ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೩೯
ಅರಾವಸು-ಪರಾವಸು ಇಬ್ಬರೂ ರಾಜಾ ಬೃಹದ್ಯುಮ್ನನ ಸತ್ರದಲ್ಲಿ ವೃತರಾಗಿ ಭಾಗವಹಿಸಿದುದು (೧-೨). ಒಂದು ರಾತ್ರಿ ಮನೆಗೆ ಬರುವಾಗ ಅರಾವಸುವು ಜಿಂಕೆಯೆಂದು ತಿಳಿದು ರೈಭ್ಯನನ್ನು ಕೊಂದುದು (೩-೬). ತಮ್ಮ ಪರಾವಸುವಿಗೆ ಬ್ರಹ್ಮಹತ್ಯಾದೋಷದ ವ್ರತವನ್ನು ನಡೆಸೆಂದು ಅರಾವಸುವು ಹೇಳಿ ಯಾಗಕಾರ್ಯದಲ್ಲಿ ತೊಡಗುವುದು (೭-೧೦). ಬ್ರಹ್ಮಹತ್ಯೆಯನ್ನು ಪೂರೈಸಿ ಸತ್ರಕ್ಕೆ ಹಿಂದಿರುಗಿದ ಪರಾವಸುವನ್ನು ಅರಾವಸುವು ತನ್ನ ತಂದೆಯನ್ನು ಕೊಂದ ಆರೋಪವನ್ನು ಹೊರಿಸಿ, ಸತ್ರದಿಂದ ಬಹಿಷ್ಕಾರ ಮಾಡಿದುದು (೧೧-೧೪). ಪರಾವಸುವಿಗೆ ಮೆಚ್ಚಿ ದೇವತೆಗಳು ವರಗಳನ್ನಿತ್ತುದು (೧೫-೨೪).
03139001 ಲೋಮಶ ಉವಾಚ|
03139001a ಏತಸ್ಮಿನ್ನೇವ ಕಾಲೇ ತು ಬೃಹದ್ದ್ಯುಮ್ನೋ ಮಹೀಪತಿಃ|
03139001c ಸತ್ರಮಾಸ್ತೇ ಮಹಾಭಾಗೋ ರೈಭ್ಯಯಾಜ್ಯಃ ಪ್ರತಾಪವಾನ್||
ಲೋಮಶನು ಹೇಳಿದನು: “ಇದೇ ಸಮಯದಲ್ಲಿ ಮಹಾಭಾಗ ರೈಭ್ಯನ ಯಜಮಾನ ಪ್ರತಾಪವಾನ್ ರಾಜಾ ಬೃಹದ್ದ್ಯುಮ್ನನು ಸತ್ರವನ್ನು ಕೈಗೊಂಡನು.
03139002a ತೇನ ರೈಭ್ಯಸ್ಯ ವೈ ಪುತ್ರಾವರ್ವಾವಸುಪರಾವಸೂ|
03139002c ವೃತೌ ಸಹಾಯೌ ಸತ್ರಾರ್ಥೇ ಬೃಹದ್ದ್ಯುಮ್ನೇನ ಧೀಮತಾ||
ಧೀಮಂತ ಬೃಹದ್ದ್ಯುಮ್ನನು ರೈಭ್ಯನ ಮಕ್ಕಳಾದ ಅರಾವಸು ಮತ್ತು ಪರಾವಸುಗಳಿಬ್ಬರನ್ನೂ ಒಟ್ಟಿಗೇ ಸತ್ರದಲ್ಲಿ ವೃತರನ್ನಾಗಿ ತೆಗೆದುಕೊಂಡನು.
03139003a ತತ್ರ ತೌ ಸಮನುಜ್ಞಾತೌ ಪಿತ್ರಾ ಕೌಂತೇಯ ಜಗ್ಮತುಃ|
03139003c ಆಶ್ರಮೇ ತ್ವಭವದ್ರೈಭ್ಯೋ ಭಾರ್ಯಾ ಚೈವ ಪರಾವಸೋಃ||
ಕೌಂತೇಯ! ತಂದೆಯ ಅನುಮತಿಯನ್ನು ಪಡೆದು ಅವರಿಬ್ಬರೂ ಅಲ್ಲಿಗೆ ಹೋದರು. ಆಶ್ರಮದಲ್ಲಿ ರೈಭ್ಯ ಮತ್ತು ಪರಾವಸುವಿನ ಪತ್ನಿಯರಿದ್ದರು.
