ಆದಿ ಪರ್ವ: ಅರ್ಜುನವನವಾಸ ಪರ್ವ
೨೦೬
ಉಲೂಪಿ
ನಾಗಕನ್ಯೆ ಉಲೂಪಿಯು ಅರ್ಜುನನನ್ನು ಮೋಹಿಸಿ ತನ್ನ ಲೋಕಕ್ಕೆ ಎಳೆದುಕೊಂಡು ಹೋದುದು (೧-೧೩). ಅರ್ಜುನನು ಉಲೂಪಿಯೊಂದಿಗೆ ರಾತ್ರಿಯನ್ನು ಕಳೆದುದು (೧೪-೩೪).
01206001 ವೈಶಂಪಾಯನ ಉವಾಚ|
01206001a ತಂ ಪ್ರಯಾಂತಂ ಮಹಾಬಾಹುಂ ಕೌರವಾಣಾಂ ಯಶಸ್ಕರಂ|
01206001c ಅನುಜಗ್ಮುರ್ಮಹಾತ್ಮಾನೋ ಬ್ರಾಹ್ಮಣಾ ವೇದಪಾರಗಾಃ||
01206002a ವೇದವೇದಾಂಗವಿದ್ವಾಂಸಸ್ತಥೈವಾಧ್ಯಾತ್ಮಚಿಂತಕಾಃ|
01206002c ಚೌಕ್ಷಾಶ್ಚ ಭಗವದ್ಭಕ್ತಾಃ ಸೂತಾಃ ಪೌರಾಣಿಕಾಶ್ಚ ಯೇ||
01206003a ಕಥಕಾಶ್ಚಾಪರೇ ರಾಜಂಶ್ರಮಣಾಶ್ಚ ವನೌಕಸಃ|
01206003c ದಿವ್ಯಾಖ್ಯಾನಾನಿ ಯೇ ಚಾಪಿ ಪಠಂತಿ ಮಧುರಂ ದ್ವಿಜಾಃ||
ವೈಶಂಪಾಯನನು ಹೇಳಿದನು: “ರಾಜನ್! ಕೌರವರ ಯಶಸ್ಕರ ಮಹಾಬಾಹುವು ಹೊರಡುವಾಗ ವೇದಪಾರಂಗತ, ಮಹಾತ್ಮ ಬ್ರಾಹ್ಮಣರು, ವೇದವೇದಾಂಗ ವಿದ್ವಾಂಸರು, ಆಧ್ಯಾತ್ಮ ಚಿಂತಕರು, ಆಕ್ಷರು, ಭಗದ್ಭಕ್ತರು, ಸೂತರು, ಪೌರಾಣಿಕರು, ಕಥಕರು, ಶ್ರವಣರು, ವನೌಕಸರು, ಮತ್ತು ದಿವ್ಯ ಆಖ್ಯಾನಗಳನ್ನು ಮಧುರವಾಗಿ ಓದಬಲ್ಲ ದ್ವಿಜರು ಮತ್ತು ಇತರರು ಅನುಸರಿಸಿದರು.
01206004a ಏತೈಶ್ಚಾನ್ಯೈಶ್ಚ ಬಹುಭಿಃ ಸಹಾಯೈಃ ಪಾಂಡುನಂದನಃ|
01206004c ವೃತಃ ಶ್ಲಕ್ಷ್ಣಕಥೈಃ ಪ್ರಾಯಾನ್ಮರುದ್ಭಿರಿವ ವಾಸವಃ||
ಇವರು ಮತ್ತು ಅನೇಕ ಇತರರ ಸಹಾಯದಿಂದ, ಇಂದ್ರನು ಮರುತ್ತರಿಂದ ಸುತ್ತುವರೆಯಲ್ಪಟ್ಟಂತೆ ಸುತ್ತುವರೆಯಲ್ಪಟ್ಟು, ಸುಂದರ ಕಥೆಗಳನ್ನು ಕೇಳುತ್ತಾ ಪ್ರಯಾಣಿಸಿದನು.
