Adi Parva: Chapter 69

ಆದಿ ಪರ್ವ: ಸಂಭವ ಪರ್ವ

೬೯

ಶಕುಂತಲೆಯು ದುಃಷಂತನನ್ನು ನಿಂದಿಸುವುದು (೧-೨೫). ದುಃಷಂತನು ಶಕುಂತಲೆ-ಸರ್ವದಮನರನ್ನು ಸ್ವೀಕರಿಸಿ, ಮಗನಿಗೆ ಭರತನೆಂಬ ಹೆಸರನ್ನು ಕೊಡುವುದು (೨೬-೪೦). ಭರತನ ರಾಜ್ಯಭಾರ (೪೧-೫೦).

01069001 ಶಕುಂತಲೋವಾಚ

01069001a ರಾಜನ್ಸರ್ಷಪಮಾತ್ರಾಣಿ ಪರಚ್ಛಿದ್ರಾಣಿ ಪಶ್ಯಸಿ|

01069001c ಆತ್ಮನೋ ಬಿಲ್ವಮಾತ್ರಾಣಿ ಪಶ್ಯನ್ನಪಿ ನ ಪಶ್ಯಸಿ||

ಶಕುಂತಲೆಯು ಹೇಳಿದಳು: “ರಾಜನ್! ನೀನು ಇನ್ನೊಬ್ಬರ ತಪ್ಪು ಸಾಸಿವೆ ಕಾಳಿನಷ್ಟು ಸಣ್ಣದಾಗಿದ್ದರೂ ಗಮನಿಸುತ್ತೀಯೆ. ಆದರೆ ನಿನ್ನ ತಪ್ಪು ಬಿಲ್ವದಷ್ಟು ದೊಡ್ಡದಾಗಿದ್ದರೂ ನೋಡಿದರೂ ನೋಡದಂತೆ ಇದ್ದೀಯೆ.

01069002a ಮೇನಕಾ ತ್ರಿದಶೇಷ್ವೇವ ತ್ರಿದಶಾಶ್ಚಾನು ಮೇನಕಾಂ|

01069002c ಮಮೈವೋದ್ರಿಚ್ಯತೇ ಜನ್ಮ ದುಃಷಂತ ತವ ಜನ್ಮತಃ||

ಮೇನಕೆಯು ದೇವಲೋಕದವಳು ಮತ್ತು ದೇವತೆಗಳಲ್ಲೇ ಶ್ರೇಷ್ಠಳೆಂದೆನಿಸಿಕೊಂಡವಳು. ದುಃಷಂತ! ಹೀಗೆ ನನ್ನ ಜನ್ಮವು ನಿನ್ನ ಜನ್ಮಕ್ಕಿಂತಲೂ ಶ್ರೇಷ್ಠವಾದದ್ದು.

01069003a ಕ್ಷಿತಾವಟಸಿ ರಾಜಂಸ್ತ್ವಮಂತರಿಕ್ಷೇ ಚರಾಮ್ಯಹಂ|

01069003c ಆವಯೋರಂತರಂ ಪಶ್ಯ ಮೇರುಸರ್ಷಪಯೋರಿವ||

ರಾಜನ್! ನೀನು ಭೂಮಿಯ ಮೇಲೆ ನಡೆಯುತ್ತೀಯೆ. ನಾನು ಅಂತರಿಕ್ಷದಲ್ಲಿ ಸಂಚರಿಸುತ್ತೇನೆ. ನನ್ನ ಮತ್ತು ನಿನ್ನ ನಡುವಿನ ಅಂತರ ಮೇರು ಮತ್ತು ಸಾಸಿವೆ ಕಾಳುಗಳ ನಡುವಿರುವ ಅಂತರವೆಂದು ತಿಳಿ.

01069004a ಮಹೇಂದ್ರಸ್ಯ ಕುಬೇರಸ್ಯ ಯಮಸ್ಯ ವರುಣಸ್ಯ ಚ|

01069004c ಭವನಾನ್ಯನುಸಂಯಾಮಿ ಪ್ರಭಾವಂ ಪಶ್ಯ ಮೇ ನೃಪ||

ನೃಪ! ನನ್ನ ಪ್ರಭಾವವನ್ನು ನೋಡು. ನಾನು ಮಹೇಂದ್ರ, ಕುಬೇರ, ಯಮ, ಮತ್ತು ವರುಣರ ಭವನಗಳಿಗೆ ಹೋಗಬಲ್ಲೆ.

01069005a ಸತ್ಯಶ್ಚಾಪಿ ಪ್ರವಾದೋಽಯಂ ಯಂ ಪ್ರವಕ್ಷ್ಯಾಮಿ ತೇಽನಘ|

01069005c ನಿದರ್ಶನಾರ್ಥಂ ನ ದ್ವೇಷಾತ್ತಚ್ಶ್ರುತ್ವಾ ಕ್ಷಂತುಮರ್ಹಸಿ||

ಅನಘ! ಸತ್ಯವನ್ನು ತೋರಿಸಬಲ್ಲ ಒಂದು ಗಾದೆಯನ್ನು ಹೇಳುತ್ತೇನೆ ಕೇಳು. ಇದನ್ನು ದ್ವೇಷದಿಂದ ಹೇಳುತ್ತಿಲ್ಲ. ಒಂದು ನಿದರ್ಶನದ ರೂಪದಲ್ಲಿ ಹೇಳುತ್ತಿದ್ದೇನೆ. ಇದನ್ನು ಕೇಳಿ ನನ್ನನ್ನು ಕ್ಷಮಿಸಬೇಕು.

