ಆದಿ ಪರ್ವ: ಅರ್ಜುನವನವಾಸ ಪರ್ವ
೨೦೧
ಸುಂದೋಪಸುಂದೋಪಾಖ್ಯಾನ
ರಾಕ್ಷಸ ಹಿರಣ್ಯಕಶಿಪುವಿನ ವಂಶದಲ್ಲಿ ನಿಕುಂಭನಿಗೆ ಸುಂದ-ಉಪಸುಂದರೆಂಬ, ಅನ್ಯೋನ್ಯರಿಗೆ ಪ್ರಿಯವಾದುದನ್ನೇ ಮಾಡುತ್ತಿದ್ದ ಇಬ್ಬರು ಮಕ್ಕಳು ಜನಿಸಿದುದು (೧-೫). ಅಮರತ್ವಕ್ಕಾಗಿ ಅವರಿಬ್ಬರೂ ಘೋರತಪಸ್ಸನ್ನಾಚರಿಸಿದುದು ಮತ್ತು ಅವರೀರ್ವರ ಹೊರತಾಗಿ ಬೇರೆ ಯಾರೂ ಅವರ ಮೃತ್ಯುವಿಗೆ ಕಾರಣವಾಗಬಾರದೆಂಬ ವರವನ್ನು ಪಡೆಯುವುದು (೬-೨೬). ವರಮದದಿಂದ ಸಂತೋಷವನ್ನಾಚರಿಸಿದುದು (೨೭-೩೨).
01201001 ನಾರದ ಉವಾಚ|
01201001a ಶೃಣು ಮೇ ವಿಸ್ತರೇಣೇಮಮಿತಿಹಾಸಂ ಪುರಾತನಂ|
01201001c ಭ್ರಾತೃಭಿಃ ಸಹಿತಃ ಪಾರ್ಥ ಯಥಾವೃತ್ತಂ ಯುಧಿಷ್ಠಿರ||
ನಾರದನು ಹೇಳಿದನು: “ಯುಧಿಷ್ಠಿರ! ಪಾರ್ಥ! ಈ ಪುರಾತನ ಇತಿಹಾಸವನ್ನು ವಿಸ್ತಾರವಾಗಿ ಯಥಾವತ್ತಾಗಿ, ನಿನ್ನ ತಮ್ಮಂದಿರ ಸಹಿತ ನನ್ನಿಂದ ಕೇಳು.
01201002a ಮಹಾಸುರಸ್ಯಾನ್ವವಾಯೇ ಹಿರಣ್ಯಕಶಿಪೋಃ ಪುರಾ|
01201002c ನಿಕುಂಭೋ ನಾಮ ದೈತ್ಯೇಂದ್ರಸ್ತೇಜಸ್ವೀ ಬಲವಾನಭೂತ್||
ಹಿಂದೆ ಮಹಾಸುರ ಹಿರಣ್ಯಕಶಿಪುವಿನ ವಂಶದಲ್ಲಿ[1] ನಿಕುಂಭ ಎಂಬ ಹೆಸರಿನ ತೇಜಸ್ವಿ ಬಲವಾನ ದೈತ್ಯೇಂದ್ರನಿದ್ದನು.
