ಆದಿ ಪರ್ವ: ಅರ್ಜುನವನವಾಸ ಪರ್ವ
೨೦೮
ಅಪ್ಸರೆಯರ ಶಾಪ ವಿಮೋಚನೆ
ಮೊಸಳೆಗಳಿವೆಯೆಂದು ವರ್ಜಿತವಾದ ಸರೋವರಕ್ಕೆ ಅರ್ಜುನನು ಧುಮುಕುವುದು (೧-೮). ಆಕ್ರಮಣ ಮಾಡಿದ ಮೊಸಳೆಯನ್ನು ಮೆಟ್ಟಿ ಮೇಲೆ ತರಲು ದಿವ್ಯರೂಪೀ ನಾರಿಯ ರೂಪವನ್ನು ತಳೆದುದು; ತಮ್ಮ ಶಾಪಕ್ಕೆ ಕಾರಣವನ್ನು ಹೇಳಿದುದು (೯-೨೧).
01208001 ವೈಶಂಪಾಯನ ಉವಾಚ|
01208001a ತತಃ ಸಮುದ್ರೇ ತೀರ್ಥಾನಿ ದಕ್ಷಿಣೇ ಭರತರ್ಷಭಃ|
01208001c ಅಭ್ಯಗಚ್ಛತ್ಸುಪುಣ್ಯಾನಿ ಶೋಭಿತಾನಿ ತಪಸ್ವಿಭಿಃ||
ವೈಶಂಪಾಯನನು ಹೇಳಿದನು: “ನಂತರ ಭರತರ್ಷಭನು ದಕ್ಷಿಣದಲ್ಲಿ ಸುಪುಣ್ಯ ತಪಸ್ವಿಗಳಿಂದ ಕೂಡಿದ ಸಮುದ್ರ ತೀರ್ಥಗಳಿಗೆ ಹೋದನು.
01208002a ವರ್ಜಯಂತಿ ಸ್ಮ ತೀರ್ಥಾನಿ ಪಂಚ ತತ್ರ ತು ತಾಪಸಾಃ|
01208002c ಆಚೀರ್ಣಾನಿ ತು ಯಾನ್ಯಾಸನ್ಪುರಸ್ತಾತ್ತು ತಪಸ್ವಿಭಿಃ||
ಅಲ್ಲಿಯ ತಪಸ್ವಿಗಳು ಐದು ತೀರ್ಥಗಳನ್ನು - ಹಿಂದೆ ತಪಸ್ವಿಗಳು ಅವುಗಳನ್ನು ಪೂಜಿಸುತ್ತಿದ್ದರೂ - ತೊರೆದಿದ್ದರು.
01208003a ಅಗಸ್ತ್ಯತೀರ್ಥಂ ಸೌಭದ್ರಂ ಪೌಲೋಮಂ ಚ ಸುಪಾವನಂ|
01208003c ಕಾರಂಧಮಂ ಪ್ರಸನ್ನಂ ಚ ಹಯಮೇಧಫಲಂ ಚ ಯತ್|
01208003e ಭಾರದ್ವಾಜಸ್ಯ ತೀರ್ಥಂ ಚ ಪಾಪಪ್ರಶಮನಂ ಮಹತ್||
ಅವುಗಳು ಅಗಸ್ತ್ಯ ತೀರ್ಥ, ಸೌಭದ್ರ, ಸುಪಾವನ ಪೌಲೋಮ, ಅಶ್ವಮೇಧ ಫಲವನ್ನು ನೀಡುವ ಪ್ರಸನ್ನ ಕಾರಂಧಮ, ಮತ್ತು ಮಹಾ ಪಾಪ ಪ್ರಮಶನ ಭರದ್ವಾಜ ತೀರ್ಥ.
