Adi Parva: Chapter 221

ಆದಿ ಪರ್ವ: ಖಾಂಡವದಾಹ ಪರ್ವ

೨೨೧

ವಿಹ್ವಲರಾದ ಜರಿತೆ ಮತ್ತು ಮಕ್ಕಳು ರೋದಿಸುವುದು (೧-೨೧).

01221001 ವೈಶಂಪಾಯನ ಉವಾಚ|

01221001a ತತಃ ಪ್ರಜ್ವಲಿತೇ ಶುಕ್ರೇ ಶಾಂಙೃಕಾಸ್ತೇ ಸುದುಃಖಿತಾಃ|

01221001c ವ್ಯಥಿತಾಃ ಪರಮೋದ್ವಿಗ್ನಾ ನಾಧಿಜಗ್ಮುಃ ಪರಾಯಣಂ||

ವೈಶಂಪಾಯನನು ಹೇಳಿದನು: “ಅಗ್ನಿಯು ಪ್ರಜ್ವಲಿಸುತ್ತಿರುವಾಗ ಸುದುಃಖಿತ ಸಾರಂಗಗಳು ವ್ಯಥಿತ-ಪರಮೋದ್ವಿಗ್ನರಾಗಿ ವಿಮೋಚನೆಯ ದಾರಿಯನ್ನೇ ಕಾಣದಾದರು.

01221002a ನಿಶಾಮ್ಯ ಪುತ್ರಕಾನ್ಬಾಲಾನ್ಮಾತಾ ತೇಷಾಂ ತಪಸ್ವಿನೀ|

01221002c ಜರಿತಾ ದುಃಖಸಂತಪ್ತಾ ವಿಲಲಾಪ ನರೇಶ್ವರ||

ನರೇಶ್ವರ! ಬಾಲ ಪುತ್ರರನ್ನು ನೋಡಿ ಅವರ ಮಾತೆ ತಪಸ್ವಿನೀ ಜರಿತೆಯು ದುಃಖಸಂತಪ್ತಳಾಗಿ ವಿಲಪಿಸಿದಳು.

01221003a ಅಯಮಗ್ನಿರ್ದಹನ್ಕಕ್ಷಮಿತ ಆಯಾತಿ ಭೀಷಣಃ|

01221003c ಜಗತ್ಸಂದೀಪಯನ್ಭೀಮೋ ಮಮ ದುಃಖವಿವರ್ಧನಃ||

“ಈ ಭೀಷಣ ಅಗ್ನಿಯು ಹುಲ್ಲುಗಳನ್ನು ಸುಡುತ್ತಾ, ಜಗತ್ತನೇ ಉರಿಸುತ್ತಾ ಭಯಂಕರನಾಗಿ ಇಲ್ಲಿಗೇ ಬರುತ್ತಿದ್ದಾನೆ ಮತ್ತು ನನ್ನ ದುಃಖವನ್ನು ಹೆಚ್ಚಿಸುತ್ತಿದ್ದಾನೆ.

01221004a ಇಮೇ ಚ ಮಾಂ ಕರ್ಷಯಂತಿ ಶಿಶವೋ ಮಂದಚೇತಸಃ|

01221004c ಅಬರ್ಹಾಶ್ಚರಣೈರ್ಹೀನಾಃ ಪೂರ್ವೇಷಾಂ ನಃ ಪರಾಯಣಂ|

01221004e ತ್ರಾಸಯಂಶ್ಚಾಯಮಾಯಾತಿ ಲೇಲಿಹಾನೋ ಮಹೀರುಹಾನ್||

ಕೈಕಾಲುಗಳಿಲ್ಲದ ಆದರೂ ನಮ್ಮ ಪೂರ್ವಜರ ಪರಾಯಣರಾದ ಈ ಮಂದಚೇತಸ ಶಿಶುಗಳು ನನ್ನನ್ನು ಎಳೆಯುತ್ತಿವೆ. ಇಗೋ! ಮರಗಳನ್ನು ನೆಕ್ಕುತ್ತಾ ಈ ಭೀಷಣ ಅಗ್ನಿಯು ಬರುತ್ತಿದೆ!

