Adi Parva: Chapter 78

ಆದಿ ಪರ್ವ: ಸಂಭವ ಪರ್ವ

೭೮

ದೇವಯಾನಿಯು ಅವಳ ಮಕ್ಕಳ ತಂದೆಯ ಕುರಿತು ಪ್ರಶ್ನಿಸಲು ಶರ್ಮಿಷ್ಠೆಯು ಸುಳ್ಳುಹೇಳುವುದು (೧-೧೦). ದೇವಯಾನಿಯು ಸತ್ಯವನ್ನು ತಿಳಿದು ಶರ್ಮಿಷ್ಠೆಯನ್ನು ನಿಂದಿಸುವುದು (೧೧-೨೦). ಯಯಾತಿಗೆ ಶುಕ್ರನಿಂದ ಶಾಪ ಮತ್ತು ಅದಕ್ಕೆ ಪರಿಹಾರದ ಸೂಚನೆ (೨೧-೪೦).

Image result for mahabharata01078001 ವೈಶಂಪಾಯನ ಉವಾಚ|

01078001a ಶ್ರುತ್ವಾ ಕುಮಾರಂ ಜಾತಂ ತು ದೇವಯಾನೀ ಶುಚಿಸ್ಮಿತಾ|

01078001c ಚಿಂತಯಾಮಾಸ ದುಃಖಾರ್ತಾ ಶರ್ಮಿಷ್ಠಾಂ ಪ್ರತಿ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಕುಮಾರನ ಜನನದ ಕುರಿತು ಕೇಳಿದ ಶುಚಿಸ್ಮಿತೆ ದೇವಯಾನಿಯು ದುಃಖಾರ್ತಳಾಗಿ ಶರ್ಮಿಷ್ಠೆಯ ಕುರಿತು ಚಿಂತಿಸತೊಡಗಿದಳು.

01078002a ಅಭಿಗಮ್ಯ ಚ ಶರ್ಮಿಷ್ಠಾಂ ದೇವಯಾನ್ಯಬ್ರವೀದಿದಂ|

01078002c ಕಿಮಿದಂ ವೃಜಿನಂ ಸುಭ್ರು ಕೃತಂ ತೇ ಕಾಮಲುಬ್ಧಯಾ||

ಶರ್ಮಿಷ್ಠೆಯ ಬಳಿಹೋಗಿ ದೇವಯಾನಿಯು ಕೇಳಿದಳು: “ಸುಂದರ ಹುಬ್ಬಿನವಳೇ! ಕಾಮಲುಬ್ಧಳಾಗಿ ಇದೇನು ಮಾಡಿಬಿಟ್ಟೆ?”

01078003 ಶರ್ಮಿಷ್ಠೋವಾಚ|

01078003a ಋಷಿರಭ್ಯಾಗತಃ ಕಶ್ಚಿದ್ಧರ್ಮಾತ್ಮಾ ವೇದಪಾರಗಃ|

01078003c ಸ ಮಯಾ ವರದಃ ಕಾಮಂ ಯಾಚಿತೋ ಧರ್ಮಸಂಹಿತಂ||

ಶರ್ಮಿಷ್ಠೆಯು ಹೇಳಿದಳು: “ಧರ್ಮಾತ್ಮನೂ ವೇದಪಾರಂಗತನೂ ಆದ ಓರ್ವ ಋಷಿಯು ಬಂದಾಗ ಧರ್ಮಸಂಹಿತವಾಗಿ ಕೇಳಿಕೊಂಡಾಗ ಅವನು ನನಗೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು.

01078004a ನಾಹಮನ್ಯಾಯತಃ ಕಾಮಮಾಚರಾಮಿ ಶುಚಿಸ್ಮಿತೇ|

01078004c ತಸ್ಮಾದೃಷೇರ್ಮಮಾಪತ್ಯಮಿತಿ ಸತ್ಯಂ ಬ್ರವೀಮಿ ತೇ||

ಶುಚಿಸ್ಮಿತೇ! ನಾನು ಅನ್ಯಾಯದಿಂದ ಕಾಮವನ್ನು ಆಚರಿಸಲಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಆ ಋಷಿಯಿಂದಲೇ ನಾನು ಈ ಮಗುವನ್ನು ಪಡೆದೆ.”

01078005 ದೇವಯಾನ್ಯುವಾಚ|

01078005a ಶೋಭನಂ ಭೀರು ಸತ್ಯಂ ಚೇದಥ ಸ ಜ್ಞಾಯತೇ ದ್ವಿಜಃ|

01078005c ಗೋತ್ರನಾಮಾಭಿಜನತೋ ವೇತ್ತುಮಿಚ್ಛಾಮಿ ತಂ ದ್ವಿಜಂ||

ದೇವಯಾನಿಯು ಹೇಳಿದಳು: “ಸುಂದರಿ! ಇದು ಸತ್ಯವೆಂದಾದರೆ ನಾನೇನೂ ಹೇಳಲಾರೆ. ನಿನಗೆ ಆ ದ್ವಿಜನ ಕುರಿತು ತಿಳಿದಿರಬಹುದು. ಆ ದ್ವಿಜನ ಗೋತ್ರ ಮತ್ತು ಹೆಸರನ್ನು ತಿಳಿಯ ಬಯಸುತ್ತೇನೆ.”

