Adi Parva: Chapter 224

ಆದಿ ಪರ್ವ: ಖಾಂಡವದಾಹ ಪರ್ವ

೨೨೪

ಮಂದಪಾಲ ಮತ್ತು ಅವನ ಪತ್ನಿ ಲಪಿತಳ ಸಂವಾದ (೧-೧೬). ಮಂದಪಾಲನು ಮಕ್ಕಳನ್ನು, ಮಕ್ಕಳ ತಾಯಿಯನ್ನೂ ಕೂಡಿದ್ದುದು (೧೭-೩೨).

01224001 ವೈಶಂಪಾಯನ ಉವಾಚ|

01224001a ಮಂದಪಾಲೋಽಪಿ ಕೌರವ್ಯ ಚಿಂತಯಾನಃ ಸುತಾಂಸ್ತದಾ|

01224001c ಉಕ್ತವಾನಪ್ಯಶೀತಾಂಶುಂ ನೈವ ಸ ಸ್ಮ ನ ತಪ್ಯತೇ||

ವೈಶಂಪಾಯನನು ಹೇಳಿದನು: “ಕೌರವ್ಯ! ಮಂದಪಾಲನು ತನ್ನ ಮಕ್ಕಳ ಕುರಿತು ಚಿಂತಿಸತೊಡಗಿದನು. ಶೀತಾಂಶುವೊಂದಿಗೆ ಅವನು ಮಾತನಾಡಿದ್ದರೂ ಅವನು ಉದ್ವಿಗ್ನನಾಗಿದ್ದನು.

01224002a ಸ ತಪ್ಯಮಾನಃ ಪುತ್ರಾರ್ಥೇ ಲಪಿತಾಮಿದಮಬ್ರವೀತ್|

01224002c ಕಥಂ ನ್ವಶಕ್ತಾಃ ಪ್ಲವನೇ ಲಪಿತೇ ಮಮ ಪುತ್ರಕಾಃ||

ಅವನ ಪುತ್ರರ ಮೇಲಿದ್ದ ಚಿಂತೆಯಿಂದ ಅವನು ಲಪಿತಳಲ್ಲಿ ಹೇಳಿದನು: “ಲಪಿತ! ನನ್ನ ಆ ಸಣ್ಣ ಮಕ್ಕಳು ತಪ್ಪಿಸಿಕೊಂಡು ಹೋಗಲು ಅಶಕ್ತರು.

01224003a ವರ್ಧಮಾನೇ ಹುತವಹೇ ವಾತೇ ಶೀಘ್ರಂ ಪ್ರವಾಯತಿ|

01224003c ಅಸಮರ್ಥಾ ವಿಮೋಕ್ಷಾಯ ಭವಿಷ್ಯಂತಿ ಮಮಾತ್ಮಜಾಃ||

ಬೆಂಕಿಯು ಹೆಚ್ಚಾಗಿ ಉರಿಯುತ್ತಿದ್ದಾಗ, ಮತ್ತು ಗಾಳಿಯು ಜೋರಾಗಿ ಬೀಸುತ್ತಿರುವಾಗ ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಅಸಮರ್ಥರಾಗುತ್ತಾರೆ.

01224004a ಕಥಂ ನ್ವಶಕ್ತಾ ತ್ರಾಣಾಯ ಮಾತಾ ತೇಷಾಂ ತಪಸ್ವಿನೀ|

01224004c ಭವಿಷ್ಯತ್ಯಸುಖಾವಿಷ್ಟಾ ಪುತ್ರತ್ರಾಣಮಪಶ್ಯತೀ||

ಅವರ ತಪಸ್ವಿನಿ ತಾಯಿಯೂ ಕೂಡ ಅವರನ್ನು ಉಳಿಸಲು ಅಶಕ್ತಳಾಗುತ್ತಾಳೆ. ಪುತ್ರರನ್ನು ಉಳಿಸಲು ಸಾಧ್ಯವಾಗಲಿಲ್ಲವೆಂದು ಅವಳು ತುಂಬಾ ದುಃಖಿಯಾಗಿರಬಹುದು.

