ಆದಿ ಪರ್ವ: ಖಾಂಡವದಾಹ ಪರ್ವ
೨೨೦
ಸಾರಂಗಗಳು
ಖಾಂಡವದಹನದಲ್ಲಿ ಸಾರಂಗಗಳು ಏಕೆ ಸಾಯಲಿಲ್ಲ ಎನ್ನುವ ಜನಮೇಜಯನ ಪ್ರಶ್ನೆಗೆ ವೈಶಂಪಾಯನನು ಉತ್ತರಿಸಿದ್ದುದು (೧-೫). ಸಂತಾನವಿಲ್ಲದೇ ಇರುವುದರಿಂದ ತನಗೆ ಲೋಕಗಳು ದೊರೆಯುತ್ತಿಲ್ಲವೆನ್ನುವುದನ್ನು ಋಷಿ ಮಂದಪಾಲನು ದೇವತೆಗಳಿಂದ ತಿಳಿಯುವುದು (೬-೧೪). ಅವನು ಶಾಂಗೃಕೆ ಜರಿತೆಯಲ್ಲಿ ನಾಲ್ವರು ಮಕ್ಕಳನ್ನು ಪಡೆದು, ಖಾಂಡವದಹನದ ಸಮಯದಲ್ಲಿ ಅಗ್ನಿಯನ್ನು ಸ್ತುತಿಸಿದುದು; ಅಗ್ನಿಯು ಅವನ ಮಕ್ಕಳನ್ನು ಸುಡುವುದಿಲ್ಲವೆಂದು ಭರವಸೆಯನ್ನಿತ್ತುದುದು (೧೫-೩೨).
01220001 ಜನಮೇಜಯ ಉವಾಚ|
01220001a ಕಿಮರ್ಥಂ ಶಾಂಙೃಕಾನಗ್ನಿರ್ನ ದದಾಹ ತಥಾಗತೇ|
01220001c ತಸ್ಮಿನ್ವನೇ ದಹ್ಯಮಾನೇ ಬ್ರಹ್ಮನ್ನೇತದ್ವದಾಶು ಮೇ||
ಜನಮೇಜಯನು ಹೇಳಿದನು: “ಬ್ರಹ್ಮನ್! ಆ ವನವು ಉರಿಯುತ್ತಿರುವಾಗ ಅಗ್ನಿಯು ಸಾರಂಗಗಳನ್ನು ಏಕೆ ಸುಡಲಿಲ್ಲ ಎನ್ನುವುದನ್ನು ನಡೆದಹಾಗೆ ಹೇಳಬೇಕು.
01220002a ಅದಾಹೇ ಹ್ಯಶ್ವಸೇನಸ್ಯ ದಾನವಸ್ಯ ಮಯಸ್ಯ ಚ|
01220002c ಕಾರಣಂ ಕೀರ್ತಿತಂ ಬ್ರಹ್ಮಂಶಾಂಙೃಕಾನಾಂ ನ ಕೀರ್ತಿತಂ||
ಬ್ರಹ್ಮನ್! ಅಶ್ವಸೇನ ಮತ್ತು ದಾನವ ಮಯರು ಏಕೆ ಸುಟ್ಟುಹೋಗಲಿಲ್ಲ ಎನ್ನುವುದಕ್ಕೆ ಕಾರಣವನ್ನು ಹೇಳಿದ್ದೀಯೆ. ಆದರೆ ಸಾರಂಗಗಳ ಕುರಿತು ಹೇಳಲಿಲ್ಲ.
01220003a ತದೇತದದ್ಭುತಂ ಬ್ರಹ್ಮಂಶಾಂಙೃರ್ನಾಮವಿನಾಶನಂ|
01220003c ಕೀರ್ತಯಸ್ವಾಗ್ನಿಸಮ್ಮರ್ದೇ ಕಥಂ ತೇ ನ ವಿನಾಶಿತಾಃ||
ಬ್ರಹ್ಮನ್! ಸಾರಂಗಗಳು ನಾಶಹೊಂದದೇ ಇದ್ದುದು ಒಂದು ಅದ್ಭುತವೇ ಸರಿ. ಆ ಅಗ್ನಿಸಮ್ಮರ್ದದಲ್ಲಿ ಅವುಗಳು ಹೇಗೆ ವಿನಾಶವಾಗಲಿಲ್ಲ ಎನ್ನುವುದನ್ನು ಹೇಳು.”