01206005a ರಮಣೀಯಾನಿ ಚಿತ್ರಾಣಿ ವನಾನಿ ಚ ಸರಾಂಸಿ ಚ|
01206005c ಸರಿತಃ ಸಾಗರಾಂಶ್ಚೈವ ದೇಶಾನಪಿ ಚ ಭಾರತ||
01206006a ಪುಣ್ಯಾನಿ ಚೈವ ತೀರ್ಥಾನಿ ದದರ್ಶ ಭರತರ್ಷಭ|
01206006c ಸ ಗಂಗಾದ್ವಾರಮಾಸಾದ್ಯ ನಿವೇಶಮಕರೋತ್ಪ್ರಭುಃ||
ಭಾರತ! ಆ ಭರತರ್ಷಭನು ರಮಣೀಯ ಸುಂದರ ವನಗಳನ್ನು, ಸರೋವರಗಳನ್ನು, ನದಿಗಳನ್ನು, ಸಾಗರಗಳನ್ನು, ಪ್ರದೇಶಗಳನ್ನು, ಮತ್ತು ಪುಣ್ಯ ತೀರ್ಥಗಳನ್ನು ನೋಡಿದನು. ಗಂಗಾದ್ವಾರವನ್ನು ಸೇರಿದ ನಂತರ ಪ್ರಭುವು ಅಲ್ಲಿಯೇ ವಾಸಿಸಲು ಪ್ರಾರಂಭಿಸಿದನು.
01206007a ತತ್ರ ತಸ್ಯಾದ್ಭುತಂ ಕರ್ಮ ಶೃಣು ಮೇ ಜನಮೇಜಯ|
01206007c ಕೃತವಾನ್ಯದ್ವಿಶುದ್ಧಾತ್ಮಾ ಪಾಂಡೂನಾಂ ಪ್ರವರೋ ರಥೀ||
ಜನಮೇಜಯ! ಅಲ್ಲಿ ಆ ಕೃತವಂತ, ವಿಶುದ್ಧಾತ್ಮ, ಪಾಂಡವರಲ್ಲಿ ಪ್ರವರ, ರಥಿಯ ಅದ್ಭುತಕರ್ಮದ ಕುರಿತು ನನ್ನಿಂದ ಕೇಳು.
01206008a ನಿವಿಷ್ಟೇ ತತ್ರ ಕೌಂತೇಯೇ ಬ್ರಾಹ್ಮಣೇಷು ಚ ಭಾರತ|
01206008c ಅಗ್ನಿಹೋತ್ರಾಣಿ ವಿಪ್ರಾಸ್ತೇ ಪ್ರಾದುಶ್ಚಕ್ರುರನೇಕಶಃ||
ಭಾರತ! ಕೌಂತೇಯನು ಅಲ್ಲಿ ವಾಸಿಸುತ್ತಿರಲು ಬ್ರಾಹ್ಮಣ ವಿಪ್ರರು ಅನೇಕ ಅಗ್ನಿಹೋತ್ರಗಳನ್ನು ನೆರವೇರಿಸಿದರು.
01206009a ತೇಷು ಪ್ರಬೋಧ್ಯಮಾನೇಷು ಜ್ವಲಿತೇಷು ಹುತೇಷು ಚ|
01206009c ಕೃತಪುಷ್ಪೋಪಹಾರೇಷು ತೀರಾಂತರಗತೇಷು ಚ||
01206010a ಕೃತಾಭಿಷೇಕೈರ್ವಿದ್ವದ್ಭಿರ್ನಿಯತೈಃ ಸತ್ಪಥಿ ಸ್ಥಿತೈಃ|
01206010c ಶುಶುಭೇಽತೀವ ತದ್ರಾಜನ್ಗಂಗಾದ್ವಾರಂ ಮಹಾತ್ಮಭಿಃ||
ರಾಜನ್! ಅವುಗಳನ್ನು ಹೆಚ್ಚಿಸಿ, ಜ್ವಲಿಸಿ, ಆಹುತಿಗಳನ್ನು ಹಾಕುವ, ಎರಡೂ ದಡಗಳಿಂದ ಪುಷ್ಪಗಳನ್ನು ಹಾಕುವ, ಸ್ನಾನಮಾಡಿ ಸತ್ಪಥ ನಿರತ ಆ ಮಹಾತ್ಮರಿಂದ ಗಂಗಾದ್ವಾರವು ಅತೀವ ಶೋಭೆಗೊಂಡಿತ್ತು.