01221005a ಅಶಕ್ತಿಮತ್ತ್ವಾಚ್ಚ ಸುತಾ ನ ಶಕ್ತಾಃ ಸರಣೇ ಮಮ|

01221005c ಆದಾಯ ಚ ನ ಶಕ್ತಾಸ್ಮಿ ಪುತ್ರಾನ್ಸರಿತುಮನ್ಯತಃ||

ಅಶಕ್ತರಾದ ನನ್ನ ಈ ಮಕ್ಕಳು ತಪ್ಪಿಸಿಕೊಳ್ಳಲು ಶಕ್ತರಿಲ್ಲ. ನಾನೇ ಈ ಮಕ್ಕಳನ್ನು ಎತ್ತಿಕೊಂಡು ಹೋಗೋಣವೆಂದರೆ ನನಗೂ ದಾರಿಯಿಲ್ಲ!

01221006a ನ ಚ ತ್ಯಕ್ತುಮಹಂ ಶಕ್ತಾ ಹೃದಯಂ ದೂಯತೀವ ಮೇ|

01221006c ಕಂ ನು ಜಹ್ಯಾಮಹಂ ಪುತ್ರಂ ಕಮಾದಾಯ ವ್ರಜಾಮ್ಯಹಂ||

ನಾನು ಇವರನ್ನು ಇಲ್ಲಿಯೇ ಬಿಟ್ಟುಹೋಗಲೂ ಸಾಧ್ಯವಿಲ್ಲ. ನನ್ನ ಹೃದಯವು ಎರಡಾಗಿದೆ. ನನ್ನ ಮಕ್ಕಳಲ್ಲಿ ಯಾರನ್ನು ಬಿಟ್ಟು ಹೋಗಲಿ ಯಾರನ್ನು ಕರೆದುಕೊಂಡು ಹೋಗಲಿ?

01221007a ಕಿಂ ನು ಮೇ ಸ್ಯಾತ್ಕೃತಂ ಕೃತ್ವಾ ಮನ್ಯಧ್ವಂ ಪುತ್ರಕಾಃ ಕಥಂ|

01221007c ಚಿಂತಯಾನಾ ವಿಮೋಕ್ಷಂ ವೋ ನಾಧಿಗಚ್ಛಾಮಿ ಕಿಂ ಚನ|

01221007e ಚಾದಯಿತ್ವಾ ಚ ವೋ ಗಾತ್ರೈಃ ಕರಿಷ್ಯೇ ಮರಣಂ ಸಹ||

ನಾನು ಏನುತಾನೆ ಮಾಡಬಲ್ಲೆ? ಪುತ್ರರೇ! ನಿಮ್ಮ ಅಭಿಪ್ರಾಯಗಳೇನು? ನಿಮ್ಮ ವಿಮೋಚನೆಗೆ ಎಷ್ಟು ಚಿಂತಿಸಿದರೂ ನನಗೆ ದಾರಿಯೇ ತೋಚುತ್ತಿಲ್ಲ. ನನ್ನ ದೇಹದಿಂದ ನಿಮ್ಮನ್ನು ಮುಚ್ಚಿ ನಿಮ್ಮೊಂದಿಗೆ ನಾನೂ ಸಾಯುತ್ತೇನೆ.

