Aranyaka Parva: Chapter 126

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೬

ಮಾಂಧಾತಾ

ರಾಜಾ ಮಾಂಧಾತನು ಆ ಹೆಸರನ್ನು ಹೇಗೆ ಪಡೆದನು ಎಂದು ಕೇಳಲು ಲೋಮಶನು ಯುಧಿಷ್ಠಿರನಿಗೆ ಮಾಂಧಾತ ಚರಿತ್ರೆಯನ್ನು ಪ್ರಾರಂಭಿಸಿದುದು (೧-೪). ಮಕ್ಕಳಿಲ್ಲದ ಇಕ್ಷ್ವಾಕುವಂಶದ ರಾಜ ಯುವನಾಶ್ವನು ರಾಜ್ಯವನ್ನು ಮಂತ್ರಿಗಳಿಗೊಪ್ಪಿಸಿ ವನದಲ್ಲಿ ವಾಸಿಸುತ್ತಿರಲು ಒಂದು ರಾತ್ರಿ ಬಾಯಾರಿಕೆಯಿಂದ ಬಳಲಿ ಭೃಗುವಿನ ಆಶ್ರಮವನ್ನು ಪ್ರವೇಶಿಸಿದುದು (೫-೮). ಅದೇ ರಾತ್ರಿ ಯುವನಾಶ್ವನ ಪತ್ನಿಯು ಕುಡಿದು ಇಂದ್ರಸಮಾನ ಪುತ್ರನನ್ನು ಪಡೆಯಲೆಂದು ಭೃಗುವು ಯಾಗಮಾಡಿ, ಕಲಶದಲ್ಲಿ ಅಭಿಮಂತ್ರಿಸಿಟ್ಟ ನೀರನ್ನು ತಿಳಿಯದೆಯೇ ಯುವನಾಶ್ವನು ಕುಡಿದುದು (೯-೧೫). ವಿಷಯವನ್ನು ತಿಳಿದ ಭೃಗುವು ನೀನೇ ಮಹಾಬಲಿ ಮಗನಿಗೆ ಜನ್ಮ ನೀಡುತ್ತೀಯೆ ಎನ್ನುವುದು (೧೬-೨೪). ನೂರು ವರ್ಷಗಳ ನಂತರ ಯುವನಾಶ್ವನ ಎಡಭಾಗವು ಸೀಳಿ ಮಹಾತೇಜಸ್ವಿ ಮಗನು ಹೊರಬರಲು, ಇಂದ್ರನು ತನ್ನ ತೋರುಬೆರಳನ್ನಿಟ್ಟು, ತನ್ನಿಂದ ಪೋಷಣೆಯನ್ನು ಪಡೆದ ಅವನನ್ನು ಮಾಂಧಾತನೆಂದು ಕರೆದುದು (೨೫-೨೮). ಮಾಂಧಾತನ ರಾಜ್ಯಭಾರ (೨೯-೪೩).

03126001 ಯುಧಿಷ್ಠಿರ ಉವಾಚ|

03126001a ಮಾಂಧಾತಾ ರಾಜಶಾರ್ದೂಲಸ್ತ್ರಿಷು ಲೋಕೇಷು ವಿಶ್ರುತಃ|

03126001c ಕಥಂ ಜಾತೋ ಮಹಾಬ್ರಹ್ಮನ್ಯೌವನಾಶ್ವೋ ನೃಪೋತ್ತಮಃ||

03126001e ಕಥಂ ಚೈತಾಂ ಪರಾಂ ಕಾಷ್ಠಾಂ ಪ್ರಾಪ್ತವಾನಮಿತದ್ಯುತಿಃ||

ಯುಧಿಷ್ಠಿರನು ಹೇಳಿದನು: “ರಾಜಶಾರ್ದೂಲ ಮಾಂಧಾತನು ಮೂರು ಲೋಕಗಳಲ್ಲಿಯೂ ವಿಶ್ರುತನಾಗಿದ್ದನು. ಮಹಾಬ್ರಾಹ್ಮಣ! ಆ ನೃಪೋತ್ತಮ ಯೌವನಾಶ್ವನು ಹೇಗೆ ಹುಟ್ಟಿದ? ಮತ್ತು ಆ ಅಮಿತದ್ಯುತಿಯು ತನ್ನ ಪರಾಕಾಷ್ಟೆಯನ್ನು ಹೇಗೆ ತಲುಪಿದನು?

