ಆದಿ ಪರ್ವ: ಖಾಂಡವದಾಹ ಪರ್ವ
೨೧೯
ತಕ್ಷಕನು ಸುರಕ್ಷಿತನಾಗಿದ್ದಾನೆ ಮತ್ತು ಕೃಷ್ಣಾರ್ಜುನರು ಅಜೇಯರು ಎಂಬ ಅಶರೀರವಾಣಿಯನ್ನು ಕೇಳಿ ಇಂದ್ರನು ಯುದ್ಧದಿಂದ ಹಿಂದೆ ಸರಿದುದು (೧-೨೦). ದಾನವ ಮಯನು ಆರ್ತನಾಗಿ ಸಹಾಯವನ್ನು ಕೇಳಲು ಅರ್ಜುನನು ಅಭಯವನ್ನು ನೀಡಿದುದು (೨೧-೪೦).
01219001 ವೈಶಂಪಾಯನ ಉವಾಚ|
01219001a ತಥಾ ಶೈಲನಿಪಾತೇನ ಭೀಷಿತಾಃ ಖಾಂಡವಾಲಯಾಃ|
01219001c ದಾನವಾ ರಾಕ್ಷಸಾ ನಾಗಾಸ್ತರಕ್ಷ್ವೃಕ್ಷವನೌಕಸಃ|
01219001e ದ್ವಿಪಾಃ ಪ್ರಭಿನ್ನಾಃ ಶಾರ್ದೂಲಾಃ ಸಿಂಹಾಃ ಕೇಸರಿಣಸ್ತಥಾ||
01219002a ಮೃಗಾಶ್ಚ ಮಹಿಷಾಶ್ಚೈವ ಶತಶಃ ಪಕ್ಷಿಣಸ್ತಥಾ|
01219002c ಸಮುದ್ವಿಗ್ನಾ ವಿಸಸೃಪುಸ್ತಥಾನ್ಯಾ ಭೂತಜಾತಯಃ||
ವೈಶಂಪಾಯನನು ಹೇಳಿದನು: “ಆಗ ಬೀಳುತ್ತಿರುವ ಶೈಲಕ್ಕೆ ಭಯಪಟ್ಟು ಖಾಂಡವವಾಸಿಗಳಾದ ನೂರಾರು ದಾನವರು, ರಾಕ್ಷಸರು, ನಾಗಗಳು, ಚಿರತೆಗಳು, ಕರಡಿಗಳು, ಕೊಬ್ಬಿದ ಆನೆಗಳು, ಹುಲಿಗಳು, ಕೇಸರಿ ಸಿಂಹಗಳು, ಜಿಂಕೆಗಳು, ಎಮ್ಮೆಗಳು ಮತ್ತು ಇತರ ಭೂತಜಾತಿಗಳು ಹಾಗೂ ಪಕ್ಷಿಗಳು ಉದ್ವಿಗ್ನರಾಗಿ ಚೆಲ್ಲಾಪಿಲ್ಲಿ ಓಡಿದರು.
01219003a ತಂ ದಾವಂ ಸಮುದೀಕ್ಷಂತಃ ಕೃಷ್ಣೌ ಚಾಭ್ಯುದ್ಯತಾಯುಧೌ|
01219003c ಉತ್ಪಾತನಾದಶಬ್ಧೇನ ಸಂತ್ರಾಸಿತ ಇವಾಭವನ್||
ಬೆಂಕಿಯು ಉರಿಯುತ್ತಿರುವುದನ್ನು ನೋಡುತ್ತಾ ಆಯುಧಗಳಿಂದ ಸಿದ್ಧರಾಗಿದ್ದ ಕೃಷ್ಣರಿಬ್ಬರೂ ನಾದಶಬ್ಧ ಉತ್ಪಾತಗಳಿಂದ ಅವುಗಳನ್ನು ಕಾಡಿಸಿ ಕೆಳಗುರಿಳಿಸಿದರು.
