ಆದಿ ಪರ್ವ: ಖಾಂಡವದಾಹ ಪರ್ವ
೨೧೮
ತಕ್ಷಕನ ಮಗ ಅಶ್ವಸೇನನನ್ನು ಉಳಿಸಲು ಇಂದ್ರನು ಅರ್ಜುನನ ಮೇಲೆ ಮಾಯೆಯ ಮಳೆಯನ್ನು ಸುರಿಸಿದುದು (೧-೯). ಇಂದ್ರಾರ್ಜುನರ ಯುದ್ಧ (೧೦-೫೦).
01218001 ವೈಶಂಪಾಯನ ಉವಾಚ|
01218001a ತಸ್ಯಾಭಿವರ್ಷತೋ ವಾರಿ ಪಾಂಡವಃ ಪ್ರತ್ಯವಾರಯತ್|
01218001c ಶರವರ್ಷೇಣ ಬೀಭತ್ಸುರುತ್ತಮಾಸ್ತ್ರಾಣಿ ದರ್ಶಯನ್||
ವೈಶಂಪಾಯನನು ಹೇಳಿದನು: “ಬೀಭತ್ಸು ಪಾಂಡವನು ಶರಗಳ ಮಳೆಯನ್ನು ಸುರಿಸಿ ಆ ಮಳೆಯನ್ನು ತಡೆದು ಅಸ್ತ್ರಗಳಲ್ಲಿ ತನಗಿದ್ದ ಉತ್ತಮ ಪ್ರವೀಣತೆಯನ್ನು ತೋರಿಸಿದನು.
01218002a ಶರೈಃ ಸಮಂತತಃ ಸರ್ವಂ ಖಾಂಡವಂ ಚಾಪಿ ಪಾಂಡವಃ|
01218002c ಚಾದಯಾಮಾಸ ತದ್ವರ್ಷಮಪಕೃಷ್ಯ ತತೋ ವನಾತ್||
ಪಾಂಡವನು ಇಡೀ ಖಾಂಡವವನ್ನು ಶರಗಳಿಂದ ಮುಚ್ಚಿ ಇಂದ್ರನ ಮಳೆಯು ವನವನ್ನು ತಲುಪದಂತೆ ತಡೆಹಿಡಿದನು.
01218003a ನ ಚ ಸ್ಮ ಕಿಂ ಚಿಚ್ಶಕ್ನೋತಿ ಭೂತಂ ನಿಶ್ಚರಿತುಂ ತತಃ|
01218003c ಸಂಚಾದ್ಯಮಾನೇ ಖಗಮೈರಸ್ಯತಾ ಸವ್ಯಸಾಚಿನಾ||
ಸವ್ಯಸಾಚಿಯು ಆಕಾಶದಲ್ಲಿ ಹಾರುತ್ತಿರುವ ಶರಗಳಿಂದ ಮುಚ್ಚಿದಾಗ ಅಲ್ಲಿಂದ ಯಾವುದೇ ಒಂದು ಜೀವಿಯೂ ತಪ್ಪಿಸಿಕೊಳ್ಳುವಂತಿರಲಿಲ್ಲ.
01218004a ತಕ್ಷಕಸ್ತು ನ ತತ್ರಾಸೀತ್ಸರ್ಪರಾಜೋ ಮಹಾಬಲಃ|
01218004c ದಹ್ಯಮಾನೇ ವನೇ ತಸ್ಮಿನ್ಕುರುಕ್ಷೇತ್ರೇಽಭವತ್ತದಾ||
ಆದರೆ ಸರ್ಪರಾಜ ಮಹಾಬಲ ತಕ್ಷಕನು ಅಲ್ಲಿರಲಿಲ್ಲ. ವನವು ಸುಡುತ್ತಿರುವಾಗ ಅವನು ಕುರುಕ್ಷೇತ್ರದಲ್ಲಿದ್ದನು.
01218005a ಅಶ್ವಸೇನಸ್ತು ತತ್ರಾಸೀತ್ತಕ್ಷಕಸ್ಯ ಸುತೋ ಬಲೀ|
01218005c ಸ ಯತ್ನಮಕರೋತ್ತೀವ್ರಂ ಮೋಕ್ಷಾರ್ಥಂ ಹವ್ಯವಾಹನಾತ್||
ಆದರೆ ತಕ್ಷಕನ ಬಲಶಾಲಿ ಮಗ ಅಶ್ವಸೇನನು ಅಲ್ಲಿದ್ದನು. ಅವನು ಹವ್ಯವಾಹನನಿಂದ ತಪ್ಪಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ಮಾಡಿದನು.
01218006a ನ ಶಶಾಕ ವಿನಿರ್ಗಂತುಂ ಕೌಂತೇಯಶರಪೀಡಿತಃ|
01218006c ಮೋಕ್ಷಯಾಮಾಸ ತಮ್ಮಾತಾ ನಿಗೀರ್ಯ ಭುಜಗಾತ್ಮಜಾ||
ಕೌಂತೇಯನ ಶರಗಳಿಂದ ಸುತ್ತುವರೆಯಲ್ಪಟ್ಟ ಅವನಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅವನ ತಾಯಿ ಭುಜಗಾತ್ಮಜೆಯು ಅವನನ್ನು ನುಂಗಿ ಉಳಿಸಲು ಪ್ರಯತ್ನಿಸಿದಳು.
