Adi Parva: Chapter 63

ಆದಿ ಪರ್ವ: ಸಂಭವ ಪರ್ವ

೬೩

ದುಃಷಂತನು ಬೇಟೆಗೆ ಹೊರಟಿದುದು (೧-೨೫).

01063001 ವೈಶಂಪಾಯನ ಉವಾಚ

01063001a ಸ ಕದಾ ಚಿನ್ಮಹಾಬಾಹುಃ ಪ್ರಭೂತಬಲವಾಹನಃ|

01063001c ವನಂ ಜಗಾಮ ಗಹನಂ ಹಯನಾಗಶತೈರ್ವೃತಃ||

ವೈಶಂಪಾಯನನು ಹೇಳಿದನು: “ಒಮ್ಮೆ ಆ ಮಹಾಬಾಹುವು ನೂರಾರು ಆನೆ ಕುದುರೆಗಳನ್ನೊಡಗೂಡಿದ ಮಹಾಸೇನೆಯೊಂದಿಗೆ ಗಹನ ವನವೊಂದಕ್ಕೆ ಹೋದನು.

01063002a ಖಡ್ಗಶಕ್ತಿಧರೈರ್ವೀರೈರ್ಗದಾಮುಸಲಪಾಣಿಭಿಃ|

01063002c ಪ್ರಾಸತೋಮರಹಸ್ತೈಶ್ಚ ಯಯೌ ಯೋಧಶತೈರ್ವೃತಃ||

ಖಡ್ಗ ಮತ್ತು ಶಕ್ತಿಗಳನ್ನು ಧರಿಸಿದ, ಗದೆ ಮುಸಲಗಳನ್ನು ಹಿಡಿದ ನೂರಾರು ವೀರ ಯೋಧರಿಂದ ಆವೃತ ರಾಜನು ಮುಂದೆ ಸಾಗಿದನು.

01063003a ಸಿಂಹನಾದೈಶ್ಚ ಯೋಧಾನಾಂ ಶಂಖದುಂದುಭಿನಿಸ್ವನೈಃ|

01063003c ರಥನೇಮಿಸ್ವನೈಶ್ಚಾಪಿ ಸನಾಗವರಬೃಂಹಿತೈಃ||

01063004a ಹೇಷಿತಸ್ವನಮಿಶ್ರೈಶ್ಚ ಕ್ಷ್ವೇಡಿತಾಸ್ಫೋಟಿತಸ್ವನೈಃ|

01063004c ಆಸೀತ್ಕಿಲಕಿಲಾಶಬ್ದಸ್ತಸ್ಮಿನ್ಗಚ್ಛತಿ ಪಾರ್ಥಿವೇ||

ರಾಜನು ಹೊರಟಾಗ ಯೋಧರ ಸಿಂಹನಾದ, ಶಂಖದುಂಧುಭಿಗಳ ಸ್ವರ, ರಥಗಾಲಿಗಳ ಶಬ್ಧ, ದೊಡ್ಡ ದೊಡ್ಡ ಆನೆಗಳ ಕೂಗಾಟ, ಕುದುರೆಗಳ ಕೂಗು, ನಡೆಯುತ್ತಿರುವ ಸೈನಿಕರ ಆಯುಧಗಳ ಸದ್ದು ಇವುಗಳೆಲ್ಲವುಗಳ ಒಟ್ಟು ಆರ್ಭಟವು ಕಿವಿಗಳನ್ನು ಕಿವುಡುಮಾಡುವಷ್ಟು ಜೋರಿನಲ್ಲಿ ಕೇಳಿಬರುತ್ತಿತ್ತು.

01063005a ಪ್ರಾಸಾದವರಶೃಂಗಸ್ಥಾಃ ಪರಯಾ ನೃಪಶೋಭಯಾ|

01063005c ದದೃಶುಸ್ತಂ ಸ್ತ್ರಿಯಸ್ತತ್ರ ಶೂರಮಾತ್ಮಯಶಸ್ಕರಂ||

ಶೂರನೂ ಆತ್ಮಯಶಸ್ಕರನೂ ಆದ ಆ ಸುಂದರ ನೃಪನನ್ನು ಸ್ತ್ರೀಯರು ಮನೆಗಳ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು.

