Adi Parva: Chapter 93

ಆದಿ ಪರ್ವ: ಸಂಭವ ಪರ್ವ

೯೩

ದ್ಯೌ -ದೇವವ್ರತ

ಗಂಗೆಯು ಶಂತನುವಿಗೆ ವಸುಗಳಿಗೆ ವಸಿಷ್ಠನಿಂದ ದೊರೆತ ಶಾಪ ಮತ್ತು ತಾನು ಅವರಿಗೆ ನೀಡಿದ ವರದ ಕುರಿತು ವಿವರಿಸುವುದು (೧-೪೬).

01093001 ಶಂತನುರುವಾಚ|

01093001a ಆಪವೋ ನಾಮ ಕೋ ನ್ವೇಷ ವಸೂನಾಂ ಕಿಂ ಚ ದುಷ್ಕೃತಂ|

01093001c ಯಸ್ಯಾಭಿಶಾಪಾತ್ತೇ ಸರ್ವೇ ಮಾನುಷೀಂ ತನುಮಾಗತಾಃ||

ಶಂತನುವು ಹೇಳಿದನು: “ಈ ಆಪವನೆಂಬ ಹೆಸರಿನವನು ಯಾರು? ವಸುಗಳು ಮಾಡಿದ ದುಷ್ಕೃತವಾದರೂ ಏನಿತ್ತು?

01093002a ಅನೇನ ಚ ಕುಮಾರೇಣ ಗಂಗಾದತ್ತೇನ ಕಿಂ ಕೃತಂ|

01093002c ಯಸ್ಯ ಚೈವ ಕೃತೇನಾಯಂ ಮಾನುಷೇಷು ನಿವತ್ಸ್ಯತಿ||

ಮತ್ತು ಈ ಕುಮಾರ ಗಂಗಾದತ್ತನು ಏನು ಮಾಡಿದ್ದಾನೆಂದು ಈಗ ಮನುಷ್ಯರಲ್ಲಿ ಬದುಕಬೇಕು?

01093003a ಈಶಾನಾಃ ಸರ್ವಲೋಕಸ್ಯ ವಸವಸ್ತೇ ಚ ವೈ ಕಥಂ|

01093003c ಮಾನುಷೇಷೂದಪದ್ಯಂತ ತನ್ಮಮಾಚಕ್ಷ್ವ ಜಾಹ್ನವಿ||

ವಸುಗಳು ಸರ್ವಲೋಕಗಳ ಒಡೆಯರು. ಅಂಥವರು ಏಕೆ ಮನುಷ್ಯರಾಗಿ ಹುಟ್ಟಿದರು ಎನ್ನುವುದನ್ನು ನನಗೆ ಹೇಳು ಜಾಹ್ನವಿ!””

01093004 ವೈಶಂಪಾಯನ ಉವಾಚ|

01093004a ಸೈವಮುಕ್ತಾ ತತೋ ಗಂಗಾ ರಾಜಾನಮಿದಮಬ್ರವೀತ್|

01093004c ಭರ್ತಾರಂ ಜಾಹ್ನವೀ ದೇವೀ ಶಂತನುಂ ಪುರುಷರ್ಷಭಂ||

ವೈಶಂಪಾಯನನು ಹೇಳಿದನು: “ರಾಜನ ಈ ಮಾತುಗಳಿಗೆ ಉತ್ತರವಾಗಿ ದೇವಿ ಜಹ್ನುಪುತ್ರಿ ಗಂಗೆಯು ಪತಿ ಪುರುಷರ್ಷಭ ಶಂತನುವನ್ನುದ್ದೇಶಿಸಿ ಹೇಳಿದಳು:

01093005a ಯಂ ಲೇಭೇ ವರುಣಃ ಪುತ್ರಂ ಪುರಾ ಭರತಸತ್ತಮ|

01093005c ವಸಿಷ್ಠೋ ನಾಮ ಸ ಮುನಿಃ ಖ್ಯಾತ ಆಪವ ಇತ್ಯುತ||

“ಭರತಸತ್ತಮ! ಹಿಂದೆ ವರುಣನು ಪುತ್ರನೋರ್ವನನ್ನು ಪಡೆದನು. ಅವನು ವಸಿಷ್ಠನೆಂಬ ಹೆಸರಿನ ಮುನಿ. ಅವನು ಆಪವನೆಂದೂ ಖ್ಯಾತ.

01093006a ತಸ್ಯಾಶ್ರಮಪದಂ ಪುಣ್ಯಂ ಮೃಗಪಕ್ಷಿಗಣಾನ್ವಿತಂ|

01093006c ಮೇರೋಃ ಪಾರ್ಶ್ವೇ ನಗೇಂದ್ರಸ್ಯ ಸರ್ವರ್ತುಕುಸುಮಾವೃತಂ||

ಅವನ ಪುಣ್ಯ ಆಶ್ರಮ ಸಂಕುಲವು ನಗೇಂದ್ರ ಮೇರುವಿನ ಪಾರ್ಶ್ವದಲ್ಲಿತ್ತು ಮತ್ತು ಅದು ಮೃಗಪಕ್ಷಿಗಣಗಳಿಂದ ಹಾಗೂ ಸದಾಕಾಲ ಕುಸುಮಗಳಿಂದ ತುಂಬಿಕೊಂಡಿತ್ತು.