01219004a ಸ್ವತೇಜೋಭಾಸ್ವರಂ ಚಕ್ರಮುತ್ಸಸರ್ಜ ಜನಾರ್ದನಃ|
01219004c ತೇನ ತಾ ಜಾತಯಃ ಕ್ಷುದ್ರಾಃ ಸದಾನವನಿಶಾಚರಾಃ|
01219004e ನಿಕೃತ್ತಾಃ ಶತಶಃ ಸರ್ವಾ ನಿಪೇತುರನಲಂ ಕ್ಷಣಾತ್||
ಜನಾರ್ದನನು ತನ್ನ ತೇಜಸ್ಸಿನಿಂದ ಬೆಳಗುತ್ತಿದ್ದ ಚಕ್ರವನ್ನು ಪ್ರಯೋಗಿಸಿದನು. ಅದರಿಂದ ದಾನವ ನಿಶಾಚರರೊಡನೆ ಆ ಎಲ್ಲ ಕ್ಷುದ್ರ ಜಾತಿಯವರೂ ನೂರಾರು ಸಂಖ್ಯೆಗಳಲ್ಲಿ ತುಂಡಾಗಿ ಕ್ಷಣದಲ್ಲಿ ಬೆಂಕಿಗೆ ಬಿದ್ದರು.
01219005a ಅದೃಶ್ಯನ್ರಾಕ್ಷಸಾಸ್ತತ್ರ ಕೃಷ್ಣಚಕ್ರವಿದಾರಿತಾಃ|
01219005c ವಸಾರುಧಿರಸಂಪೃಕ್ತಾಃ ಸಂಧ್ಯಾಯಾಮಿವ ತೋಯದಾಃ||
ಕೃಷ್ಣನ ಚಕ್ರದಿಂದ ಘಾತರಾದ ರಾಕ್ಷಸರು ತಮ್ಮ ಮಾಂಸ ಮತ್ತು ರಕ್ತಗಳಿಂದ ಆವೃತರಾಗಿ ಸಂಧ್ಯಾಕಾಲದ ಮೋಡಗಳಂತೆ ತೋರುತ್ತಿದ್ದರು.
01219006a ಪಿಶಾಚಾನ್ಪಕ್ಷಿಣೋ ನಾಗಾನ್ಪಶೂಂಶ್ಚಾಪಿ ಸಹಸ್ರಶಃ|
01219006c ನಿಘ್ನಂಶ್ಚರತಿ ವಾರ್ಷ್ಣೇಯಃ ಕಾಲವತ್ತತ್ರ ಭಾರತ||
ಭಾರತ! ವಾರ್ಷ್ಣೇಯನು ಕಾಲನಂತೆ ಸಹಸ್ರಾರು ಸಂಖ್ಯೆಗಳಲ್ಲಿ ಪಿಶಾಚ, ಪಕ್ಷಿ, ನಾಗ, ಮತ್ತು ಪಶುಗಳನ್ನು ಸಂಹರಿಸುತ್ತಾ ನಡೆದನು.
01219007a ಕ್ಷಿಪ್ತಂ ಕ್ಷಿಪ್ತಂ ಹಿ ತಚ್ಚಕ್ರಂ ಕೃಷ್ಣಸ್ಯಾಮಿತ್ರಘಾತಿನಃ|
01219007c ಹತ್ವಾನೇಕಾನಿ ಸತ್ತ್ವಾನಿ ಪಾಣಿಮೇತಿ ಪುನಃ ಪುನಃ||
ಅಮಿತ್ರಘಾತಿ ಕೃಷ್ಣನು ಯಾವ ಯಾವಾಗ ಆ ಚಕ್ರವನ್ನು ಪ್ರಯೋಗಿಸಿದರೂ ಅದು ಅನೇಕ ಜೀವಿಗಳನ್ನು ಸಂಹರಿಸಿ ಪುನಃ ಪುನಃ ಅವನ ಕೈಗೇ ಬಂದು ಸೇರುತ್ತಿತ್ತು.
01219008a ತಥಾ ತು ನಿಘ್ನತಸ್ತಸ್ಯ ಸರ್ವಸತ್ತ್ವಾನಿ ಭಾರತ|
01219008c ಬಭೂವ ರೂಪಮತ್ಯುಗ್ರಂ ಸರ್ವಭೂತಾತ್ಮನಸ್ತದಾ||
ಭಾರತ! ಈ ರೀತಿ ಸರ್ವಸತ್ವಗಳನ್ನು ಸಂಹರಿಸುತ್ತಿರಲು ಆ ಸರ್ವಭೂತಾತ್ಮನು ಅತೀ ಉಗ್ರರೂಪನಾಗಿ ತೋರುತ್ತಿದ್ದನು.
