Adi Parva: Chapter 98

ಆದಿ ಪರ್ವ: ಸಂಭವ ಪರ್ವ

೯೮

ಬ್ರಾಹ್ಮಣ ದೀರ್ಘತಮಸ್ಸು ಕ್ಷತ್ರಾಣಿಯಲ್ಲಿ ಅಂಗರಾಜನನ್ನು ಹುಟ್ಟಿಸಿದ ಚರಿತ್ರೆಯನ್ನು ಹೇಳಿ ಭೀಷ್ಮನು ಹಿಂದೆ ಬ್ರಾಹ್ಮಣರಿಂದ ಕ್ಷತ್ರಿಯರು ರಾಜರನ್ನು ಪಡೆದುದನ್ನು ಸೂಚಿಸುವುದು (೧-೩೩).

01098001 ಭೀಷ್ಮ ಉವಾಚ|

01098001a ಜಾಮದಗ್ನ್ಯೇನ ರಾಮೇಣ ಪಿತುರ್ವಧಮಮೃಷ್ಯತಾ|

01098001c ಕ್ರುದ್ಧೇನ ಚ ಮಹಾಭಾಗೇ ಹೈಹಯಾಧಿಪತಿರ್ಹತಃ|

01098001e ಶತಾನಿ ದಶ ಬಾಹೂನಾಂ ನಿಕೃತ್ತಾನ್ಯರ್ಜುನಸ್ಯ ವೈ||

ಭೀಷ್ಮನು ಹೇಳಿದನು: “ಮಹಾಭಾಗೇ! ತನ್ನ ತಂದೆಯ ವಧೆಯಿಂದ ಕೃದ್ಧನಾದ ಜಾಮದಗ್ನಿ ರಾಮನು ಹೈಹಯಾಧಿಪತಿ ಅರ್ಜುನನ ಹತ್ತು ಸಾವಿರ ಬಾಹುಗಳನ್ನೂ ಕತ್ತರಿಸಿ ಕೊಂದನು.

01098002a ಪುನಶ್ಚ ಧನುರಾದಾಯ ಮಹಾಸ್ತ್ರಾಣಿ ಪ್ರಮುಂಚತಾ|

01098002c ನಿರ್ದಗ್ಧಂ ಕ್ಷತ್ರಮಸಕೃದ್ರಥೇನ ಜಯತಾ ಮಹೀಂ||

ಧನುಸ್ಸನ್ನು ಹಿಡಿದು ರಥವನ್ನೇರಿ ಮಹಾಸ್ತ್ರಗಳನ್ನು ಬಿಡುತ್ತಾ ಮೇಲಿಂದ ಮೇಲೆ ಕ್ಷತ್ರಿಯ ಕುಲವನ್ನು ಸುಟ್ಟುಹಾಕಿದನು.

01098003a ಏವಮುಚ್ಚಾವಚೈರಸ್ತ್ರೈರ್ಭಾರ್ಗವೇಣ ಮಹಾತ್ಮನಾ|

01098003c ತ್ರಿಃಸಪ್ತಕೃತ್ವಃ ಪೃಥಿವೀ ಕೃತಾ ನಿಃಕ್ಷತ್ರಿಯಾ ಪುರಾ||

ಈ ರೀತಿ ಮಹಾತ್ಮ ಭಾರ್ಗವನು ಹಿಂದೆ ವಿವಿಧಾಸ್ತ್ರಗಳಿಂದ ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯವನ್ನಾಗಿ ಮಾಡಿದನು.

01098004a ತತಃ ಸಂಭೂಯ ಸರ್ವಾಭಿಃ ಕ್ಷತ್ರಿಯಾಭಿಃ ಸಮಂತತಃ|

01098004c ಉತ್ಪಾದಿತಾನ್ಯಪತ್ಯಾನಿ ಬ್ರಾಹ್ಮಣೈರ್ನಿಯತಾತ್ಮಭಿಃ||

ಆದರೆ ಎಲ್ಲಕಡೆಯೂ ಎಲ್ಲ ಕ್ಷತ್ರಿಯರೂ ನಿಯತಾತ್ಮ ಬ್ರಾಹ್ಮಣರ ಮೂಲಕ ಮಕ್ಕಳನ್ನು ಪಡೆದರು.

