Aranyaka Parva: Chapter 120

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೦

ಸಾತ್ಯಕಿಯು ತನ್ನ ಮತ್ತು ಇತರ ವೃಷ್ಣಿಗಳ ಪರಾಕ್ರಮವನ್ನು ಹೇಳಿಕೊಳ್ಳುವುದು (೧-೨೧). ಕೃಷ್ಣ-ಯುಧಿಷ್ಠಿರರು ಯುದ್ಧದ ಕುರಿತು ನಂತರ ಯೋಚಿಸಬೇಕೆಂದು ಹೇಳಿದುದು; ತೀರ್ಥಯಾತ್ರೆಯು ಮುಂದುವರೆದುದು (೨೨-೩೦).

03120001 ಸಾತ್ಯಕಿರುವಾಚ|

03120001a ನ ರಾಮ ಕಾಲಃ ಪರಿದೇವನಾಯ|

         ಯದುತ್ತರಂ ತತ್ರ ತದೇವ ಸರ್ವೇ|

03120001c ಸಮಾಚರಾಮೋ ಹ್ಯನತೀತಕಾಲಂ|

         ಯುಧಿಷ್ಠಿರೋ ಯದ್ಯಪಿ ನಾಹ ಕಿಂ ಚಿತ್||

ಸಾತ್ಯಕಿಯು ಹೇಳಿದನು: “ರಾಮ! ಪರಿವೇದನೆ ಪಡುವ ಕಾಲವಿದಲ್ಲ! ಅದನ್ನು ಅವರೆಲ್ಲರೂ ಅನಂತರ ಮಾಡುತ್ತಾರೆ. ಒಂದು ವೇಳೆ ಯುಧಿಷ್ಠಿರನು ಏನನ್ನೂ ಹೇಳದಿದ್ದರೂ, ಈಗಿನ ಮತ್ತು ಹಿಂದಿನ ವಿಷಯಗಳ ಕುರಿತು ನಾವು ಯೋಚಿಸಬೇಕು.

03120002a ಯೇ ನಾಥವಂತೋ ಹಿ ಭವಂತಿ ಲೋಕೇ|

         ತೇ ನಾತ್ಮನಾ ಕರ್ಮ ಸಮಾರಭಂತೇ|

03120002c ತೇಷಾಂ ತು ಕಾರ್ಯೇಷು ಭವಂತಿ ನಾಥಾಃ|

         ಶೈಬ್ಯಾದಯೋ ರಾಮ ಯಥಾ ಯಯಾತೇಃ||

ಲೋಕದಲ್ಲಿ ಅನಾಥರಾಗಿಲ್ಲದಿರುವವರು ತಾವಾಗಿಯೇ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ರಾಮ! ಇವರ ಕೆಲಸದಲ್ಲಿ ಯಯಾತಿಗೆ ಶೈಬ್ಯನಿದ್ದಹಾಗೆ ನಾಥರಿದ್ದಾರೆ.

03120003a ಯೇಷಾಂ ತಥಾ ರಾಮ ಸಮಾರಭಂತೇ|

         ಕಾರ್ಯಾಣಿ ನಾಥಾಃ ಸ್ವಮತೇನ ಲೋಕೇ|

03120003c ತೇ ನಾಥವಂತಃ ಪುರುಷಪ್ರವೀರಾ|

         ನಾನಾಥವತ್ಕೃಚ್ಚ್ರಮವಾಪ್ನುವಂತಿ||

ರಾಮ! ಲೋಕದಲ್ಲಿ ಅಂಥವರ ಕಾರ್ಯವನ್ನು ನಾಥರೇ ತಮ್ಮ ಅಭಿಪ್ರಾಯದಂತೆ ಪ್ರಾರಂಭಿಸುತ್ತಾರೆ. ಈ ಪುರುಷಪ್ರವೀರರು ನಾಥವಂತರು. ಅನಾಥರಂತೆ ದುಃಖಪಡಬೇಕಾದುದಿಲ್ಲ.

03120004a ಕಸ್ಮಾದಯಂ ರಾಮಜನಾರ್ದನೌ ಚ|

         ಪ್ರದ್ಯುಮ್ನಸಾಂಬೌ ಚ ಮಯಾ ಸಮೇತೌ|

03120004c ವಸತ್ಯರಣ್ಯೇ ಸಹ ಸೋದರೀಯೈಸ್|

         ತ್ರೈಲೋಕ್ಯನಾಥಾನಧಿಗಮ್ಯ ನಾಥಾನ್||

ಮೂರು ಲೋಕಗಳಿಗೂ ನಾಥರಾದ ಈ ರಾಮ, ಜನಾರ್ದನರಿಬ್ಬರು, ಪ್ರದ್ಯುಮ್ನ ಮತ್ತು ಸಾಂಬರು ಹಾಗೂ ಜೊತೆಗೆ ನನ್ನನ್ನೂ ನಾಥರನ್ನಾಗಿ ಪಡೆದಿರುವ ಇವನು ಏಕೆ ಸೋದರರೊಂದಿಗೆ ವನವಾಸ ಮಾಡಬೇಕು?