01069006a ವಿರೂಪೋ ಯಾವದಾದರ್ಶೇ ನಾತ್ಮನಃ ಪಶ್ಯತೇ ಮುಖಂ|

01069006c ಮನ್ಯತೇ ತಾವದಾತ್ಮಾನಮನ್ಯೇಭ್ಯೋ ರೂಪವತ್ತರಂ||

ವಿರೂಪನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುವವರೆಗೆ ಎಲ್ಲರಿಗಿಂತ ತಾನೇ ರೂಪವಂತನೆಂದು ತಿಳಿದುಕೊಂಡಿರುತ್ತಾನೆ.

01069007a ಯದಾ ತು ಮುಖಮಾದರ್ಶೇ ವಿಕೃತಂ ಸೋಽಭಿವೀಕ್ಷತೇ|

01069007c ತದೇತರಂ ವಿಜಾನಾತಿ ಆತ್ಮಾನಂ ನೇತರಂ ಜನಂ||

ತನ್ನ ವಿಕೃತ ಮುಖವನ್ನು ಕನ್ನಡಿಯಲ್ಲಿ ನೋಡಿದಾಗಲೇ ಅವನಿಗೆ ತನ್ನ ಮತ್ತು ಇತರರ ನಡುವಿನ ವ್ಯತ್ಯಾಸ ಅರಿವಾಗುತ್ತದೆ.

01069008a ಅತೀವ ರೂಪಸಂಪನ್ನೋ ನ ಕಿಂ ಚಿದವಮನ್ಯತೇ|

01069008c ಅತೀವ ಜಲ್ಪಂದುರ್ವಾಚೋ ಭವತೀಹ ವಿಹೇತಕಃ||

ಅತೀವ ರೂಪಸಂಪನ್ನನು ಇತರರನ್ನು ಎಂದೂ ಅವಹೇಳನ ಮಾಡುವುದಿಲ್ಲ. ಅನ್ಯರನ್ನು ಅತೀವವಾಗಿ ಅವಹೇಳನ ಮಾಡುವವನು ವಿಹಟಕನೆಂದು ಅನ್ನಿಸಿಕೊಳ್ಳುತ್ತಾನೆ.

01069009a ಮೂರ್ಖೋ ಹಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ|

01069009c ಅಶುಭಂ ವಾಕ್ಯಮಾದತ್ತೇ ಪುರೀಷಮಿವ ಸೂಕರಃ||

ಹಂದಿಯು ಹೇಗೆ ಹೂವಿನ ತೋಟದಿಂದಲೂ ಹೊಲಸನ್ನೇ ಹೆಕ್ಕುತ್ತದೆಯೋ ಹಾಗೆ ಮೂರ್ಖನೂ ಕೂಡ ಶುಭಾಶುಭಮಾತುಗಳಲ್ಲಿ ಅಶುಭ ಮಾತುಗಳನ್ನೇ ಆರಿಸುತ್ತಾನೆ.

01069010a ಪ್ರಾಜ್ಞಸ್ತು ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ|

01069010c ಗುಣವದ್ವಾಕ್ಯಮಾದತ್ತೇ ಹಂಸಃ ಕ್ಷೀರಮಿವಾಂಭಸಃ||

ನೀರಿನಿಂದ ಕೂಡಿದ ಕ್ಷೀರದಿಂದ ಹಂಸವು ಕ್ಷೀರವನ್ನೇ ಹೇಗೆ ಆರಿಸುತ್ತದೆಯೋ ಹಾಗೆ ಪ್ರಾಜ್ಞರೂ ಕೂಡ ಶುಭಾಶುಭ ವಚನಗಳಿಂದ ಶುಭಮಾತುಗಳನ್ನೇ ಕೇಳುತ್ತಾರೆ.

01069011a ಅನ್ಯಾನ್ಪರಿವದನ್ಸಾಧುರ್ಯಥಾ ಹಿ ಪರಿತಪ್ಯತೇ|

01069011c ತಥಾ ಪರಿವದನ್ನನ್ಯಾಂಸ್ತುಷ್ಟೋ ಭವತಿ ದುರ್ಜನಃ||

ಸಾಧು ಜನರು ಅನ್ಯರ ಕುರಿತು ಕೀಳು ಮಾತನ್ನಾಡುವಾಗ ಬಹಳಷ್ಟು ವೇದನೆಗೊಳಗಾಗುತ್ತಾರೆ. ಆದರೆ ದುರ್ಜನರು ಅನ್ಯರ ನಿಂದನೆಗೈಯುವುದರಲ್ಲಿಯೇ ಸಂತುಷ್ಟರಾಗುತ್ತಾರೆ.

01069012a ಅಭಿವಾದ್ಯ ಯಥಾ ವೃದ್ಧಾನ್ಸಂತೋ ಗಚ್ಛಂತಿ ನಿರ್ವೃತಿಂ|

01069012c ಏವಂ ಸಜ್ಜನಮಾಕ್ರುಶ್ಯ ಮೂರ್ಖೋ ಭವತಿ ನಿರ್ವೃತಃ||

ಸಂತರು ವೃದ್ಧರನ್ನು ಗೌರವಿಸುವುದರಲ್ಲಿ ಸಂತೋಷ ಹೊಂದುತ್ತಾರೆ. ಆದರೆ ಮೂರ್ಖ ಜನರು ಸಜ್ಜನರನ್ನು ಅವಹೇಳನ ಮಾಡುವುದರಲ್ಲಿ ಸಂತೋಷ ಹೊಂದುತ್ತಾರೆ.