01098005a ಪಾಣಿಗ್ರಾಹಸ್ಯ ತನಯ ಇತಿ ವೇದೇಷು ನಿಶ್ಚಿತಂ|

01098005c ಧರ್ಮಂ ಮನಸಿ ಸಂಸ್ಥಾಪ್ಯ ಬ್ರಾಹ್ಮಣಾಂಸ್ತಾಃ ಸಮಭ್ಯಯುಃ|

01098005e ಲೋಕೇಽಪ್ಯಾಚರಿತೋ ದೃಷ್ಟಃ ಕ್ಷತ್ರಿಯಾಣಾಂ ಪುನರ್ಭವಃ||

ಪಾಣಿಗ್ರಹಣ ಮಾಡಿದವನೇ ತನಯ ಎಂದು ವೇದಗಳಲ್ಲಿ ನಿಶ್ಚಿತವಾಗಿದೆ. ಕ್ಷಾತ್ರಿಣಿಯರು ಧರ್ಮವನ್ನೇ ಮನಸ್ಸಿನಲ್ಲಿಟ್ಟುಕೊಂಡು ಬ್ರಾಹ್ಮಣರನ್ನು ಕೂಡಿದರು. ಹೀಗಾಗಿ ಕ್ಷತ್ರಿಯರ ಪುನರ್ಭವವು ಕಂಡುಬಂದಿತು.

01098006a ಅಥೋತಥ್ಯ ಇತಿ ಖ್ಯಾತ ಆಸೀದ್ಧೀಮಾನೃಷಿಃ ಪುರಾ|

01098006c ಮಮತಾ ನಾಮ ತಸ್ಯಾಸೀದ್ಭಾರ್ಯಾ ಪರಮಸಮ್ಮತಾ||

ಹಿಂದೆ ಉತಥ್ಯ ಎಂದು ಖ್ಯಾತ ಧೀಮಂತ ಋಷಿಯಿದ್ದನು. ಅವನಿಗೆ ಮಮತಾ ಎಂಬ ಹೆಸರಿನ ಪರಮಸಮ್ಮತ ಪತ್ನಿಯಿದ್ದಳು.

01098007a ಉತಥ್ಯಸ್ಯ ಯವೀಯಾಂಸ್ತು ಪುರೋಧಾಸ್ತ್ರಿದಿವೌಕಸಾಂ|

01098007c ಬೃಹಸ್ಪತಿರ್ಬೃಹತ್ತೇಜಾ ಮಮತಾಂ ಸೋಽನ್ವಪದ್ಯತ||

ಒಮ್ಮೆ ಉತಥ್ಯನ ತಮ್ಮ, ತ್ರಿದಿವೌಕಸರ ಪುರೋಹಿತ, ಮಹಾ ತೇಜಸ್ವಿ ಬೃಹಸ್ಪತಿಯು ಮಮತಳನ್ನು ಬಯಸಿದನು.

01098008a ಉವಾಚ ಮಮತಾ ತಂ ತು ದೇವರಂ ವದತಾಂ ವರಂ|

01098008c ಅಂತರ್ವತ್ನೀ ಅಹಂ ಭ್ರಾತ್ರಾ ಜ್ಯೇಷ್ಠೇನಾರಮ್ಯತಾಮಿತಿ||

ತನ್ನ ಶ್ರೇಷ್ಠ ಬಾವನಿಗೆ ಮಮತೆಯು ಹೇಳಿದಳು: “ನಿನ್ನ ಅಣ್ಣನಿಂದ ನಾನು ಗರ್ಭವತಿಯಾಗಿದ್ದೇನೆ. ನಿಲ್ಲು.

