Adi Parva: Chapter 77

ಆದಿ ಪರ್ವ: ಸಂಭವ ಪರ್ವ

೭೭

ಶರ್ಮಿಷ್ಠೆಯು ಯುಯಾತಿಯಿಂದ ಸಂತಾನವನ್ನು ಪಡೆಯಲು ನಿರ್ಧರಿಸಿ (೧-೧೦) ಅವನಿಂದ ಮಗನನ್ನು ಪಡೆದುದು (೧೧-೨೫).

01077001 ವೈಶಂಪಾಯನ ಉವಾಚ|

01077001a ಯಯಾತಿಃ ಸ್ವಪುರಂ ಪ್ರಾಪ್ಯ ಮಹೇಂದ್ರಪುರಸನ್ನಿಭಂ|

01077001c ಪ್ರವಿಶ್ಯಾಂತಃಪುರಂ ತತ್ರ ದೇವಯಾನೀಂ ನ್ಯವೇಶಯತ್||

ವೈಶಂಪಾಯನನು ಹೇಳಿದನು: “ಯಯಾತಿಯು ಮಹೇಂದ್ರಪುರಸನ್ನಿಭ ತನ್ನ ಪುರವನ್ನು ಸೇರಿ ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ದೇವಯಾನಿಯನ್ನಿರಿಸಿದನು.

01077002a ದೇವಯಾನ್ಯಾಶ್ಚಾನುಮತೇ ತಾಂ ಸುತಾಂ ವೃಷಪರ್ವಣಃ|

01077002c ಅಶೋಕವನಿಕಾಭ್ಯಾಶೇ ಗೃಹಂ ಕೃತ್ವಾ ನ್ಯವೇಶಯತ್||

ದೇವಯಾನಿಯ ಹೇಳಿಕೆಯಂತೆ ವೃಷಪರ್ವನ ಮಗಳನ್ನು ಅಶೋಕವನದ ಬಳಿ ಒಂದು ಮನೆಯನ್ನು ನಿರ್ಮಿಸಿ ಅಲ್ಲಿ ಇರಿಸಿದನು.

01077003a ವೃತಾಂ ದಾಸೀಸಹಸ್ರೇಣ ಶರ್ಮಿಷ್ಠಾಮಾಸುರಾಯಣೀಂ|

01077003c ವಾಸೋಭಿರನ್ನಪಾನೈಶ್ಚ ಸಂವಿಭಜ್ಯ ಸುಸತ್ಕೃತಾಂ||

ಸಹಸ್ರ ದಾಸಿಯರಿಂದ ಆವೃತಳಾದ ಅಸುರಾಯಿಣೀ ಶರ್ಮಿಷ್ಠೆಗೆ ಸುಸಜ್ಜಿತ ಅನ್ನ, ಪಾನೀಯ ಮತ್ತು ವಸ್ತ್ರಗಳ ವ್ಯವಸ್ಥೆಯನ್ನು ಮಾಡಿದನು.

01077004a ದೇವಯಾನ್ಯಾ ತು ಸಹಿತಃ ಸ ನೃಪೋ ನಹುಷಾತ್ಮಜಃ|

01077004c ವಿಜಹಾರ ಬಹೂನಬ್ದಾನ್ದೇವವನ್ಮುದಿತೋ ಭೃಶಂ||

ಆ ನೃಪ ನಹುಷಾತ್ಮಜನು ದೇವಯಾನಿಯ ಸಹಿತ ದೇವತೆಯಂತೆ ಬಹಳ ವರ್ಷಗಳ ಕಾಲ ವಿಹರಿಸುತ್ತಾ ಅತ್ಯಂತ ಸಂತೋಷವನ್ನು ಹೊಂದಿದನು.

01077005a ಋತುಕಾಲೇ ತು ಸಂಪ್ರಾಪ್ತೇ ದೇವಯಾನೀ ವರಾಂಗನಾ|

01077005c ಲೇಭೇ ಗರ್ಭಂ ಪ್ರಥಮತಃ ಕುಮಾರಂ ಚ ವ್ಯಜಾಯತ||

ಋತುಕಾಲ ಸಂಪ್ರಾಪ್ತವಾದಾಗ ವರಾಂಗನೆ ದೇವಯಾನಿಯು ಗರ್ಭವನ್ನು ಧರಿಸಿ ಮೊದಲನೆಯ ಕುಮಾರನಿಗೆ ಜನ್ಮವಿತ್ತಳು.