01069013a ಸುಖಂ ಜೀವಂತ್ಯದೋಷಜ್ಞಾ ಮೂರ್ಖಾ ದೋಷಾನುದರ್ಶಿನಃ|

01069013c ಯತ್ರ ವಾಚ್ಯಾಃ ಪರೈಃ ಸಂತಃ ಪರಾನಾಹುಸ್ತಥಾವಿಧಾನ್||

ಸಂತರು ಇನ್ನೊಬ್ಬರಲ್ಲಿ ದೋಷವನ್ನು ಕಾಣದೆಯೇ ಸುಖದಿಂದಿರುವರು; ಮೂರ್ಖರು ದೋಷವನ್ನು ಹುಡುಕುವುದರಲ್ಲಿಯೇ ಸುಖವನ್ನು ಹೊಂದುವರು.

01069014a ಅತೋ ಹಾಸ್ಯತರಂ ಲೋಕೇ ಕಿಂ ಚಿದನ್ಯನ್ನ ವಿದ್ಯತೇ|

01069014c ಯತ್ರ ದುರ್ಜನ ಇತ್ಯಾಹ ದುರ್ಜನಃ ಸಜ್ಜನಂ ಸ್ವಯಂ||

ಈ ಲೋಕದಲ್ಲಿ ಇದಕ್ಕಿಂತ ಬೇರೆ ಹಾಸ್ಯದ ವಿಷಯವಾದರೂ ಏನಿದೆ? ಇಲ್ಲಿ ಸಜ್ಜನರನ್ನು ಸ್ವಯಂ ದುರ್ಜನರೇ ದುರ್ಜನರೆಂದು ಕರೆಯುತ್ತಿರುವರಲ್ಲ?

01069015a ಸತ್ಯಧರ್ಮಚ್ಯುತಾತ್ಪುಂಸಃ ಕ್ರುದ್ಧಾದಾಶೀವಿಷಾದಿವ|

01069015c ಅನಾಸ್ತಿಕೋಽಪ್ಯುದ್ವಿಜತೇ ಜನಃ ಕಿಂ ಪುನರಾಸ್ತಿಕಃ||

ನಾಸ್ತಿಕರೂ ಕೂಡ ಸತ್ಯಧರ್ಮದಿಂದ ಚ್ಯುತರಾದವರನ್ನು ಕಂಡರೆ ಘೋರ ವಿಷಸರ್ಪವನ್ನು ಕಂಡಂತೆ ಭಯಪಡುತ್ತಾರೆ. ನನ್ನಂಥಹ ಆಸ್ತೀಕರ ಗತಿಯೇನು?

01069016a ಸ್ವಯಮುತ್ಪಾದ್ಯ ವೈ ಪುತ್ರಂ ಸದೃಶಂ ಯೋಽವಮನ್ಯತೇ|

01069016c ತಸ್ಯ ದೇವಾಃ ಶ್ರಿಯಂ ಘ್ನಂತಿ ನ ಚ ಲೋಕಾನುಪಾಶ್ನುತೇ||

ಸದೃಶ ಪುತ್ರನನ್ನು ಸ್ವಯಂ ಹುಟ್ಟಿಸಿ ಅವನನ್ನು ಸ್ವೀಕರಿಸದಿರುವವನ ಶ್ರಿಯನ್ನು ದೇವತೆಗಳು ನಾಶಪಡಿಸುತ್ತಾರೆ ಮತ್ತು ಅವನಿಗೆ ಉತ್ತಮ ಲೋಕವು ದೊರೆಯುವುದಿಲ್ಲ.

01069017a ಕುಲವಂಶಪ್ರತಿಷ್ಠಾಂ ಹಿ ಪಿತರಃ ಪುತ್ರಮಬ್ರುವನ್|

01069017c ಉತ್ತಮಂ ಸರ್ವಧರ್ಮಾಣಾಂ ತಸ್ಮಾತ್ಪುತ್ರಂ ನ ಸಂತ್ಯಜೇತ್||

ಪುತ್ರನು ಕುಲವಂಶ ಪ್ರತಿಷ್ಠನೆಂದು ಪಿತೃಗಳು ಹೇಳುತ್ತಾರೆ. ಪುತ್ರನಿಗೆ ಜನ್ಮ ನೀಡುವುದು ಸರ್ವಧರ್ಮಗಳಲ್ಲಿ ಉತ್ತಮವೆಂದು ಹೇಳುತ್ತಾರೆ.  ಆದುದರಿಂದ ಪುತ್ರನನ್ನು ತ್ಯಜಿಸಬಾರದು.

01069018a ಸ್ವಪತ್ನೀಪ್ರಭವಾನ್ಪಂಚ ಲಬ್ಧಾನ್ ಕ್ರೀತಾನ್ವಿವರ್ಧಿತಾನ್|

01069018c ಕೃತಾನನ್ಯಾಸು ಚೋತ್ಪನ್ನಾನ್ಪುತ್ರಾನ್ವೈ ಮನುರಬ್ರವೀತ್||

ಸ್ವಪತ್ನಿಯಲ್ಲಿ ಪಡೆದವನು, ಬೇರೆಯವರಿಂದ ಪಡೆದವನು, ಖರೀದಿಸಿಕೊಂಡವನು, ವಾತ್ಸಲ್ಯದಿಂದ ಬೆಳೆಸಲ್ಪಟ್ಟವನು, ಮತ್ತು ಅಪತ್ನಿಯಿಂದ ಜನಿಸಿದವನು ಹೀಗೆ ಐದು ತರಹದ ಪುತ್ರರ ಕುರಿತು ಮನುವು ಹೇಳುತ್ತಾನೆ.

01069019a ಧರ್ಮಕೀರ್ತ್ಯಾವಹಾ ನೄಣಾಂ ಮನಸಃ ಪ್ರೀತಿವರ್ಧನಾಃ|

01069019c ತ್ರಾಯಂತೇ ನರಕಾಜ್ಜಾತಾಃ ಪುತ್ರಾ ಧರ್ಮಪ್ಲವಾಃ ಪಿತೄನ್||

ಪುತ್ರರು ನರನ ಧರ್ಮ ಕೀರ್ತಿಯನ್ನು ವೃದ್ಧಿಸುತ್ತಾರೆ. ಮನಸ್ಸಿನ ಸಂತೋಷವನ್ನು ವರ್ಧಿಸುತ್ತಾರೆ. ನರಕಕ್ಕೆ ಹೋಗಬಹುದಾದವರನ್ನು ಬಿಡುಗಡೆಗೊಳಿಸುತ್ತಾರೆ.