03139004a ಅಥಾವಲೋಕಕೋಽಗಚ್ಚದ್ಗೃಹಾನೇಕಃ ಪರಾವಸುಃ|
03139004c ಕೃಷ್ಣಾಜಿನೇನ ಸಂವೀತಂ ದದರ್ಶ ಪಿತರಂ ವನೇ||
ಅನಂತರ ಪರಾವಸುವು ಭೇಟಿಯಾಗಲು ಒಬ್ಬನೇ ತನ್ನ ಮನೆಗೆ ಬರುವಾಗ ವನದಲ್ಲಿ ಕಪ್ಪು ಜಿನವನ್ನು ಮುಚ್ಚಿಕೊಂಡಿದ್ದ ತನ್ನ ತಂದೆಯನ್ನು ಕಂಡನು.
03139005a ಜಘನ್ಯರಾತ್ರೇ ನಿದ್ರಾಂಧಃ ಸಾವಶೇಷೇ ತಮಸ್ಯಪಿ|
03139005c ಚರಂತಂ ಗಹನೇಽರಣ್ಯೇ ಮೇನೇ ಸ ಪಿತರಂ ಮೃಗಂ||
ಆಗ ಬಹಳ ರಾತ್ರಿಯಾಗಿತ್ತು. ರಾತ್ರಿ ಸ್ವಲ್ಪವೇ ಉಳಿದಿತ್ತು. ನಿದ್ದೆಗೆಟ್ಟು ಪ್ರಯಾಣಿಸುತ್ತಿದ್ದ ಅವನು ಗಹನವಾದ ಅರಣ್ಯದಲ್ಲಿ ತನ್ನ ತಂದೆಯನ್ನು ಜಿಂಕೆಯೆಂದು ಅಂದುಕೊಂಡನು.
03139006a ಮೃಗಂ ತು ಮನ್ಯಮಾನೇನ ಪಿತಾ ವೈ ತೇನ ಹಿಂಸಿತಃ|
03139006c ಅಕಾಮಯಾನೇನ ತದಾ ಶರೀರತ್ರಾಣಮಿಚ್ಚತಾ||
ಜಿಂಕೆಯೆಂದು ತಿಳಿದು ಅವನು ತನ್ನ ತಂದೆಯನ್ನು, ಹಾಗೆ ಮಾಡಬೇಕೆಂದು ಬಯಸಿರಲಿಲ್ಲದಿದ್ದರೂ ತನ್ನ ದೇಹವನ್ನು ಉಳಿಸಿಕೊಳ್ಳಲು, ಕೊಂದನು.
03139007a ಸ ತಸ್ಯ ಪ್ರೇತಕಾರ್ಯಾಣಿ ಕೃತ್ವಾ ಸರ್ವಾಣಿ ಭಾರತ|
03139007c ಪುನರಾಗಮ್ಯ ತತ್ಸತ್ರಮಬ್ರವೀದ್ಭ್ರಾತರಂ ವಚಃ||
ಭಾರತ! ಅವನು ಅವನ ಪ್ರೇತಕಾರ್ಯಗಳೆಲ್ಲವನ್ನೂ ಮಾಡಿ ಪುನಃ ಸತ್ರಕ್ಕೆ ಹಿಂದಿರುಗಿ ತನ್ನ ತಮ್ಮನಿಗೆ ಹೇಳಿದನು:
03139008a ಇದಂ ಕರ್ಮ ನ ಶಕ್ತಸ್ತ್ವಂ ವೋಢುಮೇಕಃ ಕಥಂ ಚನ|
03139008c ಮಯಾ ತು ಹಿಂಸಿತಸ್ತಾತೋ ಮನ್ಯಮಾನೇನ ತಂ ಮೃಗಂ||
“ಈ ಕರ್ಮವನ್ನು ನೀನೊಬ್ಬನೇ ಪೂರೈಸಲು ಎಂದೂ ಶಕ್ತನಲ್ಲ. ನಾನಾದರೋ ಜಿಂಕೆಯೆಂದು ತಿಳಿದು ತಂದೆಯನ್ನು ಕೊಂದೆ.
