Adi Parva: Chapter 216

ಆದಿ ಪರ್ವ: ಖಾಂಡವದಾಹ ಪರ್ವ

೨೧೬

ಅಗ್ನಿಯು ವರುಣನಿಂದ ಉತ್ತಮ ರಥವನ್ನೂ, ಅರ್ಜುನನಿಗೆ ಗಾಂಡೀವ ಧನುಸ್ಸು ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ, ಕೃಷ್ಣನಿಗೆ ಸುದರ್ಶನ ಚಕ್ರವನ್ನೂ, ಕೌಮೋದಕೀ ಎನ್ನುವ ಗದೆಯನ್ನೂ ಕೊಡಿಸಿದುದು; ಕೃಷ್ಣಾರ್ಜುನರು ಸಿದ್ಧರಾದುದು (೧-೩೦). ಅಗ್ನಿಯು ಖಾಂಡವವನ್ನು ಸುಡಲು ಪ್ರಾರಂಭಿಸಿದುದು (೩೧-೩೪).

Image result for arjuna ratha images01216001 ವೈಶಂಪಾಯನ ಉವಾಚ|

01216001a ಏವಮುಕ್ತಸ್ತು ಭಗವಾನ್ಧೂಮಕೇತುರ್ಹುತಾಶನಃ|

01216001c ಚಿಂತಯಾಮಾಸ ವರುಣಂ ಲೋಕಪಾಲಂ ದಿದೃಕ್ಷಯಾ|

01216001e ಆದಿತ್ಯಮುದಕೇ ದೇವಂ ನಿವಸಂತಂ ಜಲೇಶ್ವರಂ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಧೂಮಕೇತು ಭಗವಾನ್ ಹುತಾಶನನು ಲೋಕಪಾಲ ವರುಣನನ್ನು ನೋಡಬೇಕೆಂದು ಆ ಉದಕವಾಸಿ ಜಲೇಶ್ವರ ಆದಿತ್ಯನನ್ನು ನೆನೆದನು.

01216002a ಸ ಚ ತಚ್ಚಿಂತಿತಂ ಜ್ಞಾತ್ವಾ ದರ್ಶಯಾಮಾಸ ಪಾವಕಂ|

01216002c ತಮಬ್ರವೀದ್ಧೂಮಕೇತುಃ ಪ್ರತಿಪೂಜ್ಯ ಜಲೇಶ್ವರಂ|

01216002e ಚತುರ್ಥಂ ಲೋಕಪಾಲಾನಾಂ ರಕ್ಷಿತಾರಂ ಮಹೇಶ್ವರಂ||

ಅವನ ಯೋಚನೆಯನ್ನು ತಿಳಿದ ಅವನು ಪಾವಕನಿಗೆ ಕಾಣಿಸಿಕೊಂಡನು. ಧೂಮಕೇತುವು ಲೋಕಪಾಲಕರಲ್ಲಿ ನಾಲ್ಕನೆಯವನಾದ ರಕ್ಷಕ ಮಹೇಶ್ವರ ಜಲೇಶ್ವರನನ್ನು ಪೂಜಿಸಿ ಹೇಳಿದನು:

01216003a ಸೋಮೇನ ರಾಜ್ಞಾ ಯದ್ದತ್ತಂ ಧನುಶ್ಚೈವೇಷುಧೀ ಚ ತೇ|

01216003c ತತ್ಪ್ರಯಚ್ಛೋಭಯಂ ಶೀಘ್ರಂ ರಥಂ ಚ ಕಪಿಲಕ್ಷಣಂ||

“ರಾಜ ಸೋಮನು ನಿನಗೆ ಒಮ್ಮೆ ನೀಡಿದ್ದ ಧನುಸ್ಸು, ಎರಡು ಬತ್ತಳಿಕೆಗಳು ಮತ್ತು ಕಪಿಲಕ್ಷಣದ ರಥವನ್ನು ಶೀಘ್ರದಲ್ಲಿಯೇ ಇವರೀರ್ವರಿಗೆ ಕೊಡು.

