ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೯
ಯುಧಿಷ್ಠಿರನ ಮೇಲಿನ ಅನುಕಂಪದಿಂದ ಬಲರಾಮನು ದುರ್ಯೋಧನನನ್ನು ನಿಂದಿಸುವುದು; ಸೇಡು ತೀರಿಸಿಕೊಳ್ಳಬೇಕೆನ್ನುವುದು (೧-೨೨).
03119001 ಜನಮೇಜಯ ಉವಾಚ|
03119001a ಪ್ರಭಾಸತೀರ್ಥಂ ಸಂಪ್ರಾಪ್ಯ ವೃಷ್ಣಯಃ ಪಾಂಡವಾಸ್ತಥಾ|
03119001c ಕಿಮಕುರ್ವನ್ಕಥಾಶ್ಚೈಷಾಂ ಕಾಸ್ತತ್ರಾಸಂಸ್ತಪೋಧನ||
ಜನಮೇಜಯನು ಹೇಳಿದನು: “ತಪೋಧನ! ಪ್ರಭಾಸತೀರ್ಥದಲ್ಲಿ ವೃಷ್ಣಿಗಳೂ ಪಾಂಡವರೂ ಸೇರಿದಾಗ ಅವರು ಅಲ್ಲಿ ಏನು ಮಾಡಿದರು? ಯಾವ ವಿಷಯದ ಕುರಿತು ಮಾತನಾಡಿದರು?
03119002a ತೇ ಹಿ ಸರ್ವೇ ಮಹಾತ್ಮಾನಃ ಸರ್ವಶಾಸ್ತ್ರವಿಶಾರದಾಃ|
03119002c ವೃಷ್ಣಯಃ ಪಾಂಡವಾಶ್ಚೈವ ಸುಹೃದಶ್ಚ ಪರಸ್ಪರಂ||
ಅವರೆಲ್ಲರೂ ಮಹಾತ್ಮರು ಮತ್ತು ಸರ್ವ ಶಾಸ್ತ್ರ ವಿಶಾರದರು. ವೃಷ್ಣಿಗಳೂ ಪಾಂಡವರೂ ಪರಸ್ಪರ ಸುಹೃದಯಿಗಳು.”
03119003 ವೈಶಂಪಾಯನ ಉವಾಚ|
03119003a ಪ್ರಭಾಸತೀರ್ಥಂ ಸಂಪ್ರಾಪ್ಯ ಪುಣ್ಯಂ ತೀರ್ಥಂ ಮಹೋದಧೇಃ|
03119003c ವೃಷ್ಣಯಃ ಪಾಂಡವಾನ್ವೀರಾನ್ಪರಿವಾರ್ಯೋಪತಸ್ಥಿರೇ||
ವೈಶಂಪಾಯನನು ಹೇಳಿದನು: “ಸಾಗರ ತೀರದಲ್ಲಿ ಪುಣ್ಯ ತೀರ್ಥ ಪ್ರಭಾಸತೀರ್ಥದಲ್ಲಿ ಸೇರಿದಾಗ ವೃಷ್ಣಿಗಳು ವೀರ ಪಾಂಡವರನ್ನು ಸುತ್ತುವರೆದು ಗೌರವಿಸಿದರು.
03119004a ತತೋ ಗೋಕ್ಷೀರಕುಂದೇಂದುಮೃಣಾಲರಜತಪ್ರಭಃ|
03119004c ವನಮಾಲೀ ಹಲೀ ರಾಮೋ ಬಭಾಷೇ ಪುಷ್ಕರೇಕ್ಷಣಂ||
ಆಗ ಹಸುವಿನ ಹಾಲಿನಂತೆ, ಮಲ್ಲಿಗೆಯಂತೆ, ಚಂದ್ರನಂತೆ, ಕಮಲದ ಎಳೆಯಂತೆ ಬಿಳಿಯಾಗಿ ಹೊಳೆಯುತ್ತಿದ್ದ ವನಮಾಲಿ, ಹಲಾಯುಧ ರಾಮನು ಪುಷ್ಕರೇಕ್ಷಣ ಕೃಷ್ಣನಿಗೆ ಹೇಳಿದನು:
03119005a ನ ಕೃಷ್ಣ ಧರ್ಮಶ್ಚರಿತೋ ಭವಾಯ|
ಜಂತೋರಧರ್ಮಶ್ಚ ಪರಾಭವಾಯ|
03119005c ಯುಧಿಷ್ಠಿರೋ ಯತ್ರ ಜಟೀ ಮಹಾತ್ಮಾ|
ವನಾಶ್ರಯಃ ಕ್ಲಿಶ್ಯತಿ ಚೀರವಾಸಾಃ||
“ಕೃಷ್ಣ! ಮಹಾತ್ಮ ಯುಧಿಷ್ಠಿರನು ಜಟಾಧಾರಿಯಾಗಿ ಚೀರವಸ್ತ್ರಗಳನ್ನು ಧರಿಸಿ ವನವನ್ನಾಶ್ರಯಿಸಿ ಕಷ್ಟಪಡುತ್ತಿದ್ದಾನೆ ಎಂದರೆ ಧರ್ಮದಲ್ಲಿ ನಡೆಯುವವರಿಗೆ ಜಯವಾಗಲೀ ಅಧರ್ಮದಲ್ಲಿ ನಡೆಯುವವರಿಗೆ ಪರಾಭವವಾಗಲೀ ಇಲ್ಲವೆಂದಲ್ಲವೇ!