03120005a ನಿರ್ಯಾತು ಸಾಧ್ವದ್ಯ ದಶಾರ್ಹಸೇನಾ|

         ಪ್ರಭೂತನಾನಾಯುಧಚಿತ್ರವರ್ಮಾ|

03120005c ಯಮಕ್ಷಯಂ ಗಚ್ಚತು ಧಾರ್ತರಾಷ್ಟ್ರಃ|

         ಸಬಾಂಧವೋ ವೃಷ್ಣಿಬಲಾಭಿಭೂತಃ||

ಇಂದೇ ನಾನಾ ಆಯುಧಗಳನ್ನು, ಬಣ್ಣದ ಕವಚಗಳನ್ನೂ ಧರಿಸಿ ದಶಾರ್ಹರ ಸೇನೆಯು ಹೊರಡಲಿ. ವೃಷ್ಣಿಬಲಕ್ಕೆ ಸೋತು ಧಾರ್ತರಾಷ್ಟ್ರರು ತಮ್ಮ ಬಾಂಧವರೊಂದಿಗೆ ಯಮಲೋಕಕ್ಕೆ ಹೋಗಲಿ.

03120006a ತ್ವಂ ಹ್ಯೇವ ಕೋಪಾತ್ಪೃಥಿವೀಮಪೀಮಾಂ|

         ಸಂವೇಷ್ಟಯೇಸ್ತಿಷ್ಠತು ಶಾಂರ್ಙ್ಗಧನ್ವಾ|

03120006c ಸ ಧಾರ್ತರಾಷ್ಟ್ರಂ ಜಹಿ ಸಾನುಬಂಧಂ|

         ವೃತ್ರಂ ಯಥಾ ದೇವಪತಿರ್ಮಹೇಂದ್ರಃ||

ನೀನೊಬ್ಬನೇ ಕುಪಿತನಾದರೆ ಈ ಪೃಥ್ವಿಯನ್ನೇ ಮುತ್ತಿಗೆ ಹಾಕಬಹುದು, ಇನ್ನು ಶಾಂರ್ಙ್ಗಧನ್ವಿಯ ನಿಲುವು ಏನಿರಬಹುದು? ದೇವಪತಿ ಮಹೇಂದ್ರನು ವೃತ್ರನನ್ನು ಹೇಗೋ ಹಾಗೆ ಬಂಧುಗಳೊಡನೆ ಧಾರ್ತರಾಷ್ಟ್ರರನ್ನು ಸಂಹರಿಸು.

03120007a ಭ್ರಾತಾ ಚ ಮೇ ಯಶ್ಚ ಸಖಾ ಗುರುಶ್ಚ|

         ಜನಾರ್ದನಸ್ಯಾತ್ಮಸಮಶ್ಚ ಪಾರ್ಥಃ|

03120007c ಯದರ್ಥಮಭ್ಯುದ್ಯತಮುತ್ತಮಂ ತತ್|

         ಕರೋತಿ ಕರ್ಮಾಗ್ರ್ಯಮಪಾರಣೀಯಂ||

ಪಾರ್ಥನು ನನಗೆ ಅಣ್ಣನಿದ್ದಂತೆ, ಸಖನಂತೆ ಮತ್ತು ಗುರುವೂ ಹೌದು ಮತ್ತು ಜನಾರ್ದನನ ಆತ್ಮ ಸಮ. ಆದುದರಿಂದ ನಮ್ಮ ಮುಂದೆ ಈಗಲೇ ಮಾಡಬೇಕಾದ ಉತ್ತಮ ಕಾರ್ಯವಿದೆ. ಆ ಅಪಾರ ಕಾರ್ಯವನ್ನು ಮಾಡು.