01069020a ಸ ತ್ವಂ ನೃಪತಿಶಾರ್ದೂಲ ನ ಪುತ್ರಂ ತ್ಯಕ್ತುಮರ್ಹಸಿ|

01069020c ಆತ್ಮಾನಂ ಸತ್ಯಧರ್ಮೌ ಚ ಪಾಲಯಾನೋ ಮಹೀಪತೇ|

01069020e ನರೇಂದ್ರಸಿಂಹ ಕಪಟಂ ನ ವೋದುಂ ತ್ವಮಿಹಾರ್ಹಸಿ||

ನೃಪತಿಶಾರ್ದೂಲ! ಆದುದರಿಂದ ನಿನ್ನ ಪುತ್ರನನ್ನು ತ್ಯಜಿಸುವುದು ಸರಿಯಲ್ಲ. ಮಹೀಪತೇ! ನಿನ್ನ ಸತ್ಯ-ಧರ್ಮವನ್ನು ಪರಿಪಾಲಿಸು. ನರೇಂದ್ರಸಿಂಹ! ನಿನ್ನಂಥವನಿಗೆ ಈ ವಿಷಯದಲ್ಲಿ ಕಪಟನಾಗುವುದು ಸರಿಯಲ್ಲ.

01069021a ವರಂ ಕೂಪಶತಾದ್ವಾಪೀ ವರಂ ವಾಪೀಶತಾತ್ಕ್ರತುಃ|

01069021c ವರಂ ಕ್ರತುಶತಾತ್ಪುತ್ರಃ ಸತ್ಯಂ ಪುತ್ರಶತಾದ್ವರಂ||

ನೂರು ಯಾಗಗಳನ್ನು ಮಾಡುವುದಕ್ಕಿಂತ ನೂರು ಬಾವಿಗಳನ್ನು ತೋಡುವುದೇ ಶ್ರೇಷ್ಠ; ನೂರು ಯಾಗಗಳನ್ನು ಮಾಡುವುದಕ್ಕಿಂಥ ಒಂದು ಪುತ್ರನನ್ನು ಪಡೆಯುವುದು ಶ್ರೇಷ್ಠ; ಆದರೆ ನೂರು ಪುತ್ರರಿಗಿಂತಲೂ ಶ್ರೇಷ್ಠವಾದದ್ದು ಸತ್ಯ.

01069022a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಂ|

01069022c ಅಶ್ವಮೇಧಸಹಸ್ರಾದ್ಧಿ ಸತ್ಯಮೇವ ವಿಶಿಷ್ಯತೇ||

ಸಹಸ್ರ ಅಶ್ವಮೇಧಗಳನ್ನು ಮತ್ತು ಸತ್ಯವನ್ನೂ ತುಲನೆ ಮಾಡಿದರೆ, ಸಹಸ್ರ ಅಶ್ವಮೇಧಗಳಿಗಿಂತಲೂ ಸತ್ಯವೇ ವಿಶೇಷವಾಗುತ್ತದೆ.

01069023a ಸರ್ವವೇದಾಧಿಗಮನಂ ಸರ್ವತೀರ್ಥಾವಗಾಹನಂ|

01069023c ಸತ್ಯಂ ಚ ವದತೋ ರಾಜನ್ಸಮಂ ವಾ ಸ್ಯಾನ್ನ ವಾ ಸಮಂ||

ರಾಜನ್! ಸತ್ಯವು ಸರ್ವವೇದಗಳ ಪಾಂಡಿತ್ಯ ಮತ್ತು ಸರ್ವ ತೀರ್ಥಗಳ ಯಾತ್ರೆಗೆ ಸಮವೆಂದು ಹೇಳುತ್ತಾರೆ. ಇದಕ್ಕೆ ಸರಿಯಾದುದು ಇನ್ನು ಯಾವುದೂ ಇಲ್ಲ.

01069024a ನಾಸ್ತಿ ಸತ್ಯಾತ್ಪರೋ ಧರ್ಮೋ ನ ಸತ್ಯಾದ್ವಿದ್ಯತೇ ಪರಂ|

01069024c ನ ಹಿ ತೀವ್ರತರಂ ಕಿಂ ಚಿದನೃತಾದಿಹ ವಿದ್ಯತೇ||

ಸತ್ಯಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ, ಸತ್ಯಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಅನೃತಕ್ಕಿಂತಲೂ ತೀವ್ರತರ ಪಾಪವಾದರೂ ಏನು?

01069025a ರಾಜನ್ಸತ್ಯಂ ಪರಂ ಬ್ರಹ್ಮ ಸತ್ಯಂ ಚ ಸಮಯಃ ಪರಃ|

01069025c ಮಾ ತ್ಯಾಕ್ಷೀಃ ಸಮಯಂ ರಾಜನ್ಸತ್ಯಂ ಸಂಗತಮಸ್ತು ತೇ||

ರಾಜನ್! ಸತ್ಯವೇ ಪರಬ್ರಹ್ಮ, ಸತ್ಯವೇ ಪರಮ ತಪಸ್ಸು. ನಿನ್ನ ವಚನವನ್ನು ತೊರೆಯಬೇಡ ರಾಜನ್! ನೀನು ಸತ್ಯದಲ್ಲಿ ಒಂದಾಗು.

