Adi Parva: Chapter 91

ಆದಿ ಪರ್ವ: ಸಂಭವ ಪರ್ವ

೯೧

ಮಹಾಭಿಷ

ಸ್ವರ್ಗವನ್ನು ಸೇರಿದ್ದ ಇಕ್ಷ್ವಾಕುವಂಶದ ಮಹಾಭಿಷನು ಗಂಗೆಯನ್ನು ಮೋಹಿಸಿದುದಕ್ಕಾಗಿ ಪಿತಾಮಹನಿಂದ ಶಪಿಸಲ್ಪಟ್ಟು ಕುರುವಂಶದಲ್ಲಿ ಪ್ರತೀಪನ ಮಗ ಶಂತನುವಾಗಿ ಜನಿಸಿದುದು (೧-೭). ವಸಿಷ್ಠನಿಂದ ಭೂಮಿಯಲ್ಲಿ ಜನ್ಮತಾಳಿ ಎಂದು ಶಾಪಗ್ರಸ್ಥರಾದ ಅಷ್ಟವಸುಗಳು ಮನುಷ್ಯ ಯೋನಿಯನ್ನು ತಿರಸ್ಕರಿಸಿ ತಮ್ಮ ತಾಯಿಯಾಗಬೇಕೆಂದು ಗಂಗೆಯಲ್ಲಿ ಕೇಳಿಕೊಳ್ಳುವುದು, ಶಂತನುವನ್ನು ಕರ್ತನನ್ನಾಗಿ ಆರಿಸಿಕೊಳ್ಳುವುದು (೮-೧೭). ಹುಟ್ಟಿದ ಕೂಡಲೇ ಅವರಿಗೆ ಮನುಷ್ಯ ಜೀವದಿಂದ ಮುಕ್ತಗೊಳಿಸಬೇಕೆಂದು ವಸುಗಳು ಕೇಳಲು, ಶಂತನುವಿಗೋಸ್ಕರ ಎಂಟರಲ್ಲಿ ಒಬ್ಬನನ್ನು ಉಳಿಸುವೆನೆಂದು ಗಂಗೆಯು ಒಪ್ಪಿಕೊಳ್ಳುವುದು (೧೮-೨೨).

01091001 ವೈಶಂಪಾಯನ ಉವಾಚ|

01091001a ಇಕ್ಷ್ವಾಕುವಂಶಪ್ರಭವೋ ರಾಜಾಸೀತ್ಪೃಥಿವೀಪತಿಃ|

01091001c ಮಹಾಭಿಷ ಇತಿ ಖ್ಯಾತಃ ಸತ್ಯವಾಕ್ಸತ್ಯವಿಕ್ರಮಃ||

ವೈಶಂಪಾಯನನು ಹೇಳಿದನು: “ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾಭಿಷನೆಂದು ಖ್ಯಾತ ಸತ್ಯವಿಕ್ರಮಿ, ಸತ್ಯವಾಕ್ಯ ಪೃಥ್ವೀಪತಿ ರಾಜನಿದ್ದನು.

01091002a ಸೋಽಶ್ವಮೇಧಸಹಸ್ರೇಣ ವಾಜಪೇಯಶತೇನ ಚ|

01091002c ತೋಷಯಾಮಾಸ ದೇವೇಂದ್ರಂ ಸ್ವರ್ಗಂ ಲೇಭೇ ತತಃ ಪ್ರಭುಃ||

ಸಾವಿರ ಅಶ್ವಮೇಧ ಮತ್ತು ನೂರು ವಾಜಪೇಯಗಳಿಂದ ಪ್ರಭು ದೇವೇಂದ್ರನನ್ನು ತೃಪ್ತಿಗೊಳಿಸಿ ಅವನು ಸ್ವರ್ಗವನ್ನು ಸೇರಿದನು.

01091003a ತತಃ ಕದಾ ಚಿದ್ಬ್ರಹ್ಮಾಣಮುಪಾಸಾಂ ಚಕ್ರಿರೇ ಸುರಾಃ|

01091003c ತತ್ರ ರಾಜರ್ಷಯೋ ಆಸನ್ಸ ಚ ರಾಜಾ ಮಹಾಭಿಷಃ||

ಅಲ್ಲಿ ಒಮ್ಮೆ ಸುರರೆಲ್ಲರೂ ಬ್ರಹ್ಮನ ಉಪಾಸನೆಯಲ್ಲಿ ತೊಡಗಿದ್ದಾಗ ರಾಜರ್ಷಿಗಳೊಡನೆ ಮಹಾಭಿಷನೂ ಆಸೀನರಾಗಿದ್ದನು.