01206011a ತಥಾ ಪರ್ಯಾಕುಲೇ ತಸ್ಮಿನ್ನಿವೇಶೇ ಪಾಂಡುನಂದನಃ|
01206011c ಅಭಿಷೇಕಾಯ ಕೌಂತೇಯೋ ಗಂಗಾಮವತತಾರ ಹ||
ಇವೆಲ್ಲವೂ ಆ ನಿವೇಶ ಸ್ಥಳದಲ್ಲಿ ನಡೆಯುತ್ತಿರಲು ಪಾಂಡುನಂದನ ಕೌಂತೇಯನು ಸ್ನಾನಕ್ಕೆಂದು ಗಂಗೆಯಲ್ಲಿ ಇಳಿದನು.
01206012a ತತ್ರಾಭಿಷೇಕಂ ಕೃತ್ವಾ ಸ ತರ್ಪಯಿತ್ವಾ ಪಿತಾಮಹಾನ್|
01206012c ಉತ್ತಿತೀರ್ಷುರ್ಜಲಾದ್ರಾಜನ್ನಗ್ನಿಕಾರ್ಯಚಿಕೀರ್ಷಯಾ||
01206013a ಅಪಕೃಷ್ಟೋ ಮಹಾಬಾಹುರ್ನಾಗರಾಜಸ್ಯ ಕನ್ಯಯಾ|
01206013c ಅಂತರ್ಜಲೇ ಮಹಾರಾಜ ಉಲೂಪ್ಯಾ ಕಾಮಯಾನಯಾ||
ಅಲ್ಲಿ ಅವನು ಸ್ನಾನಮಾಡಿ, ಪಿತಾಮಹರಿಗೆ ತರ್ಪಣೆಯನ್ನಿತ್ತು ಅಗ್ನಿಕಾರ್ಯವನ್ನು ಮಾಡಲು ನೀರಿನಿಂದ ಮೇಲಕ್ಕೆ ಬರಬೇಕೆನ್ನುವಾಗ ಆ ಮಹಾಬಾಹುವನ್ನು ಮನಸ್ಸಿಗೆ ಬಂದಂತೆ ಹೋಗಬಲ್ಲ ಅಂತರ್ಜಲ ಮಹಾರಾಜನ[1] ಕನ್ಯೆ ಉಲೂಪಿಯು ನೀರಿಗೆ ಸೆಳೆದಳು.
01206014a ದದರ್ಶ ಪಾಂಡವಸ್ತತ್ರ ಪಾವಕಂ ಸುಸಮಾಹಿತಂ|
01206014c ಕೌರವ್ಯಸ್ಯಾಥ ನಾಗಸ್ಯ ಭವನೇ ಪರಮಾರ್ಚಿತೇ||
ನಾಗ ಕೌರವನ ಪರಮಾರ್ಚಿತ ಭವನದಲ್ಲಿ ಸುಸಮಾಹಿತ ಅಗ್ನಿಯನ್ನು ಪಾಂಡವನು ಕಂಡನು.
01206015a ತತ್ರಾಗ್ನಿಕಾರ್ಯಂ ಕೃತವಾನ್ಕುಂತೀಪುತ್ರೋ ಧನಂಜಯಃ|
01206015c ಅಶಂಕಮಾನೇನ ಹುತಸ್ತೇನಾತುಷ್ಯದ್ಧುತಾಶನಃ||
ಕುಂತೀಪುತ್ರ ಧನಂಜಯನು ಅಲ್ಲಿಯೇ ಅಶಂಖಮಾನನಾಗಿ[2] ಅಗ್ನಿಕಾರ್ಯವನ್ನು ಮಾಡಿ, ಹುತಾಶನನನ್ನು ತೃಪ್ತಿಪಡಿಸಿದನು.
01206016a ಅಗ್ನಿಕಾರ್ಯಂ ಸ ಕೃತ್ವಾ ತು ನಾಗರಾಜಸುತಾಂ ತದಾ|
01206016c ಪ್ರಹಸನ್ನಿವ ಕೌಂತೇಯ ಇದಂ ವಚನಮಬ್ರವೀತ್||
ಅಗ್ನಿಕಾರ್ಯವನ್ನು ಪೂರೈಸಿ ಕೌಂತೇಯನು ಮುಗುಳ್ನಗುತ್ತಾ ನಾಗರಾಜಸುತೆಗೆ ಈ ಮಾತುಗಳನ್ನಾಡಿದನು.