03120008a ತಸ್ಯಾಸ್ತ್ರವರ್ಷಾಣ್ಯಹಮುತ್ತಮಾಸ್ತ್ರೈರ್|

         ವಿಹತ್ಯ ಸರ್ವಾಣಿ ರಣೇಽಭಿಭೂಯ|

03120008c ಕಾಯಾಚ್ಛಿರಃ ಸರ್ಪವಿಷಾಗ್ನಿಕಲ್ಪೈಃ|

         ಶರೋತ್ತಮೈರುನ್ಮಥಿತಾಸ್ಮಿ ರಾಮ||

ಅವನ ಅಸ್ತ್ರಗಳ ಮಳೆಯನ್ನು ನನ್ನ ಉತ್ತಮ ಅಸ್ತ್ರಗಳಿಂದ ಎದುರಿಸಿ ರಣದಲ್ಲಿ ಅವರೆಲ್ಲರನ್ನೂ ಸಂಹರಿಸುತ್ತೇನೆ. ರಾಮ! ಅಗ್ನಿಯಂಥಹ ಸರ್ಪವಿಷಗಳಂತಿರುವ ನನ್ನ ಉತ್ತಮ ಶರಗಳಿಂದ ಅವನ ದೇಹದಿಂದ ಶಿರವನ್ನು ತುಂಡರಿಸುತ್ತೇನೆ.

03120009a ಖಡ್ಗೇನ ಚಾಹಂ ನಿಶಿತೇನ ಸಂಖ್ಯೇ|

         ಕಾಯಾಚ್ಛಿರಸ್ತಸ್ಯ ಬಲಾತ್ಪ್ರಮಥ್ಯ|

03120009c ತತೋಽಸ್ಯ ಸರ್ವಾನನುಗಾನ್ ಹನಿಷ್ಯೇ|

         ದುರ್ಯೋಧನಂ ಚಾಪಿ ಕುರೂಂಶ್ಚ ಸರ್ವಾನ್||

ಯುದ್ಧದಲ್ಲಿ ನನ್ನ ಹರಿತಾದ ಖಡ್ಗದಿಂದ ಬಲಪ್ರಯೋಗಿಸಿ ಅವನ ಶರೀರದಿಂದ ಶಿರವನ್ನು ತುಂಡರಿಸುತ್ತೇನೆ. ಅನಂತರ ದುರ್ಯೋಧನ ಮತ್ತು ಅವನ ಎಲ್ಲ ಅನುಯಾಯಿಗಳನ್ನೂ, ಕುರುಗಳೆಲ್ಲರನ್ನೂ ಕೊಲ್ಲುತ್ತೇನೆ.

03120010a ಆತ್ತಾಯುಧಂ ಮಾಮಿಹ ರೌಹಿಣೇಯ|

         ಪಶ್ಯಂತು ಭೌಮಾ ಯುಧಿ ಜಾತಹರ್ಷಾಃ|

03120010c ನಿಘ್ನಂತಮೇಕಂ ಕುರುಯೋಧಮುಖ್ಯಾನ್|

         ಕಾಲೇ ಮಹಾಕಕ್ಷಮಿವಾಂತಕಾಗ್ನಿಃ||

ರೋಹಿಣಿಯ ಮಗನೇ! ಆಯುಧಗಳನ್ನು ಹಿಡಿದು ಯುದ್ಧಕ್ಕೆ ಸದ್ಧನಾದ ನನ್ನನ್ನು ಭೂಮಿಯ ಮೇಲಿರುವವರು ಸಂತೋಷದಿಂದ ನೋಡಲಿ. ಯುಗಾಂತದಲ್ಲಿ ಕಾಲಾಗ್ನಿಯು ಒಣಗಿದ ಮರವನ್ನು ಹೇಗೋ ಹಾಗೆ ಒಬ್ಬನೇ ಕುರುಯೋಧಮುಖ್ಯರನ್ನು ಸಂಹರಿಸುತ್ತೇನೆ.

03120011a ಪ್ರದ್ಯುಮ್ನಮುಕ್ತಾನ್ನಿಶಿತಾನ್ನ ಶಕ್ತಾಃ|

         ಸೋಢುಂ ಕೃಪದ್ರೋಣವಿಕರ್ಣಕರ್ಣಾಃ|

03120011c ಜಾನಾಮಿ ವೀರ್ಯಂ ಚ ತವಾತ್ಮಜಸ್ಯ|

         ಕಾರ್ಷ್ಣಿರ್ಭವತ್ಯೇಷ ಯಥಾ ರಣಸ್ಥಃ||

ಪ್ರದ್ಯುಮ್ನನ ಹರಿತಾದ ಶರಗಳನ್ನು ಕೃಪ, ದ್ರೋಣ, ವಿಕರ್ಣ ಮತ್ತು ಕರ್ಣರು ಎದುರಿಸಲು ಶಕ್ತರಿಲ್ಲ. ಈ ನಿನ್ನ ಮಗ, ಕೃಷ್ಣನ ವೀರ ಮಗನು ರಣರಂಗದಲ್ಲಿ ನಿಲ್ಲುತ್ತಾನೆ ಎಂದು ನಾನು ತಿಳಿದಿದ್ದೇನೆ.