01069026a ಅನೃತೇ ಚೇತ್ಪ್ರಸಂಗಸ್ತೇ ಶ್ರದ್ದಧಾಸಿ ನ ಚೇತ್ಸ್ವಯಂ|

01069026c ಆತ್ಮನೋ ಹಂತ ಗಚ್ಛಾಮಿ ತ್ವಾದೃಶೇ ನಾಸ್ತಿ ಸಂಗತಂ||

ಸುಳ್ಳು ನಿನ್ನನ್ನು ಬಿಡದಿದ್ದರೆ ಅಥವಾ ನನ್ನಲ್ಲಿ ನಿನಗೆ ವಿಶ್ವಾಸವಿಲ್ಲದಿದ್ದರೆ ನಾನೇ ಇಲ್ಲಿಂದ ಹೊರಟು ಹೋಗುತ್ತೇನೆ. ನನಗೆ ನಿನ್ನ ಜೊತೆ ಇರುವುದು ಬೇಡ.

01069027a ಋತೇಽಪಿ ತ್ವಯಿ ದುಃಷಂತ ಶೈಲರಾಜಾವತಂಸಕಾಂ|

01069027c ಚತುರಂತಾಮಿಮಾಮುರ್ವೀಂ ಪುತ್ರೋ ಮೇ ಪಾಲಯಿಷ್ಯತಿ||

ದುಃಷಂತ! ನಿನ್ನ ನಂತರ ನಾಲ್ಕೂ ಎಡೆಯಲ್ಲಿ ಸಮುದ್ರದಿಂದ ಕೂಡಿದ ಈ ಶೈಲರಾಜವತಂಸಕ ಭೂಮಿಯನ್ನು ನನ್ನ ಈ ಪುತ್ರನು ಆಳುವನು.””

01069028 ವೈಶಂಪಾಯನ ಉವಾಚ

01069028a ಏತಾವದುಕ್ತ್ವಾ ವಚನಂ ಪ್ರಾತಿಷ್ಠತ ಶಕುಂತಲಾ|

01069028c ಅಥಾಂತರಿಕ್ಷೇ ದುಃಷಂತಂ ವಾಗುವಾಚಾಶರೀರಿಣೀ|

01069028e ಋತ್ವಿಕ್ಪುರೋಹಿತಾಚಾರ್ಯೈರ್ಮಂತ್ರಿಭಿಶ್ಚಾವೃತಂ ತದಾ||

ವೈಶಂಪಾಯನನು ಹೇಳಿದನು: “ಈ ಮಾತುಗಳನ್ನಾಡಿದ ಶಕುಂತಲೆಯು ಹಿಂದಿರುಗುತ್ತಿದ್ದಂತೆಯೇ ಋತ್ವಿಜರು, ಪುರೋಹಿತರು, ಆಚಾರ್ಯರು ಮತ್ತು ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟಿದ್ದ ದುಃಷಂತನನ್ನುದ್ದೇಶಿಸಿ ಅಂತರಿಕ್ಷದಿಂದ ಅಶರೀರವಾಣಿಯೊಂದು ಕೇಳಿಬಂದಿತು.

01069029a ಭಸ್ತ್ರಾ ಮಾತಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ|

01069029c ಭರಸ್ವ ಪುತ್ರಂ ದುಃಷಂತ ಮಾವಮಂಸ್ಥಾಃ ಶಕುಂತಲಾಂ||

“ದುಃಷಂತ! ತಾಯಿಯು ಮಗನ ಮಾಂಸ ಮತ್ತು ಚರ್ಮ. ಆದರೆ ತಂದೆಯು ಅವನ ಆತ್ಮ. ಆದುದರಿಂದ ನಿನ್ನ ಈ ಮಗನನ್ನು ಸ್ವೀಕರಿಸು. ಶಕುಂತಲೆಯನ್ನು ಅವಮಾನಿಸಬೇಡ.

01069030a ರೇತೋಧಾಃ ಪುತ್ರ ಉನ್ನಯತಿ ನರದೇವ ಯಮಕ್ಷಯಾತ್|

01069030c ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯಮಾಹ ಶಕುಂತಲಾ||

ತನ್ನ ರೇತದಿಂದ ಪಡೆದ ಮಗನು ನರನನ್ನು ಯಮಕ್ಷಯದಿಂದ ರಕ್ಷಿಸುತ್ತಾನೆ. ನೀನೇ ಈ ಗರ್ಭವನ್ನಿತ್ತವನು. ಶಕುಂತಲೆಯು ಸತ್ಯವನ್ನು ನುಡಿದಿದ್ದಾಳೆ.

01069031a ಜಾಯಾ ಜನಯತೇ ಪುತ್ರಮಾತ್ಮನೋಽಂಗಂ ದ್ವಿಧಾ ಕೃತಂ|

01069031c ತಸ್ಮಾದ್ಭರಸ್ವ ದುಃಷಂತ ಪುತ್ರಂ ಶಾಕುಂತಲಂ ನೃಪ||

ನರನು ತನ್ನನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಪತ್ನಿಯಲ್ಲಿ ಹುಟ್ಟುತ್ತಾನೆ. ಆದುದರಿಂದ ನೃಪ ದುಃಷಂತ! ಶಕುಂತಲೆಯಲ್ಲಿ ಜನಿಸಿದ ನಿನ್ನ ಈ ಪುತ್ರನನ್ನು ಸ್ವೀಕರಿಸು.

