|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಖಾಂಡವದಾಹ ಪರ್ವ
೨೧೪
ಬ್ರಾಹ್ಮಣ ರೂಪಿ ಅನಲನ ಆಗಮನ
ಪಾಂಡವರ ಸಂತೋಷದ ದಿನಗಳು (೧-೧೩). ಕೃಷ್ಣ-ಧನಂಜಯರು ಗೆಳೆಯರೊಂದಿಗೆ ಜಲವಿಹಾರಕ್ಕೆ ಯಮುನೆಗೆ ಹೋದುದು (೧೪-೨೫). ಕೃಷ್ಣಾರ್ಜುನರು ಕುಳಿತಿರುವಲ್ಲಿ ವಿಪ್ರರೂಪದಲ್ಲಿ ಅಗ್ನಿಯು ಕಾಣಿಸಿಕೊಂಡಿದುದು (೨೬-೩೨).
01214001 ವೈಶಂಪಾಯನ ಉವಾಚ|
01214001a ಇಂದ್ರಪ್ರಸ್ಥೇ ವಸಂತಸ್ತೇ ಜಘ್ನುರನ್ಯಾನ್ನರಾಧಿಪಾನ್|
01214001c ಶಾಸನಾದ್ಧೃತರಾಷ್ಟ್ರಸ್ಯ ರಾಜ್ಞಃ ಶಾಂತನವಸ್ಯ ಚ||
ವೈಶಂಪಾಯನನು ಹೇಳಿದನು: “ರಾಜ ಧೃತರಾಷ್ಟ್ರ ಮತ್ತು ಶಾಂತನುವಿನ ಶಾಸನದಂತೆ ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಅವರು ಅನ್ಯ ನರಾಧಿಪರನ್ನು ಸದೆಬಡಿದರು.
01214002a ಆಶ್ರಿತ್ಯ ಧರ್ಮರಾಜಾನಂ ಸರ್ವಲೋಕೋಽವಸತ್ಸುಖಂ|
01214002c ಪುಣ್ಯಲಕ್ಷಣಕರ್ಮಾಣಂ ಸ್ವದೇಹಮಿವ ದೇಹಿನಃ||
ಧರ್ಮರಾಜನ ಆಶ್ರಯದಲ್ಲಿ ಸರ್ವ ಜನರೂ ಪುಣ್ಯಲಕ್ಷಣ ಕರ್ಮಗಳಿಂದೊಡಗೂಡಿದ ದೇಹಗಳೊಳಗಿರುವ ಆತ್ಮಗಳಂತೆ ಸುಖವಾಗಿ ವಾಸಿಸುತ್ತಿದ್ದರು.
01214003a ಸ ಸಮಂ ಧರ್ಮಕಾಮಾರ್ಥಾನ್ಸಿಷೇವೇ ಭರತರ್ಷಭಃ|
01214003c ತ್ರೀನಿವಾತ್ಮಸಮಾನ್ಬಂಧೂನ್ಬಂಧುಮಾನಿವ ಮಾನಯನ್||
ಭರತರ್ಷಭರು ಧರ್ಮ, ಅರ್ಥ, ಕಾಮ ಈ ಮೂರು ಬಂಧುಗಳನ್ನೂ ಆತ್ಮಸಮಾನ ಬಂಧುಗಳೆಂದು ತಿಳಿದು ಸಮವಾಗಿ ಬೆಳೆಸಿದರು.
01214004a ತೇಷಾಂ ಸಮವಿಭಕ್ತಾನಾಂ ಕ್ಷಿತೌ ದೇಹವತಾಮಿವ|
01214004c ಬಭೌ ಧರ್ಮಾರ್ಥಕಾಮಾನಾಂ ಚತುರ್ಥ ಇವ ಪಾರ್ಥಿವಃ||
ಆ ಪಾರ್ಥಿವನು ಭೂಮಿಯ ಮೇಲೆ ಸಮ ಭಾಗಗಳಲ್ಲಿ ದೇಹ ತಳೆದ ಧರ್ಮ, ಅರ್ಥ, ಕಾಮಗಳಿಗೆ ನಾಲ್ಕನೆಯವನಂತೆ[1] ಇದ್ದನು.