03126002a ಯಸ್ಯ ಲೋಕಾಸ್ತ್ರಯೋ ವಶ್ಯಾ ವಿಷ್ಣೋರಿವ ಮಹಾತ್ಮನಃ|

03126002c ಏತದಿಚ್ಚಾಮ್ಯಹಂ ಶ್ರೋತುಂ ಚರಿತಂ ತಸ್ಯ ಧೀಮತಃ||

03126003a ಯಥಾ ಮಾಂಧಾತೃಶಬ್ದಶ್ಚ ತಸ್ಯ ಶಕ್ರಸಮದ್ಯುತೇಃ|

03126003c ಜನ್ಮ ಚಾಪ್ರತಿವೀರ್ಯಸ್ಯ ಕುಶಲೋ ಹ್ಯಸಿ ಭಾಷಿತುಂ||

ಮೂರು ಲೋಕಗಳೂ ವಿಷ್ಣುವಿನಲ್ಲಿರುವಂತೆ ಆ ಮಹಾತ್ಮನ ವಶದಲ್ಲಿದ್ದವು. ಆ ಧೀಮಂತನ ಚರಿತ್ರೆಯನ್ನು ಕೇಳಲು ಬಯಸುತ್ತೇನೆ. ಆ ಶಕ್ರಸಮದ್ಯುತಿ, ಅಪ್ರತಿಮವೀರನು ಹುಟ್ಟಿದಾಗ ಮಾಂಧಾತ ಎನ್ನುವ ಹೆಸರನ್ನು ಹೇಗೆ ಪಡೆದನು? ನೀನು ಹೇಳುವುದರಲ್ಲಿ ಕುಶಲನಾಗಿದ್ದೀಯೆ!”

03126004 ಲೋಮಶ ಉವಾಚ|

03126004a ಶೃಣುಷ್ವಾವಹಿತೋ ರಾಜನ್ರಾಜ್ಞಸ್ತಸ್ಯ ಮಹಾತ್ಮನಃ|

03126004c ಯಥಾ ಮಾಂಧಾತೃಶಬ್ದೋ ವೈ ಲೋಕೇಷು ಪರಿಗೀಯತೇ||

ಲೋಮಶನು ಹೇಳಿದನು: “ಆ ರಾಜ ಮಹಾತ್ಮನನ್ನು ಲೋಕವು ಮಾಂಧಾತ ಎನ್ನುವ ಹೆಸರಿನಿಂದ ಏಕೆ ಕರೆಯುತ್ತದೆ ಎನ್ನುವುದನ್ನು ಗಮನವಿಟ್ಟು ಕೇಳು ರಾಜನ್!

03126005a ಇಕ್ಷ್ವಾಕುವಂಶಪ್ರಭವೋ ಯುವನಾಶ್ವೋ ಮಹೀಪತಿಃ|

03126005c ಸೋಽಯಜತ್ಪೃಥಿವೀಪಾಲ ಕ್ರತುಭಿರ್ಭೂರಿದಕ್ಷಿಣೈಃ||

ಇಕ್ಷ್ವಾಕು ವಂಶದಲ್ಲಿ ಯುವನಾಶ್ವ ಎನ್ನುವ ಮಹೀಪತಿಯು ಹುಟ್ಟಿದ್ದನು. ಆ ಪೃಥ್ವೀಪಾಲನು ಭೂರಿದಕ್ಷಿಣೆಗಳನ್ನೊಡಗೂಡಿದ ಕ್ರತುವಿಗೆ ಯಜಮಾನನಾಗಿದ್ದನು.

03126006a ಅಶ್ವಮೇಧಸಹಸ್ರಂ ಚ ಪ್ರಾಪ್ಯ ಧರ್ಮಭೃತಾಂ ವರಃ|

03126006c ಅನ್ಯೈಶ್ಚ ಕ್ರತುಭಿರ್ಮುಖ್ಯೈರ್ವಿವಿಧೈರಾಪ್ತದಕ್ಷಿಣೈಃ||

ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಸಾವಿರ ಅಶ್ವಮೇಧಗಳನ್ನು ಪೂರೈಸಿ, ಇನ್ನೂ ಇತರ ಪ್ರಮುಖ ಕ್ರತುಗಳನ್ನು ಆಪ್ತರು ಮತ್ತು ದಕ್ಷಿಣೆಗಳೊಂದಿಗೆ ಕೈಗೊಂಡನು.

03126007a ಅನಪತ್ಯಸ್ತು ರಾಜರ್ಷಿಃ ಸ ಮಹಾತ್ಮಾ ದೃಢವ್ರತಃ|

03126007c ಮಂತ್ರಿಷ್ವಾಧಾಯ ತದ್ರಾಜ್ಯಂ ವನನಿತ್ಯೋ ಬಭೂವ ಹ||

ಆದರೆ ಆ ದೃಢವ್ರತ ಮಹಾತ್ಮ ರಾಜರ್ಷಿಗೆ ಮಕ್ಕಳಿರಲಿಲ್ಲ. ಆ ರಾಜ್ಯವನ್ನು ಮಂತ್ರಿಗಳಿಗೊಪ್ಪಿಸಿ ಅವನು ವನದಲ್ಲಿಯೇ ನಿತ್ಯ ವಾಸಿಸತೊಡಗಿದನು.

03126008a ಶಾಸ್ತ್ರದೃಷ್ಟೇನ ವಿಧಿನಾ ಸಮ್ಯೋಜ್ಯಾತ್ಮಾನಮಾತ್ಮನಾ|

03126008c ಪಿಪಾಸಾಶುಷ್ಕಹೃದಯಃ ಪ್ರವಿವೇಶಾಶ್ರಮಂ ಭೃಗೋಃ||

ತನ್ನನ್ನು ಶಾಸ್ತ್ರಗಳಲ್ಲಿ ಹೇಳಿದ ವಿಧಿಗಳಿಗೆ ತೊಡಗಿಸಿಕೊಂಡು, ಬಾಯಾರಿಕೆಯಿಂದ ಒಣಗಿದ ಹೃದಯದವನಾಗಿ ಅವನು ಭೃಗುವಿನ ಆಶ್ರಮವನ್ನು ಪ್ರವೇಶಿಸಿದನು.

