Adi Parva: Chapter 212

ಆದಿ ಪರ್ವ: ಸುಭದ್ರಾಹರಣ ಪರ್ವ

೨೧೨

ರೈವತಗಿರಿಯನ್ನು ಪೂಜಿಸಿ ಮರಳುತ್ತಿರುವಾಗ ಸುಭದ್ರೆಯನ್ನು ಅರ್ಜುನನು ಬಲವಂತವಾಗಿ ಎತ್ತಿ ರಥದ ಮೇಲಿರಿಸಿ ಹಸ್ತಿನಾಪುರದತ್ತ ಹೋದುದು (೧-೮). ದೂತರಿಂದ ವಿಷಯವನ್ನು ತಿಳಿದ ಬಲರಾಮನು ಕೋಪಗೊಂಡು ಅರ್ಜುನನನ್ನು ಎದುರಿಸಲು ಸೇನೆಯನ್ನು ಸಿದ್ಧಗೊಳಿಸಿದುದು (೯-೩೨).

Image result for subhadra haran01212001 ವೈಶಂಪಾಯನ ಉವಾಚ|

01212001a ತತಃ ಸಂವಾದಿತೇ ತಸ್ಮಿನ್ನನುಜ್ಞಾತೋ ಧನಂಜಯಃ|

01212001c ಗತಾಂ ರೈವತಕೇ ಕನ್ಯಾಂ ವಿದಿತ್ವಾ ಜನಮೇಜಯ||

01212002a ವಾಸುದೇವಾಭ್ಯನುಜ್ಞಾತಃ ಕಥಯಿತ್ವೇತಿಕೃತ್ಯತಾಂ|

01212002c ಕೃಷ್ಣಸ್ಯ ಮತಮಾಜ್ಞಾಯ ಪ್ರಯಯೌ ಭರತರ್ಷಭಃ||

01212003a ರಥೇನ ಕಾಂಚನಾಂಗೇನ ಕಲ್ಪಿತೇನ ಯಥಾವಿಧಿ|

01212003c ಸೈನ್ಯಸುಗ್ರೀವಯುಕ್ತೇನ ಕಿಂಕಿಣೀಜಾಲಮಾಲಿನಾ||

ವೈಶಂಪಾಯನನು ಹೇಳಿದನು: “ಜನಮೇಜಯ! ಅವನ ಅನುಜ್ಞೆಯಿದೆ ಎಂದು ತಿಳಿದ ಧನಂಜಯನು ಕನ್ಯೆಯು ರೈವತಕ್ಕೆ ಹೋಗಿದ್ದಾಳೆ ಎನ್ನುವುದನ್ನೂ ತಿಳಿದುಕೊಂಡನು. ಕೃಷ್ಣನೊಂದಿಗೆ ಉಪಾಯವನ್ನು ಚರ್ಚಿಸಿ, ಅವನ ಅನುಜ್ಞೆಯನ್ನು ಪಡೆದು, ಕೃಷ್ಣನ ಮನಸ್ಸನ್ನು ತಿಳಿದುಕೊಂಡು ಭರತರ್ಷಭನು ಯಥಾವಿಧಿಯಾಗಿ ತಯಾರಿಸಿದ, ಸೈನ್ಯ-ಸುಗ್ರೀವರನ್ನು ಕಟ್ಟಿದ, ಗಂಟೆ ಮಾಲೆಗಳಿಂದ ಅಲಂಕೃತವಾದ ಕಾಂಚನಾಂಗ ರಥವನ್ನೇರಿ ಹೊರಟನು.

01212004a ಸರ್ವಶಸ್ತ್ರೋಪಪನ್ನೇನ ಜೀಮೂತರವನಾದಿನಾ|

01212004c ಜ್ವಲಿತಾಗ್ನಿಪ್ರಕಾಶೇನ ದ್ವಿಷತಾಂ ಹರ್ಷಘಾತಿನಾ||

ಅರಿಗಳ ಹರ್ಷಘಾತಿಯ ಆ ರಥದಲ್ಲಿ ಮಳೆಯ ಮೋಡಗಳಂತೆ ಘರ್ಜಿಸಬಲ್ಲ ಮತ್ತು ಅಗ್ನಿಪ್ರಕಾಶದಿಂದ ಜ್ವಲಿಸುವ ಎಲ್ಲ ಶಸ್ತ್ರಗಳೂ ಇದ್ದವು.