01206017a ಕಿಮಿದಂ ಸಾಹಸಂ ಭೀರು ಕೃತವತ್ಯಸಿ ಭಾಮಿನಿ|
01206017c ಕಶ್ಚಾಯಂ ಸುಭಗೋ ದೇಶಃ ಕಾ ಚ ತ್ವಂ ಕಸ್ಯ ಚಾತ್ಮಜಾ||
“ಭೀರು! ಭಾಮಿನಿ! ನೀನು ಏಕೆ ಈ ಸಾಹಸವನ್ನು ಮಾಡಿದೆ? ಈ ಸುಂದರ ದೇಶವು ಯಾವುದು? ನೀನು ಯಾರು? ಯಾರ ಮಗಳು?”
01206018 ಉಲೂಪ್ಯುವಾಚ|
01206018a ಐರಾವತಕುಲೇ ಜಾತಃ ಕೌರವ್ಯೋ ನಾಮ ಪನ್ನಗಃ|
01206018c ತಸ್ಯಾಸ್ಮಿ ದುಹಿತಾ ಪಾರ್ಥ ಉಲೂಪೀ ನಾಮ ಪನ್ನಗೀ||
ಉಲೂಪಿಯು ಹೇಳಿದಳು: “ಐರಾವತ ಕುಲದಲ್ಲಿ ಹುಟ್ಟಿದ ಕೌರವ್ಯ ಎಂಬ ಹೆಸರಿನ ಪನ್ನಗನಿದ್ದಾನೆ. ಪಾರ್ಥ! ಪನ್ನಗಿಯಾದ ನಾನು ಅವನ ಮಗಳು. ಹೆಸರು ಉಲೂಪಿ.
01206019a ಸಾಹಂ ತ್ವಾಮಭಿಷೇಕಾರ್ಥಮವತೀರ್ಣಂ ಸಮುದ್ರಗಾಂ|
01206019c ದೃಷ್ಟವತ್ಯೇವ ಕೌಂತೇಯ ಕಂದರ್ಪೇಣಾಸ್ಮಿ ಮೂರ್ಚ್ಛಿತಾ||
ನೀನು ಸ್ನಾನಕ್ಕೆಂದು ನದಿಯಲ್ಲಿ ಇಳಿಯುವುದನ್ನು ನೋಡಿದೆ. ಕೌಂತೇಯ! ನಿನ್ನನ್ನು ನೋಡಿದೊಡನೆಯೇ ನಾನು ಕಾಮ ಮೂರ್ಛಿತಳಾದೆ.
01206020a ತಾಂ ಮಾಮನಂಗಮಥಿತಾಂ ತ್ವತ್ಕೃತೇ ಕುರುನಂದನ|
01206020c ಅನನ್ಯಾಂ ನಂದಯಸ್ವಾದ್ಯ ಪ್ರದಾನೇನಾತ್ಮನೋ ರಹಃ||
ಕುರುನಂದನ! ನಿನ್ನ ಕಾರಣದಿಂದ ಅನಂಗಮಥಿತಳಾದ ನನ್ನನ್ನು ಸಂತೋಷಗೊಳಿಸು. ರಹಸ್ಯವಾಗಿ ನಿನ್ನನ್ನಿತ್ತು ಅನನ್ಯಳಾದ ನನ್ನನ್ನು ಪ್ರೀತಿಸು.”
01206021 ಅರ್ಜುನ ಉವಾಚ|
01206021a ಬ್ರಹ್ಮಚರ್ಯಮಿದಂ ಭದ್ರೇ ಮಮ ದ್ವಾದಶವಾರ್ಷಿಕಂ|
01206021c ಧರ್ಮರಾಜೇನ ಚಾದಿಷ್ಟಂ ನಾಹಮಸ್ಮಿ ಸ್ವಯಂವಶಃ||
ಅರ್ಜುನನು ಹೇಳಿದನು: “ಭದ್ರೇ! ಧರ್ಮರಾಜನು ನನಗೆ ಹನ್ನೆರಡು ವರ್ಷಗಳ ಬ್ರಹ್ಮಚರ್ಯವನ್ನು ಅದೇಶಿಸಿದ್ದಾನೆ. ನಾನು ನನ್ನ ವಶದಲ್ಲಿಲ್ಲ.