03126009a ತಾಮೇವ ರಾತ್ರಿಂ ರಾಜೇಂದ್ರ ಮಹಾತ್ಮಾ ಭೃಗುನಂದನಃ|

03126009c ಇಷ್ಟಿಂ ಚಕಾರ ಸೌದ್ಯುಮ್ನೇರ್ಮಹರ್ಷಿಃ ಪುತ್ರಕಾರಣಾತ್||

ರಾಜೇಂದ್ರ! ಅದೇ ರಾತ್ರಿ ಮಹಾತ್ಮ ಮಹರ್ಷಿ ಭೃಗುನಂದನನು ಸೌಧ್ಯುಮ್ನಿಗೆ[1] ಮಕ್ಕಳಾಗಲೆಂಬ ಕಾರಣದಿಂದ ಯಾಗವನ್ನು ನಡೆಸಿದ್ದನು.

03126010a ಸಂಭೃತೋ ಮಂತ್ರಪೂತೇನ ವಾರಿಣಾ ಕಲಶೋ ಮಹಾನ್|

03126010c ತತ್ರಾತಿಷ್ಠತ ರಾಜೇಂದ್ರ ಪೂರ್ವಮೇವ ಸಮಾಹಿತಃ||

03126010e ಯತ್ಪ್ರಾಶ್ಯ ಪ್ರಸವೇತ್ತಸ್ಯ ಪತ್ನೀ ಶಕ್ರಸಮಂ ಸುತಂ||

ಒಂದು ದೊಡ್ಡ ಕಲಶದಲ್ಲಿ ನೀರನ್ನು ತುಂಬಿ ಮಂತ್ರಗಳಿಂದ ಶುದ್ಧೀಕರಿಸಲಾಗಿತ್ತು. ರಾಜೇಂದ್ರ! ಅದನ್ನು ಕುಡಿದು ಅವನ ಪತ್ನಿಯು ಶಕ್ರನ ಸಮನಾದ ಮಗನನ್ನು ಪಡೆಯಲೆಂದು ಮೊದಲೇ ಮಂತ್ರಗಳಿಂದ ಶುದ್ದೀಕರಿಸಿದ ನೀರನ್ನು ದೊಡ್ಡ ಕಲಶದಲ್ಲಿ ತುಂಬಿಸಿಡಲಾಗಿತ್ತು.

03126011a ತಂ ನ್ಯಸ್ಯ ವೇದ್ಯಾಂ ಕಲಶಂ ಸುಷುಪುಸ್ತೇ ಮಹರ್ಷಯಃ|

03126011c ರಾತ್ರಿಜಾಗರಣಶ್ರಾಂತಾಃ ಸೌದ್ಯುಮ್ನಿಃ ಸಮತೀತ್ಯ ತಾನ್||

03126012a ಶುಷ್ಕಕಂಠಃ ಪಿಪಾಸಾರ್ತಃ ಪಾಣೀಯಾರ್ಥೀ ಭೃಶಂ ನೃಪಃ|

03126012c ತಂ ಪ್ರವಿಶ್ಯಾಶ್ರಮಂ ಶ್ರಾಂತಃ ಪಾಣೀಯಂ ಸೋಽಭ್ಯಯಾಚತ||

ಅದನ್ನು ವೇದಿಕೆಯ ಮೇಲಿಟ್ಟು ರಾತ್ರಿಯಿಡೀ ಜಾಗರಣೆ ಮಾಡಿ ಆಯಾಸಗೊಂಡಿದ್ದ ಮಹರ್ಷಿಗಳು ಮಲಗಿದ್ದಾಗ ಅಲ್ಲಿಗೆ ಸೌದ್ಯುಮ್ನಿಯು ಬಂದನು. ಅ ರಾಜನು ಕಂಠವೊಣಗಿ, ಅತಿ ಬಾಯಾರಿಕೆಯಿಂದ ನೀರನ್ನು ಅರಸುತ್ತಾ ಆ ಆಶ್ರಮವನ್ನು ಆಯಾಸದಿಂದ ಪ್ರವೇಶಿಸಿ ನೀರನ್ನು ಕೇಳಿದನು.

03126013a ತಸ್ಯ ಶ್ರಾಂತಸ್ಯ ಶುಷ್ಕೇಣ ಕಂಠೇನ ಕ್ರೋಶತಸ್ತದಾ|

03126013c ನಾಶ್ರೌಷೀತ್ಕಶ್ಚನ ತದಾ ಶಕುನೇರಿವ ವಾಶಿತಂ||

ಆದರೆ ಆಯಾಸಗೊಂಡ ರಾಜನು ಒಣಗಿದ ಕಂಠದಿಂದ ನೀರನ್ನು ಯಾಚಿಸಿದ ಕೂಗು ಯಾರಿಗೂ ಕೇಳಲಿಲ್ಲ. ಅದು ಹಕ್ಕಿಯ ಕೂಗಿನಂತೆ ಕ್ಷೀಣವಾಗಿತ್ತು.