01063006a ಶಕ್ರೋಪಮಮಮಿತ್ರಘ್ನಂ ಪರವಾರಣವಾರಣಂ|

01063006c ಪಶ್ಯಂತಃ ಸ್ತ್ರೀಗಣಾಸ್ತತ್ರ ಶಸ್ತ್ರಪಾಣಿಂ ಸ್ಮ ಮೇನಿರೇ||

ಶಕ್ರನಂತೆ ಶತ್ರುಗಳನ್ನು ನಾಶಗೊಳಿಸಬಲ್ಲ, ಪರರ ಆನೆಗಳನ್ನು ಹೊಡೆದೋಡಿಸಬಲ್ಲ ಆ ಶಸ್ತ್ರಪಾಣಿಯನ್ನು ನೋಡಿದ ಸ್ತ್ರೀಗಣಗಳು ಈ ರೀತಿ ಯೋಚಿಸಿಸುತ್ತಿದ್ದವು:

01063007a ಅಯಂ ಸ ಪುರುಷವ್ಯಾಘ್ರೋ ರಣೇಽದ್ಭುತಪರಾಕ್ರಮಃ|

01063007c ಯಸ್ಯ ಬಾಹುಬಲಂ ಪ್ರಾಪ್ಯ ನ ಭವಂತ್ಯಸುಹೃದ್ಗಣಾಃ||

“ರಣದಲ್ಲಿ ಅದ್ಭುತಪರಾಕ್ರಮಿಯಾದ ಇವನು ಪುರುಷವ್ಯಾಘ್ರ. ಇವನ ಬಾಹುಬಲಕ್ಕೆ ಸಿಲುಕಿದ ಯಾವ ಶತ್ರುವೂ ಉಳಿಯಲಿಕ್ಕಿಲ್ಲ.”

01063008a ಇತಿ ವಾಚೋ ಬ್ರುವಂತ್ಯಸ್ತಾಃ ಸ್ತ್ರಿಯಃ ಪ್ರೇಮ್ಣಾ ನರಾಧಿಪಂ|

01063008c ತುಷ್ಟುವುಃ ಪುಷ್ಪವೃಷ್ಟೀಶ್ಚ ಸಸೃಜುಸ್ತಸ್ಯ ಮೂರ್ಧನಿ||

ನರಾಧಿಪನ ಕುರಿತು ಪ್ರೇಮದಿಂದ ಸ್ತ್ರೀಯರು ಈ ರೀತಿ ಆಡಿಕೊಂಡರು, ಮತ್ತು ಸಂತಸದಿಂದ ಅವನ ನೆತ್ತಿಯ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು.

01063009a ತತ್ರ ತತ್ರ ಚ ವಿಪ್ರೇಂದ್ರೈಃ ಸ್ತೂಯಮಾನಃ ಸಮಂತತಃ|

01063009c ನಿರ್ಯಯೌ ಪರಯಾ ಪ್ರೀತ್ಯಾ ವನಂ ಮೃಗಜಿಘಾಂಸಯಾ||

ಅವನು ಹೋದಲ್ಲೆಲ್ಲಾ ವಿಪ್ರೇಂದ್ರರು ಸ್ತುತಿಸುತ್ತಿರಲು ಅವನು ಅತಿ ಸಂತಸದಿಂದ ಮೃಗ ಬೇಟೆಗೆಂದು ವನವನ್ನು ಪ್ರವೇಶಿಸಿದನು.

01063010a ಸುದೂರಮನುಜಗ್ಮುಸ್ತಂ ಪೌರಜಾನಪದಾಸ್ತದಾ|

01063010c ನ್ಯವರ್ತಂತ ತತಃ ಪಶ್ಚಾದನುಜ್ಞಾತಾ ನೃಪೇಣ ಹ||

ಅವನನ್ನು ಸ್ವಲ್ಪದೂರದವರೆಗೆ ಅನುಸರಿಸಿದ ನಗರ ಮತ್ತು ಗ್ರಾಮೀಣ ಜನರು ಸ್ವಲ್ಪ ಸಮಯದ ನಂತರ ರಾಜನ ಅನುಜ್ಞೆಯಂತೆ ಹಿಂದಿರುಗಿದರು.

01063011a ಸುಪರ್ಣಪ್ರತಿಮೇನಾಥ ರಥೇನ ವಸುಧಾಧಿಪಃ|

01063011c ಮಹೀಮಾಪೂರಯಾಮಾಸ ಘೋಷೇಣ ತ್ರಿದಿವಂ ತಥಾ||

ಗರುಡನಂತೆ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ಆ ವಸುಧಾಧಿಪನ ರಥ ಘೋಷವು ಇಡೀ ಭೂಮಿಯನ್ನೂ ಸೇರಿ ಮೂರೂ ಲೋಕಗಳನ್ನೂ ತುಂಬಿತು.