01078006 ಶರ್ಮಿಷ್ಠೋವಾಚ|

01078006a ಓಜಸಾ ತೇಜಸಾ ಚೈವ ದೀಪ್ಯಮಾನಂ ರವಿಂ ಯಥಾ|

01078006c ತಂ ದೃಷ್ಟ್ವಾ ಮಮ ಸಂಪ್ರಷ್ಟುಂ ಶಕ್ತಿರ್ನಾಸೀಚ್ಶುಚಿಸ್ಮಿತೇ||

ಶರ್ಮಿಷ್ಠೆಯು ಹೇಳಿದಳು: “ಶುಚಿಸ್ಮಿತೇ! ಓಜಸ್ಸು ಮತ್ತು ತೇಜಸ್ಸಿನಲ್ಲಿ ರವಿಯಂತೆ ಬೆಳಗುತ್ತಿದ್ದ ಅವನನ್ನು ನೋಡಿದ ನನಗೆ ಇದನ್ನೆಲ್ಲಾ ಕೇಳಿ ತಿಳಿಯುವ ಶಕ್ತಿಯೇ ಇರಲಿಲ್ಲ.”

01078007 ದೇವಯಾನ್ಯುವಾಚ|

01078007a ಯದ್ಯೇತದೇವಂ ಶರ್ಮಿಷ್ಠೇ ನ ಮನ್ಯುರ್ವಿದ್ಯತೇ ಮಮ|

01078007c ಅಪತ್ಯಂ ಯದಿ ತೇ ಲಬ್ಧಂ ಜ್ಯೇಷ್ಠಾತ್ ಶ್ರೇಷ್ಟಾಚ್ಚ ವೈ ದ್ವಿಜಾತ್||

ದೇವಯಾನಿಯು ಹೇಳಿದಳು: “ಶರ್ಮಿಷ್ಠೇ! ಸತ್ಯವಾಗಿ ನಿನ್ನ ಮಗುವನ್ನು ಜ್ಯೇಷ್ಠ ಮತ್ತು ಶ್ರೇಷ್ಠ ದ್ವಿಜನೋರ್ವನಿಂದ ಪಡೆದಿದ್ದೀಯೆ ಎಂದಾದರೆ ನಾನು ಸಿಟ್ಟಿಗೇಳುವ ಕಾರಣವೇ ಇಲ್ಲ.””

01078008 ವೈಶಂಪಾಯನ ಉವಾಚ|

01078008a ಅನ್ಯೋನ್ಯಮೇವಮುಕ್ತ್ವಾ ಚ ಸಂಪ್ರಹಸ್ಯ ಚ ತೇ ಮಿಥಃ|

01078008c ಜಗಾಮ ಭಾರ್ಗವೀ ವೇಶ್ಮ ತಥ್ಯಮಿತ್ಯೇವ ಜಜ್ಞುಷೀ||

ವೈಶಂಪಾಯನನು ಹೇಳಿದನು: “ಈ ರೀತಿ ಅನ್ಯೋನ್ಯರಲ್ಲಿ ಮಾತನಾಡಿ, ಹಾಸ್ಯಗೇಲಿಯಲ್ಲಿ ನಕ್ಕರು. ತಾನು ಕೇಳಿದ ಸುಳ್ಳನ್ನು ಸತ್ಯವೆಂದೇ ನಂಬಿ, ಭಾರ್ಗವಿಯು ತನ್ನ ಮನೆ ಸೇರಿದಳು.

01078009a ಯಯಾತಿರ್ದೇವಯಾನ್ಯಾಂ ತು ಪುತ್ರಾವಜನಯನ್ನೃಪಃ|

01078009c ಯದುಂ ಚ ತುರ್ವಸುಂ ಚೈವ ಶಕ್ರವಿಷ್ಣೂ‌ಇವಾಪರೌ||

ನೃಪ ಯಯಾತಿಯು ದೇವಯಾನಿಯಲ್ಲಿ ಇಂದ್ರ-ವಿಷ್ಣುವಿನಂತಿರುವ ಯದು ಮತ್ತು ತುರ್ವಸುವೆಂಬ ಇನ್ನೂ ಎರಡು ಪುತ್ರರನ್ನು ಪಡೆದನು.

01078010a ತಸ್ಮಾದೇವ ತು ರಾಜರ್ಷೇಃ ಶರ್ಮಿಷ್ಠಾ ವಾರ್ಷಪರ್ವಣೀ|

01078010c ದ್ರುಹ್ಯುಂ ಚಾನುಂ ಚ ಪೂರುಂ ಚ ತ್ರೀನ್ಕುಮಾರಾನಜೀಜನತ್||

ಅದೇ ರಾಜರ್ಷಿಯಲ್ಲಿ ವಾರ್ಷಪರ್ವಣೀ ಶರ್ಮಿಷ್ಠೆಯು ದ್ರುಹ್ಯು, ಅನು ಮತ್ತು ಪೂರು ಎನ್ನುವ ಮೂರು ಕುಮಾರರಿಗೆ ಜನ್ಮವಿತ್ತಳು.

