Adi Parva: Chapter 209

ಆದಿ ಪರ್ವ: ಅರ್ಜುನವನವಾಸ ಪರ್ವ

೨೦೯

ಅರ್ಜುನನು ಐವರು ಅಪ್ಸರೆಯರಿಗೂ ಶಾಪವಿಮೋಚನೆ ಮಾಡಿದುದು (೧-೨೩).  ಅರ್ಜುನನು ಮಣಲೂರಪುರಕ್ಕೆ ಹೋಗಿ ಅಲ್ಲಿ ಪತ್ನಿ ಚಿತ್ರಾಂಗದೆ ಮತ್ತು ಮಗ ಬಭ್ರುವಾಹನನನ್ನು ಕಂಡು ತೀರ್ಥಯಾತ್ರೆಯನ್ನು ಮುಂದುವರೆಸಿದುದು (೨೪).

01209001 ವರ್ಗೋವಾಚ|

01209001a ತತೋ ವಯಂ ಪ್ರವ್ಯಥಿತಾಃ ಸರ್ವಾ ಭರತಸತ್ತಮ|

01209001c ಆಯಾಮ ಶರಣಂ ವಿಪ್ರಂ ತಂ ತಪೋಧನಮಚ್ಯುತಂ||

ವರ್ಗೆಯು ಹೇಳಿದಳು: “ಭರತಸತ್ತಮ! ವ್ಯಥಿತರಾದ ನಾವೆಲ್ಲರೂ ಆ ತಪೋಧನ, ಅಚ್ಯುತ ವಿಪ್ರನ ಶರಣು ಹೋದೆವು.

01209002a ರೂಪೇಣ ವಯಸಾ ಚೈವ ಕಂದರ್ಪೇಣ ಚ ದರ್ಪಿತಾಃ|

01209002c ಅಯುಕ್ತಂ ಕೃತವತ್ಯಃ ಸ್ಮ ಕ್ಷಂತುಮರ್ಹಸಿ ನೋ ದ್ವಿಜ||

“ನಮ್ಮ ರೂಪ, ಯೌವನ, ಮತ್ತು ಕಂದರ್ಪನಿಂದ ದರ್ಪಿತರಾದ ನಾವು ಈ ಅಯುಕ್ತ ಕಾರ್ಯವನ್ನೆಸಗಿದ್ದೇವೆ. ದ್ವಿಜ! ನಮ್ಮನ್ನು ಕ್ಷಮಿಸಬೇಕು.

01209003a ಏಷ ಏವ ವಧೋಽಸ್ಮಾಕಂ ಸುಪರ್ಯಾಪ್ತಸ್ತಪೋಧನ|

01209003c ಯದ್ವಯಂ ಸಂಶಿತಾತ್ಮಾನಂ ಪ್ರಲೋಬ್ಧುಂ ತ್ವಾಮಿಹಾಗತಾಃ||

ತಪೋಧನ! ನಮ್ಮ ಸಾವಿನ ಕಾಲಬಂದಿದೆಯೆಂದೇ ನಾವು ಸಂಶಿತಾತ್ಮ ನಿನ್ನನ್ನು ಪ್ರಲೋಭಿಸಿಸಲು ಬಂದಿರುವಂತಿದೆ.

01209004a ಅವಧ್ಯಾಸ್ತು ಸ್ತ್ರಿಯಃ ಸೃಷ್ಟಾ ಮನ್ಯಂತೇ ಧರ್ಮಚಿಂತಕಾಃ|

01209004c ತಸ್ಮಾದ್ಧರ್ಮೇಣ ಧರ್ಮಜ್ಞ ನಾಸ್ಮಾನ್ ಹಿಂಸಿತುಮರ್ಹಸಿ||

ಆದರೆ ಧರ್ಮಚಿಂತಕರು ಸ್ತ್ರೀಯರನ್ನು ಕೊಲ್ಲಬಾರದೆಂದು ಹೇಳುತ್ತಾರೆ. ಆದುದರಿಂದ ಧರ್ಮಜ್ಞನಾದ ನೀನು ಧರ್ಮಪ್ರಕಾರವಾಗಿ ನಮ್ಮನ್ನು ಹಿಂಸಿಸಬಾರದು.