01218007a ತಸ್ಯ ಪೂರ್ವಂ ಶಿರೋ ಗ್ರಸ್ತಂ ಪುಚ್ಛಮಸ್ಯ ನಿಗೀರ್ಯತೇ|
01218007c ಊರ್ಧ್ವಮಾಚಕ್ರಮೇ ಸಾ ತು ಪನ್ನಗೀ ಪುತ್ರಗೃದ್ಧಿನೀ||
ಅವಳು ಮೊದಲು ಅವನ ಶಿರವನ್ನು ನುಂಗಿದಳು. ಅವನ ಬಾಲವನ್ನು ನುಂಗುತ್ತಿರುವಾಗ ಆ ಪನ್ನಗಿ ಪುತ್ರಗೃದ್ಧಿನಿಯು ಮೇಲೆ ಹಾರಲು ಪ್ರಯತ್ನಿಸಿದಳು.
01218008a ತಸ್ಯಾಸ್ತೀಕ್ಷ್ಣೇನ ಭಲ್ಲೇನ ಪೃಥುಧಾರೇಣ ಪಾಂಡವಃ|
01218008c ಶಿರಶ್ಚಿಚ್ಛೇದ ಗಚ್ಛಂತ್ಯಾಸ್ತಾಮಪಶ್ಯತ್ಸುರೇಶ್ವರಃ||
ಆಗ ಪಾಂಡವನು ವಿಶಾಲಧಾರೆಯ ತೀಕ್ಷ್ಣ ಭಲ್ಲದಿಂದ ಅವಳ ಶಿರವನ್ನು ಕತ್ತರಿಸಿದನು ಮತ್ತು ಅದನ್ನು ಸುರೇಶ್ವರನು ನೋಡಿದನು.
01218009a ತಂ ಮುಮೋಚಯಿಷುರ್ವಜ್ರೀ ವಾತವರ್ಷೇಣ ಪಾಂಡವಂ|
01218009c ಮೋಹಯಾಮಾಸ ತತ್ಕಾಲಮಶ್ವಸೇನಸ್ತ್ವಮುಚ್ಯತ||
ಆಗ ವಜ್ರಿಯು ಅವನನ್ನು ಉಳಿಸಲು ಪ್ರಯತ್ನಿಸಿ ಪಾಂಡವನ ಮೇಲೆ ಮಾಯೆಯ ಭಿರುಗಾಳಿ ಮಳೆಗಳನ್ನು ಸುರಿಸಿದನು. ಅದೇ ಸಮಯದಲ್ಲಿ ಅಶ್ವಸೇನನು ತಪ್ಪಿಸಿಕೊಂಡನು.
01218010a ತಾಂ ಚ ಮಾಯಾಂ ತದಾ ದೃಷ್ಟ್ವಾ ಘೋರಾನ್ನಾಗೇನ ವಂಚಿತಃ|
01218010c ದ್ವಿಧಾ ತ್ರಿಧಾ ಚ ಚಿಚ್ಛೇದ ಖಗತಾನೇವ ಭಾರತ||
ಭಾರತ! ಆ ಘೋರ ನಾಗಗಳ ಮಾಯೆ ಮತ್ತು ಮೋಸವನ್ನು ಕಂಡ ಅವನು ಆಕಾಶದ ಕಡೆ ಹಾರುತ್ತಿರುವ ನಾಗಗಳನ್ನು ಎರಡು ಮೂರು ಭಾಗಗಳನ್ನಾಗಿ ಕತ್ತರಿಸಿ ತುಂಡುಮಾಡಿದನು.
01218011a ಶಶಾಪ ತಂ ಚ ಸಂಕ್ರುದ್ಧೋ ಬೀಭತ್ಸುರ್ಜಿಃಮಗಾಮಿನಂ|
01218011c ಪಾವಕೋ ವಾಸುದೇವಶ್ಚ ಅಪ್ರತಿಷ್ಠೋ ಭವೇದಿತಿ||
ಸಂಕೃದ್ಧ ಬೀಭತ್ಸು, ಪಾವಕ ಮತ್ತು ವಾಸುದೇವರು ಆ ನಾಗಕ್ಕೆ “ಅಪ್ರತಿಷ್ಠನಾಗು!” ಎಂದು ಶಪಿಸಿದರು.
01218012a ತತೋ ಜಿಷ್ಣುಃ ಸಹಸ್ರಾಕ್ಷಂ ಖಂ ವಿತತ್ಯೇಷುಭಿಃ ಶಿತೈಃ|
01218012c ಯೋಧಯಾಮಾಸ ಸಂಕ್ರುದ್ಧೋ ವಂಚನಾಂ ತಾಮನುಸ್ಮರನ್||
ಆಗ ಜಿಷ್ಣುವು ಸಹಸ್ರಾಕ್ಷನು ಮಾಡಿದ ವಂಚನೆಯಿಂದ ಸಂಕೃದ್ಧನಾಗಿ ಆಕಾಶವನ್ನು ಶರಗಳಿಂದ ತುಂಬಿ ಅವನೊಡನೆ ಯುದ್ಧ ಮಾಡಿದನು.