01078011a ತತಃ ಕಾಲೇ ತು ಕಸ್ಮಿಂಶ್ಚಿದ್ದೇವಯಾನೀ ಶುಚಿಸ್ಮಿತಾ|

01078011c ಯಯಾತಿಸಹಿತಾ ರಾಜನ್ನಿರ್ಜಗಾಮ ಮಹಾವನಂ||

ಒಮ್ಮೆ ಶುಚಿಸ್ಮಿತೆ ದೇವಯಾನಿಯು ರಾಜ ಯಯಾತಿಯ ಸಹಿತ ಆ ಮಹಾವನಕ್ಕೆ ಬಂದಳು.

01078012a ದದರ್ಶ ಚ ತದಾ ತತ್ರ ಕುಮಾರಾನ್ದೇವರೂಪಿಣಃ|

01078012c ಕ್ರೀಡಮಾನಾನ್ಸುವಿಶ್ರಬ್ಧಾನ್ವಿಸ್ಮಿತಾ ಚೇದಮಬ್ರವೀತ್||

ಅಲ್ಲಿ ಸ್ವಚ್ಛಂದವಾಗಿ ಆಡುತ್ತಿರುವ ಮೂರು ದೇವರೂಪಿ ಕುಮಾರರನ್ನು ಕಂಡು ಅವಳು ಕೇಳಿದಳು:

01078013a ಕಸ್ಯೈತೇ ದಾರಕಾ ರಾಜನ್ದೇವಪುತ್ರೋಪಮಾಃ ಶುಭಾಃ|

01078013c ವರ್ಚಸಾ ರೂಪತಶ್ಚೈವ ಸದೃಶಾ ಮೇ ಮತಾಸ್ತವ||

“ರಾಜನ್! ದೇವಪುತ್ರರಂತಿರುವ ಈ ಸುಂದರ ಮಕ್ಕಳು ಯಾರದ್ದಿರಬಹುದು? ವರ್ಚಸ್ಸು ಮತ್ತು ರೂಪದಲ್ಲಿ ನಿನ್ನ ಹಾಗೆಯೇ ಇದ್ದಾರೆಂದು ನನಗನ್ನಿಸುತ್ತಿದೆ!”

01078014a ಏವಂ ಪೃಷ್ಟ್ವಾ ತು ರಾಜಾನಂ ಕುಮಾರಾನ್ಪರ್ಯಪೃಚ್ಛತ|

01078014c ಕಿಮ್ನಾಮಧೇಯಗೋತ್ರೋ ವಃ ಪುತ್ರಕಾ ಬ್ರಾಹ್ಮಣಃ ಪಿತಾ|

01078014e ವಿಬ್ರೂತ ಮೇ ಯಥಾತಥ್ಯಂ ಶ್ರೋತುಮಿಚ್ಛಾಮಿ ತಂ ಹ್ಯಹಂ||

ಈ ರೀತಿ ರಾಜನನ್ನು ಪ್ರಶ್ನಿಸಿದ ಅವಳು ಪುನಃ ಕುಮಾರರನ್ನೇ ಕೇಳಿದಳು: “ಮಕ್ಕಳೇ! ನಿಮ್ಮ ಬ್ರಾಹ್ಮಣ ತಂದೆಯ ಹೆಸರು ಮತ್ತು ಗೋತ್ರವೇನು? ತಿಳಿಯ ಬಯಸುವ ನನಗೆ ನಿಜವನ್ನು ಹೇಳಿ.”

01078015a ತೇಽದರ್ಶಯನ್ಪ್ರದೇಶಿನ್ಯಾ ತಮೇವ ನೃಪಸತ್ತಮಂ|

01078015c ಶರ್ಮಿಷ್ಠಾಂ ಮಾತರಂ ಚೈವ ತಸ್ಯಾಚಖ್ಯುಶ್ಚ ದಾರಕಾಃ||

ಆ ಮಕ್ಕಳು ತಮ್ಮ ಕೈಬೆರಳಿನಿಂದ ಅದೇ ನೃಪಸತ್ತಮನನ್ನು ತೋರಿಸಿ, ತಾಯಿಯು ಶರ್ಮಿಷ್ಠೆಯೆಂದು ಹೇಳಿದರು.