01201003a ತಸ್ಯ ಪುತ್ರೌ ಮಹಾವೀರ್ಯೌ ಜಾತೌ ಭೀಮಪರಾಕ್ರಮೌ[2]|
01201003c ಸಹಾನ್ಯೋನ್ಯೇನ ಭುಂಜಾತೇ ವಿನಾನ್ಯೋನ್ಯಂ ನ ಗಚ್ಛತಃ||
01201004a ಅನ್ಯೋನ್ಯಸ್ಯ ಪ್ರಿಯಕರಾವನ್ಯೋನ್ಯಸ್ಯ ಪ್ರಿಯಂವದೌ|
01201004c ಏಕಶೀಲಸಮಾಚಾರೌ ದ್ವಿಧೈವೈಕಂ ಯಥಾ ಕೃತೌ||
ಅವನಿಗೆ ಮಹಾವೀರ ಭೀಮಪರಾಕ್ರಮಿ ಪುತ್ರರಿಬ್ಬರು ಜನಿಸಿದರು. ಅವರು ಒಟ್ಟಿಗೇ ಊಟಮಾಡುತ್ತಿದ್ದರು. ಒಬ್ಬರಿಲ್ಲದೆ ಇನ್ನೊಬ್ಬರು ಎಲ್ಲಿಗೂ ಹೋಗುತ್ತಿರಲಿಲ್ಲ. ಅನ್ಯೋನ್ಯರಿಗೆ ಪ್ರಿಯಕರವಾದುದನ್ನೇ ಮಾಡುತ್ತಿದ್ದರು. ಅನ್ಯೋನ್ಯರಿಗೆ ಪ್ರಿಯವಾದುದನ್ನೇ ಮಾತನಾಡುತ್ತಿದ್ದರು. ಮತ್ತು ಇಬ್ಬರೂ ಒಂದೇ ರೀತಿಯಲ್ಲಿ ವರ್ತಿಸುತ್ತಿದ್ದರು. ನಡೆದುಕೊಳ್ಳುತ್ತಿದ್ದರು. ಒಬ್ಬನೇ ಇಬ್ಬರಾದಂತೆ ವರ್ತಿಸುತ್ತಿದ್ದರು.
01201005a ತೌ ವಿವೃದ್ಧೌ ಮಹಾವೀರ್ಯೌ ಕಾರ್ಯೇಷ್ವಪ್ಯೇಕನಿಶ್ಚಯೌ|
01201005c ತ್ರೈಲೋಕ್ಯವಿಜಯಾರ್ಥಾಯ ಸಮಾಸ್ಥಾಯೈಕನಿಶ್ಚಯಂ||
ಎಲ್ಲ ವಿಷಯಗಳಲ್ಲಿಯೂ ಏಕನಿಶ್ಚಯರಾದ ಆ ಮಹಾವೀರರು ದೊಡ್ಡವರಾದ ಮೇಲೆ ತ್ರೈಲೋಕ್ಯವಿಜಯದ ಒಂದೇ ನಿರ್ಧಾರವನ್ನು ಕೈಗೊಂಡರು.
01201006a ಕೃತ್ವಾ ದೀಕ್ಷಾಂ ಗತೌ ವಿಂಧ್ಯಂ ತತ್ರೋಗ್ರಂ ತೇಪತುಸ್ತಪಃ|
01201006c ತೌ ತು ದೀರ್ಘೇಣ ಕಾಲೇನ ತಪೋಯುಕ್ತೌ ಬಭೂವತುಃ||
ದೀಕ್ಷಾಬದ್ಧರಾಗಿ ಅವರು ವಿಂಧ್ಯಪರ್ವತಕ್ಕೆ ಹೋಗಿ ಅಲ್ಲಿ ಉಗ್ರ ತಪಸ್ಸನ್ನು ತಪಿಸಿದರು[3]. ಅವರು ದೀರ್ಘಕಾಲ ತಪೋಯುಕ್ತರಾದರು.
01201007a ಕ್ಷುತ್ಪಿಪಾಸಾಪರಿಶ್ರಾಂತೌ ಜಟಾವಲ್ಕಲಧಾರಿಣೌ|
01201007c ಮಲೋಪಚಿತಸರ್ವಾಂಗೌ ವಾಯುಭಕ್ಷೌ ಬಭೂವತುಃ||
ಹಸಿವು ಬಾಯಾರಿಕೆಗಳಿಂದ ಬಳಲಿ, ಜಟಾವಲ್ಕಲಧಾರಿಗಳಾಗಿ, ಸರ್ವಾಂಗಗಳು ಮಲಿನದಿಂದ ತುಂಬಿಹೋಗಿ, ಕೇವಲ ಗಾಳಿಯನ್ನು ಸೇವಿಸುತ್ತಿದ್ದರು.