01220004 ವೈಶಂಪಾಯನ ಉವಾಚ|
01220004a ಯದರ್ಥಂ ಶಾಂಙೃಕಾನಗ್ನಿರ್ನ ದದಾಹ ತಥಾಗತೇ|
01220004c ತತ್ತೇ ಸರ್ವಂ ಯಥಾವೃತ್ತಂ ಕಥಯಿಷ್ಯಾಮಿ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ಆಗ ಅಗ್ನಿಯು ಸಾರಂಗಗಳನ್ನು ಏಕೆ ಸುಡಲಿಲ್ಲ ಎನ್ನುವುದನ್ನು ಸರ್ವವಾಗಿ ಯಥಾವತ್ತಾಗಿ ಹೇಳುತ್ತೇನೆ.
01220005a ಧರ್ಮಜ್ಞಾನಾಂ ಮುಖ್ಯತಮಸ್ತಪಸ್ವೀ ಸಂಶಿತವ್ರತಃ|
01220005c ಆಸೀನ್ಮಹರ್ಷಿಃ ಶ್ರುತವಾನ್ಮಂದಪಾಲ ಇತಿ ಶ್ರುತಃ||
ಮಂದಪಾಲನೆಂದು ಪ್ರಸಿದ್ಧ ಧರ್ಮಜ್ಞರಲ್ಲಿ ಮುಖ್ಯತಮ ಸಂಶಿತವ್ರತ ತಪಸ್ವಿ ಮಹರ್ಷಿಯು ಇದ್ದನು.
01220006a ಸ ಮಾರ್ಗಮಾಸ್ಥಿತೋ ರಾಜನ್ನೃಷೀಣಾಮೂರ್ಧ್ವರೇತಸಾಂ|
01220006c ಸ್ವಾಧ್ಯಾಯವಾನ್ಧರ್ಮರತಸ್ತಪಸ್ವೀ ವಿಜಿತೇಂದ್ರಿಯಃ||
ರಾಜನ್! ಊರ್ಧ್ವರೇತಸ ಋಷಿಗಳ ಮಾರ್ಗವನ್ನು ಹಿಡಿದಿದ್ದ ಆ ವಿಜಿತೇಂದ್ರಿಯ ತಪಸ್ವಿಯು ಧರ್ಮರತನಾಗಿ ಸ್ವಾಧ್ಯಾಯದಲ್ಲಿ ನಿರತನಾಗಿದ್ದನು.
01220007a ಸ ಗತ್ವಾ ತಪಸಃ ಪಾರಂ ದೇಹಮುತ್ಸೃಜ್ಯ ಭಾರತ|
01220007c ಜಗಾಮ ಪಿತೃಲೋಕಾಯ ನ ಲೇಭೇ ತತ್ರ ತತ್ಫಲಂ|
ಭಾರತ! ತಪಸ್ಸಿನ ಪರಾಕಾಷ್ಟೆಯನ್ನು ತಲುಪಿದ ಅವನು ದೇಹವನ್ನು ತೊರೆದು ಪಿತೃಲೋಕವನ್ನು ಸೇರಿದನು. ಆದರೆ ಅಲ್ಲಿ ಅವನಿಗೆ ಫಲವು ದೊರೆಯಲಿಲ್ಲ.
01220008a ಸ ಲೋಕಾನಫಲಾನ್ದೃಷ್ಟ್ವಾ ತಪಸಾ ನಿರ್ಜಿತಾನಪಿ|
01220008c ಪಪ್ರಚ್ಛ ಧರ್ಮರಾಜಸ್ಯ ಸಮೀಪಸ್ಥಾನ್ದಿವೌಕಸಃ||
ಗಳಿಸಿದ್ದರೂ ತನ್ನ ತಪಸ್ಸಿನಿಂದ ಫಲವು ದೊರೆಯದೇ ಇದ್ದ ಲೋಕಗಳನ್ನು ಕಂಡ ಅವನು ಧರ್ಮರಾಜನ ಸಮೀಪದಲ್ಲಿ ಕುಳಿತಿದ್ದ ದಿವೌಕಸರಿಗೆ ಕೇಳಿದನು:
01220009a ಕಿಮರ್ಥಮಾವೃತಾ ಲೋಕಾ ಮಮೈತೇ ತಪಸಾರ್ಜಿತಾಃ|
01220009c ಕಿಂ ಮಯಾ ನ ಕೃತಂ ತತ್ರ ಯಸ್ಯೇದಂ ಕರ್ಮಣಃ ಫಲಂ||
“ನಾನು ತಪಸ್ಸಿನಿಂದ ಗಳಿಸಿದ ಈ ಲೋಕಗಳು ನನಗೆ ಏಕೆ ಮುಚ್ಚಿಹೋಗಿವೆ? ನಾನು ಏನನ್ನು ಮಾಡಿಲ್ಲವೆಂದು ಇದು ನನ್ನ ಕರ್ಮ ಫಲವಾಗಿದೆ?