03139009a ಸೋಽಸ್ಮದರ್ಥೇ ವ್ರತಂ ಸಾಧು ಚರ ತ್ವಂ ಬ್ರಹ್ಮಹಿಂಸನಂ|
03139009c ಸಮರ್ಥೋ ಹ್ಯಹಮೇಕಾಕೀ ಕರ್ಮ ಕರ್ತುಮಿದಂ ಮುನೇ||
ಆದುದರಿಂದ ಬ್ರಹ್ಮಹತ್ಯಾದೋಷದ ವ್ರತವನ್ನು ನೀನು ನಡೆಸಿದರೆ ಒಳ್ಳೆಯದು. ಮುನೇ! ನಾನೊಬ್ಬನೇ ಈ ಕಾರ್ಯವನ್ನು ಮುಗಿಸಲು ಸಮರ್ಥನಾಗಿದ್ದೇನೆ.”
03139010 ಅರ್ವಾವಸುರುವಾಚ|
03139010a ಕರೋತು ವೈ ಭವಾನ್ಸತ್ರಂ ಬೃಹದ್ದ್ಯುಮ್ನಸ್ಯ ಧೀಮತಃ|
03139010c ಬ್ರಹ್ಮಹತ್ಯಾಂ ಚರಿಷ್ಯೇಽಹಂ ತ್ವದರ್ಥಂ ನಿಯತೇಂದ್ರಿಯಃ||
ಅರ್ವಾವಸುವು ಹೇಳಿದನು: “ಹಾಗಾದರೆ ನೀನೇ ಈ ಧೀಮಂತ ಬೃಹದ್ದ್ಯುಮ್ನನ ಸತ್ರವನ್ನು ಪೂರೈಸು. ನಾನು ನಿನ್ನ ಪರವಾಗಿ ನಿಯತೇಂದ್ರಿಯನಾಗಿದ್ದು ಬ್ರಹ್ಮಹತ್ಯೆಯ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ.””
03139011 ಲೋಮಶ ಉವಾಚ|
03139011a ಸ ತಸ್ಯಾ ಬ್ರಹ್ಮಹತ್ಯಾಯಾಃ ಪಾರಂ ಗತ್ವಾ ಯುಧಿಷ್ಠಿರ|
03139011c ಅರ್ವಾವಸುಸ್ತದಾ ಸತ್ರಮಾಜಗಾಮ ಪುನರ್ಮುನಿಃ||
ಲೋಮಶನು ಹೇಳಿದನು: “ಯುಧಿಷ್ಠಿರ! ಅವನ ಬ್ರಹ್ಮಹತ್ಯೆಯ ವ್ರತವನ್ನು ಪೂರೈಸಿ ಮುನಿ ಅರಾವಸುವು ಪುನಃ ಸತ್ರಕ್ಕೆ ಹೋದನು.
03139012a ತತಃ ಪರಾವಸುರ್ದೃಷ್ಟ್ವಾ ಭ್ರಾತರಂ ಸಮುಪಸ್ಥಿತಂ|
03139012c ಬೃಹದ್ದ್ಯುಮ್ನಮುವಾಚೇದಂ ವಚನಂ ಪರಿಷದ್ಗತಂ||
ತನ್ನ ತಮ್ಮನನ್ನು ನೋಡಿದ ಪರಾವಸುವು ಅಲ್ಲಿಯೇ ಪರಿಷತ್ತಿನಲ್ಲಿ ಕುಳಿತಿದ್ದ ಬೃಹದ್ದ್ಯುಮ್ನನಿಗೆ ಈ ಮಾತುಗಳನ್ನಾಡಿದನು:
03139013a ಏಷ ತೇ ಬ್ರಹ್ಮಹಾ ಯಜ್ಞಂ ಮಾ ದ್ರಷ್ಟುಂ ಪ್ರವಿಶೇದಿತಿ|
03139013c ಬ್ರಹ್ಮಹಾ ಪ್ರೇಕ್ಷಿತೇನಾಪಿ ಪೀಡಯೇತ್ತ್ವಾಂ ನ ಸಂಶಯಃ||
“ಈ ಬ್ರಹ್ಮ ಹಂತಕನಿಗೆ ನಿನ್ನ ಯಜ್ಞವನ್ನು ನೋಡಲು ಒಳಗೆ ಬಿಡಬೇಡ! ಬ್ರಹ್ಮಹತ್ಯಾದೋಷಿಯು ಒಂದು ಕಡೆಗಣ್ಣಿನ ನೋಟದಿಂದಲೇ ನಿನ್ನನ್ನು ಪೀಡಿಸಬಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.”