01212005a ಸನ್ನದ್ಧಃ ಕವಚೀ ಖಡ್ಗೀ ಬದ್ಧಗೋಧಾಂಗುಲಿತ್ರವಾನ್|

01212005c ಮೃಗಯಾವ್ಯಪದೇಶೇನ ಯೌಗಪದ್ಯೇನ ಭಾರತ||

ಭಾರತ! ಕವಚ, ಖಡ್ಗ, ಕೈ ಮತ್ತು ಬೆರಳುಗಳ ಕವಚಗಳಿಂದ ಸನ್ನದ್ಧನಾಗಿ ಬೇಟೆಯಾಡಲು ಹೋಗುವ ನೆಪದಲ್ಲಿ ವೇಗದಿಂದ ಹೊರಟನು.

01212006a ಸುಭದ್ರಾ ತ್ವಥ ಶೈಲೇಂದ್ರಮಭ್ಯರ್ಚ್ಯ ಸಹ ರೈವತಂ|

01212006c ದೈವತಾನಿ ಚ ಸರ್ವಾಣಿ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ||

01212007a ಪ್ರದಕ್ಷಿಣಂ ಗಿರಿಂ ಕೃತ್ವಾ ಪ್ರಯಯೌ ದ್ವಾರಕಾಂ ಪ್ರತಿ|

01212007c ತಾಂ ಅಭಿದ್ರುತ್ಯ ಕೌಂತೇಯಃ ಪ್ರಸಹ್ಯಾರೋಪಯದ್ರಥಂ||

01212007e ಸುಭದ್ರಾಂ ಚಾರುಸರ್ವಾಂಗೀಂ ಕಾಮಬಾಣಪ್ರಪೀಡಿತಃ||

ಸುಭದ್ರೆಯು ಶೈಲೇಂದ್ರ ರೈವತವನ್ನೂ ಮತ್ತು ಅಲ್ಲಿರುವ ಸರ್ವ ದೇವತೆಗಳನ್ನೂ ಬ್ರಾಹ್ಮಣರ ಸ್ವಸ್ತಿ ವಾಚಗಳೊಂದಿಗೆ ಪೂಜಿಸಿ, ಗಿರಿಯ ಪ್ರದಕ್ಷಿಣೆ ಮಾಡಿ ದ್ವಾರಕೆಯ ಕಡೆ ಬರುತ್ತಿದ್ದಳು. ಆಗ ಕಾಮಬಾಣ ಪೀಡಿತ ಕೌಂತೇಯನು ಚಾರು ಸರ್ವಾಂಗೀ ಸುಭದ್ರೆಯನ್ನು ಎತ್ತಿ ಬಲವಂತವಾಗಿ ತನ್ನ ರಥದ ಮೇಲೆ ಇರಿಸಿಕೊಂಡನು.

01212008a ತತಃ ಸ ಪುರುಷವ್ಯಾಘ್ರಸ್ತಾಂ ಆದಾಯ ಶುಚಿಸ್ಮಿತಾಂ|

01212008c ರಥೇನಾಕಾಶಗೇನೈವ ಪ್ರಯಯೌ ಸ್ವಪುರಂ ಪ್ರತಿ||

ಆ ಶುಚಿಸ್ಮಿತೆಯನ್ನು ಪಡೆದ ಕೂಡಲೇ ಪುರುಷವ್ಯಾಘ್ರನು ಆಕಾಶವೇಗದಲ್ಲಿ ತನ್ನ ರಥದಲ್ಲಿ ಸ್ವಪುರದ ಕಡೆ ಪ್ರಯಾಣಿಸಿದನು.