01224005a ಕಥಂ ನು ಸರಣೇಽಶಕ್ತಾನ್ಪತನೇ ಚ ಮಮಾತ್ಮಜಾನ್|

01224005c ಸಂತಪ್ಯಮಾನಾ ಅಭಿತೋ ವಾಶಮಾನಾಭಿಧಾವತೀ||

ನನ್ನ ಪುತ್ರರಿಗಾಗಿ ಚಡಪಡಿಸುತ್ತಾ, ಓಡಲಿಕ್ಕೂ ಆಗದೇ, ಹಾರಿಹೋಗಲಿಕ್ಕೂ ಆಗದೇ ತಪಿಸುತ್ತಾ ಅಲ್ಲಿಯೇ ಕಿರುಚುತ್ತಾ ಹಾರಾಡುತ್ತಾ ಇರಬಹುದು!

01224006a ಜರಿತಾರಿಃ ಕಥಂ ಪುತ್ರಃ ಸಾರಿಸೃಕ್ವಃ ಕಥಂ ಚ ಮೇ|

01224006c ಸ್ತಂಬಮಿತ್ರಃ ಕಥಂ ದ್ರೋಣಃ ಕಥಂ ಸಾ ಚ ತಪಸ್ವಿನೀ||

ಪುತ್ರ ಜರಿತಾರಿಯು ಹೇಗಿರಬಹುದು? ನನ್ನ ಸಾರಿಸೃಕ್ವನು ಹೇಗಿರಬಹುದು? ಸ್ತಂಬಮಿತ್ರನು ಹೇಗಿರಬಹುದು? ಮತ್ತು ಆ ತಪಸ್ವಿನೀ ದ್ರೋಣನು ಹೇಗಿರಬಹುದು?”

01224007a ಲಾಲಪ್ಯಮಾನಂ ತಂ ಋಷಿಂ ಮಂದಪಾಲಂ ತಥಾ ವನೇ|

01224007c ಲಪಿತಾ ಪ್ರತ್ಯುವಾಚೇದಂ ಸಾಸೂಯಮಿವ ಭಾರತ||

ಭಾರತ! ಈ ರೀತಿ ವನದಲ್ಲಿ ಋಷಿ ಮಂದಪಾಲನು ವಿಲಪಿಸುತ್ತಿರಲು ಲಪಿತೆಯು ಅಸೂಯೆಯಿಂದ ಅವನಿಗೆ ಹೇಳಿದಳು:

01224008a ನ ತೇ ಸುತೇಷ್ವವೇಕ್ಷಾಸ್ತಿ ತಾನೃಷೀನುಕ್ತವಾನಸಿ|

01224008c ತೇಜಸ್ವಿನೋ ವೀರ್ಯವಂತೋ ನ ತೇಷಾಂ ಜ್ವಲನಾದ್ಭಯಂ||

“ನೀನು ನಿನ್ನ ಸುತರ ರಕ್ಷಣೆಮಾಡುತ್ತಿಲ್ಲ! ಅವರು ತೇಜಸ್ವಿ, ವೀರ್ಯವಂತ ಋಷಿಗಳೆಂದೂ ಅವರಿಗೆ ಅಗ್ನಿಯ ಭಯವಿಲ್ಲ ಎಂದು ನೀನೇ ಹೇಳಿದ್ದೆ.

01224009a ತಥಾಗ್ನೌ ತೇ ಪರೀತ್ತಾಶ್ಚ ತ್ವಯಾ ಹಿ ಮಮ ಸನ್ನಿಧೌ|

01224009c ಪ್ರತಿಶ್ರುತಂ ತಥಾ ಚೇತಿ ಜ್ವಲನೇನ ಮಹಾತ್ಮನಾ||

ಹಾಗೆಯೇ ನನ್ನ ಸನ್ನಿಧಿಯಲ್ಲಿಯೇ ನೀನು ಅವರನ್ನು ಅಗ್ನಿಯ ರಕ್ಷಣೆಯಲ್ಲಿ ಇಟ್ಟಿದ್ದೆ ಮತ್ತು ಆ ಮಹಾತ್ಮನು ಭರವಸೆಯನ್ನು ನೀಡಿದ್ದನು.

