ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೫
ಪರಶುರಾಮ
ಮಹೇಂದ್ರ ಪರ್ವತದಲ್ಲಿ ಯುಧಿಷ್ಠಿರನು ಪರಶುರಾಮ ಶಿಷ್ಯ ಅಕೃತವ್ರಣನನ್ನು ಭೇಟಿಯಾಗಿ ಪರಶುರಾಮನ ಕುರಿತು ಕೇಳಿದುದು (೧-೮). ಕನ್ಯಕುಬ್ಜದ ರಾಜ ಗಾಧಿಯ ಮಗಳನ್ನು ಮುನಿ ಋಚೀಕನು ವರಿಸಿದ್ದುದು; ಒಂದೇ ಕಿವಿಯು ಕಪ್ಪಾಗಿರುವ ವೇಗವಾಗಿ ಹೋಗಬಲ್ಲ ಒಂದು ಸಾವಿರ ಬಿಳಿ ಕುದುರೆಗಳು ಕನ್ಯಾಶುಲ್ಕವೆಂದು ಹೇಳುವುದು (೯-೧೫). ಋಚೀಕನು ವರುಣನಿಂದ ಕುದುರೆಗಳನ್ನು ಪಡೆದು, ಕನ್ಯಾಶುಲ್ಕವಾಗಿ ಕೊಟ್ಟು, ಗಾಧಿಯ ಮಗಳನ್ನು ವಿವಾಹವಾದುದು (೧೬-೧೮). ಮಾವ ಭೃಗುವಲ್ಲಿ ಋಚೀಕನ ಪತ್ನಿಯು ತನ್ನ ತಾಯಿಗೆ ಸಂತಾನವನ್ನು ಕೇಳಿದಾಗ, ಭೃಗುವು ಅವಳಿಗೂ ಅವಳ ತಾಯಿಗೂ ಸಂತಾನದ ವರವನ್ನು ಕೊಟ್ಟಿದುದು; ಋಚೀಕನಿಗೆ ಜಮದಗ್ನಿಯು ಮಗನಾಗಿ ಜನಿಸಿದುದು (೧೯-೩೦).
03115001 ವೈಶಂಪಾಯನ ಉವಾಚ|
03115001a ಸ ತತ್ರ ತಾಮುಷಿತ್ವೈಕಾಂ ರಜನೀಂ ಪೃಥಿವೀಪತಿಃ|
03115001c ತಾಪಸಾನಾಂ ಪರಂ ಚಕ್ರೇ ಸತ್ಕಾರಂ ಭ್ರಾತೃಭಿಃ ಸಹ||
ವೈಶಂಪಾಯನನು ಹೇಳಿದನು: “ಪೃಥಿವೀಪತಿಯು ಒಂದು ರಾತ್ರಿಯನ್ನು ಅಲ್ಲಿ ಕಳೆದ ನಂತರ, ಸಹೋದರರೊಂದಿಗೆ ತಾಪಸರಿಗೆ ಪರಮ ಸತ್ಕಾರವನ್ನು ಮಾಡಿದನು.
03115002a ಲೋಮಶಶ್ಚಾಸ್ಯ ತಾನ್ಸರ್ವಾನಾಚಖ್ಯೌ ತತ್ರ ತಾಪಸಾನ್|
03115002c ಭೃಗೂನಂಗಿರಸಶ್ಚೈವ ವಾಸಿಷ್ಠಾನಥ ಕಾಶ್ಯಪಾನ್||
ಲೋಮಶನು ಅಲ್ಲಿರುವ ಎಲ್ಲ ತಾಪಸರನ್ನೂ – ಭೃಗುಗಳನ್ನು, ಅಂಗಿರಸರನ್ನು, ವಾಸಿಷ್ಠರನ್ನು ಮತ್ತು ಕಾಶ್ಯಪರನ್ನು – ಕರೆಯಿಸಿದನು.