01098009a ಅಯಂ ಚ ಮೇ ಮಹಾಭಾಗ ಕುಕ್ಷಾವೇವ ಬೃಹಸ್ಪತೇ|

01098009c ಔತಥ್ಯೋ ವೇದಮತ್ರೈವ ಷಡಂಗಂ ಪ್ರತ್ಯಧೀಯತ||

ಮಹಾಭಾಗ ಬೃಹಸ್ಪತಿ! ಉತಥ್ಯನ ಈ ಮಗುವು ನನ್ನ ಹೊಟ್ಟೆಯಲ್ಲಿಯೇ ವೇದ ಮತ್ತು ಅದರ ಆರೂ ಅಂಗಗಳನ್ನೂ ಕಲಿತಿದ್ದಾನೆ.

01098010a ಅಮೋಘರೇತಾಸ್ತ್ವಂ ಚಾಪಿ ನೂನಂ ಭವಿತುಮರ್ಹಸಿ|

01098010c ತಸ್ಮಾದೇವಂಗತೇಽದ್ಯ ತ್ವಮುಪಾರಮಿತುಮರ್ಹಸಿ||

ಈಗ ನೀನು ನಿನ್ನ ವೀರ್ಯವನ್ನು ನನ್ನಲ್ಲಿಟ್ಟರೆ ಅದು ವ್ಯರ್ಥವಾಗುವುದು. ಆದುದರಿಂದ ನೀನು ಈಗ ತಡೆಹಿಡಿದುಕೋ.”

01098011a ಏವಮುಕ್ತಸ್ತಯಾ ಸಮ್ಯಗ್ಬೃಹತ್ತೇಜಾ ಬೃಹಸ್ಪತಿಃ|

01098011c ಕಾಮಾತ್ಮಾನಂ ತದಾತ್ಮಾನಂ ನ ಶಶಾಕ ನಿಯಚ್ಛಿತುಂ||

01098012a ಸಂಬಭೂವ ತತಃ ಕಾಮೀ ತಯಾ ಸಾರ್ಧಮಕಾಮಯಾ|

01098012c ಉತ್ಸೃಜಂತಂ ತು ತಂ ರೇತಃ ಸ ಗರ್ಭಸ್ಥೋಽಭ್ಯಭಾಷತ||

ಅವಳು ಈ ರೀತಿ ಹೇಳುತ್ತಿದ್ದರೂ ಮಹಾ ತೇಜಸ್ವಿ ಬೃಹಸ್ಪತಿಯು ತನ್ನ ಕಾಮಾತ್ಮವನ್ನು ನಿಯಂತ್ರಿಸಿಕೊಳ್ಳಲಾಗದೇ ಅವಳು ಬಯಸದಿದ್ದರೂ ಅವಳನ್ನು ಸೇರಿ ಅವಳಲ್ಲಿ ತನ್ನ ವೀರ್ಯವನ್ನು ಬಿಟ್ಟನು. ಆಗ ಅಲ್ಲಿದ್ದ ಗರ್ಭವು ಹೇಳಿತು:

01098013a ಭೋಸ್ತಾತ ಕನ್ಯಸ ವದೇ ದ್ವಯೋರ್ನಾಸ್ತ್ಯತ್ರ ಸಂಭವಃ|

01098013c ಅಮೋಘಶುಕ್ರಶ್ಚ ಭವಾನ್ಪೂರ್ವಂ ಚಾಹಮಿಹಾಗತಃ||

“ಚಿಕ್ಕಪ್ಪ! ಇಲ್ಲಿ ಇಬ್ಬರಿಗೆ ಸ್ಥಳವಿಲ್ಲ. ನಾನು ಇಲ್ಲಿ ಮೊದಲೇ ಇದ್ದೆ. ನಿನ್ನ ವೀರ್ಯವು ಸುಮ್ಮನೇ ವ್ಯರ್ಥವಾಯಿತು!”

01098014a ಶಶಾಪ ತಂ ತತಃ ಕ್ರುದ್ಧ ಏವಮುಕ್ತೋ ಬೃಹಸ್ಪತಿಃ|

01098014c ಉತಥ್ಯಪುತ್ರಂ ಗರ್ಭಸ್ಥಂ ನಿರ್ಭರ್ತ್ಸ್ಯ ಭಗವಾನೃಷಿಃ||

ಇದನ್ನು ಕೇಳಿದ ಭಗವಾನ್ ಋಷಿ ಬೃಹಸ್ಪತಿಯು ಕೃದ್ಧನಾಗಿ ತನ್ನನ್ನು ಅವಹೇಳನಮಾಡಿದ ಉತಥ್ಯಪುತ್ರನಿಗೆ ಶಾಪವನ್ನಿತ್ತನು.