03119006a ದುರ್ಯೋಧನಶ್ಚಾಪಿ ಮಹೀಂ ಪ್ರಶಾಸ್ತಿ|
ನ ಚಾಸ್ಯ ಭೂಮಿರ್ವಿವರಂ ದದಾತಿ|
03119006c ಧರ್ಮಾದಧರ್ಮಶ್ಚರಿತೋ ಗರೀಯಾನ್|
ಇತೀವ ಮನ್ಯೇತ ನರೋಽಲ್ಪಬುದ್ಧಿಃ||
ದುರ್ಯೋಧನನು ಭೂಮಿಯನ್ನು ಆಳುತ್ತಿದ್ದಾನೆ. ಆದರೆ ಭೂಮಿಯು ಅವನನ್ನು ಕಬಳಿಸುವುದಿಲ್ಲ. ಇದರಿಂದ ಅಲ್ಪಬುದ್ಧಿ ನರನು ಧರ್ಮದಲ್ಲಿ ನಡೆಯುವುದಕ್ಕಿಂತ ಅಧರ್ಮದಲ್ಲಿ ನಡೆಯುವುದೇ ಲೇಸು ಎಂದು ಅಂದುಕೊಳ್ಳಬಹುದು.
03119007a ದುರ್ಯೋಧನೇ ಚಾಪಿ ವಿವರ್ಧಮಾನೇ|
ಯುಧಿಷ್ಠಿರೇ ಚಾಸುಖ ಆತ್ತರಾಜ್ಯೇ|
03119007c ಕಿಂ ನ್ವದ್ಯ ಕರ್ತವ್ಯಮಿತಿ ಪ್ರಜಾಭಿಃ|
ಶಂಕಾ ಮಿಥಃ ಸಂಜನಿತಾ ನರಾಣಾಂ||
ದುರ್ಯೋಧನನು ಅಭಿವೃದ್ಧಿ ಹೊಂದುತ್ತಿದ್ದಾನೆ ಮತ್ತು ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡು ಅಸುಖಿಯಾಗಿದ್ದಾನೆ ಎಂದರೆ ಸಾಧಾರಣ ಜನರು ಏಳಿಗೆ ಹೊಂದಲು ಏನು ಮಾಡಬೇಕು ಎಂದು ಮನುಷ್ಯರಲ್ಲಿ ಒಂದು ಶಂಖೆಯು ಮೂಡುವುದಿಲ್ಲವೇ?
03119008a ಅಯಂ ಹಿ ಧರ್ಮಪ್ರಭವೋ ನರೇಂದ್ರೋ|
ಧರ್ಮೇ ರತಃ ಸತ್ಯಧೃತಿಃ ಪ್ರದಾತಾ|
03119008c ಚಲೇದ್ಧಿ ರಾಜ್ಯಾಚ್ಚ ಸುಖಾಚ್ಚ ಪಾರ್ಥೋ|
ಧರ್ಮಾದಪೇತಶ್ಚ ಕಥಂ ವಿವರ್ಧೇತ್||
ಧರ್ಮವೇ ಬಲವಾಗಿದ್ದ, ಧರ್ಮರತನಾದ, ಸತ್ಯಧೃತಿಯಾದ, ದಾನಿಯಾದ ಈ ರಾಜನು ರಾಜ್ಯವನ್ನು ಕಳೆದುಕೊಂಡನೆಂದರೆ, ಪಾರ್ಥರು ಏಳಿಗೆ ಹೊಂದಬೇಕೆಂದರೆ ಅವರು ಧರ್ಮದ ದಾರಿಯನ್ನು ಬಿಡಬೇಕೇ?