01219009a ಸಮೇತಾನಾಂ ಚ ದೇವಾನಾಂ ದಾನವಾನಾಂ ಚ ಸರ್ವಶಃ|
01219009c ವಿಜೇತಾ ನಾಭವತ್ಕಶ್ಚಿತ್ ಕೃಷ್ಣಪಾಂಡವಯೋರ್ಮೃಧೇ||
ಅಲ್ಲಿ ನೆರೆದಿದ್ದ ಸರ್ವ ದೇವತೆಗಳಲ್ಲಿ ಅಥವಾ ದಾನವರಲ್ಲಿ ಯುದ್ಧದಲ್ಲಿ ಕೃಷ್ಣಪಾಂಡವರನ್ನು ಜಯಿಸುವವರು ಯಾರೂ ಇರಲಿಲ್ಲ.
01219010a ತಯೋರ್ಬಲಾತ್ಪರಿತ್ರಾತುಂ ತಂ ದಾವಂ ತು ಯದಾ ಸುರಾಃ|
01219010c ನಾಶಕ್ನುವಂ ಶಮಯಿತುಂ ತದಾಭೂವನ್ ಪರಾಙ್ಮುಖಾಃ||
ಸುರರು ಯಾವಾಗ ತಮ್ಮ ಬಲದಿಂದ ಆ ವನವನ್ನು ಸುಟ್ಟುಹೋಗುವುದರಿಂದ ರಕ್ಷಿಸಲು ಮತ್ತು ಬೆಂಕಿಯನ್ನು ಆರಿಸಲು ಸಾಧ್ಯವಾಗಲಿಲ್ಲವೋ ಆಗ ಅವರು ಪರಾಙ್ಮುಖರಾದರು.
01219011a ಶತಕ್ರತುಶ್ಚ ಸಂಪ್ರೇಕ್ಷ್ಯ ವಿಮುಖಾನ್ದೇವತಾಗಣಾನ್|
01219011c ಬಭೂವಾವಸ್ಥಿತಃ ಪ್ರೀತಃ ಪ್ರಶಂಸನ್ ಕೃಷ್ಣಪಾಂಡವೌ||
ದೇವಗಣಗಳು ಹಿಂದಿರುಗಿ ಹೋಗುತ್ತಿದ್ದುದನ್ನು ನೋಡಿದ ಶತಕ್ರತುವು ಪ್ರೀತನಾಗಿ ಕೃಷ್ಣ-ಪಾಂಡವರನ್ನು ಪ್ರಶಂಸಿಸುತ್ತಾ ಅಲ್ಲಿಯೇ ನಿಂತನು.
01219012a ನಿವೃತ್ತೇಷು ತು ದೇವೇಷು ವಾಗುವಾಚಾಶರೀರಿಣೀ|
01219012c ಶತಕ್ರತುಮಭಿಪ್ರೇಕ್ಷ್ಯ ಮಹಾಗಂಭೀರನಿಃಸ್ವನಾ||
ದೇವತೆಗಳು ನಿವೃತ್ತರಾಗಲು ಶತಕ್ರತುವನ್ನು ಉದ್ದೇಶಿಸಿ ಮಹಾಗಂಭೀರನಿಃಸ್ವನದಲ್ಲಿ ಒಂದು ಅಶರೀರವಾಣಿಯಾಯಿತು.
01219013a ನ ತೇ ಸಖಾ ಸನ್ನಿಹಿತಸ್ತಕ್ಷಕಃ ಪನ್ನಗೋತ್ತಮಃ|
01219013c ದಾಹಕಾಲೇ ಖಾಂಡವಸ್ಯ ಕುರುಕ್ಷೇತ್ರಂ ಗತೋ ಹ್ಯಸೌ||
“ನಿನ್ನ ಸಖ ಪನ್ನಗೋತ್ತಮ ತಕ್ಷಕನು ಖಾಂಡವ ದಹನದ ಕಾಲದಲ್ಲಿ ಕುರುಕ್ಷೇತ್ರಕ್ಕೆ ಹೋಗಿರುತ್ತಾನೆ.
01219014a ನ ಚ ಶಕ್ಯೌ ತ್ವಯಾ ಜೇತುಂ ಯುದ್ಧೇಽಸ್ಮಿನ್ ಸಮವಸ್ಥಿತೌ|
01219014c ವಾಸುದೇವಾರ್ಜುನೌ ಶಕ್ರ ನಿಬೋಧೇದಂ ವಚೋ ಮಮ||
ಶಕ್ರ! ನನ್ನ ಮಾತುಗಳನ್ನು ಕೇಳು! ಯುದ್ಧದಲ್ಲಿ ನಿರತರಾದ ವಾಸುದೇವಾರ್ಜುನರನ್ನು ನೀನು ಗೆಲ್ಲಲು ಸಾಧ್ಯವಿಲ್ಲ.