03115003a ತಾನ್ಸಮೇತ್ಯ ಸ ರಾಜರ್ಷಿರಭಿವಾದ್ಯ ಕೃತಾಂಜಲಿಃ|
03115003c ರಾಮಸ್ಯಾನುಚರಂ ವೀರಮಪೃಚ್ಚದಕೃತವ್ರಣಂ||
ಅವರನ್ನು ಭೇಟಿಮಾಡಿದ ರಾಜರ್ಷಿಯು ಅಂಜಲೀಬದ್ಧನಾಗಿ ಅವರಿಗೆ ಅಭಿನಂದಿಸಿದನು, ಮತ್ತು ಪರಶುರಾಮನ ಅನುಚರ ವೀರ ಅಕೃತವ್ರಣನಿಗೆ ಕೇಳಿದನು:
03115004a ಕದಾ ನು ರಾಮೋ ಭಗವಾಂಸ್ತಾಪಸಾನ್ದರ್ಶಯಿಷ್ಯತಿ|
03115004c ತೇನೈವಾಹಂ ಪ್ರಸಂಗೇನ ದ್ರಷ್ಟುಮಿಚ್ಚಾಮಿ ಭಾರ್ಗವಂ||
“ಭಗವಾನ್ ರಾಮನು ಎಂದು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ? ಅದೇ ಸಮಯದಲ್ಲಿ ನಾನೂ ಕೂಡ ಭಾರ್ಗವನನ್ನು ನೋಡಲು ಬಯಸುತ್ತೇನೆ.”
03115005 ಅಕೃತವ್ರಣ ಉವಾಚ|
03115005a ಆಯಾನೇವಾಸಿ ವಿದಿತೋ ರಾಮಸ್ಯ ವಿದಿತಾತ್ಮನಃ|
03115005c ಪ್ರೀತಿಸ್ತ್ವಯಿ ಚ ರಾಮಸ್ಯ ಕ್ಷಿಪ್ರಂ ತ್ವಾಂ ದರ್ಶಯಿಷ್ಯತಿ||
ಅಕೃತವ್ರಣನು ಹೇಳಿದನು: “ಅತ್ಮನನ್ನು ತಿಳಿದಿರುವ ರಾಮನಿಗೆ ನೀನು ಬರುತ್ತೀಯೆ ಎಂದು ತಿಳಿದಿದೆ. ರಾಮನಿಗೆ ನಿನ್ನ ಮೇಲೆ ಪ್ರೀತಿಯಿದೆ ಮತ್ತು ಬೇಗನೇ ನಿನಗೆ ಕಾಣಿಸಿಕೊಳ್ಳುತ್ತಾನೆ.
03115006a ಚತುರ್ದಶೀಮಷ್ಟಮೀಂ ಚ ರಾಮಂ ಪಶ್ಯಂತಿ ತಾಪಸಾಃ|
03115006c ಅಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಭವಿತ್ರೀ ಚ ಚತುರ್ದಶೀ||
ಚತುರ್ದಶೀ ಮತ್ತು ಅಷ್ಟಮಿಗಳಲ್ಲಿ ರಾಮನು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ. ಈ ರಾತ್ರಿ ಕಳೆದರೆ ಚತುರ್ದಶಿಯಾಗುತ್ತದೆ.”
03115007 ಯುಧಿಷ್ಠಿರ ಉವಾಚ|
03115007a ಭವಾನನುಗತೋ ವೀರಂ ಜಾಮದಗ್ನ್ಯಂ ಮಹಾಬಲಂ|
03115007c ಪ್ರತ್ಯಕ್ಷದರ್ಶೀ ಸರ್ವಸ್ಯ ಪೂರ್ವವೃತ್ತಸ್ಯ ಕರ್ಮಣಃ||
ಯುಧಿಷ್ಠಿರನು ಹೇಳಿದನು: “ನೀನು ವೀರ ಮಹಾಬಲಿ ಜಾಮದಗ್ನಿಯನ್ನು ಅನುಸರಿಸುತ್ತಿದ್ದೀಯೆ ಮತ್ತು ನೀನು ಅವನು ಹಿಂದೆ ನಡೆಸಿದ ಎಲ್ಲ ಕಾರ್ಯಗಳನ್ನೂ ಪ್ರತ್ಯಕ್ಷವಾಗಿ ಕಂಡಿದ್ದೀಯೆ.