01224010a ಲೋಕಪಾಲೋಽನೃತಾಂ ವಾಚಂ ನ ತು ವಕ್ತಾ ಕಥಂ ಚನ|

01224010c ಸಮರ್ಥಾಸ್ತೇ ಚ ವಕ್ತಾರೋ ನ ತೇ ತೇಷ್ವಸ್ತಿ ಮಾನಸಂ||

ಲೋಕಪಾಲಕರು ಎಂದೂ ಸುಳ್ಳನ್ನು ಹೇಳುವುದಿಲ್ಲ. ಮತ್ತು ಅವರು ಸಮರ್ಥ ವಾಗ್ಮಿಗಳು. ಇಲ್ಲ. ಅವರ ಮೇಲೆ ನಿನ್ನ ಮನಸ್ಸಿಲ್ಲ.

01224011a ತಾಮೇವ ತು ಮಮಾಮಿತ್ರೀಂ ಚಿಂತಯನ್ಪರಿತಪ್ಯಸೇ|

01224011c ಧ್ರುವಂ ಮಯಿ ನ ತೇ ಸ್ನೇಹೋ ಯಥಾ ತಸ್ಯಾಂ ಪುರಾಭವತ್|

ನೀನು ನನ್ನ ಸವತಿಯ ಕುರಿತು ಚಿಂತಿಸಿ ಪರಿತಪಿಸುತ್ತಿದ್ದೀಯೆ! ಹಿಂದೆ ನೀನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆಯೋ ಅಷ್ಟು ನನ್ನನ್ನು ಪ್ರೀತಿಸುತ್ತಿಲ್ಲ ಎನ್ನುವುದು ಸತ್ಯ.

01224012a ನ ಹಿ ಪಕ್ಷವತಾ ನ್ಯಾಯ್ಯಂ ನಿಃಸ್ನೇಹೇನ ಸುಹೃಜ್ಜನೇ|

01224012c ಪೀಡ್ಯಮಾನ ಉಪದ್ರಷ್ಟುಂ ಶಕ್ತೇನಾತ್ಮಾ ಕಥಂ ಚನ||

ಸುಹೃಜ್ಜನರಲ್ಲಿ ನಿಃಸ್ನೇಹದಿಂದ ಎಂದೂ ನ್ಯಾಯ ಮತ್ತು ಪಕ್ಷಪಾತವನ್ನು ಮಾಡಬಾರದು. ಚಡಪಡಿಸುತ್ತಿರುವವನನ್ನು ನೋಡಲು ನನಗೆ ಎಂದೂ ಶಕ್ಯವಿಲ್ಲ.

01224013a ಗಚ್ಛ ತ್ವಂ ಜರಿತಾಮೇವ ಯದರ್ಥಂ ಪರಿತಪ್ಯಸೇ|

01224013c ಚರಿಷ್ಯಾಮ್ಯಹಮಪ್ಯೇಕಾ ಯಥಾ ಕಾಪುರುಷೇ ತಥಾ||

ನೀನು ಯಾರ ಕುರಿತು ಪರಿತಪಿಸುತ್ತಿದ್ದೀಯೋ ಆ ನಿನ್ನ ಜರಿತೆಯ ಬಳಿ ಹೋಗು. ನಾನು ಕಾಪುರುಷನೊಂದಿಗಿರುವವಳಂತೆ ಏಕಾಂಗಿಯಾಗಿ ಅಲೆಯುತ್ತಿರುತ್ತೇನೆ.”

01224014 ಮಂದಪಾಲ ಉವಾಚ|

01224014a ನಾಹಮೇವಂ ಚರೇ ಲೋಕೇ ಯಥಾ ತ್ವಮಭಿಮನ್ಯಸೇ|

01224014c ಅಪತ್ಯಹೇತೋರ್ವಿಚರೇ ತಚ್ಚ ಕೃಚ್ಛ್ರಗತಂ ಮಮ||

ಮಂದಪಾಲನು ಹೇಳಿದನು: “ನೀನು ಕಲ್ಪಿಸಿದ ಕಾರಣಕ್ಕಾಗಿ ನಾನು ಲೋಕದಲ್ಲಿ ಸಂಚರಿಸುತ್ತಿದ್ದೇನೆ ಎಂದು ತಿಳಿಯಬೇಡ! ನಾನು ಸಂತಾನಕ್ಕೆಂದು ಈ ಲೋಕದಲ್ಲಿ ಸಂಚರಿಸುತ್ತಿದ್ದೇನೆ ಮತ್ತು ಈ ಸಮಯದಲ್ಲಿ ನನ್ನ ಮಕ್ಕಳು ಕಷ್ಟದಲ್ಲಿದ್ದಾರೆ.

