Adi Parva: Chapter 72

ಆದಿ ಪರ್ವ: ಸಂಭವ ಪರ್ವ

೭೨

ದೇವಯಾನಿಯು ಕಚನನ್ನು ಮದುವೆಯಾಗಲು ಕೇಳಿಕೊಳ್ಳಲು ಕಚನು ನಿರಾಕರಿಸುವುದು (೧-೧೫). ದೇವಯಾನಿಯು ಕಚನಿಗೆ ಶಾಪವನ್ನಿತ್ತುದುದು, ಕಚನು ಮರುಶಾಪವನ್ನಿತ್ತಿದುದು (೧೬-೨೦).

01072001 ವೈಶಂಪಾಯನ ಉವಾಚ|

01072001a ಸಮಾವೃತ್ತವ್ರತಂ ತಂ ತು ವಿಸೃಷ್ಟಂ ಗುರುಣಾ ತದಾ|

01072001c ಪ್ರಸ್ಥಿತಂ ತ್ರಿದಶಾವಾಸಂ ದೇವಯಾನ್ಯಬ್ರವೀದಿದಂ||

ವೈಶಂಪಾಯನನು ಹೇಳಿದನು: “ವ್ರತದ ಅವಧಿಯು ಮುಗಿದು, ಗುರುವಿನಿಂದ ಅಪ್ಪಣೆಯನ್ನು ಪಡೆದು ಅವನು ಸ್ವರ್ಗಲೋಕಕ್ಕೆ ಹೊರಡುವಾಗ ದೇವಯಾನಿಯು ಹೇಳಿದಳು:

01072002a ಋಷೇರಂಗಿರಸಃ ಪೌತ್ರ ವೃತ್ತೇನಾಭಿಜನೇನ ಚ|

01072002c ಭ್ರಾಜಸೇ ವಿದ್ಯಯಾ ಚೈವ ತಪಸಾ ಚ ದಮೇನ ಚ||

“ಋಷಿ ಅಂಗಿರಸನ ಮೊಮ್ಮಗನೇ! ನೀನು ನಿನ್ನ ನಡವಳಿಕೆಯಲ್ಲಿ, ವಿದ್ಯೆಯಲ್ಲಿ, ತಪಸ್ಸಿನಲ್ಲಿ, ದಮದಲ್ಲಿ ಎಲ್ಲರಿಗಿಂತ ಹೆಚ್ಚು ಬೆಳಗುತ್ತಿದ್ದೀಯೆ.

01072003a ಋಷಿರ್ಯಥಾಂಗಿರಾ ಮಾನ್ಯಃ ಪಿತುರ್ಮಮ ಮಹಾಯಶಾಃ|

01072003c ತಥಾ ಮಾನ್ಯಶ್ಚ ಪೂಜ್ಯಶ್ಚ ಭೂಯೋ ಮಮ ಬೃಹಸ್ಪತಿಃ||

ನನ್ನ ತಂದೆಯು ಮಹಾಯಶ ಋಷಿ ಅಂಗಿರಸನನ್ನು ಹೇಗೆ ಗೌರವಿಸುತ್ತಾನೋ ಹಾಗೆ ನಾನೂ ಕೂಡ ಬೃಹಸ್ಪತಿಯನ್ನು ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ.

01072004a ಏವಂ ಜ್ಞಾತ್ವಾ ವಿಜಾನೀಹಿ ಯದ್ಬ್ರವೀಮಿ ತಪೋಧನ|

01072004c ವ್ರತಸ್ಥೇ ನಿಯಮೋಪೇತೇ ಯಥಾ ವರ್ತಾಮ್ಯಹಂ ತ್ವಯಿ||

ತಪೋಧನ! ಇದನ್ನು ತಿಳಿದ ನೀನು ನಾನು ಈಗ ಹೇಳುವುದನ್ನು ಕೇಳು. ನೀನು ವ್ರತನಿಯಮಗಳಲ್ಲಿರುವಾಗ ನಾನು ನಿನ್ನೊಂದಿಗೆ ಹೇಗೆ ವರ್ತಿಸುತ್ತಿದ್ದೆ ಎನ್ನುವುದು ನಿನಗೆ ತಿಳಿದೇ ಇದೆ.