01220010a ತತ್ರಾಹಂ ತತ್ಕರಿಷ್ಯಾಮಿ ಯದರ್ಥಮಿದಮಾವೃತಂ|
01220010c ಫಲಮೇತಸ್ಯ ತಪಸಃ ಕಥಯಧ್ವಂ ದಿವೌಕಸಃ||
ಯಾವುದರಿಂದಾಗಿ ನನ್ನ ತಪಸ್ಸಿನ ಫಲವು ದೊರೆಯದೇ ಇದೆಯೋ ಅದನ್ನು ಮಾಡುತ್ತೇನೆ. ದಿವೌಕಸರೇ! ಹೇಳಿರಿ.”
01220011 ದೇವಾ ಊಚುಃ|
01220011a ಋಣಿನೋ ಮಾನವಾ ಬ್ರಹ್ಮಂಜಾಯಂತೇ ಯೇನ ತಚ್ಶೃಣು|
01220011c ಕ್ರಿಯಾಭಿರ್ಬ್ರಹ್ಮಚರ್ಯೇಣ ಪ್ರಜಯಾ ಚ ನ ಸಂಶಯಃ||
ದೇವತೆಗಳು ಹೇಳಿದರು: “ಬ್ರಹ್ಮನ್! ಮಾನವರು ಯಾವುದಕ್ಕೆ ಋಣಿಗಳಾಗಿ ಹುಟ್ಟುತ್ತಾರೆ ಎನ್ನುವುದನ್ನು ಕೇಳು: ಕ್ರಿಯೆ, ಬ್ರಹ್ಮಚರ್ಯ ಮತ್ತು ಸಂತಾನ. ಇದರಲ್ಲಿ ಸಂಶಯವಿಲ್ಲ.
01220012a ತದಪಾಕ್ರಿಯತೇ ಸರ್ವಂ ಯಜ್ಞೇನ ತಪಸಾ ಸುತೈಃ|
01220012c ತಪಸ್ವೀ ಯಜ್ಞಕೃಚ್ಚಾಸಿ ನ ತು ತೇ ವಿದ್ಯತೇ ಪ್ರಜಾ||
01220013a ತ ಇಮೇ ಪ್ರಸವಸ್ಯಾರ್ಥೇ ತವ ಲೋಕಾಃ ಸಮಾವೃತಾಃ|
01220013c ಪ್ರಜಾಯಸ್ವ ತತೋ ಲೋಕಾನುಪಭೋಕ್ತಾಸಿ ಶಾಶ್ವತಾನ್||
ಇವೆಲ್ಲವುಗಳನ್ನೂ ಯಜ್ಞ, ತಪಸ್ಸು ಮತ್ತು ಸುತರಿಂದ ತೀರಿಸಬಹುದು. ನೀನು ತಪಸ್ವಿ ಮತ್ತು ಯಜ್ಞಕರ್ತೃವಾಗಿದ್ದೀಯೆ. ಆದರೆ ನಿನಗೆ ಮಕ್ಕಳಿಲ್ಲ.
01220014a ಪುನ್ನಾಮ್ನೋ ನರಕಾತ್ಪುತ್ರಸ್ತ್ರಾತೀತಿ ಪಿತರಂ ಮುನೇ|
01220014c ತಸ್ಮಾದಪತ್ಯಸಂತಾನೇ ಯತಸ್ವ ದ್ವಿಜಸತ್ತಮ||
ಮುನಿ! ಪು ಎಂಬ ಹೆಸರಿನ ನರಕದಿಂದ ಪಿತೃಗಳನ್ನು ಪಾರುಮಾಡುವನನ್ನು ಪುತ್ರ ಎಂದು ಕರೆಯುತ್ತಾರೆ. ದ್ವಿಜಸತ್ತಮ! ಆದುದರಿಂದ ಕುಲವನ್ನು ಮುಂದುವರೆಸಿಕೊಂಡು ಹೋಗುವ ಸಂತಾನಕ್ಕೆ ಪ್ರಯತ್ನಿಸು.””