03119009a ಕಥಂ ನು ಭೀಷ್ಮಶ್ಚ ಕೃಪಶ್ಚ ವಿಪ್ರೋ|
ದ್ರೋಣಶ್ಚ ರಾಜಾ ಚ ಕುಲಸ್ಯ ವೃದ್ಧಃ|
03119009c ಪ್ರವ್ರಾಜ್ಯ ಪಾರ್ಥಾನ್ಸುಖಮಾಪ್ನುವಂತಿ|
ಧಿಕ್ಪಾಪಬುದ್ಧೀನ್ಭರತಪ್ರಧಾನಾನ್||
ಪಾರ್ಥರನ್ನು ಹೊರಗಟ್ಟಿ ಹೇಗೆ ತಾನೇ ಭೀಷ್ಮ, ವಿಪ್ರರಾದ ಕೃಪ ದ್ರೋಣರು, ಕುಲದ ವೃದ್ಧ ರಾಜನು ಸುಖವನ್ನು ಹೊಂದಿದ್ದಾರೆ? ಭರತ ಪ್ರಧಾನರ ಪಾಪಬುದ್ಧಿಗೆ ಧಿಕ್ಕಾರ!
03119010a ಕಿಂ ನಾಮ ವಕ್ಷ್ಯತ್ಯವನಿಪ್ರಧಾನಃ|
ಪಿತೄನ್ಸಮಾಗಮ್ಯ ಪರತ್ರ ಪಾಪಃ|
03119010c ಪುತ್ರೇಷು ಸಮ್ಯಕ್ಚರಿತಂ ಮಯೇತಿ|
ಪುತ್ರಾನಪಾಪಾನವರೋಪ್ಯ ರಾಜ್ಯಾತ್||
ಪಾಪವೆಸಗದೇ ಇದ್ದ ಮಕ್ಕಳನ್ನು ರಾಜ್ಯದಿಂದ ಹೊರಹಾಕಿ ರಾಜನು ತನ್ನ ಪಿತೃಗಳನ್ನು ಸೇರಿದಾಗ ಏನು ಹೇಳುತ್ತಾನೆ? ತಾನು ಇನ್ನೊಬ್ಬರ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಪಾಪವೆಸಗಿದ್ದೇನೆಂದೇ?
03119011a ನಾಸೌ ಧಿಯಾ ಸಂಪ್ರತಿಪಶ್ಯತಿ ಸ್ಮ|
ಕಿಂ ನಾಮ ಕೃತ್ವಾಹಮಚಕ್ಷುರೇವಂ|
03119011c ಜಾತಃ ಪೃಥಿವ್ಯಾಮಿತಿ ಪಾರ್ಥಿವೇಷು|
ಪ್ರವ್ರಾಜ್ಯ ಕೌಂತೇಯಮಥಾಪಿ ರಾಜ್ಯಾತ್||
ಪಾರ್ಥಿವರಲ್ಲಿ ಕುರುಡನಾಗಿ ಹುಟ್ಟಿದ ತಾನು ತನ್ನ ಬುದ್ಧಿಯ ಕಣ್ಣುಗಳಿಂದ ನೋಡದೇ ಕೌಂತೇಯರನ್ನು ರಾಜ್ಯದಿಂದ ಹೊರ ಹಾಕಿದೆನೆಂದು ಹೇಳುತ್ತಾನೆಯೇ?
03119012a ನೂನಂ ಸಮೃದ್ಧಾನ್ಪಿತೃಲೋಕಭೂಮೌ|
ಚಾಮೀಕರಾಭಾನ್ ಕ್ಷಿತಿಜಾನ್ ಪ್ರಫುಲ್ಲಾನ್|
03119012c ವಿಚಿತ್ರವೀರ್ಯಸ್ಯ ಸುತಃ ಸಪುತ್ರಃ|
ಕೃತ್ವಾ ನೃಶಂಸಂ ಬತ ಪಶ್ಯತಿ ಸ್ಮ||
ತನ್ನ ಪುತ್ರರೊಂದಿಗೆ ವಿಚಿತ್ರವೀರ್ಯನ ಮಗನು ಪಿತೃಲೋಕದ ನೆಲದಲ್ಲಿ ಸಮೃದ್ಧವಾಗಿ ಚಿಗುರುವ ಬಂಗಾರದ ಬಣ್ಣದ ಮರಗಳನ್ನು ಖಂಡಿತವಾಗಿಯೂ ನೋಡುತ್ತಾನೆ.