01098015a ಯಸ್ಮಾತ್ತ್ವಮೀದೃಶೇ ಕಾಲೇ ಸರ್ವಭೂತೇಪ್ಸಿತೇ ಸತಿ|

01098015c ಏವಮಾತ್ಥ ವಚಸ್ತಸ್ಮಾತ್ತಮೋ ದೀರ್ಘಂ ಪ್ರವೇಕ್ಷ್ಯಸಿ||

“ಸರ್ವಭೂತಗಳೂ ಆನಂದಿಸಲು ಬಯಸುವ ಕಾಲಸ್ಥಿತಿಯಲ್ಲಿ ನಾನಿರುವಾಗ ಈ ರೀತಿ ಮಾತನಾಡಿದ್ದುದಕ್ಕಾಗಿ ನೀನು ದೀರ್ಘಕಾಲದವರೆಗೂ ಕತ್ತಲೆಯಲ್ಲಿಯೇ ಇರುತ್ತೀಯೆ!”

01098016a ಸ ವೈ ದೀರ್ಘತಮಾ ನಾಮ ಶಾಪಾದೃಷಿರಜಾಯತ|

01098016c ಬೃಹಸ್ಪತೇರ್ಬೃಹತ್ಕೀರ್ತೇರ್ಬೃಹಸ್ಪತಿರಿವೌಜಸಾ||

ಈ ರೀತಿ ಬಹುಕೀರ್ತಿವಂತ ಬೃಹಸ್ಪತಿಯ ಶಾಪದಿಂದ ದೀರ್ಘತಮ ಎಂಬ ಹೆಸರಿನ ಋಷಿಯು ಹುಟ್ಟಿದನು.

01098017a ಸ ಪುತ್ರಾಂಜನಯಾಮಾಸ ಗೌತಮಾದೀನ್ಮಹಾಯಶಾಃ|

01098017c ಋಷೇರುತಥ್ಯಸ್ಯ ತದಾ ಸಂತಾನಕುಲವೃದ್ಧಯೇ||

ಅವನು ಗೌತಮರೇ ಮೊದಲಾದ ಮಹಾಯಶಸ್ವಿ ಪುತ್ರರನ್ನು ಹುಟ್ಟಿಸಿ, ಋಷಿ ಉತಥ್ಯನ ಸಂತಾನ ಕುಲವೃದ್ಧಿಯಾಗುವಂತೆ ಮಾಡಿದನು.

01098018a ಲೋಭಮೋಹಾಭಿಭೂತಾಸ್ತೇ ಪುತ್ರಾಸ್ತಂ ಗೌತಮಾದಯಃ|

01098018c ಕಾಷ್ಟೇ ಸಮುದ್ಗೇ ಪ್ರಕ್ಷಿಪ್ಯ ಗಂಗಾಯಾಂ ಸಮವಾಸೃಜನ್||

01098019a ನ ಸ್ಯಾದಂಧಶ್ಚ ವೃದ್ಧಶ್ಚ ಭರ್ತವ್ಯೋಽಯಮಿತಿ ಸ್ಮ ತೇ|

01098019c ಚಿಂತಯಿತ್ವಾ ತತಃ ಕ್ರೂರಾಃ ಪ್ರತಿಜಗ್ಮುರಥೋ ಗೃಹಾನ್||

ಲೋಭಮೋಹಿ ಗೌತಮರೇ ಮೊದಲಾದ ಪುತ್ರರು “ಕುರುಡನೂ ವೃದ್ಧನೂ ಆದ ಇವನನ್ನು ನಾವು ನೋಡಿಕೊಳ್ಳುವ ಅವಶ್ಯಕತೆಯಿಲ್ಲ” ಎಂದು ಯೋಚಿಸಿ ಅವನನ್ನು ಒಂದು ಒಣಗಿದ ಮರಕ್ಕೆ ಕಟ್ಟಿ ವಿಶಾಲ ಗಂಗೆಯಲ್ಲಿ ಎಸೆದು ತಮ್ಮ ಮನೆಗೆ ಹೊರಟು ಹೋದರು.