01206022a ತವ ಚಾಪಿ ಪ್ರಿಯಂ ಕರ್ತುಮಿಚ್ಛಾಮಿ ಜಲಚಾರಿಣಿ|
01206022c ಅನೃತಂ ನೋಕ್ತಪೂರ್ವಂ ಚ ಮಯಾ ಕಿಂ ಚನ ಕರ್ಹಿ ಚಿತ್||
ಜಲಚಾರಿಣಿ! ಆದರೂ ನಾನು ನಿನ್ನನ್ನು ಪ್ರೀತಿಸಲು ಬಯಸುತ್ತೇನೆ. ಇದಕ್ಕೆ ಮೊದಲು ನಾನು ಎಂದೂ ಯಾವ ಕಾರಣಕ್ಕೂ ಅನೃತವನ್ನು ಹೇಳಿದವನಲ್ಲ.
01206023a ಕಥಂ ಚ ನಾನೃತಂ ತತ್ಸ್ಯಾತ್ತವ ಚಾಪಿ ಪ್ರಿಯಂ ಭವೇತ್|
01206023c ನ ಚ ಪೀಡ್ಯೇತ ಮೇ ಧರ್ಮಸ್ತಥಾ ಕುರ್ಯಾಂ ಭುಜಂಗಮೇ||
ಭುಜಂಗಮೇ! ಹೇಗೆ ನಾನು ನನ್ನನ್ನು ಸುಳ್ಳನ್ನಾಗಿಸದೇ, ಧರ್ಮವನ್ನು ಬಿಡದೇ ನಿನ್ನನ್ನು ಪ್ರೀತಿಸಲಿ?”
01206024 ಉಲೂಪ್ಯುವಾಚ|
01206024a ಜಾನಾಮ್ಯಹಂ ಪಾಂಡವೇಯ ಯಥಾ ಚರಸಿ ಮೇದಿನೀಂ|
01206024c ಯಥಾ ಚ ತೇ ಬ್ರಹ್ಮಚರ್ಯಮಿದಮಾದಿಷ್ಟವಾನ್ ಗುರುಃ||
ಉಲೂಪಿಯು ಹೇಳಿದಳು: “ಪಾಂಡವ! ನೀನು ಮೇದಿನಿಯಲ್ಲಿ ಅಲೆಯುತ್ತಿರುವೆ ಮತ್ತು ನಿನ್ನ ಹಿರಿಯನು ನಿನಗೆ ಬ್ರಹ್ಮಚರ್ಯದ ಆದೇಶವನ್ನಿತ್ತಿದ್ದಾನೆ ಎನ್ನುವುದನ್ನು ನಾನು ತಿಳಿದಿದ್ದೇನೆ.
01206025a ಪರಸ್ಪರಂ ವರ್ತಮಾನಾನ್ದ್ರುಪದಸ್ಯಾತ್ಮಜಾಂ ಪ್ರತಿ|
01206025c ಯೋ ನೋಽನುಪ್ರವಿಶೇನ್ಮೋಹಾತ್ಸ ನೋ ದ್ವಾದಶವಾರ್ಷಿಕಂ|
01206025e ವನೇ ಚರೇದ್ಬ್ರಹ್ಮಚರ್ಯಮಿತಿ ವಃ ಸಮಯಃ ಕೃತಃ||
ದ್ರುಪದನ ಮಗಳೊಡನೆ ಇರುವಾಗ ನಿಮ್ಮಲ್ಲಿ ಬೇರೆ ಯಾರಾದರೂ ಅಲ್ಲಿಗೆ ತಿಳಿಯದೇ ಹೋದರೆ ಅವನು ಹನ್ನೆರಡು ವರ್ಷಗಳ ಪರ್ಯಂತ ಬ್ರಹ್ಮಚಾರಿಯಾಗಿ ವನದಲ್ಲಿ ತಿರುಗಾಡಬೇಕು ಎಂಬ ಒಪ್ಪಂದವನ್ನು ಮಾಡಿಕೊಂಡಿರುವಿರಿ.