01219015a ನರನಾರಾಯಣೌ ದೇವೌ ತಾವೇತೌ ವಿಶ್ರುತೌ ದಿವಿ|
01219015c ಭವಾನಪ್ಯಭಿಜಾನಾತಿ ಯದ್ವೀರ್ಯೌ ಯತ್ಪರಾಕ್ರಮೌ||
ಅವರು ದಿವಿಯಲ್ಲಿ ವಿಶ್ರುತರಾದ ನರ-ನಾರಾಯಣ ದೇವರುಗಳು. ಈ ವೀರರ ಪರಾಕ್ರಮವೇನೆಂದು ನಿನಗೆ ಕೂಡ ತಿಳಿದಿದೆ.
01219016a ನೈತೌ ಶಕ್ಯೌ ದುರಾಧರ್ಷೌ ವಿಜೇತುಮಜಿತೌ ಯುಧಿ|
01219016c ಅಪಿ ಸರ್ವೇಷು ಲೋಕೇಷು ಪುರಾಣಾವೃಷಿಸತ್ತಮೌ||
ಈ ದುರಾಧರ್ಷ ಅಜಿತ ಪುರಾತನ ಋಷಿಸತ್ತಮರನ್ನು ಗೆಲ್ಲಲು ಸರ್ವ ಲೋಕದಲ್ಲಿ ಯಾರಿಗೂ ಶಕ್ಯವಿಲ್ಲ.
01219017a ಪೂಜನೀಯತಮಾವೇತಾವಪಿ ಸರ್ವೈಃ ಸುರಾಸುರೈಃ|
01219017c ಸಯಕ್ಷರಕ್ಷೋಗಂಧರ್ವನರಕಿನ್ನರಪನ್ನಗೈಃ||
ಅವರು ಯಕ್ಷ ರಾಕ್ಷಸ ಗಂಧರ್ವ ನರ ಕಿನ್ನರ ಪನ್ನಗಳ ಸಹಿತ ಸರ್ವ ಸುರಾಸುರರಿಗೆ ಪೂಜನೀಯರು.
01219018a ತಸ್ಮಾದಿತಃ ಸುರೈಃ ಸಾರ್ಧಂ ಗಂತುಮರ್ಹಸಿ ವಾಸವ|
01219018c ದಿಷ್ಟಂ ಚಾಪ್ಯನುಪಶ್ಯೈತತ್ಖಾಂಡವಸ್ಯ ವಿನಾಶನಂ||
ವಾಸವ! ಆದುದರಿಂದ ಸುರರ ಸಹಿತ ನೀನು ಇಲ್ಲಿಂದ ಹೋಗಬೇಕು. ಮತ್ತು ವಿಧಿನಿರ್ಮಿತ ಈ ಖಾಂಡವ ವಿನಾಶನವನ್ನು ನೋಡು.”
01219019a ಇತಿ ವಾಚಮಭಿಶ್ರುತ್ಯ ತಥ್ಯಮಿತ್ಯಮರೇಶ್ವರಃ|
01219019c ಕೋಪಾಮರ್ಷೌ ಸಮುತ್ಸೃಜ್ಯ ಸಂಪ್ರತಸ್ಥೇ ದಿವಂ ತದಾ||
ಈ ಮಾತನ್ನು ಕೇಳಿ ಅದು ಸತ್ಯವನ್ನೇ ನುಡಿಯುತ್ತಿದೆ ಎನ್ನುವುದನ್ನು ತಿಳಿದ ಅಮರೇಶ್ವರನು ಕೋಪ ಮತ್ತು ಸಿಡುಕನ್ನು ತೊರೆದು ದಿವಕ್ಕೆ ತೆರಳಿದನು.
01219020a ತಂ ಪ್ರಸ್ಥಿತಂ ಮಹಾತ್ಮಾನಂ ಸಮವೇಕ್ಷ್ಯ ದಿವೌಕಸಃ|
01219020c ತ್ವರಿತಾಃ ಸಹಿತಾ ರಾಜನ್ನನುಜಗ್ಮುಃ ಶತಕ್ರತುಂ||
ರಾಜನ್! ಮಹಾತ್ಮ ಶತಕ್ರತುವು ಹಿಂದಿರುಗುತ್ತಿರುವುದನ್ನು ನೋಡಿದ ದಿವೌಕಸರೂ ತ್ವರೆಮಾಡಿ ಅವನೊಂದಿಗೆ ಹಿಂದಿರುಗಿದರು.
