Adi Parva: Chapter 205

ಆದಿ ಪರ್ವ: ಅರ್ಜುನವನವಾಸ ಪರ್ವ

೨೦೫

ಅರ್ಜುನ ವನವಾಸ

ಒಮ್ಮೆ ಕಳ್ಳರಿಂದಾಗಿ ಗೋವುಗಳನ್ನು ಕಳೆದುಕೊಂಡ ಬ್ರಾಹ್ಮಣನೊಬ್ಬನು ಇಂದ್ರಪ್ರಸ್ಥಕ್ಕೆ ಬಂದು ಪಾಂಡವರನ್ನು ನಿಂದಿಸುವುದು (೧-೯). ಅರ್ಜುನನು ಆಯುಧಗಳನ್ನು ತರಲು ಹೋದಾಗ ನಿಯಮವನ್ನು ಉಲ್ಲಂಘಿಸಿದುದು (೧೦-೨೦). ಬ್ರಾಹ್ಮಣನಿಗೆ ಅವನ ಗೋವುಗಳನ್ನು ದೊರಕಿಸಿಕೊಟ್ಟು ಅರ್ಜುನನು ವನವಾಸವನ್ನು ಕೈಗೊಂಡಿದುದು (೨೧-೩೦).

01205001 ವೈಶಂಪಾಯನ ಉವಾಚ|

01205001a ಏವಂ ತೇ ಸಮಯಂ ಕೃತ್ವಾ ನ್ಯವಸಂಸ್ತತ್ರ ಪಾಂಡವಾಃ|

01205001c ವಶೇ ಶಸ್ತ್ರಪ್ರತಾಪೇನ ಕುರ್ವಂತೋಽನ್ಯಾನ್ಮಹೀಕ್ಷಿತಃ||

ವೈಶಂಪಾಯನನು ಹೇಳಿದನು: “ಈ ರೀತಿ ಒಪ್ಪಂದವನ್ನು ಮಾಡಿಕೊಂಡ ಪಾಂಡವರು ಅಲ್ಲಿಯೇ ವಾಸಿಸುತ್ತಿದ್ದರು. ಅವರ ಶಸ್ತ್ರಪ್ರತಾಪದಿಂದ ಅನ್ಯ ಮಹೀಕ್ಷಿತರನ್ನು ವಶಪಡಿಸಿಕೊಂಡರು.

01205002a ತೇಷಾಂ ಮನುಜಸಿಂಹಾನಾಂ ಪಂಚಾನಾಮಮಿತೌಜಸಾಂ|

01205002c ಬಭೂವ ಕೃಷ್ಣಾ ಸರ್ವೇಷಾಂ ಪಾರ್ಥಾನಾಂ ವಶವರ್ತಿನೀ||

ಕೃಷ್ಣೆಯು ಆ ಎಲ್ಲ ಅಮಿತೌಜಸ, ಮನುಜಸಿಂಹ, ಪಂಚ ಪಾರ್ಥರ ವಶವರ್ತಿನಿಯಾಗಿದ್ದಳು.

01205003a ತೇ ತಯಾ ತೈಶ್ಚ ಸಾ ವೀರೈಃ ಪತಿಭಿಃ ಸಹ ಪಂಚಭಿಃ|

01205003c ಬಭೂವ ಪರಮಪ್ರೀತಾ ನಾಗೈರಿವ ಸರಸ್ವತೀ||

ಆನೆಗಳೊಂದಿಗೆ ಸರಸ್ವತಿಯು ಹೇಗೋ ಹಾಗೆ ಅವಳು ತನ್ನ ಐದು ಪತಿಗಳೊಡನೆ ಪರಮಪ್ರೀತಳಾಗಿದ್ದಳು.

01205004a ವರ್ತಮಾನೇಷು ಧರ್ಮೇಣ ಪಾಂಡವೇಷು ಮಹಾತ್ಮಸು|

01205004c ವ್ಯವರ್ಧನ್ಕುರವಃ ಸರ್ವೇ ಹೀನದೋಷಾಃ ಸುಖಾನ್ವಿತಾಃ||

ಮಹಾತ್ಮ ಪಾಂಡವರು ಧರ್ಮದಲ್ಲಿ ನಡೆದುಕೊಂಡಿರಲು ಸರ್ವ ಕುರುಗಳೂ ದೋಷರಹಿತರಾಗಿ ಸುಖಾನ್ವಿತರಾಗಿ ವರ್ಧಿಸಿದರು.

