ಆದಿ ಪರ್ವ: ಖಾಂಡವದಾಹ ಪರ್ವ
೨೨೨
ವಿಹ್ವಲರಾದ ಜರಿತೆ ಮತ್ತು ಮಕ್ಕಳು ರೋದಿಸುವುದು (೧-೧೮).
01222001 ಜರಿತೋವಾಚ|
01222001a ಅಸ್ಮಾದ್ಬಿಲಾನ್ನಿಷ್ಪತಿತಂ ಶ್ಯೇನ ಆಖುಂ ಜಹಾರ ತಂ|
01222001c ಕ್ಷುದ್ರಂ ಗೃಹೀತ್ವಾ ಪಾದಾಭ್ಯಾಂ ಭಯಂ ನ ಭವಿತಾ ತತಃ||
ಜರಿತೆಯು ಹೇಳಿದಳು: “ಇಲಿಯು ಈ ಬಿಲದಿಂದ ಹೊರಬಂದಿತು ಮತ್ತು ಒಂದು ಗಿಡುಗವು ತನ್ನ ಪಂಜಗಳಿಂದ ಅದನ್ನು ಎತ್ತಿಕೊಂಡು ಹಾರಿಹೋಯಿತು. ನೀವು ಇನ್ನು ಭಯಪಡಬೇಕಾದುದು ಏನೂ ಇಲ್ಲ.”
01222002 ಶಾಂಙೃಕಾ ಊಚುಃ|
01222002a ನ ಹೃತಂ ತಂ ವಯಂ ವಿದ್ಮಃ ಶ್ಯೇನೇನಾಖುಂ ಕಥಂ ಚನ|
01222002c ಅನ್ಯೇಽಪಿ ಭವಿತಾರೋಽತ್ರ ತೇಭ್ಯೋಽಪಿ ಭಯಮೇವ ನಃ||
ಸಾರಂಗಗಳು ಹೇಳಿದವು: “ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎನ್ನುವುದು ನಮಗೆ ತಿಳಿಯಲೇ ಇಲ್ಲ. ಈ ಬಿಲದಲ್ಲಿ ಇನ್ನೂ ಇತರ ಇಲಿಗಳು ಇರಬಹುದು. ನಮಗೆ ಅವುಗಳ ಭಯವಾಗುತ್ತದೆ.
01222003a ಸಂಶಯೋ ಹ್ಯಗ್ನಿರಾಗಚ್ಛೇದ್ದೃಷ್ಟಂ ವಾಯೋರ್ನಿವರ್ತನಂ|
01222003c ಮೃತ್ಯುರ್ನೋ ಬಿಲವಾಸಿಭ್ಯೋ ಭವೇನ್ಮಾತರಸಂಶಯಂ||
ಗಾಳಿಯು ಹಿಂದಿರುಗಿದ ಹಾಗೆ ಕಾಣುತ್ತದೆ. ಅಗ್ನಿಯು ಇಲ್ಲಿಗೇ ಬರುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಬಿಲದಲ್ಲಿ ವಾಸಿಸುವವರಿಂದ ನಮಗೆ ಮೃತ್ಯು ಆಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
01222004a ನಿಃಸಂಶಯಾತ್ಸಂಶಯಿತೋ ಮೃತ್ಯುರ್ಮಾತರ್ವಿಶಿಷ್ಯತೇ|
01222004c ಚರ ಖೇ ತ್ವಂ ಯಥಾನ್ಯಾಯಂ ಪುತ್ರಾನ್ವೇತ್ಸ್ಯಸಿ ಶೋಭನಾನ್|
ಮಾತಾ! ಸಂಶಯವಿದ್ದವರನ್ನು ಸಾವು ಗೆಲ್ಲುತ್ತದೆ ಎನ್ನುವುದು ನಿಃಸಂಶಯ. ಈಗ ನೀನು ಆಕಾಶಕ್ಕೆ ಹಾರು. ನಮಗಿಂತಲೂ ಸುಂದರ ಪುತ್ರರನ್ನು ಪಡೆಯುವೆ.”