03119013a ವ್ಯೂಢೋತ್ತರಾಂಸಾನ್ಪೃಥುಲೋಹಿತಾಕ್ಷಾನ್|
ನೇಮಾನ್ಸ್ಮ ಪೃಚ್ಚನ್ಸ ಶೃಣೋತಿ ನೂನಂ|
03119013c ಪ್ರಸ್ಥಾಪಯದ್ಯತ್ಸ ವನಂ ಹ್ಯಶಂಕೋ|
ಯುಧಿಷ್ಠಿರಂ ಸಾನುಜಮಾತ್ತಶಸ್ತ್ರಂ||
ಆ ಎತ್ತರ ಮತ್ತು ಅಗಲ ಭುಜಗಳನ್ನು ಹೊಂದಿದ, ಅಗಲವಾದ ಕೆಂಪು ಕಣ್ಣುಗಳುಳ್ಳವರನ್ನು ಕೇಳುವ ಅವಶ್ಯಕತೆಯಿಲ್ಲ. ಯಾಕೆಂದರೆ ಅವರು ಶಸ್ತ್ರಗಳನ್ನು ಪಡೆದ ಯುಧಿಷ್ಠಿರನನ್ನು ಅವನ ತಮ್ಮಂದಿರನ್ನು ಶಂಕೆಯಿಲ್ಲದೇ ಅರಣ್ಯಕ್ಕೆ ಅಟ್ಟಿದರೆಂದು ಉತ್ತರಿಸುತ್ತಾರೆ.
03119014a ಯೋಽಯಂ ಪರೇಷಾಂ ಪೃತನಾಂ ಸಮೃದ್ಧಾಂ|
ನಿರಾಯುಧೋ ದೀರ್ಘಭುಜೋ ನಿಹನ್ಯಾತ್|
03119014c ಶ್ರುತ್ವೈವ ಶಬ್ಧಂ ಹಿ ವೃಕೋದರಸ್ಯ|
ಮುಂಚಂತಿ ಸೈನ್ಯಾನಿ ಶಕೃತ್ಸಮೂತ್ರಂ||
ಈ ದೀರ್ಘಭುಜಗಳ ವೃಕೋದರನು ಆ ಶತ್ರುಗಳ ಸಮೃದ್ಧ ಸೇನೆಯನ್ನು ನಿರಾಯುಧನಾಗಿಯೇ ಸದೆಬಡಿಯುತ್ತಾನೆ! ಅವನ ಯುದ್ಧಗರ್ಜನೆಯನ್ನು ಕೇಳಿದ ಸೇನೆಗಳು ಮಲ ಮೂತ್ರಗಳ ವಿಸರ್ಜನೆ ಮಾಡುತ್ತಾರೆ!
03119015a ಸ ಕ್ಷುತ್ಪಿಪಾಸಾಧ್ವಕೃಶಸ್ತರಸ್ವೀ|
ಸಮೇತ್ಯ ನಾನಾಯುಧಬಾಣಪಾಣಿಃ|
03119015c ವನೇ ಸ್ಮರನ್ವಾಸಮಿಮಂ ಸುಘೋರಂ|
ಶೇಷಂ ನ ಕುರ್ಯಾದಿತಿ ನಿಶ್ಚಿತಂ ಮೇ||
ಹಸಿವೆ, ಬಾಯಾರಿಕೆ ಮತ್ತು ಪ್ರಯಾಣದಿಂದ ಕೃಶನಾಗಿರುವ ಈ ತರಸ್ವಿಯು ಆಯುಧ ಬಾಣಗಳನ್ನು ಹಿಡಿದು ಅವರನ್ನು ಎದುರಿಸಿದಾಗ ಘೋರತರವಾದ ಈ ಅರಣ್ಯವಾಸವನ್ನು ನೆನಪಿಸಿಕೊಂಡು ಅವರನ್ನು ನಿಃಶೇಷಗೊಳಿಸುತ್ತಾನೆ ಎನ್ನುವುದು ನನಗೆ ಖಂಡಿತವೆನಿಸುತ್ತದೆ.