01216004a ಕಾರ್ಯಂ ಹಿ ಸುಮಹತ್ಪಾರ್ಥೋ ಗಾಂಡೀವೇನ ಕರಿಷ್ಯತಿ|

01216004c ಚಕ್ರೇಣ ವಾಸುದೇವಶ್ಚ ತನ್ಮದರ್ಥೇ ಪ್ರದೀಯತಾಂ|

01216004e ದದಾನೀತ್ಯೇವ ವರುಣಃ ಪಾವಕಂ ಪ್ರತ್ಯಭಾಷತ||

ಆ ಗಾಂಡೀವದಿಂದ ಪಾರ್ಥನು ಒಂದು ಸುಮಹತ್ತರ ಕಾರ್ಯವನ್ನು ನೆರವೇರಿಸುತ್ತಾನೆ. ನನಗೋಸ್ಕರವಾಗಿ ವಾಸುದೇವನಿಗೆ ಚಕ್ರವನ್ನು ನೀಡು. “ಇವುಗಳನ್ನು ಕೊಡುತ್ತೇನೆ” ಎಂದು ವರುಣನು ಪಾವಕನಿಗೆ ಉತ್ತರಿಸಿದನು.

01216005a ತತೋಽದ್ಭುತಂ ಮಹಾವೀರ್ಯಂ ಯಶಃಕೀರ್ತಿವಿವರ್ಧನಂ|

01216005c ಸರ್ವಶಸ್ತ್ರೈರನಾಧೃಷ್ಯಂ ಸರ್ವಶಸ್ತ್ರಪ್ರಮಾಥಿ ಚ|

01216005e ಸರ್ವಾಯುಧಮಹಾಮಾತ್ರಂ ಪರಸೇನಾಪ್ರಧರ್ಷಣಂ||

01216006a ಏಕಂ ಶತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ|

01216006c ಚಿತ್ರಮುಚ್ಚಾವಚೈರ್ವರ್ಣೈಃ ಶೋಭಿತಂ ಶ್ಲಕ್ಷ್ಣಮವ್ರಣಂ||

01216007a ದೇವದಾನವಗಂಧರ್ವೈಃ ಪೂಜಿತಂ ಶಾಶ್ವತೀಃ ಸಮಾಃ|

01216007c ಪ್ರಾದಾದ್ವೈ ಧನುರತ್ನಂ ತದಕ್ಷಯ್ಯೌ ಚ ಮಹೇಷುಧೀ||

01216008a ರಥಂ ಚ ದಿವ್ಯಾಶ್ವಯುಜಂ ಕಪಿಪ್ರವರಕೇತನಂ|

01216008c ಉಪೇತಂ ರಾಜತೈರಶ್ವೈರ್ಗಾಂಧರ್ವೈರ್ಹೇಮಮಾಲಿಭಿಃ|

01216008e ಪಾಂಡುರಾಭ್ರಪ್ರತೀಕಾಶೈರ್ಮನೋವಾಯುಸಮೈರ್ಜವೇ||

ಆಗ ಆ ಅದ್ಭುತ, ಮಹಾವೀರ್ಯ, ಯಶಸ್ಸು ಮತ್ತು ಕೀರ್ತಿಗಳನ್ನು ಹೆಚ್ಚಿಸುವ, ಎಲ್ಲ ಶಸ್ತ್ರಗಳಿಗೂ ಅನಾದೃಷ, ಸರ್ವಶಸ್ತ್ರ ಪ್ರಮಥಿ, ಸರ್ವಾಯುಧ ಮಹಾಮಾತ್ರವಾದ, ಪರಸೇನೆಯನ್ನು ತತ್ತರಿಸುವ, ಒಂದೇ ಒಂದು