Adi Parva: Chapter 84

ಆದಿ ಪರ್ವ: ಸಂಭವ ಪರ್ವ

೮೪

ಯಯಾತಿಯು ತನ್ನ ಪರಿಚಯವನ್ನು, ವಿಧಿಯ ಮೆಲ್ಗೈಯನ್ನು ಹೇಳಿಕೊಳ್ಳುವುದು (೧-೧೧). ಅವನು ಅನುಭವಿಸಿದ ಲೋಕಗಳ ಕುರಿತು ಅಷ್ಟಕನ ಪ್ರಶ್ನೆಗೆ ಉತ್ತರಿಸಿದುದು (೧೨-೨೩).

01084001 ಯಯಾತಿರುವಾಚ|

01084001a ಅಹಂ ಯಯಾತಿರ್ನಹುಷಸ್ಯ ಪುತ್ರಃ

                        ಪೂರೋಃ ಪಿತಾ ಸರ್ವಭೂತಾವಮಾನಾತ್|

01084001c ಪ್ರಭ್ರಂಶಿತಃ ಸುರಸಿದ್ಧರ್ಷಿಲೋಕಾತ್

                        ಪರಿಚ್ಯುತಃ ಪ್ರಪತಾಮ್ಯಲ್ಪಪುಣ್ಯಃ||

ಯಯಾತಿಯು ಹೇಳಿದನು: “ನಾನು ಯಯಾತಿ. ನಹುಷನ ಪುತ್ರ ಮತ್ತು ಪೂರುವಿನ ಪಿತ. ಸರ್ವಭೂತಗಳನ್ನು ಅವಮಾನಿಸಿದುದರಿಂದ ಸುರ-ಸಿದ್ಧ‌-ಋಷಿಲೋಕಗಳಿಂದ ಹೊರಗೋಡಿಸಲ್ಪಟ್ಟು, ಪುಣ್ಯವು ಕಡಿಮೆಯಾಗಿ ಕಳಚಿ ಬಿದ್ದಿದ್ದೇನೆ.

01084002a ಅಹಂ ಹಿ ಪೂರ್ವೋ ವಯಸಾ ಭವದ್ಭ್ಯಃ

                        ತೇನಾಭಿವಾದಂ ಭವತಾಂ ನ ಪ್ರಯುಂಜೇ|

01084002c ಯೋ ವಿದ್ಯಯಾ ತಪಸಾ ಜನ್ಮನಾ ವಾ

                        ವೃದ್ಧಃ ಸ ಪೂಜ್ಯೋ ಭವತಿ ದ್ವಿಜಾನಾಂ||

ವಯಸ್ಸಿನಲ್ಲಿ ನಾನು ನಿಮ್ಮೆಲ್ಲರಿಗಿಂತ ಹಿರಿಯವನಾದುದರಿಂದ ನಾನೇ ನಿಮ್ಮನ್ನು ಮೊದಲು ಅಭಿವಾದಿಸಲಿಲ್ಲ. ವಿದ್ಯೆಯಲ್ಲಿ, ತಪಸ್ಸಿನಲ್ಲಿ ಅಥವಾ ಜನ್ಮದಲ್ಲಿ ವೃದ್ದನಾದವನು ದ್ವಿಜರಿಗೆ ಪೂಜ್ಯನಾಗುತ್ತಾನೆ.”

