ಅನುಶಾಸನ ಪರ್ವ: ದಾನಧರ್ಮ ಪರ್ವ
೮೮
ಶ್ರಾದ್ಧದಲ್ಲಿ ಪಿತೃಗಳು ಯಾವುದರಿಂದ ತೃಪ್ತಿಹೊಂದುವರೆನ್ನುವುದರ ನಿರೂಪಣೆ (೧-೧೫).
13088001 ಯುಧಿಷ್ಠಿರ ಉವಾಚ|
13088001a ಕಿಂ ಸ್ವಿದ್ದತ್ತಂ ಪಿತೃಭ್ಯೋ ವೈ ಭವತ್ಯಕ್ಷಯಮೀಶ್ವರ|
13088001c ಕಿಂ ಹವಿಶ್ಚಿರರಾತ್ರಾಯ ಕಿಮಾನಂತ್ಯಾಯ ಕಲ್ಪತೇ||
ಯುಧಿಷ್ಠಿರನು ಹೇಳಿದನು: “ಈಶ್ವರ! ಪಿತೃಗಳಿಗೆ ನೀಡುವ ಯಾವ ವಸ್ತುಗಳು ಅಕ್ಷಯವಾಗುತ್ತವೆ? ಯಾವ ವಸ್ತುಗಳ ದಾನಮಾಡುವುದರೀಂದ ಪಿತೃಗಳು ಅಧಿಕ ಕಾಲದವರೆಗೆ ಮತ್ತು ಯಾವುದರ ದಾನದಿಂದ ಅನಂತಕಾಲದ ವರೆಗೆ ತೃಪ್ತರಾಗಿರುತ್ತಾರೆ?”
13088002 ಭೀಷ್ಮ ಉವಾಚ|
13088002a ಹವೀಂಷಿ ಶ್ರಾದ್ಧಕಲ್ಪೇ ತು ಯಾನಿ ಶ್ರಾದ್ಧವಿದೋ ವಿದುಃ|
13088002c ತಾನಿ ಮೇ ಶೃಣು ಕಾಮ್ಯಾನಿ ಫಲಂ ಚೈಷಾಂ ಯುಧಿಷ್ಠಿರ||
ಭೀಷ್ಮನು ಹೇಳಿದನು: “ಯುಧಿಷ್ಠಿರ! ಶ್ರಾದ್ಧವನ್ನು ತಿಳಿದವರು ಶ್ರಾದ್ಧದಲ್ಲಿ ಯಾವ ಹವಿಸ್ಸುಗಳನ್ನು ವಿಧಿಸಿದ್ದಾರೋ ಅವುಗಳ ಕಾಮ್ಯ ಫಲಗಳನ್ನು ಕೇಳು.
13088003a ತಿಲೈರ್ವ್ರೀಹಿಯವೈರ್ಮಾಷೈರದ್ಭಿರ್ಮೂಲಫಲೈಸ್ತಥಾ|
13088003c ದತ್ತೇನ ಮಾಸಂ ಪ್ರೀಯಂತೇ ಶ್ರಾದ್ಧೇನ ಪಿತರೋ ನೃಪ||
ನೃಪ! ತಿಲ, ವ್ರೀಹಿ[1], ಜವೆ, ಉದ್ದು, ನೀರು, ಗೆಡ್ಡೆಗಳು ಮತ್ತು ಹಣ್ಣುಗಳನ್ನು ನೀಡಿ ಮಾಡಿದ ಶ್ರಾದ್ಧದಿಂದ ಪಿತೃಗಳು ಒಂದು ತಿಂಗಳವರೆಗೆ ತೃಪ್ತರಾಗಿರುತ್ತಾರೆ.
13088004a ವರ್ಧಮಾನತಿಲಂ ಶ್ರಾದ್ಧಮಕ್ಷಯಂ ಮನುರಬ್ರವೀತ್|
13088004c ಸರ್ವೇಷ್ವೇವ ತು ಭೋಜ್ಯೇಷು ತಿಲಾಃ ಪ್ರಾಧಾನ್ಯತಃ ಸ್ಮೃತಾಃ||
ತಿಲವು ಹೆಚ್ಚಾಗಿರುವ ಶ್ರಾದ್ಧವು ಅಕ್ಷಯವೆಂದು ಮನುವು ಹೇಳಿದ್ದಾನೆ. ಶ್ರಾದ್ಧದಲ್ಲಿನ ಭೋಜ್ಯವಸ್ತುಗಳಲ್ಲಿ ತಿಲವೇ ಪ್ರಧಾನವಾಗಿರಬೇಕೆಂದು ಸ್ಮೃತಿಯಿದೆ.