01208004a ವಿವಿಕ್ತಾನ್ಯುಪಲಕ್ಷ್ಯಾಥ ತಾನಿ ತೀರ್ಥಾನಿ ಪಾಂಡವಃ|
01208004c ದೃಷ್ಟ್ವಾ ಚ ವರ್ಜ್ಯಮಾನಾನಿ ಮುನಿಭಿರ್ಧರ್ಮಬುದ್ಧಿಭಿಃ||
01208005a ತಪಸ್ವಿನಸ್ತತೋಽಪೃಚ್ಛತ್ ಪ್ರಾಂಜಲಿಃ ಕುರುನಂದನಃ|
01208005c ತೀರ್ಥಾನೀಮಾನಿ ವರ್ಜ್ಯಂತೇ ಕಿಮರ್ಥಂ ಬ್ರಹ್ಮವಾದಿಭಿಃ||
ತಪಸ್ವಿಗಳಿಂದ ತೊರೆಯಲ್ಪಟ್ಟು ನಿರ್ಜನವಾಗಿದ್ದ ಆ ತೀರ್ಥಗಳನ್ನು ನೋಡಿದ ಕುರುನಂದನ ಪಾಂಡವನು ಅಂಜಲೀ ಬದ್ಧನಾಗಿ ಅವರಲ್ಲಿ ಪ್ರಶ್ನಿಸಿದನು: “ಬ್ರಹ್ಮವಾದಿಗಳು ಈ ತೀರ್ಥಗಳನ್ನು ಏಕೆ ವರ್ಜಿಸಿದ್ದಾರೆ?”
01208006 ತಾಪಸಾ ಊಚುಃ|
01208006a ಗ್ರಾಹಾಃ ಪಂಚ ವಸಂತ್ಯೇಷು ಹರಂತಿ ಚ ತಪೋಧನಾನ್|
01208006c ಅತ ಏತಾನಿ ವರ್ಜ್ಯಂತೇ ತೀರ್ಥಾನಿ ಕುರುನಂದನ||
ತಾಪಸಿಗಳು ಹೇಳಿದರು: “ಅಲ್ಲಿ ಐದು ಮೊಸಳೆಗಳು ವಾಸಿಸುತ್ತಿವೆ ಮತ್ತು ಅವು ತಪೋಧನರನ್ನು ಹಿಡಿಯುತ್ತವೆ. ಕುರುನಂದನ! ಆದುದರಿಂದ ಈ ತೀರ್ಥಗಳು ವರ್ಜಿತವಾಗಿವೆ.””
01208007 ವೈಶಂಪಾಯನ ಉವಾಚ|
01208007a ತೇಷಾಂ ಶ್ರುತ್ವಾ ಮಹಾಬಾಹುರ್ವಾರ್ಯಮಾಣಸ್ತಪೋಧನೈಃ|
01208007c ಜಗಾಮ ತಾನಿ ತೀರ್ಥಾನಿ ದ್ರಷ್ಟುಂ ಪುರುಷಸತ್ತಮಃ||
ವೈಶಂಪಾಯನನು ಹೇಳಿದನು: “ಅವರಿಂದ ಇದನ್ನು ಕೇಳಿದ ಮಹಾಬಾಹು ಪುರುಷೋತ್ತಮನು ತಪೋಧನರು ತಡೆದರೂ ಆ ತೀರ್ಥಗಳನ್ನು ನೋಡಲು ಹೋದನು.
01208008a ತತಃ ಸೌಭದ್ರಮಾಸಾದ್ಯ ಮಹರ್ಷೇಸ್ತೀರ್ಥಮುತ್ತಮಂ|
01208008c ವಿಗಾಹ್ಯ ತರಸಾ ಶೂರಃ ಸ್ನಾನಂ ಚಕ್ರೇ ಪರಂತಪಃ||
ಆ ಶೂರ ಪರಂತಪನು ಮಹರ್ಷಿ ಸುಭದ್ರನ ತೀರ್ಥಕ್ಕೆ ಬಂದು ಸ್ನಾನಕ್ಕೆಂದು ಅತಿವೇಗದಲ್ಲಿ ಅದರಲ್ಲಿ ಧುಮುಕಿದನು.
