Adi Parva: Chapter 79

ಆದಿ ಪರ್ವ: ಸಂಭವ ಪರ್ವ

೭೯

ಯಯಾತಿಯು ತನ್ನ ಮುಪ್ಪನ್ನು ಕೊಟ್ಟು ಮಕ್ಕಳ ಯೌವನವನ್ನು ಪಡೆಯಲು ಪ್ರಯತ್ನಿಸಲು, ಪೂರುವು ಅದಕ್ಕೆ ಒಪ್ಪಿಕೊಂಡಿದುದು (೧-೩೦).

01079001 ವೈಶಂಪಾಯನ ಉವಾಚ|

01079001a ಜರಾಂ ಪ್ರಾಪ್ಯ ಯಯಾತಿಸ್ತು ಸ್ವಪುರಂ ಪ್ರಾಪ್ಯ ಚೈವ ಹ|

01079001c ಪುತ್ರಂ ಜ್ಯೇಷ್ಠಂ ವರಿಷ್ಠಂ ಚ ಯದುಮಿತ್ಯಬ್ರವೀದ್ವಚಃ||

ವೈಶಂಪಾಯನನು ಹೇಳಿದನು: “ವೃದ್ಧಾಪ್ಯವನ್ನು ಪಡೆದ ಯಯಾತಿಯು ತನ್ನ ನಗರವನ್ನು ಸೇರಿ ಜ್ರೇಷ್ಠನೂ ವರಿಷ್ಠನೂ ಆದ ಯದುವನ್ನು ಕರೆದು ಹೇಳಿದನು:

01079002a ಜರಾ ವಲೀ ಚ ಮಾಂ ತಾತ ಪಲಿತಾನಿ ಚ ಪರ್ಯಗುಃ|

01079002c ಕಾವ್ಯಸ್ಯೋಶನಸಃ ಶಾಪಾನ್ನ ಚ ತೃಪ್ತೋಽಸ್ಮಿ ಯೌವನೇ||

“ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ - ಕೂದಲು ನೆರೆತಿದೆ ಮತ್ತು ಚರ್ಮವು ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ.

01079003a ತ್ವಂ ಯದೋ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ|

01079003c ಯೌವನೇನ ತ್ವದೀಯೇನ ಚರೇಯಂ ವಿಷಯಾನಹಂ||

ಯದು! ನೀನು ನನ್ನ ಪಾಪದ ಜೊತೆ ಈ ವೃದ್ಧಾಪ್ಯವನ್ನು ಸ್ವೀಕರಿಸು. ನಿನ್ನ ಈ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079004a ಪೂರ್ಣೇ ವರ್ಷಸಹಸ್ರೇ ತು ಪುನಸ್ತೇ ಯೌವನಂ ತ್ವಹಂ|

01079004c ದತ್ತ್ವಾ ಸ್ವಂ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ||

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”