01084003 ಅಷ್ಟಕ ಉವಾಚ|

01084003a ಅವಾದೀಶ್ಚೇದ್ವಯಸಾ ಯಃ ಸ ವೃದ್ಧ

                        ಇತಿ ರಾಜನ್ನಾಭ್ಯವದಃ ಕಥಂ ಚಿತ್|

01084003c ಯೋ ವೈ ವಿದ್ವಾನ್ವಯಸಾ ಸನ್ಸ್ಮ ವೃದ್ಧಃ

                        ಸ ಏವ ಪೂಜ್ಯೋ ಭವತಿ ದ್ವಿಜಾನಾಂ||

ಅಷ್ಟಕನು ಹೇಳಿದನು: “ರಾಜನ್! ವಯಸ್ಸಿನಲ್ಲಿ ನಮಗಿಂತ ವೃದ್ಧನಾಗಿದ್ದುದರಿಂದ ನೀನು ನಮ್ಮನ್ನು ಮೊದಲು ಅಭಿವಾದಿಸಲಿಲ್ಲವೆಂದು ಹೇಳಿದೆಯಲ್ಲ! ವಿದ್ಯೆಯಲ್ಲಿ ವಯಸ್ಸಿನಲ್ಲಿ ವೃದ್ಧನಾದವನು ದ್ವಿಜರಿಗೆ ಪೂಜನೀಯನಾಗುತ್ತಾನೆ.”

01084004 ಯಯಾತಿರುವಾಚ|

01084004a ಪ್ರತಿಕೂಲಂ ಕರ್ಮಣಾಂಪಾಪಮಾಹುಃ

                        ತದ್ವರ್ತತೇಽಪ್ರವಣೇ ಪಾಪಲೋಕ್ಯಂ|

01084004c ಸಂತೋಽಸತಾಂ ನಾನುವರ್ತಂತಿ ಚೈತದ್

                        ಯಥಾ ಆತ್ಮೈಷಾಮನುಕೂಲವಾದೀ||

ಯಯಾತಿಯು ಹೇಳಿದನು: “ಪಾಪವು ಕರ್ಮಗಳನ್ನು ನಾಶಪಡಿಸುತ್ತದೆ ಮತ್ತು ನಿಧಾನವಾಗಿ ಪಾಪಲೋಕಕ್ಕೆ ಒಯ್ಯುತ್ತದೆ ಎಂದು ಹೇಳುತ್ತಾರೆ. ಒಳ್ಳೆಯದು ಎಂದೂ ಕೆಟ್ಟದ್ದನ್ನು ಅನುಸರಿಸುವುದಿಲ್ಲ. ಅದರಿಂದ ಅವರ ಆತ್ಮಗಳು ಅದಕ್ಕೆ ಅನುಕೂಲವಾದುದನ್ನೇ ಹೇಳುತ್ತವೆ.

01084005a ಅಭೂದ್ಧನಂ ಮೇ ವಿಪುಲಂ ಮಹದ್ವೈ

                        ವಿಚೇಷ್ಟಮಾನೋ ನಾಧಿಗಂತಾ ತದಸ್ಮಿ|

01084005c ಏವಂ ಪ್ರಧಾರ್ಯಾತ್ಮಹಿತೇ ನಿವಿಷ್ಟೋ

                        ಯೋ ವರ್ತತೇ ಸ ವಿಜಾನಾತಿ ಜೀವನ್||

ನನ್ನಲ್ಲಿದ್ದ ಧನವು ವಿಪುಲವೂ ಮಹತ್ತರವೂ ಆಗಿತ್ತು. ಪ್ರಯತ್ನಪಟ್ಟರೂ ಈಗ ಅದನ್ನು ಹಿಂದೆ ಪಡೆಯಲಾಗುತ್ತಿಲ್ಲ. ಹೀಗೆ ಆತ್ಮಹಿತದಲ್ಲಿ ನಿರತನಾಗಿ ಹಾಗೆಯೇ ನಡೆದುಕೊಳ್ಳುವವನು ಬದುಕಿರುವಾಗಲೇ ತಿಳಿದವನಾಗುತ್ತಾನೆ.