01091004a ಅಥ ಗಂಗಾ ಸರಿಚ್ಛ್ರೇಷ್ಠಾ ಸಮುಪಾಯಾತ್ಪಿತಾಮಹಂ|

01091004c ತಸ್ಯಾ ವಾಸಃ ಸಮುದ್ಧೂತಂ ಮಾರುತೇನ ಶಶಿಪ್ರಭಂ||

01091005a ತತೋಽಭವನ್ಸುರಗಣಾಃ ಸಹಸಾವಾಙ್ಮುಖಾಸ್ತದಾ|

01091005c ಮಹಾಭಿಷಸ್ತು ರಾಜರ್ಷಿರಶಂಕೋ ದೃಷ್ಟವಾನ್ನದೀಂ||

ಆಗ ನದಿಗಳಲ್ಲೆಲ್ಲ ಶ್ರೇಷ್ಠ ಗಂಗೆಯು ಪಿತಾಮಹನಿಗೆ ಗೌರವಿಸಲು ಬಂದಳು. ಶಶಿಪ್ರಭೆಯ ಅವಳ ವಸ್ತ್ರವು ಗಾಳಿಯಲ್ಲಿ ಹಾರಿಹೋಯಿತು. ಅಲ್ಲಿ ನೆರೆದಿದ್ದ ಸುರಗಣವು ತಕ್ಷಣವೇ ಮುಖಗಳನ್ನು ಕೆಳಗೆ ಮಾಡಿತು. ಆದರೆ ರಾಜರ್ಷಿ ಮಹಾಭಿಷನು ನಿಃಶಂಕೆಯಿಂದ ಅವಳನ್ನೇ ನೋಡುತ್ತಿದ್ದನು.

01091006a ಅಪಧ್ಯಾತೋ ಭಗವತಾ ಬ್ರಹ್ಮಣಾ ಸ ಮಹಾಭಿಷಃ|

01091006c ಉಕ್ತಶ್ಚ ಜಾತೋ ಮರ್ತ್ಯೇಷು ಪುನರ್ಲೋಕಾನವಾಪ್ಸ್ಯಸಿ||

ಭಗವಾನ್ ಬ್ರಹ್ಮನು ಮಹಾಭಿಷನನ್ನು ಅವಹೇಳನ ಮಾಡುತ್ತಾ “ಮರ್ತ್ಯನಾಗಿ ಹುಟ್ಟಿ ಪುನಃ ಲೋಕಗಳನ್ನು ಹೊಂದುತ್ತೀಯೆ!” ಎಂದನು.

01091007a ಸ ಚಿಂತಯಿತ್ವಾ ನೃಪತಿರ್ನೃಪಾನ್ಸರ್ವಾಂಸ್ತಪೋಧನಾನ್|

01091007c ಪ್ರತೀಪಂ ರೋಚಯಾಮಾಸ ಪಿತರಂ ಭೂರಿವರ್ಚಸಂ||

ಆ ನೃಪತಿಯು ಎಲ್ಲಾ ರಾಜರು ಮತ್ತು ತಪೋಧನರನ್ನು ಯೋಚಿಸಿ ಭೂರಿವರ್ಚಸ ಪ್ರತೀಪನನ್ನು ತಂದೆಯನ್ನಾಗಿ ಆರಿಸಿಕೊಂಡನು.

01091008a ಮಹಾಭಿಷಂ ತು ತಂ ದೃಷ್ಟ್ವಾ ನದೀ ಧೈರ್ಯಾಚ್ಚ್ಯುತಂ ನೃಪಂ|

01091008c ತಮೇವ ಮನಸಾಧ್ಯಾಯಮುಪಾವರ್ತತ್ಸರಿದ್ವರಾ||

ಮಹಾಭಿಷನು ಈ ರೀತಿ ಧೈರ್ಯವನ್ನು ಕಳೆದುಕೊಂಡಿದ್ದುದನ್ನು ನೋಡಿ ಸರಿದ್ವರೆ ನದಿಯು ಆ ನೃಪನನ್ನೇ ಮನಸ್ಸಿನಲ್ಲಿ ನೆನೆಯುತ್ತಾ ಹೋದಳು.