01079005 ಯದುರುವಾಚ|

01079005a ಸಿತಶ್ಮಶ್ರುಶಿರಾ ದೀನೋ ಜರಯಾ ಶಿಥಿಲೀಕೃತಃ|

01079005c ವಲೀಸಂತತಗಾತ್ರಶ್ಚ ದುರ್ದರ್ಶೋ ದುರ್ಬಲಃ ಕೃಶಃ||

01079006a ಅಶಕ್ತಃ ಕಾರ್ಯಕರಣೇ ಪರಿಭೂತಃ ಸ ಯೌವನೈಃ|

01079006c ಸಹೋಪಜೀವಿಭಿಶ್ಚೈವ ತಾಂ ಜರಾಂ ನಾಭಿಕಾಮಯೇ||

ಯದುವು ಹೇಳಿದನು: “ಗಡ್ಡ-ತಲೆಕೂದಲುಗಳು ಬಿಳಿಯಾಗಿ, ದೀನನಾಗಿ, ವೃದ್ಧಾಪ್ಯದಿಂದ ಶಿಥಿಲೀಕೃತನಾಗಿ, ದೇಹವು ನೆರೆಹಿಡಿದು, ದುರ್ದರ್ಶ, ದುರ್ಬಲ ಮತ್ತು ಕೃಶನಾಗಿ, ಯಾವ ಕೆಲಸವನ್ನು ಮಾಡಲೂ ಅಶಕ್ತನಾದವನನ್ನು ಯುವಕರು ಮತ್ತು ಸಹೋಪಜೀವಿಗಳು ಯಾರೂ ಗೌರವಿಸುವುದಿಲ್ಲ. ಅಂಥಹ ವೃದ್ಧಾಪ್ಯವನ್ನು ನಾನು ಬಯಸುವುದಿಲ್ಲ.”

01079007 ಯಯಾತಿರುವಾಚ|

01079007a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ|

01079007c ತಸ್ಮಾದರಾಜ್ಯಭಾಕ್ತಾತ ಪ್ರಜಾ ತೇ ವೈ ಭವಿಷ್ಯತಿ||

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ಮಗನೇ! ನಿನ್ನ ಸಂತತಿಯು ರಾಜ್ಯವಿಹೀನವಾಗುತ್ತದೆ.

01079008a ತುರ್ವಸೋ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ|

01079008c ಯೌವನೇನ ಚರೇಯಂ ವೈ ವಿಷಯಾಂಸ್ತವ ಪುತ್ರಕ||

ತುರ್ವಸು! ಈ ವೃದ್ಧಾಪ್ಯದ ಜೊತೆ ನನ್ನ ಪಾಪವನ್ನೂ ಸ್ವೀಕರಿಸು. ನಿನ್ನ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079009a ಪೂರ್ಣೇ ವರ್ಷಸಹಸ್ರೇ ತು ಪುನರ್ದಾಸ್ಯಾಮಿ ಯೌವನಂ|

01079009c ಸ್ವಂ ಚೈವ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ||

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”

01079010 ತುರ್ವಸುರುವಾಚ|

01079010a ನ ಕಾಮಯೇ ಜರಾಂ ತಾತ ಕಾಮಭೋಗಪ್ರಣಾಶಿನೀಂ|

01079010c ಬಲರೂಪಾಂತಕರಣೀಂ ಬುದ್ಧಿಪ್ರಾಣವಿನಾಶಿನೀಂ||

ತುರ್ವಸುವು ಹೇಳಿದನು: “ಕಾಮಭೋಗಗಳನ್ನು ನಾಶಪಡಿಸುವ, ಬಲ ಮತ್ತು ರೂಪವನ್ನು ಅಂತ್ಯಗೊಳಿಸುವ, ಬುದ್ಧಿ-ಪ್ರಾಣಗಳನ್ನು ವಿನಾಶಮಾಡುವ ವೃದ್ಧಾಪ್ಯವು ನನಗೆ ಬೇಡ ತಂದೇ!”

01079011 ಯಯಾತಿರುವಾಚ|

01079011a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ|

01079011c ತಸ್ಮಾತ್ಪ್ರಜಾ ಸಮುಚ್ಛೇದಂ ತುರ್ವಸೋ ತವ ಯಾಸ್ಯತಿ||

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ತುರ್ವಸು, ನಿನ್ನ ಸಂತಾನವು ಕ್ಷೀಣವಾಗುತ್ತದೆ.

01079012a ಸಂಕೀರ್ಣಾಚಾರಧರ್ಮೇಷು ಪ್ರತಿಲೋಮಚರೇಷು ಚ|

01079012c ಪಿಶಿತಾಶಿಷು ಚಾಂತ್ಯೇಷು ಮೂಢ ರಾಜಾ ಭವಿಷ್ಯಸಿ||

ನೀನು ಸಂಕೀರ್ಣ ಆಚಾರಧರ್ಮಗಳನ್ನುಳ್ಳ, ಶಿಷ್ಟಾಚಾರಗಳನ್ನು ಬಿಟ್ಟ, ಮಾಂಸವನ್ನೇ ತಿನ್ನುವ ಕೀಳು ಜನಾಂಗದ ರಾಜನಾಗುತ್ತೀಯೆ.