01098020a ಸೋಽನುಸ್ರೋತಸ್ತದಾ ರಾಜನ್ ಪ್ಲವಮಾನ ಋಷಿಸ್ತತಃ|

01098020c ಜಗಾಮ ಸುಬಹೂನ್ದೇಶಾನಂಧಸ್ತೇನೋಡುಪೇನ ಹ||

ಆ ಕುರುಡ ಋಷಿಯು ತೇಲುತ್ತಾ ಬಹು ದೇಶಗಳನ್ನು ದಾಟಿ ಒಂದು ರಾಜನಿದ್ದಲ್ಲಿಗೆ ಬಂದನು.

01098021a ತಂ ತು ರಾಜಾ ಬಲಿರ್ನಾಮ ಸರ್ವಧರ್ಮವಿಶಾರದಃ|

01098021c ಅಪಶ್ಯನ್ಮಜ್ಜನಗತಃ ಸ್ರೋತಸಾಭ್ಯಾಶಮಾಗತಂ||

ಬಲಿಯೆಂಬ ಹೆಸರಿನ ಸರ್ವಧರ್ಮ ವಿಶಾರದ ರಾಜನು ಸ್ನಾನಮಾಡುತ್ತಿರಲು ನದಿಯಲ್ಲಿ ತೇಲಿಕೊಂಡು ಬರುತ್ತಿದ್ದ ಅವನನ್ನು ನೋಡಿದನು.

01098022a ಜಗ್ರಾಹ ಚೈನಂ ಧರ್ಮಾತ್ಮಾ ಬಲಿಃ ಸತ್ಯಪರಾಕ್ರಮಃ|

01098022c ಜ್ಞಾತ್ವಾ ಚೈನಂ ಸ ವವ್ರೇಽಥ ಪುತ್ರಾರ್ಥಂ ಮನುಜರ್ಷಭ||

ಸತ್ಯಪರಾಕ್ರಮಿ ಧರ್ಮಾತ್ಮ ಮನುಜರ್ಷಭ ಬಲಿಯು ಅವನನ್ನು ಗುರುತಿಸಿ ಮೇಲಿತ್ತಿದನು ಮತ್ತು ಮಕ್ಕಳನ್ನು ಪಡೆಯುವುದಕ್ಕೋಸ್ಕರ ಅವನನ್ನು ತನ್ನಲ್ಲಿಯೇ ಇಟ್ಟುಕೊಂಡನು.

01098023a ಸಂತಾನಾರ್ಥಂ ಮಹಾಭಾಗ ಭಾರ್ಯಾಸು ಮಮ ಮಾನದ|

01098023c ಪುತ್ರಾನ್ಧರ್ಮಾರ್ಥಕುಶಲಾನುತ್ಪಾದಯಿತುಮರ್ಹಸಿ||

“ಮಹಾಭಾಗ! ಮಾನದ! ನನ್ನ ಭಾರ್ಯೆಯರಲ್ಲಿ ನನ್ನ ಸಂತಾನವಾಗಿ ಧರ್ಮಾರ್ಥಕುಶಲ ಮಕ್ಕಳನ್ನು ಪಡೆಯಬೇಕು” ಎಂದು ಕೇಳಿಕೊಂಡನು.

01098024a ಏವಮುಕ್ತಃ ಸ ತೇಜಸ್ವೀ ತಂ ತಥೇತ್ಯುಕ್ತವಾನೃಷಿಃ|

01098024c ತಸ್ಮೈ ಸ ರಾಜಾ ಸ್ವಾಂ ಭಾರ್ಯಾಂ ಸುದೇಷ್ಣಾಂ ಪ್ರಾಹಿಣೋತ್ತದಾ||

“ಹಾಗೆಯೇ ಆಗಲಿ” ಎಂದು ಹೇಳಿದ ಆ ತೇಜಸ್ವಿ ಋಷಿಯು ರಾಜನ ಭಾರ್ಯೆ ಸುದೇಷ್ಣೆಯನ್ನು ಬರುವಂತೆ ಕೇಳಿಕೊಂಡನು.