01072005a ಸ ಸಮಾವೃತ್ತವಿದ್ಯೋ ಮಾಂ ಭಕ್ತಾಂ ಭಜಿತುಮರ್ಹಸಿ|

01072005c ಗೃಹಾಣ ಪಾಣಿಂ ವಿಧಿವನ್ಮಮ ಮಂತ್ರಪುರಸ್ಕೃತಂ||

ಈಗ ನಿನ್ನ ಕಲಿಕೆಯು ಮುಗಿದಿದೆ. ಆದರಿಂದ ನಾನು ನಿನ್ನನ್ನು ಪ್ರೀತಿಸುವ ಹಾಗೆ ನೀನೂ ನನ್ನನ್ನು ಪ್ರೀತಿಸು. ಮಂತ್ರ ಪುರಸ್ಕರವಾಗಿ ವಿಧಿವತ್ತಾಗಿ ನನ್ನ ಪಾಣಿಗ್ರಹಣ ಮಾಡು.”

01072006 ಕಚ ಉವಾಚ|

01072006a ಪೂಜ್ಯೋ ಮಾನ್ಯಶ್ಚ ಭಗವಾನ್ಯಥಾ ತವ ಪಿತಾ ಮಮ|

01072006c ತಥಾ ತ್ವಮನವದ್ಯಾಂಗಿ ಪೂಜನೀಯತರಾ ಮಮ||

ಕಚನು ಹೇಳಿದನು: “ನಿನ್ನ ತಂದೆಯು ಹೇಗೋ ಹಾಗೆ ನೀನೂ ಕೂಡ ನನ್ನ ಪೂಜೆ ಮತ್ತು ಗೌರವಕ್ಕೆ ಪಾತ್ರಳು. ಅನವದ್ಯಾಂಗೀ! ನೀನು ನನಗೆ ಇನ್ನೂ ಹೆಚ್ಚು ಪೂಜನೀಯಳಾಗಿದ್ದೀಯೆ.

01072007a ಆತ್ಮಪ್ರಾಣೈಃ ಪ್ರಿಯತಮಾ ಭಾರ್ಗವಸ್ಯ ಮಹಾತ್ಮನಃ|

01072007c ತ್ವಂ ಭದ್ರೇ ಧರ್ಮತಃ ಪೂಜ್ಯಾ ಗುರುಪುತ್ರೀ ಸದಾ ಮಮ||

ನೀನು ಮಹಾತ್ಮ ಭಾರ್ಗವನಿಗೆ ಅವನ ಪ್ರಾಣಕ್ಕಿಂತಲೂ ಪ್ರಿಯೆಯಾಗಿದ್ದೀಯೆ. ಭದ್ರೇ! ಧರ್ಮದ ಪ್ರಕಾರ ನಾನು ಗುರುಪುತ್ರಿಯಾದ ನಿನ್ನನ್ನು ಸದಾ ಪೂಜಿಸಬೇಕು.

01072008a ಯಥಾ ಮಮ ಗುರುರ್ನಿತ್ಯಂ ಮಾನ್ಯಃ ಶುಕ್ರಃ ಪಿತಾ ತವ|

01072008c ದೇವಯಾನಿ ತಥೈವ ತ್ವಂ ನೈವಂ ಮಾಂ ವಕ್ತುಮರ್ಹಸಿ||

ನಿನ್ನ ತಂದೆ ಮತ್ತು ನನ್ನ ಗುರು ಶುಕ್ರನನ್ನು ನಾನು ಹೇಗೆ ನಿತ್ಯವೂ ಗೌರವಿಸುತ್ತೇನೋ ಅದೇರೀತಿ ನೀನೂ ಇರುವೆ. ಆದ್ದರಿಂದ, ದೇವಯಾನಿ! ಈ ತರಹದ ಮಾತುಗಳನ್ನು ನೀನು ನನ್ನಲ್ಲಿ ಹೇಳುವುದು ಸರಿಯಲ್ಲ.”

01072009 ದೇವಯಾನ್ಯುವಾಚ|

01072009a ಗುರುಪುತ್ರಸ್ಯ ಪುತ್ರೋ ವೈ ನ ತು ತ್ವಮಸಿ ಮೇ ಪಿತುಃ|

01072009c ತಸ್ಮಾನ್ಮಾನ್ಯಶ್ಚ ಪೂಜ್ಯಶ್ಚ ಮಮಾಪಿ ತ್ವಂ ದ್ವಿಜೋತ್ತಮ||

ದೇವಯಾನಿಯು ಹೇಳಿದಳು: “ನೀನು ನನ್ನ ತಂದೆಯ ಗುರುಪುತ್ರನ ಮಗನೇ ಹೊರತು ಅವನ ಮಗನಲ್ಲ. ಹೀಗಾಗಿ, ದ್ವಿಜೋತ್ತಮ! ನಾನೂ ಕೂಡ ನಿನ್ನನ್ನು ಗೌರವಿಸಬೇಕು, ಪೂಜಿಸಬೇಕು.