01077006a ಗತೇ ವರ್ಷಸಹಸ್ರೇ ತು ಶರ್ಮಿಷ್ಠಾ ವಾರ್ಷಪರ್ವಣೀ|

01077006c ದದರ್ಶ ಯೌವನಂ ಪ್ರಾಪ್ತಾ ಋತುಂ ಸಾ ಚಾನ್ವಚಿಂತಯತ್||

ಈ ರೀತಿ ಒಂದು ಸಾವಿರ ವರ್ಷಗಳು ಕಳೆಯುತ್ತಿದ್ದಂತೆ ವಾರ್ಷಪರ್ವಣೀ ಶರ್ಮಿಷ್ಠೆಯು ಯೌವನವನ್ನು ಹೊಂದಿ ತನ್ನ ಋತುವು ಪ್ರಯೋಜನಕ್ಕೆ ಬಾರದೆ ಇರುವುದನ್ನು ಕಂಡು ಯೋಚಿಸತೊಡಗಿದಳು. 

01077007a ಋತುಕಾಲಶ್ಚ ಸಂಪ್ರಾಪ್ತೋ ನ ಚ ಮೇಽಸ್ತಿ ಪತಿರ್ವೃತಃ|

01077007c ಕಿಂ ಪ್ರಾಪ್ತಂ ಕಿಂ ನು ಕರ್ತವ್ಯಂ ಕಿಂ ವಾ ಕೃತ್ವಾ ಕೃತಂ ಭವೇತ್||

“ಋತುಕಾಲವನ್ನು ಪಡೆದಿದ್ದೇನೆ. ಆದರೆ ಇದೂವರೆಗೂ ನಾನು ಯಾರನ್ನೂ ಪತಿಯನ್ನಾಗಿ ವರಿಸಿಲ್ಲ. ಇದೇನಾಯಿತು? ಏನು ಮಾಡಲಿ? ಆಗಬೇಕಾದುದನ್ನು ಹೇಗೆ ಮಾಡಲಿ? 

01077008a ದೇವಯಾನೀ ಪ್ರಜಾತಾಸೌ ವೃಥಾಹಂ ಪ್ರಾಪ್ತಯೌವನಾ|

01077008c ಯಥಾ ತಯಾ ವೃತೋ ಭರ್ತಾ ತಥೈವಾಹಂ ವೃಣೋಮಿ ತಂ||

ದೇವಯಾನಿಯು ಮಕ್ಕಳಿಗೆ ಜನ್ಮವಿತ್ತಿದ್ದಾಳೆ. ನನ್ನ ಯೌವನವು ವ್ಯರ್ಥವಾಗುತ್ತಿದೆ. ಅವಳು ಯಾರನ್ನು ತನ್ನ ಪತಿಯನ್ನಾಗಿ ವರಿಸಿದ್ದಾಳೆಯೋ ಅವನನ್ನೇ ನನ್ನ ಪತಿಯನ್ನಾಗಿ ವರಿಸುತ್ತೇನೆ.

01077009a ರಾಜ್ಞಾ ಪುತ್ರಫಲಂ ದೇಯಮಿತಿ ಮೇ ನಿಶ್ಚಿತಾ ಮತಿಃ|

01077009c ಅಪೀದಾನೀಂ ಸ ಧರ್ಮಾತ್ಮಾ ಇಯಾನ್ಮೇ ದರ್ಶನಂ ರಹಃ||

ರಾಜನು ನನಗೆ ಪುತ್ರಫಲ ನೀಡಬೇಕೆಂದು ನನ್ನ ಬುದ್ಧಿ ನಿಶ್ಚಯಿಸಿದೆ. ಆದರೆ ಆ ಧರ್ಮಾತ್ಮನು ಇಲ್ಲಿ ನನಗೆ ಏಕಾಂತದಲ್ಲಿ ಕಾಣಲು ದೊರಕುತ್ತಾನೆಯೇ?”