03139014a ಪ್ರೇಷ್ಯೈರುತ್ಸಾರ್ಯಮಾಣಸ್ತು ರಾಜನ್ನರ್ವಾವಸುಸ್ತದಾ|
03139014c ನ ಮಯಾ ಬ್ರಹ್ಮಹತ್ಯೇಯಂ ಕೃತೇತ್ಯಾಹ ಪುನಃ ಪುನಃ||
ರಾಜನ್! ಆಗ ಅರಾವಸುವು “ಈ ಬ್ರಹ್ಮಹತ್ಯೆಯನ್ನು ಮಾಡಿದ್ದುದು ನಾನಲ್ಲ|” ಎಂದು ಪುನಃ ಪುನಃ ಕೂಗಿ ಹೇಳುತ್ತಿದ್ದರೂ ಅವನನ್ನು ರಾಜನ ಸೇವಕರು ಎಳೆದು ಹೊರಹಾಕಿದರು.
03139015a ಉಚ್ಯಮಾನೋಽಸಕೃತ್ಪ್ರೇಷ್ಯೈರ್ಬ್ರಹ್ಮಹನ್ನಿತಿ ಭಾರತ|
03139015c ನೈವ ಸ ಪ್ರತಿಜಾನಾತಿ ಬ್ರಹ್ಮಹತ್ಯಾಂ ಸ್ವಯಂ ಕೃತಾಂ|
03139015e ಮಮ ಭ್ರಾತ್ರಾ ಕೃತಮಿದಂ ಮಯಾ ತು ಪರಿರಕ್ಷಿತಂ||
ಭಾರತ! ಅವನು ಬ್ರಹ್ಮಹತ್ಯಾಪ್ರಾಯಶ್ಚಿತ್ತವನ್ನು ತನಗಾಗಿ ಮಾಡಿಲ್ಲವೆಂದೂ ಬ್ರಹ್ಮಹತ್ಯೆಯನ್ನು ಸ್ವಯಂ ಅವನು ಮಾಡಿಲ್ಲವೆಂದು ಹೇಳಿದರೂ ಯಾರೂ ಅದನ್ನು ಸ್ವೀಕರಿಸಲಿಲ್ಲ.
03139016a ಪ್ರೀತಾಸ್ತಸ್ಯಾಭವನ್ದೇವಾಃ ಕರ್ಮಣಾರ್ವಾವಸೋರ್ನೃಪ|
03139016c ತಂ ತೇ ಪ್ರವರಯಾಮಾಸುರ್ನಿರಾಸುಶ್ಚ ಪರಾವಸುಂ||
03139017a ತತೋ ದೇವಾ ವರಂ ತಸ್ಮೈ ದದುರಗ್ನಿಪುರೋಗಮಾಃ|
03139017c ಸ ಚಾಪಿ ವರಯಾಮಾಸ ಪಿತುರುತ್ಥಾನಮಾತ್ಮನಃ||
ರಾಜನ್! ಅರಾವಸುವಿನ ಕೃತ್ಯದಿಂದ ದೇವತೆಗಳು ಸಂಪ್ರೀತರಾದರು. ಅವರು ಅರಾವಸುವನ್ನು ಮುಖ್ಯ ಪುರೋಹಿತನನ್ನಾಗಿ ನಿಯೋಜಿಸಿ ಪರಾವಸುವನ್ನು ಹೊರಹಾಕಿದರು. ಆಗ ಅಗ್ನಿಯ ಮುಖಂಡತ್ವದಲ್ಲಿ ದೇವತೆಗಳು ಅವನಿಗೆ ವರಗಳನ್ನಿತ್ತರು. ಅವನಾದರೂ ತನ್ನ ತಂದೆಯು ಮೇಲೇಳುವಂತೆ ವರವನ್ನು ಕೇಳಿಕೊಂಡನು.