03119016a ನ ಹ್ಯಸ್ಯ ವೀರ್ಯೇಣ ಬಲೇನ ಕಶ್ಚಿತ್|
ಸಮಃ ಪೃಥಿವ್ಯಾಂ ಭವಿತಾ ನರೇಷು|
03119016c ಶೀತೋಷ್ಣವಾತಾತಪಕರ್ಶಿತಾಂಗೋ|
ನ ಶೇಷಮಾಜಾವಸುಹೃತ್ಸು ಕುರ್ಯಾತ್||
ಇವನ ವೀರ್ಯ ಮತ್ತು ಬಲಕ್ಕೆ ಸರಿಸಾಟಿಯಾದವನು ಎಂದೂ ಈ ಪೃಥ್ವಿಯ ರಾಜರಲ್ಲಿ ಇರಲಿಲ್ಲ ಮತ್ತು ಇರಲಾರರು! ಛಳಿ, ಸೆಖೆ, ಗಾಳಿ ಮತ್ತು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಇವನು ರಣರಂಗದಲ್ಲಿ ತನ್ನ ಶತ್ರುಗಳು ಉಳಿಯದಂತೆ ಮಾಡುತ್ತಾನೆ!
03119017a ಪ್ರಾಚ್ಯಾಂ ನೃಪಾನೇಕರಥೇನ ಜಿತ್ವಾ|
ವೃಕೋದರಃ ಸಾನುಚರಾನ್ರಣೇಷು|
03119017c ಸ್ವಸ್ತ್ಯಾಗಮದ್ಯೋಽತಿರಥಸ್ತರಸ್ವೀ|
ಸೋಽಯಂ ವನೇ ಕ್ಲಿಶ್ಯತಿ ಚೀರವಾಸಾಃ||
ರಥದಲ್ಲಿ ಏಕಾಂಗಿಯಾಗಿದ್ದು ಪೂರ್ವದಿಕ್ಕಿನ ರಾಜರನ್ನು ರಣದಲ್ಲಿ ಅನುಚರರೊಂದಿಗೆ ಗೆದ್ದನಂತರ ಸ್ವಾಗತಿಸಲ್ಪಟ್ಟ ಆ ಅತಿರಥ, ತರಸ್ವೀ ವೃಕೋದರನು ಇಂದು ವನದಲ್ಲಿ ಚೀರವನ್ನು ಧರಿಸಿಕೊಂಡು ಕಷ್ಟಪಡುತ್ತಿದ್ದಾನೆ!
03119018a ಯೋ ದಂತಕೂರೇ ವ್ಯಜಯನ್ನೃದೇವಾನ್|
ಸಮಾಗತಾನ್ದಾಕ್ಷಿಣಾತ್ಯಾನ್ಮಹೀಪಾನ್|
03119018c ತಂ ಪಶ್ಯತೇಮಂ ಸಹದೇವಮದ್ಯ|
ತಪಸ್ವಿನಂ ತಾಪಸವೇಷರೂಪಂ||
ದಂತಕೂರದಲ್ಲಿ ಸೇರಿದ್ದ ದಕ್ಷಿಣಾತ್ಯದ ಮಹೀಪಾಲ ರಾಜರುಗಳನ್ನು ಸೋಲಿಸಿದ ಈ ಸಹದೇವನು ಇಂದು ತಪಸ್ವಿಗಳಂತೆ ತಾಪಸವೇಷ ಧರಿಸಿದುದನ್ನು ನೋಡು!
03119019a ಯಃ ಪಾರ್ಥಿವಾನೇಕರಥೇನ ವೀರೋ|
ದಿಶಂ ಪ್ರತೀಚೀಂ ಪ್ರತಿ ಯುದ್ಧಶೌಂಡಃ|
03119019c ಸೋಽಯಂ ವನೇ ಮೂಲಫಲೇನ ಜೀವಂ|
ಜಟೀ ಚರತ್ಯದ್ಯ ಮಲಾಚಿತಾಂಗಃ||
ಒಂಟಿಯಾಗಿ ರಥದಲ್ಲಿ ಕುಳಿತು ಪಶ್ಚಿಮದಿಕ್ಕಿನಲ್ಲಿದ್ದ ಯುದ್ಧದ ಮತ್ತೇರಿದ್ದ ರಾಜರುಗಳನ್ನು ಸೋಲಿಸಿದ ವೀರನು ಈ ವನದಲ್ಲಿ ಇಂದು ಜಟಾಧಾರಿಯಾಗಿ, ಮಲಿನಾಂಗನಾಗಿ ಸಂಚರಿಸುತ್ತಾ, ಫಲಮೂಲಗಳಿಂದ ಜೀವನವನ್ನು ನಡೆಸುತ್ತಿದ್ದಾನಲ್ಲಾ!