01224015a ಭೂತಂ ಹಿತ್ವಾ ಭವಿಷ್ಯೇಽರ್ಥೇ ಯೋಽವಲಂಬೇತ ಮಂದಧೀಃ|

01224015c ಅವಮನ್ಯೇತ ತಂ ಲೋಕೋ ಯಥೇಚ್ಛಸಿ ತಥಾ ಕುರು|

ಇರುವುದನ್ನು ತೊರೆದು ಭವಿಷ್ಯದಲ್ಲಿ ಆಗಬಹುದಾದುದನ್ನು ಅವಲಂಬಿಸಿರುವವನು ಮೂಢ. ಅಂಥವವನ್ನು ಲೋಕವು ಕೀಳಾಗಿ ಕಾಣುತ್ತದೆ. ನಿನಗೆ ಇಷ್ಟಬಂದಹಾಗೆ ಮಾಡು.

01224016a ಏಷ ಹಿ ಜ್ವಲಮಾನೋಽಗ್ನಿರ್ಲೇಲಿಹಾನೋ ಮಹೀರುಹಾನ್|

01224016c ದ್ವೇಷ್ಯಂ ಹಿ ಹೃದಿ ಸಂತಾಪಂ ಜನಯತ್ಯಶಿವಂ ಮಮ||

ಈ ಜ್ವಲಿಸುತ್ತಿರುವ ಮಹಾ ವೃಕ್ಷಗಳನ್ನು ನೆಕ್ಕುತ್ತಾ ಕೆಟ್ಟದನ್ನು ತರುವ ಈ ಅಗ್ನಿಯು ನನ್ನ ಹೃದಯದಲ್ಲಿ ಅಶುಭ ಸಂತಾಪವನ್ನು ಹುಟ್ಟಿಸುತ್ತಿದ್ದಾನೆ.””

01224017 ವೈಶಂಪಾಯನ ಉವಾಚ|

01224017a ತಸ್ಮಾದ್ದೇಶಾದತಿಕ್ರಾಂತೇ ಜ್ವಲನೇ ಜರಿತಾ ತತಃ|

01224017c ಜಗಾಮ ಪುತ್ರಕಾನೇವ ತ್ವರಿತಾ ಪುತ್ರಗೃದ್ಧಿನೀ||

ವೈಶಂಪಾಯನನು ಹೇಳಿದನು: “ಅಗ್ನಿಯು ತನ್ನ ಪುತ್ರರಿರುವ ಆ ಸ್ಥಳವನ್ನು ದಾಟಿ ಹೋದನಂತರ ತಕ್ಷಣವೇ ಪುತ್ರರ ಮೇಲಿನ ಪ್ರೀತಿಯಿಂದ ಜರಿತೆಯು ಅಲ್ಲಿಗೆ ಬಂದಳು.

01224018a ಸಾ ತಾನ್ಕುಶಲಿನಃ ಸರ್ವಾನ್ನಿರ್ಮುಕ್ತಾಂಜಾತವೇದಸಃ|

01224018c ರೋರೂಯಮಾಣಾ ಕೃಪಣಾ ಸುತಾನ್ದೃಷ್ಟವತೀ ವನೇ||

ದುಃಖದಿಂದ ರೋದಿಸುತ್ತಿರುವ ಅವಳು ಆ ವನದಲ್ಲಿ ಜಾತವೇದಸ ಅಗ್ನಿಯಿಂದ ಮುಕ್ತರಾಗಿ ಕುಶಲರಾಗಿದ್ದ ತನ್ನ ಸುತರನ್ನು ಕಂಡಳು.