[2]13088005a ದ್ವೌ ಮಾಸೌ ತು ಭವೇತ್ತೃಪ್ತಿರ್ಮತ್ಸ್ಯೈಃ ಪಿತೃಗಣಸ್ಯ ಹ|
13088005c ತ್ರೀನ್ಮಾಸಾನಾವಿಕೇನಾಹುಶ್ಚಾತುರ್ಮಾಸ್ಯಂ ಶಶೇನ ತು||
ಮತ್ಸ್ಯಗಳಿಂದ ಪಿತೃಗಳು ಎರಡು ಮಾಸಗಳು ತೃಪ್ತರಾಗಿರುತ್ತಾರೆ. ಕುರಿಯ ಮಾಂಸದಿಂದ ಮೂರು ಮಾಸಗಳು ಮತ್ತು ಮೊಲದ ಮಾಂಸದಿಂದ ನಾಲ್ಕುಮಾಸಗಳು ತೃಪ್ತರಾಗಿರುತ್ತಾರೆ.
13088006a ಆಜೇನ ಮಾಸಾನ್ ಪ್ರೀಯಂತೇ ಪಂಚೈವ ಪಿತರೋ ನೃಪ|
13088006c ವಾರಾಹೇಣ ತು ಷಣ್ಮಾಸಾನ್ಸಪ್ತ ವೈ ಶಾಕುನೇನ[3] ತು||
ನೃಪ! ಆಡಿನ ಮಾಂಸದಿಂದ ಪಿತೃಗಳು ಐದು ತಿಂಗಳು ತೃಪ್ತರಾಗಿರುತ್ತಾರೆ. ಹಂದಿಯ ಮಾಂಸದಿಂದ ಆರು ಮಾಸಗಳೂ, ಪಕ್ಷಿಯ ಮಾಂಸದಿಂದ ಏಳು ಮಾಸಗಳೂ ತೃಪ್ತರಾಗಿರುತ್ತಾರೆ.
13088007a ಮಾಸಾನಷ್ಟೌ ಪಾರ್ಷತೇನ ರೌರವೇಣ ನವೈವ ತು|
13088007c ಗವಯಸ್ಯ ತು ಮಾಂಸೇನ ತೃಪ್ತಿಃ ಸ್ಯಾದ್ದಶಮಾಸಿಕೀ||
ಚಿತ್ರಮೃಗದ ಮಾಂಸದಿಂದ ಎಂಟು ಮಾಸಗಳೂ, ರುರುಮೃಗದ ಮಾಂಸದಿಂದ ಒಂಭತ್ತು ಮಾಸಗಳೂ ಗವಯ[4]ದ ಮಾಂಸದಿಂದ ಹತ್ತುಮಾಸಗಳ ವರೆಗೂ ತೃಪ್ತರಾಗಿರುತ್ತಾರೆ.
13088008a ಮಾಸಾನೇಕಾದಶ ಪ್ರೀತಿಃ ಪಿತೄಣಾಂ ಮಾಹಿಷೇಣ ತು|
13088008c ಗವ್ಯೇನ ದತ್ತೇ ಶ್ರಾದ್ಧೇ ತು ಸಂವತ್ಸರಮಿಹೋಚ್ಯತೇ||
13088009a ಯಥಾ ಗವ್ಯಂ ತಥಾ ಯುಕ್ತಂ ಪಾಯಸಂ ಸರ್ಪಿಷಾ ಸಹ|
ಎಮ್ಮೆಯ ಮಾಂಸದಿಂದ ಪಿತೃಗಳು ಹನ್ನೊಂದು ತಿಂಗಳು ಪ್ರೀತರಾಗಿರುತ್ತಾರೆ. ಗವ್ಯ[5]ವನ್ನು ನೀಡಿದ ಶ್ರಾದ್ಧದಿಂದ ಪಿತೃಗಳು ಒಂದು ಸಂವತ್ಸರದ ವರೆಗೆ ತೃಪ್ತರಾಗಿರುತ್ತಾರೆಂದು ಹೇಳುತ್ತಾರೆ. ಗವ್ಯದಿಂದ ಹೇಗೋ ಹಾಗೆ ತುಪ್ಪದಿಂದ ಕೂಡಿದ ಪಾಯಸದಿಂದಲೂ ಪಿತೃಗಳು ಒಂದು ಸಂವತ್ಸರಕಾಲ ತೃಪ್ತರಾಗಿರುತ್ತಾರೆ.