01222005 ಜರಿತೋವಾಚ|
01222005a ಅಹಂ ವೈ ಶ್ಯೇನಮಾಯಾಂತಮದ್ರಾಕ್ಷಂ ಬಿಲಮಂತಿಕಾತ್|
01222005c ಸಂಚರಂತಂ ಸಮಾದಾಯ ಜಹಾರಾಖುಂ ಬಿಲಾದ್ಬಲೀ||
ಜರಿತೆಯು ಹೇಳಿದಳು: “ಆ ಬಲಶಾಲಿ ಗಿಡುಗವು ಬಿಲದ ಹತ್ತಿರ ಬಂದಿದ್ದುದನ್ನು, ಹತ್ತಿರ ಸುಳಿದಾಡಿದ್ದುದನ್ನು, ಮತ್ತು ಇಲಿಯನ್ನು ಹಿಡಿದು ಬಿಲದಿಂದ ಎತ್ತಿಕೊಂಡು ಹಾರಿ ಹೋಗಿದ್ದುದನ್ನು ನಾನೇ ನೋಡಿದ್ದೇನೆ.
01222006a ತಂ ಪತಂತಮಹಂ ಶ್ಯೇನಂ ತ್ವರಿತಾ ಪೃಷ್ಠತೋಽನ್ವಗಾಂ|
01222006c ಆಶಿಷೋಽಸ್ಯ ಪ್ರಯುಂಜಾನಾ ಹರತೋ ಮೂಷಕಂ ಬಿಲಾತ್|
ಅದು ಹಾರಿದ ತಕ್ಷಣವೇ ಆ ಗಿಡುಗದ ಹಿಂದೆ ನಾನೂ ಹಾರಿಹೋದೆ ಮತ್ತು ಆ ಬಿಲದಿಂದ ಇಲಿಯನ್ನು ತೆಗೆದುಕೊಂಡು ಹೋಗಿದ್ದುದಕ್ಕೆ ನಾನು ಅದಕ್ಕೆ ಆಶೀರ್ವದಿಸಿದೆ.
01222007a ಯೋ ನೋ ದ್ವೇಷ್ಟಾರಮಾದಾಯ ಶ್ಯೇನರಾಜ ಪ್ರಧಾವಸಿ|
01222007c ಭವ ತ್ವಂ ದಿವಮಾಸ್ಥಾಯ ನಿರಮಿತ್ರೋ ಹಿರಣ್ಮಯಃ|
“ನಮ್ಮ ವೈರಿಯನ್ನು ಎತ್ತಿಕೊಂಡು ಹಾರಿ ಹೋಗುತ್ತಿರುವ ಶ್ವೇನರಾಜನೇ! ನೀನು ನಿರಮಿತ್ರ ಹಿರಣ್ಮಯ ದಿವವನ್ನು ಹೊಂದು!”
01222008a ಯದಾ ಸ ಭಕ್ಷಿತಸ್ತೇನ ಕ್ಷುಧಿತೇನ ಪತತ್ರಿಣಾ|
01222008c ತದಾಹಂ ತಮನುಜ್ಞಾಪ್ಯ ಪ್ರತ್ಯುಪಾಯಾಂ ಗೃಹಾನ್ಪ್ರತಿ|
ಹಸಿವೆಯಿಂದಿದ್ದ ಆ ಪಕ್ಷಿಯು ಅದನ್ನು ತಿಂದ ಬಳಿಕ ಅದರ ಅನುಜ್ಞೆಯನ್ನು ಪಡೆದು ನನ್ನ ಮನೆಗೆ ಹಿಂದಿರುಗಿದೆನು.
01222009a ಪ್ರವಿಶಧ್ವಂ ಬಿಲಂ ಪುತ್ರಾ ವಿಶ್ರಬ್ಧಾ ನಾಸ್ತಿ ವೋ ಭಯಂ|
01222009c ಶ್ಯೇನೇನ ಮಮ ಪಶ್ಯಂತ್ಯಾ ಹೃತ ಆಖುರ್ನ ಸಂಶಯಃ||
ಪುತ್ರರೇ! ವಿಶ್ವಾಸದಿಂದ ಬಿಲವನ್ನು ಪ್ರವೇಶಿಸಿ. ಭಯಪಡಬೇಕಾದದ್ದು ಏನೂ ಇಲ್ಲ. ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಗಿದ್ದುದನ್ನು ನಾನು ನೋಡಿದ್ದೇನೆ. ಅದರಲ್ಲಿ ಸಂಶಯವೇ ಇಲ್ಲ.”