01091009a ಸಾ ತು ವಿಧ್ವಸ್ತವಪುಷಃ ಕಶ್ಮಲಾಭಿಹತೌಜಸಃ|

01091009c ದದರ್ಶ ಪಥಿ ಗಚ್ಛಂತೀ ವಸೂನ್ದೇವಾನ್ದಿವೌಕಸಃ||

ಹೋಗುತ್ತಿರುವ ದಾರಿಯಲ್ಲಿ ಅವಳು ತಮ್ಮ ಮುಖಗಳ ಕಾಂತಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ದಿವೌಕಸ ವಸು ದೇವತೆಗಳನ್ನು ಕಂಡಳು.

01091010a ತಥಾರೂಪಾಂಶ್ಚ ತಾನ್ದೃಷ್ಟ್ವಾ ಪಪ್ರಚ್ಛ ಸರಿತಾಂ ವರಾ|

01091010c ಕಿಮಿದಂ ನಷ್ಟರೂಪಾಃ ಸ್ಥ ಕಚ್ಚಿತ್ಕ್ಷೇಮಂ ದಿವೌಕಸಾಂ||

ಆ ಪರಿಸ್ಥಿತಿಯಲ್ಲಿ ಅವರನ್ನು ನೋಡಿದ ಗಂಗೆಯು ಕೇಳಿದಳು: “ಹೀಗೇಕೆ ಏನನ್ನೋ ಕಳೆದುಕೊಂಡವರಂತೆ ಕಾಣುತ್ತಿದ್ದೀರಿ? ದಿವೌಕಸರಿಗೆ ಕ್ಷೇಮವಿಲ್ಲವೇ?”

01091011a ತಾಮೂಚುರ್ವಸವೋ ದೇವಾಃ ಶಪ್ತಾಃ ಸ್ಮೋ ವೈ ಮಹಾನದಿ|

01091011c ಅಲ್ಪೇಽಪರಾಧೇ ಸಂರಂಭಾದ್ವಸಿಷ್ಠೇನ ಮಹಾತ್ಮನಾ||

01091012a ವಿಮೂದಾ ಹಿ ವಯಂ ಸರ್ವೇ ಪ್ರಚ್ಛನ್ನಂ ಋಷಿಸತ್ತಮಂ|

01091012c ಸಂಧ್ಯಾಂ ವಸಿಷ್ಠಮಾಸೀನಂ ತಮತ್ಯಭಿಸೃತಾಃ ಪುರಾ||

ಆಗ ವಸು ದೇವತೆಗಳು ಹೇಳಿದರು: “ಮಹಾನದೀ! ನಮ್ಮ ಒಂದು ಸಣ್ಣ ಅಪರಾಧಕ್ಕಾಗಿ ನಾವು ಮಹಾತ್ಮ ವಸಿಷ್ಠನಿಂದ ಶಪ್ತರಾಗಿದ್ದೇವೆ. ನಾವೆಲ್ಲ ವಿಮೂಢರೂ ಸಂಧ್ಯಾವಂದನೆಗೆಂದು ಕುಳಿತಿದ್ದ ಋಷಿಸತ್ತಮ ವಸಿಷ್ಠನನ್ನು ನೋಡದೆಯೇ ಅವನನ್ನು ಉಲ್ಲಂಘಿಸಿದೆವು.

01091013a ತೇನ ಕೋಪಾದ್ವಯಂ ಶಪ್ತಾ ಯೋನೌ ಸಂಭವತೇತಿ ಹ|

01091013c ನ ಶಕ್ಯಮನ್ಯಥಾ ಕರ್ತುಂ ಯದುಕ್ತಂ ಬ್ರಹ್ಮವಾದಿನಾ||

ಅದರಿಂದ ಕೋಪಗೊಂಡ ಅವನು “ಯೋನಿಯಲ್ಲಿ ಹುಟ್ಟಿರಿ!” ಎಂದು ಶಾಪವನ್ನಿತ್ತನು. ಬ್ರಹ್ಮವಾದಿಯ ಮಾತನ್ನು ಬದಲಾಯಿಸಲು ಸಾದ್ಯವಿಲ್ಲ.