01218013a ದೇವರಾಡಪಿ ತಂ ದೃಷ್ಟ್ವಾ ಸಂರಬ್ಧಮಿವ ಫಲ್ಗುನಂ|
01218013c ಸ್ವಮಸ್ತ್ರಮಸೃಜದ್ದೀಪ್ತಂ ಯತ್ತತಾನಾಖಿಲಂ ನಭಃ||
ಕುಪಿತ ಫಲ್ಗುನನನ್ನು ನೋಡಿ ದೇವರಾಜನು ಇಡೀ ನಭವನ್ನೇ ಬೆಳಗಿಸುವಂತಿದ್ದ ಉರಿಯುತ್ತಿರುವ ತನ್ನ ಅಸ್ತ್ರವನ್ನು ಪ್ರಯೋಗಿಸಿದನು.
01218014a ತತೋ ವಾಯುರ್ಮಹಾಘೋಷಃ ಕ್ಷೋಭಯನ್ಸರ್ವಸಾಗರಾನ್|
01218014c ವಿಯತ್ಸ್ಥೋಽಜನಯನ್ಮೇಘಾಂಜಲಧಾರಾಮುಚೋಽಕುಲಾನ್||
ಆಗ ವಾಯುವು ಮಹಾಘೋಷದೊಂದಿಗೆ ಸರ್ವಸಾಗರಗಳನ್ನು ಕ್ಷೋಭಿಸುತ್ತಾ ಭಾರೀ ಮಳೆಯನ್ನು ತರುವ ಗಿರಿಗಳಂತಿರುವ ಮೋಡಗಳ ಸಂಕುಲವನ್ನೇ ಉಂಟುಮಾಡಿದನು.
01218015a ತದ್ವಿಘಾತಾರ್ಥಮಸೃಜದರ್ಜುನೋಽಪ್ಯಸ್ತ್ರಮುತ್ತಮಂ|
01218015c ವಾಯವ್ಯಮೇವಾಭಿಮಂತ್ರ್ಯ ಪ್ರತಿಪತ್ತಿವಿಶಾರದಃ||
ತನ್ನ ರಕ್ಷಣೆಯನ್ನು ಅರಿತಿದ್ದ ಅರ್ಜುನನು ಅವನನ್ನು ತಡೆಯಲು ಉತ್ತಮ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.
01218016a ತೇನೇಂದ್ರಾಶನಿಮೇಘಾನಾಂ ವೀರ್ಯೌಜಸ್ತದ್ವಿನಾಶಿತಂ|
01218016c ಜಲಧಾರಾಶ್ಚ ತಾಃ ಶೋಷಂ ಜಗ್ಮುರ್ನೇಶುಶ್ಚ ವಿದ್ಯುತಃ||
ಅದರಿಂದ ಇಂದ್ರನ ಮಳೆ-ಮೋಡಗಳ ವೀರ್ಯ ಓಜಸ್ಸನ್ನು ನಾಶಮಾಡಿದನು. ಮೋಡಗಳು ಬತ್ತಿಹೋದವು. ಮಿಂಚು ನಿಂತುಹೋಯಿತು.
01218017a ಕ್ಷಣೇನ ಚಾಭವದ್ವ್ಯೋಮ ಸಂಪ್ರಶಾಂತರಜಸ್ತಮಃ|
01218017c ಸುಖಶೀತಾನಿಲಗುಣಂ ಪ್ರಕೃತಿಸ್ಥಾರ್ಕಮಂಡಲಂ||
ಕ್ಷಣದಲ್ಲಿ ಆಕಾಶದಲ್ಲಿಯ ರಜ ಮತ್ತು ತಮಗಳು ಪ್ರಶಾಂತವಾಗಿ, ಸುಖಶೀತಲವು ಬೀಸಿ ಅರ್ಕಮಂಡಲವು ಸ್ವಭಾವಕ್ಕೆ ತೆರಳಿತು.
01218018a ನಿಷ್ಪ್ರತೀಕಾರಹೃಷ್ಟಶ್ಚ ಹುತಭುಗ್ವಿವಿಧಾಕೃತಿಃ|
01218018c ಪ್ರಜಜ್ವಾಲಾತುಲಾರ್ಚಿಷ್ಮಾನ್ಸ್ವನಾದೈಃ ಪೂರಯಂಜಗತ್||
ವಿರೋಧಗಳೇನೂ ಇಲ್ಲದೇ ಪ್ರಹೃಷ್ಟ ಅಗ್ನಿಯು ವಿವಿಧಾಕೃತಿಯಲ್ಲಿ ಪ್ರಜ್ವಲಿಸಿ ತನ್ನ ನಾದದಿಂದ ಜಗತ್ತನ್ನು ತುಂಬಿ ಸುಡತೊಡಗಿದನು.