01212009a ಹ್ರಿಯಮಾಣಾಂ ತು ತಾಂ ದೃಷ್ಟ್ವಾ ಸುಭದ್ರಾಂ ಸೈನಿಕೋ ಜನಃ|

01212009c ವಿಕ್ರೋಶನ್ಪ್ರಾದ್ರವತ್ಸರ್ವೋ ದ್ವಾರಕಾಮಭಿತಃ ಪುರೀಂ||

ಆದರೆ, ಸುಭದ್ರೆಯು ಅಪಹರಣವಾಗುತ್ತಿರುವುದನ್ನು ನೋಡಿದ ಅವಳ ಸೈನಿಕ ಜನರು ಸರ್ವರೂ ಕೂಗುತ್ತಾ ದ್ವಾರಕಾಪುರಿಗೆ ಓಡಿದರು.

01212010a ತೇ ಸಮಾಸಾದ್ಯ ಸಹಿತಾಃ ಸುಧರ್ಮಾಮಭಿತಃ ಸಭಾಂ|

01212010c ಸಭಾಪಾಲಸ್ಯ ತತ್ಸರ್ವಮಾಚಖ್ಯುಃ ಪಾರ್ಥವಿಕ್ರಮಂ||

ಅವಸರದಲ್ಲಿ ಸುಧರ್ಮ ಸಭೆಯನ್ನು ಸೇರಿದ ಅವರು ಪಾರ್ಥವಿಕ್ರಮದ ಕುರಿತು ಸರ್ವವನ್ನು ಸಭಾಪಾಲನಿಗೆ ನಿವೇದಿಸಿದರು.

01212011a ತೇಷಾಂ ಶ್ರುತ್ವಾ ಸಭಾಪಾಲೋ ಭೇರೀಂ ಸಾಮ್ನಾಹಿಕೀಂ ತತಃ|

01212011c ಸಮಾಜಘ್ನೇ ಮಹಾಘೋಷಾಂ ಜಾಂಬೂನದಪರಿಷ್ಕೃತಾಂ||

ಅದನ್ನು ಕೇಳಿದ ಸಭಾಪಾಲನು ಬಂಗಾರದಿಂದ ಅಲಂಕೃತ ಮಹಾಘೋಷದ ಯುದ್ಧ ಭೇರಿಯನ್ನು ಹೊಡೆಯಿಸಿದನು.

01212012a ಕ್ಷುಬ್ಧಾಸ್ತೇನಾಥ ಶಬ್ಧೇನ ಭೋಜವೃಷ್ಣ್ಯಂಧಕಾಸ್ತದಾ|

01212012c ಅನ್ನಪಾನಮಪಾಸ್ಯಾಥ ಸಮಾಪೇತುಃ ಸಭಾಂ ತತಃ||

ಶಬ್ಧದಿಂದ ಬೆದರಿದ ಭೋಜ ವೃಷ್ಣಿ ಅಂಧಕರು ಅನ್ನಪಾನಗಳನ್ನು ಅಲ್ಲಿಯೇ ತೊರೆದು ಸಭೆಯನ್ನು ಸೇರಿದರು.