01093007a ಸ ವಾರುಣಿಸ್ತಪಸ್ತೇಪೇ ತಸ್ಮಿನ್ಭರತಸತ್ತಮ|

01093007c ವನೇ ಪುಣ್ಯಕೃತಾಂ ಶ್ರೇಷ್ಠಃ ಸ್ವಾದುಮೂಲಫಲೋದಕೇ||

ಭರತಸತ್ತಮ! ಸ್ವಾದಿಷ್ಟವಾದ ಫಲ-ಮೂಲ-ಜಲಗಳಿಂದೊಡಗೂಡಿದ ಆ ವನದಲ್ಲಿ ಪುಣ್ಯಕೃತರಲ್ಲಿ ಶ್ರೇಷ್ಠ ವಾರುಣಿಯು ತಪಸ್ಸಿನಲ್ಲಿ ನಿರತನಾಗಿದ್ದನು.

01093008a ದಕ್ಷಸ್ಯ ದುಹಿತಾ ಯಾ ತು ಸುರಭೀತ್ಯತಿಗರ್ವಿತಾ|

01093008c ಗಾಂ ಪ್ರಜಾತಾ ತು ಸಾ ದೇವೀ ಕಶ್ಯಪಾದ್ಭರತರ್ಷಭ||

01093009a ಅನುಗ್ರಹಾರ್ಥಂ ಜಗತಃ ಸರ್ವಕಾಮದುಘಾಂ ವರಾಂ|

01093009c ತಾಂ ಲೇಭೇ ಗಾಂ ತು ಧರ್ಮಾತ್ಮಾ ಹೋಮಧೇನುಂ ಸ ವಾರುಣಿಃ||

ದಕ್ಷನಿಗೆ ಸುರಭಿ ಎನ್ನುವ ಅತಿಗರ್ವಿತೆ ಮಗಳೊಬ್ಬಳಿದ್ದಳು. ಭರತರ್ಷಭ! ಈ ದೇವಿಯು ಜಗತ್ತಿನ ಅನುಗ್ರಹಾರ್ಥಕ್ಕಾಗಿ ಕಶ್ಯಪನಿಂದ ಸರ್ವಕಾಮಗಳನ್ನೂ ಪೂರೈಸುವ ಹಾಲುಳ್ಳ ಶ್ರೇಷ್ಠ ಗೋವೊಂದಕ್ಕೆ ಜನ್ಮವಿತ್ತಳು. ಆ ಹಸುವನ್ನು ತನ್ನ ಹೋಮಧೇನುವಾಗಿ ಧರ್ಮಾತ್ಮ ವಾರುಣಿಯು ಪಡೆದನು.

01093010a ಸಾ ತಸ್ಮಿಂಸ್ತಾಪಸಾರಣ್ಯೇ ವಸಂತೀ ಮುನಿಸೇವಿತೇ|

01093010c ಚಚಾರ ರಮ್ಯೇ ಧರ್ಮ್ಯೇ ಚ ಗೌರಪೇತಭಯಾ ತದಾ||

ಆ ಹಸುವು ತಪಸ್ವಿಗಳ ಆ ಅರಣ್ಯದಲ್ಲಿ ಮುನಿಗಳಿಂದ ಸೇವಿಸಲ್ಪಡುತ್ತಾ, ರಮ್ಯ ಹುಲ್ಲುಗಾವಲಿನಲ್ಲಿ ನಿರ್ಭಯಳಾಗಿ ಮೇಯುತ್ತಾ ವಾಸಿಸುತ್ತಿದ್ದಳು.

01093011a ಅಥ ತದ್ವನಮಾಜಗ್ಮುಃ ಕದಾ ಚಿದ್ಭರತರ್ಷಭ|

01093011c ಪೃಥ್ವಾದ್ಯಾ ವಸವಃ ಸರ್ವೇ ದೇವದೇವರ್ಷಿಸೇವಿತಂ||

ಭರತರ್ಷಭ! ಒಮ್ಮೆ ದೇವದೇವರ್ಷಿಸೇವಿತ ಸರ್ವ ವಸುಗಳೂ ಪೃಥುವಿನ ನಾಯಕತ್ವದಲ್ಲಿ ಆ ವನಕ್ಕೆ ಆಗಮಿಸಿದರು.

01093012a ತೇ ಸದಾರಾ ವನಂ ತಚ್ಚ ವ್ಯಚರಂತ ಸಮಂತತಃ|

01093012c ರೇಮಿರೇ ರಮಣೀಯೇಷು ಪರ್ವತೇಷು ವನೇಷು ಚ||

ತಮ್ಮ ತಮ್ಮ ಪತ್ನಿಗಳೊಂದಿಗೆ ಆ ವನವನ್ನೆಲ್ಲಾ ಸುತ್ತಿದರು ಮತ್ತು ಆ ರಮಣೀಯ ಪರ್ವತ-ವನಗಳಲ್ಲಿ ರಮಿಸಿದರು.