01098025a ಅಂಧಂ ವೃದ್ಧಂ ಚ ತಂ ಮತ್ವಾ ನ ಸಾ ದೇವೀ ಜಗಾಮ ಹ|

01098025c ಸ್ವಾಂ ತು ಧಾತ್ರೇಯಿಕಾಂ ತಸ್ಮೈ ವೃದ್ಧಾಯ ಪ್ರಾಹಿಣೋತ್ತದಾ||

ಅವನು ವೃದ್ಧನೂ ಕುರುಡನೂ ಆಗಿದ್ದಾನೆಂದು ತಿಳಿದ ದೇವಿಯು ಅವನಲ್ಲಿಗೆ ಹೋಗಲಿಲ್ಲ. ತನ್ನ ಧಾತ್ರೇಯಿಕರಲ್ಲಿ ಓರ್ವಳನ್ನು ಆ ವೃದ್ಧನ ಬಳಿ ಕಳುಹಿಸಿದಳು.

01098026a ತಸ್ಯಾಂ ಕಾಕ್ಷೀವದಾದೀನ್ಸ ಶೂದ್ರಯೋನಾವೃಷಿರ್ವಶೀ|

01098026c ಜನಯಾಮಾಸ ಧರ್ಮಾತ್ಮಾ ಪುತ್ರಾನೇಕಾದಶೈವ ತು||

ಶೂದ್ರಯೋನಿಯಲ್ಲಿ ಜನಿಸಿದ್ದ ಅವಳಲ್ಲಿ ಆ ಧರ್ಮಾತ್ಮನು ಕಾಕ್ಷೀವತನೇ ಮೊದಲಾದ ಹನ್ನೊಂದು ಪುತ್ರರಿಗೆ ಜನ್ಮವಿತ್ತನು.

01098027a ಕಾಕ್ಷೀವದಾದೀನ್ಪುತ್ರಾಂಸ್ತಾನ್ದೃಷ್ಟ್ವಾ ಸರ್ವಾನಧೀಯತಃ|

01098027c ಉವಾಚ ತಮೃಷಿಂ ರಾಜಾ ಮಮೈತ ಇತಿ ವೀರ್ಯವಾನ್||

ಕಾಕ್ಷೀವತ ಮೊದಲಾದವರನ್ನು ನೋಡಿದ ವೀರ್ಯವಾನ್ ರಾಜನು “ಇವರೆಲ್ಲರೂ ನನ್ನ ಮಕ್ಕಳು!” ಎಂದು ಆ ಋಷಿಗೆ ಹೇಳಿದನು.

01098028a ನೇತ್ಯುವಾಚ ಮಹರ್ಷಿಸ್ತಂ ಮಮೈವೈತ ಇತಿ ಬ್ರುವನ್|

01098028c ಶೂದ್ರಯೋನೌ ಮಯಾ ಹೀಮೇ ಜಾತಾಃ ಕಾಕ್ಷೀವದಾದಯಃ||

“ಅಲ್ಲ! ಇವರೆಲ್ಲರೂ ನನ್ನವರು! ಕಾಕ್ಷೀವತನೇ ಮೊದಲಾದವರು ನನ್ನಿಂದ ಶೂದ್ರಯೋನಿಯಲ್ಲಿ ಹುಟ್ಟಿದವರು” ಎಂದು ಆ ಮಹರ್ಷಿಯು ಹೇಳಿದನು.

01098029a ಅಂಧಂ ವೃದ್ಧಂ ಚ ಮಾಂ ಮತ್ವಾ ಸುದೇಷ್ಣಾ ಮಹಿಷೀ ತವ|

01098029c ಅವಮನ್ಯ ದದೌ ಮೂದಾ ಶೂದ್ರಾಂ ಧಾತ್ರೇಯಿಕಾಂ ಹಿ ಮೇ||

“ನಿನ್ನ ರಾಣಿ ಸುದೇಷ್ಣಳು ನಾನು ಅಂಧನೂ ವೃದ್ಧನೂ ಇದ್ದೇನೆಂದು ತಿಳಿದು ಮೂಢಳಾಗಿ ತನ್ನ ಧಾತ್ರೇಯಿಕೆ ಶೂದ್ರಳೋರ್ವಳನ್ನು ನನ್ನ ಕಡೆ ಕಳುಹಿಸಿದ್ದಳು.”