03115008a ಸ ಭವಾನ್ಕಥಯತ್ವೇತದ್ಯಥಾ ರಾಮೇಣ ನಿರ್ಜಿತಾಃ|
03115008c ಆಹವೇ ಕ್ಷತ್ರಿಯಾಃ ಸರ್ವೇ ಕಥಂ ಕೇನ ಚ ಹೇತುನಾ||
ಆದುದರಿಂದ ಹೇಗೆ ಮತ್ತು ಯಾವ ಕಾರಣಕ್ಕಾಗಿ ರಾಮನು ಕ್ಷತ್ರಿಯರೆಲ್ಲರನ್ನೂ ರಣರಂಗದಲ್ಲಿ ಸೋಲಿಸಿದನು ಎನ್ನುವುದನ್ನು ಹೇಳು.”
03115009 ಅಕೃತವ್ರಣ ಉವಾಚ|
03115009a ಕನ್ಯಕುಬ್ಜೇ ಮಹಾನಾಸೀತ್ಪಾರ್ಥಿವಃ ಸುಮಹಾಬಲಃ|
03115009c ಗಾಧೀತಿ ವಿಶ್ರುತೋ ಲೋಕೇ ವನವಾಸಂ ಜಗಾಮ ಸಃ||
ಅಕೃತವ್ರಣನು ಹೇಳಿದನು: “ಕನ್ಯಕುಬ್ಜದಲ್ಲಿ ಗಾಧಿ ಎಂದು ಲೋಕದಲ್ಲಿ ವಿಶ್ರುತನಾದ ಮಹಾಬಲಿ ಮಹಾ ರಾಜನಿದ್ದನು. ಅವನು ವನವಾಸಕ್ಕೆ ಹೋದನು.
03115010a ವನೇ ತು ತಸ್ಯ ವಸತಃ ಕನ್ಯಾ ಜಜ್ಞೇಽಪ್ಸರಃಸಮಾ|
03115010c ಋಚೀಕೋ ಭಾರ್ಗವಸ್ತಾಂ ಚ ವರಯಾಮಾಸ ಭಾರತ||
ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಅಪ್ಸರೆಯಂತಿರುವ ಕನ್ಯೆಯು ಜನಿಸಿದಳು. ಭಾರತ! ಭಾರ್ಗವ ಋಚೀಕನು ಅವಳನ್ನು ವರಿಸಿದನು.
03115011a ತಮುವಾಚ ತತೋ ರಾಜಾ ಬ್ರಾಹ್ಮಣಂ ಸಂಶಿತವ್ರತಂ|
03115011c ಉಚಿತಂ ನಃ ಕುಲೇ ಕಿಂ ಚಿತ್ಪೂರ್ವೈರ್ಯತ್ಸಂಪ್ರವರ್ತಿತಂ||
ಆಗ ರಾಜನು ಆ ಸಂಶಿತವ್ರತ ಬ್ರಾಹ್ಮಣನಿಗೆ ಹೇಳಿದನು: “ಹಿಂದಿನಿಂದಲೂ ನಡೆದುಕೊಂಡು ಬಂದಂಥಹ ಒಂದು ಒಳ್ಳೆಯ ಸಂಪ್ರದಾಯವು ನಮ್ಮ ಕುಲದಲ್ಲಿದೆ.
03115012a ಏಕತಃ ಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ|
03115012c ಸಹಸ್ರಂ ವಾಜಿನಾಂ ಶುಲ್ಕಮಿತಿ ವಿದ್ಧಿ ದ್ವಿಜೋತ್ತಮ||
ದ್ವಿಜೋತ್ತಮ! ಒಂದೇ ಕಿವಿಯು ಕಪ್ಪಾಗಿರುವ ವೇಗವಾಗಿ ಹೋಗಬಲ್ಲ ಒಂದು ಸಾವಿರ ಬಿಳಿಯ ಕುದುರೆಗಳು ಕನ್ಯಾಶುಲ್ಕ ಎಂದು ತಿಳಿ[1].