03139018a ಅನಾಗಸ್ತ್ವಂ ತಥಾ ಭ್ರಾತುಃ ಪಿತುಶ್ಚಾಸ್ಮರಣಂ ವಧೇ|
03139018c ಭರದ್ವಾಜಸ್ಯ ಚೋತ್ಥಾನಂ ಯವಕ್ರೀತಸ್ಯ ಚೋಭಯೋಃ||
ಹಾಗೆಯೇ ತನ್ನ ಅಣ್ಣನು ತಂದೆಯನ್ನು ವಧಿಸಿದುದನ್ನು ಮರೆತು ತಪ್ಪಿಲ್ಲದಂತಾಗುವಂತೆ ಮತ್ತು ಭರದ್ವಾಜ-ಯವಕ್ರಿ ಇಬ್ಬರೂ ಮೇಲೇಳುವಂತೆ ಕೇಳಿಕೊಂಡನು.
03139019a ತತಃ ಪ್ರಾದುರ್ಬಭೂವುಸ್ತೇ ಸರ್ವ ಏವ ಯುಧಿಷ್ಠಿರ|
03139019c ಅಥಾಬ್ರವೀದ್ಯವಕ್ರೀತೋ ದೇವಾನಗ್ನಿಪುರೋಗಮಾನ್||
ಯುಧಿಷ್ಠಿರ! ಆಗ ಎಲ್ಲರೂ ಎದ್ದು ಕಾಣಿಸಿಕೊಂಡರು. ಆಗ ಯವಕ್ರಿಯು ಅಗ್ನಿಯನ್ನು ಮುಂದಿಟ್ಟುಕೊಂಡಿದ್ದ ದೇವತೆಗಳಿಗೆ ಹೇಳಿದನು:
03139020a ಸಮಧೀತಂ ಮಯಾ ಬ್ರಹ್ಮ ವ್ರತಾನಿ ಚರಿತಾನಿ ಚ|
03139020c ಕಥಂ ನು ರೈಭ್ಯಃ ಶಕ್ತೋ ಮಾಮಧೀಯಾನಂ ತಪಸ್ವಿನಂ|
03139020e ತಥಾಯುಕ್ತೇನ ವಿಧಿನಾ ನಿಹಂತುಮಮರೋತ್ತಮಾಃ||
“ಅಮರೋತ್ತಮರೇ! ನಾನು ಬ್ರಹ್ಮನನ್ನು ಕಲಿತಿದ್ದೆ ಮತ್ತು ವ್ರತಗಳನ್ನು ಆಚರಿಸಿದ್ದೆ. ಹಾಗಿದ್ದರೂ ಕಲಿತಿದ್ದ ತಪಸ್ವಿ ರೈಭ್ಯನು ತನ್ನ ಆ ವಿಧಿಯಿಂದ ನನ್ನನ್ನು ಕೆಳಗುರುಳಿಸಲು ಹೇಗೆ ಶಕ್ತನಾದ?”