01069032a ಅಭೂತಿರೇಷಾ ಕಸ್ತ್ಯಜ್ಯಾಜ್ಜೀವಂಜೀವಂತಮಾತ್ಮಜಂ|

01069032c ಶಾಕುಂತಲಂ ಮಹಾತ್ಮಾನಂ ದೌಃಷಂತಿಂ ಭರ ಪೌರವ||

ತನ್ನ ಮಗನನ್ನು ಪರಿತ್ಯಜಿಸಿ ಜೀವಿಸುವುದು ಅತಿ ದುರಾದೃಷ್ಟ ವಿಷಯ. ಪೌರವ! ಮಹಾತ್ಮ! ದೌಃಷಂತ ಮತ್ತು ಶಕುಂತಲೆಯನ್ನು ಪಾಲಿಸು.

01069033a ಭರ್ತವ್ಯೋಽಯಂ ತ್ವಯಾ ಯಸ್ಮಾದಸ್ಮಾಕಂ ವಚನಾದಪಿ|

01069033c ತಸ್ಮಾದ್ಭವತ್ವಯಂ ನಾಮ್ನಾ ಭರತೋ ನಾಮ ತೇ ಸುತಃ||

ನಮ್ಮ ಈ ಮಾತುಗಳ ಆಧಾರದ ಮೇಲೆ ನೀನು ಇವನನ್ನು ಪಾಲಿಸುವುದರಿಂದ ಇಂದಿನಿಂದ ನಿನ್ನ ಈ ಮಗನ ಹೆಸರು ಭರತ ಎಂದಾಗಲಿ.”

01069034a ತತ್‌ಶ್ರುತ್ವಾ ಪೌರವೋ ರಾಜಾ ವ್ಯಾಹೃತಂ ವೈ ದಿವೌಕಸಾಂ|

01069034c ಪುರೋಹಿತಮಮಾತ್ಯಾಂಶ್ಚ ಸಂಪ್ರಹೃಷ್ಟೋಽಬ್ರವೀದಿದಂ||

ದಿವೌಕಸರ ಈ ಮಾತುಗಳನ್ನು ಕೇಳಿದ ರಾಜ ಪೌರವನು ಸಂಪ್ರಹೃಷ್ಟನಾಗಿ ತನ್ನ ಪುರೋಹಿತರು ಮತ್ತು ಅಮಾತ್ಯರನ್ನುದ್ದೇಶಿಸಿ ಹೇಳಿದನು:

01069035a ಶೃಣ್ವಂತ್ವೇತದ್ಭವಂತೋಽಸ್ಯ ದೇವದೂತಸ್ಯ ಭಾಷಿತಂ|

01069035c ಅಹಮಪ್ಯೇವಮೇವೈನಂ ಜಾನಾಮಿ ಸ್ವಯಮಾತ್ಮಜಂ||

“ದೇವದೂತನಾಡಿದ ಈ ಮಾತುಗಳನ್ನು ಕೇಳಿ. ಇವನು ನನ್ನ ಮಗನೇ ಎಂದು ನನಗೂ ತಿಳಿದಿತ್ತು.

01069036a ಯದ್ಯಹಂ ವಚನಾದೇವ ಗೃಹ್ಣೀಯಾಮಿಮಮಾತ್ಮಜಂ|

01069036c ಭವೇದ್ಧಿ ಶಂಕಾ ಲೋಕಸ್ಯ ನೈವಂ ಶುದ್ಧೋ ಭವೇದಯಂ||

ಕೇವಲ ಇವಳ ಮಾತಿನ ಆಧಾರದ ಮೇಲೆ ಇವನನ್ನು ನಾನು ಸ್ವೀಕರಿಸಿದ್ದರೆ ಲೋಕದ ಜನರು ಶಂಕಿತರಾಗುತ್ತಿದ್ದರು, ಮತ್ತು ಇವನನ್ನು ಪರಿಶುದ್ಧನೆಂದು ಪರಿಗಣಿಸುತ್ತಿರಲಿಲ್ಲ.”

01069037a ತಂ ವಿಶೋಧ್ಯ ತದಾ ರಾಜಾ ದೇವದೂತೇನ ಭಾರತ|

01069037c ಹೃಷ್ಟಃ ಪ್ರಮುದಿತಶ್ಚಾಪಿ ಪ್ರತಿಜಗ್ರಾಹ ತಂ ಸುತಂ||

ಭಾರತ! ತನ್ನ ಮಗನ ಜನ್ಮದ ಪವಿತ್ರತೆಯು ತಿಳಿದಾದ ನಂತರ ರಾಜನು ತುಂಬಾ ಸಂತೋಷಗೊಂಡನು.

01069038a ಮೂರ್ಧ್ನಿ ಚೈನಮುಪಾಘ್ರಾಯ ಸಸ್ನೇಹಂ ಪರಿಷಸ್ವಜೇ|

01069038c ಸಭಾಜ್ಯಮಾನೋ ವಿಪ್ರೈಶ್ಚ ಸ್ತೂಯಮಾನಶ್ಚ ಬಂದಿಭಿಃ|

01069038e ಸ ಮುದಂ ಪರಮಾಂ ಲೇಭೇ ಪುತ್ರಸಂಸ್ಪರ್ಶಜಾಂ ನೃಪಃ||

ತನ್ನ ಮಗನ ನೆತ್ತಿಯನ್ನು ಆಘ್ರಾಣಿಸಿ ಸ್ನೇಹದಿಂದ ಅಪ್ಪಿಕೊಂಡನು. ಸಭೆಯಲ್ಲಿದ್ದ ವಿಪ್ರರೆಲ್ಲರೂ ಆಶೀರ್ವದಿಸಿದರು. ಸೂತರು ಹೊಗಳಿದರು. ರಾಜನು ತನ್ನ ಮಗುವಿನ ಸ್ಪರ್ಷದ ಪರಮ ಸಂತಸವನ್ನು ಅನುಭವಿಸಿದನು.

