|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಸುಭದ್ರಾಹರಣ ಪರ್ವ
೨೧೧
ರೈವತಕಗಿರಿಯ ಉತ್ಸವದಲ್ಲಿ ಸುಭದ್ರೆಯನ್ನು ನೋಡಿ ಅರ್ಜುನನು ಮೋಹಿಸಿ, ಅವಳನ್ನು ಪಡೆಯುವ ಉಪಾಯವನ್ನು ಕೃಷ್ಣನಲ್ಲಿ ಕೇಳುವುದು (೧-೨೦). ಅವಳನ್ನು ಕದ್ದುಕೊಂಡು ಹೋಗೆಂದು ಕೃಷ್ಣನು ಸಲಹೆನೀಡಲು, ಅರ್ಜುನನು ಅದಕ್ಕೆ ಯುಧಿಷ್ಠಿರನ ಅನುಮತಿಯನ್ನು ಪಡೆದಿದ್ದುದು (೨೧-೨೫).
01211001a ತತಃ ಕತಿಪಯಾಹಸ್ಯ ತಸ್ಮಿನ್ರೈವತಕೇ ಗಿರೌ|
01211001c ವೃಷ್ಣ್ಯಂಧಕಾನಾಮಭವತ್ ಸುಮಹಾನುತ್ಸವೋ ನೃಪ||
ವೈಶಂಪಾಯನನು ಹೇಳಿದನು: “ನೃಪ! ಕೆಲವು ದಿನಗಳ ನಂತರ ವೃಷ್ಣಿ ಮತ್ತು ಅಂಧಕರು ಅದೇ ರೈವತಕ ಗಿರಿಯಲ್ಲಿ ಒಂದು ಮಹಾ ಉತ್ಸವವನ್ನು ನೆರವೇರಿಸಿದರು.
01211002a ತತ್ರ ದಾನಂ ದದುರ್ವೀರಾ ಬ್ರಾಹ್ಮಣಾನಾಂ ಸಹಸ್ರಶಃ|
01211002c ಭೋಜವೃಷ್ಣ್ಯಂಧಕಾಶ್ಚೈವ ಮಹೇ ತಸ್ಯ ಗಿರೇಸ್ತದಾ||
ವೀರ ಭೋಜರು, ವೃಷ್ಣಿಗಳು ಮತ್ತು ಅಂಧಕರು ಆ ಮಹಾಗಿರಿಯಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ದಾನವನ್ನಿತ್ತರು.
01211003a ಪ್ರಾಸಾದೈ ರತ್ನಚಿತ್ರೈಶ್ಚ ಗಿರೇಸ್ತಸ್ಯ ಸಮಂತತಃ|
01211003c ಸ ದೇಶಃ ಶೋಭಿತೋ ರಾಜನ್ದೀಪವೃಕ್ಷೈಶ್ಚ ಸರ್ವಶಃ||
ರಾಜನ್! ಆ ಗಿರಿಯ ಸುತ್ತಲ ಪ್ರದೇಶವು ರತ್ನಚಿತ್ರಗಳಿಂದ ಕೂಡಿದ ಪ್ರಾಸಾದಗಳಿಂದ ಮತ್ತು ಎಲ್ಲೆಡೆಯೂ ದೀಪವೃಕ್ಷಗಳಿಂದ ಶೋಭಿತವಾಗಿತ್ತು.
01211004a ವಾದಿತ್ರಾಣಿ ಚ ತತ್ರ ಸ್ಮ ವಾದಕಾಃ ಸಮವಾದಯನ್|
01211004c ನನೃತುರ್ನರ್ತಕಾಶ್ಚೈವ ಜಗುರ್ಗಾನಾನಿ ಗಾಯನಾಃ||
ಅಲ್ಲಿ ವಾದಕರು ತಮ್ಮ ವಾದ್ಯಗಳನ್ನು ನುಡಿಸುತ್ತಿದ್ದರು, ನರ್ತಕರು ನರ್ತಿಸುತ್ತಿದ್ದರು ಮತ್ತು ಗಾಯಕರು ಗಾಯನ ಹಾಡುತ್ತಿದ್ದರು.