03139021 ದೇವಾ ಊಚುಃ
03139021a ಮೈವಂ ಕೃಥಾ ಯವಕ್ರೀತ ಯಥಾ ವದಸಿ ವೈ ಮುನೇ|
03139021c ಋತೇ ಗುರುಮಧೀತಾ ಹಿ ಸುಖಂ ವೇದಾಸ್ತ್ವಯಾ ಪುರಾ||
03139022a ಅನೇನ ತು ಗುರೂನ್ದುಃಖಾತ್ತೋಷಯಿತ್ವಾ ಸ್ವಕರ್ಮಣಾ|
03139022c ಕಾಲೇನ ಮಹತಾ ಕ್ಲೇಶಾದ್ಬ್ರಹ್ಮಾಧಿಗತಮುತ್ತಮಂ||
ದೇವತೆಗಳು ಹೇಳಿದರು: “ಮುನಿ ಯವಕ್ರಿ! ನೀನು ಹೇಗೆ ಮಾತನ್ನಾಡುತ್ತೀಯೋ ಹಾಗೆ ಮಾಡಬೇಡ. ನೀನು ಹಿಂದೆ ಗುರುವಿಲ್ಲದೇ ವೇದಗಳನ್ನು ಸುಲಭ ಮಾರ್ಗದಲ್ಲಿ ಕಲಿತೆ. ಆದರೆ ರೈಭ್ಯನು ಗುರುವನ್ನು ತನ್ನ ಕೆಲಸಗಳಿಂದ ತೃಪ್ತಿಪಡಿಸಿ ಕಷ್ಟದಲ್ಲಿ ಬಹಳ ದೀರ್ಘ ಕಾಲದಲ್ಲಿ ಅನುತ್ತಮ ಬ್ರಹ್ಮನನ್ನು ಕಲಿತುಕೊಂಡನು.””
03139023 ಲೋಮಶ ಉವಾಚ|
03139023a ಯವಕ್ರೀತಮಥೋಕ್ತ್ವೈವಂ ದೇವಾಃ ಸಾಗ್ನಿಪುರೋಗಮಾಃ|
03139023c ಸಂಜೀವಯಿತ್ವಾ ತಾನ್ಸರ್ವಾನ್ಪುನರ್ಜಗ್ಮುಸ್ತ್ರಿವಿಷ್ಟಪಂ||
ಲೋಮಶನು ಹೇಳಿದನು: “ಹೀಗೆ ಅಗ್ನಿಯನ್ನು ಮುಂದಿಟ್ಟುಕೊಂಡು ಬಂದಿದ್ದ ದೇವತೆಗಳು ಯವಕ್ರಿಗೆ ಹೇಳಿ ಅವರೆಲ್ಲರನ್ನೂ ಜೀವಂತಗೊಳಿಸಿ ಪುನಃ ದೇವಲೋಕಕ್ಕೆ ತೆರಳಿದರು.
03139024a ಆಶ್ರಮಸ್ತಸ್ಯ ಪುಣ್ಯೋಽಯಂ ಸದಾಪುಷ್ಪಫಲದ್ರುಮಃ|
03139024c ಅತ್ರೋಷ್ಯ ರಾಜಶಾರ್ದೂಲ ಸರ್ವಪಾಪೈಃ ಪ್ರಮೋಕ್ಷ್ಯಸೇ||
ಇದು ಸದಾ ಫಲಪುಷ್ಪಗಳ ಮರಗಳನ್ನುಳ್ಳ ಅವನ ಆ ಪುಣ್ಯ ಆಶ್ರಮ. ರಾಜಶಾರ್ದೂಲ! ಇಲ್ಲಿ ಉಳಿದುಕೊಳ್ಳುವುದರಿಂದ ನೀನು ಸರ್ವಪಾಪಗಳಿಂದ ಮುಕ್ತಿಹೊಂದುವೆ[1].”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.
[1] ಮಹಾಭಾರತದಲ್ಲಿರುವ ಯವಕ್ರೀತನ ಕುರಿತಾದ ಈ ಕಥೆಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ಕನ್ನಡದಲ್ಲಿ “ಅಗ್ನಿ ಮತ್ತು ಮಳೆ” ಎಂಬ ನಾಟಕವನ್ನು ರಚಿಸಿದ್ದಾರೆ. ಈ ನಾಟಕದ ಆಧಾರದ ಮೇಲೆ “ಅಗ್ನಿವರ್ಷ” ಎನ್ನುವ ಹಿಂದೀ ಚಿತ್ರಪಟವೂ ಇದೆ.
Hindi film "Agnivarsha" based on the Mahabharata story of Yavakri:
Girish Karnad's Kannada play "Agni mattu male"
Sacrifice and fulfilment in the Fire and the Rain: an analysis of Girish Karnad's play