01093013a ತತ್ರೈಕಸ್ಯ ತು ಭಾರ್ಯಾ ವೈ ವಸೋರ್ವಾಸವವಿಕ್ರಮ|

01093013c ಸಾ ಚರಂತೀ ವನೇ ತಸ್ಮಿನ್ಗಾಂ ದದರ್ಶ ಸುಮಧ್ಯಮಾ|

01093013e ಯಾ ಸಾ ವಸಿಷ್ಠಸ್ಯ ಮುನೇಃ ಸರ್ವಕಾಮಧುಗುತ್ತಮಾ||

ವಾಸವವಿಕ್ರಮ! ಅವರಲ್ಲಿ ಓರ್ವ ವಸುವಿನ ಪತ್ನಿಯು ವನದಲ್ಲಿ ಸಂಚರಿಸುತ್ತಿದ್ದಾಗ ಮುನಿ ವಸಿಷ್ಠನ ಸರ್ವಕಾಮಗಳನ್ನು ಪೂರೈಸಬಲ್ಲ, ಆ ಉತ್ತಮ ಸುಂದರ ಗೋವನ್ನು ಕಂಡಳು.

01093014a ಸಾ ವಿಸ್ಮಯಸಮಾವಿಷ್ಟಾ ಶೀಲದ್ರವಿಣಸಂಪದಾ|

01093014c ದಿವೇ ವೈ ದರ್ಶಯಾಮಾಸ ತಾಂ ಗಾಂ ಗೋವೃಷಭೇಕ್ಷಣ||

01093015a ಸ್ವಾಪೀನಾಂ ಚ ಸುದೋಗ್ಧ್ರೀಂ ಚ ಸುವಾಲಧಿಮುಖಾಂ ಶುಭಾಂ|

01093015c ಉಪಪನ್ನಾಂ ಗುಣೈಃ ಸರ್ವೈಃ ಶೀಲೇನಾನುತ್ತಮೇನ ಚ||

ಗೋವೃಷಭೇಕ್ಷಣ! ಆ ಗೋವಿನ ಶೀಲತೆ ಮತ್ತು ದ್ರವಿಣಸಂಪತ್ತನ್ನು ನೋಡಿ ವಿಸ್ಮಿತಳಾದ ಅವಳು ಆ ಉತ್ತಮ, ಶೀಲವಂತ, ಸರ್ವಗುಣೋಪೇತ, ಸುಂದರ, ಸುಂದರ ಬಾಲ ಮತ್ತು ಮುಖಗಳನ್ನು ಹೊಂದಿದ, ಒಳ್ಳೆಯ ಹಾಲನ್ನು ನೀಡುವ ಹಸುವನ್ನು ದ್ಯೌವಿಗೆ ತೋರಿಸಿದಳು.

01093016a ಏವಂಗುಣಸಮಾಯುಕ್ತಾಂ ವಸವೇ ವಸುನಂದಿನೀ|

01093016c ದರ್ಶಯಾಮಾಸ ರಾಜೇಂದ್ರ ಪುರಾ ಪೌರವನಂದನ||

ರಾಜೇಂದ್ರ! ಪೌರವನಂದನ! ಈ ರೀತಿ ಗುಣಸಮಾಯುಕ್ತ ಹಸುವನ್ನು ವಸುನಂದಿನಿಯು ವಸುವಿಗೆ ತೋರಿಸಿದಳು.

01093017a ದ್ಯೌಸ್ತದಾ ತಾಂ ತು ದೃಷ್ಟ್ವೈವ ಗಾಂ ಗಜೇಂದ್ರೇಂದ್ರವಿಕ್ರಮ|

01093017c ಉವಾಚ ರಾಜಂಸ್ತಾಂ ದೇವೀಂ ತಸ್ಯಾ ರೂಪಗುಣಾನ್ವದನ್||

ರಾಜ! ಗಜೇಂದ್ರ! ಇಂದ್ರವಿಕ್ರಮ! ಆ ಹಸುವನ್ನು ನೋಡಿದೊಡನೆಯೇ ದ್ಯೌ ಅದರ ರೂಪಗುಣಗಳನ್ನು ಹೊಗಳುತ್ತಾ ತನ್ನ ದೇವಿಗೆ ಹೇಳಿದನು:

01093018a ಏಷಾ ಗೌರುತ್ತಮಾ ದೇವಿ ವಾರುಣೇರಸಿತೇಕ್ಷಣೇ|

01093018c ಋಷೇಸ್ತಸ್ಯ ವರಾರೋಹೇ ಯಸ್ಯೇದಂ ವನಮುತ್ತಮಂ||

“ವರಾರೋಹೇ! ಈ ಕಪ್ಪು ಕಣ್ಣುಗಳುಳ್ಳ ಉತ್ತಮ ಗೋವು ಈ ಉತ್ತಮ ವನಗಳ ಒಡೆಯ ವಾರುಣಿಗೆ ಸೇರಿದ್ದುದು.