01205005a ಅಥ ದೀರ್ಘೇಣ ಕಾಲೇನ ಬ್ರಾಹ್ಮಣಸ್ಯ ವಿಶಾಂ ಪತೇ|

01205005c ಕಸ್ಯ ಚಿತ್ತಸ್ಕರಾಃ ಕೇ ಚಿಜ್ಜಹ್ರುರ್ಗಾ ನೃಪಸತ್ತಮ||

ವಿಶಾಂಪತೇ! ನೃಪಸತ್ತಮ! ದೀರ್ಘಕಾಲದ ನಂತರ ಕೆಲವು ಕಳ್ಳರು ಓರ್ವ ಬ್ರಾಹ್ಮಣನ ಗೋವುಗಳನ್ನು ಅಪಹರಿಸಿದರು.

01205006a ಹ್ರಿಯಮಾಣೇ ಧನೇ ತಸ್ಮಿನ್ಬ್ರಾಹ್ಮಣಃ ಕ್ರೋಧಮೂರ್ಚ್ಛಿತಃ|

01205006c ಆಗಮ್ಯ ಖಾಂಡವಪ್ರಸ್ಥಮುದಕ್ರೋಶತ ಪಾಂಡವಾನ್||

ತನ್ನ ಧನವನ್ನು ಕಳೆದುಕೊಂಡು ಕ್ರೋಧಮೂರ್ಛಿತನಾದ ಆ ಬ್ರಾಹ್ಮಣನು ಖಾಂಡವಪ್ರಸ್ಥಕ್ಕೆ ಬಂದು ಪಾಂಡವರನ್ನು ಮೂದಲಿಸಿದನು[1].

01205007a ಹ್ರಿಯತೇ ಗೋಧನಂ ಕ್ಷುದ್ರೈರ್ನೃಶಂಸೈರಕೃತಾತ್ಮಭಿಃ|

01205007c ಪ್ರಸಹ್ಯ ವೋಽಸ್ಮಾದ್ವಿಷಯಾದಭಿಧಾವತ ಪಾಂಡವಾಃ||

“ಕ್ಷುದ್ರ, ನೃಶಂಸ, ಅಕೃತಾತ್ಮರು ಗೋಧನವನ್ನು ಕದ್ದು ಹೋಗುತ್ತಿದ್ದಾರೆ! ಪಾಂಡವರೇ! ಓಡಿ ಹೋಗಿ ಅದನ್ನು ಹಿಂದಿರುಗಿ ತೆಗೆದುಕೊಂಡು ಬನ್ನಿ!

01205008a ಬ್ರಾಹ್ಮಣಸ್ಯ ಪ್ರಮತ್ತಸ್ಯ ಹವಿರ್ಧ್ವಾಂಕ್ಷೈರ್ವಿಲುಪ್ಯತೇ|

01205008c ಶಾರ್ದೂಲಸ್ಯ ಗುಹಾಂ ಶೂನ್ಯಾಂ ನೀಚಃ ಕ್ರೋಷ್ಟಾಭಿಮರ್ಶತಿ||

01205008  ಅರಕ್ಷಿತಾರಂ ರಾಜಾನಂ ಬಲಿಷಡ್ಭಾಗಹಾರಿಣಂ|

01205008  ತಮಾಹುಃ ಸರ್ವಲೋಕಸ್ಯ ಸಮಗ್ರಂ ಪಾಪಚಾರಿಣಂ||

ಪ್ರಮತ್ತ ಬ್ರಾಹ್ಮಣನ ಹವಿಸ್ಸನ್ನು ಕಾಗೆಗಳು ಎತ್ತಿಕೊಂಡು ಹೋಗುತ್ತಿವೆ.  ಶಾರ್ದೂಲನ ಗುಹೆಯಲ್ಲಿ ಯಾರೂ ಇಲ್ಲದಿರಲು ನೀಚ ತೋಳವು ಒಳಹೊಕ್ಕಿದೆ! ಪ್ರಜೆಗಳು ಕೊಡುವ ರಾಜಾದಾಯದ ಆರನೆಯ ಒಂದು ಪಾಲನ್ನು ಉಪಭೋಗಿಸುವ[2] ರಾಜನು ತನ್ನ ಪ್ರಜೆಗಳನ್ನು ರಕ್ಷಿಸದಿದ್ದರೆ ಅವನು ಸಮಗ್ರ ಸರ್ವಲೋಕದಲ್ಲಿ ಪಾಪಚಾರಿ ಎಂದೆನಿಸಿಕೊಳ್ಳುತ್ತಾನೆ.