03120012a ಸಾಂಬಃ ಸಸೂತಂ ಸರಥಂ ಭುಜಾಭ್ಯಾಂ|

         ದುಃಶಾಸನಂ ಶಾಸ್ತು ಬಲಾತ್ಪ್ರಮಥ್ಯ|

03120012c ನ ವಿದ್ಯತೇ ಜಾಂಬವತೀಸುತಸ್ಯ|

         ರಣೇಽವಿಷಃಯಂ ಹಿ ರಣೋತ್ಕಟಸ್ಯ||

ಸಾಂಬನು ತನ್ನ ತೋಳುಗಳ ಬಲದಿಂದ ಸೂತ ಮತ್ತು ರಥಗಳೊಂದಿಗೆ ದುಃಶಾಸನನನ್ನು ಕೊಂದು ಶಿಕ್ಷಿಸಲಿ. ರಣೋತ್ಕಟ ಜಾಂಬವತೀಸುತನಿಗೆ ರಣರಂಗದಲ್ಲಿ ಸಹಿಸಲಸಾಧ್ಯವಾದುದು ಏನೂ ತಿಳಿದಿಲ್ಲ.

03120013a ಏತೇನ ಬಾಲೇನ ಹಿ ಶಂಬರಸ್ಯ|

         ದೈತ್ಯಸ್ಯ ಸೈನ್ಯಂ ಸಹಸಾ ಪ್ರಣುನ್ನಂ|

03120013c ವೃತ್ತೋರುರತ್ಯಾಯತಪೀನಬಾಹುರ್|

         ಏತೇನ ಸಂಖ್ಯೇ ನಿಹತೋಽಶ್ವಚಕ್ರಃ||

03120013e ಕೋ ನಾಮ ಸಾಂಬಸ್ಯ ರಣೇ ಮನುಷ್ಯೋ|

         ಗತ್ವಾಂತರಂ ವೈ ಭುಜಯೋರ್ಧರೇತ||

ಬಾಲಕನಾಗಿರುವಾಗಲೇ ಇವನು ದೈತ್ಯ ಶಂಬರನ ಸೇನೆಯನ್ನು ಕ್ಷಣದಲ್ಲಿಯೇ ನಾಶಗೊಳಿಸಿದನು. ಗುಂಡಾದ ತೊಡೆಗಳ ಮತ್ತು ನೀಳಬಾಹುಗಳ ಅಶ್ವಚಕ್ರನನ್ನೂ ರಣದಲ್ಲಿ ಇವನು ಸಂಹರಿಸಿದನು. ರಣರಂಗದಲ್ಲಿ ಸಾಂಬನ ಭುಜಗಳ ಮಧ್ಯೆ ಸಿಲುಕಿ, ದೀರ್ಘಕಾಲ ಉಳಿದುಕೊಂಡ ಮನುಷ್ಯರಾದರೂ ಯಾರಿದ್ದಾರೆ?

03120014a ಯಥಾ ಪ್ರವಿಶ್ಯಾಂತರಮಂತಕಸ್ಯ|

         ಕಾಲೇ ಮನುಷ್ಯೋ ನ ವಿನಿಷ್ಕ್ರಮೇತ|

03120014c ತಥಾ ಪ್ರವಿಶ್ಯಾಂತರಮಸ್ಯ ಸಂಖ್ಯೇ|

         ಕೋ ನಾಮ ಜೀವನ್ಪುನರಾವ್ರಜೇತ||

ಕಾಲ ಬಂದು ಯಮನ ಮಧ್ಯೆ ಪ್ರವೇಶಿಸಿದ ಯಾವ ಮನುಷ್ಯನೂ ಹೇಗೆ ಹೊರಬರಲಾರನೋ ಹಾಗೆ ಯುದ್ಧದಲ್ಲಿ ಅವನ ಹತ್ತಿರ ಬಂದು, ತನ್ನ ಜೀವದೊಂದಿಗೆ ಉಳಿದುಕೊಂಡವರು ಯಾರಿದ್ದಾರೆ?

03120015a ದ್ರೋಣಂ ಚ ಭೀಷ್ಮಂ ಚ ಮಹಾರಥೌ ತೌ|

         ಸುತೈರ್ವೃತಂ ಚಾಪ್ಯಥ ಸೋಮದತ್ತಂ|

03120015c ಸರ್ವಾಣಿ ಸೈನ್ಯಾನಿ ಚ ವಾಸುದೇವಃ|

         ಪ್ರಧಕ್ಷ್ಯತೇ ಸಾಯಕವಹ್ನಿಜಾಲೈಃ||

ನಮ್ಮ ವಾಸುದೇವನು ತನ್ನ ಬೆಂಕಿಯಂತಹ ಬಾಣಗಳಿಂದ ಮಹಾರಥಿ ದ್ರೋಣ-ಭೀಷ್ಮರನ್ನು, ತನ್ನ ಮಕ್ಕಳೊಂದಿಗೆ ಸೋಮದತ್ತನನ್ನೂ ಮತ್ತು ಅವರ ಸೈನ್ಯಗಳೆಲ್ಲವನ್ನೂ ಸುಟ್ಟು ಉರುಳಿಸುತ್ತಾನೆ.

