ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೩೦
ಗಿಡುಗ-ಪಾರಿವಾಳ
ಯುಧಿಷ್ಠಿರನ ತೀರ್ಥಯಾತ್ರೆಯು ಮುಂದುವರೆದುದು (೧-೧೫). ರಾಜ ಉಶೀನರನು ದೇವತೆಗಳಿಗೆ ಸಮಾನನೇ ಎಂದು ಪರೀಕ್ಷಿಸಲು ಇಂದ್ರನು ಗಿಡುಗವಾಗಿ ಮತ್ತು ಅಗ್ನಿಯು ಪಾರಿವಾಳವಾಗಿ ಅವನ ಯಜ್ಞಶಾಲೆಗೆ ಬಂದು, ಗಿಡುಗನ ಭಯದಿಂದ ಪಾರಿವಾಳವು ರಕ್ಷಣೆಯನ್ನು ಕೇಳಿದುದು (೧೬-೨೦).
03130001 ಲೋಮಶ ಉವಾಚ|
03130001a ಇಹ ಮರ್ತ್ಯಾಸ್ತಪಸ್ತಪ್ತ್ವಾ ಸ್ವರ್ಗಂ ಗಚ್ಚಂತಿ ಭಾರತ|
03130001c ಮರ್ತುಕಾಮಾ ನರಾ ರಾಜನ್ನಿಹಾಯಾಂತಿ ಸಹಸ್ರಶಃ||
ಲೋಮಶನು ಹೇಳಿದನು: “ಭಾರತ! ರಾಜನ್! ಇಲ್ಲಿ ತಪಸ್ಸನ್ನು ತಪಿಸಿ ಮನುಷ್ಯರು ಸ್ವರ್ಗಕ್ಕೆ ಹೋಗುತ್ತಾರೆ. ಸಾವನ್ನು ಬಯಸಿದ ನರರು ಸಹಸ್ರಾರು ಸಂಖ್ಯೆಗಳಲ್ಲಿ ಇಲ್ಲಿಗೆ ಬರುತ್ತಾರೆ.
03130002a ಏವಮಾಶೀಃ ಪ್ರಯುಕ್ತಾ ಹಿ ದಕ್ಷೇಣ ಯಜತಾ ಪುರಾ|
03130002c ಇಹ ಯೇ ವೈ ಮರಿಷ್ಯಂತಿ ತೇ ವೈ ಸ್ವರ್ಗಜಿತೋ ನರಾಃ||
ಹಿಂದೆ ದಕ್ಷನು ಇಲ್ಲಿ ಯಜ್ಞಮಾಡಿದಾಗ ಈ ಆಶೀರ್ವಾದವನ್ನು ನುಡಿದನು: “ಇಲ್ಲಿ ಯಾವ ನರರು ಸಾಯುತ್ತಾರೋ ಅವರು ಸ್ವರ್ಗವನ್ನು ಗೆಲ್ಲುತ್ತಾರೆ!”
03130003a ಏಷಾ ಸರಸ್ವತೀ ಪುಣ್ಯಾ ದಿವ್ಯಾ ಚೋಘವತೀ ನದೀ|
03130003c ಏತದ್ವಿನಶನಂ ನಾಮ ಸರಸ್ವತ್ಯಾ ವಿಶಾಂ ಪತೇ||
03130004a ದ್ವಾರಂ ನಿಷಾದರಾಷ್ಟ್ರಸ್ಯ ಯೇಷಾಂ ದ್ವೇಷಾತ್ಸರಸ್ವತೀ|
03130004c ಪ್ರವಿಷ್ಟಾ ಪೃಥಿವೀಂ ವೀರ ಮಾ ನಿಷಾದಾ ಹಿ ಮಾಂ ವಿದುಃ||
ವಿಶಾಂಪತೇ! ವೀರ! ಇದು ಪುಣ್ಯೆ, ದಿವ್ಯೆ, ಅಘವತೀ ಸರಸ್ವತೀ ನದಿಯು. ಇದು ಸರಸ್ವತಿಯು ಅದೃಶ್ಯಳಾಗುವ ಸ್ಥಳ. ಇದು ನಿಷಾದರಾಷ್ಟ್ರದ ದ್ವಾರ. ಅವರ ಮೇಲಿನ ದ್ವೇಷದಿಂದ, ನಿಷದರು ಅವಳನ್ನು ತಿಳಿಯಬಾರದು ಎಂದು ಸರಸ್ವತಿಯು ಭೂಮಿಯನ್ನು ಹೊಕ್ಕಳು.