01072010a ಅಸುರೈರ್ಹನ್ಯಮಾನೇ ಚ ಕಚ ತ್ವಯಿ ಪುನಃ ಪುನಃ|

01072010c ತದಾ ಪ್ರಭೃತಿ ಯಾ ಪ್ರೀತಿಸ್ತಾಂ ತ್ವಮೇವ ಸ್ಮರಸ್ವ ಮೇ||

ನಿನ್ನನ್ನು ದಾನವರು ಪುನಃ ಪುನಃ ಕೊಲ್ಲುತ್ತಿದ್ದಾಗ ನಿನ್ನಮೇಲೆ ನಾನು ತೋರಿಸಿದ ಮತ್ತು ಎಂದೂ ತೋರಿಸುತ್ತಿದ್ದ ಪ್ರೀತಿಯನ್ನು ನೆನಪಿಸಿಕೋ.

01072011a ಸೌಹಾರ್ದೇ ಚಾನುರಾಗೇ ಚ ವೇತ್ಥ ಮೇ ಭಕ್ತಿಮುತ್ತಮಾಂ|

01072011c ನ ಮಾಮರ್ಹಸಿ ಧರ್ಮಜ್ಞ ತ್ಯಕ್ತುಂ ಭಕ್ತಾಮನಾಗಸಂ||

ಧರ್ಮಜ್ಞ! ಸೌಹಾರ್ದತೆಯಿಂದ, ಅನುರಾಗದಿಂದ ಅನುತ್ತಮ ಭಕ್ತಿಯಿಂದ ನಿನ್ನನ್ನು ಪ್ರೀತಿಸುವ ನನ್ನನ್ನು ತ್ಯಜಿಸುವುದು ಸರಿಯಲ್ಲ.”

01072012 ಕಚ ಉವಾಚ|

01072012a ಅನಿಯೋಜ್ಯೇ ನಿಯೋಗೇ ಮಾಂ ನಿಯುನಕ್ಷಿ ಶುಭವ್ರತೇ|

01072012c ಪ್ರಸೀದ ಸುಭ್ರು ತ್ವಂ ಮಹ್ಯಂ ಗುರೋರ್ಗುರುತರೀ ಶುಭೇ||

ಕಚನು ಹೇಳಿದನು: “ಶುಭವ್ರತೇ! ಸುಭ್ರು! ಶುಭೇ! ಒತ್ತಾಯ ಮಾಡಬಾರದುದಕ್ಕೆ ಒತ್ತಾಯ ಪಡಿಸಬೇಡ. ಕರುಣೆ ತೋರು. ನೀನು ನನಗೆ ನನ್ನ ಗುರುವಿಗಿಂತಲೂ ಹೆಚ್ಚು.

01072013a ಯತ್ರೋಷಿತಂ ವಿಶಾಲಾಕ್ಷಿ ತ್ವಯಾ ಚಂದ್ರನಿಭಾನನೇ|

01072013c ತತ್ರಾಹಮುಷಿತೋ ಭದ್ರೇ ಕುಕ್ಷೌ ಕಾವ್ಯಸ್ಯ ಭಾಮಿನಿ||

ವಿಶಾಲಾಕ್ಷೀ! ಚಂದ್ರನಿಭಾನನೇ! ಭಾಮಿನೀ! ಭದ್ರೇ! ನೀನು ವಾಸಿಸುತ್ತಿದ್ದ ಕಾವ್ಯನ ಹೊಟ್ಟೆಯಲ್ಲಿ ನಾನೂ ಕೂಡ ವಾಸಿಸಿದ್ದೆ.

01072014a ಭಗಿನೀ ಧರ್ಮತೋ ಮೇ ತ್ವಂ ಮೈವಂ ವೋಚಃ ಶುಭಾನನೇ|

01072014c ಸುಖಮಸ್ಮ್ಯುಷಿತೋ ಭದ್ರೇ ನ ಮನ್ಯುರ್ವಿದ್ಯತೇ ಮಮ||

ಧಾರ್ಮಿಕವಾಗಿ ನೀನು ನನ್ನ ಸಹೋದರಿ. ಶುಭಾನನೇ! ಈ ರೀತಿ ಹೇಳಬೇಡ. ನಾನು ಇಲ್ಲಿ ಸಂತೋಷದಿಂದ ಉಳಿದೆ. ಇಲ್ಲಿ ನಾನು ಸಮಯವನ್ನು ಅತ್ಯಂತ ಸುಖದಿಂದ ಕಳೆದೆ. ನನಗೆ ನಿನ್ನಲ್ಲಿ ಯಾವುದೇ ರೀತಿಯ ಮನಸ್ತಾಪವಿಲ್ಲ.