03120016a ಕಿಂ ನಾಮ ಲೋಕೇಷ್ವವಿಷಹ್ಯಮಸ್ತಿ|

         ಕೃಷ್ಣಸ್ಯ ಸರ್ವೇಷು ಸದೈವತೇಷು|

03120016c ಆತ್ತಾಯುಧಸ್ಯೋತ್ತಮಬಾಣಪಾಣೇಶ್|

         ಚಕ್ರಾಯುಧಸ್ಯಾಪ್ರತಿಮಸ್ಯ ಯುದ್ಧೇ||

ತನ್ನ ಧನುಸ್ಸು, ಬಾಣಗಳು  ಮತ್ತು ಚಕ್ರಾಯುಧವನ್ನು ಹಿಡಿದು ಗುರಿಯಿಟ್ಟ ಯುದ್ಧದಲ್ಲಿ ಸರಿಸಾಟಿಯಿಲ್ಲದ ಕೃಷ್ಣನಿಗೆ ದೇವತೆಗಳೊಡನೆ ಸರ್ವ ಲೋಕಗಳೂ ಸೇರಿ ಏನುತಾನೆ ಅಸಾಧ್ಯ?

03120017a ತತೋಽನಿರುದ್ಧೋಽಪ್ಯಸಿಚರ್ಮಪಾಣಿರ್|

         ಮಹೀಮಿಮಾಂ ಧಾರ್ತರಾಷ್ಟ್ರೈರ್ವಿಸಂಜ್ಞೈಃ|

03120017c ಹೃತೋತ್ತಮಾಂಗೈರ್ನಿಹತೈಃ ಕರೋತು|

         ಕೀರ್ಣಾಂ ಕುಶೈರ್ವೇದಿಮಿವಾಧ್ವರೇಷು||

ಅನಂತರ ಅನಿರುದ್ಧನು ಖಡ್ಗ ತೋಮರಗಳನ್ನು ಹಿಡಿದು ಈ ಭೂಮಿಯನ್ನು ಮೂರ್ಛೆತಪ್ಪಿ, ಅಂಗಾಗಳನ್ನು ತುಂಡರಿಸಿ ಕೊಂದು ಧಾರ್ತರಾಷ್ಟ್ರರಿಂದ, ಯಜ್ಞವೇದಿಯನ್ನು ದರ್ಬೆಗಳಿಂದ ತುಂಬಿಸುವಂತೆ ತುಂಬಿಸುತ್ತಾನೆ.

03120018a ಗದೋಲ್ಮುಕೌ ಬಾಹುಕಭಾನುನೀಥಾಃ|

         ಶೂರಶ್ಚ ಸಂಖ್ಯೇ ನಿಶಠಃ ಕುಮಾರಃ|

03120018c ರಣೋತ್ಕಟೌ ಸಾರಣಚಾರುದೇಷ್ಣೌ|

         ಕುಲೋಚಿತಂ ವಿಪ್ರಥಯಂತು ಕರ್ಮ||

ಗದ, ಉಲ್ಮುಕ, ಬಾಹುಕ, ಭಾನು, ನೀಥ, ರಣಶೂರ ಬಾಲಕ ನಿಷಠ, ರಣೋತ್ಕಟ ಸಾರಣ ಮತ್ತು ಚಾರುದೇಷ್ಣರು ತಮ್ಮ ಕುಲಕ್ಕೆ ತಕ್ಕುದಾದ ಕಾರ್ಯಗಳನ್ನೆಸಗುತ್ತಾರೆ.

03120019a ಸವೃಷ್ಣಿಭೋಜಾಂಧಕಯೋಧಮುಖ್ಯಾ|

         ಸಮಾಗತಾ ಕ್ಷತ್ರಿಯಶೂರಸೇನಾ|

03120019c ಹತ್ವಾ ರಣೇ ತಾಂಧೃತರಾಷ್ಟ್ರಪುತ್ರಾಽಲ್|

         ಲೋಕೇ ಯಶಃ ಸ್ಫೀತಮುಪಾಕರೋತು||

ವೃಷ್ಣಿ-ಅಂಧಕ-ಭೋಜ ಯೋಧಮುಖ್ಯರೂ ಸೇರಿ ಇಲ್ಲಿ ಸೇರಿರುವ ಕ್ಷತ್ರಿಯ ಸೇನಾಶೂರರು ರಣರಂಗದಲ್ಲಿ ಆ ಧೃತರಾಷ್ಟ್ರನ ಮಕ್ಕಳನ್ನು ಕೊಂದು ಲೋಕದಲ್ಲಿ ಉತ್ತಮ ಯಶಸ್ಸನ್ನು ಗಳಿಸಬೇಕು.