01221008a ಜರಿತಾರೌ ಕುಲಂ ಹೀದಂ ಜ್ಯೇಷ್ಠತ್ವೇನ ಪ್ರತಿಷ್ಠಿತಂ|

01221008c ಸಾರಿಸೃಕ್ವಃ ಪ್ರಜಾಯೇತ ಪಿತೄಣಾಂ ಕುಲವರ್ಧನಃ||

01221009a ಸ್ತಂಬಮಿತ್ರಸ್ತಪಃ ಕುರ್ಯಾದ್ದ್ರೋಣೋ ಬ್ರಹ್ಮವಿದುತ್ತಮಃ|

01221009c ಇತ್ಯೇವಮುಕ್ತ್ವಾ ಪ್ರಯಯೌ ಪಿತಾ ವೋ ನಿರ್ಘೃಣಃ ಪುರಾ||

ಜ್ಯೇಷ್ಠ ಜರಿತಾರಿಯ ಮೇಲೆ ಈ ಕುಲವು ನಿಂತಿದೆ. ಸಾರಿಸೃಕ್ವನು ಪುತ್ರರನ್ನು ಪಡೆದು ಪಿತೃಗಳ ಕುಲವನ್ನು ವರ್ಧಿಸುತ್ತಾನೆ. ಸ್ತಂಬಮಿತ್ರನು ತಪಸ್ವಿಯಾಗುತ್ತಾನೆ ಮತ್ತು ದ್ರೋಣನು ಉತ್ತಮ ಬ್ರಹ್ಮವಿದ್ವಾಂಸನಾಗುತ್ತಾನೆ. ಹಿಂದೆ ಇದೇ ಮಾತುಗಳನ್ನು ಹೇಳಿ ನಿಮ್ಮ ಆ ಕಠೋರ ತಂದೆಯು ಹೊರಟುಹೋದನು.

01221010a ಕಮುಪಾದಾಯ ಶಕ್ಯೇತ ಗಂತುಂ ಕಸ್ಯಾಪದುತ್ತಮಾ|

01221010c ಕಿಂ ನು ಕೃತ್ವಾ ಕೃತಂ ಕಾರ್ಯಂ ಭವೇದಿತಿ ಚ ವಿಃವಲಾ||

01221011a ನಾಪಶ್ಯತ್ಸ್ವಧಿಯಾ ಮೋಕ್ಷಂ ಸ್ವಸುತಾನಾಂ ತದಾನಲಾತ್|

01221011c ಏವಂ ಬ್ರುವಂತೀಂ ಶಾಂಙೃಸ್ತೇ ಪ್ರತ್ಯೂಚುರಥ ಮಾತರಂ||

ಯಾರನ್ನು ತೆಗೆದುಕೊಂಡು ಓಡಿ ಹೋಗಲಿ? ಯಾರ ಮೇಲೆ ಈ ಅತಿ ದೊಡ್ಡ ಆಪತ್ತು ಬರುತ್ತದೆ?” ಈ ರೀತಿ ಯಾವುದನ್ನು ಮಾಡುವುದು ಒಳ್ಳೆಯದು ಎಂದು ವಿಹ್ವಲಳಾಗಿ ಅನಲನಿಂದ ತನ್ನ ಸುತರು ಹೇಗೆ ಬಿಡಿಸಿಕೊಳ್ಳಬಹುದು ಎನ್ನುವುದನ್ನು ಕಾಣಲಾರದೇ ಹೋದಳು. ಈ ರೀತಿ ಅವಳು ಹೇಳುತ್ತಿರಲು ಆ ಸಾರಂಗ ಪಕ್ಷಿಗಳು ತಾಯಿಗೆ ಉತ್ತರಿಸಿದವು:

01221012a ಸ್ನೇಹಮುತ್ಸೃಜ್ಯ ಮಾತಸ್ತ್ವಂ ಪತ ಯತ್ರ ನ ಹವ್ಯವಾಟ್|

01221012c ಅಸ್ಮಾಸು ಹಿ ವಿನಷ್ಟೇಷು ಭವಿತಾರಃ ಸುತಾಸ್ತವ|

01221012e ತ್ವಯಿ ಮಾತರ್ವಿನಷ್ಟಾಯಾಂ ನ ನಃ ಸ್ಯಾತ್ಕುಲಸಂತತಿಃ||

“ಮಾತಾ! ನೀನು ಸ್ನೇಹಭಾವವನ್ನು ತೊರೆದು ಹವ್ಯವಾಹನನು ಇಲ್ಲದೇ ಇರುವ ಸ್ಥಳಕ್ಕೆ ಹೋಗು. ನಾವು ವಿನಷ್ಟರಾದರೂ ನಿನಗೆ ಇನ್ನೂ ಮಕ್ಕಳಾಗುತ್ತವೆ. ಆದರೆ ಮಾತೆಯಾದ ನೀನೇ ವಿನಷ್ಟಳಾದರೆ ಕುಲಸಂತತಿಯು ಇಲ್ಲದಂತಾಗುತ್ತದೆ.