01224019a ಅಶ್ರದ್ಧೇಯತಮಂ ತೇಷಾಂ ದರ್ಶನಂ ಸಾ ಪುನಃ ಪುನಃ|

01224019c ಏಕೈಕಶಶ್ಚ ತಾನ್ಪುತ್ರಾನ್ಕ್ರೋಶಮಾನಾನ್ವಪದ್ಯತ||

ನೋಡಲಿಕ್ಕೆ ಅದೊಂದು ಅದ್ಭುತ ದೃಶ್ಯವಾಗಿತ್ತು. ಪುನಃ ಪುನಃ ಅವಳು ಆ ಪುತ್ರರನ್ನು ಒಬ್ಬೊಬ್ಬರನ್ನಾಗಿಯೇ ಅಪ್ಪಿಕೊಂಡು ರೋದಿಸಿದಳು.

01224020a ತತೋಽಭ್ಯಗಚ್ಛತ್ಸಹಸಾ ಮಂದಪಾಲೋಽಪಿ ಭಾರತ|

01224020c ಅಥ ತೇ ಸರ್ವ ಏವೈನಂ ನಾಭ್ಯನಂದಂತ ವೈ ಸುತಾಃ||

ಭಾರತ! ಆಗ ತಕ್ಷಣವೇ ಅಲ್ಲಿಗೆ ಮಂದಪಾಲನೂ ಬಂದನು. ಆದರೆ ಅವನ ಮಕ್ಕಳೆಲ್ಲರಲ್ಲಿ ಯಾರೊಬ್ಬನೂ ಅವನನ್ನು ಅಭಿನಂದಿಸಲಿಲ್ಲ.

01224021a ಲಾಲಪ್ಯಮಾನಮೇಕೈಕಂ ಜರಿತಾಂ ಚ ಪುನಃ ಪುನಃ|

01224021c ನೋಚುಸ್ತೇ ವಚನಂ ಕಿಂ ಚಿತ್ತಮೃಷಿಂ ಸಾಧ್ವಸಾಧು ವಾ||

ಅವನು ಪುನಃ ಪುನಃ ಒಬ್ಬೊಬ್ಬರಲ್ಲಿಯೂ ಜರಿತೆಯಲ್ಲಿಯೂ ಮಾತನ್ನಾಡುತ್ತಿರಲು ಅವರು ಯಾರೂ ಆ ಋಷಿಯನ್ನು ಕುರಿತು ಒಳ್ಳೆಯ ಅಥವಾ ಕೆಟ್ಟ ಮಾತುಗಳನ್ನು ಆಡಲಿಲ್ಲ.

01224022 ಮಂದಪಾಲ ಉವಾಚ|

01224022a ಜ್ಯೇಷ್ಠಃ ಸುತಸ್ತೇ ಕತಮಃ ಕತಮಸ್ತದನಂತರಃ|

01224022c ಮಧ್ಯಮಃ ಕತಮಃ ಪುತ್ರಃ ಕನಿಷ್ಠಃ ಕತಮಶ್ಚ ತೇ||

ಮಂದಪಾಲನು ಹೇಳಿದನು: “ನಿಮ್ಮಲ್ಲಿ ಯಾರು ನನ್ನ ಜ್ಯೇಷ್ಠ ಪುತ್ರ? ಯಾರು ಅವನ ನಂತರದವನು? ನಿಮ್ಮಲ್ಲಿ ಯಾರು ಮಧ್ಯಮ ಪುತ್ರ ಮತ್ತು ಕನಿಷ್ಠನು ಯಾರು?

01224023a ಏವಂ ಬ್ರುವಂತಂ ದುಃಖಾರ್ತಂ ಕಿಂ ಮಾಂ ನ ಪ್ರತಿಭಾಷಸೇ|

01224023c ಕೃತವಾನಸ್ಮಿ ಹವ್ಯಾಶೇ ನೈವ ಶಾಂತಿಮಿತೋ ಲಭೇ||

ಹೀಗೆ ದುಃಖಾರ್ತನಾಗಿ ಮಾತನಾಡುತ್ತಿರುವ ನನ್ನಲ್ಲಿ ನೀವು ಯಾಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ಹವ್ಯವಾಹನನಿಗೆ ನಿಮ್ಮನ್ನು ಒಪ್ಪಿಸಿ ಹೋಗಿದ್ದರೂ ನನಗೆ ಶಾಂತಿಯೇ ದೊರೆಯಲಿಲ್ಲ.”