03115013a ನ ಚಾಪಿ ಭಗವಾನ್ವಾಚ್ಯೋ ದೀಯತಾಮಿತಿ ಭಾರ್ಗವ|
03115013c ದೇಯಾ ಮೇ ದುಹಿತಾ ಚೇಯಂ ತ್ವದ್ವಿಧಾಯ ಮಹಾತ್ಮನೇ||
ಭಗವಾನ್ ಭಾರ್ಗವ! ಆದರೂ ಈ ಮಾತನ್ನು ನಿನ್ನಲ್ಲಿ ಹೇಳಬಾರದು. ಏಕೆಂದರೆ ನನ್ನ ಮಗಳನ್ನು ನಿನ್ನಂತಹ ಮಹಾತ್ಮನಿಗೆ ಕೊಡಬೇಕು.”
03115014 ಋಚೀಕ ಉವಾಚ|
03115014a ಏಕತಃಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ|
03115014c ದಾಸ್ಯಾಮ್ಯಶ್ವಸಹಸ್ರಂ ತೇ ಮಮ ಭಾರ್ಯಾ ಸುತಾಸ್ತು ತೇ||
ಋಚೀಕನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಕೊಡುತ್ತೇನೆ, ಮತ್ತು ನಿನ್ನ ಮಗಳು ನನ್ನ ಪತ್ನಿಯಾಗುವಳು.””
03115015 ಅಕೃತವ್ರಣ ಉವಾಚ|
03115015a ಸ ತಥೇತಿ ಪ್ರತಿಜ್ಞಾಯ ರಾಜನ್ವರುಣಮಬ್ರವೀತ್|
03115015c ಏಕತಃಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ||
03115015e ಸಹಸ್ರಂ ವಾಜಿನಾಮೇಕಂ ಶುಲ್ಕಾರ್ಥಂ ಮೇ ಪ್ರದೀಯತಾಂ||
ಅಕೃತವ್ರಣನು ಹೇಳಿದನು: “ರಾಜನ್! ಹೀಗೆ ಪ್ರತಿಜ್ಞೆಮಾಡಿದ ಅವನು ವರುಣನಿಗೆ ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಶುಲ್ಕವಾಗಿ ನನಗೆ ಕೊಡಬೇಕು.”
03115016a ತಸ್ಮೈ ಪ್ರಾದಾತ್ಸಹಸ್ರಂ ವೈ ವಾಜಿನಾಂ ವರುಣಸ್ತದಾ|
03115016c ತದಶ್ವತೀರ್ಥಂ ವಿಖ್ಯಾತಮುತ್ಥಿತಾ ಯತ್ರ ತೇ ಹಯಾಃ||
ಆಗ ವರುಣನು ಅವನಿಗೆ ಒಂದು ಸಹಸ್ರ ಕುದುರೆಗಳನ್ನು ಕೊಟ್ಟನು. ಆ ಕುದುರೆಗಳು ಹೊರಬಂದ ಸ್ಥಳವು ಅಶ್ವತೀರ್ಥವೆಂದು ವಿಖ್ಯಾತವಾಗಿದೆ.
03115017a ಗಂಗಾಯಾಂ ಕನ್ಯಕುಬ್ಜೇ ವೈ ದದೌ ಸತ್ಯವತೀಂ ತದಾ|
03115017c ತತೋ ಗಾಧಿಃ ಸುತಾಂ ತಸ್ಮೈ ಜನ್ಯಾಶ್ಚಾಸನ್ಸುರಾಸ್ತದಾ||
ಅನಂತರ ಗಾಧಿಯು ತನ್ನ ಮಗಳು ಸತ್ಯವತಿಯನ್ನು ಗಂಗಾತೀರದ ಕನ್ಯಕುಬ್ಜದಲ್ಲಿ ಅವನಿಗೆ ಕೊಟ್ಟನು. ಆಗ ದೇವತೆಗಳೂ ವರನ ದಿಬ್ಬಣದಲ್ಲಿ ಇದ್ದರು.