13088009c ವಾಧ್ರೀಣಸಸ್ಯ ಮಾಂಸೇನ ತೃಪ್ತಿರ್ದ್ವಾದಶವಾರ್ಷಿಕೀ||
13088010a ಆನಂತ್ಯಾಯ ಭವೇದ್ದತ್ತಂ ಖಡ್ಗಮಾಂಸಂ ಪಿತೃಕ್ಷಯೇ|
13088010c ಕಾಲಶಾಕಂ ಚ ಲೌಹಂ ಚಾಪ್ಯಾನಂತ್ಯಂ ಚಾಗ ಉಚ್ಯತೇ||
ಘೇಂಡಾಮೃಗದಿಂದ ಪಿತೃಗಳು ಹನ್ನೆರಡು ವರ್ಷಗಳು ತೃಪ್ತರಾಗಿರುತ್ತಾರೆ. ಪಿತೃಕ್ಷಯ[6]ದಲ್ಲಿ ಖಡ್ಗಮೃಗದ ಮಾಂಸವನ್ನು ನೀಡಿದರೆ ಅವರು ಅನಂತಕಾಲದವರೆಗೆ ತೃಪ್ತರಾಗಿರುತ್ತಾರೆ. ಕರಿಬೇವು, ಕಾಂಚನ ವೃಕ್ಷದ ಹೂವು ಮತ್ತು ಆಡಿನ ಮಾಂಸ ಇವು ಪಿತೃಗಳಿಗೆ ಅನಂತ ತೃಪ್ತಿಯನ್ನು ನೀಡುತ್ತವೆಯೆಂದು ಹೇಳುತ್ತಾರೆ.
13088011a ಗಾಥಾಶ್ಚಾಪ್ಯತ್ರ ಗಾಯಂತಿ ಪಿತೃಗೀತಾ ಯುಧಿಷ್ಠಿರ|
13088011c ಸನತ್ಕುಮಾರೋ ಭಗವಾನ್ ಪುರಾ ಮಯ್ಯಭ್ಯಭಾಷತ||
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪಿತೃಗೀತೆಯನ್ನು ಉದಾಹರಿಸುತ್ತಾರೆ. ಇದನ್ನು ಹಿಂದೆ ಭಗವಾನ್ ಸನತ್ಕುಮಾರನು ನನಗೆ ಹೇಳಿದ್ದನು[7]:
13088012a ಅಪಿ ನಃ ಸ ಕುಲೇ ಜಾಯಾದ್ಯೋ ನೋ ದದ್ಯಾತ್ತ್ರಯೋದಶೀಮ್|
13088012c ಮಘಾಸು ಸರ್ಪಿಷಾ ಯುಕ್ತಂ ಪಾಯಸಂ ದಕ್ಷಿಣಾಯನೇ||
“ನಮ್ಮ ಕುಲದಲ್ಲಿ ನಮ್ಮ ಪ್ರೀತ್ಯರ್ಥವಾಗಿ ದಕ್ಷಿಣಾಯನದಲ್ಲಿ ಭಾದ್ರಪದ ಬಹುಳದಲ್ಲಿ ಮಖಾನಕ್ಷತ್ರದಿಂದ ಯುಕ್ತವಾಗಿರುವ ತ್ರಯೋದಶಿಯಂದು ಘೃತಯುಕ್ತವಾದ ಪಾಯಸವನ್ನು ಕೊಡುವವನು ಹುಟ್ಟುವನೇ?
13088013a ಆಜೇನ ವಾಪಿ ಲೌಹೇನ ಮಘಾಸ್ವೇವ ಯತವ್ರತಃ|
13088013c ಹಸ್ತಿಚ್ಚಾಯಾಸು ವಿಧಿವತ್ಕರ್ಣವ್ಯಜನವೀಜಿತಮ್||
ಮಖಾನಕ್ಷತ್ರಯುಕ್ತವಾದ ದಿನದಲ್ಲಿ ಗಜಚ್ಛಾಯಾಪುಣ್ಯಕಾಲ[8]ದಲ್ಲಿ ವ್ಯಜನರೂಪವಾದ ಆನೆಯ ಕಿವಿಗಳಿಂದ ಗಾಳಿಯು ಬೀಸಲ್ಪಡುತ್ತಿರುವಾಗ ಆಡಿನ ಕೆಂಪು ಮಾಂಸವನ್ನು ನಮ್ಮ ಪ್ರೀತ್ಯರ್ಥವಾಗಿ ಅರ್ಪಿಸುವವನು ಹುಟ್ಟುವನೇ?