01224024 ಜರಿತೋವಾಚ|

01224024a ಕಿಂ ತೇ ಜ್ಯೇಷ್ಠೇ ಸುತೇ ಕಾರ್ಯಂ ಕಿಮನಂತರಜೇನ ವಾ|

01224024c ಕಿಂ ಚ ತೇ ಮಧ್ಯಮೇ ಕಾರ್ಯಂ ಕಿಂ ಕನಿಷ್ಠೇ ತಪಸ್ವಿನಿ|

ಜರಿತಾಳು ಹೇಳಿದಳು: “ನಿನ್ನ ಜ್ಯೇಷ್ಠ ಸುತ ಯಾರಾದರೆ ನಿನಗೇನು? ಅನಂತರದವನು ಯಾರಾದರೆ ನಿನಗೇನು? ನಿನ್ನ ಮಧ್ಯಮನಲ್ಲಿ ನಿನಗೇನು ಕೆಲಸ ಮತ್ತು ತಪಸ್ವಿನಿ ಕನಿಷ್ಠನಲ್ಲಿ ಏನು ಕೆಲಸ?

01224025a ಯಸ್ತ್ವಂ ಮಾಂ ಸರ್ವಶೋ ಹೀನಾಮುತ್ಸೃಜ್ಯಾಸಿ ಗತಃ ಪುರಾ|

01224025c ತಾಮೇವ ಲಪಿತಾಂ ಗಚ್ಛ ತರುಣೀಂ ಚಾರುಹಾಸಿನೀಂ||

ಹಿಂದೆ ನನ್ನನ್ನು ಸಂಪೂರ್ಣವಾಗಿ ತೊರೆದು ನೀನು ಹೊರಟುಹೋದೆ. ನಿನ್ನ ಆ ತರುಣಿ ಚಾರುಹಾಸಿನಿ ಲಪಿತೆಯ ಬಳಿ ಹೋಗು.”

01224026 ಮಂದಪಾಲ ಉವಾಚ|

01224026a ನ ಸ್ತ್ರೀಣಾಂ ವಿದ್ಯತೇ ಕಿಂ ಚಿದನ್ಯತ್ರ ಪುರುಷಾಂತರಾತ್|

01224026c ಸಾಪತ್ನಕಮೃತೇ ಲೋಕೇ ಭವಿತವ್ಯಂ ಹಿ ತತ್ತಥಾ||

ಮಂದಪಾಲನು ಹೇಳಿದನು: “ಇನ್ನೊಬ್ಬ ಪುರುಷನನ್ನು ಬಿಟ್ಟು ಬೇರೆ ಯಾವುದೂ ಒಬ್ಬ ಸ್ತ್ರೀಗೆ ಸವತಿಯ ಜೊತೆಗಿರುವ ಪೈಪೋಟಿಯಷ್ಟು ಮಾರಕವಲ್ಲ.

01224027a ಸುವ್ರತಾಪಿ ಹಿ ಕಲ್ಯಾಣೀ ಸರ್ವಲೋಕಪರಿಶ್ರುತಾ|

01224027c ಅರುಂಧತೀ ಪರ್ಯಶಂಕದ್ವಸಿಷ್ಠಮೃಷಿಸತ್ತಮಂ||

ಯಾಕೆಂದರೆ ಸುವ್ರತ, ಕಲ್ಯಾಣಿ, ಸರ್ವಲೋಕಪರಿಶ್ರುತ ಅರುಂಧತಿಯೂ ಕೂಡ ಋಷಿಸತ್ತಮ ವಸಿಷ್ಠನನ್ನು ಶಂಕಿಸಿದಳು.

01224028a ವಿಶುದ್ಧಭಾವಮತ್ಯಂತಂ ಸದಾ ಪ್ರಿಯಹಿತೇ ರತಂ|

01224028c ಸಪ್ತರ್ಷಿಮಧ್ಯಗಂ ವೀರಮವಮೇನೇ ಚ ತಂ ಮುನಿಂ||

ಸಪ್ತರ್ಷಿಮಧ್ಯಗ ಅವನು ಸದಾ ಅತ್ಯಂತ ವಿಶುದ್ಧಭಾವದಿಂದ ಅವಳ ಪ್ರಿಯಹಿತರತನಾಗಿದ್ದನು. ಆದರೂ ಅವಳು ಆ ಮುನಿಯನ್ನು ಹೀಯಾಳಿಸಿದಳು.