01079013a ಗುರುದಾರಪ್ರಸಕ್ತೇಷು ತಿರ್ಯಗ್ಯೋನಿಗತೇಷು ಚ|

01079013c ಪಶುಧರ್ಮಿಷು ಪಾಪೇಷು ಮ್ಲೇಚ್ಛೇಷು ಪ್ರಭವಿಷ್ಯಸಿ||

ನೀನು ಆಳುವ ಮ್ಲೇಚ್ಛರು ಗುರುಪತ್ನಿಯರಲ್ಲಿ ಆಸಕ್ತರಾಗಿರುತ್ತಾರೆ, ಅತ್ಯಂತ ಕೀಳು ಯೋನಿಗಳೊಡನೆ ಸಂಭೋಗಿಸುತ್ತಾರೆ, ಪಶುಧರ್ಮಿಗಳಾಗಿದ್ದು ಪಾಪಕೃತ್ಯಗಳಲ್ಲಿ ತೊಡಗಿರುತ್ತಾರೆ.””

01079014 ವೈಶಂಪಾಯನ ಉವಾಚ|

01079014a ಏವಂ ಸ ತುರ್ವಸುಂ ಶಪ್ತ್ವಾ ಯಯಾತಿಃ ಸುತಮಾತ್ಮನಃ|

01079014c ಶರ್ಮಿಷ್ಠಾಯಾಃ ಸುತಂ ದುಹ್ಯುಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ತನ್ನದೇ ಮಗ ತುರ್ವಸುವಿಗೆ ಯಯಾತಿಯು ಈ ರೀತಿ ಶಪಿಸಿ, ಶರ್ಮಿಷ್ಠೆಯ ಮಗ ದ್ರುಹ್ಯುವನ್ನು ಕರೆದು ಹೇಳಿದನು:

01079015a ದ್ರುಹ್ಯೋ ತ್ವಂ ಪ್ರತಿಪದ್ಯಸ್ವ ವರ್ಣರೂಪವಿನಾಶಿನೀಂ|

01079015c ಜರಾಂ ವರ್ಷಸಹಸ್ರಂ ಮೇ ಯೌವನಂ ಸ್ವಂ ದದಸ್ವ ಚ||

“ದ್ರುಹ್ಯು! ಬಣ್ಣ ಮತ್ತು ರೂಪಗಳನ್ನು ನಾಶಪಡಿಸುವ ನನ್ನ ಈ ವೃದ್ಧಾಪ್ಯವನ್ನು ಒಂದು ಸಾವಿರ ವರ್ಷಗಳವರೆಗೆ ತೆಗೆದುಕೊಂಡು, ನನಗೆ ನಿನ್ನ ಯೌವನವನ್ನು ಕೊಡು.

01079016a ಪೂರ್ಣೇ ವರ್ಷಸಹಸ್ರೇ ತು ಪ್ರತಿದಾಸ್ಯಾಮಿ ಯೌವನಂ|

01079016c ಸ್ವಂ ಚಾದಾಸ್ಯಾಮಿ ಭೂಯೋಽಹಂ ಪಾಪ್ಮಾನಂ ಜರಯಾ ಸಹ||

ಒಂದು ಸಾವಿರ ವರ್ಷಗಳು ತುಂಬಿದ ನಂತರ ಯೌವನವನ್ನು ಹಿಂದಿರುಗಿಸುತ್ತೇನೆ, ಮತ್ತು ನನ್ನ ಈ ಪಾಪದ ಜೊತೆಗೆ ವೃದ್ಧಾಪ್ಯವನ್ನೂ ಹಿಂದೆ ತೆಗೆದುಕೊಳ್ಳುತ್ತೇನೆ.”