03115017e ಲಬ್ಧ್ವಾ ಹಯಸಹಸ್ರಂ ತು ತಾಂಶ್ಚ ದೃಷ್ಟ್ವಾ ದಿವೌಕಸಃ||
03115018a ಧರ್ಮೇಣ ಲಬ್ಧ್ವಾ ತಾಂ ಭಾರ್ಯಾಮೃಚೀಕೋ ದ್ವಿಜಸತ್ತಮಃ|
03115018c ಯಥಾಕಾಮಂ ಯಥಾಜೋಷಂ ತಯಾ ರೇಮೇ ಸುಮಧ್ಯಯಾ||
ಸಾವಿರ ಕುದುರೆಗಳನ್ನು ಪಡೆದು, ದೇವತೆಗಳನ್ನೂ ಕಂಡು, ಮತ್ತು ಧರ್ಮದಿಂದ ಪತ್ನಿಯನ್ನು ಪಡೆದ ದ್ವಿಜಸತ್ತಮ ಋಚೀಕನು ಬಯಸಿದ ಹಾಗೆ ಬೇಕಾದಷ್ಟು ಆ ಸುಮಧ್ಯಮೆಯೊಡನೆ ರಮಿಸಿದನು.
03115019a ತಂ ವಿವಾಹೇ ಕೃತೇ ರಾಜನ್ಸಭಾರ್ಯಮವಲೋಕಕಃ|
03115019c ಆಜಗಾಮ ಭೃಗುಶ್ರೇಷ್ಠಃ ಪುತ್ರಂ ದೃಷ್ಟ್ವಾ ನನಂದ ಚ||
ರಾಜನ್! ವಿವಾಹದ ನಂತರ ಪತ್ನಿಯೊಂದಿಗೆ ಮಗನನ್ನು ನೋಡಲು ಭೃಗುಶ್ರೇಷ್ಠನು ಬಂದನು ಮತ್ತ ಅವರನ್ನು ನೋಡಿ ಸಂತೋಷಗೊಂಡನು.
03115020a ಭಾರ್ಯಾಪತೀ ತಮಾಸೀನಂ ಗುರುಂ ಸುರಗಣಾರ್ಚಿತಂ|
03115020c ಅರ್ಚಿತ್ವಾ ಪರ್ಯುಪಾಸೀನೌ ಪ್ರಾಂಜಲೀ ತಸ್ಥತುಸ್ತದಾ||
ಪತಿಪತ್ನಿಯರು ಆ ಸುರಗಣಾರ್ಚಿತ ಗುರುವನ್ನು ಕುಳ್ಳಿರಿಸಿ ಅರ್ಚಿಸಿ ಕೈಜೋಡಿಸಿ ಅವನ ಹತ್ತಿರ ನಿಂತುಕೊಂಡರು.
03115021a ತತಃ ಸ್ನುಷಾಂ ಸ ಭಗವಾನ್ಪ್ರಹೃಷ್ಟೋ ಭೃಗುರಬ್ರವೀತ್|
03115021c ವರಂ ವೃಣೀಷ್ವ ಸುಭಗೇ ದಾತಾ ಹ್ಯಸ್ಮಿ ತವೇಪ್ಸಿತಂ||
ಆಗ ಸೊಸೆಯನ್ನು ನೋಡಿ ಸಂತೋಷಗೊಂಡ ಭೃಗುವು ಹೇಳಿದನು: “ಸುಭಗೇ! ವರವನ್ನು ಕೇಳು. ನಿನಗೆ ಬೇಕಾದುದನ್ನು ಕೊಡುತ್ತೇನೆ.”
03115022a ಸಾ ವೈ ಪ್ರಸಾದಯಾಮಾಸ ತಂ ಗುರುಂ ಪುತ್ರಕಾರಣಾತ್|
03115022c ಆತ್ಮನಶ್ಚೈವ ಮಾತುಶ್ಚ ಪ್ರಸಾದಂ ಚ ಚಕಾರ ಸಃ||
ಅವಳು ಆ ಗುರುವಲ್ಲಿ ತನಗೆ ಮತ್ತು ತನ್ನ ತಾಯಿಗೆ ಪುತ್ರರನ್ನು ಕೇಳಿಕೊಂಡಾಗ ಅವನು ಆ ಪ್ರಸಾದವನ್ನು ನೀಡಿದನು.
