Adi Parva: Chapter 76

ಆದಿ ಪರ್ವ: ಸಂಭವ ಪರ್ವ

೭೬

ದೇವಯಾನಿಯು ಯಯಾತಿಯಲ್ಲಿ ಮದುವೆಯಾಗಲು ಕೇಳಿಕೊಳ್ಳುವುದು (೧-೧೫). ಯಯಾತಿಯು ತಾನು ಬ್ರಾಹ್ಮಣನಲ್ಲವೆಂದು ಮದುವೆಗೆ ಒಪ್ಪದಿರುವುದು (೧೬-೨೫). ದೇವಯಾನಿಯು ಹಠ ಹಿಡಿದು ತಂದೆಯು ತನ್ನನ್ನು ಯಯಾತಿಗೆ ಮದುವೆಯಲ್ಲಿ ಕೊಡುವಂತೆ ಮಾಡುವುದು, ಶರ್ಮಿಷ್ಠೆಯು ದೇವಯಾನಿಯುನ್ನು ಹಿಂಬಾಲಿಸಿ ಹೋಗುವುದು (೨೬-೩೫).

01076001 ವೈಶಂಪಾಯನ ಉವಾಚ|

01076001a ಅಥ ದೀರ್ಘಸ್ಯ ಕಾಲಸ್ಯ ದೇವಯಾನೀ ನೃಪೋತ್ತಮ|

01076001c ವನಂ ತದೇವ ನಿರ್ಯಾತಾ ಕ್ರೀಡಾರ್ಥಂ ವರವರ್ಣಿನೀ||

ವೈಶಂಪಾಯನನು ಹೇಳಿದನು: “ನೃಪೋತ್ತಮ! ದೀರ್ಘಕಾಲದ ನಂತರ ವರವರ್ಣಿನಿ ದೇವಯಾನಿಯು ಕ್ರೀಡಾರ್ಥವಾಗಿ ವನವನ್ನು ಸೇರಿದಳು.

01076002a ತೇನ ದಾಸೀಸಹಸ್ರೇಣ ಸಾರ್ಧಂ ಶರ್ಮಿಷ್ಠಯಾ ತದಾ|

01076002c ತಮೇವ ದೇಶಂ ಸಂಪ್ರಾಪ್ತಾ ಯಥಾಕಾಮಂ ಚಚಾರ ಸಾ|

01076002e ತಾಭಿಃ ಸಖೀಭಿಃ ಸಹಿತಾ ಸರ್ವಾಭಿರ್ಮುದಿತಾ ಭೃಶಂ||

ಶರ್ಮಿಷ್ಠೆಯನ್ನೂ ಒಳಗೊಂಡ ತನ್ನ ಸಾವಿರ ದಾಸಿಯರೊಂದಿಗೆ ಅದೇ ಸ್ಥಳವನ್ನು ಸೇರಿ ಅಲ್ಲಿ ತನಗಿಷ್ಟವಾದ ರೀತಿಯಲ್ಲಿ ತಿರುಗಾಡಿದಳು. ಸರ್ವ ಸಖಿಯರಿಂದ ಸೇವಿಸಲ್ಪಟ್ಟ ಅವಳು ಅತೀವ ಸಂತೋಷದಿಂದಿದ್ದಳು.

01076003a ಕ್ರೀಡಂತ್ಯೋಽಭಿರತಾಃ ಸರ್ವಾಃ ಪಿಬಂತ್ಯೋ ಮಧುಮಾಧವೀಂ|

01076003c ಖಾದಂತ್ಯೋ ವಿವಿಧಾನ್ ಭಕ್ಷ್ಯಾನ್ವಿದಶಂತ್ಯಃ ಫಲಾನಿ ಚ||

ಹೂವಿನ ಮಕರಂದವನ್ನು ಸವಿಯುತ್ತಾ, ಹಣ್ಣುಗಳನ್ನು ಕಚ್ಚಿ ತಿನ್ನುತ್ತಾ, ವಿವಿಧ ಭಕ್ಷ್ಯಗಳನ್ನು ಸೇವಿಸುತ್ತಾ ಅವರೆಲ್ಲರೂ ಆಡುತ್ತಿದ್ದರು.