03126014a ತತಸ್ತಂ ಕಲಶಂ ದೃಷ್ಟ್ವಾ ಜಲಪೂರ್ಣಂ ಸ ಪಾರ್ಥಿವಃ|

03126014c ಅಭ್ಯದ್ರವತ ವೇಗೇನ ಪೀತ್ವಾ ಚಾಂಭೋ ವ್ಯವಾಸೃಜತ್||

ಆಗ ನೀರಿನಿಂದ ತುಂಬಿದ್ದ ಕಲಶವನ್ನು ನೋಡಿ ಆ ರಾಜನು ಬೇಗನೆ ಅಲ್ಲಿಗೆ ಓಡಿ ಹೋಗಿ ನೀರನ್ನು ಕುಡಿದು ಉಳಿದುದನ್ನು ಚೆಲ್ಲಿದನು.

03126015a ಸ ಪೀತ್ವಾ ಶೀತಲಂ ತೋಯಂ ಪಿಪಾಸಾರ್ತೋ ಮಹೀಪತಿಃ|

03126015c ನಿರ್ವಾಣಮಗಮದ್ಧೀಮಾನ್ಸುಸುಖೀ ಚಾಭವತ್ತದಾ||

ಆ ತಣ್ಣಗಿನ ನೀರನ್ನು ಕುಡಿದು ಬಾಯಾರಿಸಿಕೊಂಡ ಧೀಮಂತ ರಾಜನು ಸಂತೋಷದಿಂದ ಅಲ್ಲಿಯೇ ಗಾಢ ನಿದ್ರೆ ಮಾಡಿದನು.

03126016a ತತಸ್ತೇ ಪ್ರತ್ಯಬುಧ್ಯಂತ ಋಷಯಃ ಸನರಾಧಿಪಾಃ|

03126016c ನಿಸ್ತೋಯಂ ತಂ ಚ ಕಲಶಂ ದದೃಶುಃ ಸರ್ವ ಏವ ತೇ||

ರಾಜನೊಂದಿಗೆ ಎಚ್ಚರಗೊಂಡ ಋಷಿಗಳು ಎಲ್ಲರೂ ಕಲಶದಿಂದ ನೀರು ಬರಿದಾಗಿದ್ದುದನ್ನು ಕಂಡರು.

03126017a ಕಸ್ಯ ಕರ್ಮೇದಮಿತಿ ಚ ಪರ್ಯಪೃಚ್ಚನ್ಸಮಾಗತಾಃ|

03126017c ಯುವನಾಶ್ವೋ ಮಯೇತ್ಯೇವ ಸತ್ಯಂ ಸಮಭಿಪದ್ಯತ||

ಅವರೆಲ್ಲರೂ ಒಟ್ಟಿಗೆ “ಇದು ಯಾರ ಕಾರ್ಯ?” ಎಂದು ಕೇಳಲು ಯುವನಾಶ್ವನು “ನಾನೇ ಅದನ್ನು ಮಾಡಿದ್ದುದು” ಎಂದು ಸತ್ಯವನ್ನು ಹೇಳಿದನು.

03126018a ನ ಯುಕ್ತಮಿತಿ ತಂ ಪ್ರಾಹ ಭಗವಾನ್ಭಾರ್ಗವಸ್ತದಾ|

03126018c ಸುತಾರ್ಥಂ ಸ್ಥಾಪಿತಾ ಹ್ಯಾಪಸ್ತಪಸಾ ಚೈವ ಸಂಭೃತಾಃ||

ಆಗ ಭಗವಾನ್ ಭಾರ್ಗವನು “ಅದು ಸರಿಯಲ್ಲ! ಈ ನೀರನ್ನು ತಪಸ್ಸಿನಿಂದ ಸಂಗ್ರಹಿಸಿ ನಿನ್ನ ಮಗನಿಗೋಸ್ಕರವಾಗಿ ಇಡಲಾಗಿತ್ತು” ಎಂದನು.

03126019a ಮಯಾ ಹ್ಯತ್ರಾಹಿತಂ ಬ್ರಹ್ಮ ತಪ ಆಸ್ಥಾಯ ದಾರುಣಂ|

03126019c ಪುತ್ರಾರ್ಥಂ ತವ ರಾಜರ್ಷೇ ಮಹಾಬಲಪರಾಕ್ರಮ||

“ರಾಜರ್ಷೇ! ನಿನಗೆ ಮಹಾಬಲ ಪರಾಕ್ರಮಿಯಾದ ಮಗನಾಗಲೆಂದು ದಾರುಣವಾದ ತಪಸ್ಸಿನ ನಂತರ ಒಬ್ಬ ಬ್ರಾಹ್ಮಣನನ್ನು ಅದಕ್ಕೆ ನಿಯೋಗಿಸಿದ್ದೆ.