03115023 ಭೃಗುರುವಾಚ|
03115023a ಋತೌ ತ್ವಂ ಚೈವ ಮಾತಾ ಚ ಸ್ನಾತೇ ಪುಂಸವನಾಯ ವೈ|
03115023c ಆಲಿಂಗೇತಾಂ ಪೃಥಗ್ವೃಕ್ಷೌ ಸಾಶ್ವತ್ಥಂ ತ್ವಮುದುಂಬರಂ||
ಭೃಗುವು ಹೇಳಿದನು: “ಋತುವಾದ ನಂತರ ನೀನು ಮತ್ತು ನಿನ್ನ ತಾಯಿಯು ಪುಂಸವನ ಸ್ನಾನಮಾಡಿ ಅವಳು ಅಶ್ವತ್ಥ ವೃಕ್ಷವನ್ನೂ ನೀನು ಔದುಂಬರ ವೃಕ್ಷವನ್ನೂ ಆಲಂಗಿಸಬೇಕು.””
03115024a ಆಲಿಂಗನೇ ತು ತೇ ರಾಜಂಶ್ಚಕ್ರತುಃ ಸ್ಮ ವಿಪರ್ಯಯಂ|
03115024c ಕದಾ ಚಿದ್ಭೃಗುರಾಗಚ್ಚತ್ತಂ ಚ ವೇದ ವಿಪರ್ಯಯಂ||
ಅಕೃತವ್ರಣನು ಹೇಳಿದನು: “ರಾಜನ್! ಆದರೆ ಅವರು ಆಲಿಂಗನ ಮಾಡುವಾಗ ಅದಲು ಬದಲು ಮಾಡಿಕೊಂಡರು. ಈ ವಿಪರ್ಯಾಸವನ್ನು ತಿಳಿದ ಭೃಗುವು ಮತ್ತೊಂದು ದಿನ ಬಂದನು.
03115025a ಅಥೋವಾಚ ಮಹಾತೇಜಾ ಭೃಗುಃ ಸತ್ಯವತೀಂ ಸ್ನುಷಾಂ|
03115025c ಬ್ರಾಹ್ಮಣಃ ಕ್ಷತ್ರವೃತ್ತಿರ್ವೈ ತವ ಪುತ್ರೋ ಭವಿಷ್ಯತಿ||
03115026a ಕ್ಷತ್ರಿಯೋ ಬ್ರಾಹ್ಮಣಾಚಾರೋ ಮಾತುಸ್ತವ ಸುತೋ ಮಹಾನ್|
03115026c ಭವಿಷ್ಯತಿ ಮಹಾವೀರ್ಯಃ ಸಾಧೂನಾಂ ಮಾರ್ಗಮಾಸ್ಥಿತಃ||
ಆಗ ಮಹಾತೇಜಸ್ವಿ ಭೃಗುವು ಸೊಸೆ ಸತ್ಯವತಿಗೆ ಹೇಳಿದನು: “ಬ್ರಾಹ್ಮಣನಾಗಿದ್ದರೂ ಕ್ಷತ್ರಿಯನಾಗಿ ವರ್ತಿಸುವ ಮಗನು ನಿನಗೆ ಹುಟ್ಟುತ್ತಾನೆ. ಕ್ಷತ್ರಿಯನಾದರೂ ಮಹಾ ಬ್ರಾಹ್ಮಣನಾಗಿ ನಡೆದುಕೊಳ್ಳುವ, ಮಹಾವೀರನಾಗಿದ್ದರೂ ಸಾಧುಗಳ ಮಾರ್ಗದಲ್ಲಿ ನಡೆಯುವ ಮಗನು ನಿನ್ನ ತಾಯಿಗೆ ಹುಟ್ಟುತ್ತಾನೆ.”