ಲಕ್ಷಕ್ಕೆ ಸಮನಾದ, ರಾಷ್ಟ್ರವಿವರ್ಧಕ, ರತ್ನಗಳಿಂದ ಅಲಂಕೃತ, ಸುಂದರ ಬಣ್ಣದ, ನುಣುಪಾದ, ಯಾವುದೇರೀತಿಯ ಗಾಯಗಳು ಇಲ್ಲದ, ಅನಾದಿಕಾಲದಿಂದಲೂ ದೇವ-ದಾನವ-ಗಂಧರ್ವರಿಂದ ಪೂಜಿತ, ಆ ಧನುರತ್ನವನ್ನೂ, ಹಾಗೆಯೇ ಅಕ್ಷಯ ಬತ್ತಳಿಕೆಯನ್ನೂ, ದಿವ್ಯಾಶ್ವಗಳಿಂದ ಕೂಡಿದ, ಗಂಧರ್ವರ ಬೆಳ್ಳಿಯ ಬಣ್ಣದ ಕುದುರೆಗಳಿಂದ ಎಳೆಯಲ್ಪಡುವ, ಕಪಿಪ್ರವರ ಕೇತನವನ್ನು ಹೊಂದಿದ್ದ, ಹೇಮ ಮಾಲೆಗಳಿಂದ ಅಲಂಕೃತ, ಆಕಾಶದಲ್ಲಿ ಮೋಡಗಳಂತೆ ಕಾಣುವ, ವಾಯು ಅಥವಾ ಮನೋವೇಗವನ್ನು ಹೊಂದಿದ ರಥವನ್ನು ನೀಡಿದನು.

01216009a ಸರ್ವೋಪಕರಣೈರ್ಯುಕ್ತಮಜಯ್ಯಂ ದೇವದಾನವೈಃ|

01216009c ಭಾನುಮಂತಂ ಮಹಾಘೋಷಂ ಸರ್ವಭೂತಮನೋಹರಂ||

ಅದು ಸರ್ವೋಪಕರಣಗಳಿಂದ ಯುಕ್ತವಾಗಿತ್ತು, ದೇವದಾನವರಿಂದ ಅಜೇಯವಾಗಿತ್ತು, ಹೊಳೆಯುತ್ತಿತ್ತು ಮತ್ತು ಸರ್ವಭೂತಮನೋಹರ ಮಹಾಘೋಷವನ್ನು ನೀಡುತ್ತಿತ್ತು.

01216010a ಸಸರ್ಜ ಯತ್ಸ್ವತಪಸಾ ಭೌವನೋ ಭುವನಪ್ರಭುಃ|

01216010c ಪ್ರಜಾಪತಿರನಿರ್ದೇಶ್ಯಂ ಯಸ್ಯ ರೂಪಂ ರವೇರಿವ||

ರವಿಯಂತೆ ರೂಪವನ್ನೂ ವರ್ಣಿಸಲಸಾಧ್ಯವಾದ ಆ ರಥವನ್ನು ಭುವನಪ್ರಭು ಪ್ರಜಾಪತಿ ವಿಶ್ವಕರ್ಮನು ತನ್ನ ತಪಸ್ಸಿನಿಂದ ಸೃಷ್ಟಿಸಿದ್ದನು.

01216011a ಯಂ ಸ್ಮ ಸೋಮಃ ಸಮಾರುಹ್ಯ ದಾನವಾನಜಯತ್ಪ್ರಭುಃ|

01216011c ನಗಮೇಘಪ್ರತೀಕಾಶಂ ಜ್ವಲಂತಮಿವ ಚ ಶ್ರಿಯಾ||

ಪ್ರಭು ಸೋಮನು ಅದನ್ನು ಏರಿ ದಾನವರನ್ನು ಜಯಿಸಿದ್ದನು. ಆನೆ ಅಥವಾ ಮೇಘವನ್ನು ಹೋಲುತ್ತಿದ್ದ ಅದು ತನ್ನ ಸೌಂದರ್ಯದಿಂದ ಜ್ವಲಿಸುತ್ತಿತ್ತು.