01078016a ಇತ್ಯುಕ್ತ್ವಾ ಸಹಿತಾಸ್ತೇ ತು ರಾಜಾನಮುಪಚಕ್ರಮುಃ|

01078016c ನಾಭ್ಯನಂದತ ತಾನ್ರಾಜಾ ದೇವಯಾನ್ಯಾಸ್ತದಾಂತಿಕೇ|

01078016e ರುದಂತಸ್ತೇಽಥ ಶರ್ಮಿಷ್ಠಾಮಭ್ಯಯುರ್ಬಾಲಕಾಸ್ತತಃ||

ಹೀಗೆ ಹೇಳಿ ಅವರೆಲ್ಲರೂ ರಾಜನೆಡೆಗೆ ಹೋದರು. ಆದರೆ ರಾಜನು ಹತ್ತಿರದಲ್ಲಿದ್ದ ದೇವಯಾನಿಯನ್ನು ನೋಡಿ ಅವರನ್ನು ಅಭಿನಂದಿಸಲಿಲ್ಲ. ಆಗ ಆ ಬಾಲಕರು ಅಳುತ್ತಾ ಶರ್ಮಿಷ್ಠೆಯಿದ್ದಲ್ಲಿಗೆ ಹೋದರು.

01078017a ದೃಷ್ಟ್ವಾ ತು ತೇಷಾಂ ಬಾಲಾನಾಂ ಪ್ರಣಯಂ ಪಾರ್ಥಿವಂ ಪ್ರತಿ|

01078017c ಬುದ್ಧ್ವಾ ಚ ತತ್ತ್ವತೋ ದೇವೀ ಶರ್ಮಿಷ್ಠಾಮಿದಮಬ್ರವೀತ್||

ಆ ಬಾಲಕರು ರಾಜನೊಂದಿಗೆ ಈ ರೀತಿ ಪ್ರೀತಿಯಲ್ಲಿ ವರ್ತಿಸಿದ್ದುದನ್ನು ನೋಡಿದ ಆ ದೇವಿಯು ಸತ್ಯವೇನೆಂದು ಊಹಿಸಿ, ಶರ್ಮಿಷ್ಠೆಯನ್ನು ಉದ್ದೇಶಿಸಿ ಹೇಳಿದಳು:

01078018a ಮದಧೀನಾ ಸತೀ ಕಸ್ಮಾದಕಾರ್ಷೀರ್ವಿಪ್ರಿಯಂ ಮಮ|

01078018c ತಮೇವಾಸುರಧರ್ಮಂ ತ್ವಮಾಸ್ಥಿತಾ ನ ಬಿಭೇಷಿ ಕಿಂ||

“ನನ್ನ ಅಧೀನಳಾಗಿದ್ದುಕೊಂಡು ನನ್ನನ್ನೇ ಕಡೆಮಾಡುವ ಸಾಹಸವನ್ನು ಹೇಗೆ ಮಾಡಿದೆ? ಈ ರೀತಿ ನಿನ್ನ ಅಸುರಧರ್ಮಕ್ಕೇ ಹಿಂದಿರುಗಿದ್ದೀಯೆ. ಭಯವೇ ಆಗಲಿಲ್ಲವೇ ನಿನಗೆ?”

01078019 ಶರ್ಮಿಷ್ಠೋವಾಚ|

01078019a ಯದುಕ್ತಂ ಋಷಿರಿತ್ಯೇವ ತತ್ಸತ್ಯಂ ಚಾರುಹಾಸಿನಿ|

01078019c ನ್ಯಾಯತೋ ಧರ್ಮತಶ್ಚೈವ ಚರಂತೀ ನ ಬಿಭೇಮಿ ತೇ||

ಶರ್ಮಿಷ್ಠೆಯು ಹೇಳಿದಳು: “ಚಾರುಹಾಸಿನೀ! ಅವನು ಓರ್ವ ಋಷಿಯೆಂದು ಹೇಳಿದಾಗ ನಾನು ನಿನಗೆ ಸತ್ಯವನ್ನೇ ಹೇಳಿದೆ. ನ್ಯಾಯ ಮತ್ತು ಧರ್ಮಕ್ಕನುಗುಣವಾಗಿಯೇ ನಡೆದುಕೊಂಡಿದ್ದೇನೆ. ಆದುದರಿಂದ ನನಗೆ ನಿನ್ನ ಮೇಲಿನ ಭಯವಾದರೂ ಏಕೆ?

01078020a ಯದಾ ತ್ವಯಾ ವೃತೋ ರಾಜಾ ವೃತ ಏವ ತದಾ ಮಯಾ|

01078020c ಸಖೀಭರ್ತಾ ಹಿ ಧರ್ಮೇಣ ಭರ್ತಾ ಭವತಿ ಶೋಭನೇ||

ಎಂದು ನೀನು ರಾಜನನ್ನು ವರಿಸಿದೆಯೋ ಅಂದೇ ನಾನೂ ಕೂಡ ಅವನನ್ನು ವರಿಸಿದೆ. ಶೋಭನೇ! ಧರ್ಮದ ಪ್ರಕಾರ, ಸಖಿಯ ಪತಿಯು ನಿನ್ನ ಪತಿಯೂ ಆಗಬಲ್ಲ.