01206026a ತದಿದಂ ದ್ರೌಪದೀಹೇತೋರನ್ಯೋನ್ಯಸ್ಯ ಪ್ರವಾಸನಂ|
01206026c ಕೃತಂ ವಸ್ತತ್ರ ಧರ್ಮಾರ್ಥಮತ್ರ ಧರ್ಮೋ ನ ದುಷ್ಯತಿ||
ಆದರೆ ಅನ್ಯೋನ್ಯರ ಈ ವನವಾಸವು ದ್ರೌಪದಿಗೆ ಮಾತ್ರ ಸಂಬಂಧಿಸಿದ್ದುದು. ಅವಳ ಕುರಿತಾಗಿ ಮಾತ್ರ ಇದು ಧರ್ಮದ ವಿಷಯವಾಗುತ್ತದೆ. ನನ್ನ ವಿಷಯದಲ್ಲಿ ಅದು ಅಧರ್ಮವಾಗುವುದಿಲ್ಲ[3].
01206027a ಪರಿತ್ರಾಣಂ ಚ ಕರ್ತವ್ಯಮಾರ್ತಾನಾಂ ಪೃಥುಲೋಚನ|
01206027c ಕೃತ್ವಾ ಮಮ ಪರಿತ್ರಾಣಂ ತವ ಧರ್ಮೋ ನ ಲುಪ್ಯತೇ||
ಪೃಥುಲೋಚನ! ಆರ್ತರ ಪರಿತ್ರಾಣವು ನಿನ್ನ ಕರ್ತವ್ಯ. ನನ್ನ ಪರಿತ್ರಾಣದಿಂದ ನಿನ್ನ ಧರ್ಮವು ಲೋಪವಾಗುವುದಿಲ್ಲ[4].
01206028a ಯದಿ ವಾಪ್ಯಸ್ಯ ಧರ್ಮಸ್ಯ ಸೂಕ್ಷ್ಮೋಽಪಿ ಸ್ಯಾದ್ವ್ಯತಿಕ್ರಮಃ|
01206028c ಸ ಚ ತೇ ಧರ್ಮ ಏವ ಸ್ಯಾದ್ದಾತ್ತ್ವಾ ಪ್ರಾಣಾನ್ಮಮಾರ್ಜುನ||
ಅರ್ಜುನ! ಒಂದುವೇಳೆ ಅದರಿಂದ ಸೂಕ್ಷ್ಮ ಪ್ರಮಾಣದಲ್ಲಿ ಧರ್ಮದ ಅತಿಕ್ರಮವಾದರೂ ನನಗೆ ಪ್ರಾಣ ನೀಡುವುದೂ ಕೂಡ ನಿನ್ನ ಧರ್ಮವೇ[5].
01206029a ಭಕ್ತಾಂ ಭಜಸ್ವ ಮಾಂ ಪಾರ್ಥ ಸತಾಮೇತನ್ಮತಂ ಪ್ರಭೋ|
01206029c ನ ಕರಿಷ್ಯಸಿ ಚೇದೇವಂ ಮೃತಾಂ ಮಾಮುಪಧಾರಯ||
ಪಾರ್ಥ! ನಿನ್ನನ್ನು ಪ್ರೀತಿಸುವ ನನ್ನನ್ನು ಪ್ರೀತಿಸು. ಪ್ರಭೋ! ಅದೇ ಸಾತ್ವಿಕರ ಮತ. ನೀನು ಇದನ್ನು ಮಾಡದಿದ್ದರೆ ನನ್ನ ಸಾವು ನಿಶ್ಚಯ.
01206030a ಪ್ರಾಣದಾನಾನ್ಮಹಾಬಾಹೋ ಚರ ಧರ್ಮಮನುತ್ತಮಂ|
01206030c ಶರಣಂ ಚ ಪ್ರಪನ್ನಾಸ್ಮಿ ತ್ವಾಮದ್ಯ ಪುರುಷೋತ್ತಮ||
ಮಹಾಬಾಹೋ! ಪ್ರಾಣದಾನವನ್ನಿತ್ತು ಅನುತ್ತಮ ಧರ್ಮವನ್ನು ಪರಿಪಾಲಿಸು. ಪುರುಷೋತ್ತಮ! ಇಂದು ನಾನು ನಿನ್ನ ಶರಣು ಬಂದಿದ್ದೇನೆ.