01216012a ಆಶ್ರಿತಾ ತಂ ರಥಶ್ರೇಷ್ಠಂ ಶಕ್ರಾಯುಧಸಮಾ ಶುಭಾ|

01216012c ತಾಪನೀಯಾ ಸುರುಚಿರಾ ಧ್ವಜಯಷ್ಟಿರನುತ್ತಮಾ||

ಆ ಶ್ರೇಷ್ಠ ರಥದಲ್ಲಿ ಶಕ್ರನ ಆಯುಧದಂತಿದ್ದ ಬಂಗಾರದಿಂದ ಮಾಡಲ್ಪಟ್ಟ, ಸುಂದರ ಉತ್ತಮ ಶುಭ ಧ್ವಜವೊಂದು ನಿಂತಿತ್ತು.

01216013a ತಸ್ಯಾಂ ತು ವಾನರೋ ದಿವ್ಯಃ ಸಿಂಹಶಾರ್ದೂಲಲಕ್ಷಣಃ|

01216013c ವಿನರ್ದನ್ನಿವ ತತ್ರಸ್ಥಃ ಸಂಸ್ಥಿತೋ ಮೂರ್ಧ್ನ್ಯಶೋಭತ||

ಅದರ ಮೇಲೆ ಸಿಂಹಶಾರ್ದೂಲ ಲಕ್ಷಣಗಳಿಂದ ಕೂಡಿದ, ಇನ್ನೇನು ಘರ್ಜಿಸುತ್ತಾನೋ ಎನ್ನುವಂತಿರುವ ದಿವ್ಯ ವಾನರನು ಶೋಭಿಸುತ್ತಿದ್ದನು.

01216014a ಧ್ವಜೇ ಭೂತಾನಿ ತತ್ರಾಸನ್ವಿವಿಧಾನಿ ಮಹಾಂತಿ ಚ|

01216014c ನಾದೇನ ರಿಪುಸೈನ್ಯಾನಾಂ ಯೇಷಾಂ ಸಂಜ್ಞಾ ಪ್ರಣಶ್ಯತಿ||

ಧ್ವಜದ ಮೇಲೆ ವಿವಿಧ ಮಹಾ ಭೂತಗಳು ವಾಸಿಸುತ್ತಿದ್ದು ತಮ್ಮ ನಾದದಿಂದ ರಿಪುಸೈನ್ಯಗಳನ್ನು ಮೂರ್ಛಿತಗೊಳಿಸುತ್ತಿದ್ದವು.

01216015a ಸ ತಂ ನಾನಾಪತಾಕಾಭಿಃ ಶೋಭಿತಂ ರಥಮುತ್ತಮಂ|

01216015c ಪ್ರದಕ್ಷಿಣಮುಪಾವೃತ್ಯ ದೈವತೇಭ್ಯಃ ಪ್ರಣಮ್ಯ ಚ||

01216016a ಸನ್ನದ್ಧಃ ಕವಚೀ ಖಡ್ಗೀ ಬದ್ಧಗೋಧಾಂಗುಲಿತ್ರವಾನ್|

01216016c ಆರುರೋಹ ರಥಂ ಪಾರ್ಥೋ ವಿಮಾನಂ ಸುಕೃತೀ ಯಥಾ||

ಅನಂತರ ಆ ಪಾರ್ಥನು ನಾನಾಪತಾಕಗಳಿಂದ ಶೋಭಿತ ಉತ್ತಮ ರಥವನ್ನು ಪ್ರದಕ್ಷಿಣೆಮಾಡಿ ದೇವತೆಗಳಿಗೆ ವಂದಿಸಿ, ಕವಚ-ಖಡ್ಗಗಳನ್ನು ಧರಿಸಿ, ಬೆರಳು-ಕೈಗಳಿಗೆ ಕಟ್ಟಿ ಸನ್ನದ್ಧನಾಗಿ, ಪುಣ್ಯವಂತನು ವಿಮಾನವನ್ನು ಏರುವಂತೆ, ರಥವನ್ನು ಏರಿದನು.