01219021a ದೇವರಾಜಂ ತದಾ ಯಾಂತಂ ಸಹ ದೇವೈರುದೀಕ್ಷ್ಯ ತು|
01219021c ವಾಸುದೇವಾರ್ಜುನೌ ವೀರೌ ಸಿಂಹನಾದಂ ವಿನೇದತುಃ|
ದೇವತೆಗಳೊಡನೆ ಹಿಂದಿರುಗುತ್ತಿರುವ ದೇವರಾಜನನ್ನು ನೋಡಿ ವೀರ ವಾಸುದೇವಾರ್ಜುನರು ಸಿಂಹನಾದಗೈದರು.
01219022a ದೇವರಾಜೇ ಗತೇ ರಾಜನ್ಪ್ರಹೃಷ್ಟೌ ಕೃಷ್ಣಪಾಂಡವೌ|
01219022c ನಿರ್ವಿಶಂಕಂ ಪುನರ್ದಾವಂ ದಾಹಯಾಮಾಸತುಸ್ತದಾ||
ರಾಜನ್! ದೇವರಾಜನು ಹೊರಟುಹೋಗಲು ಪ್ರಹೃಷ್ಟ ಕೃಷ್ಣ-ಪಾಂಡವರು ನಿರ್ವಿಶಂಕರಾದರು. ಪುನಃ ಅಗ್ನಿಯು ಸುಡಲು ತೊಡಗಿದನು.
01219023a ಸ ಮಾರುತ ಇವಾಭ್ರಾಣಿ ನಾಶಯಿತ್ವಾರ್ಜುನಃ ಸುರಾನ್|
01219023c ವ್ಯಧಮಚ್ಛರಸಂಪಾತೈಃ ಪ್ರಾಣಿನಃ ಖಾಂಡವಾಲಯಾನ್|
ಮಾರುತವು ಮೋಡಗಳನ್ನು ಹೇಗೋ ಹಾಗೆ ಸುರರನ್ನು ನಾಶಪಡಿಸಿದ ಅರ್ಜುನನು ತನ್ನ ಬಲ ಬಾಣಗಳಿಂದ ಖಾಂಡವದಲ್ಲಿ ವಾಸಿಸುತ್ತಿದ್ದ ಪ್ರಾಣಿಗಳನ್ನು ಕೊಂದು ಹಾಕಿದನು.
01219024a ನ ಚ ಸ್ಮ ಕಿಂಚಿಚ್ಛಕ್ನೋತಿ ಭೂತಂ ನಿಶ್ಚರಿತುಂ ತತಃ|
01219024c ಸಂಚಿದ್ಯಮಾನಮಿಷುಭಿರಸ್ಯತಾ ಸವ್ಯಸಾಚಿನಾ||
ಅಲ್ಲಿರುವ ಯಾವುದೂ ಅಲ್ಲಿಂದ ಹೊರಗೆ ಹೋಗಲು ಶಕ್ಯವಿರಲಿಲ್ಲ. ಸವ್ಯಸಾಚಿಯು ಪ್ರಯೋಗಿಸಿದ ಶರಗಳು ಎಲ್ಲವನ್ನೂ ಕತ್ತರಿಸಿ ಕೆಳಗೆ ಬೀಳಿಸಿದವು.
01219025a ನಾಶಕಂಸ್ತತ್ರ ಭೂತಾನಿ ಮಹಾಂತ್ಯಪಿ ರಣೇಽರ್ಜುನಂ|
01219025c ನಿರೀಕ್ಷಿತುಮಮೋಘೇಷುಂ ಕರಿಷ್ಯಂತಿ ಕುತೋ ರಣಂ||
ರಣದಲ್ಲಿ ಇರುವವೆಲ್ಲವನ್ನೂ ಅಮೋಘವಾಗಿ ನಾಶಪಡಿಸುತ್ತಿದ್ದ ಅರ್ಜುನನನ್ನು ಮಹಾತ್ಮರೂ ನೋಡಲಿಕ್ಕಾಗುತ್ತಿರಲಿಲ್ಲ. ಇನ್ನು ಅವನೊಡನೆ ಕಾದಾಡುವವರು ಯಾರಿದ್ದರು?