01208009a ಅಥ ತಂ ಪುರುಷವ್ಯಾಘ್ರಮಂತರ್ಜಲಚರೋ ಮಹಾನ್|
01208009c ನಿಜಗ್ರಾಹ ಜಲೇ ಗ್ರಾಹಃ ಕುಂತೀಪುತ್ರಂ ಧನಂಜಯಂ||
ತಕ್ಷಣವೇ ನೀರಿನಲ್ಲಿ ವಾಸಿಸುತ್ತಿದ್ದ ಮಹಾ ಮೊಸಳೆಯೊಂದು ಕುಂತೀಪುತ್ರ ಧನಂಜಯನನ್ನು ಹಿಡಿದು ನೀರಿಗೆ ಎಳೆಯಿತು.
01208010a ಸ ತಮಾದಾಯ ಕೌಂತೇಯೋ ವಿಸ್ಫುರಂತಂ ಜಲೇಚರಂ|
01208010c ಉದತಿಷ್ಠನ್ಮಹಾಬಾಹುರ್ಬಲೇನ ಬಲಿನಾಂ ವರಃ||
ಬಲಿಗಳಲ್ಲಿಯೇ ಶ್ರೇಷ್ಠ ಮಹಾಬಾಹು ಕೌಂತೇಯನು ತನ್ನ ಬಲದಿಂದ ಭುಸುಗುಟ್ಟುತ್ತಿದ್ದ ಆ ಜಲಚರವನ್ನು ಹಿಡಿದು, ಮೆಟ್ಟಿ ನೀರಿನಿಂದ ಮೇಲೆ ಬಂದನು.
01208011a ಉತ್ಕೃಷ್ಟ ಏವ ತು ಗ್ರಾಹಃ ಸೋಽರ್ಜುನೇನ ಯಶಸ್ವಿನಾ|
01208011c ಬಭೂವ ನಾರೀ ಕಲ್ಯಾಣೀ ಸರ್ವಾಭರಣಭೂಷಿತಾ|
01208011e ದೀಪ್ಯಮಾನಾ ಶ್ರಿಯಾ ರಾಜನ್ದಿವ್ಯರೂಪಾ ಮನೋರಮಾ||
ರಾಜನ್! ಯಶಸ್ವಿ ಅರ್ಜುನನು ಎಳೆದು ಮೇಲೆ ತಂದಕೂಡಲೇ ಅದು ಸರ್ವಾಭರಣ ಭೂಷಿತ ಕಲ್ಯಾಣಿ, ಶ್ರೀಯಂತೆ ದೀಪ್ಯಮಾನ ದಿವ್ಯರೂಪಿ ಮನೋರಮೆ ನಾರಿಯ ರೂಪವನ್ನು ತಾಳಿತು.
01208012a ತದದ್ಭುತಂ ಮಹದ್ದೃಷ್ಟ್ವಾ ಕುಂತೀಪುತ್ರೋ ಧನಂಜಯಃ|
01208012c ತಾಂ ಸ್ತ್ರಿಯಂ ಪರಮಪ್ರೀತ ಇದಂ ವಚನಮಬ್ರವೀತ್||
ಈ ಮಹಾ ಅದ್ಭುತವನ್ನು ನೋಡಿದ ಕುಂತೀಪುತ್ರ ಧನಂಜಯನು ಪರಮಪ್ರೀತನಾಗಿ ಆ ಸ್ತ್ರೀಗೆ ಹೇಳಿದನು:
01208013a ಕಾ ವೈ ತ್ವಮಸಿ ಕಲ್ಯಾಣಿ ಕುತೋ ವಾಸಿ ಜಲೇಚರೀ|
01208013c ಕಿಮರ್ಥಂ ಚ ಮಹತ್ಪಾಪಮಿದಂ ಕೃತವತೀ ಪುರಾ||
“ಕಲ್ಯಾಣಿ! ನೀನು ಯಾರು? ಮತ್ತು ಹೇಗೆ ಮೊಸಳೆಯಾದೆ? ನೀನು ಯಾವ ಪುರಾತನ ಕಾರಣಕ್ಕಾಗಿ ಈ ಮಹಾ ಪಾಪವನ್ನು ಮಾಡುತ್ತಿರುವೆ?”