01076004a ಪುನಶ್ಚ ನಾಹುಷೋ ರಾಜಾ ಮೃಗಲಿಪ್ಸುರ್ಯದೃಚ್ಛಯಾ|

01076004c ತಮೇವ ದೇಶಂ ಸಂಪ್ರಾಪ್ತೋ ಜಲಾರ್ಥೀ ಶ್ರಮಕರ್ಶಿತಃ||

ಪುನಃ ಬೇಟೆಯಾಡಲು ಜಿಂಕೆಗಳನ್ನು ಅರಸುತ್ತಿದ್ದ ರಾಜ ನಾಹುಷನು ಆಯಾಸಗೊಂಡು ಬಾಯಾರಿ ನೀರನ್ನು ಹುಡುಕುತ್ತಾ ಅದೇ ಸ್ಥಳಕ್ಕೆ ಬಂದನು. 

01076005a ದದೃಶೇ ದೇವಯಾನೀಂ ಚ ಶರ್ಮಿಷ್ಠಾಂ ತಾಶ್ಚ ಯೋಷಿತಃ|

01076005c ಪಿಬಂತೀರ್ಲಲಮಾನಾಶ್ಚ ದಿವ್ಯಾಭರಣಭೂಷಿತಾಃ||

ಅಲ್ಲಿ ಅವನು ಕುಡಿದು ಆಡುತ್ತಿದ್ದ ದಿವ್ಯಾಭರಣಭೂಷಿತೆ ದೇವಯಾನಿ-ಶರ್ಮಿಷ್ಠೆಯರನ್ನೂ ಮತ್ತು ಇತರ ಸ್ತ್ರೀಯರನ್ನೂ ಕಂಡನು.

01076006a ಉಪವಿಷ್ಟಾಂ ಚ ದದೃಶೇ ದೇವಯಾನೀಂ ಶುಚಿಸ್ಮಿತಾಂ|

01076006c ರೂಪೇಣಾಪ್ರತಿಮಾಂ ತಾಸಾಂ ಸ್ತ್ರೀಣಾಂ ಮಧ್ಯೇ ವರಾಂಗನಾಂ|

01076006e ಶರ್ಮಿಷ್ಠಯಾ ಸೇವ್ಯಮಾನಾಂ ಪಾದಸಂವಾಹನಾದಿಭಿಃ||

ಆ ಎಲ್ಲ ವರಾಂಗನೆ ಸ್ತ್ರೀಯರ ಮಧ್ಯದಲ್ಲಿ, ಶರ್ಮಿಷ್ಠೆಯಿಂದ ಕಾಲುಗಳನ್ನು ಒತ್ತಿಸಿ ಸೇವೆ ಮಾಡಿಸಿಕೊಳ್ಳುತ್ತಾ ಕುಳಿತಿದ್ದ ಅಪ್ರತಿಮ ರೂಪಿಣಿ ಶುಚಿಸ್ಮಿತೆ ದೇವಯಾನಿಯನ್ನು ಅವನು ಕಂಡನು.

01076007 ಯಯಾತಿರುವಾಚ|

01076007a ದ್ವಾಭ್ಯಾಂ ಕನ್ಯಾಸಹಸ್ರಾಭ್ಯಾಂ ದ್ವೇ ಕನ್ಯೇ ಪರಿವಾರಿತೇ|

01076007c ಗೋತ್ರೇ ಚ ನಾಮನೀ ಚೈವ ದ್ವಯೋಃ ಪೃಚ್ಛಾಮಿ ವಾಮಹಂ||

ಯಯಾತಿಯು ಹೇಳಿದನು: “ಎರಡು ಸಾವಿರ ಕನ್ಯೆಯರಿಂದ ಸುತ್ತುವರೆಯಲ್ಪಟ್ಟಿರುವ ನೀವಿಬ್ಬರು ಕನ್ಯೆಯರ ಗೋತ್ರ ಮತ್ತು ಹೆಸರುಗಳೇನೆಂದು ಕೇಳಬಹುದೇ?”

01076008 ದೇವಯಾನ್ಯುವಾಚ

01076008a ಆಖ್ಯಾಸ್ಯಾಮ್ಯಹಮಾದತ್ಸ್ವ ವಚನಂ ಮೇ ನರಾಧಿಪ|

01076008c ಶುಕ್ರೋ ನಾಮಾಸುರಗುರುಃ ಸುತಾಂ ಜಾನೀಹಿ ತಸ್ಯ ಮಾಂ||

ದೇವಯಾನಿಯು ಹೇಳಿದಳು: “ನರಾಧಿಪ! ನಾನು ಹೇಳುವ ಮಾತುಗಳನ್ನು ಕೇಳು. ನಾನು ಶುಕ್ರ ಎಂಬ ಹೆಸರಿನ ಅಸುರಗುರುವಿನ ಮಗಳು.