01219026a ಶತೇನೈಕಂ ಚ ವಿವ್ಯಾಧ ಶತಂ ಚೈಕೇನ ಪತ್ರಿಣಾ|
01219026c ವ್ಯಸವಸ್ತೇಽಪತನ್ನಗ್ನೌ ಸಾಕ್ಷಾತ್ಕಾಲಹತಾ ಇವ||
ಅವನು ನೂರು ಶರಗಳಿಂದ ಒಂದನ್ನು ಅಥವಾ ನೂರನ್ನು ಒಂದೇ ಶರದಿಂದ ಹೊಡೆಯುತ್ತಿರಲು ಅವೆಲ್ಲವೂ ಜೀವವನ್ನು ಕಳೆದುಕೊಂಡು ಕಾಲನಿಂದ ಹೊಡೆತ ತಿಂದವರಂತೆ ಅಗ್ನಿಯಲ್ಲಿ ಬಿದ್ದವು.
01219027a ನ ಚಾಲಭಂತ ತೇ ಶರ್ಮ ರೋಧಃಸು ವಿಷಮೇಷು ಚ|
01219027c ಪಿತೃದೇವನಿವಾಸೇಷು ಸಂತಾಪಶ್ಚಾಪ್ಯಜಾಯತ||
ಬೆಂಕಿಯ ಸಂತಾಪವು ಹೆಚ್ಚುತ್ತಿರಲು ಅವುಗಳಿಗೆ ದಡದ ಹಿಂದೆಯಾಗಲೀ ಅಥವಾ ವಿಷಮ ಪ್ರದೇಶಗಳಲ್ಲಿಯಾಗಲೀ ಅಥವಾ ಪಿತೃದೇವನಿವಾಸಗಳಲ್ಲಿಯಾಗಲೀ ಆಶ್ರಯ ದೊರೆಯಲಿಲ್ಲ.
01219028a ಭೂತಸಂಘಸಹಸ್ರಾಶ್ಚ ದೀನಾಶ್ಚಕ್ರುರ್ಮಹಾಸ್ವನಂ|
01219028c ರುರುವುರ್ವಾರಣಾಶ್ಚೈವ ತಥೈವ ಮೃಗಪಕ್ಷಿಣಃ|
01219028e ತೇನ ಶಬ್ಧೇನ ವಿತ್ರೇಸುರ್ಗಂಗೋದಧಿಚರಾ ಝಷಾಃ||
ಸಹಸ್ರಾರು ಭೂತಸಂಕುಲಗಳು ದೀನರಾಗಿ ಮಹಾಸ್ವರದಲ್ಲಿ ಕೂಗಿದವು, ಆನೆಗಳು ಮತ್ತು ಮೃಗಪಕ್ಷಿಗಳು ಚೀರಿದವು. ಅವುಗಳ ಶಬ್ಧದಿಂದ ಗಂಗೆ ಮತ್ತು ಸಾಗರಗಳಲ್ಲಿ ವಾಸಿಸುವವರು ಭಯಭೀತರಾದರು.
01219029a ನ ಹ್ಯರ್ಜುನಂ ಮಹಾಬಾಹುಂ ನಾಪಿ ಕೃಷ್ಣಂ ಮಹಾಬಲಂ|
01219029c ನಿರೀಕ್ಷಿತುಂ ವೈ ಶಕ್ನೋತಿ ಕಶ್ಚಿದ್ಯೋದ್ಧುಂ ಕುತಃ ಪುನಃ||
ಮಹಾಬಾಹು ಅರ್ಜುನ ಮತ್ತು ಮಹಾಬಲಿ ಕೃಷ್ಣನನ್ನು, ಯುದ್ಧದಲ್ಲಿ ಎದುರಿಸುವುದಿರಲಿ, ನೋಡಲಿಕ್ಕೆ ಕೂಡ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.
01219030a ಏಕಾಯನಗತಾ ಯೇಽಪಿ ನಿಷ್ಪತಂತ್ಯತ್ರ ಕೇ ಚನ|
01219030c ರಾಕ್ಷಸಾನ್ದಾನವಾನ್ನಾಗಾಂ ಜಘ್ನೇ ಚಕ್ರೇಣ ತಾನ್ ಹರಿಃ||
ಅವರ ದಾರಿಯಲ್ಲಿ ಯಾರೇ ಬಂದರೂ ಅವರು ಅಲ್ಲಿಯೇ ಬೀಳುತ್ತಿದ್ದರು. ಹರಿಯು ಚಕ್ರದಿಂದ ರಾಕ್ಷಸರನನ್ನು, ದಾನವರನ್ನು ಮತ್ತು ನಾಗಗಳನ್ನು ಸಂಹರಿಸಿದನು.