01093019a ಅಸ್ಯಾಃ ಕ್ಷೀರಂ ಪಿಬೇನ್ಮರ್ತ್ಯಃ ಸ್ವಾದು ಯೋ ವೈ ಸುಮಧ್ಯಮೇ|

01093019c ದಶ ವರ್ಷಸಹಸ್ರಾಣಿ ಸ ಜೀವೇತ್ ಸ್ಥಿರಯೌವನಃ||

ಸುಮಧ್ಯಮೇ! ಇದರ ಸ್ವಾದಿಷ್ಟ ಹಾಲನ್ನು ಕುಡಿದ ಮರ್ತ್ಯನು ಹತ್ತು ಸಾವಿರ ವರ್ಷಗಳ ಪರ್ಯಂತ ಸ್ಥಿರಯೌವನಿಯಾಗಿ ಜೀವಿಸಬಲ್ಲ.”

01093020a ಏತಚ್ಛೃತ್ವಾ ತು ಸಾ ದೇವೀ ನೃಪೋತ್ತಮ ಸುಮಧ್ಯಮಾ|

01093020c ತಮುವಾಚಾನವದ್ಯಾಂಗೀ ಭರ್ತಾರಂ ದೀಪ್ತತೇಜಸಂ||

ನೃಪೋತ್ತಮ! ಆ ಸುಮಧ್ಯಮೆ ಅನವದ್ಯಾಂಗಿಯು ಈ ಮಾತನ್ನು ಕೇಳಿ ತನ್ನ ದೀಪ್ತತೇಜಸ ಪತಿಯನ್ನುದ್ದೇಶಿಸಿ ಹೇಳಿದಳು:

01093021a ಅಸ್ತಿ ಮೇ ಮಾನುಷೇ ಲೋಕೇ ನರದೇವಾತ್ಮಜಾ ಸಖೀ|

01093021c ನಾಮ್ನಾ ಜಿನವತೀ ನಾಮ ರೂಪಯೌವನಶಾಲಿನೀ||

“ನನಗೆ ಮನುಷ್ಯಲೋಕದಲ್ಲಿ ರೂಪಯೌವನಶಾಲಿ ನರದೇವಾತ್ಮಜೆ ಜಿನವತಿ ಎಂಬ ಹೆಸರಿನ ಸಖಿಯೊಬ್ಬಳಿದ್ದಾಳೆ.

01093022a ಉಶೀನರಸ್ಯ ರಾಜರ್ಷೇಃ ಸತ್ಯಸಂಧಸ್ಯ ಧೀಮತಃ|

01093022c ದುಹಿತಾ ಪ್ರಥಿತಾ ಲೋಕೇ ಮಾನುಷೇ ರೂಪಸಂಪದಾ||

ಧೀಮಂತ, ಸತ್ಯಸಂಧ, ರಾಜರ್ಷಿ ಉಶೀನರನ ಮಗಳಾದ ಅವಳು ತನ್ನ ರೂಪ ಸಂಪತ್ತಿನಿಂದ ಮಾನುಷ ಲೋಕದಲ್ಲಿಯೇ ಪ್ರಸಿದ್ಧಳಾಗಿದ್ದಾಳೆ.

01093023a ತಸ್ಯಾ ಹೇತೋರ್ಮಹಾಭಾಗ ಸವತ್ಸಾಂ ಗಾಂ ಮಮೇಪ್ಸಿತಾಂ|

01093023c ಆನಯಸ್ವಾಮರಶ್ರೇಷ್ಠ ತ್ವರಿತಂ ಪುಣ್ಯವರ್ಧನ||

01093024a ಯಾವದಸ್ಯಾಃ ಪಯಃ ಪೀತ್ವಾ ಸಾ ಸಖೀ ಮಮ ಮಾನದ|

01093024c ಮಾನುಷೇಷು ಭವತ್ವೇಕಾ ಜರಾರೋಗವಿವರ್ಜಿತಾ||

ಮಹಾಭಾಗ! ಅವಳಿಗೋಸ್ಕರ ಈ ಗೋವು ಮತ್ತು ಅದರ ಕರು ನನಗೆ ಬೇಕು. ಪುಣ್ಯವರ್ಧನ! ಅಮರಶ್ರೇಷ್ಠ! ಬೇಗನೆ ಅದನ್ನು ತೆಗೆದುಕೊಂಡು ಬಾ. ಮಾನದ! ಅದರ ಹಾಲನ್ನು ಕುಡಿದು ನನ್ನ ಸಖಿಯು ಮನುಷ್ಯಲೋಕದಲ್ಲಿ ವೃದ್ಧಾಪ್ಯ ಮತ್ತು ರೋಗ ವರ್ಜಿತಳಾದ ಒಬ್ಬಳೇ ಒಬ್ಬಳೆಂದು ಎನಿಸಿಕೊಳ್ಳುತ್ತಾಳೆ.