01076009a ಇಯಂ ಚ ಮೇ ಸಖೀ ದಾಸೀ ಯತ್ರಾಹಂ ತತ್ರ ಗಾಮಿನೀ|

01076009c ದುಹಿತಾ ದಾನವೇಂದ್ರಸ್ಯ ಶರ್ಮಿಷ್ಠಾ ವೃಷಪರ್ವಣಃ||

ನಾನೆಲ್ಲಿದ್ದರೂ ಅಲ್ಲಿಗೆ ಬರುವ ಈ ಸಖಿಯು ನನ್ನ ದಾಸಿ; ದಾನವೇಂದ್ರ ವೃಷಪರ್ವನ ಮಗಳು ಶರ್ಮಿಷ್ಠಾ.”

01076010 ಯಯಾತಿರುವಾಚ|

01076010a ಕಥಂ ನು ತೇ ಸಖೀ ದಾಸೀ ಕನ್ಯೇಯಂ ವರವರ್ಣಿನೀ|

01076010c ಅಸುರೇಂದ್ರಸುತಾ ಸುಭ್ರು ಪರಂ ಕೌತೂಹಲಂ ಹಿ ಮೇ||

ಯಯಾತಿಯು ಹೇಳಿದನು: “ಅಸುರೇಂದ್ರನ ಮಗಳು, ಸುಂದರ ಹುಬ್ಬಿನ ವರವರ್ಣಿನಿ ಈ ಕನ್ಯೆಯು ನಿನಗೆ ಸಖೀ ದಾಸಿ ಹೇಗಾದಳು ಎನ್ನುವುದೇ ನನಗೆ ಪರಮ ಕುತೂಹಲವೆನಿಸುತ್ತದೆ.”

01076011 ದೇವಯಾನ್ಯುವಾಚ|

01076011a ಸರ್ವ ಏವ ನರವ್ಯಾಘ್ರ ವಿಧಾನಮನುವರ್ತತೇ|

01076011c ವಿಧಾನವಿಹಿತಂ ಮತ್ವಾ ಮಾ ವಿಚಿತ್ರಾಃ ಕಥಾಃ ಕೃಥಾಃ||

ದೇವಯಾನಿಯು ಹೇಳಿದಳು: “ನರವ್ಯಾಘ್ರ! ಸರ್ವವೂ ವಿಧಿಯನ್ನು ಅನುಸರಿಸಿಯೇ ನಡೆಯುತ್ತದೆ. ಇದೂ ಕೂಡ ವಿಧಿವಿಹಿತವೆಂದು ಸ್ವೀಕರಿಸಿ, ವಿಚಿತ್ರ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸು.

01076012a ರಾಜವದ್ರೂಪವೇಷೌ ತೇ ಬ್ರಾಹ್ಮೀಂ ವಾಚಂ ಬಿಭರ್ಷಿ ಚ|

01076012c ಕಿಮ್ನಾಮಾ ತ್ವಂ ಕುತಶ್ಚಾಸಿ ಕಸ್ಯ ಪುತ್ರಶ್ಚ ಶಂಸ ಮೇ||

ರೂಪವೇಷದಲ್ಲಿ ನೀನು ರಾಜನಂತಿದ್ದೀಯೆ; ನಿನ್ನ ಮಾತುಗಳು ವೇದವಾಖ್ಯಗಳಂತಿವೆ. ನಿನ್ನ ಹೆಸರೇನು, ನೀನು ಎಲ್ಲಿಯವನು ಮತ್ತು ಯಾರ ಮಗನೆಂದು ಹೇಳು.”

01076013 ಯಯಾತಿರುವಾಚ|

01076013a ಬ್ರಹ್ಮಚರ್ಯೇಣ ಕೃತ್ಸ್ನೋ ಮೇ ವೇದಃ ಶ್ರುತಿಪಥಂ ಗತಃ|

01076013c ರಾಜಾಹಂ ರಾಜಪುತ್ರಶ್ಚ ಯಯಾತಿರಿತಿ ವಿಶ್ರುತಃ||

ಯಯಾತಿಯು ಹೇಳಿದನು: “ಬ್ರಹ್ಮಚರ್ಯದ ದಿನಗಳಲ್ಲಿ ವೇದವು ನನ್ನ ಕಿವಿಗಳನ್ನು ಹೊಕ್ಕವು. ರಾಜಪುತ್ರನಾದ ನಾನೊಬ್ಬ ರಾಜ. ಯಾಯಾತಿಯೆಂದು ಕರೆಯುತ್ತಾರೆ.”