01212013a ತತೋ ಜಾಂಬೂನದಾಂಗಾನಿ ಸ್ಪರ್ಧ್ಯಾಸ್ತರಣವಂತಿ ಚ|

01212013c ಮಣಿವಿದ್ರುಮಚಿತ್ರಾಣಿ ಜ್ವಲಿತಾಗ್ನಿಪ್ರಭಾಣಿ ಚ||

01212014a ಭೇಜಿರೇ ಪುರುಷವ್ಯಾಘ್ರಾ ವೃಷ್ಣ್ಯಂಧಕಮಹಾರಥಾಃ|

01212014c ಸಿಂಹಾಸನಾನಿ ಶತಶೋ ಧಿಷ್ಣ್ಯಾನೀವ ಹುತಾಶನಾಃ||

ಆಗ ಪುರುಷವ್ಯಾಘ್ರ ವೃಷ್ಣಿ ಅಂಧಕ ಮಹಾರಥಿಗಳು ನೂರಾರು ಸಂಖ್ಯೆಗಳಲ್ಲಿ ಹುತಾಶನನು ಅಗ್ನಿಕುಂಡವನ್ನು ಏರುವಂತೆ ಬಂಗಾರದಿಂದ ಮಾಡಲ್ಪಟ್ಟ, ಬೆಲೆಬಾಳುವ ದಿಂಬುಗಳಿದ್ದ, ಮಣಿವಿದ್ರುಮಚಿತ್ರಗಳಿಂದ ಜ್ವಲಿತಾಗ್ನಿ ಪ್ರಭಾವಳಿಗಳಿಂದ ಕೂಡಿದ ಸಿಂಹಾಸನಗಳನ್ನು ಅಲಂಕರಿಸಿದರು.

01212015a ತೇಷಾಂ ಸಮುಪವಿಷ್ಟಾನಾಂ ದೇವಾನಾಮಿವ ಸನ್ನಯೇ|

01212015c ಆಚಖ್ಯೌ ಚೇಷ್ಟಿತಂ ಜಿಷ್ಣೋಃ ಸಭಾಪಾಲಃ ಸಹಾನುಗಃ||

ಅವರೆಲ್ಲರೂ ದೇವತೆಗಳಂತೆ ಕುಳಿತುಕೊಳ್ಳಲು ಸಭಾಪಾಲ ಮತ್ತು ಸಹಾನುಗರು ಜಿಷ್ಣುವಿನ ಚೇಷ್ಟೆಯನ್ನು ವರದಿಮಾಡಿದರು.

01212016a ತಚ್ಛೃತ್ವಾ ವೃಷ್ಣಿವೀರಾಸ್ತೇ ಮದರಕ್ತಾಂತಲೋಚನಾಃ|

01212016c ಅಮೃಷ್ಯಮಾಣಾಃ ಪಾರ್ಥಸ್ಯ ಸಮುತ್ಪೇತುರಹಂಕೃತಾಃ||

ಅದನ್ನು ಕೇಳಿದ ಮದದಿಂದ ರಕ್ತಾಂತಲೋಚನರಾದ ವೃಷ್ಣಿವೀರರು ಪಾರ್ಥನನ್ನು ಕ್ಷಮಿಸದೆಯೇ ಒಟ್ಟಾದರು.

01212017a ಯೋಜಯಧ್ವಂ ರಥಾನಾಶು ಪ್ರಾಸಾನಾಹರತೇತಿ ಚ|

01212017c ಧನೂಂಷಿ ಚ ಮಹಾರ್ಹಾಣಿ ಕವಚಾನಿ ಬೃಹಂತಿ ಚ||

“ರಥಗಳನ್ನು ಕಟ್ಟಿ. ಮಹಾ ಬೆಲೆಬಾಳುವ ಕವಚ, ಧನುಸ್ಸು ಮುಂತಾತ ಅನೇಕ ಆಯುಧಗಳನ್ನು ತನ್ನಿ.”

01212018a ಸೂತಾನುಚ್ಚುಕ್ರುಶುಃ ಕೇಚಿದ್ರಥಾನ್ಯೋಜಯತೇತಿ ಚ|

01212018c ಸ್ವಯಂ ಚ ತುರಗಾನ್ಕೇ ಚಿನ್ನಿನ್ಯುರ್ಹೇಮವಿಭೂಷಿತಾನ್||

ಕೆಲವರು ತಮ್ಮ ಅನುಚರರಿಗೆ ರಥಗಳನ್ನು ಕಟ್ಟುವಂತೆ ಕೂಗಿ ಹೇಳಿದರು. ಇನ್ನು ಕೆಲವರು ತಾವೇ ವಿಭೂಷಿತ ತುರಗಗಳನ್ನು ಕಟ್ಟಿದರು.