01084006a ನಾನಾಭಾವಾ ಬಹವೋ ಜೀವಲೋಕೇ

                        ದೈವಾಧೀನಾ ನಷ್ಟಚೇಷ್ಟಾಧಿಕಾರಾಃ|

01084006c ತತ್ತತ್ಪ್ರಾಪ್ಯ ನ ವಿಹನ್ಯೇತ ಧೀರೋ

                        ದಿಷ್ಟಂ ಬಲೀಯ ಇತಿ ಮತ್ವಾತ್ಮಬುದ್ಧ್ಯಾ||

ಜೀವಲೋಕದಲ್ಲಿ ಬಹುಜೀವಿಗಳು ದೈವಾಧೀನರಾಗಿದ್ದು ಅಧಿಕಾರದಿಂದಿರುವರೆಂದು ನಷ್ಟವಾಗಿ ನಡೆದುಕೊಳ್ಳುತ್ತಾರೆ. ಏನನ್ನು ಪಡೆದರೂ ಧೀರನು ವಿಚಲಿತನಾಗುವುದಿಲ್ಲ. ವಿಧಿಯೇ ಬಲವಾದುದೆಂದು ಅತ್ಮಬುದ್ಧಿಯು ತಿಳಿದುಕೊಂಡಿರುತ್ತದೆ.

01084007a ಸುಖಂ ಹಿ ಜಂತುರ್ಯದಿ ವಾಪಿ ದುಃಖಂ

                        ದೈವಾಧೀನಂ ವಿಂದತಿ ನಾತ್ಮಶಕ್ತ್ಯಾ|

01084007c ತಸ್ಮಾದ್ದಿಷ್ಟಂ ಬಲವನ್ಮನ್ಯಮಾನೋ

                        ನ ಸಂಜ್ವರೇನ್ನಾಪಿ ಹೃಷ್ಯೇತ್ಕದಾ ಚಿತ್||

ಜಂತುವು ಸುಖವನ್ನು ಪಡೆಯಲಿ ಅಥವಾ ದುಃಖವನ್ನು ಪಡೆಯಲಿ. ಅದು ದೈವಾಧೀನದಿಂದಲ್ಲದೇ ಆತ್ಮಶಕ್ತಿಯಿಂದಲ್ಲವೆಂಬುದನ್ನು ತಿಳಿದಿರುತ್ತಾರೆ. ಆದುದರಿಂದ ವಿಧಿಯೇ ಬಲವಾದುದೆಂದು ತಿಳಿದು ಅವರು ಎಂದೂ ದುಃಖಿಸುವುದಿಲ್ಲ ಅಥವಾ ಹರ್ಷಿಸುವುದಿಲ್ಲ.

01084008a ದುಃಖೇ ನ ತಪ್ಯೇನ್ನ ಸುಖೇನ ಹೃಷ್ಯೇತ್

                        ಸಮೇನ ವರ್ತೇತ ಸದೈವ ಧೀರಃ|

01084008c ದಿಷ್ಟಂ ಬಲೀಯ ಇತಿ ಮನ್ಯಮಾನೋ

                        ನ ಸಂಜ್ವರೇನ್ನಾಪಿ ಹೃಷ್ಯೇತ್ಕದಾ ಚಿತ್||

ದುಃಖದಲ್ಲಿ ತಪಿಸುವುದಿಲ್ಲ; ಸುಖದಲ್ಲಿ ಹರ್ಷಿಸುವುದಿಲ್ಲ; ಧೀರನು ಸದೈವ ಸಮನಾಗಿ ವರ್ತಿಸುತ್ತಾನೆ. ವಿಧಿಯೇ ಬಲವಾದುದೆಂದು ತಿಳಿದು ಅವನು ಎಂದೂ ದುಃಖಿಸುವುದಿಲ್ಲ ಅಥವಾ ಹರ್ಷಿಸುವುದಿಲ್ಲ.