01076014 ದೇವಯಾನ್ಯುವಾಚ|

01076014a ಕೇನಾಸ್ಯರ್ಥೇನ ನೃಪತೇ ಇಮಂ ದೇಶಮುಪಾಗತಃ|

01076014c ಜಿಘೃಕ್ಷುರ್ವಾರಿಜಂ ಕಿಂ ಚಿದಥ ವಾ ಮೃಗಲಿಪ್ಸಯಾ||

ದೇವಯಾನಿಯು ಹೇಳಿದಳು: “ನೃಪ! ನೀನು ಯಾವ ಕಾರಣಕ್ಕಾಗಿ ಈ ಸ್ಥಳಕ್ಕೆ ಬಂದಿದ್ದೀಯೆ - ಕಮಲಗಳನ್ನು ಕೊಯ್ಯಲೋ ಅಥವಾ ಮೃಗಗಳ ಬೇಟೆಗೆಂದೋ?”

01076015 ಯಯಾತಿರುವಾಚ|

01076015a ಮೃಗಲಿಪ್ಸುರಹಂ ಭದ್ರೇ ಪಾನೀಯಾರ್ಥಮುಪಾಗತಃ|

01076015c ಬಹು ಚಾಪ್ಯನುಯುಕ್ತೋಽಸ್ಮಿ ತನ್ಮಾನುಜ್ಞಾತುಮರ್ಹಸಿ||

ಯಯಾತಿಯು ಹೇಳಿದನು: “ಭದ್ರೇ! ಬೇಟೆಯಾಡಲು ಬಂದ ನಾನು ಕುಡಿಯುವ ನೀರಿಗಾಗಿ ಇಲ್ಲಿಗೆ ಬಂದಿದ್ದೇನೆ. ನೀನು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೀಯೆ. ನನಗೆ ಹಿಂದಿರುಗಲು ಅಪ್ಪಣೆ ಕೊಡು.”

01076016 ದೇವಯಾನ್ಯುವಾಚ|

01076016a ದ್ವಾಭ್ಯಾಂ ಕನ್ಯಾಸಹಸ್ರಾಭ್ಯಾಂ ದಾಸ್ಯಾ ಶರ್ಮಿಷ್ಠಯಾ ಸಹ|

01076016c ತ್ವದಧೀನಾಸ್ಮಿ ಭದ್ರಂ ತೇ ಸಖಾ ಭರ್ತಾ ಚ ಮೇ ಭವ||

ದೇವಯಾನಿಯು ಹೇಳಿದಳು: “ಈ ನನ್ನ ದಾಸಿ ಶರ್ಮಿಷ್ಠೆ ಮತ್ತು ಈ ಸಹಸ್ರ ಕನ್ಯೆಯರೊಡನೆ ನಾನೂ ಕೂಡ ನಿನ್ನ ಅಧೀನಳಾಗಿದ್ದೇನೆ. ನಿನಗೆ ಮಂಗಳವಾಗಲಿ. ನನ್ನ ಸಖ ಮತ್ತು ಪತಿಯಾಗು.”

01076017 ಯಯಾತಿರುವಾಚ|

01076017a ವಿದ್ಧ್ಯೌಶನಸಿ ಭದ್ರಂ ತೇ ನ ತ್ವಾಮರ್ಹೋಽಸ್ಮಿ ಭಾಮಿನಿ|

01076017c ಅವಿವಾಹ್ಯಾ ಹಿ ರಾಜಾನೋ ದೇವಯಾನಿ ಪಿತುಸ್ತವ||

ಯಯಾತಿಯು ಹೇಳಿದನು: “ಉಶನನ ಮಗಳೇ! ಭಾಮಿನೀ! ನಿನಗೆ ಮಂಗಳವಾಗಲಿ. ನಾನು ನಿನ್ನ ಅರ್ಹನಲ್ಲ. ದೇವಯಾನಿ! ನಿನ್ನ ತಂದೆಯು ನಿನ್ನನ್ನು ರಾಜನಿಗೆ ವಿವಾಹ ಮಾಡಿಸುವುದಿಲ್ಲ.”