01069039a ತಾಂ ಚೈವ ಭಾರ್ಯಾಂ ಧರ್ಮಜ್ಞಃ ಪೂಜಯಾಮಾಸ ಧರ್ಮತಃ|

01069039c ಅಬ್ರವೀಚ್ಚೈವ ತಾಂ ರಾಜಾ ಸಾಂತ್ವಪೂರ್ವಮಿದಂ ವಚಃ||

ಧರ್ಮಜ್ಞ ರಾಜನು ತನ್ನ ಭಾರ್ಯೆಯನ್ನೂ ಧಾರ್ಮಿಕವಾಗಿ ಗೌರವಿಸಿದನು ಮತ್ತು ಅವಳಿಗೆ ಸಾಂತ್ವನದ ಈ ಮಾತುಗಳನ್ನು ನುಡಿದನು:

01069040a ಕೃತೋ ಲೋಕಪರೋಕ್ಷೋಽಯಂ ಸಂಬಂಧೋ ವೈ ತ್ವಯಾ ಸಹ|

01069040c ತಸ್ಮಾದೇತನ್ಮಯಾ ದೇವಿ ತ್ವಚ್ಛುದ್ಧ್ಯರ್ಥಂ ವಿಚಾರಿತಂ||

01069041a ಮನ್ಯತೇ ಚೈವ ಲೋಕಸ್ತೇ ಸ್ತ್ರೀಭಾವಾನ್ಮಯಿ ಸಂಗತಂ|

01069041c ಪುತ್ರಶ್ಚಾಯಂ ವೃತೋ ರಾಜ್ಯೇ ಮಯಾ ತಸ್ಮಾದ್ವಿಚಾರಿತಂ||

“ದೇವಿ! ನಿನ್ನೊಡನೆ ನನ್ನ ಸಂಬಂಧವು ಲೋಕ ಪರೋಕ್ಷವಾಗಿ ನಡೆಯಿತು. ಆದುದರಿಂದ ನಿನ್ನ ಶುದ್ಧತೆಯನ್ನು ಪ್ರತಿಪಾದಿಸುವುದು ಹೇಗೆಂದು ವಿಚಾರಿಸುತ್ತಿದ್ದೆ. ಇಲ್ಲದಿದ್ದರೆ ಲೋಕದ ಜನರು ನಿನ್ನ ಮತ್ತು ನನ್ನ ಸಂಗಮವು ಕೇವಲ ಕಾಮದಿಂದಾಯಿತೆಂದು ತಿಳಿದಾರು. ಮತ್ತು ನನ್ನ ರಾಜ್ಯದ ಒಡೆಯನಾಗುವ ನನ್ನ ಈ ಮಗನನ್ನು ಅನೈತಿಕವಾಗಿ ಹುಟ್ಟಿದವನೆಂದು ತಿಳಿಯುತ್ತಾರೆ.

01069042a ಯಚ್ಚ ಕೋಪಿತಯಾತ್ಯರ್ಥಂ ತ್ವಯೋಕ್ತೋಽಸ್ಮ್ಯಪ್ರಿಯಂ ಪ್ರಿಯೇ|

01069042c ಪ್ರಣಯಿನ್ಯಾ ವಿಶಾಲಾಕ್ಷಿ ತತ್ಕ್ಷಾಂತಂ ತೇ ಮಯಾ ಶುಭೇ||

ಪ್ರಿಯೇ! ವಿಶಾಲಾಕ್ಷಿ! ಕೋಪದಲ್ಲಿ ನೀನು ನನಗೆ ಹೇಳಿದ ಎಲ್ಲ ಅಪ್ರಿಯ ಮಾತುಗಳನ್ನೂ ಕ್ಷಮಿಸಿದ್ದೇನೆ. ನೀನು ನನ್ನ ಪ್ರಿಯೆ ಶುಭೇ!”

01069043a ತಾಮೇವಮುಕ್ತ್ವಾ ರಾಜರ್ಷಿರ್ದುಃಷಂತೋ ಮಹಿಷೀಂ ಪ್ರಿಯಾಂ|

01069043c ವಾಸೋಭಿರನ್ನಪಾನೈಶ್ಚ ಪೂಜಯಾಮಾಸ ಭಾರತ||

ಭಾರತ! ರಾಜರ್ಷಿ ದುಃಷಂತನು ತನ್ನ ಪ್ರಿಯ ಮಹಿಷಿಗೆ ಈ ರೀತಿ ಹೇಳಿ ಅವಳನ್ನು ವಸ್ತ್ರ, ಆಹಾರ ಮತ್ತು ಪಾನೀಯಗಳನ್ನಿತ್ತು ಸತ್ಕರಿಸಿದನು.

01069044a ದುಃಷಂತಶ್ಚ ತತೋ ರಾಜಾ ಪುತ್ರಂ ಶಾಕುಂತಲಂ ತದಾ|

01069044c ಭರತಂ ನಾಮತಃ ಕೃತ್ವಾ ಯೌವರಾಜ್ಯೇಽಭ್ಯಷೇಚಯತ್||

ನಂತರ, ರಾಜ ದುಃಷಂತನು ಶಕುಂತಲೆಯ ಪುತ್ರನಿಗೆ ಭರತನೆಂಬ ಹೆಸರಿನಲ್ಲಿ ಯುವರಾಜ್ಯಾಭಿಷೇಕವನ್ನು ನಡೆಸಿದನು.