01205009a ಬ್ರಾಹ್ಮಣಸ್ವೇ ಹೃತೇ ಚೋರೈರ್ಧರ್ಮಾರ್ಥೇ ಚ ವಿಲೋಪಿತೇ|

01205009c ರೋರೂಯಮಾಣೇ ಚ ಮಯಿ ಕ್ರಿಯತಾಮಸ್ತ್ರಧಾರಣಂ||

ಬ್ರಾಹ್ಮಣನ ವಸ್ತುವಿನ ಕಳ್ಳತನವಾಗಿದೆಯೆಂದರೆ ಧರ್ಮ-ಅರ್ಥದ ವಿಲೋಪವಾದಂತೆ! ನಾನು ರೋದಿಸುತ್ತಿದ್ದೇನೆ! ಅಸ್ತ್ರಧಾರಣಮಾಡಿ!”

01205010a ರೋರೂಯಮಾಣಸ್ಯಾಭ್ಯಾಶೇ ತಸ್ಯ ವಿಪ್ರಸ್ಯ ಪಾಂಡವಃ|

01205010c ತಾನಿ ವಾಕ್ಯಾನಿ ಶುಶ್ರಾವ ಕುಂತೀಪುತ್ರೋ ಧನಂಜಯಃ||

ರೋದಿಸುತ್ತಿರುವ ಆ ವಿಪ್ರನ ಹತ್ತಿರದಲ್ಲಿಯೇ ಇದ್ದ ಕುಂತೀಪುತ್ರ ಪಾಂಡವ ಧನಂಜಯನು ಅವನ ಆ ಮಾತುಗಳನ್ನು ಕೇಳಿದನು.

01205011a ಶ್ರುತ್ವಾ ಚೈವ ಮಹಾಬಾಹುರ್ಮಾ ಭೈರಿತ್ಯಾಹ ತಂ ದ್ವಿಜಂ|

01205011c ಆಯುಧಾನಿ ಚ ಯತ್ರಾಸನ್ಪಾಂಡವಾನಾಂ ಮಹಾತ್ಮನಾಂ|

01205011e ಕೃಷ್ಣಯಾ ಸಹ ತತ್ರಾಸೀದ್ಧರ್ಮರಾಜೋ ಯುಧಿಷ್ಠಿರಃ||

ಇದನ್ನು ಕೇಳಿದ ಆ ಮಹಾಬಾಹುವು ದ್ವಿಜನಿಗೆ “ಹೆದರಬೇಡ!”ಎಂದು ಹೇಳಿದನು. ಆದರೆ ಮಹಾತ್ಮ ಪಾಂಡವರು ತಮ್ಮ ಆಯುಧಗಳನ್ನು ಎಲ್ಲಿ ಇರಿಸಿದ್ದರೋ ಅಲ್ಲಿ ಕೃಷ್ಣೆಯ ಸಹಿತ ಧರ್ಮರಾಜ ಯುಧಿಷ್ಠಿರನಿದ್ದನು.

01205012a ಸ ಪ್ರವೇಶಾಯ ಚಾಶಕ್ತೋ ಗಮನಾಯ ಚ ಪಾಂಡವಃ|

01205012c ತಸ್ಯ ಚಾರ್ತಸ್ಯ ತೈರ್ವಾಕ್ಯೈಶ್ಚೋದ್ಯಮಾನಃ ಪುನಃ ಪುನಃ|

01205012e ಆಕ್ರಂದೇ ತತ್ರ ಕೌಂತೇಯಶ್ಚಿಂತಯಾಮಾಸ ದುಃಖಿತಃ||

ಆ ಪಾಂಡವನು ಅಲ್ಲಿ ಪ್ರವೇಶಿಸಲೂ ಶಕ್ಯನಿರಲಿಲ್ಲ. ಅಲ್ಲಿಂದ ಹೊರಟು ಹೋಗಲೂ ಶಕ್ಯನಿರಲಿಲ್ಲ. ಆ ಅರ್ತನು ಪುನಃ ಪುನಃ ತನ್ನ ತೀಕ್ಷ್ಣ ನಾಲಿಗೆಯಿಂದ ಒತ್ತಾಯಿಸುತ್ತಿರಲು, ಅವನ ಆಕ್ರಾಂತದ ಮಧ್ಯೆ ಕೌಂತೇಯನು ದುಃಖಿತನಾಗಿ ಚಿಂತಿಸಿದನು:

01205013a ಹ್ರಿಯಮಾಣೇ ಧನೇ ತಸ್ಮಿನ್ಬ್ರಾಹ್ಮಣಸ್ಯ ತಪಸ್ವಿನಃ|

01205013c ಅಶ್ರುಪ್ರಮಾರ್ಜನಂ ತಸ್ಯ ಕರ್ತವ್ಯಮಿತಿ ನಿಶ್ಚಿತಃ||

“ಈ ತಪಸ್ವಿ ಬ್ರಾಹ್ಮಣನ ಧನದ ಕಳ್ಳತನವಾಗಿದೆ. ಅವನ ಕಣ್ಣೀರನ್ನು ಒಣಗಿಸುವುದು ನಿಶ್ಚಯವಾಗಿಯು ಕರ್ತವ್ಯ.

01205014a ಉಪಪ್ರೇಕ್ಷಣಜೋಽಧರ್ಮಃ ಸುಮಹಾನ್ಸ್ಯಾನ್ಮಹೀಪತೇಃ|

01205014c ಯದ್ಯಸ್ಯ ರುದತೋ ದ್ವಾರಿ ನ ಕರೋಮ್ಯದ್ಯ ರಕ್ಷಣಂ||

ಇಂದು ದ್ವಾರದಲ್ಲಿ ನಿಂತು ರೋದಿಸುತ್ತಿರುವ ಇವನ ರಕ್ಷಣೆಯನ್ನು ಮಾಡದೇ ಇದರ ಉಪಪ್ರೇಕ್ಷಣೆಯನ್ನು ಮಾಡಿದರೆ ಮಹೀಪತಿಯು ಮಹಾ ಅಧರ್ಮವನ್ನು ಮಾಡಿದ ಹಾಗಾಗುತ್ತದೆ.

01205015a ಅನಾಸ್ತಿಕ್ಯಂ ಚ ಸರ್ವೇಷಾಮಸ್ಮಾಕಮಪಿ ರಕ್ಷಣೇ|

01205015c ಪ್ರತಿತಿಷ್ಠೇತ ಲೋಕೇಽಸ್ಮಿನ್ನಧರ್ಮಶ್ಚೈವ ನೋ ಭವೇತ್|

ನಾನು ರಕ್ಷಿಸದಿದ್ದರೆ ನಾವೆಲ್ಲರೂ ಈ ಲೋಕದಲ್ಲಿಯೇ ಅನಾಸ್ತಿಕ್ಯರೆಂದೂ, ಅಧರ್ಮಿಗಳೆಂದೂ ಕುಪ್ರಸಿದ್ಧರಾಗುತ್ತೇವೆ.

01205016a ಅನಾಪೃಚ್ಛ್ಯ ಚ ರಾಜಾನಂ ಗತೇ ಮಯಿ ನ ಸಂಶಯಃ|

01205016c ಅಜಾತಶತ್ರೋರ್ನೃಪತೇರ್ಮಮ ಚೈವಾಪ್ರಿಯಂ ಭವೇತ್||

ರಾಜನನ್ನು ಕೇಳದೆಯೇ ನಾನು ಹೋದೆನೆಂದರೆ ನಿಸ್ಸಂಶಯವಾಗಿಯೂ ನನ್ನ ನೃಪತಿ ಅಜಾತಶತ್ರುವಿಗೆ ಅಪ್ರಿಯವನ್ನು ಮಾಡಿದಂಥಾಗುತ್ತದೆ.