01218019a ಕೃಷ್ಣಾಭ್ಯಾಂ ರಕ್ಷಿತಂ ದೃಷ್ಟ್ವಾ ತಂ ಚ ದಾವಮಹಂಕೃತಾಃ|
01218019c ಸಮುತ್ಪೇತುರಥಾಕಾಶಂ ಸುಪರ್ಣಾದ್ಯಾಃ ಪತತ್ರಿಣಃ||
ಕೃಷ್ಣರಿಬ್ಬರೂ ಆ ಕಾಡ್ಗಿಚ್ಚನ್ನು ರಕ್ಷಿಸುತ್ತಿರುವುದನ್ನು ನೋಡಿದ ಗರುಡನೇ ಮೊದಲಾದ ಪಕ್ಷಿಗಳು ಆಕಾಶಕ್ಕೆ ಹಾರಿದವು.
01218020a ಗರುಡಾ ವಜ್ರಸದೃಶೈಃ ಪಕ್ಷತುಂಡನಖೈಸ್ತಥಾ|
01218020c ಪ್ರಹರ್ತುಕಾಮಾಃ ಸಂಪೇತುರಾಕಾಶಾತ್ ಕೃಷ್ಣಪಾಂಡವೌ||
ಗರುಡನು ಅವರನ್ನು ಹೊಡೆಯಲೋಸುಗ ತನ್ನ ವಜ್ರಸದೃಶ ರೆಕ್ಕೆ, ಕೊಕ್ಕು ಮತ್ತು ಪಂಜಗಳಿಂದ ಕೃಷ್ಣ-ಪಾಂಡವರ ಮೇಲೆ ಎರಗಿದನು.
01218021a ತಥೈವೋರಗಸಂಘಾತಾಃ ಪಾಂಡವಸ್ಯ ಸಮೀಪತಃ|
01218021c ಉತ್ಸೃಜಂತೋ ವಿಷಂ ಘೋರಂ ನಿಶ್ಚೇರುರ್ಜ್ವಲಿತಾನನಾಃ||
ಹಾಗೆಯೇ ಉರಗಸಂಘಾತಗಳು ತಮ್ಮ ಜ್ವಲಿಸುತ್ತಿರುವ ಬಾಯಿಗಳಿಂದ ಘೋರ ವಿಷವನ್ನು ಕಾರುತ್ತಾ ಪಾಂಡವನ ಸಮೀಪಕ್ಕೆ ಧಾವಿಸಿದವು.
01218022a ತಾಂಶ್ಚಕರ್ತ ಶರೈಃ ಪಾರ್ಥಃ ಸರೋಷಾನ್ದೃಶ್ಯ ಖೇಚರಾನ್|
01218022c ವಿವಶಾಶ್ಚಾಪತನ್ದೀಪ್ತಂ ದೇಹಾಭಾವಾಯ ಪಾವಕಂ||
ಆಕಾಶಗಾಮಿಗಳು ರೋಷದಿಂದ ಧಾವಿಸುತ್ತಿರುವುದನ್ನು ಕಂಡ ಪಾರ್ಥನು ಶರಗಳಿಂದ ಅವುಗಳನ್ನು ಕತ್ತರಿಸಲು, ಶಕ್ತಿರಹಿತರಾಗಿ ಅವುಗಳು ಉರಿಯುತ್ತಿರುವ ಬೆಂಕಿಯಲ್ಲಿ ಬಿದ್ದವು.
01218023a ತತಃ ಸುರಾಃ ಸಗಂಧರ್ವಾ ಯಕ್ಷರಾಕ್ಷಸಪನ್ನಗಾಃ|
01218023c ಉತ್ಪೇತುರ್ನಾದಮತುಲಮುತ್ಸೃಜಂತೋ ರಣಾರ್ಥಿಣಃ||
01218024a ಅಯಃಕಣಪಚಕ್ರಾಶ್ಮಭುಶುಂಡ್ಯುದ್ಯತಬಾಹವಃ|
01218024c ಕೃಷ್ಣಪಾರ್ಥೌ ಜಿಘಾಂಸಂತಃ ಕ್ರೋಧಸಮ್ಮೂರ್ಚ್ಛಿತೌಜಸಃ||
ಆಗ ಕ್ರೋಧಸಂಮೂರ್ಛಿತ ರಣಾರ್ಥಿ ಸುರರು ಗಂಧರ್ವ ಯಕ್ಷ ರಾಕ್ಷಸ ಪನ್ನಗರೊಡಗೂಡಿ ಮಹಾನಾದದೊಂದಿಗೆ ಮೇಲೆದ್ದು ಲೋಹದ ಗದೆ, ಚಕ್ರ, ಕಲ್ಲು ಬಂಡೆಗಳು ಮತ್ತು ಅಗ್ನಿಯನ್ನು ಉಗುಳುವ ಅಸ್ತ್ರಗಳೊಂದಿಗೆ ಕೃಷ್ಣಪಾರ್ಥರನ್ನು ಸಂಹರಿಸಲು ಮುಂದಾದರು.
01218025a ತೇಷಾಮಭಿವ್ಯಾಹರತಾಂ ಶಸ್ತ್ರವರ್ಷಂ ಚ ಮುಂಚತಾಂ|
01218025c ಪ್ರಮಮಾಥೋತ್ತಮಾಂಗಾನಿ ಬೀಭತ್ಸುರ್ನಿಶಿತೈಃ ಶರೈಃ||
ಅವರು ಹೀಗೆ ಮುಂದಾಗಿ ಶಸ್ತ್ರಗಳ ಮಳೆಯನ್ನೇ ಸುರಿಸಲು ಬೀಭತ್ಸುವು ತನ್ನ ನಿಶಿತ ಶರಗಳಿಂದ ಅವರ ಅಂಗಗಳನ್ನು ಕತ್ತರಿಸಿದನು.