03115027a ತತಃ ಪ್ರಸಾದಯಾಮಾಸ ಶ್ವಶುರಂ ಸಾ ಪುನಃ ಪುನಃ|
03115027c ನ ಮೇ ಪುತ್ರೋ ಭವೇದೀದೃಕ್ಕಾಮಂ ಪೌತ್ರೋ ಭವೇದಿತಿ||
ಆಗ ಅವಳು ತನ್ನ ಮಾವನನ್ನು ಪುನಃ ಪುನಃ ಕೇಳಿಕೊಂಡಳು: “ಹೀಗೆ ನನ್ನ ಮಗನು ಆಗುವುದು ಬೇಡ. ನನ್ನ ಮೊಮ್ಮಗನು ಹಾಗೆ ಆಗಲಿ.”
03115028a ಏವಮಸ್ತ್ವಿತಿ ಸಾ ತೇನ ಪಾಂಡವ ಪ್ರತಿನಂದಿತಾ|
03115028c ಜಮದಗ್ನಿಂ ತತಃ ಪುತ್ರಂ ಸಾ ಜಜ್ಞೇ ಕಾಲ ಆಗತೇ||
03115028e ತೇಜಸಾ ವರ್ಚಸಾ ಚೈವ ಯುಕ್ತಂ ಭಾರ್ಗವನಂದನಂ||
ಪಾಂಡವ! “ಹಾಗೆಯೇ ಆಗಲಿ!” ಎಂದು ಅವನು ಅವಳಿಗೆ ಸಂತೋಷವನ್ನು ತಂದನು. ಕಾಲ ಬಂದಾಗ ಅವಳಿಗೆ ತೇಜಸ್ಸು ಮತ್ತು ವರ್ಚಸ್ಸಿನಿಂದ ಕೂಡಿದ ಭಾರ್ಗವನಂದನ ಜಮದಗ್ನಿಯು ಪುತ್ರನಾಗಿ ಜನಿಸಿದನು.
03115029a ಸ ವರ್ಧಮಾನಸ್ತೇಜಸ್ವೀ ವೇದಸ್ಯಾಧ್ಯಯನೇನ ವೈ|
03115029c ಬಹೂನೃಷೀನ್ಮಹಾತೇಜಾಃ ಪಾಂಡವೇಯಾತ್ಯವರ್ತತ||
ಪಾಂಡವೇಯ! ಆ ತೇಜಸ್ವಿಯು ವೇದಾಧ್ಯಯನದಲ್ಲಿ ಮಹಾತೇಜಸ್ವಿಗಳಾದ ಬಹಳ ಋಷಿಗಳನ್ನೂ ಮೀರಿ ಬೆಳೆದನು.
03115030a ತಂ ತು ಕೃತ್ಸ್ನೋ ಧನುರ್ವೇದಃ ಪ್ರತ್ಯಭಾದ್ಭರತರ್ಷಭ|
03115030c ಚತುರ್ವಿಧಾನಿ ಚಾಸ್ತ್ರಾಣಿ ಭಾಸ್ಕರೋಪಮವರ್ಚಸಂ||
ಭರತರ್ಷಭ! ವರ್ಚಸ್ಸಿನಲ್ಲಿ ಭಾಸ್ಕರನಂತಿದ್ದ ಅವನಿಗೆ ಸಂಪೂರ್ಣ ಧನುರ್ವೇದ ಮತ್ತು ನಾಲ್ಕು ವಿಧದ ಶಾಸ್ತ್ರಗಳು ತಾವಾಗಿಯೇ ಬಂದವು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಪಂಚದಶಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನೈದನೆಯ ಅಧ್ಯಾಯವು.
[1]ಮುಂದೆ ಉದ್ಯೋಗಪರ್ವದಲ್ಲಿ ನಾರದನು ಗಾಲವನ ಕಥೆಯನ್ನು ಹೇಳುವಾಗ ಇದೇ ಪ್ರಸಂಗದ ಉಲ್ಲೇಕವಿದೆ.