01211005a ಅಲಂಕೃತಾಃ ಕುಮಾರಾಶ್ಚ ವೃಷ್ಣೀನಾಂ ಸುಮಹೌಜಸಃ|
01211005c ಯಾನೈರ್ಹಾಟಕಚಿತ್ರಾಂಗೈಶ್ಚಂಚೂರ್ಯಂತೇ ಸ್ಮ ಸರ್ವಶಃ||
ಸುಮಹೌಜಸ ವೃಷ್ಣಿ ಕುಮಾರರು ಅಲಂಕೃತರಾಗಿ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ಬಂಗಾರದ ಕಡಗಗಳನ್ನು ಹಾಕಿಕೊಂಡು ಎಲ್ಲ ಕಡೆ ಓಡಾಡುತ್ತಿದ್ದರು.
01211006a ಪೌರಾಶ್ಚ ಪಾದಚಾರೇಣ ಯಾನೈರುಚ್ಚಾವಚೈಸ್ತಥಾ|
01211006c ಸದಾರಾಃ ಸಾನುಯಾತ್ರಾಶ್ಚ ಶತಶೋಽಥ ಸಹಸ್ರಶಃ||
ಪೌರರು ತಮ್ಮ ಪತ್ನಿಯರು ಮತ್ತು ಅನುಚರರೊಂದಿಗೆ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ನಡೆಯುತ್ತ ಅಥವಾ ವಾಹನಗಳಲ್ಲಿ ಹೊರಬಂದಿದ್ದರು.
01211007a ತತೋ ಹಲಧರಃ ಕ್ಷೀಬೋ ರೇವತೀಸಹಿತಃ ಪ್ರಭುಃ|
01211007c ಅನುಗಮ್ಯಮಾನೋ ಗಂಧರ್ವೈರಚರತ್ತತ್ರ ಭಾರತ||
ಭಾರತ! ಅಲ್ಲಿ ಸಂಗೀತಗಾರರು ಹಿಂಬಾಲಿಸಿಬರುತ್ತಿರಲು ಎತ್ತರವಾಗಿದ್ದ ಪ್ರಭು ಹಲಧರನು ಕುಡಿದು ಮತ್ತನಾಗಿ ರೇವತಿಯ ಸಹಿತ ತಿರುಗಾಡುತ್ತಿದ್ದನು.
01211008a ತಥೈವ ರಾಜಾ ವೃಷ್ಣೀನಾಮುಗ್ರಸೇನಃ ಪ್ರತಾಪವಾನ್|
01211008c ಉಪಗೀಯಮಾನೋ ಗಂಧರ್ವೈಃ ಸ್ತ್ರೀಸಹಸ್ರಸಹಾಯವಾನ್||
ಅಲ್ಲಿ ವೃಷ್ಣಿಗಳ ರಾಜ ಪ್ರತಾಪವಾನ್ ಉಗ್ರಸೇನನೂ ತನ್ನ ಸಹಸ್ರ ಪತ್ನಿಯರೊಂದಿಗೆ ಗಂಧರ್ವರಿಂದ ರಂಜಿಸಿಕೊಳ್ಳುತ್ತಾ ಇದ್ದನು.
01211009a ರೌಕ್ಮಿಣೇಯಶ್ಚ ಸಾಂಬಶ್ಚ ಕ್ಷೀಬೌ ಸಮರದುರ್ಮದೌ|
01211009c ದಿವ್ಯಮಾಲ್ಯಾಂಬರಧರೌ ವಿಜಹ್ರಾತೇಽಮರಾವಿವ||
ದಿವ್ಯಮಾಲಾಂಬರಗಳನ್ನು ಧರಿಸಿ ಕುಡಿದ ಅಮಲಿನಲ್ಲಿ ಸಮರದುರ್ಮದರಾಗಿದ್ದ ರೌಕ್ಮಿಣೇಯ-ಸಾಂಬರಿಬ್ಬರೂ ಅಮಲಿನಲ್ಲಿ ಅಮರರಂತೆ ವಿಹರಿಸುತ್ತಿದ್ದರು.