01205017a ಅನುಪ್ರವೇಶೇ ರಾಜ್ಞಸ್ತು ವನವಾಸೋ ಭವೇನ್ಮಮ|

01205017  ಸರ್ವಮನ್ಯತ್ಪರಿಹೃತಂ ಘರ್ಷಣಾತ್ತು ಮಹೀಪತೇಃ||

01205017c ಅಧರ್ಮೋ ವಾ ಮಹಾನಸ್ತು ವನೇ ವಾ ಮರಣಂ ಮಮ|

01205017e ಶರೀರಸ್ಯಾಪಿ ನಾಶೇನ ಧರ್ಮ ಏವ ವಿಶಿಷ್ಯತೇ||

ರಾಜನ ಗೃಹವನ್ನು ಪ್ರವೇಶಿಸಿದರೆ ನನಗೆ ವನವಾಸವಾಗುತ್ತದೆ. ಅಧರ್ಮ ಅಥವಾ ಮಹಾವನದಲ್ಲಿ ನನ್ನ ಮರಣ. ಆದರೆ ಶರೀರನಾಶಕ್ಕಿಂತಲೂ ಧರ್ಮವೇ ಮೇಲು!”

01205018a ಏವಂ ವಿನಿಶ್ಚಿತ್ಯ ತತಃ ಕುಂತೀಪುತ್ರೋ ಧನಂಜಯಃ|

01205018c ಅನುಪ್ರವಿಶ್ಯ ರಾಜಾನಮಾಪೃಚ್ಛ್ಯ ಚ ವಿಶಾಂ ಪತೇ||

01205019a ಧನುರಾದಾಯ ಸಂಹೃಷ್ಟೋ ಬ್ರಾಹ್ಮಣಂ ಪ್ರತ್ಯಭಾಷತ|

01205019c ಬ್ರಾಹ್ಮಣಾಗಮ್ಯತಾಂ ಶೀಘ್ರಂ ಯಾವತ್ಪರಧನೈಷಿಣಃ||

01205020a ನ ದೂರೇ ತೇ ಗತಾಃ ಕ್ಷುದ್ರಾಸ್ತಾವದ್ಗಚ್ಛಾಮಹೇ ಸಹ|

01205020c ಯಾವದಾವರ್ತಯಾಮ್ಯದ್ಯ ಚೋರಹಸ್ತಾದ್ಧನಂ ತವ||

ವಿಶಾಂಪತೇ! ಈ ರೀತಿ ನಿಶ್ಚಯಿಸಿದ ಕುಂತೀಪುತ್ರ ಧನಂಜಯನು ರಾಜನ ಅನುಜ್ಞೆಯಿಲ್ಲದೇ ಪ್ರವೇಶಿಸಿ ಧನುಸ್ಸನ್ನು ತಂದು ಸಂಹೃಷ್ಟ ಬ್ರಾಹ್ಮಣನಿಗೆ ಉತ್ತರಿಸಿದನು: “ಬ್ರಾಹ್ಮಣ! ಶೀಘ್ರವಾಗಿ ಬಾ! ಆ ಕಳ್ಳರನ್ನು ಹಿಡಿಯಬೇಕು. ಆ ಕ್ಷುದ್ರರು ತುಂಬಾ ದೂರ ಹೋಗಿರಲಿಕ್ಕಿಲ್ಲ. ಒಟ್ಟಿಗೇ ಹೋಗೋಣ. ಅವರನ್ನು ಹಿಡಿದು ನಿನ್ನ ಧನವನ್ನು ಹಿಂದಿರುಗಿಸುತ್ತೇನೆ.”

01205021a ಸೋಽನುಸೃತ್ಯ ಮಹಾಬಾಹುರ್ಧನ್ವೀ ವರ್ಮೀ ರಥೀ ಧ್ವಜೀ|

01205021c ಶರೈರ್ವಿಧ್ವಂಸಿತಾಂಶ್ಚೋರಾನವಜಿತ್ಯ ಚ ತದ್ಧನಂ||

ಆ ಮಹಾಬಾಹುವು ಧನುಸ್ಸನ್ನು ಹಿಡಿದು, ಕವಚಧರಿಸಿ ಧ್ವಜಯುಕ್ತ ರಥವನ್ನೇರಿ ಚೋರರನ್ನು ಬೆನ್ನಟ್ಟಿ ಶರಗಳಿಂದ ವಿಧ್ವಂಸಿಸಿ ಧನವನ್ನು ಗೆದ್ದನು. 