01218026a ಕೃಷ್ಣಶ್ಚ ಸುಮಹಾತೇಜಾಶ್ಚಕ್ರೇಣಾರಿನಿಹಾ ತದಾ|
01218026c ದೈತ್ಯದಾನವಸಂಘಾನಾಂ ಚಕಾರ ಕದನಂ ಮಹತ್||
ಸುಮಹಾತೇಜಸ್ವಿ ಅರಿಧ್ವಂಸಿ ಕೃಷ್ಣನು ಚಕ್ರದಿಂದ ಮಹಾ ಕದನದಲ್ಲಿ ದೈತ್ಯ-ದಾನವರನ್ನು ಸಂಹರಿಸಿದನು.
01218027a ಅಥಾಪರೇ ಶರೈರ್ವಿದ್ಧಾಶ್ಚಕ್ರವೇಗೇರಿತಾಸ್ತದಾ|
01218027c ವೇಲಾಮಿವ ಸಮಾಸಾದ್ಯ ವ್ಯಾತಿಷ್ಠಂತ ಮಹೌಜಸಃ||
ಇನ್ನೂ ಇತರ ಮಹೌಜಸ ದೈತ್ಯರು ಶರಗಳಿಂದ ತುಂಡಾಗಿ ಚಕ್ರದ ವೇಗಕ್ಕೆ ಸಿಲುಕಿ ಅಲೆಗಳು ದಡವನ್ನು ಸೇರುವಾಗ ಹೇಗೋ ಹಾಗೆ ಸ್ಥಬ್ಧರಾದರು.
01218028a ತತಃ ಶಕ್ರೋಽಭಿಸಂಕ್ರುದ್ಧಸ್ತ್ರಿದಶಾನಾಂ ಮಹೇಶ್ವರಃ|
01218028c ಪಾಂಡುರಂ ಗಜಮಾಸ್ಥಾಯತಾವುಭೌ ಸಮಭಿದ್ರವತ್||
ಆಗ ತ್ರಿದಶ ಮಹೇಶ್ವರ ಶಕ್ರನು ಸಂಕೃದ್ಧನಾಗಿ ಶ್ವೇತ ಗಜವನ್ನೇರಿ ಅವರಿಬ್ಬರ ಮೇಲೆ ಭಿರುಗಾಳಿಯಂತೆ ಎರಗಿದನು.
01218029a ಅಶನಿಂ ಗೃಹ್ಯ ತರಸಾ ವಜ್ರಮಸ್ತ್ರಮವಾಸೃಜತ್|
01218029c ಹತಾವೇತಾವಿತಿ ಪ್ರಾಹ ಸುರಾನಸುರಸೂದನಃ||
ತಕ್ಷಣವೇ ವಜ್ರವನ್ನು ಹಿಡಿದು ಅವರ ಮೇಲೆ ಎಸೆಯಲು ಅಸುರಸೂದನನು ಸುರರಿಗೆ “ಅವರಿಬ್ಬರೂ ಹತರಾದರು!” ಎಂದನು.
01218030a ತತಃ ಸಮುದ್ಯತಾಂ ದೃಷ್ಟ್ವಾ ದೇವೇಂದ್ರೇಣ ಮಹಾಶನಿಂ|
01218030c ಜಗೃಹುಃ ಸರ್ವಶಸ್ತ್ರಾಣಿ ಸ್ವಾನಿ ಸ್ವಾನಿ ಸುರಾಸ್ತದಾ||
01218031a ಕಾಲದಂಡಂ ಯಮೋ ರಾಜಾ ಶಿಬಿಕಾಂ ಚ ಧನೇಶ್ವರಃ|
01218031c ಪಾಶಂ ಚ ವರುಣಸ್ತತ್ರ ವಿಚಕ್ರಂ ಚ ತಥಾ ಶಿವಃ||
ದೇವೇಂದ್ರನು ಮಹಾಶನಿಯನ್ನು ಹಿಡಿದಿದ್ದುದನ್ನು ನೋಡಿ ಸುರರೆಲ್ಲರೂ ತಮ್ಮ ತಮ್ಮ ಅಸ್ತ್ರಗಳನ್ನು ಹಿಡಿದರು: ಯಮರಾಜನು ಕಾಲದಂಡವನ್ನು, ಧನೇಶ್ವರನು ಶಿಬಿಕೆಯನ್ನು, ವರುಣನು ಪಾಶವನ್ನು ಮತ್ತು ಶಿವನು ತ್ರಿಶೂಲವನ್ನು ಹಿಡಿದರು.