01214005a ಅಧ್ಯೇತಾರಂ ಪರಂ ವೇದಾಃ ಪ್ರಯೋಕ್ತಾರಂ ಮಹಾಧ್ವರಾಃ|
01214005c ರಕ್ಷಿತಾರಂ ಶುಭಂ ವರ್ಣಾ ಲೇಭಿರೇ ತಂ ಜನಾಧಿಪಂ||
ಈ ಜನಾಧಿಪನಲ್ಲಿ ವೇದಗಳು ಒಬ್ಬ ಪರಮ ವಿದ್ಯಾರ್ಥಿಯನ್ನು, ಮಹಾಧ್ವರಗಳು ಒಬ್ಬ ಪ್ರಯೋಕ್ತಾರನನ್ನು ಮತ್ತು ವರ್ಣಗಳು ಒಬ್ಬ ಪರಮ ಸಂರಕ್ಷಕನನ್ನು ಪಡೆದವು[2].
01214006a ಅಧಿಷ್ಠಾನವತೀ ಲಕ್ಷ್ಮೀಃ ಪರಾಯಣವತೀ ಮತಿಃ|
01214006c ಬಂಧುಮಾನಖಿಲೋ ಧರ್ಮಸ್ತೇನಾಸೀತ್ಪೃಥಿವೀಕ್ಷಿತಾ||
ಈ ಪೃಥಿವೀಕ್ಷಿತನಲ್ಲಿ ಲಕ್ಷ್ಮಿಯು ಅಧಿಷ್ಠಾನವನ್ನೂ ಮತಿಯು ಪರಾಯಣವನ್ನೂ ಪಡೆದರು[3] ಮತ್ತು ಅಖಿಲ ಬಂಧುಗಳೂ ಧರ್ಮನಿರತರಾಗಿದ್ದರು[4].
01214007a ಭ್ರಾತೃಭಿಃ ಸಹಿತೋ ರಾಜಾ ಚತುರ್ಭಿರಧಿಕಂ ಬಭೌ|
01214007c ಪ್ರಯುಜ್ಯಮಾನೈರ್ವಿತತೋ ವೇದೈರಿವ ಮಹಾಧ್ವರಃ||
ವೇದಗಳಿಂದ ನಡೆಯುತ್ತಿರುವ ಮಹಾಧ್ವರವು ಹೇಗೆ ಪ್ರಜ್ವಲಿತ ವಾಗಿರುತ್ತದೆಯೋ ಹಾಗೆ ನಾಲ್ವರು ಸಹೋದರನ್ನೊಡಗೂಡಿದ ರಾಜನು ಅಧಿಕ ಪ್ರಾಯುಜ್ಯಮಾನನಾಗಿದ್ದನು.
01214008a ತಂ ತು ಧೌಮ್ಯಾದಯೋ ವಿಪ್ರಾಃ ಪರಿವಾರ್ಯೋಪತಸ್ಥಿರೇ|
01214008c ಬೃಹಸ್ಪತಿಸಮಾ ಮುಖ್ಯಾಃ ಪ್ರಜಾಪತಿಮಿವಾಮರಾಃ||
ಬೃಹಸ್ಪತಿಸಮಾನ ಅಮರ ಪ್ರಮುಖರು ಪ್ರಜಾಪತಿಯನ್ನು ಹೇಗೋ ಹಾಗೆ ಧೌಮ್ಯಾದಿ ವಿಪ್ರರು ಅವನನ್ನು ಸುತ್ತುವರಿದು ಕುಳಿತಿರುತ್ತಿದ್ದರು.
01214009a ಧರ್ಮರಾಜೇ ಅತಿಪ್ರೀತ್ಯಾ ಪೂರ್ಣಚಂದ್ರ ಇವಾಮಲೇ|
01214009c ಪ್ರಜಾನಾಂ ರೇಮಿರೇ ತುಲ್ಯಂ ನೇತ್ರಾಣಿ ಹೃದಯಾನಿ ಚ||
ಧರ್ಮರಾಜನಲ್ಲಿ ಅತಿ ಪ್ರೀತರಾದ ಪ್ರಜೆಗಳ ಕಣ್ಣು-ಹೃದಯಗಳಲ್ಲಿ ಪೂರ್ಣಚಂದ್ರ ಸಮಾನ ಸಂತೋಷವಿತ್ತು[5].