01063012a ಸ ಗಚ್ಛಂದದೃಶೇ ಧೀಮಾನ್ನಂದನಪ್ರತಿಮಂ ವನಂ|

01063012c ಬಿಲ್ವಾರ್ಕಖದಿರಾಕೀರ್ಣಂ ಕಪಿತ್ಥಧವಸಂಕುಲಂ||

ಹೀಗೆ ಹೋಗುತ್ತಿರುವಾಗ ಆ ಧೀಮಂತನು ಬಿಲ್ವಾಕ, ಅರ್ಕ, ಖದಿರ, ಕೀರ್ಣ, ಕಪಿತ್ಥ ಮತ್ತು ಧವ ಸಂಕುಲಗಳಿಂದ ಕೂಡಿದ ನಂದನವನವನ್ನೇ ಹೋಲುವ ವನವೊಂದನ್ನು ಕಂಡನು.

01063013a ವಿಷಮಂ ಪರ್ವತಪ್ರಸ್ಥೈರಶ್ಮಭಿಶ್ಚ ಸಮಾವೃತಂ|

01063013c ನಿರ್ಜಲಂ ನಿರ್ಮನುಷ್ಯಂ ಚ ಬಹುಯೋಜನಮಾಯತಂ|

01063013e ಮೃಗಸಂಘೈರ್ವೃತಂ ಘೋರೈರನ್ಯೈಶ್ಚಾಪಿ ವನೇಚರೈಃ||

ಅದು ಪರ್ವತ, ಕಣಿವೆ, ಬಂಡೆಗಲ್ಲುಗಳನ್ನುಹೊಂದಿದ್ದು ವಿಷಮವಾಗಿತ್ತು; ನಿರ್ಜಲ ನಿರ್ಮನುಷ್ಯವಾಗಿ ಬಹಳಷ್ಟು ಯೋಜನ ವಿಸ್ತೀರ್ಣಗೊಂಡಿತ್ತು; ಜಿಂಕೆ, ಸಿಂಹ ಮತ್ತು ಇನ್ನೂ ಇತರ ಘೋರ ವನಪ್ರಾಣಿಗಳಿಂದ ತುಂಬಿಕೊಂಡಿತ್ತು. 

01063014a ತದ್ವನಂ ಮನುಜವ್ಯಾಘ್ರಃ ಸಭೃತ್ಯಬಲವಾಹನಃ|

01063014c ಲೋಡಯಾಮಾಸ ದುಃಷಂತಃ ಸೂದಯನ್ವಿವಿಧಾನ್ಮೃಗಾನ್||

ತನ್ನ ಸೇವಕರು ಮತ್ತು ಸೈನಿಕರೊಡಗೂಡಿದ ಆ ಮನುಜವ್ಯಾಘ್ರ ದುಃಷಂತನು ಆ ವನದಲ್ಲಿ ವಿವಿಧ ಮೃಗಗಳನ್ನು ಬೇಟೆಯಾಡಿದನು.

01063015a ಬಾಣಗೋಚರಸಂಪ್ರಾಪ್ತಾಂಸ್ತತ್ರ ವ್ಯಾಘ್ರಗಣಾನ್ಬಹೂನ್|

01063015c ಪಾತಯಾಮಾಸ ದುಃಷಂತೋ ನಿರ್ಬಿಭೇದ ಚ ಸಾಯಕೈಃ||

ತನ್ನ ಬಾಣಗಳ ಪರಿಧಿಯಲ್ಲಿ ಸಿಕ್ಕಿದ ಹಲವಾರು ವ್ಯಾಘ್ರಗಳನ್ನು ದುಃಷಂತನು ಸಾಯಕಗಳಿಂದ ಹೊಡೆದು ಉರುಳಿಸಿದನು.

01063016a ದೂರಸ್ಥಾನ್ಸಾಯಕೈಃ ಕಾಂಶ್ಚಿದಭಿನತ್ಸ ನರರ್ಷಭಃ|

01063016c ಅಭ್ಯಾಶಮಾಗತಾಂಶ್ಚಾನ್ಯಾನ್ಖಡ್ಗೇನ ನಿರಕೃಂತತ||

ಆ ನರರ್ಷಭನು ದೂರದಲ್ಲಿರುವವನ್ನು ಬಾಣಗಳಿಂದ ಹೊಡೆದನು; ಹತ್ತಿರದಲ್ಲಿರುವವನ್ನು ಖಡ್ಗದಿಂದ ಕತ್ತರಿಸಿದನು.