01218032a ಓಷಧೀರ್ದೀಪ್ಯಮಾನಾಶ್ಚ ಜಗೃಹಾತೇಽಶ್ವಿನಾವಪಿ|
01218032c ಜಗೃಹೇ ಚ ಧನುರ್ಧಾತಾ ಮುಸಲಂ ಚ ಜಯಸ್ತಥಾ||
ದೀಪ್ಯಮಾನ ಔಷಧಿಗಳನ್ನು ಅಶ್ವಿನಿಯರು ಹಿಡಿದರು. ಧಾತನು ಧನುವನ್ನು ಹಿಡಿದನು ಮತ್ತು ಜಯನು ಮುಸಲವನ್ನು ಹಿಡಿದನು.
01218033a ಪರ್ವತಂ ಚಾಪಿ ಜಗ್ರಾಹ ಕ್ರುದ್ಧಸ್ತ್ವಷ್ಟಾ ಮಹಾಬಲಃ|
01218033c ಅಂಶಸ್ತು ಶಕ್ತಿಂ ಜಗ್ರಾಹ ಮೃತ್ಯುರ್ದೇವಃ ಪರಶ್ವಧಂ||
ಕೃದ್ಧ ಮಹಾಬಲಿ ತ್ವಷ್ಟನು ಪರ್ವತವನ್ನೇ ಹಿಡಿದನು. ಅಂಶನು ಶಕ್ತಿಯನ್ನು ಹಿಡಿದನು ಮತ್ತು ಮೃತ್ಯುದೇವನು ಪರಶುವನ್ನು ಹಿಡಿದನು.
01218034a ಪ್ರಗೃಹ್ಯ ಪರಿಘಂ ಘೋರಂ ವಿಚಚಾರಾರ್ಯಮಾ ಅಪಿ|
01218034c ಮಿತ್ರಶ್ಚ ಕ್ಷುರಪರ್ಯಂತಂ ಚಕ್ರಂ ಗೃಹ್ಯ ವ್ಯತಿಷ್ಠತ||
ಆರ್ಯಮನು ಘೋರ ಪರಿಘವನ್ನು ಹಿಡಿದು ಚಲಿಸಿದನು ಮತ್ತು ಮಿತ್ರನು ಕ್ಷುರಪರ್ಯಂತ ಚಕ್ರವನ್ನು ಹಿಡಿದು ನಿಂತನು.
01218035a ಪೂಷಾ ಭಗಶ್ಚ ಸಂಕ್ರುದ್ಧಃ ಸವಿತಾ ಚ ವಿಶಾಂ ಪತೇ|
01218035c ಆತ್ತಕಾರ್ಮುಕನಿಸ್ತ್ರಿಂಶಾಃ ಕೃಷ್ಣಪಾರ್ಥಾವಭಿದ್ರುತಾಃ||
ವಿಶಾಂಪತೇ! ಸಂಕೃದ್ಧ ಪೂಷಾ, ಭಗ ಮತ್ತು ಸವಿತರು ಧನುಸ್ಸು ಮತ್ತು ಖಡ್ಗಗಳನ್ನು ಹಿಡಿದು ಕೃಷ್ಣ-ಪಾರ್ಥರ ಮೇಲೆ ಧಾಳಿಯಿಟ್ಟರು.
01218036a ರುದ್ರಾಶ್ಚ ವಸವಶ್ಚೈವ ಮರುತಶ್ಚ ಮಹಾಬಲಾಃ|
01218036c ವಿಶ್ವೇದೇವಾಸ್ತಥಾ ಸಾಧ್ಯಾ ದೀಪ್ಯಮಾನಾಃ ಸ್ವತೇಜಸಾ||
01218037a ಏತೇ ಚಾನ್ಯೇ ಚ ಬಹವೋ ದೇವಾಸ್ತೌ ಪುರುಷೋತ್ತಮೌ|
01218037c ಕೃಷ್ಣಪಾರ್ಥೌ ಜಿಘಾಂಸಂತಃ ಪ್ರತೀಯುರ್ವಿವಿಧಾಯುಧಾಃ||
ರುದ್ರರು, ವಸವರು, ಮಹಾಬಲಿ ಮರುತರು, ವಿಶ್ವೇದೇವರು, ಸಾಧ್ಯರು ಮತ್ತು ಇನ್ನೂ ಇತರ ಅನೇಕ ದೇವತೆಗಳು ಪುರುಷೋತ್ತಮ ಕೃಷ್ಣ-ಪಾರ್ಥರನ್ನು ಕೊಲ್ಲಲು ತಮ್ಮ ದೀಪ್ಯಮಾನ ತೇಜಸ್ಸಿನಿಂದ ಮತ್ತು ವಿವಿಧ ಆಯುಧಗಳಿಂದ ಮುನ್ನುಗ್ಗಿದರು.
01218038a ತತ್ರಾದ್ಭುತಾನ್ಯದೃಶ್ಯಂತ ನಿಮಿತ್ತಾನಿ ಮಹಾಹವೇ|
01218038c ಯುಗಾಂತಸಮರೂಪಾಣಿ ಭೂತೋತ್ಸಾದಾಯ ಭಾರತ||
ಭಾರತ! ಆ ಅದ್ಭುತ ಯುದ್ಧದಲ್ಲಿ ಯುಗಾಂತಸಮರೂಪ ನಿಮಿತ್ತಗಳು ಕಾಣಿಸಿಕೊಂಡು ಭೂತಗಳ ಅಂತ್ಯವನ್ನು ಸೂಚಿಸಿದವು.