01214010a ನ ತು ಕೇವಲದೈವೇನ ಪ್ರಜಾ ಭಾವೇನ ರೇಮಿರೇ|
01214010c ಯದ್ಬಭೂವ ಮನಃಕಾಂತಂ ಕರ್ಮಣಾ ಸ ಚಕಾರ ತತ್||
ಅವನೇ ದೇವ ಎನ್ನುವ ಭಾವನೆ ಮಾತ್ರವಲ್ಲದೇ ಅವನಿಗೆ ಅವರ ಮೇಲಿದ್ದ ಪ್ರಜಾಭಾವದಿಂದ, ಮನಸ್ಸಿಗೆ ಆನಂದವನ್ನೀಯುವ ಕರ್ಮಗಳಿಂದ ಪ್ರಜೆಗಳು ಸುಖದಿಂದಿದ್ದರು.
01214011a ನ ಹ್ಯಯುಕ್ತಂ ನ ಚಾಸತ್ಯಂ ನಾನೃತಂ ನ ಚ ವಿಪ್ರಿಯಂ|
01214011c ಭಾಷಿತಂ ಚಾರುಭಾಷಸ್ಯ ಜಜ್ಞೇ ಪಾರ್ಥಸ್ಯ ಧೀಮತಃ||
ಆ ಚಾರುಭಾಷಿ ಧೀಮಂತ ಪಾರ್ಥನಿಂದ ಯಾವುದೇ ರೀತಿಯ ಅಯುಕ್ತ, ಅಸತ್ಯ, ಸತ್ಯವಲ್ಲದ ಮತ್ತು ವಿಪ್ರಿಯ ಮಾತುಗಳು ಹೊರಬರುತ್ತಿರಲಿಲ್ಲ[6].
01214012a ಸ ಹಿ ಸರ್ವಸ್ಯ ಲೋಕಸ್ಯ ಹಿತಮಾತ್ಮನ ಏವ ಚ|
01214012c ಚಿಕೀರ್ಷುಃ ಸುಮಹಾತೇಜಾ ರೇಮೇ ಭರತಸತ್ತಮಃ||
ತನ್ನ ಮತ್ತು ಸರ್ವಲೋಕ ಹಿತಕಾರಕ ಕೃತ್ಯಗಳನ್ನು ಮಾಡುವಲ್ಲಿ ಆ ಸುಮಹಾತೇಜಸ್ವಿ ಭರತಸತ್ತಮನು ಆನಂದ ಪಡುತ್ತಿದ್ದನು.
01214013a ತಥಾ ತು ಮುದಿತಾಃ ಸರ್ವೇ ಪಾಂಡವಾ ವಿಗತಜ್ವರಾಃ|
01214013c ಅವಸನ್ಪೃಥಿವೀಪಾಲಾಂಸ್ತ್ರಾಸಯಂತಃ ಸ್ವತೇಜಸಾ||
ಪಾಂಡವರು ಹೀಗೆ ಕಷ್ಟಗಳಿಂದ ಬಿಡುಗಡೆ ಹೊಂದಿ ಸಂತೋಷ ಮತ್ತು ತಮ್ಮ ತೇಜಸ್ಸಿನಿಂದ ಇತರ ಪೃಥ್ವಿಪಾಲರನ್ನು ಸಂತಪ್ತಗೊಳಿಸುತ್ತಾ ವಾಸಿಸಿದರು.
01214014a ತತಃ ಕತಿಪಯಾಹಸ್ಯ ಬೀಭತ್ಸುಃ ಕೃಷ್ಣಮಬ್ರವೀತ್|
01214014c ಉಷ್ಣಾನಿ ಕೃಷ್ಣ ವರ್ತಂತೇ ಗಚ್ಛಾಮೋ ಯಮುನಾಂ ಪ್ರತಿ||
ಕೆಲವು ದಿನಗಳ ನಂತರ ಬೀಭತ್ಸುವು ಕೃಷ್ಣನಿಗೆ ಹೇಳಿದನು: “ಕೃಷ್ಣ! ಬೇಸಗೆಯ ದಿನಗಳು ನಡೆಯುತ್ತಿವೆ! ಯಮುನೆಯ ಕಡೆ ಹೋಗೋಣ!