03126020a ಮಹಾಬಲೋ ಮಹಾವೀರ್ಯಸ್ತಪೋಬಲಸಮನ್ವಿತಃ|

03126020c ಯಃ ಶಕ್ರಮಪಿ ವೀರ್ಯೇಣ ಗಮಯೇದ್ಯಮಸಾದನಂ||

ತನ್ನ ವೀರ್ಯದಿಂದ ಶಕ್ರನನ್ನೂ ಯಮಸದನಕ್ಕೆ ಕಳುಹಿಸಬಲ್ಲ ತಪೋಬಲಸಮನ್ವಿತನಾದ, ಮಹಾಬಲಶಾಲಿ, ಮಹಾವೀರ ಮಗನಿಗಾಗಿ.

03126021a ಅನೇನ ವಿಧಿನಾ ರಾಜನ್ಮಯೈತದುಪಪಾದಿತಂ|

03126021c ಅಬ್ಭಕ್ಷಣಂ ತ್ವಯಾ ರಾಜನ್ನಯುಕ್ತಂ ಕೃತಮದ್ಯ ವೈ||

ರಾಜನ್! ಈ ವಿಧಿಯಿಂದ ಅದನ್ನು ತಯಾರಿಸಿದ್ದೆ. ರಾಜನ್! ಇಂದು ನೀನು ಅದನ್ನು ಕುಡಿದಿದ್ದುದು ಸರಿಯಲ್ಲ!

03126022a ನ ತ್ವದ್ಯ ಶಕ್ಯಮಸ್ಮಾಭಿರೇತತ್ಕರ್ತುಮತೋಽನ್ಯಥಾ|

03126022c ನೂನಂ ದೈವಕೃತಂ ಹ್ಯೇತದ್ಯದೇವಂ ಕೃತವಾನಸಿ||

ಆದರೆ ಇಂದು ನೀನು ಮಾಡಿದ್ದುದನ್ನು ಬೇರೆಯಾಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನೀನು ಏನು ಮಾಡಿದೆಯೋ ಅದು ದೈವವೇ ನಡೆಸಿದ್ದುದು.

03126023a ಪಿಪಾಸಿತೇನ ಯಾಃ ಪೀತಾ ವಿಧಿಮಂತ್ರಪುರಸ್ಕೃತಾಃ|

03126023c ಆಪಸ್ತ್ವಯಾ ಮಹಾರಾಜ ಮತ್ತಪೋವೀರ್ಯಸಂಭೃತಾಃ||

03126023e ತಾಭ್ಯಸ್ತ್ವಮಾತ್ಮನಾ ಪುತ್ರಮೇವಂವೀರ್ಯಂ ಜನಿಷ್ಯಸಿ||

ವಿಧಿವತ್ತಾಗಿ ಮಂತ್ರ ಪುರಸ್ಕೃತಗೊಂಡ ನನ್ನ ತಪೋವೀರ್ಯದಿಂದ ತುಂಬಿದ ಆ ನೀರನ್ನು ಬಾಯಾರಿಕೆಯಿಂದ ನೀನು ಕುಡಿದಿದ್ದುದರಿಂದ, ಮಹಾರಾಜ! ಅಂಥಹ ಮಹಾವೀರ ಪುತ್ರನು ನಿನ್ನಲ್ಲಿಯೇ ಹುಟ್ಟುತ್ತಾನೆ.

03126024a ವಿಧಾಸ್ಯಾಮೋ ವಯಂ ತತ್ರ ತವೇಷ್ಟಿಂ ಪರಮಾದ್ಭುತಾಂ|

03126024c ಯಥಾ ಶಕ್ರಸಮಂ ಪುತ್ರಂ ಜನಯಿಷ್ಯಸಿ ವೀರ್ಯವಾನ್||

ಈ ಪರಮಾದ್ಭುತ ಇಷ್ಟಿಯನ್ನು ನಿನಗೋಸ್ಕರ ನಾವೇ ಮಾಡುತ್ತೇವೆ. ಇದರಿಂದ ವೀರ್ಯವಂತ ನೀನು ಇಂದ್ರಸಮ ಮಗನಿಗೆ ಜನ್ಮನೀಡುತ್ತೀಯೆ.

03126025a ತತೋ ವರ್ಷಶತೇ ಪೂರ್ಣೇ ತಸ್ಯ ರಾಜ್ಞೋ ಮಹಾತ್ಮನಃ|

03126025c ವಾಮಂ ಪಾರ್ಶ್ವಂ ವಿನಿರ್ಭಿದ್ಯ ಸುತಃ ಸೂರ್ಯ ಇವಾಪರಃ||

03126026a ನಿಶ್ಚಕ್ರಾಮ ಮಹಾತೇಜಾ ನ ಚ ತಂ ಮೃತ್ಯುರಾವಿಶತ್|

03126026c ಯುವನಾಶ್ವಂ ನರಪತಿಂ ತದದ್ಭುತಮಿವಾಭವತ್||

ಒಂದು ನೂರು ವರ್ಷಗಳು ತುಂಬಿದ ನಂತರ ಆ ಮಹಾತ್ಮ ರಾಜನ ಎಡಭಾಗವು ಸೀಳಿ ಇನ್ನೊಬ್ಬ ಸೂರ್ಯನಂತೆ ಪ್ರಕಾಶಿಸುವ ಮಹಾತೇಜಸ್ವಿ ಮಗನು ಹೊರಬಂದನು. ಆದರೆ ನರಪತಿ ಯುವನಾಶ್ವನು ಸಾಯಲಿಲ್ಲ ಎನ್ನುವುದೇ ಅದಕ್ಕಿಂತಲೂ ಅದ್ಭುತವಾಗಿದ್ದಿತು.