01218039a ತಥಾ ತು ದೃಷ್ಟ್ವಾ ಸಂರಬ್ಧಂ ಶಕ್ರಂ ದೇವೈಃ ಸಹಾಚ್ಯುತೌ|
01218039c ಅಭೀತೌ ಯುಧಿ ದುರ್ಧರ್ಷೌ ತಸ್ಥತುಃ ಸಜ್ಜಕಾರ್ಮುಕೌ||
01218040a ಆಗತಾಂಶ್ಚೈವ ತಾನ್ದೃಷ್ಟ್ವಾ ದೇವಾನೇಕೈಕಶಸ್ತತಃ|
01218040c ನ್ಯವಾರಯೇತಾಂ ಸಂಕ್ರುದ್ಧೌ ಬಾಣೈರ್ವಜ್ರೋಪಮೈಸ್ತದಾ||
ಅವರೀರ್ವರು ಅಚ್ಯುತರು ದೇವತೆಗಳೊಡಗೂಡಿ ಮುನ್ನುಗ್ಗುತ್ತಿದ್ದ ಶಕ್ರನನ್ನು ನೋಡಿ ನಿರ್ಭೀತರಾಗಿ ತಮ್ಮ ಧನುಸ್ಸುಗಳನ್ನು ಹಿಡಿದು ಸಿದ್ಧರಾಗಿ ಯುದ್ಧದಲ್ಲಿ ದುರ್ಧರ್ಷರಾಗಿ ನಿಂತರು. ಎಲ್ಲಕಡೆಯಿಂದಲೂ ಮುಂದುವರೆಯುತ್ತಿದ್ದ ದೇವತೆಗಳನ್ನು ನೋಡಿದ ಆ ಸಂಕೃದ್ಧರು ತಮ್ಮ ವಜ್ರಸದೃಶ ಬಾಣಗಳಿಂದ ಅವರನ್ನು ತಡೆದರು.
01218041a ಅಸಕೃದ್ಭಗ್ನಸಂಕಲ್ಪಾಃ ಸುರಾಶ್ಚ ಬಹುಶಃ ಕೃತಾಃ|
01218041c ಭಯಾದ್ರಣಂ ಪರಿತ್ಯಜ್ಯ ಶಕ್ರಮೇವಾಭಿಶಿಶ್ರಿಯುಃ||
ಪುನಃ ಪುನಃ ಅವರ ಸಂಕಲ್ಪವು ಭಗ್ನವಾಗಲು ಅಸಹಾಯಕ ಸುರರು ಭಯದಿಂದ ರಣವನ್ನು ಪರಿತ್ಯಜಿಸಿ ಶಕ್ರನಲ್ಲಿ ಶರಣು ಹೋದರು.
01218042a ದೃಷ್ಟ್ವಾ ನಿವಾರಿತಾನ್ದೇವಾನ್ಮಾಧವೇನಾರ್ಜುನೇನ ಚ|
01218042c ಆಶ್ಚರ್ಯಮಗಮಂಸ್ತತ್ರ ಮುನಯೋ ದಿವಿ ವಿಷ್ಠಿತಾಃ||
ದಿವಿಯಲ್ಲಿ ನೆಲೆಸಿದ್ದ ಮುನಿಗಳು ಮಾಧವಾರ್ಜುನರು ದೇವತೆಗಳನ್ನು ತಡೆಹಿಡಿದಿದ್ದುದನ್ನು ನೋಡಿ ಅಶ್ಚರ್ಯಚಕಿತರಾದರು.
01218043a ಶಕ್ರಶ್ಚಾಪಿ ತಯೋರ್ವೀರ್ಯಮುಪಲಭ್ಯಾಸಕೃದ್ರಣೇ|
01218043c ಬಭೂವ ಪರಮಪ್ರೀತೋ ಭೂಯಶ್ಚೈತಾವಯೋಧಯತ್||
ರಣದಲ್ಲಿ ಅವರಿಬ್ಬರ ವೀರತನವನ್ನು ನೋಡಿ ಪರಮಪ್ರೀತನಾಗಿ ಶಕ್ರನು ಇನ್ನೊಮ್ಮೆ ಅವರೊಡನೆ ಯುದ್ಧಮಾಡತೊಡಗಿದನು.
01218044a ತತೋಽಶ್ಮವರ್ಷಂ ಸುಮಹದ್ವ್ಯಸೃಜತ್ಪಾಕಶಾಸನಃ|
01218044c ಭೂಯ ಏವ ತದಾ ವೀರ್ಯಂ ಜಿಜ್ಞಾಸುಃ ಸವ್ಯಸಾಚಿನಃ|
01218044e ತಚ್ಶರೈರರ್ಜುನೋ ವರ್ಷಂ ಪ್ರತಿಜಘ್ನೇಽತ್ಯಮರ್ಷಣಃ||
ಸವ್ಯಸಾಚಿಯ ವೀರ್ಯವನ್ನು ಪರೀಕ್ಷಿಸಲು ಪಾಕಶಾಸನನು ಮಹಾ ಕಲ್ಲುಬಂಡೆಗಳ ಮಳೆಯನ್ನು ಸುರಿಸಿದನು. ಆದರೆ ಅರ್ಜುನನನು ತನ್ನ ಶರಗಳ ಮಳೆಯಿಂದ ಅವುಗಳನ್ನು ತುಂಡರಿಸಿದನು.