01216017a ತಚ್ಚ ದಿವ್ಯಂ ಧನುಃಶ್ರೇಷ್ಠಂ ಬ್ರಹ್ಮಣಾ ನಿರ್ಮಿತಂ ಪುರಾ|

01216017c ಗಾಂಡೀವಮುಪಸಂಗೃಹ್ಯ ಬಭೂವ ಮುದಿತೋಽರ್ಜುನಃ||

ಹಿಂದೆ ಬ್ರಹ್ಮನಿಂದ ನಿರ್ಮಿತ ದಿವ್ಯ ಶ್ರೇಷ್ಠ ಧನು ಗಾಂಡೀವವನ್ನು ಕೈಗೆತ್ತಿ ಹಿಡಿದ ಅರ್ಜುನನು ಮುದಿತನಾದನು.

01216018a ಹುತಾಶನಂ ನಮಸ್ಕೃತ್ಯ ತತಸ್ತದಪಿ ವೀರ್ಯವಾನ್|

01216018c ಜಗ್ರಾಹ ಬಲಮಾಸ್ಥಾಯ ಜ್ಯಯಾ ಚ ಯುಯುಜೇ ಧನುಃ||

ಹುತಾಶನನನ್ನು ನಮಸ್ಕರಿಸಿ ವೀರ್ಯವಾನನು ಧನುಸ್ಸಿಗೆ ಶಿಂಜನಿಯನ್ನು ಬಲವಾಗಿ ಬಿಗಿದನು.

01216019a ಮೌರ್ವ್ಯಾಂ ತು ಯುಜ್ಯಮಾನಾಯಾಂ ಬಲಿನಾ ಪಾಂಡವೇನ ಹ|

01216019c ಯೇಽಶೃಣ್ವನ್ಕೂಜಿತಂ ತತ್ರ ತೇಷಾಂ ವೈ ವ್ಯಥಿತಂ ಮನಃ||

ಬಲಶಾಲಿ ಪಾಂಡವನು ತನ್ನ ಧನುಸ್ಸಿಗೆ ನೀಡಿದ ಠೇಂಕಾರವನ್ನು ಕೇಳಿದವರ ಮನಸ್ಸು ತತ್ತರಿಸಿತು.

01216020a ಲಬ್ಧ್ವಾ ರಥಂ ಧನುಶ್ಚೈವ ತಥಾಕ್ಷಯ್ಯೌ ಮಹೇಷುಧೀ|

01216020c ಬಭೂವ ಕಲ್ಯಃ ಕೌಂತೇಯಃ ಪ್ರಹೃಷ್ಟಃ ಸಾಹ್ಯಕರ್ಮಣಿ||

ರಥವನ್ನೂ, ಧನುವನ್ನೂ ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ ಪಡೆದ ಕೌಂತೇಯನು ಸಂತೋಷಗೊಂಡು ಮುಂದಿರುವ ಕಾರ್ಯಕ್ಕೆ ಉತ್ಸುಕನಾದನು.

01216021a ವಜ್ರನಾಭಂ ತತಶ್ಚಕ್ರಂ ದದೌ ಕೃಷ್ಣಾಯ ಪಾವಕಃ|

01216021c ಆಗ್ನೇಯಮಸ್ತ್ರಂ ದಯಿತಂ ಸ ಚ ಕಲ್ಯೋಽಭವತ್ತದಾ||

ಅನಂತರ ಪಾವಕನು ಕೃಷ್ಣನಿಗೆ ವಜ್ರನಾಭ ಚಕ್ರವನ್ನು ನೀಡಿದನು. ಅವನೂ ಕೂಡ ತನಗೆ ಅತ್ಯಂತ ಪ್ರಿಯವಾದ ಆ ಭೀಷಣ ಅಸ್ತ್ರವನ್ನು ಪಡೆದು ಶಕ್ತಿಸಮನ್ವಿತನಾಗಿ ತಯಾರಾದನು.