01208014 ನಾರ್ಯುವಾಚ|
01208014a ಅಪ್ಸರಾಸ್ಮಿ ಮಹಾಬಾಹೋ ದೇವಾರಣ್ಯವಿಚಾರಿಣೀ|
01208014c ಇಷ್ಟಾ ಧನಪತೇರ್ನಿತ್ಯಂ ವರ್ಗಾ ನಾಮ ಮಹಾಬಲ||
ನಾರಿಯು ಹೇಳಿದಳು: “ಮಹಾಬಾಹು! ನಾನು ದೇವಾರಣ್ಯವಿಚಾರಿಣಿ ಅಪ್ಸರೆ. ನಿತ್ಯವೂ ಮಹಾಬಲ ಧನಪತಿಯ ಇಷ್ಟದವಳಾದ ನನ್ನ ಹೆಸರು ವರ್ಗಾ.
01208015a ಮಮ ಸಖ್ಯಶ್ಚತಸ್ರೋಽನ್ಯಾಃ ಸರ್ವಾಃ ಕಾಮಗಮಾಃ ಶುಭಾಃ|
01208015c ತಾಭಿಃ ಸಾರ್ಧಂ ಪ್ರಯಾತಾಸ್ಮಿ ಲೋಕಪಾಲನಿವೇಶನಂ||
01208016a ತತಃ ಪಶ್ಯಾಮಹೇ ಸರ್ವಾ ಬ್ರಾಹ್ಮಣಂ ಸಂಶಿತವ್ರತಂ|
01208016c ರೂಪವಂತಮಧೀಯಾನಮೇಕಮೇಕಾಂತಚಾರಿಣಂ||
ನನ್ನ ಅನ್ಯ ನಾಲ್ಕು ಸಖಿಯರಿದ್ದರು. ಎಲ್ಲರೂ ಕಾಮಗಾಮಿಗಳು ಮತ್ತು ಸುಂದರಿಯರು. ನಾವೆಲ್ಲ ಒಮ್ಮೆ ಲೋಕಪಾಲಕ ಕುಬೇರನ ನಿವೇಶನಕ್ಕೆ ಹೋಗುತ್ತಿದ್ದೆವು. ದಾರಿಯಲ್ಲಿ ನಾವೆಲ್ಲರೂ ಏಕಾಂತದಲ್ಲಿ ಒಬ್ಬನೇ ಅಭ್ಯಾಸಮಾಡುತ್ತಿದ್ದ ಸಂಶಿತವ್ರತ, ರೂಪವಂತ ಬ್ರಾಹ್ಮಣನನ್ನು ನೋಡಿದೆವು.
01208017a ತಸ್ಯ ವೈ ತಪಸಾ ರಾಜಂಸ್ತದ್ವನಂ ತೇಜಸಾವೃತಂ|
01208017c ಆದಿತ್ಯ ಇವ ತಂ ದೇಶಂ ಕೃತ್ಸ್ನಂ ಸ ವ್ಯವಭಾಸಯತ್||
ರಾಜನ್! ಅವನ ತಪಸ್ಸಿನಿಂದ ಆ ಪ್ರದೇಶವು ತೇಜಸ್ಸಿನಿಂದ ಆವೃತವಾಗಿತ್ತು. ಆದಿತ್ಯನಂತೆ ಅವನು ಇಡೀ ಪ್ರದೇಶವನ್ನು ಬೆಳಗುತ್ತಿದ್ದನು.