01209005a ಸರ್ವಭೂತೇಷು ಧರ್ಮಜ್ಞ ಮೈತ್ರೋ ಬ್ರಾಹ್ಮಣ ಉಚ್ಯತೇ|

01209005c ಸತ್ಯೋ ಭವತು ಕಲ್ಯಾಣ ಏಷ ವಾದೋ ಮನೀಷಿಣಾಂ||

ಸರ್ವಭೂತಗಳ ಮಿತ್ರ ಧರ್ಮಜ್ಞನೇ ಬ್ರಾಹ್ಮಣನೆಂದು ಹೇಳುತ್ತಾರೆ. ಮನೀಷಿಗಳ ಈ ಕಲ್ಯಾಣಕರ ಮಾತನ್ನು ಸತ್ಯವನ್ನಾಗಿಸು.

01209006a ಶರಣಂ ಚ ಪ್ರಪನ್ನಾನಾಂ ಶಿಷ್ಟಾಃ ಕುರ್ವಂತಿ ಪಾಲನಂ|

01209006c ಶರಣಂ ತ್ವಾಂ ಪ್ರಪನ್ನಾಃ ಸ್ಮ ತಸ್ಮಾತ್ತ್ವಂ ಕ್ಷಂತುಮರ್ಹಸಿ||

ಶಿಷ್ಟರು ಶರಣುಬಂದ ಪ್ರಪನ್ನರನ್ನು ಪಾಲಿಸುತ್ತಾರೆ. ನಾವು ನಿನ್ನ ಶರಣು ಬಂದ ಪ್ರಪನ್ನರು. ನೀನು ನಮ್ಮನ್ನು ಕ್ಷಮಿಸಬೇಕು.”

01209007a ಏವಮುಕ್ತಸ್ತು ಧರ್ಮಾತ್ಮಾ ಬ್ರಾಹ್ಮಣಃ ಶುಭಕರ್ಮಕೃತ್|

01209007c ಪ್ರಸಾದಂ ಕೃತವಾನ್ವೀರ ರವಿಸೋಮಸಮಪ್ರಭಃ||

ವೀರ! ಈ ಮಾತುಗಳನ್ನು ಕೇಳಿದ ರವಿಸೋಮಸಮಪ್ರಭ ಶುಭಕರ್ಮಿ ಧರ್ಮಾತ್ಮ ಬ್ರಾಹ್ಮಣನು ಪ್ರಸನ್ನನಾದನು.

01209008 ಬ್ರಾಹ್ಮಣ ಉವಾಚ|

01209008a ಶತಂ ಸಹಸ್ರಂ ವಿಶ್ವಂ ಚ ಸರ್ವಮಕ್ಷಯವಾಚಕಂ|

01209008c ಪರಿಮಾಣಂ ಶತಂ ತ್ವೇತನ್ನೈತದಕ್ಷಯವಾಚಕಂ||

ಬ್ರಾಹ್ಮಣನು ಹೇಳಿದನು: “ನೂರು, ಸಾವಿರ, ಎನ್ನುವ ಶಬ್ಧಗಳು ಯಾವಾಗಲೂ ಅಕ್ಷಯವಾಚಕಗಳು[1]. ಆದರೆ ನನ್ನ ಶತ ಪರಿಮಾಣವು ಅಕ್ಷಯವಾಚಕವಲ್ಲ.