01212019a ರಥೇಷ್ವಾನೀಯಮಾನೇಷು ಕವಚೇಷು ಧ್ವಜೇಷು ಚ|

01212019c ಅಭಿಕ್ರಂದೇ ನೃವೀರಾಣಾಂ ತದಾಸೀತ್ಸಂಕುಲಂ ಮಹತ್||

ರಥಗಳನ್ನು, ಕವಚಗಳನ್ನು, ಧ್ವಜಗಳನ್ನು ತರುವಾಗ ಕೂಗಾಡುತ್ತಿದ್ದ ಆ ನರವೀರರಲ್ಲಿ ಮಹಾ ಗೊಂದಲವುಂಟಾಯಿತು.

01212020a ವನಮಾಲೀ ತತಃ ಕ್ಷೀಬಃ ಕೈಲಾಸಶಿಖರೋಪಮಃ|

01212020c ನೀಲವಾಸಾ ಮದೋತ್ಸಿಕ್ತ ಇದಂ ವಚನಮಬ್ರವೀತ್||

ಇವುಗಳ ಮಧ್ಯದಲ್ಲಿ ಕೈಲಾಸಶಿಖರೋಪಮವಾಗಿ ಎತ್ತರವಾಗಿದ್ದ, ನೀಲವಸ್ತ್ರಗಳನ್ನು ಧರಿಸಿದ್ದ, ಕುಡಿದ ಅಮಲಿನಲ್ಲಿದ್ದ ವನಮಾಲಿ [ಬಲರಾಮ] ಯು ಈ ಮಾತುಗಳನ್ನಾಡಿದನು:

01212021a ಕಿಮಿದಂ ಕುರುಥಾಪ್ರಜ್ಞಾಸ್ತೂಷ್ಣೀಂ ಭೂತೇ ಜನಾರ್ದನೇ|

01212021c ಅಸ್ಯ ಭಾವಮವಿಜ್ಞಾಯ ಸಂಕ್ರುದ್ಧಾ ಮೋಘಗರ್ಜಿತಾಃ||

“ಜನಾರ್ದನನು ಸುಮ್ಮನಿರುವಾಗ ನೀವೆಲ್ಲ ಮೂಢರು ಏನು ಮಾಡುತ್ತಿರುವಿರಿ? ಅವನ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯದೇ ಸಂಕೃದ್ಧ ಮೇಘಗಳಂತೆ ಗರ್ಜಿಸುತ್ತಿದ್ದೀರಲ್ಲ?

01212022a ಏಷ ತಾವದಭಿಪ್ರಾಯಮಾಖ್ಯಾತು ಸ್ವಂ ಮಹಾಮತಿಃ|

01212022c ಯದಸ್ಯ ರುಚಿತಂ ಕರ್ತುಂ ತತ್ಕುರುಧ್ವಮತಂದ್ರಿತಾಃ||

ಮೊದಲು ಆ ಮಹಾಮತಿಯು ತನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳಲಿ. ನಂತರ ಅವನು ಏನನ್ನು ಬಯಸುತ್ತಾನೆ ಅದನ್ನೇ ಹಿಂಜರಿಯದೇ ಮಾಡಿ.”

01212023a ತತಸ್ತೇ ತದ್ವಚಃ ಶ್ರುತ್ವಾ ಗ್ರಾಹ್ಯರೂಪಂ ಹಲಾಯುಧಾತ್|

01212023c ತೂಷ್ಣೀಂ ಭೂತಾಸ್ತತಃ ಸರ್ವೇ ಸಾಧು ಸಾಧ್ವಿತಿ ಚಾಬ್ರುವನ್||

ಹಲಾಯುಧಧಾರಿಯ ಈ ಒಳ್ಳೆಯ ಸಲಹೆಯನ್ನು ಕೇಳಿದ ಅವರೆಲ್ಲರೂ ಸಾಧು ಸಾಧು ಎಂದು ಸುಮ್ಮನಾದರು.