01222010 ಶಾಂಙೃಕಾ ಊಚುಃ|
01222010a ನ ವಿದ್ಮ ವೈ ವಯಂ ಮಾತರ್ಹೃತಮಾಖುಮಿತಃ ಪುರಾ|
01222010c ಅವಿಜ್ಞಾಯ ನ ಶಕ್ಷ್ಯಾಮೋ ಬಿಲಮಾವಿಶತುಂ ವಯಂ||
ಸಾರಂಗಗಳು ಹೇಳಿದವು: “ಮಾತಾ! ಇಲಿಯನ್ನು ಎತ್ತಿಕೊಂಡು ಹೋಗಿದ್ದುದು ನಮಗೆ ತಿಳಿದಿಲ್ಲ. ಅದನ್ನು ತಿಳಿಯದೇ ನಾವು ಬಿಲವನ್ನು ಪ್ರವೇಶಿಸುವುದು ಅಶಖ್ಯ.”
01222011 ಜರಿತೋವಾಚ|
01222011a ಅಹಂ ಹಿ ತಂ ಪ್ರಜಾನಾಮಿ ಹೃತಂ ಶ್ಯೇನೇನ ಮೂಷಕಂ|
01222011c ಅತ ಏವ ಭಯಂ ನಾಸ್ತಿ ಕ್ರಿಯತಾಂ ವಚನಂ ಮಮ||
ಜರಿತೆಯು ಹೇಳಿದಳು: “ಆದರೆ ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎಂದು ನನಗೆ ಸಂಪೂರ್ಣ ತಿಳಿದಿದೆ. ಆದುದರಿಂದ ಭಯಪಡಬೇಕಾಗಿದ್ದುದು ಇಲ್ಲ. ನಾನು ಹೇಳಿದಂತೆ ಮಾಡಿರಿ.”
01222012 ಶಾಂಙೃಕಾ ಊಚುಃ|
01222012a ನ ತ್ವಂ ಮಿಥ್ಯೋಪಚಾರೇಣ ಮೋಕ್ಷಯೇಥಾ ಭಯಂ ಮಹತ್|
01222012c ಸಮಾಕುಲೇಷು ಜ್ಞಾನೇಷು ನ ಬುದ್ಧಿಕೃತಮೇವ ತತ್||
ಸಾರಂಗಗಳು ಹೇಳಿದವು: “ಮಿಥ್ಯೋಪಚಾರದಿಂದ ನೀನು ನಮ್ಮ ಈ ಮಹಾಭಯವನ್ನು ಹೋಗಲಾಡಿಸಲಾರೆ. ಒಂದೇ ಕುಲದ ಬಾಂಧವರೊಡನೆ ಬುದ್ಧಿವಂತಿಕೆಯನ್ನು ತೋರಿಸಬೇಡ.
01222013a ನ ಚೋಪಕೃತಮಸ್ಮಾಭಿರ್ನ ಚಾಸ್ಮಾನ್ವೇತ್ಥ ಯೇ ವಯಂ|
01222013c ಪೀಡ್ಯಮಾನಾ ಭರಸ್ಯಸ್ಮಾನ್ಕಾ ಸತೀ ಕೇ ವಯಂ ತವ||
ನಾವು ನಿನಗೆ ಉಪಕಾರವೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಸರಿಯಾಗಿ ತಿಳಿದೂ ಇಲ್ಲ. ಪೀಡಿತರಾದ ನಮ್ಮನ್ನು ನೋಡಿಕೊಳ್ಳುತ್ತಿರುವ ಸತೀ ನೀನು ಯಾರು?