01211010a ಅಕ್ರೂರಃ ಸಾರಣಶ್ಚೈವ ಗದೋ ಭಾನುರ್ವಿಡೂರಥಃ|
01211010c ನಿಶಠಶ್ಚಾರುದೇಷ್ಣಶ್ಚ ಪೃಥುರ್ವಿಪೃಥುರೇವ ಚ||
01211011a ಸತ್ಯಕಃ ಸಾತ್ಯಕಿಶ್ಚೈವ ಭಂಗಕಾರಸಹಾಚರೌ|
01211011c ಹಾರ್ದಿಕ್ಯಃ ಕೃತವರ್ಮಾ ಚ ಯೇ ಚಾನ್ಯೇ ನಾನುಕೀರ್ತಿತಾಃ||
01211012a ಏತೇ ಪರಿವೃತಾಃ ಸ್ತ್ರೀಭಿರ್ಗಂಧರ್ವೈಶ್ಚ ಪೃಥಕ್ ಪೃಥಕ್|
01211012c ತಮುತ್ಸವಂ ರೈವತಕೇ ಶೋಭಯಾಂ ಚಕ್ರಿರೇ ತದಾ||
ಅಕ್ರೂರ, ಸಾರಣ, ಗದ, ಭಾನು, ವಿಡೂರಥ, ನಿಶಠ, ಚಾರುದೇಷ್ಣ, ಪೃಥು, ವಿಪೃಥು, ಸತ್ಯಕ, ಸಾತ್ಯಕಿ, ಭಂಗಕಾರ, ಸಹಾಚರ, ಹಾರ್ದಿಕ್ಯ ಕೃತವರ್ಮ ಮತ್ತು ಇನ್ನೂ ಇತರರು ಯಾರ ಹೆಸರನ್ನು ಹೇಳಲಿಲ್ಲ ಎಲ್ಲರೂ ತಮ್ಮ ತಮ್ಮ ಸ್ತ್ರೀಯರು ಮತ್ತು ಗಾಯಕರಿಂದ ಸುತ್ತುವರೆಯಲ್ಪಟ್ಟು ರೈತಕದಲ್ಲಿ ನಡೆಯುತ್ತಿದ್ದ ಆ ಉತ್ಸವದ ಶೋಭೆಯನ್ನು ಹೆಚ್ಚಿಸಿದರು.
01211013a ತದಾ ಕೋಲಾಹಲೇ ತಸ್ಮಿನ್ವರ್ತಮಾನೇ ಮಹಾಶುಭೇ|
01211013c ವಾಸುದೇವಶ್ಚ ಪಾರ್ಥಶ್ಚ ಸಹಿತೌ ಪರಿಜಗ್ಮತುಃ||
01211014a ತತ್ರ ಚಂಕ್ರಮ್ಯಮಾಣೌ ತೌ ವಾಸುದೇವಸುತಾಂ ಶುಭಾಂ|
01211014c ಅಲಂಕೃತಾಂ ಸಖೀಮಧ್ಯೇ ಭದ್ರಾಂ ದದೃಶತುಸ್ತದಾ||
ಆ ಮಹಾಶುಭ ಕೋಲಾಹಲವು ನಡೆಯುತ್ತಿರಲು ವಾಸುದೇವ ಮತ್ತು ಪಾರ್ಥರು ಒಟ್ಟಿಗೇ ನಡೆಯುತ್ತಿದ್ದರು ಮತ್ತು ಅಲ್ಲಿ ನಡೆಯುತ್ತಿರುವಾಗ ಅಲಂಕೃತಳಾಗಿ ಸಖಿಗಳ ಮಧ್ಯದಲ್ಲಿದ್ದ ವಸುದೇವನ ಸುಂದರ ಮಗಳು ಭದ್ರೆಯನ್ನು ನೋಡಿದರು.