01091014a ತ್ವಂ ತಸ್ಮಾನ್ಮಾನುಷೀ ಭೂತ್ವಾ ಸೂಷ್ವ ಪುತ್ರಾನ್ವಸೂನ್ಭುವಿ|

01091014c ನ ಮಾನುಷೀಣಾಂ ಜಠರಂ ಪ್ರವಿಶೇಮಾಶುಭಂ ವಯಂ||

ಆದುದರಿಂದ ನೀನು ಮಾನುಷಿಯಾಗಿ ಭೂಮಿಯಲ್ಲಿ ವಸುಗಳನ್ನು ಪುತ್ರರನ್ನಾಗಿ ಜನಿಸು. ಮಾನುಷಿಯ ಜಠರವನ್ನು ಪ್ರವೇಶಿಸುವುದು ನಮಗೆ ಅಶುಭ.”

01091015a ಇತ್ಯುಕ್ತಾ ತಾನ್ವಸೂನ್ಗಂಗಾ ತಥೇತ್ಯುಕ್ತ್ವಾಬ್ರವೀದಿದಂ|

01091015c ಮರ್ತ್ಯೇಷು ಪುರುಷಶ್ರೇಷ್ಠಃ ಕೋ ವಃ ಕರ್ತಾ ಭವಿಷ್ಯತಿ||

“ಹಾಗೆಯೇ ಆಗಲಿ!” ಎಂದು ವಚನವನ್ನಿತ್ತ ಗಂಗೆಯು ಆ ವಸುಗಳನ್ನುದ್ದೇಶಿಸಿ ಹೇಳಿದಳು: “ಮರ್ತ್ಯರಲ್ಲಿ ಯಾವ ಪುರುಷಶ್ರೇಷ್ಠನು ನಿಮ್ಮ ಕರ್ತನಾಗುತ್ತಾನೆ?”

01091016 ವಸವ ಊಚುಃ

01091016a ಪ್ರತೀಪಸ್ಯ ಸುತೋ ರಾಜಾ ಶಂತನುರ್ನಾಮ ಧಾರ್ಮಿಕಃ|

01091016c ಭವಿತಾ ಮಾನುಷೇ ಲೋಕೇ ಸ ನಃ ಕರ್ತಾ ಭವಿಷ್ಯತಿ||

ವಸುಗಳು ಹೇಳಿದರು: “ಶಾಂತನು ಎಂಬ ಹೆಸರಿನ ಧಾರ್ಮಿಕ ರಾಜನೊಬ್ಬನು ಪ್ರತೀಪನ ಮಗನಾಗಿ ಮನುಷ್ಯ ಲೋಕದಲ್ಲಿ ಜನ್ಮವೆತ್ತಲಿದ್ದಾನೆ. ಅವನೇ ನಮ್ಮ ಕರ್ತನಾಗುತ್ತಾನೆ.””

01091017 ಗಂಗೋವಾಚ     

01091017a ಮಮಾಪ್ಯೇವಂ ಮತಂ ದೇವಾ ಯಥಾವದತ ಮಾನಘಾಃ|

01091017c ಪ್ರಿಯಂ ತಸ್ಯ ಕರಿಷ್ಯಾಮಿ ಯುಷ್ಮಾಕಂ ಚೈತದೀಪ್ಶಿತಂ||

ಗಂಗೆಯು ಹೇಳಿದಳು: “ಮಾನಘ ದೇವತೆಗಳೇ! ನನ್ನ ಮನಸ್ಸಿನಲ್ಲಿಯೂ ನೀವು ಹೇಳಿದ ಮಾತೇ ಇತ್ತು. ಅವನಿಗೆ ಪ್ರಿಯವಾದುದನ್ನು ಮಾಡುವುದರ ಜೊತೆಗೆ ನಿಮ್ಮ ಇಚ್ಛೆಯನ್ನೂ ನೆರವೇರಿಸುತ್ತೇನೆ.”

01091018 ವಸವ ಊಚುಃ|

01091018a ಜಾತಾನ್ಕುಮಾರಾನ್ಸ್ವಾನಪ್ಸು ಪ್ರಕ್ಷೇಪ್ತುಂ ವೈ ತ್ವಮರ್ಹಸಿ|

01091018c ಯಥಾ ನಚಿರಕಾಲಂ ನೋ ನಿಷ್ಕೃತಿಃ ಸ್ಯಾತ್ತ್ರಿಲೋಕಗೇ||

ವಸುಗಳು ಹೇಳಿದರು: “ತ್ರಿಲೋಕಸಂಚಾರಿಣೀ! ಈ ನಿಷ್ಕೃತಿಯನ್ನು ದೀರ್ಘಕಾಲ ಅನುಭವಿಸಲು ಅವಕಾಶಕೊಡದ ರೀತಿಯಲ್ಲಿ ಹುಟ್ಟಿದ ಕೂಡಲೇ ಮಕ್ಕಳನ್ನು ನೀರಿನಲ್ಲಿ ಹಾಕಿಬಿಡು.”