01078021a ಪೂಜ್ಯಾಸಿ ಮಮ ಮಾನ್ಯಾ ಚ ಜ್ಯೇಷ್ಠಾ ಶ್ರೇಷ್ಠಾ ಚ ಬ್ರಾಹ್ಮಣೀ|

01078021c ತ್ವತ್ತೋಽಪಿ ಮೇ ಪೂಜ್ಯತಮೋ ರಾಜರ್ಷಿಃ ಕಿಂ ನ ವೇತ್ಥ ತತ್||

ನನ್ನ ಜ್ಯೇಷ್ಠ ಮತ್ತು ಶ್ರೇಷ್ಠ ಬ್ರಾಹ್ಮಣಿ! ನೀನು ನನ್ನ ಪೂಜನೀಯಳು. ಆದರೆ ನನಗೆ ಈ ರಾಜರ್ಷಿಯು ನಿನಗಿಂತ ಹೆಚ್ಚು ಪೂಜನೀಯ ಎಂದು ನಿನಗನಿಸುವುದಿಲ್ಲವೇ?””

01078022 ವೈಶಂಪಾಯನ ಉವಾಚ|

01078022a ಶ್ರುತ್ವಾ ತಸ್ಯಾಸ್ತತೋ ವಾಕ್ಯಂ ದೇವಯಾನ್ಯಬ್ರವೀದಿದಂ|

01078022c ರಾಜನ್ನಾದ್ಯೇಹ ವತ್ಸ್ಯಾಮಿ ವಿಪ್ರಿಯಂ ಮೇ ಕೃತಂ ತ್ವಯಾ||

ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ದೇವಯಾನಿಯು ಹೇಳಿದಳು: “ರಾಜನ್! ನೀನು ನನ್ನ ಮೇಲೆ ತಪ್ಪನ್ನೆಸಗಿದ್ದೀಯೆ. ಇಂದಿನಿಂದ ನಾನು ಇಲ್ಲಿ ಇರಲಾರೆ.”

01078023a ಸಹಸೋತ್ಪತಿತಾಂ ಶ್ಯಾಮಾಂ ದೃಷ್ಟ್ವಾ ತಾಂ ಸಾಶ್ರುಲೋಚನಾಂ|

01078023c ತ್ವರಿತಂ ಸಕಾಶಂ ಕಾವ್ಯಸ್ಯ ಪ್ರಸ್ಥಿತಾಂ ವ್ಯಥಿತಸ್ತದಾ||

ಹೀಗೆ ಹೇಳಿ ತಕ್ಷಣವೇ ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ಕಾವ್ಯನ ಬಳಿ ಹೋಗಲು ಮೇಲೆದ್ದ ಅವಳನ್ನು ನೋಡಿ ರಾಜನು ದುಃಖಿತನಾದನು.

01078024a ಅನುವವ್ರಾಜ ಸಂಭ್ರಾಂತಃ ಪೃಷ್ಠತಃ ಸಾಂತ್ವಯನ್ನೃಪಃ|

01078024c ನ್ಯವರ್ತತ ನ ಚೈವ ಸ್ಮ ಕ್ರೋಧಸಂರಕ್ತಲೋಚನಾ||

ಸಂಭ್ರಾಂತ ನೃಪನು ಅವಳ ಹಿಂದೆಯೇ ಹೋಗಿ ಅವಳನ್ನು ತಡೆಹಿಡಿದು ಸಂತವಿಸಲು ಪ್ರಯತ್ನಿಸಿದನು. ಆದರೆ ಕ್ರೋಧದಿಂದ ರಕ್ತಲೋಚನಳಾದ ಅವಳು ಹಿಂದಿರುಗಲಿಲ್ಲ.

01078025a ಅವಿಬ್ರುವಂತೀ ಕಿಂ ಚಿತ್ತು ರಾಜಾನಂ ಚಾರುಲೋಚನಾ|

01078025c ಅಚಿರಾದಿವ ಸಂಪ್ರಾಪ್ತಾ ಕಾವ್ಯಸ್ಯೋಶನಸೋಽಂತಿಕಂ||

ಆ ಚಾರುಲೋಚನಳು ರಾಜನಿಗೆ ಏನನ್ನೂ ಹೇಳದೇ ತಕ್ಷಣವೇ ಕಾವ್ಯ ಉಶನಸನ ಬಳಿ ತಲುಪಿದಳು.

01078026a ಸಾ ತು ದೃಷ್ಟ್ವೈವ ಪಿತರಮಭಿವಾದ್ಯಾಗ್ರತಃ ಸ್ಥಿತಾ|

01078026c ಅನಂತರಂ ಯಯಾತಿಸ್ತು ಪೂಜಯಾಮಾಸ ಭಾರ್ಗವಂ||

ತಂದೆಯನ್ನು ನೋಡಿದಾಕ್ಷಣವೇ ಅವಳು ಅವನಿಗೆ ನಮಸ್ಕರಿಸಿ ಎದಿರು ನಿಂತುಕೊಂಡಳು. ಅನಂತರ ಯಯಾತಿಯೂ ಅಲ್ಲಿಗೆ ಬಂದು ಭಾರ್ಗವನಿಗೆ ನಮಸ್ಕರಿಸಿದನು.