01214015a ಸುಹೃಜ್ಜನವೃತಾಸ್ತತ್ರ ವಿಹೃತ್ಯ ಮಧುಸೂದನ|
01214015c ಸಾಯಾಹ್ನೇ ಪುನರೇಷ್ಯಾಮೋ ರೋಚತಾಂ ತೇ ಜನಾರ್ದನ||
ಮಧುಸೂದನ! ಜನಾರ್ದನ! ನಮ್ಮ ಗೆಳೆಯರೊಂದಿಗೆ ಅಲ್ಲಿ ಹೋಗಿ ವಿಹರಿಸೋಣ! ನಿನಗೆ ಬೇಕೆಂದರೆ ಸಾಯಂಕಾಲವೇ ಹಿಂದಿರುಗೋಣ.”
01214016 ವಾಸುದೇವ ಉವಾಚ|
01214016a ಕುಂತೀಮಾತರ್ಮಮಾಪ್ಯೇತದ್ರೋಚತೇ ಯದ್ವಯಂ ಜಲೇ|
01214016c ಸುಹೃಜ್ಜನವೃತಾಃ ಪಾರ್ಥ ವಿಹರೇಮ ಯಥಾಸುಖಂ||
ವಾಸುದೇವನು ಹೇಳಿದನು: “ಮಾತೆ ಕುಂತಿಯ ಮಗ ಪಾರ್ಥ! ನಾನೂ ಕೂಡ ಗೆಳೆಯರೊಂದಿಗೆ ಜಲದಲ್ಲಿ ಯಥಾಸುಖವಾಗಿ ವಿಹರಿಸಲು ಬಯಸುತ್ತೇನೆ.””
01214017 ವೈಶಂಪಾಯನ ಉವಾಚ|
01214017a ಆಮಂತ್ರ್ಯ ಧರ್ಮರಾಜಾನಮನುಜ್ಞಾಪ್ಯ ಚ ಭಾರತ|
01214017c ಜಗ್ಮತುಃ ಪಾರ್ಥಗೋವಿಂದೌ ಸುಹೃಜ್ಜನವೃತೌ ತತಃ||
ವೈಶಂಪಾಯನನು ಹೇಳಿದನು: “ಭಾರತ! ಧರ್ಮರಾಜನಲ್ಲಿ ವಿಚಾರಿಸಿ ಅವನ ಅನುಜ್ಞೆಯನ್ನು ಪಡೆದು ತಮ್ಮ ಸುಹೃದಯರಿಂದೊಡಗೂಡಿ ಪಾರ್ಥ-ಗೋವಿಂದರು ಹೊರಟರು.
01214018a ವಿಹಾರದೇಶಂ ಸಂಪ್ರಾಪ್ಯ ನಾನಾದ್ರುಮವದುತ್ತಮಂ|
01214018c ಗೃಹೈರುಚ್ಚಾವಚೈರ್ಯುಕ್ತಂ ಪುರಂದರಗೃಹೋಪಮಂ||
01214019a ಭಕ್ಷ್ಯೈರ್ಭೋಜ್ಯೈಶ್ಚ ಪೇಯೈಶ್ಚ ರಸವದ್ಭಿರ್ಮಹಾಧನೈಃ|
01214019c ಮಾಲ್ಯೈಶ್ಚ ವಿವಿಧೈರ್ಯುಕ್ತಂ ಯುಕ್ತಂ ವಾರ್ಷ್ಣೇಯಪಾರ್ಥಯೋಃ[7]||
01214020a ಆವಿವೇಶತುರಾಪೂರ್ಣಂ ರತ್ನೈರುಚ್ಚಾವಚೈಃ ಶುಭೈಃ|
01214020c ಯಥೋಪಜೋಷಂ ಸರ್ವಶ್ಚ ಜನಶ್ಚಿಕ್ರೀಡ ಭಾರತ||
ಭಾರತ! ಅವರೆಲ್ಲರೂ ನಾನಾ ಪ್ರಕಾರದ ಉತ್ತಮ ವೃಕ್ಷಗಳಿಂದ ಕೂಡಿದ್ದ, ಅಲ್ಲಲ್ಲಿ ಪುರಂದರ ಗೃಹಕ್ಕೆ ಸಮಾನ ಮನೆಗಳಿಂದ ಕೂಡಿದ್ದ, ವಾರ್ಷ್ಣೇಯ ಪಾರ್ಥರಿಗೆ ತಕ್ಕುದಾದ ಬೆಲೆಬಾಳುವ ಭಕ್ಷ್ಯ, ಭೋಜ್ಯ, ಪಾನೀಯ, ರಸಗಳು, ಮಾಲೆಗಳನ್ನು ಇರಿಸಿದ್ದ, ವಿಹಾರಪ್ರದೇಶವನ್ನು ಸೇರಿ ರತ್ನದ ಹೊಳಪಿನ ನೀರಿನಿಂದ ತುಂಬಿರುವ ಕೊಳಗಳನ್ನು ಪ್ರವೇಶಿಸಿ ಮನ ಬಂದಂತೆ ಜಲಕ್ರೀಡೆಯಾಡಿದರು.