01076018  ದೇವಯಾನ್ಯುವಾಚ|

01076018a ಸಂಸೃಷ್ಟಂ ಬ್ರಹ್ಮಣಾ ಕ್ಷತ್ರಂ ಕ್ಷತ್ರಂ ಚ ಬ್ರಹ್ಮಸಂಹಿತಂ|

01076018c ಋಷಿಶ್ಚ ಋಷಿಪುತ್ರಶ್ಚ ನಾಹುಷಾಂಗ ವಹಸ್ವ ಮಾಂ||

ದೇವಯಾನಿಯು ಹೇಳಿದಳು: “ಈ ಮೊದಲೂ ಕೂಡ ಬ್ರಾಹ್ಮಣರು ಕ್ಷತ್ರಿಯರನ್ನೂ ಕ್ರತ್ರಿಯರು ಬ್ರಾಹ್ಮಣರನ್ನೂ ಸೇರಿದ್ದಿದೆ. ಋಷಿಪುತ್ರನಾದ ನೀನೂ ಕೂಡ ಓರ್ವ ಋಷಿಯೇ. ನಾಹುಷ! ನನ್ನನ್ನು ವರಿಸು.”

01076019 ಯಯಾತಿರುವಾಚ|

01076019a ಏಕದೇಹೋದ್ಭವಾ ವರ್ಣಾಶ್ಚತ್ವಾರೋಽಪಿ ವರಾಂಗನೇ|

01076019c ಪೃಥಗ್ಧರ್ಮಾಃ ಪೃಥಕ್ಶೌಚಾಸ್ತೇಷಾಂ ತು ಬ್ರಾಹ್ಮಣೋ ವರಃ||

ಯಯಾತಿಯು ಹೇಳಿದನು: “ವರಾಂಗನೇ! ನಾಲ್ಕು ವರ್ಣಗಳೂ ಒಂದೇ ದೇಹದಿಂದ ಉದ್ಭವವಾಗಿದ್ದರೂ ಅವರ ಧರ್ಮಗಳು ಬೇರೆ ಮತ್ತು ಅವರ ಶುದ್ಧತೆ ಬೇರೆ. ಅವರೆಲ್ಲರಲ್ಲಿ ಬ್ರಾಹ್ಮಣನೇ ಶ್ರೇಷ್ಠ.”

01076020 ದೇವಯಾನ್ಯುವಾಚ|

01076020a ಪಾಣಿಧರ್ಮೋ ನಾಹುಷಾಯಂ ನ ಪುಂಭಿಃ ಸೇವಿತಃ ಪುರಾ|

01076020c ತಂ ಮೇ ತ್ವಮಗ್ರಹೀರಗ್ರೇ ವೃಣೋಮಿ ತ್ವಾಮಹಂ ತತಃ||

ದೇವಯಾನಿಯು ಹೇಳಿದನು: “ನಾಹುಷ! ಈ ನನ್ನ ಕೈಗಳನ್ನು ಮೊದಲು ಬೇರೆ ಯಾರೂ ಮುಟ್ಟಿರಲಿಲ್ಲ. ಮೊದಲಬಾರಿ ನನ್ನ ಕೈ ಹಿಡಿದವನು ನೀನೇ. ಆದುದರಿಂದ ನಿನ್ನನ್ನು ನಾನು ವರಿಸುತ್ತೇನೆ.

01076021a ಕಥಂ ನು ಮೇ ಮನಸ್ವಿನ್ಯಾಃ ಪಾಣಿಮನ್ಯಃ ಪುಮಾನ್ಸ್ಪೃಶೇತ್|

01076021c ಗೃಹೀತಂ ಋಷಿಪುತ್ರೇಣ ಸ್ವಯಂ ವಾಪ್ಯೃಷಿಣಾ ತ್ವಯಾ||

ಸ್ವಾಭಿಮಾನಿ ನಾನು ಋಷಿಪುತ್ರನೂ ಸ್ವಯಂ ಋಷಿಯೂ ಆದ ನೀನು ಹಿಡಿದ ಈ ಕೈಯನ್ನು ಬೇರೆಯವರು ಹಿಡಿಯುವುದನ್ನು ಹೇಗೆ ತಾನೆ ಸಹಿಸಲಿ?”