03119020a ಸತ್ರೇ ಸಮೃದ್ಧೇಽತಿ ರಥಸ್ಯ ರಾಜ್ಞೋ|
ವೇದೀತಲಾದುತ್ಪತಿತಾ ಸುತಾ ಯಾ|
03119020c ಸೇಯಂ ವನೇ ವಾಸಮಿಮಂ ಸುದುಃಖಂ|
ಕಥಂ ಸಹತ್ಯದ್ಯ ಸತೀ ಸುಖಾರ್ಹಾ||
ಸಮೃದ್ಧವಾದ ಸತ್ರದ ವೇದಿಯಿಂದ ಉತ್ಪನ್ನಳಾದ ಅತಿರಥ ರಾಜನ ಮಗಳು, ಸುಖಾರ್ಹಳಾದ ಈ ಸತಿಯು ಹೇಗೆ ತಾನೇ ಈ ವನವಾಸದ ದುಃಖವನ್ನು ಇಂದು ಸಹಿಸಿಕೊಂಡಿದ್ದಾಳೆ?
03119021a ತ್ರಿವರ್ಗಮುಖ್ಯಸ್ಯ ಸಮೀರಣಸ್ಯ|
ದೇವೇಶ್ವರಸ್ಯಾಪ್ಯಥ ವಾಶ್ವಿನೋಶ್ಚ|
03119021c ಏಷಾಂ ಸುರಾಣಾಂ ತನಯಾಃ ಕಥಂ ನು|
ವನೇ ಚರಂತ್ಯಲ್ಪಸುಖಾಃ ಸುಖಾರ್ಹಾಃ||
ತ್ರಿವರ್ಗಮುಖ್ಯನ, ಸಮೀರಣನ, ದೇವೇಶ್ವರನ ಮತ್ತು ಅಶ್ವಿನಿಯರ - ಈ ಸುರರ ಮಕ್ಕಳು, ಸುಖಕ್ಕೆ ಅರ್ಹರಾಗಿದ್ದರೂ, ಹೇಗೆ ತಾನೇ ಕಷ್ಟಕರ ಅರಣ್ಯದಲ್ಲಿ ಅಲೆಯುತ್ತಿದ್ದಾರೆ?
03119022a ಜಿತೇ ಹಿ ಧರ್ಮಸ್ಯ ಸುತೇ ಸಭಾರ್ಯೇ|
ಸಭ್ರಾತೃಕೇ ಸಾನುಚರೇ ನಿರಸ್ತೇ|
03119022c ದುರ್ಯೋಧನೇ ಚಾಪಿ ವಿವರ್ಧಮಾನೇ|
ಕಥಂ ನ ಸೀದತ್ಯವನಿಃ ಸಶೈಲಾ||
ಹೆಂಡತಿಯೊಂದಿಗೆ ಧರ್ಮಜನನನ್ನು ಗೆದ್ದು, ತಮ್ಮಂದಿರು ಮತ್ತು ಅನುಯಾಯಿಗಳೊಂದಿಗೆ ಅವನನ್ನು ಹೊರಗಟ್ಟಿಯೂ ದುರ್ಯೋಧನನು ಅಭಿವೃದ್ಧಿಹೊಂದುತ್ತಿದ್ದಾನಾದರೂ ಗಿರಿಶಿಖರಗಳೊಡನೆ ಈ ಭೂಮಿಯು ಏಕೆ ನಾಶವಾಗುತ್ತಿಲ್ಲ?”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಪ್ರಭಾಸೇ ಯಾದವಪಾಂಡವಸಮಾಗಮೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಪ್ರಭಾಸದಲ್ಲಿ ಯಾದವಪಾಂಡವಸಮಾಗಮದಲ್ಲಿ ನೂರಾಹತ್ತೊಂಭತ್ತನೆಯ ಅಧ್ಯಾಯವು.