01214021a ವನೇ ಕಾಶ್ಚಿಜ್ಜಲೇ ಕಾಶ್ಚಿತ್ಕಾಶ್ಚಿದ್ವೇಶ್ಮಸು ಚಾಂಗನಾಃ|
01214021c ಯಥಾದೇಶಂ ಯಥಾಪ್ರೀತಿ ಚಿಕ್ರೀಡುಃ ಕೃಷ್ಣಪಾರ್ಥಯೋಃ||
[8]ಕೆಲವು ಅಂಗನೆಯರು ವನದಲ್ಲಿ, ಕೆಲವರು ನೀರಿನಲ್ಲಿ ಮತ್ತು ಕೆಲವರು ಮನೆಗಳಲ್ಲಿ ಹೀಗೆ ಕೃಷ್ಣ-ಪಾರ್ಥರಿಗೆ ಇಷ್ಟವಾದ ಕಡೆಗಳಲ್ಲಿ ಆಡಿದರು.
01214022a ದ್ರೌಪದೀ ಚ ಸುಭದ್ರಾ ಚ ವಾಸಾಂಸ್ಯಾಭರಣಾನಿ ಚ|
01214022c ಪ್ರಯಚ್ಛೇತಾಂ ಮಹಾರ್ಹಾಣಿ ಸ್ತ್ರೀಣಾಂ ತೇ ಸ್ಮ ಮದೋತ್ಕಟೇ[9]||
ಮದೋತ್ಕಟ ದ್ರೌಪದೀ-ಸುಭದ್ರೆಯರು ಅತ್ಯಂತ ಬೆಲೆ ಬಾಳುವ ವಸ್ತ್ರ-ಆಭರಣಗಳನ್ನು ಸ್ತ್ರೀಯರಿಗೆ ನೀಡಿದರು.
01214023a ಕಾಶ್ಚಿತ್ಪ್ರಹೃಷ್ಟಾ ನನೃತುಶ್ಚುಕ್ರುಶುಶ್ಚ ತಥಾಪರಾಃ|
01214023c ಜಹಸುಶ್ಚಾಪರಾ ನಾರ್ಯಃ ಪಪುಶ್ಚಾನ್ಯಾ ವರಾಸವಂ||
ಕೆಲವರು ಸಂತೋಷದಿಂದ ಕುಣಿದರು, ಕೆಲವರು ಜೋರಾಗಿ ಕೂಗಾಡಿದರು, ಕೆಲವರು ಜೋರಾಗಿ ನಕ್ಕರು ಮತ್ತು ಇನ್ನು ಕೆಲವರು ಇಷ್ಟಬಂದ ಮದಿರವನ್ನು ಕುಡಿದರು.
01214024a ರುರುದುಶ್ಚಾಪರಾಸ್ತತ್ರ ಪ್ರಜಘ್ನುಶ್ಚ ಪರಸ್ಪರಂ|
01214024c ಮಂತ್ರಯಾಮಾಸುರನ್ಯಾಶ್ಚ ರಹಸ್ಯಾನಿ ಪರಸ್ಪರಂ||
ಕೆಲವರು ಅಳುತ್ತಿದ್ದರೆ ಇನ್ನು ಕೆಲವರು ಪರಸ್ಪರರಲ್ಲಿ ಜಗಳವಾಡುತ್ತಿದ್ದರು. ಮತ್ತೆ ಕೆಲವರು ಪರಸ್ಪರರಲ್ಲಿ ಗುಟ್ಟಿನ ಪಿಸುಮಾತುಗಳನ್ನಾಡುತ್ತಿದ್ದರು.