01084009a ಭಯೇ ನ ಮುಹ್ಯಾಮ್ಯಷ್ಟಕಾಹಂ ಕದಾ ಚಿತ್

                        ಸಂತಾಪೋ ಮೇ ಮಾನಸೋ ನಾಸ್ತಿ ಕಶ್ಚಿತ್|

01084009c ಧಾತಾ ಯಥಾ ಮಾಂ ವಿದಧಾತಿ ಲೋಕೇ

                        ಧ್ರುವಂ ತಥಾಹಂ ಭವಿತೇತಿ ಮತ್ವಾ||

ಅಷ್ಟಕ! ಭಯವು ಎಂದೂ ನನ್ನನ್ನು ಮೋಹಿಸುವುದಿಲ್ಲ. ಸಂತಾಪವು ಎಂದೂ ನನ್ನ ಮನಸ್ಸಿನಲ್ಲಿರುವುದಿಲ್ಲ. ಧಾತನು ನನಗೆ ಲೋಕದಲ್ಲಿ ಹೇಗೆ ವಿಧಿಸಿದ್ದಾನೋ ಅದು ಖಂಡಿತವಾಗಿ ಹಾಗೆಯೇ ಆಗುತ್ತದೆ ಎಂದು ತಿಳಿದುಕೊಂಡಿದ್ದೇನೆ.

01084010a ಸಂಸ್ವೇದಜಾ ಅಂಡಜಾ ಉದ್ಭಿದಾಶ್ಚ

         ಸರೀಸೃಪಾಃ ಕೃಮಯೋಽಥಾಪ್ಸು ಮತ್ಸ್ಯಾಃ|

01084010c ತಥಾಶ್ಮಾನಸ್ತೃಣಕಾಷ್ಠಂ ಚ ಸರ್ವಂ

         ದಿಷ್ಟಕ್ಷಯೇ ಸ್ವಾಂ ಪ್ರಕೃತಿಂ ಭಜಂತೇ||

ಬೆವರಿನಿಂದ ಹುಟ್ಟಿದವು, ಅಂಡದಲ್ಲಿ ಹುಟ್ಟಿದವು, ಸರೀಸೃಪಗಳು, ಕ್ರಿಮಿಗಳು, ನೀರಿನಲ್ಲಿರುವ ಮೀನುಗಳು, ಕಲ್ಲು, ತೃಣ-ಕಾಷ್ಠಗಳೆಲ್ಲವೂ ನೋಡುತ್ತಿರುವಂತೆಯೇ ಕ್ಷಯಹೊಂದಿ ತಮ್ಮ ತಮ್ಮ ಪ್ರಕೃತಿಗಳನ್ನು ಸೇರುತ್ತವೆ.

01084011a ಅನಿತ್ಯತಾಂ ಸುಖದುಃಖಸ್ಯ ಬುದ್ಧ್ವಾ

         ಕಸ್ಮಾತ್ಸಂತಾಪಮಷ್ಟಕಾಹಂ ಭಜೇಯಂ|

01084011c ಕಿಂ ಕುರ್ಯಾಂ ವೈ ಕಿಂ ಚ ಕೃತ್ವಾ ನ ತಪ್ಯೇ

         ತಸ್ಮಾತ್ಸಂತಾಪಂ ವರ್ಜಯಾಮ್ಯಪ್ರಮತ್ತಃ||

ಸುಖದುಃಖಗಳು ಅನಿತ್ಯವೆಂದು ತಿಳಿದುಕೊಂಡಿದ್ದೇನೆ. ಆದುದರಿಂದ ಅಷ್ಟಕ! ಅವುಗಳು ನನ್ನಲ್ಲಿ ಹೇಗೆ ಸಂತಾಪವನ್ನುಂಟುಮಾಡುತ್ತವೆ? ಏನು ಮಾಡಬೇಕು, ಏನನ್ನು ಮಾಡಬಾರದು ಇವು ನನ್ನನ್ನು ಕಾಡುವುದಿಲ್ಲ. ಹೀಗೆ ಅಪ್ರಮತ್ತನಾಗಿದ್ದುಕೊಂಡು ಸಂತಾಪವನ್ನು ವರ್ಜಿಸಿದ್ದೇನೆ.”