01212024a ಸಮಂ ವಚೋ ನಿಶಮ್ಯೇತಿ ಬಲದೇವಸ್ಯ ಧೀಮತಃ|

01212024c ಪುನರೇವ ಸಭಾಮಧ್ಯೇ ಸರ್ವೇ ತು ಸಮುಪಾವಿಶನ್||

ಧೀಮಂತ ಬಲದೇವನ ಮಾತು ಸರಿಯಾದುದೆಂದು ಪುನಃ ಸರ್ವರೂ ಸಭಾಮಧ್ಯದಲ್ಲಿ ಕುಳಿತುಕೊಂಡರು.

01212025a ತತೋಽಬ್ರವೀತ್ಕಾಮಪಾಲೋ ವಾಸುದೇವಂ ಪರಂತಪಂ|

01212025c ಕಿಮವಾಗುಪವಿಷ್ಟೋಽಸಿ ಪ್ರೇಕ್ಷಮಾಣೋ ಜನಾರ್ದನ||

ಆಗ ಕಾಮಪಾಲನು ಪರಂತಪ ವಾಸುದೇವನನ್ನುದ್ದೇಶಿಸಿ ಹೇಳಿದನು: “ಜನಾರ್ದನ! ನೀನು ಏಕೆ ಏನನ್ನೂ ಹೇಳದೇ ಇಲ್ಲಿಯೇ ನೋಡುತ್ತಾ ಕುಳಿತಿದ್ದೀಯೆ.

01212026a ಸತ್ಕೃತಸ್ತ್ವತ್ಕೃತೇ ಪಾರ್ಥಃ ಸರ್ವೈರಸ್ಮಾಭಿರಚ್ಯುತ|

01212026c ನ ಚ ಸೋಽರ್ಹತಿ ತಾಂ ಪೂಜಾಂ ದುರ್ಬುದ್ಧಿಃ ಕುಲಪಾಂಸನಃ||

ಅಚ್ಯುತ! ನಿನ್ನ ಕಾರಣದಿಂದಲೇ ನಾವೆಲ್ಲರೂ ಪಾರ್ಥನನ್ನು ಇಲ್ಲಿಗೆ ಬರಮಾಡಿಸಿಕೊಂಡೆವು. ಆ ದುರ್ಬುದ್ಧಿ ಕುಲಪಾಪಿಯು ನಮ್ಮ ಈ ಗೌರವಕ್ಕೆ ಅರ್ಹನಿರಲಿಲ್ಲ!

01212027a ಕೋ ಹಿ ತತ್ರೈವ ಭುಕ್ತ್ವಾನ್ನಂ ಭಾಜನಂ ಭೇತ್ತುಮರ್ಹತಿ|

01212027c ಮನ್ಯಮಾನಃ ಕುಲೇ ಜಾತಂ ಆತ್ಮಾನಂ ಪುರುಷಃ ಕ್ವ ಚಿತ್||

ತಾನು ಒಂದು ಒಳ್ಳೆಯ ಕುಲದಲ್ಲಿ ಹುಟ್ಟಿದವನೆಂದು ತಿಳಿಯುವ ಯಾವ ಪುರುಷನು ತಾನೆ ಊಟಮಾಡಿದ ತಟ್ಟೆಯನ್ನು ಸ್ವಯಂ ಒಡೆಯುತ್ತಾನೆ?

01212028a ಈಪ್ಸಮಾನಶ್ಚ ಸಂಬಂಧಂ ಕೃತಪೂರ್ವಂ ಚ ಮಾನಯನ್|

01212028c ಕೋ ಹಿ ನಾಮ ಭವೇನಾರ್ಥೀ ಸಾಹಸೇನ ಸಮಾಚರೇತ್||

ಸಂಬಂಧವನ್ನು ಬೆಳೆಸಲು ಮತ್ತು ಹಿಂದೆ ಮಾಡಿದ ಉಪಕಾರಗಳನ್ನು ಗೌರವಿಸಿ ಬಂದ ಯಾರುತಾನೇ ಈ ರೀತಿಯ ಸಾಹಸವನ್ನು ಮಾಡಬಲ್ಲರು?