01214025a ವೇಣುವೀಣಾಮೃದಂಗಾನಾಂ ಮನೋಜ್ಞಾನಾಂ ಚ ಸರ್ವಶಃ|
01214025c ಶಬ್ಧೇನಾಪೂರ್ಯತೇ ಹ ಸ್ಮ ತದ್ವನಂ ಸುಸಮೃದ್ಧಿಮತ್||
ಆ ಸುಸಮೃದ್ಧ ವನವು ಮನಸೆಳೆಯುವ ವೇಣು, ವೀಣಾ ಮತ್ತು ಮೃದಂಗಗಳ ಶಬ್ಧದಿಂದ ತುಂಬಿಕೊಂಡಿತ್ತು.
01214026a ತಸ್ಮಿಂಸ್ತಥಾ ವರ್ತಮಾನೇ ಕುರುದಾಶಾರ್ಹನಂದನೌ|
01214026c ಸಮೀಪೇ ಜಗ್ಮತುಃ ಕಂ ಚಿದುದ್ದೇಶಂ ಸುಮನೋಹರಂ||
01214027a ತತ್ರ ಗತ್ವಾ ಮಹಾತ್ಮಾನೌ ಕೃಷ್ಣೌ ಪರಪುರಂಜಯೌ|
01214027c ಮಹಾರ್ಹಾಸನಯೋ ರಾಜಂಸ್ತತಸ್ತೌ ಸನ್ನಿಷೀದತುಃ||
ರಾಜನ್! ಹೀಗೆ ನಡೆಯುತ್ತಿರಲು ಕುರು-ದಾಶಾರ್ಹನಂದನರಿಬ್ಬರೂ ಸಮೀಪದ ಸುಮನೋಹರ ಪ್ರದೇಶವೊಂದನ್ನು ಸೇರಿದರು. ಅಲ್ಲಿ ಹೋಗಿ ಮಹಾತ್ಮ, ಪರಪುರಂಜಯ ಕೃಷ್ಣರು ಸೊಗಸಾದ ಆಸನವೊಂದರಲ್ಲಿ ಕುಳಿತುಕೊಂಡರು.
01214028a ತತ್ರ ಪೂರ್ವವ್ಯತೀತಾನಿ ವಿಕ್ರಾಂತಾನಿ ರತಾನಿ ಚ|
01214028c ಬಹೂನಿ ಕಥಯಿತ್ವಾ ತೌ ರೇಮಾತೇ ಪಾರ್ಥಮಾಧವೌ||
ಅಲ್ಲಿ ಪಾರ್ಥ-ಮಾಧವರು ಹಿಂದಿನ ಬಹಳಷ್ಟು ವಿಕ್ರಾಂತ ಮತ್ತು ಪ್ರೀತಿಯ ಘಟನೆಗಳನ್ನು ಹೇಳಿಕೊಳ್ಳುತ್ತಾ ಸಂತೋಷ ಪಡುತ್ತಿದ್ದರು.
01214029a ತತ್ರೋಪವಿಷ್ಟೌ ಮುದಿತೌ ನಾಕಪೃಷ್ಠೇಽಶ್ವಿನಾವಿವ|
01214029c ಅಭ್ಯಗಚ್ಛತ್ತದಾ ವಿಪ್ರೋ ವಾಸುದೇವಧನಂಜಯೌ||
ಈ ರೀತಿ ವಾಸುದೇವ-ಧನಂಜಯರು ಸ್ವರ್ಗದಲ್ಲಿರುವ ಅಶ್ವಿನಿಗಳಂತೆ ಸಂತೋಷದಿಂದ ಕುಳಿತುಕೊಂಡಿರಲು ಅಲ್ಲಿಗೆ ವಿಪ್ರನೋರ್ವನು ಆಗಮಿಸಿದನು.