01211015a ದೃಷ್ಟ್ವೈವ ತಾಮರ್ಜುನಸ್ಯ ಕಂದರ್ಪಃ ಸಮಜಾಯತ|
01211015c ತಂ ತಥೈಕಾಗ್ರಮನಸಂ ಕೃಷ್ಣಃ ಪಾರ್ಥಮಲಕ್ಷಯತ್||
ಅವಳನ್ನು ನೋಡಿದೊಡನೆಯೇ ಅರ್ಜುನನು ಅವಳಲ್ಲಿ ಅನುರಕ್ತನಾದನು. ಪಾರ್ಥನು ಅವಳಲ್ಲಿಯೇ ಏಕಾಗ್ರಮನಸ್ಕನಾಗಿದ್ದುದನ್ನು ಕೃಷ್ಣನು ಗಮನಿಸಿದನು.
01211016a ಅಥಾಬ್ರವೀತ್ಪುಷ್ಕರಾಕ್ಷಃ ಪ್ರಹಸನ್ನಿವ ಭಾರತ|
01211016c ವನೇಚರಸ್ಯ ಕಿಮಿದಂ ಕಾಮೇನಾಲೋಡ್ಯತೇ ಮನಃ||
ಭಾರತ! ಆಗ ಪುಷ್ಕರಾಕ್ಷನು ನಗುತ್ತಾ ಹೇಳಿದನು: “ವನಚರನ ಮನಸ್ಸು ಕಾಮದಿಂದ ಏರು ಪೇರಾಗುತ್ತಿದೆಯೇ?
01211017a ಮಮೈಷಾ ಭಗಿನೀ ಪಾರ್ಥ ಸಾರಣಸ್ಯ ಸಹೋದರಾ|
01211017c ಸುಭದ್ರಾ ನಾಮ ಭಂದ್ರಂ ತೇ ಪಿತುರ್ಮೇ ದಯಿತಾ ಸುತಾ|
01211017e ಯದಿ ತೇ ವರ್ತತೇ ಬುದ್ಧಿರ್ವಕ್ಷ್ಯಾಮಿ ಪಿತರಂ ಸ್ವಯಮ್||
ಪಾರ್ಥ! ನಿನಗೆ ಮಂಗಳವಾಗಲಿ! ಅವಳು ಸಾರಣನ ಸಹೋದರಿ ಮತ್ತು ನನ್ನ ತಂಗಿ. ಸುಭದ್ರಾ ಎಂಬ ಹೆಸರಿನವಳು. ನನ್ನ ತಂದೆಯ ಹಿರಿಯ ಮಗಳು. ನಿನ್ನ ಮನಸ್ಸು ಅವಳಲ್ಲಿದೆ ಎಂದಾದರೆ ಸ್ವಯಂ ನಾನೇ ತಂದೆಯಲ್ಲಿ ಮಾತನಾಡುತ್ತೇನೆ.”
01211018 ಅರ್ಜುನ ಉವಾಚ|
01211018a ದುಹಿತಾ ವಸುದೇವಸ್ಯ ವಾಸುದೇವಸ್ಯ ಚ ಸ್ವಸಾ|
01211018c ರೂಪೇಣ ಚೈವ ಸಂಪನ್ನಾ ಕಮಿವೈಷಾ ನ ಮೋಹಯೇತ್||
ಅರ್ಜುನನು ಹೇಳಿದನು: “ರೂಪಸಂಪನ್ನಳಾದ ಈ ವಸುದೇವನ ಮಗಳು ಮತ್ತು ವಾಸುದೇವನ ತಂಗಿಯನ್ನು ಯಾರು ತಾನೇ ಮೋಹಿಸುವುದಿಲ್ಲ?