01205022a ಬ್ರಾಹ್ಮಣಸ್ಯ ಉಪಾಹೃತ್ಯ ಯಶಃ ಪೀತ್ವಾ ಚ ಪಾಂಡವಃ|

01205022  ತತಸ್ತದ್ಗೋಧನಂ ಪಾರ್ಥೋ ದತ್ವಾ ತಸ್ಮೈ ದ್ವಿಜಾತಯೇ|

01205022c ಆಜಗಾಮ ಪುರಂ ವೀರಃ ಸವ್ಯಸಾಚೀ ಪರಂತಪಃ||

ಬ್ರಾಹ್ಮಣನಿಗೆ ಅದನ್ನು ಒಪ್ಪಿಸಿ ಯಶವನ್ನು ಪಡೆದು ವೀರ ಪಾಂಡವ ಪರಂತಪ ಸವ್ಯಸಾಚಿಯು ಪುರವನ್ನು ಸೇರಿದನು.

01205023a ಸೋಽಭಿವಾದ್ಯ ಗುರೂನ್ಸರ್ವಾಂಸ್ತೈಶ್ಚಾಪಿ ಪ್ರತಿನಂದಿತಃ|

01205023c ಧರ್ಮರಾಜಮುವಾಚೇದಂ ವ್ರತಮಾದಿಶ್ಯತಾಂ ಮಮ||

ಸರ್ವ ಗುರುಗಳನ್ನೂ ಅಭಿವಂದಿಸಿದನು ಮತ್ತು ಅವರೂ ಅವನಿಗೆ ಪ್ರತಿನಂದಿಸಿದರು. ನಂತರ ಅವನು ಧರ್ಮರಾಜನಿಗೆ ಹೇಳಿದನು: “ನನಗೆ ವ್ರತವನ್ನು ಆದೇಶಿಸು!

01205024a ಸಮಯಃ ಸಮತಿಕ್ರಾಂತೋ ಭವತ್ಸಂದರ್ಶನಾನ್ಮಯಾ|

01205024c ವನವಾಸಂ ಗಮಿಷ್ಯಾಮಿ ಸಮಯೋ ಹ್ಯೇಷ ನಃ ಕೃತಃ||

ನಾನು ನಿನ್ನನ್ನು ನೋಡಿ ಒಪ್ಪಂದವನ್ನು ಅತಿಕ್ರಮಿಸಿದ್ದೇನೆ. ನಾವು ಮಾಡಿಕೊಂಡ ಒಪ್ಪಂದದಂತೆ ನಾನು ವನವಾಸಕ್ಕೆ ತೆರಳುತ್ತೇನೆ.”

01205025a ಇತ್ಯುಕ್ತೋ ಧರ್ಮರಾಜಸ್ತು ಸಹಸಾ ವಾಕ್ಯಮಪ್ರಿಯಂ|

01205025c ಕಥಮಿತ್ಯಬ್ರವೀದ್ವಾಚಾ ಶೋಕಾರ್ತಃ ಸಜ್ಜಮಾನಯಾ|

01205025e ಯುಧಿಷ್ಠಿರೋ ಗುಡಾಕೇಶಂ ಭ್ರಾತಾ ಭ್ರಾತರಮಚ್ಯುತಂ||

ಒಮ್ಮೆಲೇ ಈ ಅಪ್ರಿಯ ವಾಕ್ಯವನ್ನು ಕೇಳಿದ ಧರ್ಮರಾಜನು ಶೋಕಾರ್ತನಾಗಿ ಸಜ್ಜಮಾನನಾಗಿ “ಏಕೆ?”ಎಂದು ಉದ್ಗರಿಸಿದನು. ನಂತರ ಅಚ್ಯುತ ಭ್ರಾತಾ ಯುಧಿಷ್ಠಿರನು ತಮ್ಮ ಗುಡಾಕೇಶನಿಗೆ ಹೇಳಿದನು: 