03120020a ತತೋಽಭಿಮನ್ಯುಃ ಪೃಥಿವೀಂ ಪ್ರಶಾಸ್ತು|

         ಯಾವದ್ವ್ರತಂ ಧರ್ಮಭೃತಾಂ ವರಿಷ್ಠಃ|

03120020c ಯುಧಿಷ್ಠಿರಃ ಪಾರಯತೇ ಮಹಾತ್ಮಾ|

         ದ್ಯೂತೇ ಯಥೋಕ್ತಂ ಕುರುಸತ್ತಮೇನ||

ಧರ್ಮಭೃತ ವರಿಷ್ಠ ಮಹಾತ್ಮ ಕುರುಸತ್ತಮ ಯುಧಿಷ್ಠಿರನು ದ್ಯೂತದಲ್ಲಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತಿದ್ದರೆ ಅಭಿಮನ್ಯುವು ಈ ಭೂಮಿಯನ್ನು ಆಳಲಿ.

03120021a ಅಸ್ಮತ್ಪ್ರಮುಕ್ತೈರ್ವಿಶಿಖೈರ್ಜಿತಾರಿಸ್|

         ತತೋ ಮಹೀಂ ಭೋಕ್ಷ್ಯತಿ ಧರ್ಮರಾಜಃ|

03120021c ನಿರ್ಧಾರ್ತರಾಷ್ಟ್ರಾಂ ಹತಸೂತಪುತ್ರಾಂ|

         ಏತದ್ಧಿ ನಃ ಕೃತ್ಯತಮಂ ಯಶಶ್ಯಂ||

ನಾವು ಬಿಟ್ಟ ಬಾಣಗಳಿಂದ ಅವನ ಶತ್ರುಗಳು ಹತರಾದ ನಂತರ ಧರ್ಮರಾಜನು ಭೂಮಿಯನ್ನು ಭೋಗಿಸುತ್ತಾನೆ. ಧಾರ್ತರಾಷ್ಟ್ರರು ಇಲ್ಲದಹಾಗೆ ಮಾಡುವುದು ಮತ್ತು ಸೂತಪುತ್ರನನ್ನು ಸಂಹರಿಸುವುದು ನಾವು ಮಾಡಬೇಕಾದ ಯಶಸ್ವೀ ಮತ್ತು ಅತ್ಯಂತ ಒಳ್ಳೆಯ ಕಾರ್ಯವೆಂದು ತಿಳಿಯಿರಿ.”

03120022 ವಾಸುದೇವ ಉವಾಚ|

03120022a ಅಸಂಶಯಂ ಮಾಧವ ಸತ್ಯಮೇತದ್|

         ಗೃಹ್ಣೀಮ ತೇ ವಾಕ್ಯಮದೀನಸತ್ತ್ವ|

03120022c ಸ್ವಾಭ್ಯಾಂ ಭುಜಾಭ್ಯಾಮಜಿತಾಂ ತು ಭೂಮಿಂ|

         ನೇಚ್ಚೇತ್ಕುರೂಣಾಮೃಷಭಃ ಕಥಂ ಚಿತ್||

ವಾಸುದೇವನು ಹೇಳಿದನು: “ಮಾಧವ! ಇದು ಸತ್ಯವೆನ್ನುವುದರಲ್ಲಿ ಸಂಶಯವೇ ಇಲ್ಲ! ಅದೀನಸತ್ವ! ನಿನ್ನ ಮಾತುಗಳನ್ನು ಸ್ವೀಕರಿಸುತ್ತೇವೆ. ತಮ್ಮದೇ ಭುಜಬಲದಿಂದ ಗೆಲ್ಲದ ಭೂಮಿಯನ್ನು ಕುರುವೃಷಭನು ಹೇಗೂ ಒಪ್ಪುವುದಿಲ್ಲ.

03120023a ನ ಹ್ಯೇಷ ಕಾಮಾನ್ನ ಭಯಾನ್ನ ಲೋಭಾದ್|

         ಯುಧಿಷ್ಠಿರೋ ಜಾತು ಜಹ್ಯಾತ್ಸ್ವಧರ್ಮಂ|

03120023c ಭೀಮಾರ್ಜುನೌ ಚಾತಿರಥೌ ಯಮೌ ವಾ|

         ತಥೈವ ಕೃಷ್ಣಾ ದ್ರುಪದಾತ್ಮಜೇಯಂ||

ಕಾಮದಿಂದಾಗಲೀ, ಭಯದಿಂದಾಗಲೀ ಅಥವಾ ಲೋಭದಿಂದಾಗಲೀ ಯುಧಿಷ್ಠಿರನು ತನ್ನ ಧರ್ಮವನ್ನು ಬಿಡುವುದಿಲ್ಲ. ಹಾಗೆಯೇ ಭೀಮಾರ್ಜುನರೂ, ಅತಿರಥ ಯಮಳರೂ, ದ್ರುಪದನ ಮಗಳು ಕೃಷ್ಣೆಯೂ ಕೂಡ.