01076022 ಯಯಾತಿರುವಾಚ|

01076022a ಕ್ರುದ್ಧಾದಾಶೀವಿಷಾತ್ಸರ್ಪಾಜ್ಜ್ವಲನಾತ್ಸರ್ವತೋಮುಖಾತ್|

01076022c ದುರಾಧರ್ಷತರೋ ವಿಪ್ರಃ ಪುರುಷೇಣ ವಿಜಾನತಾ||

ಯಯಾತಿಯು ಹೇಳಿದನು: “ಘೋರವಿಷ ಸರ್ಪ ಮತ್ತು ಎಲ್ಲಕಡೆ ಉರಿಯುತ್ತಿರುವ ಬೆಂಕಿಗಿಂತಲೂ ಬ್ರಾಹ್ಮಣರಿಂದ ದೂರವಿರುವುದು ಹೆಚ್ಚು ಒಳ್ಳೆಯದು ಎಂದು ತಿಳಿದವರು ಹೇಳುತ್ತಾರೆ.”

01076023 ದೇವಯಾನ್ಯುವಾಚ|

01076023a ಕಥಮಾಶೀವಿಷಾತ್ಸರ್ಪಾಜ್ಜ್ವಲನಾತ್ಸರ್ವತೋಮುಖಾತ್|

01076023c ದುರಾಧರ್ಷತರೋ ವಿಪ್ರ ಇತ್ಯಾತ್ಥ ಪುರುಷರ್ಷಭ||

ದೇವಯಾನಿಯು ಹೇಳಿದನು: “ಪುರುಷರ್ಷಭ! ವಿಷಸರ್ಪ ಮತ್ತು ಸರ್ವತೋಮುಖ ಅಗ್ನಿಗಿಂತ ವಿಪ್ರರಿಂದ ದೂರವಿರುವುದು ಒಳ್ಳೆಯದೆಂದು ಏಕೆ ಹೇಳುತ್ತಿದ್ದೀಯೆ?”

01076024 ಯಯಾತಿರುವಾಚ|

01076024a ಏಕಮಾಶೀವಿಷೋ ಹಂತಿ ಶಸ್ತ್ರೇಣೈಕಶ್ಚ ವಧ್ಯತೇ|

01076024c ಹಂತಿ ವಿಪ್ರಃ ಸರಾಷ್ಟ್ರಾಣಿ ಪುರಾಣ್ಯಪಿ ಹಿ ಕೋಪಿತಃ||

ಯಯಾತಿಯು ಹೇಳಿದನು: “ವಿಷಸರ್ಪವೂ ಒಬ್ಬನನ್ನೇ ಕೊಲ್ಲುತ್ತದೆ, ಖಡ್ಗವೂ ಒಬ್ಬನನ್ನೇ ಕೊಲ್ಲುತ್ತದೆ. ಆದರೆ ಕೋಪಿತ ಬ್ರಾಹ್ಮಣನು ಇಡೀ ರಾಷ್ಟ್ರ ಅಥವಾ ಪುರವನ್ನೇ ನಾಶಪಡಿಸಬಲ್ಲ.

01076025a ದುರಾಧರ್ಷತರೋ ವಿಪ್ರಸ್ತಸ್ಮಾದ್ಭೀರು ಮತೋ ಮಮ|

01076025c ಅತೋಽದತ್ತಾಂ ಚ ಪಿತ್ರಾ ತ್ವಾಂ ಭದ್ರೇ ನ ವಿವಹಾಮ್ಯಹಂ||

ಆದುದರಿಂದ ಸುಂದರಿ! ವಿಪ್ರನನ್ನು ಎದುರಿಸುವುದು ಬಹಳ ಕಷ್ಟವೆಂದು ನನ್ನ ಅನಿಸಿಕೆ. ಭದ್ರೇ! ನಿನ್ನ ತಂದೆಯು ನಿನ್ನನ್ನು ನನಗೆ ಕೊಡದೇ ನಾನು ನಿನ್ನನ್ನು ಮದುವೆಯಾಗಲಾರೆ.”

01076026 ದೇವಯಾನ್ಯುವಾಚ|

01076026a ದತ್ತಾಂ ವಹಸ್ವ ಪಿತ್ರಾ ಮಾಂ ತ್ವಂ ಹಿ ರಾಜನ್ವೃತೋ ಮಯಾ|

01076026c ಅಯಾಚತೋ ಭಯಂ ನಾಸ್ತಿ ದತ್ತಾಂ ಚ ಪ್ರತಿಗೃಹ್ಣತಃ||

ದೇವಯಾನಿಯು ಹೇಳಿದಳು: “ತಂದೆಯು ನನ್ನನ್ನು ನಿನಗೆ ಕೊಟ್ಟಾಗಲೇ ವರಿಸು. ರಾಜನ್! ನಾನು ಈಗಾಗಲೇ ನಿನ್ನನ್ನು ವರಿಸಿಯಾಗಿದೆ. ಕೇಳದೇ ಇದ್ದುದನ್ನು ಕೊಟ್ಟಾಗ ಸ್ವೀಕರಿಸುವುದರಲ್ಲಿ ಯಾವ ಭಯವೂ ಇಲ್ಲ.””