01209009a ಯದಾ ಚ ವೋ ಗ್ರಾಹಭೂತಾ ಗೃಹ್ಣಂತೀಃ ಪುರುಷಾಂಜಲೇ|

01209009c ಉತ್ಕರ್ಷತಿ ಜಲಾತ್ಕಶ್ಚಿತ್ ಸ್ಥಲಂ ಪುರುಷಸತ್ತಮಃ||

01209010a ತದಾ ಯೂಯಂ ಪುನಃ ಸರ್ವಾಃ ಸ್ವರೂಪಂ ಪ್ರತಿಪತ್ಸ್ಯಥ|

01209010c ಅನೃತಂ ನೋಕ್ತಪೂರ್ವಂ ಮೇ ಹಸತಾಪಿ ಕದಾ ಚನ||

ಯಾವಾಗ ನೀವು ಮೊಸಳೆಗಳಾಗಿ ಪುರುಷರನ್ನು ನೀರಿಗೆ ಎಳೆಯುತ್ತೀರೋ ಆಗ ಪುರುಷಸತ್ತಮನೋರ್ವನು ನಿಮ್ಮನ್ನು ಜಲದಿಂದ ಮೇಲಕ್ಕೆ ಎಳೆದಾಗ ನೀವು ಎಲ್ಲವರೂ ಅದೇ ಸ್ಥಳದಲ್ಲಿ ಪುನಃ ಸ್ವರೂಪವನ್ನು ಹೊಂದುತ್ತೀರಿ. ಈ ಹಿಂದೆ ನಾನು ಎಂದೂ ಹಾಸ್ಯಕ್ಕಾಗಿಯೂ ಸುಳ್ಳನ್ನು ಹೇಳಿಲ್ಲ.

01209011a ತಾನಿ ಸರ್ವಾಣಿ ತೀರ್ಥಾನಿ ಇತಃ ಪ್ರಭೃತಿ ಚೈವ ಹ|

01209011c ನಾರೀತೀರ್ಥಾನಿ ನಾಮ್ನೇಹ ಖ್ಯಾತಿಂ ಯಾಸ್ಯಂತಿ ಸರ್ವಶಃ|

01209011e ಪುಣ್ಯಾನಿ ಚ ಭವಿಷ್ಯಂತಿ ಪಾವನಾನಿ ಮನೀಷಿಣಾಂ||

ಇಂದಿನಿಂದ ಈ ಎಲ್ಲ ತೀರ್ಥಗಳೂ ನಾರೀ ತೀರ್ಥಗಳೆಂಬ ಹೆಸರಿನಿಂದ ಖ್ಯಾತಿ ಹೊಂದುತ್ತವೆ. ಅವುಗಳು ಮನೀಷಿಗಳಿಗೆ ಪುಣ್ಯ ಮತ್ತು ಪಾವನಗಳೆನಿಸುತ್ತವೆ.””

01209012 ವರ್ಗೋವಾಚ|

01209012a ತತೋಽಭಿವಾದ್ಯ ತಂ ವಿಪ್ರಂ ಕೃತ್ವಾ ಚೈವ ಪ್ರದಕ್ಷಿಣಂ|

01209012c ಅಚಿಂತಯಾಮೋಪಸೃತ್ಯ ತಸ್ಮಾದ್ದೇಶಾತ್ಸುದುಃಖಿತಾಃ||

01209013a ಕ್ವ ನು ನಾಮ ವಯಂ ಸರ್ವಾಃ ಕಾಲೇನಾಲ್ಪೇನ ತಂ ನರಂ|

01209013c ಸಮಾಗಚ್ಛೇಮ ಯೋ ನಸ್ತದ್ರೂಪಮಾಪಾದಯೇತ್ಪುನಃ||

ವರ್ಗೆಯು ಹೇಳಿದಳು: “ನಂತರ ನಾವು ಆ ವಿಪ್ರನ ಪ್ರದಕ್ಷಿಣೆ ಮಾಡಿ, ಅಭಿವಂದಿಸಿ ಅವನಿಂದ ಬೀಳ್ಕೊಂಡು, ದುಃಖಿತರಾಗಿ “ನಮ್ಮ ಸ್ವದ್ರೂಪವನ್ನು ಪುನಃ ನೀಡುವ ಆ ನರನು ಯಾರು? ಅವನ ಹೆಸರೇನು? ಅವನು ಯಾವಾಗ ಬರುತ್ತಾನೆ?” ಎಂದು ಚಿಂತಿಸಿದೆವು.