01201008a ಆತ್ಮಮಾಂಸಾನಿ ಜುಹ್ವಂತೌ ಪಾದಾಂಗುಷ್ಠಾಗ್ರಧಿಷ್ಠಿತೌ|
01201008c ಊರ್ಧ್ವಬಾಹೂ ಚಾನಿಮಿಷೌ ದೀರ್ಘಕಾಲಂ ಧೃತವ್ರತೌ||
ಅವರು ತಮ್ಮ ಮಾಂಸದ ತುಂಡುಗಳನ್ನು ಅಗ್ನಿಯಲ್ಲಿ ಆಹುತಿಗಳನ್ನಾಗಿತ್ತರು. ಅವರ ತೋಳುಗಳನ್ನು ಮೇಲೆತ್ತಿ, ಪಾದಾಂಗುಷ್ಠದ ಮೇಲೆ ನಿಂತು ದೀರ್ಘಕಾಲದವರೆಗೆ ಧೃತವ್ರತರಾಗಿದ್ದರು.
01201009a ತಯೋಸ್ತಪಹ್ಪ್ರಭಾವೇಣ ದೀರ್ಘಕಾಲಂ ಪ್ರತಾಪಿತಃ|
01201009c ಧೂಮಂ ಪ್ರಮುಮುಚೇ ವಿಂಧ್ಯಸ್ತದದ್ಭುತಮಿವಾಭವತ್||
ದೀರ್ಘಕಾಲದ ಅವರ ತಪಸ್ಸಿನ ಪ್ರತಾಪದ ಪ್ರಭಾವದಿಂದ ಅದ್ಭುತವೋ ಎಂಬಂತೆ ವಿಂಧ್ಯವು ಹೊಗೆಕಾರತೊಡಗಿತು.
01201010a ತತೋ ದೇವಾಭವನ್ಭೀತಾ ಉಗ್ರಂ ದೃಷ್ಟ್ವಾ ತಯೋಸ್ತಪಃ|
01201010c ತಪೋವಿಘಾತಾರ್ಥಮಥೋ ದೇವಾ ವಿಘ್ನಾನಿ ಚಕ್ರಿರೇ||
ಅವರ ಉಗ್ರ ತಪಸ್ಸನ್ನು ನೋಡಿ ದೇವತೆಗಳು ಭೀತರಾದರು[4]. ದೇವತೆಗಳು ಅವರ ತಪಸ್ಸನ್ನು ಕೆಡಿಸಲೋಸುಗ ವಿಘ್ನಗಳನ್ನು ತಂದೊಟ್ಟಿದರು.
01201011a ರತ್ನೈಃ ಪ್ರಲೋಭಯಾಮಾಸುಃ ಸ್ತ್ರೀಭಿಶ್ಚೋಭೌ ಪುನಃ ಪುನಃ|
01201011c ನ ಚ ತೌ ಚಕ್ರತುರ್ಭಂಗಂ ವ್ರತಸ್ಯ ಸುಮಹಾವ್ರತೌ||
ರತ್ನಗಳಿಂದ ಮತ್ತು ಸುಂದರ ಸ್ತ್ರೀಯರ ಮೂಲಕ ಪುನಃ ಪುನಃ ಪ್ರಲೋಭಿಸಿದರು. ಆದರೂ ಆ ಇಬ್ಬರು ಸುಮಹಾವ್ರತರ ವ್ರತಭಂಗಮಾಡಲು ಸಾಧ್ಯವಾಗಲಿಲ್ಲ.