01219031a ತೇ ವಿಭಿನ್ನಶಿರೋದೇಹಾಶ್ಚಕ್ರವೇಗಾದ್ಗತಾಸವಃ|
01219031c ಪೇತುರಾಸ್ಯೇ ಮಹಾಕಾಯಾ ದೀಪ್ತಸ್ಯ ವಸುರೇತಸಃ||
ಚಕ್ರದ ವೇಗದಿಂದ ವಿಭಿನ್ನಗೊಂಡ ಶಿರ-ದೇಹಗಳುಳ್ಳ ಮಹಾಕಾಯರು ಉರಿಯುತ್ತಿರುವ ಬೆಂಕಿಯ ಬಾಯಲ್ಲಿ ಸತ್ತು ಬಿದ್ದರು.
01219032a ಸ ಮಾಂಸರುಧಿರೌಘೈಶ್ಚ ಮೇದೌಘೈಶ್ಚ ಸಮೀರಿತಃ|
01219032c ಉಪರ್ಯಾಕಾಶಗೋ ವಹ್ನಿರ್ವಿಧೂಮಃ ಸಮದೃಶ್ಯತ||
ಮಾಂಸ-ರಕ್ತದ ಹೊಳೆಯಿಂದ ಮತ್ತು ಕೊಬ್ಬಿನ ಹೊಳೆಯಿಂದ ಭುಗಿಲೆದ್ದ ವಹ್ನಿಯು ಹೊಗೆಯಿಲ್ಲದೆ ಆಕಾಶವನ್ನು ಮುಟ್ಟುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.
01219033a ದೀಪ್ತಾಕ್ಷೋ ದೀಪ್ತಜಿಹ್ವಶ್ಚ ದೀಪ್ತವ್ಯಾತ್ತಮಹಾನನಃ|
01219033c ದೀಪ್ತೋರ್ಧ್ವಕೇಶಃ ಪಿಂಗಾಕ್ಷಃ ಪಿಬನ್ಪ್ರಾಣಭೃತಾಂ ವಸಾಂ||
01219034a ತಾಂ ಸ ಕೃಷ್ಣಾರ್ಜುನಕೃತಾಂ ಸುಧಾಂ ಪ್ರಾಪ್ಯ ಹುತಾಶನಃ|
01219034c ಬಭೂವ ಮುದಿತಸ್ತೃಪ್ತಃ ಪರಾಂ ನಿರ್ವೃತಿಮಾಗತಃ||
ಉರಿಯುತ್ತಿರುವ ಕಣ್ಣುಗಳ, ಉರಿಯುತ್ತಿರುವ ನಾಲಿಗೆಯ, ಉರಿಯುತ್ತಿರುವ ಮಹಾನನ ಊರ್ಧ್ವಕೇಶ, ಪಿಂಗಾಕ್ಷ ಹುತಾಶನನು ಪ್ರಾಣಿಗಳ ದೇಹಗಳನ್ನು ಕುಡಿದು ಕೃಷ್ಣಾರ್ಜುನರು ನೀಡಿದ ಆ ಸುಧೆಯನ್ನು ಪಡೆದು ತೃಪ್ತನಾಗಿ ಸಂತೋಷಗೊಂಡನು.
01219035a ಅಥಾಸುರಂ ಮಯಂ ನಾಮ ತಕ್ಷಕಸ್ಯ ನಿವೇಶನಾತ್|
01219035c ವಿಪ್ರದ್ರವಂತಂ ಸಹಸಾ ದದರ್ಶ ಮಧುಸೂದನಃ||
ಆಗ ತಕ್ಷಣವೇ ತಕ್ಷಕನ ನಿವೇಶನದಿಂದ ಹೊರಬರುತ್ತಿದ್ದ ಮಯ ಎಂಬ ಹೆಸರಿನ ಅಸುರನನ್ನು ಮಧುಸೂದನನು ಕಂಡನು.