01079017 ದ್ರುಹ್ಯುರುವಾಚ|

01079017a ನ ಗಜಂ ನ ರಥಂ ನಾಶ್ವಂ ಜೀರ್ಣೋ ಭುಂಕ್ತೇ ನ ಚ ಸ್ತ್ರಿಯಂ|

01079017c ವಾಗ್ಭಂಗಶ್ಚಾಸ್ಯ ಭವತಿ ತಜ್ಜರಾಂ ನಾಭಿಕಾಮಯೇ||

ದ್ರುಹ್ಯುವು ಹೇಳಿದನು: “ವೃದ್ಧನು ಗಜ, ರಥ, ಅಶ್ವ, ಆಹಾರ, ಮತ್ತು ಸ್ತ್ರೀಯರನ್ನು ಅನುಭವಿಸಲು ಶಕ್ಯನಾಗಿರುವುದಿಲ್ಲ ಮತ್ತು ಸರಿಯಾಗಿ ಮಾತನಾಡಲೂ ಆಗುವುದಿಲ್ಲ. ಅಂಥಹ ವೃದ್ಧಾಪ್ಯವು ನನಗೆ ಬೇಡ.”

01079018 ಯಯಾತಿರುವಾಚ|

01079018a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ|

01079018c ತಸ್ಮಾದ್ದ್ರುಹ್ಯೋ ಪ್ರಿಯಃ ಕಾಮೋ ನ ತೇ ಸಂಪತ್ಸ್ಯತೇ ಕ್ವ ಚಿತ್||

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನಿನ್ನ ಪ್ರಿಯ ಆಸೆಯು ಎಂದೂ ಪೂರೈಸಲ್ಪಡುವುದಿಲ್ಲ.

01079019a ಉಡುಪಪ್ಲವಸಂತಾರೋ ಯತ್ರ ನಿತ್ಯಂ ಭವಿಷ್ಯತಿ|

01079019c ಅರಾಜಾ ಭೋಜಶಬ್ಧಂ ತ್ವಂ ತತ್ರಾವಾಪ್ಸ್ಯಸಿ ಸಾನ್ವಯಃ||

ಎಲ್ಲಿ ದೋಣಿ-ತೆಪ್ಪಗಳನ್ನು ಮಾತ್ರ ಬಳಸಿ ತಿರುಗಾಡಬಹುದೋ ಅಂತಹ ಸ್ಥಳದಲ್ಲಿ ವಾಸಿಸಿ, ಭೋಜನಾಗಿ ರಾಜನೆಂದು ಕರೆಯಿಸಿ ಕೊಳ್ಳುವುದಿಲ್ಲ.

01079020a ಅನೋ ತ್ವಂ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ|

01079020c ಏಕಂ ವರ್ಷಸಹಸ್ರಂ ತು ಚರೇಯಂ ಯೌವನೇನ ತೇ||

ಅನು! ನೀನು ನನ್ನ ಪಾಪದ ಜೊತೆಗೆ ಈ ವೃದ್ಧಾಪ್ಯವನ್ನೂ ಸ್ವೀಕರಿಸು. ಒಂದು ಸಾವಿರವರ್ಷಗಳ ಪರ್ಯಂತ ನಾನು ನಿನ್ನ ಯೌವನವನ್ನು ಜೀವಿಸುತ್ತೇನೆ.”