03130005a ಏಷ ವೈ ಚಮಸೋದ್ಭೇದೋ ಯತ್ರ ದೃಶ್ಯಾ ಸರಸ್ವತೀ|
03130005c ಯತ್ರೈನಾಮಭ್ಯವರ್ತಂತ ದಿವ್ಯಾಃ ಪುಣ್ಯಾಃ ಸಮುದ್ರಗಾಃ||
ಇದು ಚಮಸ ಚಿಲುಮೆ. ಇಲ್ಲಿ ಸರಸ್ವತಿಯನ್ನು ಕಾಣಬಹುದು. ಇಲ್ಲಿಯೇ ಸಮುದ್ರವನ್ನು ಸೇರುವ ದಿವ್ಯ ಪುಣ್ಯ ನದಿಗಳು ಅವಳನ್ನು ಸೇರುತ್ತವೆ.
03130006a ಏತತ್ಸಿಂಧೋರ್ಮಹತ್ತೀರ್ಥಂ ಯತ್ರಾಗಸ್ತ್ಯಮರಿಂದಮ|
03130006c ಲೋಪಾಮುದ್ರಾ ಸಮಾಗಮ್ಯ ಭರ್ತಾರಮವೃಣೀತ ವೈ||
ಅರಿಂದಮ! ಇದು ಸಿಂಧು ಮಹಾತೀರ್ಥ. ಇಲ್ಲಿಯೇ ಅಗಸ್ತ್ಯನು ಲೋಪಾಮುದ್ರೆಯನ್ನು ಭೇಟಿಯಾದನು ಮತ್ತು ಅವಳು ಅವನನ್ನು ಪತಿಯನ್ನಾಗಿ ವರಿಸಿದಳು.
03130007a ಏತತ್ಪ್ರಭಾಸತೇ ತೀರ್ಥಂ ಪ್ರಭಾಸಂ ಭಾಸ್ಕರದ್ಯುತೇ|
03130007c ಇಂದ್ರಸ್ಯ ದಯಿತಂ ಪುಣ್ಯಂ ಪವಿತ್ರಂ ಪಾಪನಾಶನಂ||
ಭಾಸ್ಕರದ್ಯುತೇ! ಇದು ಇಂದ್ರನಿಗೆ ಪ್ರಿಯವಾದ, ಪುಣ್ಯವೂ ಪವಿತ್ರವೂ, ಪಾಪನಾಶನವೂ ಆದ ಪ್ರಕಾಶಿಸುತ್ತಿರುವ ಪ್ರಭಾಸ ತೀರ್ಥ.
03130008a ಏತದ್ವಿಷ್ಣುಪದಂ ನಾಮ ದೃಶ್ಯತೇ ತೀರ್ಥಮುತ್ತಮಂ|
03130008c ಏಷಾ ರಮ್ಯಾ ವಿಪಾಶಾ ಚ ನದೀ ಪರಮಪಾವನೀ||
ಇಲ್ಲಿ ವಿಷ್ಣುಪಾದ ಎಂಬ ಹೆಸರಿನ ಉತ್ತಮ ತೀರ್ಥವು ಕಾಣುತ್ತದೆ. ಇದು ಪರಮಪಾವನೀ ರಮ್ಯ ವಿಪಾಷಾ ನದೀ.
03130009a ಅತ್ರೈವ ಪುತ್ರಶೋಕೇನ ವಸಿಷ್ಠೋ ಭಗವಾನೃಷಿಃ|
03130009c ಬದ್ಧ್ವಾತ್ಮಾನಂ ನಿಪತಿತೋ ವಿಪಾಶಃ ಪುನರುತ್ಥಿತಃ||
ಇಲ್ಲಿಯೇ ಭಗವಾನ್ ಋಷಿ ವಸಿಷ್ಠನು ಪುತ್ರಶೋಕದಿಂದ ತನ್ನನ್ನು ತಾನೇ ಕಟ್ಟಿಕೊಂಡು ಬಿದ್ದಾಗ, ಏನೂ ಗಾಯನೋವುಗಳಾಗದೇ ಪುನಃ ಮೇಲೆದ್ದಿದ್ದನು[1].