01220015 ವೈಶಂಪಾಯನ ಉವಾಚ|
01220015a ತಚ್ಛೃತ್ವಾ ಮಂದಪಾಲಸ್ತು ತೇಷಾಂ ವಾಕ್ಯಂ ದಿವೌಕಸಾಂ|
01220015c ಕ್ವ ನು ಶೀಘ್ರಮಪತ್ಯಂ ಸ್ಯಾದ್ಬಹುಲಂ ಚೇತ್ಯಚಿಂತಯತ್||
ವೈಶಂಪಾಯನನು ಹೇಳಿದನು: “ದಿವೌಕಸರ ಆ ಮಾತುಗಳನ್ನು ಕೇಳಿದ ಮಂದಪಾಲನು ನಾನು ಎಲ್ಲಿ ಶೀಘ್ರವಾಗಿ ಬಹಳ ಮಕ್ಕಳನ್ನು ಪಡೆಯಬಹುದು ಎಂದು ಯೋಚಿಸಿದನು.
01220016a ಸ ಚಿಂತಯನ್ನಭ್ಯಗಚ್ಛದ್ಬಹುಲಪ್ರಸವಾನ್ಖಗಾನ್|
01220016c ಶಾರ್ಙ್ಗಿಕಾಂ ಶಾರ್ಙ್ಗಕೋ ಭೂತ್ವಾ ಜರಿತಾಂ ಸಮುಪೇಯಿವಾನ್||
ಹೀಗೆ ಯೋಚಿಸುತ್ತಿರುವಾಗ ಪಕ್ಷಿಗಳಿಗೆ ಬಹಳ ಮಕ್ಕಳು ಆಗುತ್ತವೆ ಎಂಬ ಯೋಚನೆಯು ಅವನಿಗೆ ಬಂದಿತು. ಅವನು ಸಾರಂಗನಾಗಿ ಜರಿತಾ ಎನ್ನುವ ಸಾರಂಗಿಯೊಡನೆ ಸೇರಿದನು.
01220017a ತಸ್ಯಾಂ ಪುತ್ರಾನಜನಯಚ್ಚತುರೋ ಬ್ರಹ್ಮವಾದಿನಃ|
01220017c ತಾನಪಾಸ್ಯ ಸ ತತ್ರೈವ ಜಗಾಮ ಲಪಿತಾಂ ಪ್ರತಿ|
01220017e ಬಾಲಾನ್ಸುತಾನಂಡಗತಾನ್ಮಾತ್ರಾ ಸಹ ಮುನಿರ್ವನೇ||
ಅವಳಲ್ಲಿ ಅವನು ಬ್ರಹ್ಮವಾದಿಗಳಾದ ನಾಲ್ಕು ಪುತ್ರರನ್ನು ಪಡೆದನು. ಇನ್ನೂ ಅಂಡದಲ್ಲಿಯೇ ಇದ್ದ ತನ್ನ ಬಾಲ ಸುತರನ್ನು ತಾಯಿಯೊಡನೆ ವನದಲ್ಲಿಯೇ ಬಿಟ್ಟು ಆ ಮುನಿಯು ಲಪಿತಳ ಕಡೆ ಹೊರಟುಹೋದನು.
01220018a ತಸ್ಮಿನ್ಗತೇ ಮಹಾಭಾಗೇ ಲಪಿತಾಂ ಪ್ರತಿ ಭಾರತ|
01220018c ಅಪತ್ಯಸ್ನೇಹಸಂವಿಗ್ನಾ ಜರಿತಾ ಬಹ್ವಚಿಂತಯತ್||
ಭಾರತ! ಆ ಮಹಾಭಾಗನು ಲಪಿತೆಯ ಕಡೆ ಹೊರಟುಹೋದ ನಂತರ ಜರಿತೆಯು ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಬಹಳ ಚಿಂತಿಸಿದಳು.