01091019 ಗಂಗೋವಾಚ|

01091019a ಏವಮೇತತ್ಕರಿಷ್ಯಾಮಿ ಪುತ್ರಸ್ತಸ್ಯ ವಿಧೀಯತಾಂ|

01091019c ನಾಸ್ಯ ಮೋಘಃ ಸಂಗಮಃ ಸ್ಯಾತ್ಪುತ್ರಹೇತೋರ್ಮಯಾ ಸಹ||

ಗಂಗೆಯು ಹೇಳಿದಳು: “ಹಾಗೆಯೇ ಮಾಡುತ್ತೇನೆ. ಆದರೆ ಪುತ್ರಾಕಾಂಕ್ಷಿಯಾಗಿ ನನ್ನೊಡನೆ ಸೇರುವ ಅವನ ಯತ್ನವು ನಿಷ್ಪಲವಾಗದ ಹಾಗೆ ಅವನಿಗೆ ಒಬ್ಬನಾದರೂ ಮಗನನ್ನು ಕೊಡಬೇಕು.”

01091020 ವಸವ ಊಚುಃ|

01091020a ತುರೀಯಾರ್ಧಂ ಪ್ರದಾಸ್ಯಾಮೋ ವೀರ್ಯಸ್ಯೈಕೈಕಶೋ ವಯಂ|

01091020c ತೇನ ವೀರ್ಯೇಣ ಪುತ್ರಸ್ತೇ ಭವಿತಾ ತಸ್ಯ ಚೇಪ್ಸಿತಃ||

ವಸುಗಳು ಹೇಳಿದರು: “ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ವೀರ್ಯಗಳ ಎಂಟರಲ್ಲಿ ಒಂದು ಅಂಶವನ್ನು ಬಿಟ್ಟುಕೊಡುತ್ತೇವೆ. ಆ ವೀರ್ಯದಿಂದ ನಿನಗೆ ಮತ್ತು ಅವನಿಗೆ ಇಷ್ಟವಾದ ಮಗನು ಜನಿಸುತ್ತಾನೆ.

01091021a ನ ಸಂಪತ್ಸ್ಯತಿ ಮರ್ತ್ಯೇಷು ಪುನಸ್ತಸ್ಯ ತು ಸಂತತಿಃ|

01091021c ತಸ್ಮಾದಪುತ್ರಃ ಪುತ್ರಸ್ತೇ ಭವಿಷ್ಯತಿ ಸ ವೀರ್ಯವಾನ್||

ಆದರೆ ಅವನು ಮರ್ತ್ಯರಲ್ಲಿ ಪುನಃ ಯಾವ ಸಂತತಿಯನ್ನೂ ಪಡೆಯಲಾರ. ಹೀಗೆ ನಿನ್ನ ವೀರ್ಯವಾನ್ ಪುತ್ರನು ಅಪುತ್ರನಾಗಿಯೇ ಇರುತ್ತಾನೆ.””

01091022 ವೈಶಂಪಾಯನ ಉವಾಚ|

01091022a ಏವಂ ತೇ ಸಮಯಂ ಕೃತ್ವಾ ಗಂಗಯಾ ವಸವಃ ಸಹ|

01091022c ಜಗ್ಮುಃ ಪ್ರಹೃಷ್ಟಮನಸೋ ಯಥಾಸಂಕಲ್ಪಮಂಜಸಾ||

ವೈಶಂಪಾಯನನು ಹೇಳಿದನು: “ಈ ರೀತಿ ಗಂಗೆಯೊಡನೆ ಒಪ್ಪಂದ ಮಾಡಿಕೊಂಡ ವಸುಗಳು ಸಂತುಷ್ಟರಾಗಿ ತಮಗಿಷ್ಟಬಂದಲ್ಲಿ ತೆರಳಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಮಹಾಭಿಷೋಪಾಖ್ಯಾನೇ ಏಕನವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಮಹಾಭಿಷೋಪಾಖ್ಯಾನದಲ್ಲಿ ತೊಂಭತ್ತೊಂದನೆಯ ಅಧ್ಯಾಯವು.

Comments are closed.