01098030a ತತಃ ಪ್ರಸಾದಯಾಮಾಸ ಪುನಸ್ತಂ ಋಷಿಸತ್ತಮಂ|

01098030c ಬಲಿಃ ಸುದೇಷ್ಣಾಂ ಭಾರ್ಯಾಂ ಚ ತಸ್ಮೈ ತಾಂ ಪ್ರಾಹಿಣೋತ್ಪುನಃ||

ಆಗ ಬಲಿಯು ಪುನಃ ಆ ಋಷಿಸತ್ತಮನನ್ನು ಸಂತೋಷಗೊಳಿಸಿ ತನ್ನ ಭಾರ್ಯೆ ಸುದೇಷ್ಣೆಯನ್ನು ಅವನಲ್ಲಿಗೆ ಪುನಃ ಕಳುಹಿಸಿದನು.

01098031a ತಾಂ ಸ ದೀರ್ಘತಮಾಂಗೇಷು ಸ್ಪೃಷ್ಟ್ವಾ ದೇವೀಮಥಾಬ್ರವೀತ್|

01098031c ಭವಿಷ್ಯತಿ ಕುಮಾರಸ್ತೇ ತೇಜಸ್ವೀ ಸತ್ಯವಾಗಿತಿ||

ದೀರ್ಘತಮನು ಆ ದೇವಿಯ ಅಂಗಗಳನ್ನು ಸ್ಪರ್ಷಿಸಿ “ನಿನಗೆ ಸತ್ಯವಾಗ್ಮಿಯೂ ತೇಜಸ್ವಿಯೂ ಆದ ಮಗನಾಗುತ್ತಾನೆ” ಎಂದನು.

01098032a ತತ್ರಾಂಗೋ ನಾಮ ರಾಜರ್ಷಿಃ ಸುದೇಷ್ಣಾಯಾಮಜಾಯತ|

01098032c ಏವಮನ್ಯೇ ಮಹೇಷ್ವಾಸಾ ಬ್ರಾಹ್ಮಣೈಃ ಕ್ಷತ್ರಿಯಾ ಭುವಿ||

01098033a ಜಾತಾಃ ಪರಮಧರ್ಮಜ್ಞಾ ವೀರ್ಯವಂತೋ ಮಹಾಬಲಾಃ|

01098033c ಏತತ್ ಶ್ರುತ್ವಾ ತ್ವಮಪ್ಯತ್ರ ಮಾತಃ ಕುರು ಯಥೇಪ್ಸಿತಂ||

ಹೀಗೆ ಸುದೇಷ್ಣೆಯಲ್ಲಿ ಅಂಗ ಎಂಬ ಹೆಸರಿನ ರಾಜರ್ಷಿಯು ಜನಿಸಿದನು. ಇದೇ ರೀತಿ ಭೂಮಿಯಲ್ಲಿ ಮಹೇಷ್ವಾಸ ಕ್ಷತ್ರಿಯರು ಬ್ರಾಹ್ಮಣರಿಂದ ಪರಮಧರ್ಮಜ್ಞ, ವೀರ್ಯವಂತ, ಮಹಾಬಲಶಾಲಿ ಮಕ್ಕಳನ್ನು ಪಡೆದರು. ಮಾತೆ! ಇದನ್ನು ಕೇಳಿದ ನೀನು ಕೂಡ ನಿನಗಿಷ್ಟವಾದುದ್ದನ್ನು ಮಾಡು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಭೀಷ್ಮಸತ್ಯವತೀ ಸಂವಾದೇ ಅಷ್ಟನವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಭೀಷ್ಮಸತ್ಯವತೀ ಸಂವಾದ ಎನ್ನುವ ತೊಂಭತ್ತೆಂಟನೆಯ ಅಧ್ಯಾಯವು.

Comments are closed.