01218045a ವಿಫಲಂ ಕ್ರಿಯಮಾಣಂ ತತ್ಸಂಪ್ರೇಕ್ಷ್ಯ ಚ ಶತಕ್ರತುಃ|
01218045c ಭೂಯಃ ಸಂವರ್ಧಯಾಮಾಸ ತದ್ವರ್ಷಂ ದೇವರಾಡಥ||
ದೇವರಾಜ ಶತಕ್ರತುವು ತನ್ನ ಪ್ರಯತ್ನವು ವಿಫಲವಾದುದನ್ನು ನೋಡಿ ಪ್ರಹಾರವನ್ನು ಇನ್ನೂ ಹೆಚ್ಚಿಸಿದನು.
01218046a ಸೋಽಶ್ಮವರ್ಷಂ ಮಹಾವೇಗೈರಿಷುಭಿಃ ಪಾಕಶಾಸನಿಃ|
01218046c ವಿಲಯಂ ಗಮಯಾಮಾಸ ಹರ್ಷಯನ್ಪಿತರಂ ತದಾ||
ಆದರೆ ಪಾಕಶಾಸನಿಯು ತನ್ನ ತಂದೆಯನ್ನು ಅಣಕಿಸುತ್ತಾ ಮಹಾವೇಗದ ಶರಗಳಿಂದ ಆ ಕಲ್ಲುಬಂಡೆಗಳ ಮಳೆಯನ್ನು ವಿಲಯಗೊಳಿಸಿದನು.
01218047a ಸಮುತ್ಪಾಟ್ಯ ತು ಪಾಣಿಭ್ಯಾಂ ಮಂದರಾಚ್ಛಿಖರಂ ಮಹತ್|
01218047c ಸದ್ರುಮಂ ವ್ಯಸೃಜಚ್ಛಕ್ರೋ ಜಿಘಾಂಸುಃ ಪಾಂಡುನಂದನಂ||
ಶಕ್ರನು ಅವನನ್ನು ಶಿಕ್ಷಿಸಲು ತನ್ನ ಕೈಗಳಿಂದ ಮರಗಳೊಡನೆ ಮಂದರದ ಒಂದು ಮಹಾ ಶಿಖರವನ್ನು ಕಿತ್ತು ಪಾಂಡುನಂದನನ ಮೇಲೆ ಎಸೆದನು.
01218048a ತತೋಽರ್ಜುನೋ ವೇಗವದ್ಭಿರ್ಜ್ವಲಿತಾಗ್ರೈರಜಿಹ್ಮಗೈಃ|
01218048c ಬಾಣೈರ್ವಿಧ್ವಂಸಯಾಮಾಸ ಗಿರೇಃ ಶೃಂಗಂ ಸಹಸ್ರಧಾ||
ಆಗ ಅರ್ಜುನನು ತುದಿಯು ಜ್ವಲಿಸುತ್ತಿರುವ ವೇಗ ಬಾಣಗಳಿಂದ ಆ ಗಿರಿಶೃಂಗವನ್ನು ಸಹಸ್ರ ತುಂಡುಗಳನ್ನಾಗಿ ಕತ್ತರಿಸಿದನು.
01218049a ಗಿರೇರ್ವಿಶೀರ್ಯಮಾಣಸ್ಯ ತಸ್ಯ ರೂಪಂ ತದಾ ಬಭೌ|
01218049c ಸಾರ್ಕಚಂದ್ರಗ್ರಹಸ್ಯೇವ ನಭಸಃ ಪ್ರವಿಶೀರ್ಯತಃ||
ಬೀಳುತ್ತಿರುವ ಆ ಗಿರಿಯ ತುಂಡುಗಳು ಅರ್ಕ-ಚಂದ್ರಗ್ರಹಗಳೊಡನೆ ನಭವೇ ಬೀಳುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.
01218050a ತೇನಾವಾಕ್ಪತತಾ ದಾವೇ ಶೈಲೇನ ಮಹತಾ ಭೃಶಂ|
01218050c ಭೂಯ ಏವ ಹತಾಸ್ತತ್ರ ಪ್ರಾಣಿನಃ ಖಾಂಡವಾಲಯಾಃ||
ಆ ಮಹಾ ಶೈಲವು ವನದ ಮೇಲೆ ಬೀಳಲು ಅದರ ಘಾತದಿಂದ ಖಾಂಡವದಲ್ಲಿ ವಾಸಿಸುತ್ತಿದ್ದ ಇನ್ನೂ ಹೆಚ್ಚಿನ ಪ್ರಾಣಿಗಳು ಹತವಾದವು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ದೇವಕೃಷ್ಣಾರ್ಜುನಯುದ್ಧೇ ಅಷ್ಟಾದಶಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ದೇವಕೃಷ್ಣಾರ್ಜುನಯುದ್ಧ ಎನ್ನುವ ಇನ್ನೂರಾ ಹದಿನೆಂಟನೆಯ ಅಧ್ಯಾಯವು.