01211019a ಕೃತಮೇವ ತು ಕಲ್ಯಾಣಂ ಸರ್ವಂ ಮಮ ಭವೇದ್ಧ್ರುವಂ|
01211019c ಯದಿ ಸ್ಯಾನ್ಮಮ ವಾರ್ಷ್ಣೇಯೀ ಮಹಿಷೀಯಂ ಸ್ವಸಾ ತವ||
ನಿನ್ನ ತಂಗಿ ವಾರ್ಷ್ಣೇಯಿಯು ನನ್ನ ಮಹಿಷಿಯಾಗುತ್ತಾಳೆಂದರೆ ನಾನು ಎಲ್ಲ ಒಳ್ಳೆಯ ಕೆಲಸಗಳನ್ನೂ ಮಾಡಿರಬೇಕು.
01211020a ಪ್ರಾಪ್ತೌ ತು ಕ ಉಪಾಯಃ ಸ್ಯಾತ್ತದ್ಬ್ರವೀಹಿ ಜನಾರ್ದನ|
01211020c ಆಸ್ಥಾಸ್ಯಾಮಿ ತಥಾ ಸರ್ವಂ ಯದಿ ಶಕ್ಯಂ ನರೇಣ ತತ್||
ಜನಾರ್ದನ! ಅವಳನ್ನು ಪಡೆಯುವ ಉಪಾಯವೇನು ಹೇಳು. ಮನುಷ್ಯನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ.”
01211021 ವಾಸುದೇವ ಉವಾಚ|
01211021a ಸ್ವಯಂವರಃ ಕ್ಷತ್ರಿಯಾಣಾಂ ವಿವಾಹಃ ಪುರುಷರ್ಷಭ|
01211021c ಸ ಚ ಸಂಶಯಿತಃ ಪಾರ್ಥ ಸ್ವಭಾವಸ್ಯಾನಿಮಿತ್ತತಃ||
ವಾಸುದೇವನು ಹೇಳಿದನು: “ಪುರುಷರ್ಷಭ! ಪಾರ್ಥ! ಸ್ವಯಂವರವೇ ಕ್ಷತ್ರಿಯರ ವಿವಾಹ. ಆದರೆ ಅದು ಸಂಶಯಯುಕ್ತವಾದುದು ಏಕೆಂದರೆ ಅದರ ಫಲಿತಾಂಶವು ಭಾವನೆಗಳ ಮೇಲೆ ಅವಲಂಬಿಸಿಲ್ಲ.
01211022a ಪ್ರಸಹ್ಯ ಹರಣಂ ಚಾಪಿ ಕ್ಷತ್ರಿಯಾಣಾಂ ಪ್ರಶಸ್ಯತೇ|
01211022c ವಿವಾಹಹೇತೋಃ ಶೂರಾಣಾಮಿತಿ ಧರ್ಮವಿದೋ ವಿದುಃ||
ಬಲವಂತಾಗಿ ಕದ್ದುಕೊಂಡು ಹೋಗುವುದೂ ಶೂರ ಕ್ಷತ್ರಿಯರ ವಿವಾಹವಾಗಬಹುದು ಎಂದು ಧರ್ಮವಿದರು ಹೇಳುತ್ತಾರೆ.
01211023a ಸ ತ್ವಮರ್ಜುನ ಕಲ್ಯಾಣೀಂ ಪ್ರಸಹ್ಯ ಭಗಿನೀಂ ಮಮ|
01211023c ಹರ ಸ್ವಯಂವರೇ ಹ್ಯಸ್ಯಾಃ ಕೋ ವೈ ವೇದ ಚಿಕೀರ್ಷಿತಂ||
ಅರ್ಜುನ! ನನ್ನ ತಂಗಿ ಕಲ್ಯಾಣಿಯನ್ನು ಕದ್ದುಕೊಂಡು ಹೋಗು. ಸ್ವಯಂವರದಲ್ಲಿ ಅವಳ ಬಯಕೆಗಳು ಏನೋ ತಿಳಿದಿಲ್ಲ.””