01084012 ಅಷ್ಟಕ ಉವಾಚ|

01084012a ಯೇ ಯೇ ಲೋಕಾಃ ಪಾರ್ಥಿವೇಂದ್ರ ಪ್ರಧಾನಾಃ

         ತ್ವಯಾ ಭುಕ್ತಾ ಯಂ ಚ ಕಾಲಂ ಯಥಾ ಚ|

01084012c ತನ್ಮೇ ರಾಜನ್ಬ್ರೂಹಿ ಸರ್ವಂ ಯಥಾವತ್

         ಕ್ಷೇತ್ರಜ್ಞವದ್ಭಾಷಸೇ ತ್ವಂ ಹಿ ಧರ್ಮಾನ್||

ಅಷ್ಟಕನು ಹೇಳಿದನು: “ಪಾರ್ಥಿವೇಂದ್ರ! ನೀನು ಭೋಗಿಸಿದ ಯಾವ ಯಾವ ಪ್ರಧಾನ ಲೋಕಗಳಿವೆಯೋ ಅವುಗಳ ಕಾಲ ರೀತಿಗಳಿಗನುಗುಣವಾಗಿ ಎಲ್ಲವನ್ನೂ ಇದ್ದಹಾಗೆ ನಮಗೆ ಹೇಳು. ಏಕೆಂದರೆ ನೀನು ಧರ್ಮಗಳ ಕುರಿತು ಕ್ಷೇತ್ರವನ್ನು ಚೆನ್ನಾಗಿ ತಿಳಿದುಕೊಂಡವನಂತೆ ಮಾತನಾಡುತ್ತಿರುವೆ.”

01084013 ಯಯಾತಿರುವಾಚ|

01084013a ರಾಜಾಹಮಾಸಮಿಹ ಸಾರ್ವಭೌಮಃ

         ತತೋ ಲೋಕಾನ್ಮಹತೋ ಅಜಯಂ ವೈ|

01084013c ತತ್ರಾವಸಂ ವರ್ಷಸಹಸ್ರಮಾತ್ರಂ

         ತತೋ ಲೋಕಂ ಪರಮಸ್ಮ್ಯಭ್ಯುಪೇತಃ||

ಯಯಾತಿಯು ಹೇಳಿದನು: “ನಾನು ಇಲ್ಲಿ ಸಾರ್ವಭೌಮ ರಾಜನಾಗಿದ್ದೆ. ಅನಂತರ ಮಹತ್ತರವಾದ ಅಜಯ ಲೋಕಗಳನ್ನು ಪಡೆದೆ. ಅವುಗಳಲ್ಲಿ ನಾನು ಒಂದೊಂದು ಸಾವಿರ ವರ್ಷಗಳು ನೆಲೆಸಿದನು. ಅನಂತರ ಅವುಗಳಿಗಿಂತಲೂ ಮೇಲಿನ ಲೋಕಗಳನ್ನು ಪಡೆದೆ.

01084014a ತತಃ ಪುರೀಂ ಪುರುಹೂತಸ್ಯ ರಮ್ಯಾಂ

         ಸಹಸ್ರದ್ವಾರಾಂ ಶತಯೋಜನಾಯತಾಂ|

01084014c ಅಧ್ಯಾವಸಂ ವರ್ಷಸಹಸ್ರಮಾತ್ರಂ

         ತತೋ ಲೋಕಂ ಪರಮಸ್ಮ್ಯಭ್ಯುಪೇತಃ||

ಅನಂತರ ಸಹಸ್ರ ದ್ವಾರಗಳಿರುವ, ನೂರು ಯೋಜನ ವಿಸ್ತೀರ್ಣದ ಪುರುಹೂತನ ರಮ್ಯ ಪುರಿಯಲ್ಲಿ ಒಂದು ಸಾವಿರ ವರ್ಷಗಳು ವಾಸಿಸಿದೆ. ಅನಂತರ ಅದಕ್ಕೂ ಉನ್ನತ ಲೋಕಕ್ಕೆ ಹೋದೆ.