01216022a ಅಬ್ರವೀತ್ಪಾವಕಶ್ಚೈನಮೇತೇನ ಮಧುಸೂದನ|

01216022c ಅಮಾನುಷಾನಪಿ ರಣೇ ವಿಜೇಷ್ಯಸಿ ನ ಸಂಶಯಃ||

01216023a ಅನೇನ ತ್ವಂ ಮನುಷ್ಯಾಣಾಂ ದೇವಾನಾಮಪಿ ಚಾಹವೇ|

01216023c ರಕ್ಷಃಪಿಶಾಚದೈತ್ಯಾನಾಂ ನಾಗಾನಾಂ ಚಾಧಿಕಃ ಸದಾ|

01216023e ಭವಿಷ್ಯಸಿ ನ ಸಂದೇಹಃ ಪ್ರವರಾರಿನಿಬರ್ಹಣೇ||

ಪಾವಕನು ಹೇಳಿದನು: “ಮಧುಸೂದನ! ಇದರಿಂದ ನೀನು ಅಮಾನುಷರನ್ನೂ ರಣದಲ್ಲಿ ಗೆಲ್ಲುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದ ನೀನು ಯಾರನ್ನೇ ಆಗಲಿ - ಮನುಷ್ಯ, ದೇವ, ರಾಕ್ಷಸ, ಪಿಶಾಚಿ, ದೈತ್ಯ, ನಾಗ ಮತ್ತು ಇತರರನ್ನೂ ಸದಾ ಸೋಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.

01216024a ಕ್ಷಿಪ್ತಂ ಕ್ಷಿಪ್ತಂ ರಣೇ ಚೈತತ್ತ್ವಯಾ ಮಾಧವ ಶತ್ರುಷು|

01216024c ಹತ್ವಾಪ್ರತಿಹತಂ ಸಂಖ್ಯೇ ಪಾಣಿಮೇಷ್ಯತಿ ತೇ ಪುನಃ||

ಮಾಧವ! ರಣದಲ್ಲಿ ನೀನು ಎಷ್ಟು ಬಾರಿ ಇದನ್ನು ಬಿಟ್ಟರೂ ಅದು ವೈರಿಗಳನ್ನು ಸಂಹರಿಸಿ ಪುನಃ ನಿನ್ನ ಕೈ ಬಂದು ಸೇರುತ್ತದೆ.”

01216025a ವರುಣಶ್ಚ ದದೌ ತಸ್ಮೈ ಗದಾಮಶನಿನಿಃಸ್ವನಾಂ|

01216025c ದೈತ್ಯಾಂತಕರಣೀಂ ಘೋರಾಂ ನಾಮ್ನಾ ಕೌಮೋದಕೀಂ ಹರೇಃ||

ವರುಣನು ಹರಿಗೆ ಗುಡುಗಿನಂತೆ ಗರ್ಜಿಸಬಲ್ಲ, ಘೋರ ದೈತ್ಯರ ಅಂತಕಾರಿಣಿಯಾಗಿದ್ದ, ಕೌಮೋದಕೀ ಎಂಬ ಹೆಸರಿನ ಗದೆಯನ್ನೂ ನೀಡಿದನು. 