01220019a ತೇನ ತ್ಯಕ್ತಾನಸಂತ್ಯಾಜ್ಯಾನೃಷೀನಂಡಗತಾನ್ವನೇ|
01220019c ನಾಜಹತ್ಪುತ್ರಕಾನಾರ್ತಾ ಜರಿತಾ ಖಾಂಡವೇ ನೃಪ|
01220019e ಬಭಾರ ಚೈತಾನ್ಸಂಜಾತಾನ್ಸ್ವವೃತ್ತ್ಯಾ ಸ್ನೇಹವಿಕ್ಲವಾ||
ನೃಪ! ಇನ್ನೂ ಹುಟ್ಟದೇ ಅಂಡದಲ್ಲಿಯೇ ಇದ್ದ ಆ ಪುತ್ರ ಋಷಿಗಳನ್ನು ಖಾಂಡವವನದಲ್ಲಿ ಆರ್ತ ಜರಿತೆಯು ಬಿಟ್ಟು ಹೋಗಲಾರದೇ ಸ್ನೇಹವಿಕ್ಲವಳಾಗಿ ಹುಟ್ಟಿದ ಅವರನ್ನು ಪಾಲಿಸಿದಳು.
01220020a ತತೋಽಗ್ನಿಂ ಖಾಂಡವಂ ದಗ್ಧುಮಾಯಾಂತಂ ದೃಷ್ಟವಾನೃಷಿಃ|
01220020c ಮಂದಪಾಲಶ್ಚರಂಸ್ತಸ್ಮಿನ್ವನೇ ಲಪಿತಯಾ ಸಹ||
ನಂತರ ಅಗ್ನಿಯು ಖಾಂಡವವನ್ನು ಸುಡಲು ಬರುತ್ತಿರುವುದನ್ನು ನೋಡಿದ ಋಷಿ ಮಂದಪಾಲನು ಲಪಿತಳೊಡನೆ ಆ ವನಕ್ಕೆ ಧಾವಿಸಿದನು.
01220021a ತಂ ಸಂಕಲ್ಪಂ ವಿದಿತ್ವಾಸ್ಯ ಜ್ಞಾತ್ವಾ ಪುತ್ರಾಂಶ್ಚ ಬಾಲಕಾನ್|
01220021c ಸೋಽಭಿತುಷ್ಟಾವ ವಿಪ್ರರ್ಷಿರ್ಬ್ರಾಹ್ಮಣೋ ಜಾತವೇದಸಂ|
01220021e ಪುತ್ರಾನ್ಪರಿದದದ್ಭೀತೋ ಲೋಕಪಾಲಂ ಮಹೌಜಸಂ||
ಅವನ ಸಂಕಲ್ಪವನ್ನು ತಿಳಿದು ಮತ್ತು ಪುತ್ರರು ಬಾಲಕರೆಂದು ತಿಳಿದು ಆ ವಿಪ್ರರ್ಷಿ ಬ್ರಾಹ್ಮಣನು ತನ್ನ ಪುತ್ರರ ರಕ್ಷಣೆಗೆ ಭೀತನಾಗಿ ಮಹೌಜಸ ಲೋಕಪಾಲ ಜಾತವೇದಸನನ್ನು ಸ್ತುತಿಸ ತೊಡಗಿದನು.
01220022 ಮಂದಪಾಲ ಉವಾಚ|
01220022a ತ್ವಮಗ್ನೇ ಸರ್ವದೇವಾನಾಂ ಮುಖಂ ತ್ವಮಸಿ ಹವ್ಯವಾಟ್|
01220022c ತ್ವಮಂತಃ ಸರ್ವಭೂತಾನಾಂ ಗೂಢಶ್ಚರಸಿ ಪಾವಕ||
ಮಂದಪಾಲನು ಹೇಳಿದನು: “ಅಗ್ನಿ! ನೀನು ಸರ್ವದೇವತೆಗಳ ಬಾಯಿ! ನೀನು ಹವ್ಯವನ್ನು ಸಾಗಿಸುವವನು! ನೀನು ಸರ್ವಭೂತಗಳ ಅಂತರಾಳದಲ್ಲಿ ಗೂಢವಾಗಿದ್ದೀಯೆ!
01220023a ತ್ವಾಮೇಕಮಾಹುಃ ಕವಯಸ್ತ್ವಾಮಾಹುಸ್ತ್ರಿವಿಧಂ ಪುನಃ|
01220023c ತ್ವಾಮಷ್ಟಧಾ ಕಲ್ಪಯಿತ್ವಾ ಯಜ್ಞವಾಹಮಕಲ್ಪಯನ್||
ಕವ್ಯರು ನಿನ್ನನ್ನು ಒಂದೇ ಎಂದು ಕರೆಯುತ್ತಾರೆ ಆದರೆ ಪುನಃ ತ್ರಿವಿಧವೆಂದೂ ಕರೆಯುತ್ತಾರೆ. ನಿನ್ನನ್ನು ಅಷ್ಟಧಾ ಎಂದು ಕಲ್ಪಿಸಿ ಯಜ್ಞವಾಹನನೆಂದೂ ಕಲ್ಪಿಸುತ್ತಾರೆ.