01211024 ವೈಶಂಪಾಯನ ಉವಾಚ|
01211024a ತತೋಽರ್ಜುನಶ್ಚ ಕೃಷ್ಣಶ್ಚ ವಿನಿಶ್ಚಿತ್ಯೇತಿಕೃತ್ಯತಾಂ|
01211024c ಶೀಘ್ರಗಾನ್ಪುರುಷಾನ್ರಾಜನ್ಪ್ರೇಷಯಾಮಾಸತುಸ್ತದಾ||
01211025a ಧರ್ಮರಾಜಾಯ ತತ್ಸರ್ವಮಿಂದ್ರಪ್ರಸ್ಥಗತಾಯ ವೈ|
01211025c ಶ್ರುತ್ವೈವ ಚ ಮಹಾಬಾಹುರನುಜಜ್ಞೇ ಸ ಪಾಂಡವಃ||
ವೈಶಂಪಾಯನನು ಹೇಳಿದನು: “ರಾಜನ್! ಅರ್ಜುನ-ಕೃಷ್ಣರು ಆ ನಿಶ್ಚಯವನ್ನು ಮಾಡಿ ಶೀಘ್ರಗ ಜನರನ್ನು ಇಂದ್ರಪ್ರಸ್ಥದಲ್ಲಿದ್ದ ಧರ್ಮರಾಜನಲ್ಲಿಗೆ ಕಳುಹಿಸಿದರು. ವಿಷಯವನ್ನು ಕೇಳಿದೊಡನೆಯೇ ಮಹಾಬಾಹು ಪಾಂಡವನು ತನ್ನ ಒಪ್ಪಿಗೆಯನ್ನು ನೀಡಿದನು.
01211025a ಭೀಮಸೇನಸ್ತು ತಚ್ಛೃತ್ತ್ವಾ ಕೃತಕೃತ್ಯೋಽಭ್ಯಮನ್ಯತ|
01211025c ಇತ್ಯೇವಂ ಮನುಜೈಃ ಸಾರ್ಧಮುಕ್ತ್ವಾ ಪ್ರೀತಿಮುಪೇಯಿವಾನ್||
ಭೀಮಸೇನನು ಇದನ್ನು ಕೇಳಿ ಕೃತಕೃತ್ಯನಾದಂತೆ ಭಾವಿಸಿದನು. ಇತರರೊಡನೆ ಈ ವಿಷಯವನ್ನು ಹೇಳಿಕೊಂಡು ಸಂತಸ ಪಟ್ಟನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸುಭದ್ರಾಹರಣಪರ್ವಣಿ ಯುಧಿಷ್ಠಿರಾನುಜ್ಞಾಯಾಂ ಏಕಾದಶಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಸುಭದ್ರಾಹರಣಪರ್ವದಲ್ಲಿ ಯುಧಿಷ್ಠಿರನ ಅನುಜ್ಞೆ ಎನ್ನುವ ಇನ್ನೂರಾ ಹನ್ನೊಂದನೆಯ ಅಧ್ಯಾಯವು.
[1]ಶ್ರೀಮದ್ಭಾಗವತದ ದಶಮ ಸ್ಕಂದದ ೮೬ನೆಯ ಅಧ್ಯಾಯದಲ್ಲಿ ಬರುವ ಸುಭದ್ರಾ ವಿವಾಹ ಪ್ರಸಂಗವು ಮಹಾಭಾರತದ ಈ ಪರ್ವದಲ್ಲಿ ಇರುವುದಕ್ಕಿಂತ ಸ್ವಲ್ಪ ಬೇರೆಯದಾಗಿದೆ.