01069045a ತಸ್ಯ ತತ್ಪ್ರಥಿತಂ ಚಕ್ರಂ ಪ್ರಾವರ್ತತ ಮಹಾತ್ಮನಃ|

01069045c ಭಾಸ್ವರಂ ದಿವ್ಯಮಜಿತಂ ಲೋಕಸನ್ನಾದನಂ ಮಹತ್||

ಅಂದಿನ ನಂತರ ದೇವತೆಗಳ ರಥದಂತಿರುವ ಆ ಮಹಾತ್ಮನ ರಥದ ಹೊಳೆಯುತ್ತಿರುವ ಚಕ್ರಗಳು ತಮ್ಮ ಧ್ವನಿಯನ್ನು ಲೋಕದಲ್ಲೆಲ್ಲ ತುಂಬಿಸುತ್ತಾ ಇಡೀ ಭೂಮಿಯನ್ನೇ ತಿರುಗಿದವು.

01069046a ಸ ವಿಜಿತ್ಯ ಮಹೀಪಾಲಾಂಶ್ಚಕಾರ ವಶವರ್ತಿನಃ|

01069046c ಚಚಾರ ಚ ಸತಾಂ ಧರ್ಮಂ ಪ್ರಾಪ ಚಾನುತ್ತಮಂ ಯಶಃ||

ಎಲ್ಲ ಮಹೀಪಾಲರನ್ನೂ ಗೆದ್ದು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಅನುತ್ತಮ ಯಶಸ್ಸನ್ನು ಗಳಿಸಿದನು.

01069047a ಸ ರಾಜಾ ಚಕ್ರವರ್ತ್ಯಾಸೀತ್ಸಾರ್ವಭೌಮಃ ಪ್ರತಾಪವಾನ್|

01069047c ಈಜೇ ಚ ಬಹುಭಿರ್ಯಜ್ಞೈರ್ಯಥಾ ಶಕ್ರೋ ಮರುತ್ಪತಿಃ||

ಆ ಪ್ರತಾಪಿ ರಾಜನು ಚಕ್ರವರ್ತಿ ಸಾರ್ವಭೌಮನೆಂದು ಕರೆಯಲ್ಪಟ್ಟನು. ಮರುತ್ಪತಿ ಇಂದ್ರನಂತೆ ಅವನು ಹಲವಾರು ಯಜ್ಞಗಳನ್ನು ನಡೆಸಿದನು.

01069048a ಯಾಜಯಾಮಾಸ ತಂ ಕಣ್ವೋ ದಕ್ಷವದ್ಭೂರಿದಕ್ಷಿಣಂ|

01069048c ಶ್ರೀಮಾನ್ಗೋವಿತತಂ ನಾಮ ವಾಜಿಮೇಧಮವಾಪ ಸಃ|

01069048e ಯಸ್ಮಿನ್ಸಹಸ್ರಂ ಪದ್ಮಾನಾಂ ಕಣ್ವಾಯ ಭರತೋ ದದೌ||

ಕಣ್ವನು ಈ ಯಜ್ಞಗಳಲ್ಲಿ ಪುರೋಹಿತನಾಗಿದ್ದನು, ಮತ್ತು ಬ್ರಾಹ್ಮಣರಿಗೆ ಸಾಕಷ್ಟು ದಕ್ಷಿಣೆಗಳನ್ನು ನೀಡಲಾಯಿತು. ಆ ಶ್ರೀಮಂತನು ಗೋಮೇಧ-ಅಶ್ವಮೇಧಗಳೆರಡನ್ನೂ ನೆರವೇರಿಸಿದನು. ಭರತನು ಕಣ್ವನಿಗೆ ಸಹಸ್ರ ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಇತ್ತನು.

01069049a ಭರತಾದ್ಭಾರತೀ ಕೀರ್ತಿರ್ಯೇನೇದಂ ಭಾರತಂ ಕುಲಂ|

01069049c ಅಪರೇ ಯೇ ಚ ಪೂರ್ವೇ ಚ ಭಾರತಾ ಇತಿ ವಿಶ್ರುತಾಃ||

ಭರತನಿಂದ ಭಾರತ ಕುಲವು ಹುಟ್ಟಿತು, ಅವನ ನಂತರ ಹುಟ್ಟಿದ ರಾಜರು ಭಾರತರೆಂದು ವಿಶ್ರುತರಾದರು.

01069050a ಭರತಸ್ಯಾನ್ವವಾಯೇ ಹಿ ದೇವಕಲ್ಪಾ ಮಹೌಜಸಃ|

01069050c ಬಭೂವುರ್ಬ್ರಹ್ಮಕಲ್ಪಾಶ್ಚ ಬಹವೋ ರಾಜಸತ್ತಮಾಃ||

ಭರತನ ಕುಲದಲ್ಲಿ ಹಲವಾರು ದೇವಕಲ್ಪ-ಬ್ರಹ್ಮಕಲ್ಪ ಮಹೌಜಸ ರಾಜಸತ್ತಮರು ಜನಿಸಿದರು.

01069051a ಯೇಷಾಮಪರಿಮೇಯಾನಿ ನಾಮಧೇಯಾನಿ ಸರ್ವಶಃ|

01069051c ತೇಷಾಂ ತು ತೇ ಯಥಾಮುಖ್ಯಂ ಕೀರ್ತಯಿಷ್ಯಾಮಿ ಭಾರತ|

01069051e ಮಹಾಭಾಗಾನ್ದೇವಕಲ್ಪಾನ್ಸತ್ಯಾರ್ಜವಪರಾಯಣಾನ್||

ಭಾರತ! ಇವರೆಲ್ಲರ ಹೆಸರುಗಳು ಅಪರಿಮಿತ. ಆದುದರಿಂದ ಅವರಲ್ಲಿ ಮುಖ್ಯರಾದ, ಮಹಾಭಾಗ, ದೇವಕಲ್ಪರ, ಸತ್ಯಾರ್ಜವ ಪರಾಯಣರ ಹೆಸರುಗಳನ್ನು ಹೇಳುತ್ತೇನೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಏಕೋನಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೊಂಭತ್ತನೆಯ ಅಧ್ಯಾಯವು.

Comments are closed.