01222014a ತರುಣೀ ದರ್ಶನೀಯಾಸಿ ಸಮರ್ಥಾ ಭರ್ತುರೇಷಣೇ|
01222014c ಅನುಗಚ್ಛ ಸ್ವಭರ್ತಾರಂ ಪುತ್ರಾನಾಪ್ಸ್ಯಸಿ ಶೋಭನಾನ್|
ತರುಣಿಯಾಗಿದ್ದೀಯೆ, ಸುಂದರಿಯಾಗಿದ್ದೀಯೆ ಮತ್ತು ಭರ್ತುವಿನ ಅರ್ಹಳಾಗಿರುವೆ. ನಿನ್ನ ಪತಿಯ ಹಿಂದೆ ಹೋಗು. ಸುಂದರ ಪುತ್ರರನ್ನು ಪಡೆಯುವೆ.
01222015a ವಯಮಪ್ಯಗ್ನಿಮಾವಿಶ್ಯ ಲೋಕಾನ್ಪ್ರಾಪ್ಸ್ಯಾಮಹೇ ಶುಭಾನ್|
01222015c ಅಥಾಸ್ಮಾನ್ನ ದಹೇದಗ್ನಿರಾಯಾಸ್ತ್ವಂ ಪುನರೇವ ನಃ||
ನಾವು ಅಗ್ನಿಯನ್ನು ಪ್ರವೇಶಿಸಿ ಶುಭಲೋಕಗಳನ್ನು ಪಡೆಯುತ್ತೇವೆ. ಅಥವಾ ಒಂದುವೇಳೆ ಅಗ್ನಿಯು ನಮ್ಮನ್ನು ಸುಡದಿದ್ದರೆ ನೀನು ಪುನಃ ನಮ್ಮಲ್ಲಿಗೆ ಹಿಂದಿರುಗಿ ಬರಬಹುದು.””
01222016 ವೈಶಂಪಾಯನ ಉವಾಚ|
01222016a ಏವಮುಕ್ತಾ ತತಃ ಶಾಂಙ್ರೀ ಪುತ್ರಾನುತ್ಸೃಜ್ಯ ಖಾಂಡವೇ|
01222016c ಜಗಾಮ ತ್ವರಿತಾ ದೇಶಂ ಕ್ಷೇಮಮಗ್ನೇರನಾಶ್ರಯಂ||
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ಆ ಸಾರಂಗಿಯು ಪುತ್ರರನ್ನು ಖಾಂಡವದಲ್ಲಿಯೇ ಬಿಟ್ಟು ಅಗ್ನಿಯಿಲ್ಲದ ಸುರಕ್ಷಿತ ಸ್ಥಳಕ್ಕೆ ಹಾರಿ ಹೋದಳು.
01222017a ತತಸ್ತೀಕ್ಷ್ಣಾರ್ಚಿರಭ್ಯಾಗಾಜ್ಜ್ವಲಿತೋ ಹವ್ಯವಾಹನಃ|
01222017c ಯತ್ರ ಶಾಙೃ ಬಭೂವುಸ್ತೇ ಮಂದಪಾಲಸ್ಯ ಪುತ್ರಕಾಃ||
ನಂತರ ತೀಕ್ಷ್ಣ ಜ್ವಾಲೆಗಳಿಂದ ಉರಿಯುತ್ತಿರುವ ಹವ್ಯವಾಹನನು ಮಂದಪಾಲನ ಪುತ್ರರಾದ ಸಾರಂಗಗಳು ಇರುವಲ್ಲಿಗೆ ಬಂದನು.
01222018a ತೇ ಶಾಙೃ ಜ್ವಲನಂ ದೃಷ್ಟ್ವಾ ಜ್ವಲಿತಂ ಸ್ವೇನ ತೇಜಸಾ|
01222018c ಜರಿತಾರಿಸ್ತತೋ ವಾಚಂ ಶ್ರಾವಯಾಮಾಸ ಪಾವಕಂ||
ತನ್ನ ತೇಜಸ್ಸಿನಿಂದ ಜ್ವಲಿಸುತ್ತಿರುವ ಜ್ವಲನನನ್ನು ನೋಡಿ ಸಾರಂಗ ಜರಿತಾರನು ಪಾವಕನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ದ್ವಾವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೆರಡನೆಯ ಅಧ್ಯಾಯವು.