01078027 ದೇವಯಾನ್ಯುವಾಚ|

01078027a ಅಧರ್ಮೇಣ ಜಿತೋ ಧರ್ಮಃ ಪ್ರವೃತ್ತಮಧರೋತ್ತರಂ|

01078027c ಶರ್ಮಿಷ್ಠಯಾತಿವೃತ್ತಾಸ್ಮಿ ದುಹಿತ್ರಾ ವೃಷಪರ್ವಣಃ||

ದೇವಯಾನಿಯು ಹೇಳಿದಳು: “ಧರ್ಮದ ಮೇಲೆ ಅಧರ್ಮದ ವಿಜಯವಾಯಿತು. ಎಲ್ಲವೂ ತಲೆಕೆಳಗಾದವು. ವೃಷಪರ್ವನ ಮಗಳು ಶರ್ಮಿಷ್ಠೆಯು ನನ್ನನ್ನು ಹಿಂದೆ ಹಾಕಿದಳು.

01078028a ತ್ರಯೋಽಸ್ಯಾಂ ಜನಿತಾಃ ಪುತ್ರಾ ರಾಜ್ಞಾನೇನ ಯಯಾತಿನಾ|

01078028c ದುರ್ಭಗಾಯಾ ಮಮ ದ್ವೌ ತು ಪುತ್ರೌ ತಾತ ಬ್ರವೀಮಿ ತೇ||

ರಾಜ ಯಯಾತಿಯಿಂದ ದುರ್ಭಾಗ್ಯಳಾದ ಅವಳಲ್ಲಿ ಮೂರು ಪುತ್ರರು ಜನಿಸಿದ್ದಾರೆ. ಆದರೆ ನನ್ನಲ್ಲಿ ಎರಡೇ ಪುತ್ರರು ಜನಿಸಿದ್ದಾರೆ.

01078029a ಧರ್ಮಜ್ಞ ಇತಿ ವಿಖ್ಯಾತ ಏಷ ರಾಜಾ ಭೃಗೂದ್ವಹ|

01078029c ಅತಿಕ್ರಾಂತಶ್ಚ ಮರ್ಯಾದಾಂ ಕಾವ್ಯೈತತ್ಕಥಯಾಮಿ ತೇ||

ಕಾವ್ಯ! ಧರ್ಮಜ್ಞನೆಂದು ವಿಖ್ಯಾತ ಈ ರಾಜನು ಎಲ್ಲ ಮರ್ಯಾದೆಗಳನ್ನೂ ಅತಿಕ್ರಮಿಸಿದ್ದಾನೆ ಎಂದು ನಾನು ಹೇಳುತ್ತಿದ್ದೇನೆ.”

01078030 ಶುಕ್ರ ಉವಾಚ|

01078030a ಧರ್ಮಜ್ಞಃ ಸನ್ಮಹಾರಾಜ ಯೋಽಧರ್ಮಮಕೃಥಾಃ ಪ್ರಿಯಂ|

01078030c ತಸ್ಮಾಜ್ಜರಾ ತ್ವಾಮಚಿರಾದ್ಧರ್ಷಯಿಷ್ಯತಿ ದುರ್ಜಯಾ||

ಶುಕ್ರನು ಹೇಳಿದನು: “ಮಹಾರಾಜ! ಧರ್ಮಜ್ಞನಾಗಿದ್ದರೂ ಕಾಮಕ್ಕಾಗಿ ಅಧರ್ಮವನ್ನೆಸಗಿದುದಕ್ಕಾಗಿ ಜಯಿಸಲಸಾದ್ಯ ವೃದ್ಧಾಪ್ಯವು ಈ ಕ್ಷಣದಲ್ಲಿಯೇ ನಿನ್ನನ್ನು ಕಾಡುತ್ತದೆ.”

01078031 ಯಯಾತಿರುವಾಚ|

01078031a ಋತುಂ ವೈ ಯಾಚಮಾನಾಯಾ ಭಗವನ್ನಾನ್ಯಚೇತಸಾ|

01078031c ದುಹಿತುರ್ದಾನವೇಂದ್ರಸ್ಯ ಧರ್ಮ್ಯಮೇತತ್ಕೃತಂ ಮಯಾ||

ಯಯಾತಿಯು ಹೇಳಿದನು: “ಭಗವನ್! ದಾನವೇಂದ್ರನ ಈ ಅಚೇತಸ ಮಗಳು ತನ್ನ ಋತುವಿಗೋಸ್ಕರ ನನ್ನನ್ನು ಯಾಚಿಸಿದಾಗ ಅದು ಧರ್ಮವೆಂದೇ ತಿಳಿದು ನಾನು ಈ ರೀತಿ ಮಾಡಿದೆ.