01208018a ತಸ್ಯ ದೃಷ್ಟ್ವಾ ತಪಸ್ತಾದೃಗ್ರೂಪಂ ಚಾದ್ಭುತದರ್ಶನಂ|
01208018c ಅವತೀರ್ಣಾಃ ಸ್ಮ ತಂ ದೇಶಂ ತಪೋವಿಘ್ನಚಿಕೀರ್ಷಯಾ||
ಅವನ ಉಗ್ರ ತಪಸ್ಸಿನ ಪ್ರಭಾವ ಮತ್ತು ಅದ್ಭುತವನ್ನು ನೋಡಿ ನಾವು ಅವನ ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡಲು ಆ ಪ್ರದೇಶಕ್ಕೆ ಬಂದಿಳಿದೆವು.
01208019a ಅಹಂ ಚ ಸೌರಭೇಯೀ ಚ ಸಮೀಚೀ ಬುದ್ಬುದಾ ಲತಾ|
01208019c ಯೌಗಪದ್ಯೇನ ತಂ ವಿಪ್ರಮಭ್ಯಗಚ್ಛಾಮ ಭಾರತ||
ಭಾರತ! ನಾನು, ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ ಎಲ್ಲರೂ ಒಟ್ಟಿಗೇ ಆ ವಿಪ್ರನಲ್ಲಿಗೆ ಹೋದೆವು.
01208020a ಗಾಯಂತ್ಯೋ ವೈ ಹಸಂತ್ಯಶ್ಚ ಲೋಭಯಂತ್ಯಶ್ಚ ತಂ ದ್ವಿಜಂ|
01208020c ಸ ಚ ನಾಸ್ಮಾಸು ಕೃತವಾನ್ಮನೋ ವೀರ ಕಥಂ ಚನ|
01208020e ನಾಕಂಪತ ಮಹಾತೇಜಾಃ ಸ್ಥಿತಸ್ತಪಸಿ ನಿರ್ಮಲೇ||
ನಾವು ಹಾಡಿದೆವು, ನಕ್ಕೆವು ಮತ್ತು ಆ ದ್ವಿಜನನ್ನು ಪ್ರಚೋದಿಸಿದೆವು. ವೀರ! ಆದರೆ ಅವನು ನಮಗೆ ಯಾವುದೇ ರೀತಿಯ ಗಮನವನ್ನೂ ಕೊಡಲಿಲ್ಲ. ತಪಸ್ಸಿನಲ್ಲಿ ನಿರತನಾಗಿದ್ದ ಆ ನಿರ್ಮಲನು ಅಲುಗಾಡಲೂ ಇಲ್ಲ.
01208021a ಸೋಽಶಪತ್ಕುಪಿತೋಽಸ್ಮಾಂಸ್ತು ಬ್ರಾಹ್ಮಣಃ ಕ್ಷತ್ರಿಯರ್ಷಭ|
01208021c ಗ್ರಾಹಭೂತಾ ಜಲೇ ಯೂಯಂ ಚರಿಷ್ಯಧ್ವಂ ಶತಂ ಸಮಾಃ||
ಕ್ಷತ್ರಿಯರ್ಷಭ! ಆದರೆ ಕುಪಿತನಾದ ಅವನು ನಮಗೆ ಶಾಪವನ್ನಿತ್ತನು: “ನೀವೆಲ್ಲರೂ ನೂರು ವರ್ಷಗಳು ಮೊಸಳೆಗಳಾಗಿ ಜಲದಲ್ಲಿ ವಾಸಿಸುತ್ತೀರಿ!””
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ತೀರ್ಥಗ್ರಾಹವಿಮೋಚನೇ ಅಷ್ಟಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ತೀರ್ಥಗ್ರಾಹವಿಮೋಚನ ಎನ್ನುವ ಇನ್ನೂರಾಎಂಟನೆಯ ಅಧ್ಯಾಯವು.