01206031a ದೀನಾನನಾಥಾನ್ಕೌಂತೇಯ ಪರಿರಕ್ಷಸಿ ನಿತ್ಯಶಃ|
01206031c ಸಾಹಂ ಶರಣಮಭ್ಯೇಮಿ ರೋರವೀಮಿ ಚ ದುಃಖಿತಾ||
01206032a ಯಾಚೇ ತ್ವಾಮಭಿಕಾಮಾಹಂ ತಸ್ಮಾತ್ಕುರು ಮಮ ಪ್ರಿಯಂ|
01206032c ಸ ತ್ವಮಾತ್ಮಪ್ರದಾನೇನ ಸಕಾಮಾಂ ಕರ್ತುಮರ್ಹಸಿ||
ಕೌಂತೇಯ! ನೀನು ನಿತ್ಯವೂ ದೀನರನ್ನು ಅನಾಥರನ್ನು ಪರಿರಕ್ಷಿಸಿದ್ದೀಯೆ. ದುಃಖದಿಂದ ರೋದಿಸುತ್ತಾ ನಿನ್ನ ಶರಣು ಬಂದಿದ್ದೇನೆ. ನಿನ್ನ ಮೇಲಿನ ಪ್ರೇಮದಿಂದ ನಾನು ಶರಣು ಬಂದಿದ್ದೇನೆ. ಆದುದರಿಂದ ನನಗೆ ಪ್ರಿಯವಾದುದನ್ನು ಮಾಡು. ಆತ್ಮಪ್ರದಾನದ ಮೂಲಕ ನೀನು ನನ್ನ ಕಾಮವನ್ನು ಪೂರೈಸಬೇಕು.””
01206033 ವೈಶಂಪಾಯನ ಉವಾಚ|
01206033a ಏವಮುಕ್ತಸ್ತು ಕೌಂತೇಯಃ ಪನ್ನಗೇಶ್ವರಕನ್ಯಯಾ|
01206033c ಕೃತವಾಂಸ್ತತ್ತಥಾ ಸರ್ವಂ ಧರ್ಮಮುದ್ದಿಶ್ಯ ಕಾರಣಂ||
ವೈಶಂಪಾಯನನು ಹೇಳಿದನು: “ಪನ್ನಗೇಶ್ವರ ಕನ್ಯೆಯು ಹೀಗೆ ಹೇಳಲು ಕೌಂತೇಯನು ಧರ್ಮವನ್ನೇ ತನ್ನ ಗುರಿಯನಾಗಿಟ್ಟುಕೊಂಡು ಅವಳು ಕೇಳಿದಂತೆಯೇ ಎಲ್ಲವನ್ನೂ ಮಾಡಿದನು.
01206034a ಸ ನಾಗಭವನೇ ರಾತ್ರಿಂ ತಾಮುಷಿತ್ವಾ ಪ್ರತಾಪವಾನ್|
01206034c ಉದಿತೇಽಭ್ಯುತ್ಥಿತಃ ಸೂರ್ಯೇ ಕೌರವ್ಯಸ್ಯ ನಿವೇಶನಾತ್||
ಆ ಪ್ರತಾಪವಂತನು ಅವಳೊಡನೆ ನಾಗಭವನದಲ್ಲಿ ರಾತ್ರಿಯನ್ನು ಕಳೆದು ಸೂರ್ಯೋದಯವಾಗುತ್ತಿದ್ದಂತೆ ಕೌರವ್ಯನ ನಿವೇಶನದಿಂದ ಮೇಲೆದ್ದನು[6].”
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಉಲೂಪೀಸಂಗಮೇ ಷಡಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಉಲೂಪೀಸಂಗಮ ಎನ್ನುವ ಇನ್ನೂರಾಆರನೆಯ ಅಧ್ಯಾಯವು.
[1]ನಾಗ ಕೌರವ
[2]ತಾನು ಯಾರಿಂದ ಸೆಳೆಯಲ್ಪಟ್ಟ? ಎಲ್ಲಿದ್ದಾನೆ? ಎನ್ನುವು ಯಾವುದೇ ರೀತಿಯ ಶಂಕೆಯೂ ಇಲ್ಲದೇ ತದೇಕಚಿತ್ತನಾಗಿ ಅರ್ಜುನನು ಯಜ್ಞೇಶ್ವರನನ್ನು ಪೂಜಿಸಿದ ಕಾರಣ ಅಗ್ನಿದೇವನೂ ಸುಪ್ರೀತನಾದನು.