01063017a ಕಾಂಶ್ಚಿದೇಣಾನ್ಸ ನಿರ್ಜಘ್ನೇ ಶಕ್ತ್ಯಾ ಶಕ್ತಿಮತಾಂ ವರಃ|

01063017c ಗದಾಮಂಡಲತತ್ತ್ವಜ್ಞಶ್ಚಚಾರಾಮಿತವಿಕ್ರಮಃ||

01063018a ತೋಮರೈರಸಿಭಿಶ್ಚಾಪಿ ಗದಾಮುಸಲಕರ್ಪಣೈಃ|

01063018c ಚಚಾರ ಸ ವಿನಿಘ್ನನ್ವೈ ವನ್ಯಾಂಸ್ತತ್ರ ಮೃಗದ್ವಿಜಾನ್||

ಆ ಶಕ್ತಿವಂತರಲ್ಲಿ ಶ್ರೇಷ್ಠನು ಕೆಲವು ಪ್ರಾಣಿಗಳನ್ನು ಈಟಿಯಿಂದ ಹೊಡೆದನು; ಆ ಅಮಿತವಿಕ್ರಮಿಯು ಕೆಲವನ್ನು ಗದೆಯಿಂದ ಹೊಡೆದು ಉರುಳಿಸಿದನು. ಈ ರೀತಿ ತೋಮರ, ಖಡ್ಗ, ಗದೆ, ಮುಸಲ ಮುಂತಾದ ಆಯುಧಗಳನ್ನು ಹಿಡಿದು ಬೇಟೆಯಾಡುವಾಗ ಆ ವನದಲ್ಲಿರುವ ಮೃಗಗಳೆಲ್ಲವೂ ಅಲ್ಲಿಂದ ಪಲಾಯನಗೈಯ ತೊಡಗಿದವು.

01063019a ರಾಜ್ಞಾ ಚಾದ್ಭುತವೀರ್ಯೇಣ ಯೋಧೈಶ್ಚ ಸಮರಪ್ರಿಯೈಃ|

01063019c ಲೋಡ್ಯಮಾನಂ ಮಹಾರಣ್ಯಂ ತತ್ಯಜುಶ್ಚ ಮಹಾಮೃಗಾಃ||

ರಾಜನ ಆ ಸಮರಪ್ರಿಯ ಅದ್ಭುತವೀರ್ಯ ಯೋಧರ ಧಾಳಿಗೊಳಗಾದ ಆ ಮಹಾರಣ್ಯದ ಮಹಾಮೃಗಗಳೆಲ್ಲವೂ ಅಲ್ಲಿಂದ ಓಡತೊಡಗಿದವು.

01063020a ತತ್ರ ವಿದ್ರುತಸಂಘಾನಿ ಹತಯೂಥಪತೀನಿ ಚ|

01063020c ಮೃಗಯೂಥಾನ್ಯಥೌತ್ಸುಕ್ಯಾಚ್ಚಬ್ದಂ ಚಕ್ರುಸ್ತತಸ್ತತಃ||

ತಮ್ಮ ಪಡೆಯ ನಾಯಕನನ್ನು ಕಳೆದುಕೊಂಡು ಗಲಿಬಿಲಿಗೊಂಡ ಜಿಂಕೆಗಳ ಪಡೆಯು ಭಯ ಉದ್ವೇಗಗಳ ಆಕ್ರಂದವನ್ನೀಯುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಓಡತೊಡಗಿದವು.

01063021a ಶುಷ್ಕಾಂ ಚಾಪಿ ನದೀಂ ಗತ್ವಾ ಜಲನೈರಾಶ್ಯಕರ್ಶಿತಾಃ|

01063021c ವ್ಯಾಯಾಮಕ್ಲಾಂತಹೃದಯಾಃ ಪತಂತಿ ಸ್ಮ ವಿಚೇತಸಃ||

01063022a ಕ್ಷುತ್ಪಿಪಾಸಾಪರೀತಾಶ್ಚ ಶ್ರಾಂತಾಶ್ಚ ಪತಿತಾ ಭುವಿ|

01063022c ಕೇ ಚಿತ್ತತ್ರ ನರವ್ಯಾಘ್ರೈರಭಕ್ಷ್ಯಂತ ಬುಭುಕ್ಷಿತೈಃ||

ಬತ್ತಿಹೋದ ನದಿಗಳಿಂದ ತಮ್ಮ ಬಾಯಾರಿಕೆಯನ್ನು ನೀಗಿಕೊಳ್ಳಲಾರದೇ ಕೃಷರಾಗಿ, ಆಯಾಸದಿಂದ ಬಳಲಿದವರಾಗಿ ಅಲ್ಲಿಯೇ ವಿಚೇತಸರಾಗಿ ಬಿದ್ದವು. ಹಸಿವು ಬಾಯಾರಿಕೆಗಳಿಂದ ಬಳಲಿದವುಗಳು ಭೂಮಿಯ ಮೇಲೆ ಬಿದ್ದವು. ಕೆಲವನ್ನು ಅಲ್ಲಿದ್ದ ನರವ್ಯಾಘ್ರರು ಹಸಿದಾಗಿಯೇ ಭಕ್ಷಿಸಿದರು.

01063023a ಕೇ ಚಿದಗ್ನಿಮಥೋತ್ಪಾದ್ಯ ಸಮಿಧ್ಯ ಚ ವನೇಚರಾಃ|

01063023c ಭಕ್ಷಯಂತಿ ಸ್ಮ ಮಾಂಸಾನಿ ಪ್ರಕುಟ್ಯ ವಿಧಿವತ್ತದಾ|

ಕೆಲವೊಂದನ್ನು ಆ ವನಚರರು ಬೆಂಕಿಯನ್ನು ಹಾಕಿ ಅದರಲ್ಲಿ ಮಾಂಸವನ್ನು ವಿಧಿವತ್ತಾಗಿ ಸುಟ್ಟು ತಿಂದರು.

01063024a ತತ್ರ ಕೇ ಚಿದ್ಗಜಾ ಮತ್ತಾ ಬಲಿನಃ ಶಸ್ತ್ರವಿಕ್ಷತಾಃ|

01063024cಸಂಕೋಚ್ಯಾಗ್ರಕರಾನ್ಭೀತಾಃ ಪ್ರದ್ರವಂತಿ ಸ್ಮ ವೇಗಿತಾಃ||

ಶಸ್ತ್ರಗಳಿಂದ ಗಾಯಗೊಂಡು ಭಯಭೀತರಾದ ಬಲಶಾಲೀ ಮತ್ತ ಗಜಗಳು ತಮ್ಮ ಸೊಂಡಿಲುಗಳನ್ನು ಮೇಲೇರಿಸಿ ಘೀಳಿಡುತ್ತಾ ಓಡತೊಡಗಿದವು.

01063025a ಶಕೃನ್ಮೂತ್ರಂ ಸೃಜಂತಶ್ಚ ಕ್ಷರಂತಃ ಶೋಣಿತಂ ಬಹು|

01063025c ವನ್ಯಾ ಗಜವರಾಸ್ತತ್ರ ಮಮೃದುರ್ಮನುಜಾನ್ಬಹೂನ್||

ಭಯಭೀತರಾಗಿ ಮಲ ಮೂತ್ರಗಳನ್ನು ವಿಸರ್ಜಿಸುತ್ತಾ ರಕ್ತವನ್ನು ಕಾರುತ್ತಾ ಓಡುತ್ತಿದ್ದ ಆ ಆನೆಗಳು ಹಲವಾರು ಸೈನಿಕರನ್ನು ತುಳಿದು ಕೊಂದುಹಾಕಿದವು.

01063026a ತದ್ವನಂ ಬಲಮೇಘೇನ ಶರಧಾರೇಣ ಸಂವೃತಂ|

01063026c ವ್ಯರೋಚನ್ಮಹಿಷಾಕೀರ್ಣಂ ರಾಜ್ಞಾ ಹತಮಹಾಮೃಗಂ||

ಹಲವಾರು ಪ್ರಾಣಿಗಳಿಂದ ತುಂಬಿದ್ದ ಆ ವನವನ್ನು ರಾಜನ ಅಸಂಖ್ಯ ಸೇನೆಯು ಸಿಂಹ, ಹುಲಿ ಮತ್ತು ಇತರ ಪ್ರಾಣಿಗಳಿಂದ ಮುಕ್ತಮಾಡಿತು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ತ್ರಿಷಷ್ಟಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ಮೂರನೆಯ ಅಧ್ಯಾಯವು.

Comments are closed.