01214030a ಬೃಹಚ್ಛಾಲಪ್ರತೀಕಾಶಃ ಪ್ರತಪ್ತಕನಕಪ್ರಭಃ|
01214030c ಹರಿಪಿಂಗೋ ಹರಿಶ್ಮಶ್ರುಃ ಪ್ರಮಾಣಾಯಾಮತಃ ಸಮಃ||
01214031a ತರುಣಾದಿತ್ಯಸಂಕಾಶಃ ಕೃಷ್ಣವಾಸಾ ಜಟಾಧರಃ|
01214031c ಪದ್ಮಪತ್ರಾನನಃ ಪಿಂಗಸ್ತೇಜಸಾ ಪ್ರಜ್ವಲನ್ನಿವ||
01214032a ಉಪಸೃಷ್ಟಂ ತು ತಂ ಕೃಷ್ಣೌ ಭ್ರಾಜಮಾನಂ ದ್ವಿಜೋತ್ತಮಂ|
01214032c ಅರ್ಜುನೋ ವಾಸುದೇವಶ್ಚ ತೂರ್ಣಮುತ್ಪತ್ಯ ತಸ್ಥತುಃ||
ಅವನು ಬೃಹತ್ತಾದ ಶಾಲವೃಕ್ಷದಂತೆ ಎತ್ತರವಾಗಿದ್ದನು. ಕರಗಿಸಿದ ಬಂಗಾರದ ಪ್ರಭೆಯನ್ನು ಹೊಂದಿದ್ದನು. ಕಿತ್ತಳೆ ಬಣ್ಣದವನಾಗಿದ್ದನು. ಅವನ ಗಡ್ಡ ಕೆಂಪಾಗಿತ್ತು. ಸಮ ಪ್ರಮಾಣನಾಗಿ ಆಯತನಾಗಿದ್ದನು. ಉದಯಿಸುತ್ತಿರುವ ಆದಿತ್ಯನಂತಿದ್ದನು. ಕಪ್ಪು ವಸ್ತ್ರಗಳನ್ನು ಧರಿಸಿದ್ದು, ಜಟಾಧರನಾಗಿದ್ದನು. ಕಣ್ಣುಗಳು ಪದ್ಮಪತ್ರಗಳಂತಿದ್ದವು. ಪ್ರಜ್ವಲಿಸುವಂಥಹ ಹಳದಿ ತೇಜಸ್ಸಿನಿಂದ ಕೂಡಿದ್ದನು. ಭ್ರಾಜಿಸುತ್ತಿರುವ ಆ ದ್ವಿಜೋತ್ತಮನನ್ನು ನೋಡಿದ ಕೂಡಲೇ ಕೃಷ್ಣವರ್ಣಿ ಅರ್ಜುನ-ವಾಸುದೇವರು ಎದ್ದು ನಿಂತರು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಬ್ರಾಹ್ಮಣರೂಪ್ಯನಲಾಗಮನೇ ಚತುರ್ದಶಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಬ್ರಾಹ್ಮಣರೂಪದಲ್ಲಿ ಅನಲನ ಆಗಮನ ಎನ್ನುವ ಇನ್ನೂರಾ ಹದಿನಾಲ್ಕನೆಯ ಅಧ್ಯಾಯವು.
[1]ಪುರುಷಾರ್ಥಗಳಿಗೆ ನಾಲ್ಕನೆಯದೆಂದರೆ ಮೋಕ್ಷ.
[2]ಗೋರಖಪುರ ಸಂಪುಟದಲ್ಲಿ “ಅಧ್ಯೇತಾರಂ ಪರಂ ವೇದಾನ್ ಪ್ರಯೋಕ್ತಾರಂ ಮಹಾಧ್ವರೇ| ರಕ್ಷಿತಾರಂ ಶುಭಾಂಲ್ಲೋಕಾನ್ಲೇಭಿರೇ ತಂ ಜನಾಧಿಪಂ||” ಅರ್ಥಾತ್ “ಆ ಜನಾಧಿಪನಲ್ಲಿ ಪರಮಾತ್ಮನ ಚಿಂತಕನನ್ನು, ಮಹಾಧ್ವರಗಳಲ್ಲಿ ವೇದಗಳನ್ನು ಬಳಸುವವನನ್ನು, ಮತ್ತು ಶುಭ ಲೋಕಗಳಲ್ಲಿ ರಕ್ಷಿಸುವನನ್ನು ಪಡೆದರು” ಎಂದಿದೆ.
[3]ಅರ್ಥಾತ್ - ಸ್ವಾಭಾವಿಕವಾಗಿ ಚಂಚಲವಾಗಿರುವ ಲಕ್ಷ್ಮಿ ಅಥವಾ ಸಂಪತ್ತು ಸ್ಥಿರವಾಯಿತು ಮತ್ತು ಬುದ್ಧಿಯು ಉತ್ತಮ ನಿಷ್ಠಾಪರವಾಯಿತು.