01219036a ತಮಗ್ನಿಃ ಪ್ರಾರ್ಥಯಾಮಾಸ ದಿಧಕ್ಷುರ್ವಾತಸಾರಥಿಃ|
01219036c ದೇಹವಾನ್ವೈ ಜಟೀ ಭೂತ್ವಾ ನದಂಶ್ಚ ಜಲದೋ ಯಥಾ|
01219036e ಜಿಘಾಂಸುರ್ವಾಸುದೇವಶ್ಚ ಚಕ್ರಮುದ್ಯಮ್ಯ ವಿಷ್ಠಿತಃ||
ವಾಯುವೇ ಸಾರಥಿಯಾಗಿದ್ದ ಅಗ್ನಿಯು ಜಟಾಧರ ಬ್ರಾಹ್ಮಣನ ದೇಹವನ್ನು ಧರಿಸಿ ಗುಡುಗಿನಂತೆ ಗರ್ಜಿಸುತ್ತಾ ಅವನನ್ನು ಸುಡಲು ಬೆನ್ನಟ್ಟಿದನು. ಆಗ ವಾಸುದೇವನು ಅವನನ್ನು ಕೊಲ್ಲಲು ಚಕ್ರವನ್ನು ಹಿಡಿದು ಎದಿರು ಬಂದನು.
01219037a ಸ ಚಕ್ರಮುದ್ಯತಂ ದೃಷ್ಟ್ವಾ ದಿಧಕ್ಷುಂ ಚ ಹುತಾಶನಂ|
01219037c ಅಭಿಧಾವಾರ್ಜುನೇತ್ಯೇವಂ ಮಯಶ್ಚುಕ್ರೋಶ ಭಾರತ||
ಭಾರತ! ಅವನು ಚಕ್ರವನ್ನು ಮೇಲೆತ್ತಿದುದನ್ನು ಮತ್ತು ಸುಡಲು ಕಾತರನಾಗಿದ್ದ ಹುತಾಶನನನ್ನು ನೋಡಿದ ಮಯನು “ಅರ್ಜುನ! ಸಹಾಯ ಮಾಡು!” ಎಂದು ಕೂಗಿದನು.
01219038a ತಸ್ಯ ಭೀತಸ್ವನಂ ಶ್ರುತ್ವಾ ಮಾ ಭೈರಿತಿ ಧನಂಜಯಃ|
01219038c ಪ್ರತ್ಯುವಾಚ ಮಯಂ ಪಾರ್ಥೋ ಜೀವಯನ್ನಿವ ಭಾರತ||
ಭಾರತ! ಅವನ ಭಯಭರಿತ ಧ್ವನಿಯನ್ನು ಕೇಳಿದ ಪಾರ್ಥ ಧನಂಜಯನು ಮಯನಿಗೆ ಪುನರ್ಜೀವವನ್ನು ನೀಡುತ್ತಿದ್ದಾನೋ ಎನ್ನುವಂತೆ “ಹೆದರಬೇಡ!” ಎಂದು ಉತ್ತರಿಸಿದನು.
01219039a ತಂ ಪಾರ್ಥೇನಾಭಯೇ ದತ್ತೇ ನಮುಚೇರ್ಭ್ರಾತರಂ ಮಯಂ|
01219039c ನ ಹಂತುಮೈಚ್ಛದ್ದಾಶಾರ್ಹಃ ಪಾವಕೋ ನ ದದಾಹ ಚ||
ನಮೂಚಿಯ ಭ್ರಾತರ ಮಯನಿಗೆ ಪಾರ್ಥನು ಅಭಯವನ್ನು ನೀಡಲು ದಾಶಾರ್ಹನು ಅವನನ್ನು ಕೊಲ್ಲಲು ಬಯಸಲಿಲ್ಲ ಮತ್ತು ಪಾವಕನು ಅವನನ್ನು ಸುಡಲಿಲ್ಲ.
01219040a ತಸ್ಮಿನ್ವನೇ ದಹ್ಯಮಾನೇ ಷಡಗ್ನಿರ್ನ ದದಾಹ ಚ|
01219040c ಅಶ್ವಸೇನಂ ಮಯಂ ಚಾಪಿ ಚತುರಃ ಶಾಂಙೃಕಾನಿತಿ||
ಆ ವನವು ಸುಡುತ್ತಿರುವಾಗ ಆರುಮಂದಿ ಸುಡಲಿಲ್ಲ - ಅಶ್ವಸೇನ, ಮಯ ಮತ್ತು ನಾಲ್ಕು ಸಾರಂಗಗಳು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಮಯದರ್ಶನೇ ಏಕೋನವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಮಯದರ್ಶನ ಎನ್ನುವ ಇನ್ನೂರಾ ಹತ್ತೊಂಭತ್ತನೆಯ ಅಧ್ಯಾಯವು.