01084015a ತತೋ ದಿವ್ಯಮಜರಂ ಪ್ರಾಪ್ಯ ಲೋಕಂ

         ಪ್ರಜಾಪತೇರ್ಲೋಕಪತೇರ್ದುರಾಪಂ|

01084015c ತತ್ರಾವಸಂ ವರ್ಷಸಹಸ್ರಮಾತ್ರಂ

         ತತೋ ಲೋಕಂ ಪರಮಸ್ಮ್ಯಭ್ಯುಪೇತಃ||

ಕೆಲವರೇ ಪಡೆಯಬಲ್ಲ, ದಿವ್ಯ ಅಜರ ಪ್ರಜಾಪತಿಯ ಲೋಕವನ್ನು ಪಡೆದೆ. ಅಲ್ಲಿ ಒಂದು ಸಾವಿರ ವರ್ಷವಿದ್ದು ನಂತರ ಅದಕ್ಕೂ ಮೇಲಿನ ಲೋಕಕ್ಕೆ ಹೋದೆ.

01084016a ದೇವಸ್ಯ ದೇವಸ್ಯ ನಿವೇಶನೇ ಚ

         ವಿಜಿತ್ಯ ಲೋಕಾನವಸಂ ಯಥೇಷ್ಟಂ|

01084016c ಸಂಪೂಜ್ಯಮಾನಸ್ತ್ರಿದಶೈಃ ಸಮಸ್ತೈಃ

         ತುಲ್ಯಪ್ರಭಾವದ್ಯುತಿರೀಶ್ವರಾಣಾಂ||

ಆ ಲೋಕಗಳನ್ನು ಗೆದ್ದು ದೇವ ದೇವನ ನಿವೇಶನದಲ್ಲಿ ಯಥೇಷ್ಟವಾಗಿ ವಾಸಿಸಿದೆ. ಸಮಸ್ತ ತ್ರಿದಶರಿಂದ ಸಂಪೂಜಿತನಾಗಿ, ಆ ಈಶ್ವರರ ಪ್ರಭಾವ-ದ್ಯುತಿಗಳಲ್ಲಿ ಆ ಈಶ್ವರರ ಸಮನಾಗಿದ್ದೆ.

01084017a ತಥಾವಸಂ ನಂದನೇ ಕಾಮರೂಪೀ

         ಸಂವತ್ಸರಾಣಾಮಯುತಂ ಶತಾನಾಂ|

01084017c ಸಹಾಪ್ಸರೋಭಿರ್ವಿಹರನ್ಪುಣ್ಯಗಂಧಾನ್

         ಪಶ್ಯನ್ನಗಾನ್ಪುಷ್ಪಿತಾಂಶ್ಚಾರುರೂಪಾನ್||

ಹಾಗೆಯೇ ನಂದನದಲ್ಲಿ, ಬೇಕಾದ ರೂಪಗಳನ್ನು ತಳೆದು, ನೂರಾರು ಸಾವಿರಾರು ವರ್ಷಗಳು ಅಪ್ಸರೆಯರೊಡನೆ ಪುಣ್ಯ ಗಂಧಗಳನ್ನು ಸೇವಿಸುತ್ತಾ, ಅನುರೂಪ ಪುಷ್ಟಿಗಳನ್ನು ನೋಡುತ್ತಾ ಕಳೆದೆನು.

01084018a ತತ್ರಸ್ಥಂ ಮಾಂ ದೇವಸುಖೇಷು ಸಕ್ತಂ

         ಕಾಲೇಽತೀತೇ ಮಹತಿ ತತೋಽತಿಮಾತ್ರಂ|

01084018c ದೂತೋ ದೇವಾನಾಮಬ್ರವೀದುಗ್ರರೂಪೋ

         ಧ್ವಂಸೇತ್ಯುಚ್ಚೈಸ್ತ್ರಿಃ ಪ್ಲುತೇನ ಸ್ವರೇಣ||

ಹೀಗೆ ದೇವಸುಖದಲ್ಲಿ ನಾನು ಸಕ್ತನಾಗಿರಲು ಮಹಾ ಕಾಲವು ಅತಿಮಾತ್ರದಲ್ಲಿ ಉರುಳಿತು. ಆಗ ಉಗ್ರರೂಪೀ ದೇವದೂತನು “ಬೀಳು” ಎಂದೂ ಮೂರುಬಾರಿ ದೀರ್ಘಸ್ವರದಲ್ಲಿ ಹೇಳಲು ಇವೆಲ್ಲವೂ ಧ್ವಂಸವಾದವು.