01078032a ಋತುಂ ವೈ ಯಾಚಮಾನಾಯಾ ನ ದದಾತಿ ಪುಮಾನ್ವೃತಃ|

01078032c ಭ್ರೂಣಹೇತ್ಯುಚ್ಯತೇ ಬ್ರಹ್ಮನ್ಸ ಇಹ ಬ್ರಹ್ಮವಾದಿಭಿಃ||

ಬ್ರಹ್ಮನ್! ಋತುಕಾಲದಲ್ಲಿದ್ದವಳು ವರಿಸಿ ಯಾಚಿಸಿದಾಗ ತನ್ನನ್ನು ತಾನು ಅವಳಿಗೆ ಸಮರ್ಪಿಸದಿದ್ದರೆ ಅಂಥವನನ್ನು ಭ್ರೂಣಹತ್ಯೆ ಮಾಡಿದವನು ಎಂದು ಬ್ರಹ್ಮವಾದಿಗಳು ಹೇಳುತ್ತಾರೆ.

01078033a ಅಭಿಕಾಮಾಂ ಸ್ತ್ರಿಯಂ ಯಸ್ತು ಗಮ್ಯಾಂ ರಹಸಿ ಯಾಚಿತಃ|

01078033c ನೋಪೈತಿ ಸ ಚ ಧರ್ಮೇಷು ಭ್ರೂಣಹೇತ್ಯುಚ್ಯತೇ ಬುಧೈಃ||

ಅಭಿಕಾಮಿ ಸ್ತ್ರೀಯು ರಹಸ್ಯದಲ್ಲಿ ಅವನನ್ನು ಕರೆದಾಗ ಧರ್ಮದ ಪ್ರಕಾರ ಅವಳೊಡನೆ ಮಲಗದೇ ಇದ್ದವನನ್ನು ಭ್ರೂಣಹತ್ಯೆ ಮಾಡಿದವನು ಎಂದು ತಿಳಿದವರು ಕರೆಯುತ್ತಾರೆ.

01078034a ಇತ್ಯೇತಾನಿ ಸಮೀಕ್ಷ್ಯಾಹಂ ಕಾರಣಾನಿ ಭೃಗೂದ್ವಹ|

01078034c ಅಧರ್ಮಭಯಸಂವಿಗ್ನಃ ಶರ್ಮಿಷ್ಠಾಮುಪಜಗ್ಮಿವಾನ್||

ಈ ಎಲ್ಲ ಕಾರಣಗಳನ್ನೂ ಸಮೀಕ್ಷಿಸಿ, ಅಧರ್ಮದ ಭಯಸಂವಿಗ್ನನಾಗಿ ಶರ್ಮಿಷ್ಠೆಯೊಡನೆ ಕೂಡಿದೆನು.”

01078035 ಶುಕ್ರ ಉವಾಚ|

01078035a ನನ್ವಹಂ ಪ್ರತ್ಯವೇಕ್ಷ್ಯಸ್ತೇ ಮದಧೀನೋಽಸಿ ಪಾರ್ಥಿವ|

01078035c ಮಿಥ್ಯಾಚಾರಸ್ಯ ಧರ್ಮೇಷು ಚೌರ್ಯಂ ಭವತಿ ನಾಹುಷ||

ಶುಕ್ರನು ಹೇಳಿದನು: “ಪಾರ್ಥಿವ! ನೀನು ನನ್ನ ಸಲಹೆಯನ್ನು ಕೇಳಬಹುದಾಗಿತ್ತು. ನಾಹುಷ! ಧರ್ಮದ ಹೆಸರಿನಲ್ಲಿ ಮಿಥ್ಯಾಚಾರವನ್ನೆಸಗಿದ ನೀನು ಕಳ್ಳತನವನ್ನು ಮಾಡಿದ್ದೀಯೆ.””

01078036 ವೈಶಂಪಾಯನ ಉವಾಚ|

01078036a ಕ್ರುದ್ಧೇನೋಶನಸಾ ಶಪ್ತೋ ಯಯಾತಿರ್ನಾಹುಷಸ್ತದಾ|

01078036c ಪೂರ್ವಂ ವಯಃ ಪರಿತ್ಯಜ್ಯ ಜರಾಂ ಸದ್ಯೋಽನ್ವಪದ್ಯತ||

ವೈಶಂಪಾಯನನು ಹೇಳಿದನು: “ಈ ರೀತಿ ನಾಹುಷ ಯಯಾತಿಯು ಕೃದ್ಧ ಉಶನನಿಂದ ಶಪಿಸಲ್ಪಟ್ಟು ಕ್ಷಣಮಾತ್ರದಲ್ಲಿ ತನ್ನ ಹಿಂದಿನ ಯೌವನವನ್ನು ಕಳೆದುಕೊಂಡು ವೃದ್ಧಾಪ್ಯವನ್ನು ಹೊಂದಿದನು.