[4]ಗೋರಖಪುರ ಸಂಪುಟದಲ್ಲಿ “ಬಂಧುಮಾನಖಿಲೋ” ಎನ್ನುವುದರ ಬದಲಾಗಿ “ವರ್ಧಮಾನೋಽಖಿಲೋ” ಎಂದಿದೆ. ಅಂದರೆ ಧರ್ಮದ ಸಂಪೂರ್ಣ ವೃದ್ಧಿಯಾಯಿತು ಎಂದರ್ಥ.
[5]ಈ ಶ್ಲೋಕಕ್ಕೆ - ಅಮಲ ಪೂರ್ಣಚಂದ್ರನಂತೆ ಆನಂದವನ್ನು ನೀಡುವ ಧರ್ಮರಾಜನ ಪ್ರೀತಿಪಾತ್ರರಾದ ಪ್ರಜೆಗಳ ಕಣ್ಣು-ಹೃದಯಗಳಲ್ಲಿಯೂ ಅದೇ ರೀತಿಯ ಆನಂದವು ಹೊರಸೂಸುತ್ತಿತ್ತು - ಎನ್ನುವ ಇನ್ನೊಂದು ಅರ್ಥವನ್ನೂ ಕೊಡಬಹುದು.
[6]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ಮೊದಲನೆಯ ಪಾದವು ಈ ರೀತಿಯಿದೆ: ನ ಹ್ಯಯುಕ್ತಂ ನ ಚಾಸತ್ಯಂ ನಾಸಹ್ಯಂ ನ ಚ ವಾಪ್ರಿಯಂ| ಅರ್ಥಾತ್ ಚಾರುಭಾಷೀ ಧೀಮಂತ ಪಾರ್ಥನ ಮಾತಿನಲ್ಲಿ ಅಯುಕ್ತವಾದದ್ದಾಗಲೀ (ತಕ್ಕುದಾಗಿರದ), ಅಸತ್ಯವಾಗಲೀ (ಸುಳ್ಳಾಗಲೀ), ಅಸಹ್ಯವಾಗಲೀ (ಕೇಳಿದವರಿಗೆ ಸಹಿಸಲಸಾಧ್ಯವಾದ), ಮತ್ತು ಅಪ್ರಿಯವಾದ (ಕೇಳುವವರಿಗೆ ಇಷ್ಟವಾಗದಿರದ) ಯಾವುದೂ ಬರುತ್ತಿರಲಿಲ್ಲ.
[7]ಗೋರಖಪುರ ಸಂಪುಟದಲ್ಲಿ ಶ್ಲೋಕದ ಈ ಪಾದವು - ಮಾಲೈಶ್ಚ ವಿವಿಧೈರ್ಗಂಧೈರ್ಯುಕ್ತಂ ವಾರ್ಷ್ಣೇಯಪಾರ್ಥಯೋಃ| - ಎಂದಿದೆ.
[8]ಗೋರಖಪುರ ಸಂಪುಟದಲ್ಲಿ, ಈ ಶ್ಲೋಕದ ಮೊದಲು, ಇನ್ನೊಂದು ಶ್ಲೋಕವಿದೆ. ಸ್ಟ್ರಿಯಶ್ಚ ವಿಪುಲಶೋಣ್ಯಶ್ಚಾರುಪೀನಪಯೋಧರಾಃ| ಮದಸ್ಖಲಿತಗಾಮಿನ್ಯಶ್ಚೀಕ್ರೀಡುರ್ವಾಮಲೋಚನಾಃ|| ಅಂದರೆ ವಿಪುಲ ಶೋಣಿಯ, ಪೀನಪಯೋಧರೆಯರು, ಮದಸ್ಖಲಿತ ಗಾಮಿನಿಯರಾದ ಸುಂದರ ವಾಮಲೋಚನೆಯರು ಅಲ್ಲಿ ಆಡುತ್ತಿದ್ದರು.
[9]ಗೋರಖಪುರ ಸಂಪುಟದಲ್ಲಿ ಈ ಶ್ಲೋಕವು ಈ ರೀತಿಯಿದೆ: ಪ್ರಾಯಚ್ಛತಾಂ ಮಹಾರಾಜ ತೇ ತು ತಸ್ಮಿನ್ಮದೋತ್ಕಟೇ|