01201012a ಅಥ ಮಾಯಾಂ ಪುನರ್ದೇವಾಸ್ತಯೋಶ್ಚಕ್ರುರ್ಮಹಾತ್ಮನೋಃ|
01201012c ಭಗಿನ್ಯೋ ಮಾತರೋ ಭಾರ್ಯಾಸ್ತಯೋಃ ಪರಿಜನಸ್ತಥಾ||
01201013a ಪರಿಪಾತ್ಯಮಾನಾ ವಿತ್ರಸ್ತಾಃ ಶೂಲಹಸ್ತೇನ ರಕ್ಷಸಾ|
01201013c ಸ್ರಸ್ತಾಭರಣಕೇಶಾಂತಾ ಏಕಾಂತಭ್ರಷ್ಟವಾಸಸಃ||
ಇದರ ನಂತರ ಪುನಃ ನಡುಗುತ್ತಿರುವ, ವಸ್ತ್ರಾಭರಣಗಳು, ತಲೆಕೂದಲು ಕೆದರಿದ, ಬಟ್ಟೆಯು ಒಂದೆಡೆ ಕಳಚಿ ಹೋಗುತ್ತಿರುವ ಆ ಮಹಾತ್ಮರ ಸಹೋದರಿಯರು, ತಾಯಂದಿರು ಭಾರ್ಯೆಯರು ಮತ್ತು ಇತರ ಪರಿಜನರನ್ನು ರಾಕ್ಷಸರು ಶೂಲಹಸ್ತದಿಂದ ತಿವಿಯುತ್ತಿರುವಂತೆ ದೇವತೆಗಳು ಮಾಯೆಯನ್ನು ಸೃಷ್ಟಿಸಿದರು.
01201014a ಅಭಿಧಾವ್ಯ ತತಃ ಸರ್ವಾಸ್ತೌ ತ್ರಾಹೀತಿ ವಿಚುಕ್ರುಶುಃ|
01201014c ನ ಚ ತೌ ಚಕ್ರತುರ್ಭಂಗಂ ವ್ರತಸ್ಯ ಸುಮಹಾವ್ರತೌ||
ಆ ಸರ್ವ ಸ್ತ್ರೀಯರು ಅವರ ಬಳಿ ಓಡಿಬಂದು “ತ್ರಾಹಿ! ತ್ರಾಹಿ!” ಎಂದು ಚೀರಿಕೊಂಡರು. ಆದರೂ ಆ ಸುಮಹಾವ್ರತರು ತಮ್ಮ ವ್ರತವನ್ನು ಮುರಿಯಲಿಲ್ಲ.
01201015a ಯದಾ ಕ್ಷೋಭಂ ನೋಪಯಾತಿ ನಾರ್ತಿಮನ್ಯತರಸ್ತಯೋಃ|
01201015c ತತಃ ಸ್ತ್ರಿಯಸ್ತಾ ಭೂತಂ ಚ ಸರ್ವಮಂತರಧೀಯತ||
ಅವರು ಯಾವುದೇ ರೀತಿಯ ಉದ್ವೇಗ ಮತ್ತು ದುಃಖಗಳನ್ನು ತೋರಿಸದೇ ಇದ್ದಾಗ ಸ್ತ್ರೀಯರೆಲ್ಲರೂ ಅಲ್ಲಿಯೇ ಅಂತರ್ಧಾನರಾದರು.
01201016a ತತಃ ಪಿತಾಮಹಃ ಸಾಕ್ಷಾದಭಿಗಮ್ಯ ಮಹಾಸುರೌ|
01201016c ವರೇಣ ಚಂದಯಾಮಾಸ ಸರ್ವಲೋಕಪಿತಾಮಹಃ||
ಆಗ ಸಾಕ್ಷಾತ್ ಸರ್ವಲೋಕಪಿತಾಮಹ ಪಿತಾಮಹನು ಆ ಮಹಾಸುರರಲ್ಲಿಗೆ ಬಂದು ವರಗಳನ್ನಿತ್ತನು.