03120024a ಉಭೌ ಹಿ ಯುದ್ಧೇಽಪ್ರತಿಮೌ ಪೃಥಿವ್ಯಾಂ|

         ವೃಕೋದರಶ್ಚೈವ ಧನಂಜಯಶ್ಚ|

03120024c ಕಸ್ಮಾನ್ನ ಕೃತ್ಸ್ನಾಂ ಪೃಥಿವೀಂ ಪ್ರಶಾಸೇನ್|

         ಮಾದ್ರೀಸುತಾಭ್ಯಾಂ ಚ ಪುರಸ್ಕೃತೋಽಯಂ||

ಈ ಭೂಮಿಯಲ್ಲಿಯೇ ವೃಕೋದರ ಧನಂಜಯರಿಬ್ಬರೂ ಯುದ್ಧದಲ್ಲಿ ಅಪ್ರತಿಮರು. ಈ ಇಬ್ಬರೂ ಮಾದ್ರೀಸುತರಿಂದ ಪುರಸ್ಕೃತನಾದವನೇ ಈ ಇಡೀ ಪೃಥ್ವಿಯನ್ನು ಏಕೆ ಆಳಬಾರದು?

03120025a ಯದಾ ತು ಪಾಂಚಾಲಪತಿರ್ಮಹಾತ್ಮಾ|

         ಸಕೇಕಯಶ್ಚೇದಿಪತಿರ್ವಯಂ ಚ|

03120025c ಯೋತ್ಸ್ಯಾಮ ವಿಕ್ರಮ್ಯ ಪರಾಂಸ್ತದಾ ವೈ|

         ಸುಯೋಧನಸ್ತ್ಯಕ್ಷ್ಯತಿ ಜೀವಲೋಕಂ||

ಮಹಾತ್ಮ ಪಾಂಚಾಲರಾಜ, ಕೇಕಯ ಮತ್ತು ಚೇದಿರಾಜರು ಮತ್ತು ನಾವೂ ಕೂಡ ಒಂದಾಗಿ ವಿಕ್ರಮದಿಂದ ಶತ್ರುಗಳ ಮೇಲೆ ಧಾಳಿಮಾಡಿದರೆ ಸುಯೋಧನನು ಜೀವಲೋಕವನ್ನು ತೊರೆಯುತ್ತಾನೆ.”

03120026 ಯುಧಿಷ್ಠಿರ ಉವಾಚ|

03120026a ನೈತಚ್ಚಿತ್ರಂ ಮಾಧವ ಯದ್ಬ್ರವೀಷಿ|

         ಸತ್ಯಂ ತು ಮೇ ರಕ್ಷ್ಯತಮಂ ನ ರಾಜ್ಯಂ|

03120026c ಕೃಷ್ಣಸ್ತು ಮಾಂ ವೇದ ಯಥಾವದೇಕಃ|

         ಕೃಷ್ಣಂ ಚ ವೇದಾಹಮಥೋ ಯಥಾವತ್||

ಯುಧಿಷ್ಠಿರನು ಹೇಳಿದನು: “ಮಾಧವ! ನೀನು ಹೇಳುತ್ತಿರುವುದು ಸರಿಯಾದದ್ದೇ. ನನಗೆ ರಾಜ್ಯಕ್ಕಿಂತಲೂ ಸತ್ಯವನ್ನು ರಕ್ಷಿಸುವುದು ಮುಖ್ಯ. ನನ್ನಲ್ಲಿರುವ ವಿಚಾರಗಳು ಕೃಷ್ಣನಿಗೇ ಗೊತ್ತು. ಮತ್ತು ಕೃಷ್ಣನನ್ನೂ ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ.