01079021 ಅನುರುವಾಚ|

01079021a ಜೀರ್ಣಃ ಶಿಶುವದಾದತ್ತೇಽಕಾಲೇಽನ್ನಮಶುಚಿರ್ಯಥಾ|

01079021c ನ ಜುಹೋತಿ ಚ ಕಾಲೇಽಗ್ನಿಂ ತಾಂ ಜರಾಂ ನಾಭಿಕಾಮಯೇ||

ಅನುವು ಹೇಳಿದನು: “ವೃದ್ಧನು ಒಂದು ಮಗುವಿನಂತೆ ದಿನದ ಯಾವ ಸಮಯದಲ್ಲಿಯೂ ಜೊಲ್ಲುಸುರಿಸುತ್ತಾ, ಸ್ವಚ್ಛವಾಗಿರದೇ ತಿನ್ನುತ್ತಾನೆ. ಮತ್ತು ಅವನು ಎಂದೂ ಸಕಾಲದಲ್ಲಿ ಅಗ್ನಿಕಾರ್ಯವನ್ನು ಮಾಡಲಾರ. ಅಂತಹ ವೃದ್ಧಾಪ್ಯವು ನನಗೆ ಬೇಡ.”

01079022 ಯಯಾತಿರುವಾಚ|

01079022a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ|

01079022c ಜರಾದೋಷಸ್ತ್ವಯೋಕ್ತೋಽಯಂ ತಸ್ಮಾತ್ತ್ವಂ ಪ್ರತಿಪತ್ಸ್ಯಸೇ||

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನೀನು ಹೇಳಿದ ವೃದ್ಧಾಪ್ಯದ ದೋಷಗಳನ್ನು ನೀನೇ ಪಡೆಯುತ್ತೀಯೆ.

01079023a ಪ್ರಜಾಶ್ಚ ಯೌವನಪ್ರಾಪ್ತಾ ವಿನಶಿಷ್ಯಂತ್ಯನೋ ತವ|

01079023c ಅಗ್ನಿಪ್ರಸ್ಕಂದನಪರಸ್ತ್ವಂ ಚಾಪ್ಯೇವಂ ಭವಿಷ್ಯಸಿ||

ನಿನ್ನ ಜೊತೆ ನಿನ್ನ ಸಂತಾನವೂ ಯೌವನ ಪ್ರಾಪ್ತಿಯಾಗುತ್ತಿದ್ದಂತೇ ವಿನಾಶವನ್ನು ಹೊಂದುತ್ತದೆ. ನೀನೇ ಅಗ್ನಿಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡದವನಾಗುತ್ತೀಯೆ.

01079024a ಪೂರೋ ತ್ವಂ ಮೇ ಪ್ರಿಯಃ ಪುತ್ರಸ್ತ್ವಂ ವರೀಯಾನ್ಭವಿಷ್ಯಸಿ|

01079024c ಜರಾ ವಲೀ ಚ ಮೇ ತಾತ ಪಲಿತಾನಿ ಚ ಪರ್ಯಗುಃ|

01079024e ಕಾವ್ಯಸ್ಯೋಶನಸಃ ಶಾಪಾನ್ನ ಚ ತೃಪ್ತೋಽಸ್ಮಿ ಯೌವನೇ||

ಪೂರು! ನೀನು ನನ್ನ ಪ್ರೀತಿಯ ಮಗ. ನೀನು ಶ್ರೇಷ್ಠ. ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ. ಕೂದಲು ನೆರೆತಿದೆ ಮತ್ತು ಚರ್ಮವು ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ.

01079025a ಪೂರೋ ತ್ವಂ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ|

01079025c ಕಂ ಚಿತ್ಕಾಲಂ ಚರೇಯಂ ವೈ ವಿಷಯಾನ್ವಯಸಾ ತವ||

ಪೂರು! ನನ್ನ ಈ ಪಾಪದ ಜೊತೆ ವೃದ್ಧಾಪ್ಯವನ್ನೂ ಸ್ವೀಕರಿಸು. ನಿನ್ನ ಯೌವನವನ್ನು ಪಡೆದು ಕೆಲವು ಕಾಲ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079026a ಪೂರ್ಣೇ ವರ್ಷಸಹಸ್ರೇ ತು ಪ್ರತಿದಾಸ್ಯಾಮಿ ಯೌವನಂ|

01079026c ಸ್ವಂ ಚೈವ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ||

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ ಮತ್ತು ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.””