[3]ತಮಗೆ ಅನುಕೂಲವಾದ ಹಾಗೆ ಧರ್ಮವನ್ನು ವಿಶ್ಲೇಷಿಸಿ ನಿಶ್ಚಯಿಸಬಹುದೇ? “ದ್ರೌಪದಿಯೊಡನಿರುವವನನ್ನು ಅನ್ಯ ಯಾರೂ ನೋಡಿದರೆ ಅವನು ಬ್ರಹ್ಮಚಾರಿಯಾಗಿ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಬೇಕು!” ಎಂದು ಒಪ್ಪಂದವಾಗಿರುವಾಗ ಇಲ್ಲಿ ಬ್ರಹ್ಮಚಾರಿ ಎನ್ನುವುದರ ಅರ್ಥವೇನು? ಉಲೂಪಿಯು ವಿಶ್ಲೇಷಿಸಿದ ಹಾಗೆ ದ್ರೌಪದಿಯೊಡನೆ ಮಾತ್ರ ಬ್ರಹ್ಮಚರ್ಯವೆಂದೇ ಅಥವಾ ಸಂಪೂರ್ಣ ಬ್ರಹ್ಮಚರ್ಯೆಯೆಂದೇ?...ದ್ರೌಪದಿಯೊಡನೆ ಬ್ರಹ್ಮಚರ್ಯವೆಂದು!
[4]ಇದೇ ಧರ್ಮದ ವಿಷಯವು ಹಿಂದೆ ಯಯಾತಿ-ಶರ್ಮಿಷ್ಠೆಯರ ಸಂಬಂಧದಲ್ಲಿ ಕೂಡ ಬಂದಿತ್ತು.
[5]ಒಂದು ಧರ್ಮವನ್ನು ಪಾಲನೆಮಾಡುವುದರಿಂದ ಇನ್ನೊಂದು ಧರ್ಮದ ಉಲ್ಲಂಘನೆಯಾದರೆ, ಯಾವ ಧರ್ಮವನ್ನು ಆರಿಸಿಕೊಳ್ಳಬೇಕು? ಇಲ್ಲಿ ಯಾವ ಧರ್ಮದ ಉಲ್ಲಂಘನೆಯಾದಂತೆಯೂ ಇಲ್ಲ.
[6]ಉಲೂಪಿಯು ಅರ್ಜುನನನ್ನು ಗಂಗಾನದಿಯ ದಂಡೆಯವರೆಗೂ ಅನುಸರಿಸಿ ಬಂದು, ಅವನನ್ನು ಆಲಂಗಿಸಿ ಬೀಳ್ಕೊಡುವಾಗ ತನ್ನ ಇಚ್ಛೆಯನ್ನು ಪೂರ್ಣಮಾಡಿದುದಕ್ಕಾಗಿ ಅರ್ಜುನನಿಗೆ “ಭೂಲೋಕದಲ್ಲಿ ನೀನು ಅಪ್ರತಿಮ ಸಾಹಸಿಯಾಗಿರುವಂತೆ ನೀರಿನಲ್ಲಿಯೂ ಅಪ್ರತಿಮ ಸಾಹಸಿಯಾಗುವೆ! ಜಲಚರಪ್ರಾಣಿಗಳೆಲ್ಲವೂ ನಿನ್ನ ಅಧೀನವಾಗುವವು!” ಎಂಬ ವರವನ್ನು ನೀಡುತ್ತಾಳೆ ಎನ್ನುವ ವಿಷಯವು ಕೆಲವು ಸಂಪುಟಗಳಲ್ಲಿದೆ. ಉಲೂಪಿಯಿಂದ ಅರ್ಜುನನಿಗೆ ನಾಗಾರ್ಜುನನೆಂಬ ಮಗನು ಹುಟ್ಟಿದ ವಿಷಯವೂ ಕೂಡ ಕೆಲವು ಪ್ರತಿಗಳಲ್ಲಿ ಇದೆ.