03126027a ತತಃ ಶಕ್ರೋ ಮಹಾತೇಜಾಸ್ತಂ ದಿದೃಕ್ಷುರುಪಾಗಮತ್|

03126027c ಪ್ರದೇಶಿನೀಂ ತತೋಽಸ್ಯಾಸ್ಯೇ ಶಕ್ರಃ ಸಮಭಿಸಂದಧೇ||

ಆಗ ಮಹಾತೇಜಸ್ವಿ ಇಂದ್ರನು ಅವನನ್ನು ನೋಡಲು ಬಂದನು. ಇಂದ್ರನು ತನ್ನ ತೋರುಬೆರಳನ್ನು ಆ ಶಿಶುವಿನ ಬಾಯಲ್ಲಿಟ್ಟು ಹೇಳಿದನು:

03126028a ಮಾಮಯಂ ಧಾಸ್ಯತೀತ್ಯೇವಂ ಪರಿಭಾಷ್ಟಃ ಸ ವಜ್ರಿಣಾ|

03126028c ಮಾಂಧಾತೇತಿ ಚ ನಾಮಾಸ್ಯ ಚಕ್ರುಃ ಸೇಂದ್ರಾ ದಿವೌಕಸಃ||

“ಇವನು ನನ್ನಿಂದ ಪೋಷಣೆಯನ್ನು ಪಡೆಯಲಿ!” ಆದುದರಿಂದ ಇಂದ್ರನೊಂದಿಗೆ ಇತರ ದೇವತೆಗಳು ಅವನಿಗೆ ಮಾಂಧಾತ ಎಂಬ ಹೆಸರನ್ನಿತ್ತರು.

03126029a ಪ್ರದೇಶಿನೀಂ ಶಕ್ರದತ್ತಾಮಾಸ್ವಾದ್ಯ ಸ ಶಿಶುಸ್ತದಾ|

03126029c ಅವರ್ಧತ ಮಹೀಪಾಲ ಕಿಷ್ಕೂಣಾಂ ಚ ತ್ರಯೋದಶ||

ಮಹಾರಾಜ! ಇಂದ್ರನು ನೀಡಿದ ತೋರುಬೆರಳನ್ನು ಚೀಪಿದ ಆ ಶಿಶುವು ಹದಿಮೂರು ಕಿಷ್ಕೂಣದಷ್ಟು ಬೆಳೆಯಿತು.

03126030a ವೇದಾಸ್ತಂ ಸಧನುರ್ವೇದಾ ದಿವ್ಯಾನ್ಯಸ್ತ್ರಾಣಿ ಚೇಶ್ವರಂ|

03126030c ಉಪತಸ್ಥುರ್ಮಹಾರಾಜ ಧ್ಯಾತಮಾತ್ರಾಣಿ ಸರ್ವಶಃ||

ಮಹಾರಾಜ! ಧನುರ್ವೇದದೊಂದಿಗೆ ವೇದಗಳು, ದಿವ್ಯಾಸ್ತ್ರಗಳು ಎಲ್ಲವೂ ಆ ರಾಜನಿಗೆ, ಕೇವಲ ನೆನೆಸಿಕೊಂಡಿದ್ದಕ್ಕೇ, ಕಾಣಿಸಿಕೊಂಡವು.

03126031a ಧನುರಾಜಗವಂ ನಾಮ ಶರಾಃ ಶೃಂಗೋದ್ಭವಾಶ್ಚ ಯೇ|

03126031c ಅಭೇದ್ಯಂ ಕವಚಂ ಚೈವ ಸದ್ಯಸ್ತಮುಪಸಂಶ್ರಯನ್||

ಅಜಗವ ಎಂಬ ಹೆಸರಿನ ಧನುಸ್ಸು, ಶೃಂಗದಿಂದ ಮಾಡಲ್ಪಟ್ಟ ಬಾಣ, ಮತ್ತು ಅಭೇದ್ಯ ಕವಚಗಳು ತಕ್ಷಣವೇ ಅವನ ವಶವಾದವು.