01216026a ತತಃ ಪಾವಕಮಬ್ರೂತಾಂ ಪ್ರಹೃಷ್ಟೌ ಕೃಷ್ಣಪಾಂಡವೌ|

01216026c ಕೃತಾಸ್ತ್ರೌ ಶಸ್ತ್ರಸಂಪನ್ನೌ ರಥಿನೌ ಧ್ವಜಿನಾವಪಿ||

01216027a ಕಲ್ಯೌ ಸ್ವೋ ಭಗವನ್ಯೋದ್ಧುಮಪಿ ಸರ್ವೈಃ ಸುರಾಸುರೈಃ|

01216027c ಕಿಂ ಪುನರ್ವಜ್ರಿಣೈಕೇನ ಪನ್ನಗಾರ್ಥೇ ಯುಯುತ್ಸುನಾ||

ನಂತರ ಪ್ರಹೃಷ್ಟ ಕೃಷ್ಣ-ಪಾಂಡವರು ಪಾವಕನಿಗೆ ಹೇಳಿದರು: “ಭಗವನ್! ಅಸ್ತ್ರಗಳನ್ನು ಪಡೆದು ಶಸ್ತ್ರಸಂಪನ್ನರಾಗಿ ರಥ ಮತ್ತು ಧ್ವಜಗಳನ್ನೂ ಪಡೆದು ಸುರಾಸುರರೆಲ್ಲರೊಡನೆಯೂ ಯುದ್ಧಮಾಡಲು ಉತ್ಸುಕರಾಗಿದ್ದೇವೆ. ಪನ್ನಗನಿಗಾಗಿ ಏಕಾಂಗಿಯಾಗಿ ಯುದ್ಧಮಾಡಲು ಸಿದ್ಧನಿರುವ ಇಂದ್ರನೇನಂತೆ!” 

01216028 ಅರ್ಜುನ ಉವಾಚ|

01216028a ಚಕ್ರಮಸ್ತ್ರಂ ಚ ವಾರ್ಷ್ಣೇಯೋ ವಿಸೃಜನ್ಯುಧಿ ವೀರ್ಯವಾನ್|

01216028c ತ್ರಿಷು ಲೋಕೇಷು ತನ್ನಾಸ್ತಿ ಯನ್ನ ಜೀಯಾಜ್ಜನಾರ್ದನಃ||

ಅರ್ಜುನನು ಹೇಳಿದನು: “ವೀರ್ಯವಾನ್ ವಾರ್ಷ್ಣೇಯನು ಯುದ್ಧದಲ್ಲಿ ಚಕ್ರಾಸ್ತ್ರವನ್ನು ಪ್ರಯೋಗಿಸಿದನೆಂದರೆ ಜನಾರ್ದನನು ಗೆಲ್ಲಲಿಕ್ಕಾಗದೇ ಇರುವ ಏನೂ ಈ ಮೂರು ಲೋಕಗಳಲ್ಲಿ ಇಲ್ಲದಂತಾಗುತ್ತದೆ.

01216029a ಗಾಂಡೀವಂ ಧನುರಾದಾಯ ತಥಾಕ್ಷಯ್ಯೌ ಮಹೇಷುಧೀ|

01216029c ಅಹಮಪ್ಯುತ್ಸಹೇ ಲೋಕಾನ್ವಿಜೇತುಂ ಯುಧಿ ಪಾವಕ||

ನನ್ನ ಈ ಗಾಂಡೀವ ಧನುಸ್ಸು ಮತ್ತು ಈ ಎರಡು ಅಕ್ಷಯ ಬತ್ತಳಿಕೆಗಳಿಂದ ನಾನೂ ಕೂಡ ಯುದ್ಧದಲ್ಲಿ ಲೋಕಗಳನ್ನು ಗೆಲ್ಲಬಲ್ಲೆ ಎಂಬ ಉತ್ಸಾಹವಿದೆ ಪಾವಕ!

01216030a ಸರ್ವತಃ ಪರಿವಾರ್ಯೈನಂ ದಾವೇನ ಮಹತಾ ಪ್ರಭೋ|

01216030c ಕಾಮಂ ಸಂಪ್ರಜ್ವಲಾದ್ಯೈವ ಕಲ್ಯೌ ಸ್ವಃ ಸಾಹ್ಯಕರ್ಮಣಿ||

ಪ್ರಭು! ಈಗ ಮಹಾ ಪ್ರಜ್ವಾಲೆಗಳಿಂದ ನಿನಗಿಷ್ಟ ಬಂದಹಾಗೆ ಈ ಅರಣ್ಯವನ್ನು ಸುತ್ತುವರೆ. ನಾವು ಈ ಕಾರ್ಯದಲ್ಲಿ ಸಹಭಾಗಿಗಳಾಗಲು ಸಿದ್ಧರಿದ್ದೇವೆ.””