01209014a ತಾ ವಯಂ ಚಿಂತಯಿತ್ವೈವಂ ಮುಹೂರ್ತಾದಿವ ಭಾರತ|

01209014c ದೃಷ್ಟವತ್ಯೋ ಮಹಾಭಾಗಂ ದೇವರ್ಷಿಮುತ ನಾರದ||

ಭಾರತ! ನಾವು ಹೀಗೆ ಚಿಂತಿಸುತ್ತಿರುವಾಗ ತಕ್ಷಣವೇ ಮಹಾಭಾಗ ದೇವರ್ಷಿ ನಾರದನನ್ನು ಕಂಡೆವು.

01209015a ಸರ್ವಾ ಹೃಷ್ಟಾಃ ಸ್ಮ ತಂ ದೃಷ್ಟ್ವಾ ದೇವರ್ಷಿಮಮಿತದ್ಯುತಿಂ|

01209015c ಅಭಿವಾದ್ಯ ಚ ತಂ ಪಾರ್ಥ ಸ್ಥಿತಾಃ ಸ್ಮ ವ್ಯಥಿತಾನನಾಃ||

ಪಾರ್ಥ! ಆ ದೇವರ್ಷಿ ಅಮಿತದ್ಯುತಿಯನ್ನು ಕಂಡು ನಾವೆಲ್ಲರೂ ಹೃಷ್ಟರಾಗಿ ಅವನನ್ನು ಅಭಿನಂದಿಸಿ ವ್ಯಥಿತ ಮುಖಿಗಳಾಗಿ ನಿಂತೆವು.

01209016a ಸ ನೋಽಪೃಚ್ಛದ್ದುಃಖಮೂಲಮುಕ್ತವತ್ಯೋ ವಯಂ ಚ ತತ್|

01209016c ಶ್ರುತ್ವಾ ತಚ್ಚ ಯಥಾವೃತ್ತಮಿದಂ ವಚನಮಬ್ರವೀತ್||

ಅವನು ನಮ್ಮ ದುಃಖದ ಮೂಲವನ್ನು ಕೇಳಿದನು ಮತ್ತು ನಾವು ಅವನಿಗೆ ಎಲ್ಲವನ್ನೂ ಹೇಳಿದೆವು. ಅದನ್ನು ಕೇಳಿದ ಅವನು ನಮಗೆ ಈ ಮಾತುಗಳನ್ನು ಹೇಳಿದನು:

01209017a ದಕ್ಷಿಣೇ ಸಾಗರಾನೂಪೇ ಪಂಚ ತೀರ್ಥಾನಿ ಸಂತಿ ವೈ|

01209017c ಪುಣ್ಯಾನಿ ರಮಣೀಯಾನಿ ತಾನಿ ಗಚ್ಛತ ಮಾಚಿರಂ||

“ದಕ್ಷಿಣ ಸಾಗರ ತಟದಲ್ಲಿ ಐದು ತೀರ್ಥಗಳಿವೆ. ತಡಮಾಡದೇ ಆ ಪುಣ್ಯ ರಮಣೀಯ ಸ್ಥಳಕ್ಕೆ ಹೋಗಿರಿ.

01209018a ತತ್ರಾಶು ಪುರುಷವ್ಯಾಘ್ರಃ ಪಾಂಡವೋ ವೋ ಧನಂಜಯಃ|

01209018c ಮೋಕ್ಷಯಿಷ್ಯತಿ ಶುದ್ಧಾತ್ಮಾ ದುಃಖಾದಸ್ಮಾನ್ನ ಸಂಶಯಃ||

ಅಲ್ಲಿಗೆ ಪುರುಷವ್ಯಾಘ್ರ ಪಾಂಡವ ಧನಂಜಯನು ಬರುತ್ತಾನೆ ಮತ್ತು ಆ ಶುದ್ಧಾತ್ಮನು ನಿಸ್ಸಂಶಯವಾಗಿಯೂ ನಿಮ್ಮನ್ನು ನಿಮ್ಮ ಕಷ್ಟದಿಂದ ಬಿಡುಗಡೆ ಮಾಡುತ್ತಾನೆ.”