03126032a ಸೋಽಭಿಷಿಕ್ತೋ ಮಘವತಾ ಸ್ವಯಂ ಶಕ್ರೇಣ ಭಾರತ|

03126032c ಧರ್ಮೇಣ ವ್ಯಜಯಲ್ಲೋಕಾಂಸ್ತ್ರೀನ್ವಿಷ್ಣುರಿವ ವಿಕ್ರಮೈಃ||

ಭಾರತ! ಮಘವತ ಇಂದ್ರನೇ ಅವನನ್ನು ಅಭಿಷೇಕಿಸಿದನು ಮತ್ತು ವಿಕ್ರಮದಿಂದ ವಿಷ್ಣುವು ಹೇಗೋ ಹಾಗೆ ಧರ್ಮದಿಂದ ಮೂರು ಲೋಕಗಳನ್ನೂ ಗೆದ್ದನು.

03126033a ತಸ್ಯಾಪ್ರತಿಹತಂ ಚಕ್ರಂ ಪ್ರಾವರ್ತತ ಮಹಾತ್ಮನಃ|

03126033c ರತ್ನಾನಿ ಚೈವ ರಾಜರ್ಷಿಂ ಸ್ವಯಮೇವೋಪತಸ್ಥಿರೇ||

ಆ ಮಹಾತ್ಮನ ಚಕ್ರವು ಅಪ್ರತಿಹತವಾಗಿ ಉರುಳಿತು ಮತ್ತು ತಮ್ಮ ಇಚ್ಛೆಯಿಂದಲೇ ರತ್ನಗಳು ರಾಜರ್ಷಿಗೆ ಬಂದು ಸೇರಿದವು.

03126034a ತಸ್ಯೇಯಂ ವಸುಸಂಪೂರ್ಣಾ ವಸುಧಾ ವಸುಧಾಧಿಪ|

03126034c ತೇನೇಷ್ಟಂ ವಿವಿಧೈರ್ಯಜ್ಞೈರ್ಬಹುಭಿಃ ಸ್ವಾಪ್ತದಕ್ಷಿಣೈಃ||

ವಸುಧಾಧಿಪ! ಸಂಪತ್ತಿನಿಂದ ತುಂಬಿದ ಈ ಭೂಮಿಯು ಸಂಪೂರ್ಣವಾಗಿ ಅವನದ್ದಾಗಿತ್ತು. ಬಹಳಷ್ಟು ದಕ್ಷಿಣೆಗಳಿಂದ ಕೂಡಿದ ಅನೇಕ ವಿವಿಧ ಯಜ್ಞಗಳನ್ನು ಅವನು ನೆರವೇರಿಸಿದನು.

03126035a ಚಿತಚೈತ್ಯೋ ಮಹಾತೇಜಾ ಧರ್ಮಂ ಪ್ರಾಪ್ಯ ಚ ಪುಷ್ಕಲಂ|

03126035c ಶಕ್ರಸ್ಯಾರ್ಧಾಸನಂ ರಾಜಽಲ್ಲಬ್ಧವಾನಮಿತದ್ಯುತಿಃ||

ರಾಜನ್! ಸಾಕಷ್ಟು ಯಾಗಚೈತ್ಯಗಳನ್ನು ಮತ್ತು ಧರ್ಮವನ್ನು ಸಂಪಾದಿಸಿದ ಆ ಮಹಾತೇಜಸ್ವಿ ಅಮಿತದ್ಯುತಿಯು ಇಂದ್ರನ ಅರ್ಧ ಸಿಂಹಾಸನವನ್ನು ಪಡೆದನು.

03126036a ಏಕಾಹ್ನಾ ಪೃಥಿವೀ ತೇನ ಧರ್ಮನಿತ್ಯೇನ ಧೀಮತಾ|

03126036c ನಿರ್ಜಿತಾ ಶಾಸನಾದೇವ ಸರತ್ನಾಕರಪತ್ತನಾ||

ಆ ಧರ್ಮನಿತ್ಯ ಧೀಮಂತನು ಒಂದೇ ಒಂದು ದಿನದಲ್ಲಿ ರತ್ನಗಳ ಗಣಿ ಮತ್ತು ಪಟ್ಟಣಗಳೊಡನೆ ಇಡೀ ಭೂಮಿಯನ್ನೇ ತನ್ನ ಶಾಸನದಡಿಯಲ್ಲಿ ತಂದನು.

03126037a ತಸ್ಯ ಚಿತ್ಯೈರ್ಮಹಾರಾಜ ಕ್ರತೂನಾಂ ದಕ್ಷಿಣಾವತಾಂ|

03126037c ಚತುರಂತಾ ಮಹೀ ವ್ಯಾಪ್ತಾ ನಾಸೀತ್ಕಿಂ ಚಿದನಾವೃತಂ||

ಮಹಾರಾಜ! ನಾಲ್ಕು ಮೂಲೆಗಳನ್ನು ಹೊಂದಿದ್ದ ಭೂಮಿಯು ಭೂರಿದಕ್ಷಿಣೆಗಳಿಂದ ಅವನು ನೆರವೇರಿಸಿದ್ದ ಕ್ರತುಗಳ ಯಾಗವೇದಿಕೆಗಳಿಂದ ತುಂಬಿಹೋಗಿತ್ತು. ಒಂದು ಸ್ಥಳವೂ ಬಿಟ್ಟಿರಲಿಲ್ಲ.