01093025a ಏತನ್ಮಮ ಮಹಾಭಾಗ ಕರ್ತುಮರ್ಹಸ್ಯನಿಂದಿತ|

01093025c ಪ್ರಿಯಂ ಪ್ರಿಯತರಂ ಹ್ಯಸ್ಮಾನ್ನಾಸ್ತಿ ಮೇಽನ್ಯತ್ಕಥಂ ಚನ||

ಮಹಾಭಾಗ! ಅನಿಂದಿತ! ನನಗಾಗಿ ಇದನ್ನೊಂದನ್ನು ನೀನು ಮಾಡಬೇಕು. ಇದನ್ನು ಬಿಟ್ಟು ಬೇರೆ ಏನೂ ನನಗೆ ಸಂತೋಷವನ್ನು ಕೊಡುವುದಿಲ್ಲ.”

01093026a ಏತತ್ ಶ್ರುತ್ವಾ ವಚಸ್ತಸ್ಯಾ ದೇವ್ಯಾಃ ಪ್ರಿಯಚಿಕೀರ್ಷಯಾ|

01093026c ಪೃಥ್ವಾದ್ಯೈರ್ಭ್ರಾತೃಭಿಃ ಸಾರ್ಧಂ ದ್ಯೌಸ್ತದಾ ತಾಂ ಜಹಾರ ಗಾಂ||

ದೇವಿಯ ಈ ವಚನಗಳನ್ನು ಕೇಳಿದ ದ್ಯೌ ಅವಳಿಗೆ ಪ್ರಿಯವಾದದ್ದನ್ನು ಮಾಡಲೋಸುಗ ಪೃಥುವಿನ ನಾಯಕತ್ವದಲ್ಲಿ ತನ್ನ ಸಹೋದರರನ್ನು ಸೇರಿ ಆ ಹಸುವನ್ನು ಅಪಹರಿಸಿ ತಂದನು.

01093027a ತಯಾ ಕಮಲಪತ್ರಾಕ್ಷ್ಯಾ ನಿಯುಕ್ತೋ ದ್ಯೌಸ್ತದಾ ನೃಪ|

01093027c ಋಷೇಸ್ತಸ್ಯ ತಪಸ್ತೀವ್ರಂ ನ ಶಶಾಕ ನಿರೀಕ್ಷಿತುಂ|

01093027e ಹೃತಾ ಗೌಃ ಸಾ ತದಾ ತೇನ ಪ್ರಪಾತಸ್ತು ನ ತರ್ಕಿತಃ||

ನೃಪ! ಆ ಕಮಲಪತ್ರಾಕ್ಷಿಯಿಂದ ನಿಯುಕ್ತಗೊಂಡ ದ್ಯೌ ಆ ಋಷಿಯ ತೀವ್ರ ತಪಸ್ಸನ್ನು ನಿರೀಕ್ಷಿಸಲು ಅಸಮರ್ಥನಾದನು ಮತ್ತು ಆ ಹಸುವನ್ನು ಅಪಹರಿಸುವುದರಿಂದಾಗಬಹುದಾದ ತನ್ನ ಅಧೋಗತಿಯ ಕುರಿತು ಯೋಚಿಸಲಿಲ್ಲ.

01093028a ಅಥಾಶ್ರಮಪದಂ ಪ್ರಾಪ್ತಃ ಫಲಾನ್ಯಾದಾಯ ವಾರುಣಿಃ|

01093028c ನ ಚಾಪಶ್ಯತ ಗಾಂ ತತ್ರ ಸವತ್ಸಾಂ ಕಾನನೋತ್ತಮೇ||

ಫಲಗಳನ್ನು ತೆಗೆದುಕೊಂಡು ಆಶ್ರಮಪದವನ್ನು ಸೇರಿದ ವಾರುಣಿಯು ಆ ಉತ್ತಮ ಕಾನನದಲ್ಲಿ ಕರುವಿನ ಸಹಿತ ಗೋವನ್ನು ಕಾಣಲಿಲ್ಲ.

01093029a ತತಃ ಸ ಮೃಗಯಾಮಾಸ ವನೇ ತಸ್ಮಿಂಸ್ತಪೋಧನಃ|

01093029c ನಾಧ್ಯಗಚ್ಛಚ್ಚ ಮೃಗಯಂಸ್ತಾಂ ಗಾಂ ಮುನಿರುದಾರಧೀಃ||

ಆ ತಪೋಧನನು ಆಗ ವನವಿಡೀ ಅದನ್ನು ಹುಡುಕಿದನು. ಎಷ್ಟು ಹುಡುಕಿದರೂ ಆ ಉದಾರ ಮನಸ್ಸಿನ ಮುನಿಗೆ ಗೋ ಕಾಣಲಿಲ್ಲ.