01084019a ಏತಾವನ್ಮೇ ವಿದಿತಂ ರಾಜಸಿಂಹ

         ತತೋ ಭ್ರಷ್ಟೋಽಹಂ ನಂದನಾತ್ಕ್ಷೀಣಪುಣ್ಯಃ|

01084019c ವಾಚೋಽಶ್ರೌಷಂ ಚಾಂತರಿಕ್ಷೇ ಸುರಾಣಾಂ

         ಅನುಕ್ರೋಶಾಚ್ಶೋಚತಾಂ ಮಾನವೇಂದ್ರ||

ರಾಜಸಿಂಹ! ಇದಿಷ್ಟೇ ನನಗೆ ತಿಳಿದಿದೆ. ಆಗ ಕ್ಷೀಣಪುಣ್ಯನಾಗಿ ನಂದನದಿಂದ ಭ್ರಷ್ಟನಾಗಿ ಬಿದ್ದೆ. ಮಾನವೇಂದ್ರ! ಅಂತರಿಕ್ಷದಲ್ಲಿ ಸುರರು ಬೀಳುತ್ತಿರುವ ನನ್ನನ್ನು ನೋಡಿ ಅನುಕ್ರೋಶರಾಗಿ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದೆ.

01084020a ಅಹೋ ಕಷ್ಟಂ ಕ್ಷೀಣಪುಣ್ಯೋ ಯಯಾತಿಃ

         ಪತತ್ಯಸೌ ಪುಣ್ಯಕೃತ್ಪುಣ್ಯಕೀರ್ತಿಃ|

01084020c ತಾನಬ್ರುವಂ ಪತಮಾನಸ್ತತೋಽಹಂ

         ಸತಾಂ ಮಧ್ಯೇ ನಿಪತೇಯಂ ಕಥಂ ನು||

“ಅಯ್ಯೋ ಕಷ್ಟವೇ! ಕ್ಷೀಣಪುಣ್ಯನಾಗಿ ಈ ಪುಣ್ಯಕರ್ಮಿ, ಪುಣ್ಯಕೀರ್ತಿ ಯಯಾತಿಯು ಬೀಳುತ್ತಿದ್ದಾನಲ್ಲ!” ಬೀಳುತ್ತಿರುವ ನಾನು ಕೇಳಿಕೊಂಡೆ - “ಹೇಗಾದರೂ ಸತ್ಯವಂತರ ಮಧ್ಯೆ ಬೀಳುವಂತಾಗಲಿ!”

01084021a ತೈರಾಖ್ಯಾತಾ ಭವತಾಂ ಯಜ್ಞಭೂಮಿಃ

         ಸಮೀಕ್ಷ್ಯ ಚೈನಾಂ ತ್ವರಿತಮುಪಾಗತೋಽಸ್ಮಿ|

01084021c ಹವಿರ್ಗಂಧಂ ದೇಶಿಕಂ ಯಜ್ಞಭೂಮೇಃ

         ಧೂಮಾಪಾಂಗಂ ಪ್ರತಿಗೃಹ್ಯ ಪ್ರತೀತಃ||

ಅವರು ನಿಮ್ಮ ಯಜ್ಞಭೂಮಿಯನ್ನು ತೋರಿಸಿದರು. ಅದನ್ನು ನೋಡಿ ತ್ವರಿತವಾಗಿ ಇಲ್ಲಿಗೆ ಬಂದೆ. ಯಜ್ಞಭೂಮಿಯ ಹವಿಸ್ಸಿನ ಗಂಧವನ್ನು ಮೂಸಿದೆ. ಹೊಗೆಯ ದಾರಿಯನ್ನೇ ಹಿಡಿದು ಬಂದೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಚತುರಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತನಾಲ್ಕನೆಯ ಅಧ್ಯಾಯವು.

Comments are closed.