01220024a ತ್ವಯಾ ಸೃಷ್ಟಮಿದಂ ವಿಶ್ವಂ ವದಂತಿ ಪರಮರ್ಷಯಃ|
01220024c ತ್ವದೃತೇ ಹಿ ಜಗತ್ ಕೃತ್ಸ್ನಂ ಸದ್ಯೋ ನ ಸ್ಯಾದ್ಹುತಾಶನ||
ನೀನು ಈ ವಿಶ್ವವನ್ನು ಸೃಷ್ಟಿಸಿದವನು ಎಂದು ಪರಮಋಷಿಗಳು ಹೇಳುತ್ತಾರೆ. ಹುತಾಶನ! ನೀನಿಲ್ಲದೇ ಈ ಜಗತ್ತು ಕ್ಷಣಮಾತ್ರದಲ್ಲಿ ಅದೃಶ್ಯವಾಗಿಬಿಡುತ್ತದೆ!
01220025a ತುಭ್ಯಂ ಕೃತ್ವಾ ನಮೋ ವಿಪ್ರಾಃ ಸ್ವಕರ್ಮವಿಜಿತಾಂ ಗತಿಂ|
01220025c ಗಚ್ಛಂತಿ ಸಹ ಪತ್ನೀಭಿಃ ಸುತೈರಪಿ ಚ ಶಾಶ್ವತೀಂ||
ವಿಪ್ರರು ಪತ್ನಿ ಮತ್ತು ಸುತರ ಸಹಿತ ನಿನ್ನನ್ನು ನಮಸ್ಕರಿಸಿಯೇ ಸ್ವಕರ್ಮಗಳನ್ನು ಮಾಡಲು ಶಾಶ್ವತ ಜಯದ ದಾರಿಯಲ್ಲಿ ನಡೆಯುತ್ತಾರೆ.
01220026a ತ್ವಾಮಗ್ನೇ ಜಲದಾನಾಹುಃ ಖೇ ವಿಷಕ್ತಾನ್ಸವಿದ್ಯುತಃ|
01220026c ದಹಂತಿ ಸರ್ವಭೂತಾನಿ ತ್ವತ್ತೋ ನಿಷ್ಕ್ರಮ್ಯ ಹಾಯನಾಃ||
ನೀನು ತಮ್ಮ ಮಿಂಚುಗಳಿಂದ ಪೂರ್ವದಿಕ್ಕಿನ ಆಕಾಶವನ್ನು ಮುಟ್ಟುವ ಮೋಡಗಳೆಂದು ಹೇಳುತ್ತಾರೆ. ನಿನ್ನ ಮುಖದಿಂದ ಹೊರಬರುವ ಜ್ವಾಲೆಯು ಸರ್ವಭೂತಗಳನ್ನು ಸುಡುತ್ತದೆ.
01220027a ಜಾತವೇದಸ್ತವೈವೇಯಂ ವಿಶ್ವಸೃಷ್ಟಿರ್ಮಹಾದ್ಯುತೇ|
01220027c ತವೈವ ಕರ್ಮ ವಿಹಿತಂ ಭೂತಂ ಸರ್ವಂ ಚರಾಚರಂ||
ಮಹಾದ್ಯುತೇ! ಜಾತವೇದ! ಈ ವಿಶ್ವವು ನಿನ್ನದೇ ಸೃಷ್ಟಿ! ಸರ್ವ ಕರ್ಮಗಳೂ ಚರಾಚರ ಭೂತಗಳೂ ನಿನ್ನಿಂದಲೇ ವಿಹಿತವಾಗಿವೆ.