01224029a ಅಪಧ್ಯಾನೇನ ಸಾ ತೇನ ಧೂಮಾರುಣಸಮಪ್ರಭಾ|

01224029c ಲಕ್ಷ್ಯಾಲಕ್ಷ್ಯಾ ನಾಭಿರೂಪಾ ನಿಮಿತ್ತಮಿವ ಲಕ್ಷ್ಯತೇ||

ಈ ರೀತಿ ಅಸಡ್ಡೆತನ ತೋರಿಸಿದ್ದುದಕ್ಕಾಗಿ ಅವಳು ಧೂಮದಿಂದ ಆವೃತ ಅರುಣನ ಸಮಪ್ರಭೆಯಾಗಿ, ಅಷ್ಟೊಂದು ಸುಂದರವಾಗಿ ಕಾಣದೇ, ಒಮ್ಮೆ ಕಾಣಿಸಿಕೊಳ್ಳುತ್ತಾ ಇನ್ನೊಮ್ಮೆ ಕಾಣಿಸಿಕೊಳ್ಳದೆಯೇ, ನಿಮಿತ್ತದಂತೆ ತೋರಿಸಿಕೊಳ್ಳುತ್ತಾಳೆ.

01224030a ಅಪತ್ಯಹೇತೋಃ ಸಂಪ್ರಾಪ್ತಂ ತಥಾ ತ್ವಮಪಿ ಮಾಮಿಹ|

01224030c ಇಷ್ಟಮೇವಂಗತೇ ಹಿತ್ವಾ ಸಾ ತಥೈವ ಚ ವರ್ತಸೇ||

ನೀನೂ ಕೂಡ ಸಂತಾನಕ್ಕೆಂದೇ ನನ್ನನು ಕೂಡಿದೆ ಮತ್ತು ನಿನಗಿಷ್ಟವಾದವನನ್ನು ತೊರೆದೆ. ಈಗ ನೀನು ಅವಳಂತೆಯೇ ವರ್ತಿಸುತ್ತಿದ್ದೀಯೆ.

01224031a ನೈವ ಭಾರ್ಯೇತಿ ವಿಶ್ವಾಸಃ ಕಾರ್ಯಃ ಪುಂಸಾ ಕಥಂ ಚನ|

01224031c ನ ಹಿ ಕಾರ್ಯಮನುಧ್ಯಾತಿ ಭಾರ್ಯಾ ಪುತ್ರವತೀ ಸತೀ||

ಪುರುಷನು ಎಂದೂ ತನ್ನ ಭಾರ್ಯೆಯಲ್ಲಿ ಹೆಂಡತಿಯೆಂದು ವಿಶ್ವಾಸವನ್ನು ಇಡುವ ಕೆಲಸ ಮಾಡಬಾರದು. ಯಾಕೆಂದರೆ ಪುತ್ರವತಿಯಾದ ಸತಿಯು ತನ್ನ ಕೆಲಸವನ್ನು ಅನುಸರಿಸುವುದಿಲ್ಲ.””

01224032 ವೈಶಂಪಾಯನ ಉವಾಚ|

01224032a ತತಸ್ತೇ ಸರ್ವ ಏವೈನಂ ಪುತ್ರಾಃ ಸಮ್ಯಗುಪಾಸಿರೇ|

01224032c ಸ ಚ ತಾನಾತ್ಮಜಾನ್ರಾಜನ್ನಾಶ್ವಾಸಯಿತುಮಾರಭತ್||

ವೈಶಂಪಾಯನನು ಹೇಳಿದನು: “ರಾಜನ್! ಅದರ ನಂತರ ಅವನ ಪುತ್ರರೆಲ್ಲರೂ ಅವನನ್ನು ಸರಿಯಾಗಿ ಉಪಾಸಿಸಿದರು ಮತ್ತು ಅವನೂ ತನ್ನ ಮಕ್ಕಳಿಗೆ ಅಶ್ವಾಸನೆಯನ್ನಿತ್ತು ಪಾಲಿಸಿದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ಚತುರ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.

Related image

Comments are closed.