01078037 ಯಯಾತಿರುವಾಚ|

01078037a ಅತೃಪ್ತೋ ಯೌವನಸ್ಯಾಹಂ ದೇವಯಾನ್ಯಾಂ ಭೃಗೂದ್ವಹ|

01078037c ಪ್ರಸಾದಂ ಕುರು ಮೇ ಬ್ರಹ್ಮಂಜರೇಯಂ ಮಾ ವಿಶೇತ ಮಾಂ||

ಯಯಾತಿಯು ಹೇಳಿದನು: “ಭೃಗೂದ್ವಹ! ಇನ್ನೂ ಕೂಡ ನಾನು ದೇವಯಾನಿಯೊಂದಿಗೆ ಯೌವನ ಸುಖದಲ್ಲಿ ಅತೃಪ್ತನಾಗಿದ್ದೇನೆ. ಬ್ರಾಹ್ಮಣ! ಈ ವೃದ್ಧಾಪ್ಯವು ನನ್ನನ್ನು ಆವರಿಸದಹಾಗೆ ಕರುಣಿಸು.”

01078038 ಶುಕ್ರ ಉವಾಚ|

01078038a ನಾಹಂ ಮೃಷಾ ಬ್ರವೀಂಯೇತಜ್ಜರಾಂ ಪ್ರಾಪ್ತೋಽಸಿ ಭೂಮಿಪ|

01078038c ಜರಾಂ ತ್ವೇತಾಂ ತ್ವಮನ್ಯಸ್ಮೈ ಸಂಕ್ರಾಮಯ ಯದೀಚ್ಛಸಿ||

ಶುಕ್ರನು ಹೇಳಿದನು: “ಭೂಮಿಪ! ನಾನು ಈ ಮಾತುಗಳನ್ನು ಸುಮ್ಮನೇ ಹೇಳಿಲ್ಲ. ವೃದ್ಧಾಪ್ಯವು ನಿನ್ನನ್ನು ಹಿಡಿದಿದೆ. ಆದರೆ ನೀನು ಇಚ್ಛಿಸಿದರೆ ನಿನ್ನ ಈ ವೃದ್ಧಾಪ್ಯವನ್ನು ಇನ್ನೊಬ್ಬನಿಗೆ ಕೊಡಬಹುದು.”

01078039 ಯಯಾತಿರುವಾಚ|

01078039a ರಾಜ್ಯಭಾಕ್ಸ ಭವೇದ್ಬ್ರಹ್ಮನ್ಪುಣ್ಯಭಾಕ್ಕೀರ್ತಿಭಾಕ್ತಥಾ|

01078039c ಯೋ ಮೇ ದದ್ಯಾದ್ವಯಃ ಪುತ್ರಸ್ತದ್ಭವಾನನುಮನ್ಯತಾಂ||

ಯಯಾತಿಯು ಹೇಳಿದನು: “ಬ್ರಾಹ್ಮಣ! ತನ್ನ ಯೌವನವನ್ನು ನನಗೆ ಕೊಡುವ ಮಗನು ನನ್ನ ರಾಜ್ಯ, ಪುಣ್ಯ ಮತ್ತು ಕೀರ್ತಿಗಳಿಗೆ ಪಾತ್ರನಾಗಲಿ ಎಂದು ಅನುಮತಿಯನ್ನು ನೀಡು.”

01078040 ಶುಕ್ರ ಉವಾಚ|

01078040a ಸಂಕ್ರಾಮಯಿಷ್ಯಸಿ ಜರಾಂ ಯಥೇಷ್ಟಂ ನಹುಷಾತ್ಮಜ|

01078040c ಮಾಮನುಧ್ಯಾಯ ಭಾವೇನ ನ ಚ ಪಾಪಮವಾಪ್ಸ್ಯಸಿ||

ಶುಕ್ರನು ಹೇಳಿದನು: “ನಹುಷಾತ್ಮಜ! ನೀನು ನನ್ನನ್ನು ಮನಸ್ಸಿನಲ್ಲಿ ನೆನೆಸಿಕೊಂಡು ನಿನಗಿಷ್ಟವಿದ್ದವನಿಗೆ ನಿನ್ನ ವೃದ್ಧಾಪ್ಯವನ್ನು ಕೊಡಬಲ್ಲೆ. ಈ ರೀತಿ ನೀನು ಯಾವ ಪಾಪವನ್ನೂ ಹೊಂದುವುದಿಲ್ಲ.

01078041a ವಯೋ ದಾಸ್ಯತಿ ತೇ ಪುತ್ರೋ ಯಃ ಸ ರಾಜಾ ಭವಿಷ್ಯತಿ|

01078041c ಆಯುಷ್ಮಾನ್ಕೀರ್ತಿಮಾಂಶ್ಚೈವ ಬಹ್ವಪತ್ಯಸ್ತಥೈವ ಚ||

ತನ್ನ ಯೌವನವನ್ನು ನಿನಗಿತ್ತ ಮಗನು ರಾಜನಾಗುತ್ತಾನೆ, ಆಯುಷ್ಮಂತನಾಗುತ್ತಾನೆ. ಕೀರ್ತಿವಂತನಾಗುತ್ತಾನೆ ಮತ್ತು ಬಹಳ ಪುತ್ರರನ್ನು ಪಡೆಯುತ್ತಾನೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಅಷ್ಟಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೆಂಟನೆಯ ಅಧ್ಯಾಯವು.

Comments are closed.