01072015a ಆಪೃಚ್ಛೇ ತ್ವಾಂ ಗಮಿಷ್ಯಾಮಿ ಶಿವಮಾಶಂಸ ಮೇ ಪಥಿ|

01072015c ಅವಿರೋಧೇನ ಧರ್ಮಸ್ಯ ಸ್ಮರ್ತವ್ಯೋಽಸ್ಮಿ ಕಥಾಂತರೇ|

01072015e ಅಪ್ರಮತ್ತೋತ್ಥಿತಾ ನಿತ್ಯಮಾರಾಧಯ ಗುರುಂ ಮಮ||

ನನ್ನ ದಾರಿಯು ಮಂಗಳಕರವಾಗಿರಲಿ ಎಂದು ನಿನ್ನಿಂದ ಬೀಳ್ಕೊಡುಗೆಯನ್ನು ಕೇಳುತ್ತಿದ್ದೇನೆ. ಧರ್ಮಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೊಂಡ ನನ್ನನ್ನು ಯಾವಾಗಲಾದರೊಮ್ಮೆ ನೆನಪಿಸಿಕೊಳ್ಳುತ್ತಿರು. ನಿತ್ಯವೂ ನನ್ನ ಗುರುವನ್ನು ಆರಾಧಿಸುತ್ತಿರು.”

01072016 ದೇವಯಾನ್ಯುವಾಚ|

01072016a ಯದಿ ಮಾಂ ಧರ್ಮಕಾಮಾರ್ಥೇ ಪ್ರತ್ಯಾಖ್ಯಾಸ್ಯಸಿ ಚೋದಿತಃ|

01072016c ತತಃ ಕಚ ನ ತೇ ವಿದ್ಯಾ ಸಿದ್ಧಿಮೇಷಾ ಗಮಿಷ್ಯತಿ||

ದೇವಯಾನಿಯು ಹೇಳಿದಳು: “ನಾನು ಕೇಳಿಕೊಂಡಂತೆ ನೀನು ನನ್ನನ್ನು ನಿನ್ನ ಭಾರ್ಯೆಯನ್ನಾಗಿ ಮಾಡಿಕೊಳ್ಳದಿದ್ದರೆ ಕಚ! ನಿನಗೆ ಈ ವಿದ್ಯೆಯು ಸಿದ್ಧಿಯಾಗಲಾರದು!”

01072017 ಕಚ ಉವಾಚ|

01072017a ಗುರುಪುತ್ರೀತಿ ಕೃತ್ವಾಹಂ ಪ್ರತ್ಯಾಚಕ್ಷೇ ನ ದೋಷತಃ|

01072017c ಗುರುಣಾ ಚಾಭ್ಯನುಜ್ಞಾತಃ ಕಾಮಮೇವಂ ಶಪಸ್ವ ಮಾಂ||

ಕಚನು ಹೇಳಿದನು: “ನೀನು ಗುರುಪುತ್ರಿಯೆಂದು ಮಾತ್ರ ನಾನು ನಿನ್ನ ಬೇಡಿಕೆಯನ್ನು ಪೂರೈಸುತ್ತಿಲ್ಲ. ನಿನ್ನಲ್ಲಿದ್ದ ಯಾವ ದೋಷದ ಕಾರಣದಿಂದಲ್ಲ. ಗುರುವಿನಿಂದಲೂ ನನಗೆ ಈ ರೀತಿಯ ಅನುಜ್ಞೆಯಾಗಲಿಲ್ಲ. ನಿನಗೆ ಬೇಕೆನಿಸಿದರೆ ನನ್ನನ್ನು ಶಪಿಸು.

01072018a ಆರ್ಷಂ ಧರ್ಮಂ ಬ್ರುವಾಣೋಽಹಂ ದೇವಯಾನಿ ಯಥಾ ತ್ವಯಾ|

01072018c ಶಪ್ತೋ ನಾರ್ಹೋಽಸ್ಮಿ ಶಾಪಸ್ಯ ಕಾಮತೋಽದ್ಯ ನ ಧರ್ಮತಃ||

ದೇವಯಾನಿ! ನೀನು ಋಷಿಧರ್ಮವನ್ನು ಪಾಲಿಸಬೇಕೆಂದು ನಾನು ನಿನಗೆ ಹೇಳಿದ್ದೇನೆ. ನಿನ್ನ ಈ ಶಾಪಕ್ಕೆ ನಾನು ಅರ್ಹನಲ್ಲ. ನೀನು ಧರ್ಮದಿಂದಲ್ಲ, ಕಾಮದಿಂದ ನನಗೆ ಶಾಪವನ್ನಿತ್ತಿದ್ದೀಯೆ.