03126038a ತೇನ ಪದ್ಮಸಹಸ್ರಾಣಿ ಗವಾಂ ದಶ ಮಹಾತ್ಮನಾ|

03126038c ಬ್ರಾಹ್ಮಣೇಭ್ಯೋ ಮಹಾರಾಜ ದತ್ತಾನೀತಿ ಪ್ರಚಕ್ಷತೇ||

ಮಹಾರಾಜ! ಆ ಮಹಾತ್ಮನು ಸಹಸ್ರಾರು ಪದ್ಮಗಳಷ್ಟು ಹಸುಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತ ಎಂದು ಹೇಳುತ್ತಾರೆ.

03126039a ತೇನ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ಮಹಾತ್ಮನಾ|

03126039c ವೃಷ್ಟಂ ಸಸ್ಯವಿವೃದ್ಧ್ಯರ್ಥಂ ಮಿಷತೋ ವಜ್ರಪಾಣಿನಃ||

ಹನ್ನೆರಡು ವರ್ಷಗಳ ಅನಾವೃಷ್ಟಿಯಾದಾಗ ಆ ಮಹಾತ್ಮನು ಸಸ್ಯಗಳು ಬೆಳೆಯಲೋಸುಗ ಇಂದ್ರನು ನೋಡುತ್ತಿದ್ದಂತೆಯೇ ಮಳೆಯನ್ನು ಸುರಿಸಿದನು.

03126040a ತೇನ ಸೋಮಕುಲೋತ್ಪನ್ನೋ ಗಾಂಧಾರಾಧಿಪತಿರ್ಮಹಾನ್|

03126040c ಗರ್ಜನ್ನಿವ ಮಹಾಮೇಘಃ ಪ್ರಮಥ್ಯ ನಿಹತಃ ಶರೈಃ||

ರಾಜನ್! ಆ ಸೋಮಕುಲೋತ್ಪನ್ನನು ಮಹಾಮೇಘಗಳಂತಿರುವ ಬಾಣಗಳಿಂದ ಮಹಾ ಗಾಂಧಾರಾಧಿಪತಿಯನ್ನು ವಶಪಡಿಸಿಕೊಂಡನು.

03126041a ಪ್ರಜಾಶ್ಚತುರ್ವಿಧಾಸ್ತೇನ ಜಿತಾ ರಾಜನ್ಮಹಾತ್ಮನಾ|

03126041c ತೇನಾತ್ಮತಪಸಾ ಲೋಕಾಃ ಸ್ಥಾಪಿತಾಶ್ಚಾಪಿ ತೇಜಸಾ||

ರಾಜನ್! ಆ ಮಹಾತ್ಮನು ಚತುರ್ವಿಧ ಪ್ರಜೆಗಳನ್ನು ಗೆದ್ದು ಆತ್ಮತಪಸ್ಸಿನ ತೇಜಸ್ಸಿನಿಂದ ಲೋಕಗಳಲ್ಲಿ ತನ್ನ ಶಾಸನವನ್ನು ಸ್ಥಾಪಿಸಿದನು.

03126042a ತಸ್ಯೈತದ್ದೇವಯಜನಂ ಸ್ಥಾನಮಾದಿತ್ಯವರ್ಚಸಃ|

03126042c ಪಶ್ಯ ಪುಣ್ಯತಮೇ ದೇಶೇ ಕುರುಕ್ಷೇತ್ರಸ್ಯ ಮಧ್ಯತಃ||

ಇದೇ ಸ್ಥಳದಲ್ಲಿ ಆ ಆದಿತ್ಯವರ್ಚಸನು ದೇವಯಜ್ಞಗಳನ್ನು ಮಾಡಿದನು. ಕುರುಕ್ಷೇತ್ರದ ಮಧ್ಯದಲ್ಲಿರುವ ಈ ಪುಣ್ಯತಮ ಪ್ರದೇಶವನ್ನು ನೋಡು!

03126043a ಏತತ್ತೇ ಸರ್ವಮಾಖ್ಯಾತಂ ಮಾಂಧಾತುಶ್ಚರಿತಂ ಮಹತ್|

03126043c ಜನ್ಮ ಚಾಗ್ರ್ಯಂ ಮಹೀಪಾಲ ಯನ್ಮಾಂ ತ್ವಂ ಪರಿಪೃಚ್ಚಸಿ||

ಮಹೀಪಾಲ! ನೀನು ನನಗೆ ಕೇಳಿದಂತೆ ಅವನ ಹುಟ್ಟಿನಿಂದ ಮೊದಲಾಗಿ ಈ ಮಾಂಧಾತನ ಮಹಾ ಚರಿತ್ರೆಯನ್ನು ಸಂಪೂರ್ಣವಾಗಿ ಹೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಮಾಂಧಾತೋಪಖ್ಯಾನೇ ಷಡ್ವಿವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಮಾಂಧಾತೋಪಖ್ಯಾನದಲ್ಲಿ ನೂರಾಇಪ್ಪತ್ತಾರನೆಯ ಅಧ್ಯಾಯವು.

Related image

[1]ಯುವನಾಶ್ವ

Comments are closed.