01221013a ಅನ್ವವೇಕ್ಷ್ಯೈತದುಭಯಂ ಕ್ಷಮಂ ಸ್ಯಾದ್ಯತ್ಕುಲಸ್ಯ ನಃ|

01221013c ತದ್ವೈ ಕರ್ತುಂ ಪರಃ ಕಾಲೋ ಮಾತರೇಷ ಭವೇತ್ತವ||

ಮಾತಾ! ಈ ಎರಡು ಪರಿಣಾಮಗಳ ಕುರಿತು ಯೋಚಿಸಿ ಕುಲದ ಒಳಿತಿಗೆ ಏನನ್ನು ಮಾಡುವುದು ಸರಿಯೆನಿಸುತ್ತದೆಯೋ ಅದನ್ನು ಮಾಡು. ಇದಕ್ಕೆ ಸರಿಯಾದ ಕಾಲವು ಬಂದಿದೆ.

01221014a ಮಾ ವೈ ಕುಲವಿನಾಶಾಯ ಸ್ನೇಹಂ ಕಾರ್ಷೀಃ ಸುತೇಷು ನಃ|

01221014c ನ ಹೀದಂ ಕರ್ಮ ಮೋಘಂ ಸ್ಯಾಲ್ಲೋಕಕಾಮಸ್ಯ ನಃ ಪಿತುಃ||

ನಿನ್ನ ಸುತರ ಮೇಲಿನ ಸ್ನೇಹದಿಂದ ನಿನ್ನ ಕುಲವಿನಾಶದ ಕಡೆ ಎಳೆದೊಯ್ಯಲ್ಪಡಬೇಡ. ಲೋಕಕಾಮಕ್ಕಾಗಿ ಮಾಡಿದ ಈ ಕಾರ್ಯವು ಎಂದೂ ನಿಷ್ಫಲವಾಗುವುದಿಲ್ಲ.”

01221015 ಜರಿತೋವಾಚ|

01221015a ಇದಮಾಖೋರ್ಬಿಲಂ ಭೂಮೌ ವೃಕ್ಷಸ್ಯಾಸ್ಯ ಸಮೀಪತಃ|

01221015c ತದಾವಿಶಧ್ವಂ ತ್ವರಿತಾ ವಃನೇರತ್ರ ನ ವೋ ಭಯಂ||

ಜರಿತೆಯು ಹೇಳಿದಳು: “ಈ ವೃಕ್ಷದ ಸಮೀಪದಲ್ಲಿ ಭೂಮಿಯೊಳಗೆ ಒಂದು ಇಲಿಯ ಬಿಲವಿದೆ. ತಕ್ಷಣವೇ ಅದನ್ನು ಪ್ರವೇಶಿಸಿ. ಅಲ್ಲಿ ನಿಮಗೆ ಅಗ್ನಿಯ ಭಯವಿರುವುದಿಲ್ಲ.

01221016a ತತೋಽಹಂ ಪಾಂಸುನಾ ಚಿದ್ರಮಪಿಧಾಸ್ಯಾಮಿ ಪುತ್ರಕಾಃ|

01221016c ಏವಂ ಪ್ರತಿಕೃತಂ ಮನ್ಯೇ ಜ್ವಲತಃ ಕೃಷ್ಣವರ್ತ್ಮನಃ||

ಮಕ್ಕಳೇ! ಆಗ ನಾನು ಮಣ್ಣಿನಿಂದ ಬಿಲದ ಬಾಯಿಯನ್ನು ಮುಚ್ಚುತ್ತೇನೆ. ಹೀಗೆ ಜ್ವಲಿಸುತ್ತಿರುವ ಕೃಷ್ಣವರ್ತ್ಮನನಿಂದ ತಪ್ಪಿಸಿಕೊಳ್ಳಬಹುದು.

01221017a ತತ ಏಷ್ಯಾಮ್ಯತೀತೇಽಗ್ನೌ ವಿಹರ್ತುಂ ಪಾಂಸುಸಂಚಯಂ|

01221017c ರೋಚತಾಮೇಷ ವೋಪಾಯೋ ವಿಮೋಕ್ಷಾಯ ಹುತಾಶನಾತ್||

ಅಗ್ನಿಯು ಆರಿಹೋದ ನಂತರ ಮಣ್ಣಿನ ರಾಶಿಯನ್ನು ತೆಗೆಯಲು ನಾನು ಹಿಂದಿರುಗಿ ಬರುತ್ತೇನೆ. ಹುತಾಶನನಿಂದ ತಪ್ಪಿಸಿಕೊಳ್ಳಲು ಈ ಉಪಾಯವನ್ನು ನೀವು ಒಪ್ಪಿಕೊಳ್ಳುತ್ತೀರಾ?”