01077010a ಅಥ ನಿಷ್ಕ್ರಮ್ಯ ರಾಜಾಸೌ ತಸ್ಮಿನ್ಕಾಲೇ ಯದೃಚ್ಛಯಾ|

01077010c ಅಶೋಕವನಿಕಾಭ್ಯಾಶೇ ಶರ್ಮಿಷ್ಠಾಂ ಪ್ರಾಪ್ಯ ವಿಷ್ಠಿತಃ||

ಅದೇ ವೇಳೆಯಲ್ಲಿ ರಾಜನು ಹಾಗೆಯೇ ಹೊರಬಂದು ಅಶೋಕವನದ ಬಳಿ ಶರ್ಮಿಷ್ಠೆಯನ್ನು ಕಂಡು ಅವಳ ಎದುರೇ ನಿಂತನು.

01077011a ತಮೇಕಂ ರಹಿತೇ ದೃಷ್ಟ್ವಾ ಶರ್ಮಿಷ್ಠಾ ಚಾರುಹಾಸಿನೀ|

01077011c ಪ್ರತ್ಯುದ್ಗಮ್ಯಾಂಜಲಿಂ ಕೃತ್ವಾ ರಾಜಾನಂ ವಾಕ್ಯಮಬ್ರವೀತ್||

ಅವನೊಬ್ಬನೇ ಇರುವುದನ್ನು ನೋಡಿದ ಚಾರುಹಾಸಿನಿ ಶರ್ಮಿಷ್ಠೆಯು ಕೈಜೋಡಿಸಿ ವಂದಿಸಿ ರಾಜನಲ್ಲಿ ಕೇಳಿಕೊಂಡಳು:

01077012a ಸೋಮಸ್ಯೇಂದ್ರಸ್ಯ ವಿಷ್ಣೋರ್ವಾ ಯಮಸ್ಯ ವರುಣಸ್ಯ ವಾ|

01077012c ತವ ವಾ ನಾಹುಷ ಕುಲೇ ಕಃ ಸ್ತ್ರಿಯಂ ಸ್ಪ್ರಷ್ಟುಮರ್ಹತಿ||

“ನಾಹುಷ! ಸೋಮ, ಇಂದ್ರ, ವಿಷ್ಣು, ಯಮ, ವರುಣ ಮತ್ತು ನಿನ್ನ ಮನೆಯಲ್ಲಿರುವ ಸ್ತ್ರೀಯರನ್ನು ಯಾರುತಾನೆ ಮುಟ್ಟಲು ಪ್ರಯತ್ನಿಸುತ್ತಾರೆ?

01077013a ರೂಪಾಭಿಜನಶೀಲೈರ್ಹಿ ತ್ವಂ ರಾಜನ್ವೇತ್ಥ ಮಾಂ ಸದಾ|

01077013c ಸಾ ತ್ವಾಂ ಯಾಚೇ ಪ್ರಸಾದ್ಯಾಹಮೃತುಂ ದೇಹಿ ನರಾಧಿಪ||

ರಾಜನ್! ನೀನು ನನ್ನ ರೂಪ, ಜನ್ಮ ಮತ್ತು ನಡತೆಯ ಕುರಿತು ಸದಾ ತಿಳಿದಿದ್ದೀಯೆ. ಆದುದರಿಂದ ನರಾಧಿಪ! ನನ್ನ ಈ ಋತುವು ನಿಷ್ಫಲವಾಗದಂತೆ ಅನುಗ್ರಹಿಸು ಎಂದು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ.”

01077014 ಯಯಾತಿರುವಾಚ|

01077014a ವೇದ್ಮಿ ತ್ವಾಂ ಶೀಲಸಂಪನ್ನಾಂ ದೈತ್ಯಕನ್ಯಾಮನಿಂದಿತಾಂ|

01077014c ರೂಪೇ ಚ ತೇ ನ ಪಶ್ಯಾಮಿ ಸೂಚ್ಯಗ್ರಮಪಿ ನಿಂದಿತಂ||

ಯಯಾತಿಯು ಹೇಳಿದನು: “ನೀನು ಶೀಲಸಂಪನ್ನಳೂ, ಅನಿಂದಿತೆಯೂ ಆದ ದೈತ್ಯಕನ್ಯೆಯೆಂದು ನನಗೆ ತಿಳಿದಿದೆ. ನಿನ್ನ ರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ದೋಷವನ್ನೂ ನಾನು ಕಾಣುತ್ತಿಲ್ಲ.