01201017a ತತಃ ಸುಂದೋಪಸುಂದೌ ತೌ ಭ್ರಾತರೌ ದೃಢವಿಕ್ರಮೌ|
01201017c ದೃಷ್ಟ್ವಾ ಪಿತಾಮಹಂ ದೇವಂ ತಸ್ಥತುಃ ಪ್ರಾಂಜಲೀ ತದಾ||
01201018a ಊಚತುಶ್ಚ ಪ್ರಭುಂ ದೇವಂ ತತಸ್ತೌ ಸಹಿತೌ ತದಾ|
01201018c ಆವಯೋಸ್ತಪಸಾನೇನ ಯದಿ ಪ್ರೀತಃ ಪಿತಾಮಹಃ||
01201019a ಮಾಯಾವಿದಾವಸ್ತ್ರವಿದೌ ಬಲಿನೌ ಕಾಮರೂಪಿಣೌ|
01201019c ಉಭಾವಪ್ಯಮರೌ ಸ್ಯಾವಃ ಪ್ರಸನ್ನೋ ಯದಿ ನೌ ಪ್ರಭುಃ||
ಆಗ ದೃಢವಿಕ್ರಮಿ ಸುಂದೋಪಸುಂದ ಸಹೋದರರು ದೇವ ಪಿತಾಮಹನನ್ನು ಕಂಡು ಅಂಜಲೀಬದ್ಧರಾಗಿ ನಿಂತು ಇಬ್ಬರೂ ಒಟ್ಟಿಗೇ ಪ್ರಭು ದೇವನಲ್ಲಿ ಕೇಳಿಕೊಂಡರು: “ನಮ್ಮ ಈ ತಪಸ್ಸಿನಿಂದ ಪಿತಾಮಹನು ಪ್ರೀತನಾಗಿದ್ದರೆ ನಾವಿಬ್ಬರೂ ಮಯಾವಿದ, ಅಸ್ತ್ರವಿದ, ಬಲಶಾಲಿ, ಕಾಮರೂಪಿಗಳಾಗಲಿ[5]. ಪ್ರಭುವು ಪ್ರಸನ್ನನಾಗಿದ್ದಾನೆಂದರೆ ನಾವಿಬ್ಬರೂ ಅಮರರಾಗಲಿ.”
01201020 ಪಿತಾಮಹ ಉವಾಚ|
01201020a ಋತೇಽಮರತ್ವಮನ್ಯದ್ವಾಂ ಸರ್ವಮುಕ್ತಂ ಭವಿಷ್ಯತಿ|
01201020c ಅನ್ಯದ್ವೃಣೀತಾಂ ಮೃತ್ಯೋಶ್ಚ ವಿಧಾನಮಮರೈಃ ಸಮಂ||
ಪಿತಾಮಹನು ಹೇಳಿದನು: “ಅಮರತ್ವವೊಂದನ್ನು ಬಿಟ್ಟು ನೀವು ಹೇಳಿದ ಬೇರೆಲ್ಲವೂ ಆಗುತ್ತದೆ. ಅಮರರಿಗೆ ಸಮಾನ[6] ಬೇರೆ ಯಾವುದಾದರು ಮೃತ್ಯುವಿನ ವಿಧಾನವನ್ನು ಕೇಳಿಕೊಳ್ಳಿ.
01201021a ಕರಿಷ್ಯಾವೇದಮಿತಿ ಯನ್ಮಹದಭ್ಯುತ್ಥಿತಂ ತಪಃ|
01201021c ಯುವಯೋರ್ಹೇತುನಾನೇನ ನಾಮರತ್ವಂ ವಿಧೀಯತೇ||
ಯಾವುದೋ ಕಾರಣಕ್ಕಾಗಿ ನೀವು ಈ ಮಹಾ ತಪಸ್ಸನ್ನು ನೆರೆವೇರಿಸಿದುದರಿಂದ ನಿಮಗೆ ಅಮರತ್ವವು ದೊರೆಯಲಾರದು.
01201022a ತ್ರೈಲೋಕ್ಯವಿಜಯಾರ್ಥಾಯ ಭವದ್ಭ್ಯಾಮಾಸ್ಥಿತಂ ತಪಃ|
01201022c ಹೇತುನಾನೇನ ದೈತ್ಯೇಂದ್ರೌ ನ ವಾಂ ಕಾಮಂ ಕರೋಮ್ಯಹಂ||
ದೈತ್ಯೇಂದ್ರರೇ! ತ್ರೈಲೋಕ್ಯವಿಜಯಾರ್ಥವಾಗಿ ನೀವು ಇದನ್ನು ಕೈಗೊಂಡಿದ್ದೀರಿ. ಆದುದರಿಂದ ನಾನು ನಿಮ್ಮ ಇಚ್ಛೆಯನ್ನು ಪೂರೈಸಲಾರೆ.”