01216031 ವೈಶಂಪಾಯನ ಉವಾಚ|

01216031a ಏವಮುಕ್ತಃ ಸ ಭಗವಾನ್ದಾಶಾರ್ಹೇಣಾರ್ಜುನೇನ ಚ|

01216031c ತೈಜಸಂ ರೂಪಮಾಸ್ಥಾಯ ದಾವಂ ದಗ್ಧುಂ ಪ್ರಚಕ್ರಮೇ||

ವೈಶಂಪಾಯನನು ಹೇಳಿದನು: “ಅರ್ಜುನ ಮತ್ತು ದಾಶಾರ್ಹನ ಈ ಮಾತುಗಳನ್ನು ಕೇಳಿದ ಭಗವಾನನು ತನ್ನ ತೇಜಸ್ವಿ ರೂಪ ಧಾರಣಮಾಡಿ ಅರಣ್ಯವನ್ನು ಸುಡಲು ಪ್ರಾರಂಭಿಸಿದನು.

01216032a ಸರ್ವತಃ ಪರಿವಾರ್ಯಾಥ ಸಪ್ತಾರ್ಚಿರ್ಜ್ವಲನಸ್ತದಾ|

01216032c ದದಾಹ ಖಾಂಡವಂ ಕ್ರುದ್ಧೋ ಯುಗಾಂತಮಿವ ದರ್ಶಯನ್||

ಎಲ್ಲ ಕಡೆಗಳಿಂದಲೂ ಸುತ್ತುವರೆದು ತನ್ನ ಏಳು ಜ್ವಾಲೆಗಳ ಮೂಲಕ ಆ ಕೃದ್ಧನು ಖಾಂಡವವನ್ನು ಸುಡುತ್ತಿರಲು ಯುಗವೇ ಅಂತ್ಯವಾಗುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.

01216033a ಪರಿಗೃಹ್ಯ ಸಮಾವಿಷ್ಟಸ್ತದ್ವನಂ ಭರತರ್ಷಭ|

01216033c ಮೇಘಸ್ತನಿತನಿರ್ಘೋಷಂ ಸರ್ವಭೂತಾನಿ ನಿರ್ದಹನ್||

01216034a ದಹ್ಯತಸ್ತಸ್ಯ ವಿಬಭೌ ರೂಪಂ ದಾವಸ್ಯ ಭಾರತ|

01216034c ಮೇರೋರಿವ ನಗೇಂದ್ರಸ್ಯ ಕಾಂಚನಸ್ಯ ಮಹಾದ್ಯುತೇಃ||

ಭರತರ್ಷಭ! ಭಾರತ! ಆ ವನವನ್ನು ಸುತ್ತುವರೆದು ಮೇಲೆರಗಿ ಮಳೆಗಾಲದ ಮೋಡಗಳ ಗುಡುಗಿನಂತೆ ಗರ್ಜಿಸುತ್ತಾ ಭುಗಿಲೆದ್ದು ಸರ್ವಭೂತಗಳನ್ನೂ ಸುಡುತ್ತಿರುವ ಆ ವನವು ಕಾಂಚನ ಮಹಾದ್ಯುತಿ ನಗೇಂದ್ರ ಮೇರುವಿನಂತೆ ತೋರುತ್ತಿತ್ತು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಗಾಂಡೀವಾದಿದಾನೇ ಷೋಡಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಗಾಂಡೀವಪ್ರದಾನ ಎನ್ನುವ ಇನ್ನೂರಾ ಹದಿನಾರನೆಯ ಅಧ್ಯಾಯವು.

Related image

Comments are closed.