03130010a ಕಾಶ್ಮೀರಮಂಡಲಂ ಚೈತತ್ಸರ್ವಪುಣ್ಯಮರಿಂದಮ|
03130010c ಮಹರ್ಷಿಭಿಶ್ಚಾಧ್ಯುಷಿತಂ ಪಶ್ಯೇದಂ ಭ್ರಾತೃಭಿಃ ಸಹ||
ಅರಿಂದಮ! ಇದು ಸರ್ವಪುಣ್ಯಕಾರಕವಾದ ಕಾಶ್ಮೀರಮಂಡಲ. ಋಷಿಗಳು ವಾಸವಾಗಿರುವ ಈ ಪ್ರದೇಶವನ್ನು ತಮ್ಮಂದಿರೊಡನೆ ನೋಡು.
03130011a ಅತ್ರೋತ್ತರಾಣಾಂ ಸರ್ವೇಷಾಮೃಷೀಣಾಂ ನಾಹುಷಸ್ಯ ಚ|
03130011c ಅಗ್ನೇಶ್ಚಾತ್ರೈವ ಸಂವಾದಃ ಕಾಶ್ಯಪಸ್ಯ ಚ ಭಾರತ||
ಭಾರತ! ಇಲ್ಲಿಯೇ ಉತ್ತರದ ಋಷಿಗಳೆಲ್ಲರೂ, ನಾಹುಷ ಯಯಾತಿ, ಅಗ್ನಿ ಮತ್ತು ಕಾಶ್ಯಪರು ಸಂವಾದವನ್ನು ನಡೆಸಿದ್ದರು.
03130012a ಏತದ್ದ್ವಾರಂ ಮಹಾರಾಜ ಮಾನಸಸ್ಯ ಪ್ರಕಾಶತೇ|
03130012c ವರ್ಷಮಸ್ಯ ಗಿರೇರ್ಮಧ್ಯೇ ರಾಮೇಣ ಶ್ರೀಮತಾ ಕೃತಂ||
ಮಹಾರಾಜ! ಇಲ್ಲಿ ಕಾಣಿಸುವುದು ಮಾನಸ ಸರೋವರದ ದ್ವಾರ. ಮಳೆನೀರಿನಿಂದ ತುಂಬಿದ ಇದನ್ನು ಗಿರಿಗಳ ಮಧ್ಯದಲ್ಲಿ ಶ್ರೀಮತ ರಾಮನು ರಚಿಸಿದನು.
03130013a ಏಷ ವಾತಿಕಷಂಡೋ ವೈ ಪ್ರಖ್ಯಾತಃ ಸತ್ಯವಿಕ್ರಮಃ|
03130013c ನಾಭ್ಯವರ್ತತ ಯದ್ದ್ವಾರಂ ವಿದೇಹಾನುತ್ತರಂ ಚ ಯಃ||
ಇದು ವಿದೇಹದ ಉತ್ತರದಲ್ಲಿರುವ ಸತ್ಯವಿಕ್ರಮಕ್ಕೆ ಪ್ರಖ್ಯಾತವಾದ ವಾತಿಕಷಂಡ. ಇದರ ದ್ವಾರವನ್ನೂ ಯಾರೂ ಉಲ್ಲಂಘಿಸಿಲ್ಲ.
03130014a ಏಷ ಉಜ್ಜಾನಕೋ ನಾಮ ಯವಕ್ರೀರ್ಯತ್ರ ಶಾಂತವಾನ್|
03130014c ಅರುಂಧತೀಸಹಾಯಶ್ಚ ವಸಿಷ್ಠೋ ಭಗವಾನೃಷಿಃ||
ಇದು ಉಜ್ಜಾನಕ ಎಂಬ ಹೆಸರಿನ ಮಾರುಕಟ್ಟೆ. ಇಲ್ಲಿಯೇ ಭಗವಾನೃಷಿ ವಸಿಷ್ಠನು ಅರುಂಧತಿಯೊಡನೆ ಸುಖವಾಗಿದ್ದನು.
03130015a ಹ್ರದಶ್ಚ ಕುಶವಾನೇಷ ಯತ್ರ ಪದ್ಮಂ ಕುಶೇಶಯಂ|
03130015c ಆಶ್ರಮಶ್ಚೈವ ರುಕ್ಮಿಣ್ಯಾ ಯತ್ರಾಶಾಮ್ಯದಕೋಪನಾ||
ಇದು ಪದ್ಮದಷ್ಟು ಕುಶಗಳ ಹಾಸಿಗೆಯಿರುವ ಕುಶವನ ಸರೋವರ. ಇಲ್ಲಿಯೇ ಕೋಪದಿಂದ ಶಾಂತಗೊಂಡ ರುಕ್ಮಿಯ ಆಶ್ರಮವೂ ಇದೆ.