01077015a ಅಬ್ರವೀದುಶನಾ ಕಾವ್ಯೋ ದೇವಯಾನೀಂ ಯದಾವಹಂ|

01077015c ನೇಯಮಾಹ್ವಯಿತವ್ಯಾ ತೇ ಶಯನೇ ವಾರ್ಷಪರ್ವಣೀ||

ಆದರೆ ದೇವಯಾನಿಯನ್ನು ವಿವಾಹವಾದ ಸಮಯದಲ್ಲಿ ಉಶನ ಕಾವ್ಯನು ವಾರ್ಷಪರ್ವಣಿಯನ್ನು ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ ಎಂಬ ನಿಯಮವನ್ನು ಹಾಕಿದ್ದನು.”

01077016 ಶರ್ಮಿಷ್ಠೋವಾಚ|

01077016a ನ ನರ್ಮಯುಕ್ತಂ ವಚನಂ ಹಿನಸ್ತಿ|

         ನ ಸ್ತ್ರೀಷು ರಾಜನ್ನ ವಿವಾಹಕಾಲೇ||

01077016c ಪ್ರಾಣಾತ್ಯಯೇ ಸರ್ವಧನಾಪಹಾರೇ |

         ಪಂಚಾನೃತಾನ್ಯಾಹುರಪಾತಕಾನಿ||

ಶರ್ಮಿಷ್ಠೆಯು ಹೇಳಿದಳು: “ರಾಜನ್! ಐದು ಪರಿಸ್ಥಿತಿಗಳಲ್ಲಿ - ಹಾಸ್ಯ, ಸ್ತ್ರೀ, ವಿವಾಹಕಾಲ, ಪ್ರಾಣಾಪತ್ತು ಮತ್ತು ಸರ್ವ ಧನವನ್ನೂ ಕಳೆದುಕೊಂಡ ಸಮಯ - ಹೇಳಿದ ಸುಳ್ಳು ಪಾಪವಲ್ಲ. 

01077017a ಪೃಷ್ಟಂ ತು ಸಾಕ್ಷ್ಯೇ ಪ್ರವದಂತಮನ್ಯಥಾ|

         ವದಂತಿ ಮಿಥ್ಯೋಪಹಿತಂ ನರೇಂದ್ರ||

01077017c ಏಕಾರ್ಥತಾಯಾಂ ತು ಸಮಾಹಿತಾಯಾಂ |

         ಮಿಥ್ಯಾ ವದಂತಮನೃತಂ ಹಿನಸ್ತಿ||

ನರೇಂದ್ರ! ಸಾಕ್ಷಿಯನ್ನು ಕೇಳಿದಾಗ ಸುಳ್ಳುಹೇಳುವವನನ್ನು ನಿಜವಾದ ಸುಳ್ಳುಗಾರನೆಂದು ಹೇಳುತ್ತಾರೆ. ಒಂದೇ ಉದ್ದೇಶವನ್ನು ನೆರವೇರಿಸಲೋಸುಗ ಹೇಳುವ ಸುಳ್ಳು ನಿಜವಾದ ಸುಳ್ಳು.”

01077018 ಯಯಾತಿರುವಾಚ|

01077018a ರಾಜಾ ಪ್ರಮಾಣಂ ಭೂತಾನಾಂ ಸ ನಶ್ಯೇತ ಮೃಷಾ ವದನ್|

01077018c ಅರ್ಥಕೃಚ್ಛ್ರಮಪಿ ಪ್ರಾಪ್ಯ ನ ಮಿಥ್ಯಾ ಕರ್ತುಮುತ್ಸಹೇ||

ಯಯಾತಿಯು ಹೇಳಿದನು: “ರಾಜನು ಪ್ರಜೆಗಳಿಗೆ ಪ್ರಮಾಣವಿದ್ದಂತೆ. ಅವನೇ ಸುಳ್ಳು ಹೇಳಿದರೆ ಎಲ್ಲವನ್ನೂ ಕಳೆದುಕೊಂಡಹಾಗೆ. ಬಹಳಷ್ಟು ಅನಿಷ್ಟವಾಗುತ್ತದೆ ಎಂದು ನಾನು ಸುಳ್ಳನ್ನು ಹೇಳ ಬಯಸುವುದಿಲ್ಲ.”