01209019a ತಸ್ಯ ಸರ್ವಾ ವಯಂ ವೀರ ಶ್ರುತ್ವಾ ವಾಕ್ಯಮಿಹಾಗತಾಃ|

01209019c ತದಿದಂ ಸತ್ಯಮೇವಾದ್ಯ ಮೋಕ್ಷಿತಾಹಂ ತ್ವಯಾನಘ||

ಅನಘ! ವೀರ! ಅವನ ಮಾತುಗಳನ್ನು ಕೇಳಿ ನಾವೆಲ್ಲರೂ ಇಲ್ಲಿಗೆ ಬಂದೆವು. ನಿನ್ನಿಂದ ನಾನು ಬಿಡುಗಡೆಹೊಂದಿದೆ ಎನ್ನುವುದು ಸತ್ಯ.

01209020a ಏತಾಸ್ತು ಮಮ ವೈ ಸಖ್ಯಶ್ಚತಸ್ರೋಽನ್ಯಾ ಜಲೇ ಸ್ಥಿತಾಃ|

01209020c ಕುರು ಕರ್ಮ ಶುಭಂ ವೀರ ಏತಾಃ ಸರ್ವಾ ವಿಮೋಕ್ಷಯ||

ಆದರೆ ನನ್ನ ಅನ್ಯ ಸಖಿಯರು ಇನ್ನೂ ಜಲದಲ್ಲಿ ಇದ್ದಾರೆ. ವೀರ! ಈ ಎಲ್ಲರನ್ನೂ ಬಿಡುಗಡೆಗೊಳಿಸುವ ಶುಭ ಕರ್ಮವನ್ನು ಮಾಡು!””

01209021 ವೈಶಂಪಾಯನ ಉವಾಚ|

01209021a ತತಸ್ತಾಃ ಪಾಂಡವಶ್ರೇಷ್ಠಃ ಸರ್ವಾ ಏವ ವಿಶಾಂ ಪತೇ|

01209021c ತಸ್ಮಾಚ್ಚಾಪಾದದೀನಾತ್ಮಾ ಮೋಕ್ಷಯಾಮಾಸ ವೀರ್ಯವಾನ್||

ವೈಶಂಪಾಯನನು ಹೇಳಿದನು: “ವಿಶಾಂಪತೇ! ನಂತರ ವೀರ್ಯವಾನ್ ಪಾಂಡವಶ್ರೇಷ್ಠನು ಆಪತ್ತಿನಲ್ಲಿದ್ದ ಆ ಎಲ್ಲ ದೀನಾತ್ಮರನ್ನೂ ಬಿಡುಗಡೆಗೊಳಿಸಿದನು

01209022a ಉತ್ಥಾಯ ಚ ಜಲಾತ್ತಸ್ಮಾತ್ಪ್ರತಿಲಭ್ಯ ವಪುಃ ಸ್ವಕಂ|

01209022c ತಾಸ್ತದಾಪ್ಸರಸೋ ರಾಜನ್ನದೃಶ್ಯಂತ ಯಥಾ ಪುರಾ||

ರಾಜನ್! ಅಪ್ಸರೆಯರು ನೀರಿನಿಂದ ಮೇಲೆದ್ದು ತಮ್ಮ ರೂಪವನ್ನು ಪಡೆದರು ಮತ್ತು ಹಿಂದಿನಂತೆಯೇ ಕಾಣತೊಡಗಿದರು.