13088014a ಏಷ್ಟವ್ಯಾ ಬಹವಃ ಪುತ್ರಾ ಯದ್ಯೇಕೋಽಪಿ ಗಯಾಂ ವ್ರಜೇತ್|
13088014c ಯತ್ರಾಸೌ ಪ್ರಥಿತೋ ಲೋಕೇಷ್ವಕ್ಷಯ್ಯಕರಣೋ ವಟಃ||
ಒಬ್ಬನಾದರೂ ಗಯೆಗೆ ಹೋಗಿಯಾನು ಎಂದು ಅನೇಕ ಪುತ್ರರನ್ನು ಬಯಸಬೇಕು. ಅಲ್ಲಿ ಲೋಕಗಳಲ್ಲಿಯೇ ಪ್ರಥಿತವಾದ ಶ್ರಾದ್ಧವನ್ನು ಅಕ್ಷಯವನ್ನಾಗಿ ಮಾಡಿಸುವ ವಟವೃಕ್ಷವಿದೆ.
13088015a ಆಪೋ ಮೂಲಂ ಫಲಂ ಮಾಂಸಮನ್ನಂ ವಾಪಿ ಪಿತೃಕ್ಷಯೇ|
13088015c ಯತ್ಕಿಂ ಚಿನ್ಮಧುಸಂಮಿಶ್ರಂ ತದಾನಂತ್ಯಾಯ ಕಲ್ಪತೇ||
ಪಿತೃಕ್ಷಯದಲ್ಲಿ ನೀರು, ಗೆಡ್ಡೆ-ಗೆಣಸುಗಳು, ಫಲ, ಮಾಂಸ, ಅನ್ನ ಇವುಗಳಲ್ಲಿಯಾವುದನಾದರೂ ಜೇನುತುಪ್ಪದೊಂಡನೆ ಸೇರಿಸಿ ಪಿತೃಗಳ ತೃಪ್ಯರ್ಥವಾಗಿ ಸಮರ್ಪಿಸಿದರೆ ಅದು ಅವರಿಗೆ ಅನಂತಕಾಲದವರೆಗೂ ತೃಪ್ತಿಯನ್ನು ನೀಡುತ್ತದೆ.””
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಅಷ್ಟಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೆಂಟನೇ ಅಧ್ಯಾಯವು.
[1] ಕೆಂಬತ್ತ (ಭಾರತ ದರ್ಶನ).
2] ಈ ಶ್ಲೋಕವನ್ನೂ ಸೇರಿಸಿ ಮುಂದಿನ ಐದು ಶ್ಲೋಕಗಳು ಗೀತಾ ಪ್ರೆಸ್ ಪ್ರಕಾಶನದಲ್ಲಿ ಇಲ್ಲ. ಆದರೆ ಇವು ಭಾರತ ದರ್ಶನ ಪ್ರಕಾಶನದಲ್ಲಿದೆ.[3] ಪಕ್ಷಿಯ ಮಾಂಸ ಎಂದರ್ಥ. ಭಾರತ ದರ್ಶನದಲ್ಲಿ ಶಾಕುಲೇನ ಅರ್ಥಾತ್ ಕೆಂಪುಮೀನು ಎಂಬ ಪಾಠಾಂತರವಿದೆ.
[4] ಕಾಡು ಹಸು
[5] ಗೋಸಂಬಂಧವಾದ ಹಾಲು-ಮೊಸರು-ತುಪ್ಪಗಳು (ಭಾರತ ದರ್ಶನ).
[6] ಪಿತೃಗಳು ಮರಣಹೊಂದಿದ ತಿಥಿ (ಭಾರತ ದರ್ಶನ).
[7] ಭೀಷ್ಮ ಮತ್ತು ಸನತ್ಕುಮಾರರ ಸಂಭಾಷಣೆಯು ಮುಂದೆ ಹರಿವಂಶದ ಹರಿವಂಶಪರ್ವದಲ್ಲಿ ಶ್ರಾದ್ಧಕಲ್ಪದಲ್ಲಿ ಪುನಃ ಬರುತ್ತದೆ.
[8] ಪ್ರೇತಪಕ್ಷೇ ತ್ರಯೋದಶ್ಯಾಂ ಮಘಾಸ್ವಿಂದುಃ ಕರೇ ರವಿಃ| ಪ್ರೇತಪಕ್ಷ (ಭಾದ್ರಪದ ಕೃಷ್ಣಪಕ್ಷ) ದ ತ್ರಯೋದಶಿಯಲ್ಲಿ ಚಂದ್ರನು ಮಖಾ ನಕ್ಷತ್ರದಲ್ಲಿಯೂ ಸೂರ್ಯನು ಹಸ್ತಾನಕ್ಷತ್ರದಲ್ಲಿಯೂ ಇರುವಾಗ ಗಜಚ್ಛಾಯಾ ಎಂಬ ಪುಣ್ಯಕಾಲವು ಉದಯವಾಗುತ್ತದೆ (ಭಾರತ ದರ್ಶನ).