01093030a ಜ್ಞಾತ್ವಾ ತಥಾಪನೀತಾಂ ತಾಂ ವಸುಭಿರ್ದಿವ್ಯದರ್ಶನಃ|

01093030c ಯಯೌ ಕ್ರೋಧವಶಂ ಸದ್ಯಃ ಶಶಾಪ ಚ ವಸೂಂಸ್ತದಾ||

ತನ್ನ ದಿವ್ಯ ದೃಷ್ಠಿಯಿಂದ ಹಸುವು ವಸುಗಳಿಂದ ಅಪಹರಣವಾಗಿದೆ ಎಂದು ತಿಳಿದ ಅವನು ತಕ್ಷಣವೇ ಕ್ರೋಧವಶನಾಗಿ ವಸುಗಳಿಗೆ ಶಾಪವನ್ನಿತ್ತನು.

01093031a ಯಸ್ಮಾನ್ಮೇ ವಸವೋ ಜಹ್ರುರ್ಗಾಂ ವೈ ದೋಗ್ಧ್ರೀಂ ಸುವಾಲಧಿಂ|

01093031c ತಸ್ಮಾತ್ಸರ್ವೇ ಜನಿಷ್ಯಂತಿ ಮಾನುಷೇಷು ನ ಸಂಶಯಃ||

“ವಸುಗಳು ನನ್ನ ಸುಂದರ ಬಾಲವನ್ನುಳ್ಳ ಹಾಲನ್ನೀಯುವ ಹಸುವನ್ನು ಕದ್ದಿರುವುದರಿಂದ ಅವರೆಲ್ಲರೂ ನಿಸ್ಸಂಶಯವಾಗಿ ಮಾನುಷರಲ್ಲಿ ಜನಿಸುತ್ತಾರೆ!”

01093032a ಏವಂ ಶಶಾಪ ಭಗವಾನ್ವಸೂಂಸ್ತಾನ್ಮುನಿಸತ್ತಮಃ|

01093032c ವಶಂ ಕೋಪಸ್ಯ ಸಂಪ್ರಾಪ್ತ ಆಪವೋ ಭರತರ್ಷಭ||

ಭರತರ್ಷಭ! ಈ ರೀತಿ ಮುನಿಸತ್ತಮ ಭಗವಾನ್ ಆಪವನು ಕೋಪವಶನಾಗಿ ವಸುಗಳನ್ನು ಶಪಿಸಿದನು.

01093033a ಶಪ್ತ್ವಾ ಚ ತಾನ್ಮಹಾಭಾಗಸ್ತಪಸ್ಯೇವ ಮನೋ ದಧೇ|

01093033c ಏವಂ ಸ ಶಪ್ತವಾನ್ರಾಜನ್ವಸೂನಷ್ಟೌ ತಪೋಧನಃ|

01093033e ಮಹಾಪ್ರಭಾವೋ ಬ್ರಹ್ಮರ್ಷಿರ್ದೇವಾನ್ರೋಷಸಮನ್ವಿತಃ|

ಅವರನ್ನು ಶಪಿಸಿ ಆ ಮಹಾಭಾಗನು ತಪಸ್ಸಿನಲ್ಲಿಯೇ ತನ್ನ ಮನವನ್ನಿತ್ತನು. ರಾಜನ್! ಈ ರೀತಿ ಆ ಎಂಟು ವಸುಗಳು ರೋಷಸಮನ್ವಿತ ತಪೋಧನ, ಮಹಾಪ್ರಭಾವೀ, ಬ್ರಹ್ಮರ್ಷಿ ದೇವನಿಂದ ಶಪಿಸಲ್ಪಟ್ಟರು.

01093034a ಅಥಾಶ್ರಮಪದಂ ಪ್ರಾಪ್ಯ ತಂ ಸ್ಮ ಭೂಯೋ ಮಹಾತ್ಮನಃ|

01093034c ಶಪ್ತಾಃ ಸ್ಮ ಇತಿ ಜಾನಂತ ಋಷಿಂ ತಮುಪಚಕ್ರಮುಃ||

ಶಪಿಸಲ್ಪಟ್ಟಿದ್ದೇವೆ ಎಂದು ತಿಳಿದ ಆ ಮಹಾತ್ಮರು ಆಶ್ರಮಪದವನ್ನು ತಲುಪಿ ಋಷಿಯ ಬಳಿ ಬಂದರು.

01093035a ಪ್ರಸಾದಯಂತಸ್ತಂ ಋಷಿಂ ವಸವಃ ಪಾರ್ಥಿವರ್ಷಭ|

01093035c ನ ಲೇಭಿರೇ ಚ ತಸ್ಮಾತ್ತೇ ಪ್ರಸಾದಂ ಋಷಿಸತ್ತಮಾತ್|

01093035e ಆಪವಾತ್ಪುರುಷವ್ಯಾಘ್ರ ಸರ್ವಧರ್ಮವಿಶಾರದಾತ್||

ಪಾರ್ಥಿವರ್ಷಭ! ಪುರುಷವ್ಯಾಘ್ರ! ವಸುಗಳು ಆ ಋಷಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸರ್ವಧರ್ಮ ವಿಶಾರದ ಋಷಿಸತ್ತಮ ಆಪವನಿಂದ ಆಶೀರ್ವಾದವು ದೊರೆಯಲಿಲ್ಲ.