01077019 ಶರ್ಮಿಷ್ಠೋವಾಚ|

01077019a ಸಮಾವೇತೌ ಮತೌ ರಾಜನ್ಪತಿಃ ಸಖ್ಯಾಶ್ಚ ಯಃ ಪತಿಃ|

01077019c ಸಮಂ ವಿವಾಹಮಿತ್ಯಾಹುಃ ಸಖ್ಯಾ ಮೇಽಸಿ ಪತಿರ್ವೃತಃ||

ಶರ್ಮಿಷ್ಠೆಯು ಹೇಳಿದಳು: “ಸಖಿಯ ಪತಿ ಮತ್ತು ತನ್ನ ಪತಿ ಇವರೀರ್ವರಿಗೂ ಗಾಢ ಸಂಬಂಧವಿದೆ ಎಂದು ಹೇಳುತ್ತಾರೆ. ಸಖಿಯ ವಿವಾಹವೂ ತನ್ನ ವಿವಾಹವಿದ್ದಂತೆ ಎಂದೂ ಹೇಳುತ್ತಾರೆ. ನನ್ನ ಸಖಿಯ ಪತಿ ನಿನ್ನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ.”

01077020 ಯಯಾತಿರುವಾಚ|

01077020a ದಾತವ್ಯಂ ಯಾಚಮಾನೇಭ್ಯ ಇತಿ ಮೇ ವ್ರತಮಾಹಿತಂ|

01077020c ತ್ವಂ ಚ ಯಾಚಸಿ ಮಾಂ ಕಾಮಂ ಬ್ರೂಹಿ ಕಿಂ ಕರವಾಣಿ ತೇ||

ಯಯಾತಿಯು ಹೇಳಿದನು: “ಯಾಚಿಸಿದ್ದುದನ್ನು ಕೊಟ್ಟುಬಿಡಬೇಕು ಎನ್ನುವುದು ನಾನು ಪಾಲಿಸಿಕೊಂಡು ಬಂದ ವ್ರತ. ನನ್ನ ಪ್ರೀತಿಯನ್ನು ನೀನು ಯಾಚಿಸುತ್ತಿದ್ದೀಯೆ. ನಾನೇನು ಮಾಡಲಿ ಹೇಳು.”

01077021 ಶರ್ಮಿಷ್ಠೋವಾಚ|

01077021a ಅಧರ್ಮಾತ್ತ್ರಾಹಿ ಮಾಂ ರಾಜನ್ಧರ್ಮಂ ಚ ಪ್ರತಿಪಾದಯ|

01077021c ತ್ವತ್ತೋಽಪತ್ಯವತೀ ಲೋಕೇ ಚರೇಯಂ ಧರ್ಮಮುತ್ತಮಂ||

ಶರ್ಮಿಷ್ಠೆಯು ಹೇಳಿದಳು: “ರಾಜನ್! ಅಧರ್ಮದಿಂದ ನನ್ನನ್ನು ಉದ್ಧರಿಸು ಮತ್ತು ಧರ್ಮದಲ್ಲಿ ನಡೆಯುವಹಾಗೆ ಮಾಡು. ನಿನ್ನಿಂದ ಒಂದು ಮಗುವಿನ ತಾಯಿಯಾದರೆ ನಾನು ಈ ಲೋಕದಲ್ಲಿ ಉತ್ತಮ ಧರ್ಮವನ್ನು ಪರಿಪಾಲಿಸಿದಂತಾಗುತ್ತದೆ.

01077022a ತ್ರಯ ಏವಾಧನಾ ರಾಜನ್ಭಾರ್ಯಾ ದಾಸಸ್ತಥಾ ಸುತಃ|

01077022c ಯತ್ತೇ ಸಮಧಿಗಚ್ಛಂತಿ ಯಸ್ಯ ತೇ ತಸ್ಯ ತದ್ಧನಂ||

ರಾಜನ್! ಭಾರ್ಯೆ, ದಾಸಿ ಮತ್ತು ಸುತ ಈ ಮೂವರೂ ಅಧನರೆಂದು ಹೇಳಬಹುದು. ಅವರು ಗಳಿಸಿದ ಸಂಪತ್ತೆಲ್ಲವೂ ಅವರ ಒಡೆಯನಿಗೇ ಸೇರುತ್ತವೆ.