01205026a ಪ್ರಮಾಣಮಸ್ಮಿ ಯದಿ ತೇ ಮತ್ತಃ ಶೃಣು ವಚೋಽನಘ|

01205026c ಅನುಪ್ರವೇಶೇ ಯದ್ವೀರ ಕೃತವಾಂಸ್ತ್ವಂ ಮಮಾಪ್ರಿಯಂ|

01205026e ಸರ್ವಂ ತದನುಜಾನಾಮಿ ವ್ಯಲೀಕಂ ನ ಚ ಮೇ ಹೃದಿ||

“ಅನಘ! ನಾನು ಹಿರಿಯವನಾಗಿದ್ದೇನಾದರೆ ನನ್ನ ಮತವನ್ನು ಕೇಳು. ವೀರ! ನೀನು ಅನುಪ್ರವೇಶಿಸಿ ನನಗೇನಾದರೂ ಅಪ್ರಿಯವಾದುದನ್ನು ಮಾಡಿದ್ದೀಯೆಂದರೆ ನಾನು ಅದೆಲ್ಲವನ್ನೂ ಕ್ಷಮಿಸುತ್ತೇನೆ ಮತ್ತು ಅದರ ಸೇಡನ್ನು ನನ್ನ ಹೃದಯದಿಂದ ತೆಗೆದುಬಿಡುತ್ತೇನೆ.

01205027a ಗುರೋರನುಪ್ರವೇಶೋ ಹಿ ನೋಪಘಾತೋ ಯವೀಯಸಃ|

01205027c ಯವೀಯಸೋಽನುಪ್ರವೇಶೋ ಜ್ಯೇಷ್ಠಸ್ಯ ವಿಧಿಲೋಪಕಃ||

ಕಿರಿಯವನು ಹಿರಿಯವನಲ್ಲಿ ಪ್ರವೇಶಿಸಿದರೆ ಅಪಘಾತವೆನಿಸುವುದಿಲ್ಲ. ಆದರೆ ಕಿರಿಯನಲ್ಲಿ ಹಿರಿಯವನು ಅನುಪ್ರವೇಶಿಸಿದರೆ ಅದು ವಿಧಿಲೋಪಕವಾಗುತ್ತದೆ.

01205028a ನಿವರ್ತಸ್ವ ಮಹಾಬಾಹೋ ಕುರುಷ್ವ ವಚನಂ ಮಮ|

01205028c ನ ಹಿ ತೇ ಧರ್ಮಲೋಪೋಽಸ್ತಿ ನ ಚ ಮೇ ಧರ್ಷಣಾ ಕೃತಾ||

ಮಹಾಬಾಹು! ನಿಲ್ಲು! ನನ್ನ ವಚನದಂತೆ ಮಾಡು. ನಿನ್ನಿಂದ ಧರ್ಮಲೋಪವೂ ಆಗಲಿಲ್ಲ ಮತ್ತು ನಿನ್ನಿಂದ ನನಗೆ ಯಾವುದೇ ರೀತಿಯ ಅಪಮಾನವೂ ಆಗಲಿಲ್ಲ.”

01205029 ಅರ್ಜುನ ಉವಾಚ|

01205029a ನ ವ್ಯಾಜೇನ ಚರೇದ್ಧರ್ಮಮಿತಿ ಮೇ ಭವತಃ ಶ್ರುತಂ|

01205029c ಸತ್ಯಾದ್ವಿಚಲಿಷ್ಯಾಮಿ ಸತ್ಯೇನಾಯುಧಮಾಲಭೇ||

ಅರ್ಜುನನು ಹೇಳಿದನು: “ಧರ್ಮವನ್ನು ಕಪಟದಿಂದ ಪಾಲಿಸಬೇಡ ಎನ್ನುವುದನ್ನು ನಿನ್ನಿಂದಲೇ ನಾನು ಕೇಳಿದ್ದೇನೆ. ನಾನು ಸತ್ಯದಿಂದ ವಿಚಲಿತನಾಗುವುದಿಲ್ಲ. ನಾನು ಸತ್ಯದ ಆಯುಧವನ್ನು ಧರಿಸಿದ್ದೇನೆ.””

01205030 ವೈಶಂಪಾಯನ ಉವಾಚ|

01205030a ಸೋಽಭ್ಯನುಜ್ಞಾಪ್ಯ ರಾಜಾನಂ ಬ್ರಹ್ಮಚರ್ಯಾಯ ದೀಕ್ಷಿತಃ|

01205030c ವನೇ ದ್ವಾದಶ ವರ್ಷಾಣಿ ವಾಸಾಯೋಪಜಗಾಮ ಹ||

ವೈಶಂಪಾಯನನು ಹೇಳಿದನು: “ರಾಜನ ಅನುಜ್ಞೆಯಂತೆ ಅವನಿಗೆ ಬ್ರಹ್ಮಚರ್ಯದ ದೀಕ್ಷೆಯನ್ನು ನೀಡಲಾಯಿತು. ಅವನು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಲು ಹೊರಟನು[3].”