01221018 ಶಾಂಙೃಕಾ ಊಚುಃ|

01221018a ಅಬರ್ಹಾನ್ಮಾಂಸಭೂತಾನ್ನಃ ಕ್ರವ್ಯಾದಾಖುರ್ವಿನಾಶಯೇತ್|

01221018c ಪಶ್ಯಮಾನಾ ಭಯಮಿದಂ ನ ಶಕ್ಷ್ಯಾಮೋ ನಿಷೇವಿತುಂ||

ಸಾರಂಗಗಳು ಹೇಳಿದವು: “ರೆಕ್ಕೆಗಳೇ ಇಲ್ಲದ ಮಾಂಸದ ಮುದ್ದೆಗಳು ನಾವು. ಮಾಂಸಾಹಾರಿ ಇಲಿಯು ನಮ್ಮನ್ನು ವಿನಾಶಗೊಳಿಸುತ್ತದೆ. ಈ ಭಯವನ್ನು ಕಂಡರೆ ಅಲ್ಲಿ ನಾವು ಉಳಿಯಲು ಸಾಧ್ಯವಿಲ್ಲ.

01221019a ಕಥಮಗ್ನಿರ್ನ ನೋ ದಹ್ಯಾತ್ಕಥಮಾಖುರ್ನ ಭಕ್ಷಯೇತ್|

01221019c ಕಥಂ ನ ಸ್ಯಾತ್ಪಿತಾ ಮೋಘಃ ಕಥಂ ಮಾತಾ ಧ್ರಿಯೇತ ನಃ||

ಅಗ್ನಿಯು ನಮ್ಮನ್ನು ಹೇಗೆ ಸುಡದೇ ಇರುತ್ತಾನೆ ಅಥವಾ ಹೇಗೆ ಇಲಿಯು ನಮ್ಮನ್ನು ಭಕ್ಷಿಸದೇ ಇರುತ್ತದೆ? ತಂದೆಗೆ ಸೋಲಲ್ಲದೇ ಇನ್ನೇನಾದರೂ ಆಗುವುದು ಹೇಗೆ? ತಾಯಿಯು ಉಳಿಯುವುದಾದರೂ ಹೇಗೆ?

01221020a ಬಿಲ ಆಖೋರ್ವಿನಾಶಃ ಸ್ಯಾದಗ್ನೇರಾಕಾಶಚಾರಿಣಾಂ|

01221020c ಅನ್ವವೇಕ್ಷ್ಯೈತದುಭಯಂ ಶ್ರೇಯಾನ್ದಾಹೋ ನ ಭಕ್ಷಣಂ||

ಪಕ್ಷಿಗಳು ಬೆಂಕಿಯಲ್ಲಿ ಅಥವಾ ಬಿಲದಲ್ಲಿ ಇಲಿಯಿಂದ ಸಾವನ್ನು ಕಾಣುತ್ತವೆ. ಇವೆರಡನ್ನೂ ನೋಡಿದರೆ ಸುಟ್ಟುಹೋಗುವುದು ತಿನ್ನಲ್ಪಡುವುದಕ್ಕಿಂತ ಒಳ್ಳೆಯದು.

01221021a ಗರ್ಹಿತಂ ಮರಣಂ ನಃ ಸ್ಯಾದಾಖುನಾ ಖಾದತಾ ಬಿಲೇ|

01221021c ಶಿಷ್ಟಾದಿಷ್ಟಃ ಪರಿತ್ಯಾಗಃ ಶರೀರಸ್ಯ ಹುತಾಶನಾತ್||

ಬಿಲದಲ್ಲಿ ಇಲಿಯಿಂದ ತಿನ್ನಲ್ಪಟ್ಟು ಸತ್ತರೆ ಅದು ಹೀನ ಮರಣವಾಗುತ್ತದೆ. ಆದರೆ ಹುತಾಶನನಲ್ಲಿ ಶರೀರ ಪರಿತ್ಯಾಗವನ್ನು ಶಿಷ್ಟರು ಒಳ್ಳೆಯದೆಂದು ಹೇಳುತ್ತಾರೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ಏಕವಿಶಂತ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.