿಂದ ಹೊರಟರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತೊಂದನೆಯ ಅಧ್ಯಾಯವು.