01077023a ದೇವಯಾನ್ಯಾ ಭುಜಿಷ್ಯಾಸ್ಮಿ ವಶ್ಯಾ ಚ ತವ ಭಾರ್ಗವೀ|

01077023c ಸಾ ಚಾಹಂ ಚ ತ್ವಯಾ ರಾಜನ್ಭರಣೀಯೇ ಭಜಸ್ವ ಮಾಂ||

ನಾನು ದೇವಯಾನಿಯ ದಾಸಿಯಾದರೆ ಭಾರ್ಗವಿಯು ನಿನ್ನ ವಶದಲ್ಲಿದ್ದಾಳೆ. ಅವಳು ಮತ್ತು ನಾನು ಇಬ್ಬರೂ ನಿನ್ನನ್ನೇ ಅವಲಂಬಿಸಿದ್ದೇವೆ. ರಾಜನ್! ನನ್ನನ್ನು ತೃಪ್ತಿಗೊಳಿಸು.””

01077024 ವೈಶಂಪಾಯನ ಉವಾಚ|

01077024a ಏವಮುಕ್ತಸ್ತು ರಾಜಾ ಸ ತಥ್ಯಮಿತ್ಯೇವ ಜಜ್ಞಿವಾನ್|

01077024c ಪೂಜಯಾಮಾಸ ಶರ್ಮಿಷ್ಠಾಂ ಧರ್ಮಂ ಚ ಪ್ರತ್ಯಪಾದಯತ್||

ವೈಶಂಪಾಯನನು ಹೇಳಿದನು: “ಅವಳು ಹೀಗೆ ಹೇಳಿದಾಗ ರಾಜನು ಅವಳಲ್ಲಿರುವ ಸತ್ಯವನ್ನು ತಿಳಿದನು. ಶರ್ಮಿಷ್ಠೆಯನ್ನು ಗೌರವದಿಂದ ಸ್ವೀಕರಿಸಿ, ಅವಳಿಗೆ ಧರ್ಮ ಮಾರ್ಗವನ್ನು ತೋರಿಸಿದನು.

01077025a ಸಮಾಗಮ್ಯ ಚ ಶರ್ಮಿಷ್ಠಾಂ ಯಥಾಕಾಮಮವಾಪ್ಯ ಚ|

01077025c ಅನ್ಯೋನ್ಯಮಭಿಸಂಪೂಜ್ಯ ಜಗ್ಮತುಸ್ತೌ ಯಥಾಗತಂ||

ಶರ್ಮಿಷ್ಠೆಯನ್ನು ಒಂದುಗೂಡಿ ಸುಖವನ್ನು ಪಡೆದನು. ನಂತರ ಪರಸ್ಪರರನ್ನು ಬೀಳ್ಕೊಂಡು ತಮ್ಮ ತಮ್ಮ ದಾರಿಯನ್ನು ಕೂಡಿದರು.

01077026a ತಸ್ಮಿನ್ಸಮಾಗಮೇ ಸುಭ್ರೂಃ ಶರ್ಮಿಷ್ಠಾ ಚಾರುಹಾಸಿನೀ|

01077026c ಲೇಭೇ ಗರ್ಭಂ ಪ್ರಥಮತಸ್ತಸ್ಮಾನ್ನೃಪತಿಸತ್ತಮಾತ್||

ಆ ಸಮಾಗಮದಿಂದ ಸುಭ್ರು, ಚಾರುಹಾಸಿನಿ ಶರ್ಮಿಷ್ಠೆಯು ನೃಪತಿ ಸತ್ತಮನಿಂದ ಪ್ರಥಮ ಗರ್ಭವನ್ನು ಧರಿಸಿದಳು.

01077027a ಪ್ರಜಜ್ಞೇ ಚ ತತಃ ಕಾಲೇ ರಾಜನ್ರಾಜೀವಲೋಚನಾ|

01077027c ಕುಮಾರಂ ದೇವಗರ್ಭಾಭಂ ರಾಜೀವನಿಭಲೋಚನಂ||

ಕಾಲಪ್ರಾಪ್ತವಾದಾಗ ಆ ರಾಜೀವಲೋಚನೆಯು ದೇವಗರ್ಭ ಕಾಂತಿಯನ್ನು ಹೊಂದಿದ ರಾಜೀವಲೋಚನ ಕುಮಾರನಿಗೆ ಜನ್ಮವಿತ್ತಳು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಸಪ್ತಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೇಳನೆಯ ಅಧ್ಯಾಯವು.

Comments are closed.