01212029a ಸೋಽವಮನ್ಯ ಚ ನಾಮಾಸ್ಮಾನನಾದೃತ್ಯ ಚ ಕೇಶವಂ|

01212029c ಪ್ರಸಹ್ಯ ಹೃತವಾನದ್ಯ ಸುಭದ್ರಾಂ ಮೃತ್ಯುಮಾತ್ಮನಃ||

ಸುಭದ್ರೆಯನ್ನು ಬಲವಂತವಾಗಿ ಅಪಹರಿಸಿ ಅವನು ನಮ್ಮ ಮೇಲೆ ಮತ್ತು ಕೇಶವನ ಮೇಲೆ ಅವನಿಗಿರುವ ಅಸಹ್ಯಭಾವನೆಯನ್ನು ತೋರಿಸಿ ಅಪಮಾನ ಮಾಡಿದ್ದಾನೆ ಮತ್ತು ತನ್ನ ಮೃತ್ಯುವನ್ನು ಬಯಸಿದ್ದಾನೆ.

01212030a ಕಥಂ ಹಿ ಶಿರಸೋ ಮಧ್ಯೇ ಪದಂ ತೇನ ಕೃತಂ ಮಮ|

01212030c ಮರ್ಷಯಿಷ್ಯಾಮಿ ಗೋವಿಂದ ಪಾದಸ್ಪರ್ಶಮಿವೋರಗಃ||

ಗೋವಿಂದ! ನನ್ನ ತಲೆಯ ಮೇಲೆ ಕಾಲನ್ನಿಟ್ಟ ಅವನನ್ನು ಹೇಗೆತಾನೇ ಕ್ಷಮಿಸಲಿ? ಪಾದದಿಂದ ತುಳಿಯಲ್ಪಟ್ಟ ಹಾವು ಕ್ಷಮಿಸಬಲ್ಲದೇ?

01212031a ಅದ್ಯ ನಿಷ್ಕೌರವಾಮೇಕಃ ಕರಿಷ್ಯಾಮಿ ವಸುಂಧರಾಂ|

01212031c ನ ಹಿ ಮೇ ಮರ್ಷಣೀಯೋಽಯಮರ್ಜುನಸ್ಯ ವ್ಯತಿಕ್ರಮಃ||

ಇಂದು ನಾನೊಬ್ಬನೇ ವಸುಧೆಯಲ್ಲಿ ಕೌರವರೇ ಇಲ್ಲದಂತೆ ಮಾಡುತ್ತೇನೆ. ಅರ್ಜುನನ ಈ ಅತಿಕ್ರಮವನ್ನು ನಾನು ಸಹಿಸಲಾರೆ!”

01212032a ತಂ ತಥಾ ಗರ್ಜಮಾನಂ ತು ಮೇಘದುಂದುಭಿನಿಃಸ್ವನಂ|

01212032c ಅನ್ವಪದ್ಯಂತ ತೇ ಸರ್ವೇ ಭೋಜವೃಷ್ಣ್ಯಂಧಕಾಸ್ತದಾ||

ಮೇಘದುಂದುಭಿಯಂತೆ ಗರ್ಜಸುತ್ತಿರುವ ಅವನನ್ನು ಸರ್ವ ಭೋಜ ವೃಷ್ಣಿ ಅಂಧಕರೂ ಅನುಮೋದಿಸಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸುಭದ್ರಾಹರಣಪರ್ವಣಿ ಬಲದೇವಕ್ರೋಧೇ ದ್ವಾದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಸುಭದ್ರಾಹರಣಪರ್ವದಲ್ಲಿ ಬಲರಾಮಕ್ರೊಧ ಎನ್ನುವ ಇನ್ನೂರಾ ಹನ್ನೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸುಭದ್ರಾಹರಣಪರ್ವಃ||

ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಸುಭದ್ರಾಹರಣಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೭/೧೦೦, ಅಧ್ಯಾಯಗಳು-೨೧೨/೧೯೯೫, ಶ್ಲೋಕಗಳು-೬೭೭೦/೭೩೭೮೪

Related image

Comments are closed.