01076027 ವೈಶಂಪಾಯನ ಉವಾಚ|

01076027a ತ್ವರಿತಂ ದೇವಯಾನ್ಯಾಥ ಪ್ರೇಷಿತಂ ಪಿತುರಾತ್ಮನಃ|

01076027c ಶ್ರುತ್ವೈವ ಚ ಸ ರಾಜಾನಂ ದರ್ಶಯಾಮಾಸ ಭಾರ್ಗವಃ||

ವೈಶಂಪಾಯನನು ಹೇಳಿದನು: “ತಕ್ಷಣವೇ ದೇವಯಾನಿಯು ತನ್ನ ತಂದೆಗೆ ವಿಷಯವನ್ನು ಹೇಳಿ ಕಳುಹಿಸಿದಳು. ವಿಷಯ ತಿಳಿದ ಭಾರ್ಗವನು ರಾಜನನ್ನು ಕಾಣಲು ಬಂದನು.

01076028a ದೃಷ್ಟ್ವೈವ ಚಾಗತಂ ಶುಕ್ರಂ ಯಯಾತಿಃ ಪೃಥಿವೀಪತಿಃ|

01076028c ವವಂದೇ ಬ್ರಾಹ್ಮಣಂ ಕಾವ್ಯಂ ಪ್ರಾಂಜಲಿಃ ಪ್ರಣತಃ ಸ್ಥಿತಃ||

ಪೃಥಿವೀಪತಿ ಯಯಾತಿಯು ಆಗಮಿಸಿದ ಬ್ರಾಹ್ಮಣ ಕಾವ್ಯ ಶುಕ್ರನನ್ನು ಕಂಡು ಅಂಜಲೀ ಬದ್ಧನಾಗಿ ನಮಸ್ಕರಿಸಿ, ಪ್ರಣೀತನಾಗಿ ನಿಂತುಕೊಂಡನು.

01076029 ದೇವಯಾನ್ಯುವಾಚ|

01076029a ರಾಜಾಯಂ ನಾಹುಷಸ್ತಾತ ದುರ್ಗೇ ಮೇ ಪಾಣಿಮಗ್ರಹೀತ್|

01076029c ನಮಸ್ತೇ ದೇಹಿ ಮಾಮಸ್ಮೈ ನಾನ್ಯಂ ಲೋಕೇ ಪತಿಂ ವೃಣೇ||

ದೇವಯಾನಿಯು ಹೇಳಿದಳು: “ತಂದೇ! ನಾನು ದುಃಖದಲ್ಲಿದ್ದಾಗ ನನ್ನ ಕೈಹಿಡಿದ ಇವನು ರಾಜ ನಹುಷನ ಪುತ್ರ. ಇವನಿಗೇ ನನ್ನನ್ನು ಕೊಡು. ಈ ಲೋಕಗಳಲ್ಲಿ ಬೇರೆ ಯಾರನ್ನೂ ನನ್ನ ಪತಿಯನ್ನಾಗಿ ವರಿಸುವುದಿಲ್ಲ.””

01076030 ಶುಕ್ರ ಉವಾಚ|

01076030a ವೃತೋಽನಯಾ ಪತಿರ್ವೀರ ಸುತಯಾ ತ್ವಂ ಮಮೇಷ್ಟಯಾ|

01076030c ಗೃಹಾಣೇಮಾಂ ಮಯಾ ದತ್ತಾಂ ಮಹಿಷೀಂ ನಹುಷಾತ್ಮಜ||

ಶುಕ್ರನು ಹೇಳಿದನು: “ವೀರ! ನನ್ನ ಪ್ರೀತಿಯ ಮಗಳು ನಿನ್ನನ್ನು ಪತಿಯನ್ನಾಗಿ ವರಿಸಿದ್ದಾಳೆ. ನಹುಷಾತ್ಮಜ! ನಾನು ನಿನಗೆ ನೀಡುತ್ತಿರುವ ಇವಳನ್ನು ನಿನ್ನ ರಾಣಿಯನ್ನಾಗಿ ಸ್ವೀಕರಿಸು.”