01093036a ಉವಾಚ ಚ ಸ ಧರ್ಮಾತ್ಮಾ ಸಪ್ತ ಯೂಯಂ ಧರಾದಯಃ|

01093036c ಅನು ಸಂವತ್ಸರಾಚ್ಶಾಪಮೋಕ್ಷಂ ವೈ ಸಮವಾಪ್ಸ್ಯಥ||

ಧರ್ಮಾತ್ಮನು ಹೇಳಿದನು: “ನಿಮ್ಮಲ್ಲಿ ಧರ ಮೊದಲಾದ ಏಳು ಜನರು ಇಂದಿನಿಂದ ಒಂದು ವರ್ಷದೊಳಗೆ ಶಾಪದಿಂದ ವಿಮುಕ್ತರಾಗುತ್ತೀರಿ.

01093037a ಅಯಂ ತು ಯತ್ಕೃತೇ ಯೂಯಂ ಮಯಾ ಶಪ್ತಾಃ ಸ ವತ್ಸ್ಯತಿ|

01093037c ದ್ಯೌಸ್ತದಾ ಮಾನುಷೇ ಲೋಕೇ ದೀರ್ಘಕಾಲಂ ಸ್ವಕರ್ಮಣಾ||

ಯಾರ ಕೆಲಸದಿಂದ ನೀವೆಲ್ಲರೂ ನನ್ನಿಂದ ಶಪಿಸಲ್ಪಟ್ಟಿದ್ದೀರೋ ಆ ದ್ಯೌ ಮಾತ್ರ ತನ್ನ ಕರ್ಮದಿಂದಾಗಿ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ.

01093038a ನಾನೃತಂ ತಚ್ಚಿಕೀರ್ಷಾಮಿ ಯುಷ್ಮಾನ್ಕ್ರುದ್ಧೋ ಯದಬ್ರುವಂ|

01093038c ನ ಪ್ರಜಾಸ್ಯತಿ ಚಾಪ್ಯೇಷ ಮಾನುಷೇಷು ಮಹಾಮನಾಃ||

ನಿಮ್ಮ ಮೇಲಿನ ಕ್ರೋಧದಿಂದಾಗಲೀ ಅಥವಾ ಸುಳ್ಳನ್ನು ಹೇಳಲೋಸುಗ ಈ ಮಾತನ್ನು ಹೇಳುತ್ತಿಲ್ಲ. ಆ ಮಹಾತ್ಮನು ಮನುಷ್ಯ ಲೋಕದಲ್ಲಿ ಸಂತತಿಯನ್ನು ಪಡೆಯುವುದಿಲ್ಲ.

01093039a ಭವಿಷ್ಯತಿ ಚ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದಃ|

01093039c ಪಿತುಃ ಪ್ರಿಯಹಿತೇ ಯುಕ್ತಃ ಸ್ತ್ರೀಭೋಗಾನ್ವರ್ಜಯಿಷ್ಯತಿ|

01093039e ಏವಮುಕ್ತ್ವಾ ವಸೂನ್ಸರ್ವಾನ್ ಜಗಾಮ ಭಗವಾನೃಷಿಃ||

ಅವನೊಬ್ಬ ಧರ್ಮಾತ್ಮನೂ, ಸರ್ವಶಾಸ್ತ್ರವಿಶಾರದನೂ, ಪಿತನ ಪ್ರಿಯಕಾರ್ಯ ನಿರತನೂ, ಆಗಿ ಸ್ತ್ರೀಭೋಗವನ್ನು ವರ್ಜಿಸುತ್ತಾನೆ.” ಎಲ್ಲ ವಸುಗಳಿಗೂ ಈ ರೀತಿ ಹೇಳಿದ ಭಗವಾನ್ ಋಷಿಯು ತೆರಳಿದನು.

01093040a ತತೋ ಮಾಮುಪಜಗ್ಮುಸ್ತೇ ಸಮಸ್ತಾ ವಸವಸ್ತದಾ|

01093040c ಅಯಾಚಂತ ಚ ಮಾಂ ರಾಜನ್ವರಂ ಸ ಚ ಮಯಾ ಕೃತಃ|

01093040e ಜಾತಾಂ ಜಾತಾನ್ಪ್ರಕ್ಷಿಪಾಸ್ಮಾನ್ಸ್ವಯಂ ಗಂಗೇ ತ್ವಮಂಭಸಿ||

ಆನಂತರ, ಸಮಸ್ತ ವಸುಗಳೂ ನನ್ನ ಬಳಿ ಬಂದಾಗ ನಾನು ಅವರಿಗೆ ಒಂದು ವರವನ್ನು ಇತ್ತೆ. ಆಗ ಅವರು “ಗಂಗೇ! ನಾವು ಹುಟ್ಟಿದಾಕ್ಷಣವೇ ಸ್ವಯಂ ನೀನು ನೀರಿನಲ್ಲಿ ಹಾಕಿಬಿಡು!” ಎಂದು ಯಾಚಿಸಿದರು.