03120027a ಯದೈವ ಕಾಲಂ ಪುರುಷಪ್ರವೀರೋ|

         ವೇತ್ಸ್ಯತ್ಯಯಂ ಮಾಧವ ವಿಕ್ರಮಸ್ಯ|

03120027c ತದಾ ರಣೇ ತ್ವಂ ಚ ಶಿನಿಪ್ರವೀರ|

         ಸುಯೋಧನಂ ಜೇಷ್ಯಸಿ ಕೇಶವಶ್ಚ||

ಮಾಧವ! ಕೇಶವ! ಯಾವಾಗ ಪುರುಷಪ್ರವೀರರು ಇದು ವಿಕ್ರಮವನ್ನು ತೋರಿಸಲು ಸರಿಯಾದ ಸಮಯವೆಂದು ತಿಳಿದುಕೊಳ್ಳುತ್ತಾರೋ ಆಗ ರಣದಲ್ಲಿ ನೀನೂ ಶಿನಿಪ್ರವೀರನೂ ಸುಯೋಧನನನ್ನು ಗೆಲ್ಲುವಿರಿ.

03120028a ಪ್ರತಿಪ್ರಯಾಂತ್ವದ್ಯ ದಶಾರ್ಹವೀರಾ|

         ದೃಢೋಽಸ್ಮಿ ನಾಥೈರ್ನರಲೋಕನಾಥೈಃ|

03120028c ಧರ್ಮೇಽಪ್ರಮಾದಂ ಕುರುತಾಪ್ರಮೇಯಾ|

         ದ್ರಷ್ಟಾಸ್ಮಿ ಭೂಯಃ ಸುಖಿನಃ ಸಮೇತಾನ್||

ಈಗ ದಶಾರ್ಹ ವೀರರು ಹಿಂದಿರುಗಲಿ. ನಾನು ನರಲೋಕನಾಥರಿಂದ ರಕ್ಷಿಸಲ್ಪಟ್ಟಿದ್ದೇನೆ ಎನ್ನುವುದು ಧೃಡ! ಅಪ್ರಮೇಯರೇ! ಧರ್ಮವನ್ನು ಪಾಲಿಸಿ! ಇನ್ನೊಮ್ಮೆ ಸಂತೋಷದ ಸಮಯದಲ್ಲಿ ಒಂದಾಗೋಣ!””

03120029 ವೈಶಂಪಾಯನ ಉವಾಚ|

03120029a ತೇಽನ್ಯೋನ್ಯಮಾಮಂತ್ರ್ಯ ತಥಾಭಿವಾದ್ಯ|

         ವೃದ್ಧಾನ್ಪರಿಸ್ವಜ್ಯ ಶಿಶೂಂಶ್ಚ ಸರ್ವಾನ್|

03120029c ಯದುಪ್ರವೀರಾಃ ಸ್ವಗೃಹಾಣಿ ಜಗ್ಮೂ|

         ರಾಜಾಪಿ ತೀರ್ಥಾನ್ಯನುಸಂಚಚಾರ||

ವೈಶಂಪಾಯನನು ಹೇಳಿದನು: “ಅವರು ಅನ್ಯೋನ್ಯರನ್ನು ಕರೆದು ಅಭಿವಂದಿಸಿ ವೃದ್ಧರನ್ನೂ ಮಕ್ಕಳನ್ನೂ ಎಲ್ಲರನ್ನೂ ಆಲಂಗಿಸಿ ಯದುಪ್ರವೀರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ರಾಜನಾದರೋ ಅನ್ಯ ತೀರ್ಥಗಳಿಗೆ ಮುಂದುವರೆದನು.

03120030a ವಿಸೃಜ್ಯ ಕೃಷ್ಣಂ ತ್ವಥ ಧರ್ಮರಾಜೋ|

         ವಿದರ್ಭರಾಜೋಪಚಿತಾಂ ಸುತೀರ್ಥಾಂ|

03120030c ಸುತೇನ ಸೋಮೇನ ವಿಮಿಶ್ರಿತೋದಾಂ|

         ತತಃ ಪಯೋಷ್ಣೀಂ ಪ್ರತಿ ಸ ಹ್ಯುವಾಸ||

ಕೃಷ್ಣನು ಹೊರಟುಹೋದ ನಂತರ ಧರ್ಮರಾಜನು ವಿದರ್ಭರಾಜನಿಂದ ವಿರಚಿತ ಉತ್ತಮ ತೀರ್ಥಗಳಿಗೆ ಹೊರಟನು. ಅಲ್ಲಿಯೇ ಸೋಮವನ್ನು ಕಡೆಯುವಾಗ ಬಿದ್ದ ಸೋಮದಿಂದ ಮಿಶ್ರಿತ ಪಯೋಷ್ಣಿ ನದಿಯು ಹರಿಯುತ್ತದೆ.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಪ್ರಭಾಸೇ ಯಾದವಪಾಂಡವಸಮಾಗಮೇ ವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಪ್ರಭಾಸದಲ್ಲಿ ಯಾದವಪಾಂಡವಸಮಾಗಮದಲ್ಲಿ ನೂರಾಇಪ್ಪತ್ತನೆಯ ಅಧ್ಯಾಯವು.

Related image

Comments are closed.