01076031 ಯಯಾತಿರುವಾಚ|

01076031a ಅಧರ್ಮೋ ನ ಸ್ಪೃಶೇದೇವಂ ಮಹಾನ್ಮಾಮಿಹ ಭಾರ್ಗವ|

01076031c ವರ್ಣಸಂಕರಜೋ ಬ್ರಹ್ಮನ್ನಿತಿ ತ್ವಾಂ ಪ್ರವೃಣೋಮ್ಯಹಂ||

ಯಯಾತಿಯು ಹೇಳಿದನು: “ಭಾರ್ಗವ! ಬ್ರಹ್ಮನ್! ವರ್ಣಸಂಕರ ಪಾಪವು ನನ್ನನ್ನು ಮುಟ್ಟದಿರಲಿ ಎನ್ನುವ ವರವನ್ನು ನನಗೆ ಅನುಗ್ರಹಿಸು.”

01076032 ಶುಕ್ರ ಉವಾಚ|

01076032a ಅಧರ್ಮಾತ್ತ್ವಾಂ ವಿಮುಂಚಾಮಿ ವರಯಸ್ವ ಯಥೇಪ್ಷಿತಂ|

01076032c ಅಸ್ಮಿನ್ವಿವಾಹೇ ಮಾ ಗ್ಲಾಸೀರಹಂ ಪಾಪಂ ನುದಾಮಿ ತೇ||

ಶುಕ್ರನು ಹೇಳಿದನು: “ಅಧರ್ಮದಿಂದ ನಿನ್ನನ್ನು ವಿಮೋಚಿಸುತ್ತೇನೆ. ನಿನಗಿಷ್ಟವಾದಂತೆ ಅವಳನ್ನು ವರಿಸು. ಈ ವಿವಾಹದಿಂದ ಹಿಂಜರಿಯಬೇಡ. ನಿನ್ನನ್ನು ಪಾಪಗಳಿಂದ ವಿಮುಕ್ತನನ್ನಾಗಿ ಮಾಡುತ್ತೇನೆ.

01076033a ವಹಸ್ವ ಭಾರ್ಯಾಂ ಧರ್ಮೇಣ ದೇವಯಾನೀಂ ಸುಮಧ್ಯಮಾಂ|

01076033c ಅನಯಾ ಸಹ ಸಂಪ್ರೀತಿಮತುಲಾಂ ಸಮವಾಪ್ಸ್ಯಸಿ||

ನಿನ್ನ ಹೆಂಡತಿ ಸುಮಧ್ಯಮೆ ದೇವಯಾನಿಯನ್ನು ಧರ್ಮದಿಂದ ನೋಡಿಕೋ. ಇವಳ ಜೊತೆಗೂಡಿ ನೀನು ಅತುಲ ಸಂತೋಷವನ್ನು ಹೊಂದುತ್ತೀಯೆ.

01076034a ಇಯಂ ಚಾಪಿ ಕುಮಾರೀ ತೇ ಶರ್ಮಿಷ್ಠಾ ವಾರ್ಷಪರ್ವಣೀ|

01076034c ಸಂಪೂಜ್ಯಾ ಸತತಂ ರಾಜನ್ಮಾ ಚೈನಾಂ ಶಯನೇ ಹ್ವಯೇಃ||

ರಾಜನ್! ವಾರ್ಷಪರ್ವಣೀ ಕುಮಾರಿ ಶರ್ಮಿಷ್ಠೆಯನ್ನೂ ಸತತ ಗೌರವದಿಂದ ಕಾಣು. ಅವಳನ್ನು ಎಂದೂ ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ.””

01076035 ವೈಶಂಪಾಯನ ಉವಾಚ|

01076035a ಏವಮುಕ್ತೋ ಯಯಾತಿಸ್ತು ಶುಕ್ರಂ ಕೃತ್ವಾ ಪ್ರದಕ್ಷಿಣಂ|

01076035c ಜಗಾಮ ಸ್ವಪುರಂ ಹೃಷ್ಟೋ ಅನುಜ್ಞಾತೋ ಮಹಾತ್ಮನಾ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಯಯಾತಿಯು ಮಹಾತ್ಮ ಶುಕ್ರನಿಗೆ ಪ್ರದಕ್ಷಿಣೆ ಮಾಡಿ, ಅಪ್ಪಣೆಯನ್ನು ಪಡೆದು ಸಂತೋಷದಿಂದ ತನ್ನ ಪುರಕ್ಕೆ ತೆರಳಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಷಟ್‌ಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತಾರನೆಯ ಅಧ್ಯಾಯವು.

Comments are closed.