03130016a ಸಮಾಧೀನಾಂ ಸಮಾಸಸ್ತು ಪಾಂಡವೇಯ ಶ್ರುತಸ್ತ್ವಯಾ|
03130016c ತಂ ದ್ರಕ್ಷ್ಯಸಿ ಮಹಾರಾಜ ಭೃಗುತುಂಗಂ ಮಹಾಗಿರಿಂ||
03130017a ಜಲಾಂ ಚೋಪಜಲಾಂ ಚೈವ ಯಮುನಾಮಭಿತೋ ನದೀಂ|
03130017c ಉಶೀನರೋ ವೈ ಯತ್ರೇಷ್ಟ್ವಾ ವಾಸವಾದತ್ಯರಿಚ್ಯತ||
ಪಾಂಡವೇಯ! ಸಮಾಧಿಗಳ ಸಂಕುಲದ ಕುರಿತು ನೀನು ಕೇಳಿದ್ದೀಯೆ. ಮಹಾರಾಜ! ನೀನು ಭೃಗುತುಂಗ ಮಹಾಗಿರಿಯನ್ನು, ಯಮುನಾ ನದಿಯ ಜೊತೆ ಹರಿಯುವ ಜಲ ಮತ್ತು ಉಪಜಲ ನದಿಗಳನ್ನು ನೋಡುತ್ತೀಯೆ. ಅಲ್ಲಿ ಉಶೀನರನು ಯಾಗಮಾಡಿ ಇಂದ್ರನಿಂದ ಪುರಸ್ಕೃತಗೊಂಡಿದ್ದನು.
03130018a ತಾಂ ದೇವಸಮಿತಿಂ ತಸ್ಯ ವಾಸವಶ್ಚ ವಿಶಾಂ ಪತೇ|
03130018c ಅಭ್ಯಗಚ್ಚತ ರಾಜಾನಂ ಜ್ಞಾತುಮಗ್ನಿಶ್ಚ ಭಾರತ||
ವಿಶಾಂಪತೇ! ಭಾರತ! ಅವನು ದೇವತೆಗಳಿಗೆ ಸಮಾನನೇ ಎಂದು ಪರೀಕ್ಷಿಸಲು ಇಂದ್ರ ಮತ್ತು ಅಗ್ನಿಯರು ಆ ರಾಜನಲ್ಲಿಗೆ ಬಂದರು.
03130019a ಜಿಜ್ಞಾಸಮಾನೌ ವರದೌ ಮಹಾತ್ಮಾನಮುಶೀನರಂ|
03130019c ಇಂದ್ರಃ ಶ್ಯೇನಃ ಕಪೋತೋಽಗ್ನಿರ್ಭೂತ್ವಾ ಯಜ್ಞೇಽಭಿಜಗ್ಮತುಃ||
ಮಹಾತ್ಮ ಉಶೀನರನನ್ನು ಪರೀಕ್ಷಿಸಲು ಮತ್ತು ವರಗಳನ್ನು ನೀಡಲು ಇಂದ್ರನು ಒಂದು ಗಿಡುಗವಾಗಿ ಮತ್ತು ಅಗ್ನಿಯು ಒಂದು ಪಾರಿವಾಳವಾಗಿ ಅವನ ಯಜ್ಞಶಾಲೆಗೆ ಆಗಮಿಸಿದರು.
03130020a ಊರುಂ ರಾಜ್ಞಃ ಸಮಾಸಾದ್ಯ ಕಪೋತಃ ಶ್ಯೇನಜಾದ್ಭಯಾತ್|
03130020c ಶರಣಾರ್ಥೀ ತದಾ ರಾಜನ್ನಿಲಿಲ್ಯೇ ಭಯಪೀಡಿತಃ||
ರಾಜನ್! ಗಿಡುಗದ ಭಯದಿಂದ ಪಾರಿವಾಳವು ರಾಜನ ತೊಡೆಯಮೇಲೆ ಕುಳಿತುಕೊಂಡು ಭಯಪೀಡಿತಗೊಂಡು ರಕ್ಷಣೆಯನ್ನು ಕೇಳಿತು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಶ್ಯೇನಕಪೋತೀಯೇ ತ್ರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಶ್ಯೇನಕಪೋತದಲ್ಲಿ ನೂರಾಮೂವತ್ತನೆಯ ಅಧ್ಯಾಯವು.
[1] ಇದರ ಕುರಿತಾದ ಕಥೆಯು ಆದಿಪರ್ವದ ೧೬೭ನೇ ಅಧ್ಯಾಯದಲ್ಲಿ ಬರುತ್ತದೆ.