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಅರ್ಜುನತೀರ್ಥಯಾತ್ರಾಯಾಂ ಪಂಚಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಅರ್ಜುನತೀರ್ಥಯಾತ್ರ ಎನ್ನುವ ಇನ್ನೂರಾಐದನೆಯ ಅಧ್ಯಾಯವು.

Related image

[1]ಪಾಂಡವರು ಧರ್ಮದಲ್ಲಿದ್ದು ರಾಜ್ಯಭಾರವನ್ನು ಮಾಡುತ್ತಿದ್ದರು ಮತ್ತು ರಾಜ್ಯದಲ್ಲಿ ಯಾವುದೇ ರೀತಿಯ ಸುಳ್ಳು ಮತ್ತು ಕಳ್ಳತನ ನಡೆಯುತ್ತಿರಲಿಲ್ಲ ಎಂದು ಮೊದಲು ಕೇಳಿದ್ದೆವು. ಹಾಗಿರುವಾಗ, ಈ ಬ್ರಾಹ್ಮಣನು ತನ್ನ ಗೋವುಗಳ ಅಪಹರಣವಾಯಿತೆಂದು ಸಿಟ್ಟಿಗೆದ್ದು ಪಾಂಡವರನ್ನು ಏಕೆ ದೂರುತ್ತಿದ್ದಾನೆ? ಅರ್ಜುನನನ್ನು ವನವಾಸಕ್ಕೆ ಕಳುಹಿಸಲು ಇದೊಂದು ವಿಧಿಯೇ ನಿರ್ಧರಿಸಿದ ನೆಪವೇ?

[2]ರಾಜನು ತನ್ನ ಆದಾಯದ ಆರನೇ ಒಂದು ಭಾಗವನ್ನು ಮಾತ್ರ ತನ್ನ ಭೋಗಕ್ಕೆ ಬಳಸಬಹುದು!

[3]ಬ್ರಹ್ಮಚರ್ಯದ ದೀಕ್ಷೆ ಎಂದರೇನು? ಲೈಂಗಿಕ ಸುಖದಿಂದ ದೂರವಿರುವುದೇ? ಅಥವಾ ಇದಕ್ಕೂ ಹೆಚ್ಚಿನದೇ? ದಕ್ಷಿಣ ಭಾರತ (ಕುಂಭಕೋಣ) ಸಂಪುಟದಲ್ಲಿ ಅರ್ಜುನನ ವನವಾಸವು ಹನ್ನೆರಡು ‘ತಿಂಗಳುಗಳು’ ಎಂದಿದೆ. ಆದರೆ ಪುಣೆಯ ಸಂಪುಟದಲ್ಲಿ ಹನ್ನೆರಡು ‘ವರ್ಷಗಳು’ ಎಂದಿದೆ. ಈ ಹನ್ನೆರಡು ವರ್ಷಗಳು ಮತ್ತು ದ್ಯೂತದ ನಂತರ ಹನ್ನೆರಡು ವರ್ಷಗಳು - ಅಂದರೆ ಒಟ್ಟು ಇಪ್ಪತ್ನಾಲ್ಕು ವರ್ಷಗಳು ಅರ್ಜುನನು ವನವಾಸಮಾಡಿದನೇ? ಅರ್ಜುನನ ಜೀವನದಲ್ಲಿ ತುಂಬಾ ಘಟನೆಗಳು - ಮಗನ ಜನ್ಮ, ಸುಭದ್ರೆಯೊಂದಿಗೆ ಮದುವೆ - ಈ ಸಮಯದಲ್ಲಿ ನಡೆದಿದ್ದುದರಿಂದ ‘ತಿಂಗಳು’ ಗಳಿಗಿಂತ ‘ವರ್ಷಗಳೇ’ ಬಹುಷಃ ಸರಿಯೆಂದು ತೋರುತ್ತದೆ.

Comments are closed.