01079027 ವೈಶಂಪಾಯನ ಉವಾಚ|

01079027a ಏವಮುಕ್ತಃ ಪ್ರತ್ಯುವಾಚ ಪೂರುಃ ಪಿತರಮಂಜಸಾ|

01079027c ಯಥಾತ್ಥ ಮಾಂ ಮಹಾರಾಜ ತತ್ಕರಿಷ್ಯಾಮಿ ತೇ ವಚಃ||

ವೈಶಂಪಾಯನನು ಹೇಳಿದನು: “ತಂದೆಯ ಈ ಮಾತುಗಳಿಗೆ ತಕ್ಷಣವೇ ಪೂರುವು ಉತ್ತರಿಸಿದನು: “ಮಹಾರಾಜ! ನೀನು ಹೇಳಿದಂತೆಯೇ ಮಾಡುತ್ತೇನೆ.

01079028a ಪ್ರತಿಪತ್ಸ್ಯಾಮಿ ತೇ ರಾಜನ್ಪಾಪ್ಮಾನಂ ಜರಯಾ ಸಹ|

01079028c ಗೃಹಾಣ ಯೌವನಂ ಮತ್ತಶ್ಚರ ಕಾಮಾನ್ಯಥೇಪ್ಸಿತಾನ್||

ರಾಜನ್! ವೃದ್ಧಾಪ್ಯದ ಜೊತೆ ನಿನ್ನ ಪಾಪವನ್ನೂ ಸ್ವೀಕರಿಸುತ್ತೇನೆ. ನನ್ನ ಈ ಯೌವನವನ್ನು ಪಡೆದು ಯಥೇಚ್ಛವಾಗಿ ನಿನ್ನ ಆಸೆಗಳನ್ನು ಪೂರೈಸಿಕೋ.

01079029a ಜರಯಾಹಂ ಪ್ರತಿಚ್ಛನ್ನೋ ವಯೋರೂಪಧರಸ್ತವ|

01079029c ಯೌವನಂ ಭವತೇ ದತ್ತ್ವಾ ಚರಿಷ್ಯಾಮಿ ಯಥಾತ್ಥ ಮಾಂ||

ನಿನ್ನ ವಯೋರೂಪವನ್ನು ತಾಳಿ ವೃದ್ಧಾಪ್ಯವನ್ನು ಹೊದ್ದುಕೊಳ್ಳುತ್ತೇನೆ. ನನ್ನ ಯೌವನವನ್ನು ನಿನಗಿತ್ತು ನೀನು ಹೇಳಿದಹಾಗೆ ಜೀವಿಸುತ್ತೇನೆ.”

01079030 ಯಯಾತಿರುವಾಚ|

01079030a ಪೂರೋ ಪ್ರೀತೋಽಸ್ಮಿ ತೇ ವತ್ಸ ಪ್ರೀತಶ್ಚೇದಂ ದದಾಮಿ ತೇ|

01079030c ಸರ್ವಕಾಮಸಮೃದ್ಧಾ ತೇ ಪ್ರಜಾ ರಾಜ್ಯೇ ಭವಿಷ್ಯತಿ||

ಯಯಾತಿಯು ಹೇಳಿದನು: “ಪೂರು! ನನ್ನ ಮಗನೇ! ನಿನ್ನಿಂದ ನಾನು ಬಹಳ ಪ್ರೀತನಾಗಿದ್ದೇನೆ. ಪ್ರೀತಿಯಿಂದ ನಿನಗೆ ಇದನ್ನು ಕೊಡುತ್ತಿದ್ದೇನೆ. ನಿನ್ನ ಸಂತತಿಯು ಸರ್ವಕಾಮಗಳಲ್ಲಿ ಸಮೃದ್ಧರಾಗಿ ರಾಜ್ಯವನ್ನಾಳುತ್ತಾರೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕೋನಾಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೊಂಭತ್ತನೆಯ ಅಧ್ಯಾಯವು.

Comments are closed.