01209023a ತೀರ್ಥಾನಿ ಶೋಧಯಿತ್ವಾ ತು ತಥಾನುಜ್ಞಾಯ ತಾಃ ಪ್ರಭುಃ|

01209023c ಚಿತ್ರಾಂಗದಾಂ ಪುನರ್ದ್ರಷ್ಟುಂ ಮಣಲೂರಪುರಂ ಯಯೌ||

ಆ ತೀರ್ಥಗಳನ್ನು ಶುದ್ಧಗೊಳಿಸಿ ಅನುಜ್ಞೆಯನ್ನು ಪಡೆದು ಪ್ರಭುವು ಚಿತ್ರಾಂಗದೆಯನ್ನು ನೋಡಲು ಮಣಲೂರಪುರಕ್ಕೆ ಪುನಃ ಹೋದನು.

01209024a ತಸ್ಯಾಮಜನಯತ್ಪುತ್ರಂ ರಾಜಾನಂ ಬಭ್ರುವಾಹನಂ|

01209024c ತಂ ದೃಷ್ಟ್ವಾ ಪಾಂಡವೋ ರಾಜನ್ಗೋಕರ್ಣಮಭಿತೋಽಗಮತ್||

ರಾಜನ್! ಅವಳಲ್ಲಿ ರಾಜ ಬಭ್ರುವಾಹನನು ಪುತ್ರನಾಗಿ ಜನಿಸಿದ್ದನು. ಅವನನ್ನು ನೋಡಿ ಪಾಂಡವನು ಗೋಕರ್ಣಕ್ಕೆ ಹೋದನು[2].”

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ತೀರ್ಥಗ್ರಾಹವಿಮೋಚನೇ ನವಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ತೀರ್ಥಗ್ರಾಹವಿಮೋಚನ ಎನ್ನುವ ಇನ್ನೂರಾಒಂಭತ್ತನೆಯ ಅಧ್ಯಾಯವು.

Related image

[1]ಸಾಧಾರಣವಾಗಿ ನೂರೆಂದರೆ ಎಷ್ಟು ನೂರು ಬೇಕಾದರೂ ಆಗಬಹುದು.

[2]ಮುಂದೆ ಅಶ್ವಮೇಧಿಕ ಪರ್ವದಲ್ಲಿ ಅರ್ಜುನನು ಚಿತ್ರಾಂಗದೆಯಲ್ಲಿ ಹುಟ್ಟಿದ ಬಭ್ರುವಾಹನನನ್ನು ಗುರಿತಿಸುವುದೇ ಇಲ್ಲ. ಮಗನನ್ನು ನೋಡಲು ಹೋಗಿದ್ದನೆಂದರೆ ಅವನಿಗೆ ಸ್ವಲ್ಪವಾದರೂ ನೆನಪಿರಬೇಕಾಗಿತ್ತು! ಕನ್ನಡ ಭಾರತ ದರ್ಶನದ ಸಂಪುಟದಲ್ಲಿ ಪಾರ್ಥನು ಚಿತ್ರವಾಹನನಿಗೆ ಹೇಳಿದ ಈ ಶ್ಲೋಕವಿದೆ: ಚಿತ್ರಾಂಗದಾಯಾಃ ಶುಲ್ಕಂ ತ್ವಂ ಗೃಹಾಣ ಬಭ್ರುವಾಹನಂ| ಅನೇನ ಚ ಭವಿಷ್ಯಾಮಿ ಋಣಾನ್ಮುಕ್ತೋ ನರಾಧಿಪ|| ಅರ್ಥಾತ್ - “ನರಾಧಿಪನೇ! ಚಿತ್ರಾಂಗದೆಗಾಗಿ ನಾನು ಕೊಡಬೇಕಾಗಿದ್ದ ಕನ್ಯಾಶುಲ್ಕರೂಪವಾಗಿ ಈ ಬಭ್ರುವಾಹನನನ್ನು ಸ್ವೀಕರಿಸು. ಇದರಿಂದ ನಾನು ಋಣಮುಕ್ತನಾಗುತ್ತೇನೆ.” ಈ ಸಂಪುಟದಲ್ಲಿ ಅರ್ಜುನನು ಚಿತ್ರಾಂಗದೆಗೆ ಇಂದಪ್ರಸ್ಥಕ್ಕೆ ಕರೆಯಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡುವ ವಿಷಯವೂ ಇದೆ.

Comments are closed.