01220028a ತ್ವಯಾಪೋ ವಿಹಿತಾಃ ಪೂರ್ವಂ ತ್ವಯಿ ಸರ್ವಮಿದಂ ಜಗತ್|
01220028c ತ್ವಯಿ ಹವ್ಯಂ ಚ ಕವ್ಯಂ ಚ ಯಥಾವತ್ಸಂಪ್ರತಿಷ್ಠಿತಂ|
ಹಿಂದೆ ನೀರು ನಿನ್ನಿಂದಲೇ ವಿಹಿತವಾಗಿತ್ತು. ಈ ಸರ್ವ ಜಗತ್ತೂ ನಿನ್ನಿಂದಲೇ ವಿಹಿತವಾಗಿದೆ. ಹವ್ಯ ಕವ್ಯಗಳೆಲ್ಲವೂ ಯಥಾವತ್ತಾಗಿ ನಿನ್ನನ್ನೇ ಆಧರಿಸಿವೆ.
01220029a ಅಗ್ನೇ ತ್ವಮೇವ ಜ್ವಲನಸ್ತ್ವಂ ಧಾತಾ ತ್ವಂ ಬೃಹಸ್ಪತಿಃ|
01220029c ತ್ವಮಶ್ವಿನೌ ಯಮೌ ಮಿತ್ರಃ ಸೋಮಸ್ತ್ವಮಸಿ ಚಾನಿಲಃ||
ಅಗ್ನಿ! ನೀನೇ ಜ್ವಲನ! ನೀನೇ ಧಾತಾ ಮತ್ತು ಬೃಹಸ್ಪತಿ! ನೀನೆ ಅಶ್ವಿನೀ ದೇವತೆಗಳು! ಯಮ, ಮಿತ್ರ, ಸೋಮ ಮತ್ತು ಅನಿಲನೂ ನೀನೇ!””
01220030 ವೈಶಂಪಾಯನ ಉವಾಚ|
01220030a ಏವಂ ಸ್ತುತಸ್ತತಸ್ತೇನ ಮಂದಪಾಲೇನ ಪಾವಕಃ|
01220030c ತುತೋಷ ತಸ್ಯ ನೃಪತೇ ಮುನೇರಮಿತತೇಜಸಃ|
01220030e ಉವಾಚ ಚೈನಂ ಪ್ರೀತಾತ್ಮಾ ಕಿಮಿಷ್ಟಂ ಕರವಾಣಿ ತೇ||
ವೈಶಂಪಾಯನನು ಹೇಳಿದನು: “ನೃಪ! ಮಂದಪಾಲನ ಈ ಸ್ತುತಿಯಿಂದ ಪಾವಕನು ಆ ಅಮಿತತೇಜಸ ಮುನಿಯಲ್ಲಿ ಸಂತುಷ್ಟನಾದನು. ಪ್ರೀತಾತ್ಮನಾಗಿ ಅವನಲ್ಲಿ “ನಿನಗಿಷ್ಟವಾದ ಏನನ್ನು ಮಾಡಲಿ?” ಎಂದು ಕೇಳಿದನು.
01220031a ತಮಬ್ರವೀನ್ಮಂದಪಾಲಃ ಪ್ರಾಂಜಲಿರ್ಹವ್ಯವಾಹನಂ|
01220031c ಪ್ರದಹನ್ಖಾಂಡವಂ ದಾವಂ ಮಮ ಪುತ್ರಾನ್ವಿಸರ್ಜಯ||
ಮಂದಪಾಲನು ಅಂಜಲೀಬದ್ಧನಾಗಿ ಹವ್ಯವಾಹನನಿಗೆ ಹೇಳಿದನು: “ಖಾಂಡವವನವನ್ನು ದಹಿಸುವಾಗ ನನ್ನ ಪುತ್ರರನ್ನು ಬಿಟ್ಟುಬಿಡು!”
01220032a ತಥೇತಿ ತತ್ಪ್ರತಿಶ್ರುತ್ಯ ಭಗವಾನ್ ಹವ್ಯವಾಹನಃ|
01220032c ಖಾಂಡವೇ ತೇನ ಕಾಲೇನ ಪ್ರಜಜ್ವಾಲ ದಿಧಕ್ಷಯಾ||
ಭಗವಾನ್ ಹವ್ಯವಾಹನನು ಹಾಗೆಯೇ ಆಗಲೆಂದು ಉತ್ತರಿಸಿ, ಅದೇ ಸಮಯದಲ್ಲಿ ಖಾಂಡವವನವನ್ನು ಸುಡುವ ಇಚ್ಛೆಯಿಂದ ತನ್ನ ಜ್ವಾಲೆಗಳನ್ನು ಪಸರಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನ ಎನ್ನುವ ಇನ್ನೂರಾ ಇಪ್ಪತ್ತನೆಯ ಅಧ್ಯಾಯವು.