01093041a ಏವಂ ತೇಷಾಮಹಂ ಸಮ್ಯಕ್ಶಪ್ತಾನಾಂ ರಾಜಸತ್ತಮ|

01093041c ಮೋಕ್ಷಾರ್ಥಂ ಮಾನುಷಾಲ್ಲೋಕಾದ್ಯಥಾವತ್ಕೃತವತ್ಯಹಂ||

ರಾಜಸತ್ತಮ! ಶಪಿತ ಆ ದೇವತೆಗಳನ್ನು ಮನುಷ್ಯ ಲೋಕದಿಂದ ಮುಕ್ತಿ ನೀಡಲೋಸುಗವೇ ನಾನು ಇದನ್ನೆಲ್ಲ ಮಾಡಿದೆ.

01093042a ಅಯಂ ಶಾಪಾದೃಷೇಸ್ತಸ್ಯ ಏಕ ಏವ ನೃಪೋತ್ತಮ|

01093042c ದ್ಯೌ ರಾಜನ್ಮಾನುಷೇ ಲೋಕೇ ಚಿರಂ ವತ್ಸ್ಯತಿ ಭಾರತ||

ಆದರೆ, ನೃಪೋತ್ತಮ! ರಾಜನ್! ಭಾರತ! ಈ ದ್ಯೌ ಒಬ್ಬನು ಮಾತ್ರ ಋಷಿಯ ಶಾಪದಂತೆ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ.”

01093043a ಏತದಾಖ್ಯಾಯ ಸಾ ದೇವೀ ತತ್ರೈವಾಂತರಧೀಯತ|

01093043c ಆದಾಯ ಚ ಕುಮಾರಂ ತಂ ಜಗಾಮಾಥ ಯಥೇಪ್ಸಿತಂ||

ಈ ರೀತಿ ಕಥೆಯನ್ನು ಹೇಳಿದ ದೇವಿಯು ಅಲ್ಲಿಯೇ ಅಂತರ್ಧಾನಳಾದಳು. ಹೋಗುವಾಗ ಆ ಕುಮಾರನನ್ನೂ ಕರೆದುಕೊಂಡು ಹೋದಳು.

01093044a ಸ ತು ದೇವವ್ರತೋ ನಾಮ ಗಾಂಗೇಯ ಇತಿ ಚಾಭವತ್|

01093044c ದ್ವಿನಾಮಾ ಶಂತನೋಃ ಪುತ್ರಃ ಶಂತನೋರಧಿಕೋ ಗುಣೈಃ||

ಗುಣಗಳಲ್ಲಿ ಶಂತನುವನ್ನೂ ಮೀರಿದ ಶಂತನು ಪುತ್ರನು ಎರಡು ಹೆಸರುಗಳಿಂದ ಕರೆಯಲ್ಪಟ್ಟನು: ದೇವವ್ರತ ಮತ್ತು ಗಾಂಗೇಯ.

01093045a ಶಂತನುಶ್ಚಾಪಿ ಶೋಕಾರ್ತೋ ಜಗಾಮ ಸ್ವಪುರಂ ತತಃ|

01093045c ತಸ್ಯಾಹಂ ಕೀರ್ತಯಿಷ್ಯಾಮಿ ಶಂತನೋರಮಿತಾನ್ಗುಣಾನ್||

01093046a ಮಹಾಭಾಗ್ಯಂ ಚ ನೃಪತೇರ್ಭಾರತಸ್ಯ ಯಶಸ್ವಿನಃ|

01093046c ಯಸ್ಯೇತಿಹಾಸೋ ದ್ಯುತಿಮಾನ್ಮಹಾಭಾರತಮುಚ್ಯತೇ||

ಶಂತನವು ಶೋಕಾರ್ತನಾಗಿ ತನ್ನ ಪುರಕ್ಕೆ ತೆರಳಿದನು. ಮಹಾಭಾಗ್ಯವಂತನೂ, ಯಶಸ್ವಿಯೂ, ಯಾವ ದ್ಯುತಿವಂತನ ಇತಿಹಾಸವನ್ನು ಮಹಾಭಾರತದಲ್ಲಿ ಹೇಳಲ್ಪಡುತ್ತಿದೆಯೋ ಆ ಭಾರತ ನೃಪ, ಶಂತನುವಿನ ಅಮಿತ ಗುಣಗಳನ್ನು ಸಂಕೀರ್ತಿಸುತ್ತೇನೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಆಪವೋಪಾಖ್ಯಾನೇ ತ್ರಿನವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಆಪವೋಪಾಖ್ಯಾನದಲ್ಲಿ ತೊಂಭತ್ತ್ಮೂರನೆಯ ಅಧ್ಯಾಯವು.

Comments are closed.