01072019a ತಸ್ಮಾದ್ಭವತ್ಯಾ ಯಃ ಕಾಮೋ ನ ತಥಾ ಸ ಭವಿಷ್ಯತಿ|

01072019c ಋಷಿಪುತ್ರೋ ನ ತೇ ಕಶ್ಚಿಜ್ಜಾತು ಪಾಣಿಂ ಗ್ರಹೀಷ್ಯತಿ||

ಆದರೆ ನಿನ್ನ ಈ ಆಸೆಯು ಎಂದೂ ಪೂರೈಸುವುದಿಲ್ಲ. ಯಾವ ಋಷಿಪುತ್ರನೂ ನಿನ್ನ ಪಾಣಿಗ್ರಹಣ ಮಾಡಿಕೊಳ್ಳುವುದಿಲ್ಲ.

01072020a ಫಲಿಷ್ಯತಿ ನ ತೇ ವಿದ್ಯಾ ಯತ್ತ್ವಂ ಮಾಮಾತ್ಥ ತತ್ತಥಾ|

01072020c ಅಧ್ಯಾಪಯಿಷ್ಯಾಮಿ ತು ಯಂ ತಸ್ಯ ವಿದ್ಯಾ ಫಲಿಷ್ಯತಿ||

ನೀನು ಹೇಳಿದಹಾಗೆ ನನ್ನ ಈ ವಿಧ್ಯೆಯು ಫಲಿಸದೇ ಇರಬಹುದು. ಆದರೆ ನಾನು ಇದನ್ನು ಹೇಳಿಕೊಟ್ಟವನಲ್ಲಿಯಾದರೂ ಇದು ಫಲಿಸುತ್ತದೆ.”

01072021 ವೈಶಂಪಾಯನ ಉವಾಚ|

01072021a ಏವಮುಕ್ತ್ವಾ ದ್ವಿಜಶ್ರೇಷ್ಠೋ ದೇವಯಾನೀಂ ಕಚಸ್ತದಾ|

01072021c ತ್ರಿದಶೇಶಾಲಯಂ ಶೀಘ್ರಂ ಜಗಾಮ ದ್ವಿಜಸತ್ತಮಃ||

ವೈಶಂಪಾಯನನು ಹೇಳಿದನು: “ಈ ರೀತಿ ದೇವಯಾನಿಗೆ ಹೇಳಿ ದ್ವಿಜಶ್ರೇಷ್ಠ ದ್ವಿಜಸತ್ತಮ ಕಚನು ಶೀಘ್ರವಾಗಿ ದೇವಲೋಕವನ್ನು ಸೇರಿದನು.

01072022a ತಮಾಗತಮಭಿಪ್ರೇಕ್ಷ್ಯ ದೇವಾ ಇಂದ್ರಪುರೋಗಮಾಃ|

01072022c ಬೃಹಸ್ಪತಿಂ ಸಭಾಜ್ಯೇದಂ ಕಚಮಾಹುರ್ಮುದಾನ್ವಿತಾಃ||

ಅವನು ಬಂದಿರುವುದನ್ನು ಕಂಡ ಇಂದ್ರನೇ ಮೊದಲಾದ ದೇವತೆಗಳು ಸಂತೋಷದಿಂದ ಬೃಹಸ್ಪತಿಯನ್ನು ನೋಡುತ್ತಾ ಕಚನಿಗೆ ಹೇಳಿದರು:

01072023a ಯತ್ತ್ವಮಸ್ಮದ್ಧಿತಂ ಕರ್ಮ ಚಕರ್ಥ ಪರಮಾದ್ಭುತಂ|

01072023c ನ ತೇ ಯಶಃ ಪ್ರಣಶಿತಾ ಭಾಗಭಾಫ್ನೋ ನೋ ಭವಿಷ್ಯಸಿ||

“ನಮಗೆ ಅತ್ಯಂತ ಉತ್ತಮ ಪರಮಾದ್ಭುತ ಕಾರ್ಯವನ್ನು ಮಾಡಿದ್ದೀಯೆ. ನಿನ್ನ ಕೀರ್ತಿಯು ಎಂದೂ ಅಳಿಯುವುದಿಲ್ಲ. ನಮ್ಮ ಹವಿಸ್ಸುಗಳ ಪಾಲುದಾರನಾಗುತ್ತೀಯೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ದ್ವಿಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೆರಡನೆಯ ಅಧ್ಯಾಯವು.

Comments are closed.