01201023 ಸುಂದೋಪಸುಂದಾವೂಚತುಃ|
01201023a ತ್ರಿಷು ಲೋಕೇಷು ಯದ್ಭೂತಂ ಕಿಂ ಚಿತ್ ಸ್ಥಾವರಜಂಗಮಂ|
01201023c ಸರ್ವಸ್ಮಾನ್ನೌ ಭಯಂ ನ ಸ್ಯಾದೃತೇಽನ್ಯೋನ್ಯಂ ಪಿತಾಮಹ||
ಸುಂದೋಪಸುಂದರು ಹೇಳಿದರು: “ಪಿತಾಮಹ! ಈ ಮೂರೂ ಲೋಕದಲ್ಲಿ ನಮ್ಮೀರ್ವರ ಹೊರತಾಗಿ ಬೇರೆ ಯಾವುದೇ ಸ್ಥಾವರಜಂಗಮದಿಂದಲೂ ನಮಗೆ ಮೃತ್ಯುಭಯವು ಇಲ್ಲದಿರಲಿ.”
01201024 ಪಿತಾಮಹ ಉವಾಚ|
01201024a ಯತ್ಪ್ರಾರ್ಥಿತಂ ಯಥೋಕ್ತಂ ಚ ಕಾಮಮೇತದ್ದದಾನಿ ವಾಂ|
01201024c ಮೃತ್ಯೋರ್ವಿಧಾನಮೇತಚ್ಚ ಯಥಾವದ್ವಾಂ ಭವಿಷ್ಯತಿ||
ಪಿತಾಮಹನು ಹೇಳಿದನು: “ನೀವು ಕೇಳಿದಂತೆ ಈ ಆಸೆಯನ್ನು ನಾನು ಪೂರೈಸಬಲ್ಲೆ. ನಿಮ್ಮ ಮೃತ್ಯುವಿಧಿಯು ನೀವು ಕೇಳಿಕೊಂಡಂತೆಯೇ ಆಗುತ್ತದೆ.””
01201025 ನಾರದ ಉವಾಚ|
01201025a ತತಃ ಪಿತಾಮಹೋ ದತ್ತ್ವಾ ವರಮೇತತ್ತದಾ ತಯೋಃ|
01201025c ನಿವರ್ತ್ಯ ತಪಸಸ್ತೌ ಚ ಬ್ರಹ್ಮಲೋಕಂ ಜಗಾಮ ಹ||
ನಾರದನು ಹೇಳಿದನು: “ನಂತರ ಪಿತಾಮಹನು ಈ ವರಗಳನ್ನಿತ್ತು ಅವರೀರ್ವರನ್ನೂ ತಪಸ್ಸಿನಿಂದ ಹಿಂದಿರುಗಿಸಿ, ಬ್ರಹ್ಮಲೋಕಕ್ಕೆ ಹೋದನು.
01201026a ಲಬ್ಧ್ವಾ ವರಾಣಿ ಸರ್ವಾಣಿ ದೈತ್ಯೇಂದ್ರಾವಪಿ ತಾವುಭೌ|
01201026c ಅವಧ್ಯೌ ಸರ್ವಲೋಕಸ್ಯ ಸ್ವಮೇವ ಭವನಂ ಗತೌ||
ಸರ್ವ ವರಗಳನ್ನೂ ಪಡೆದು ಸರ್ವಲೋಕಕ್ಕೆ ಅವಧ್ಯ ಆ ದೈತ್ಯೇಂದ್ರರು ತಮ್ಮ ಮನೆಗೆ ತೆರಳಿದರು.
01201027a ತೌ ತು ಲಬ್ಧವರೌ ದೃಷ್ಟ್ವಾ ಕೃತಕಾಮೌ ಮಹಾಸುರೌ|
01201027c ಸರ್ವಃ ಸುಹೃಜ್ಜನಸ್ತಾಭ್ಯಾಂ ಪ್ರಮೋದಮುಪಜಗ್ಮಿವಾನ್||
ವರಗಳನ್ನು ಗಳಿಸಿ ಆ ಕೃತಕಾಮಿ ಮಹಾಸುರರನ್ನು ನೋಡಿದ ಸರ್ವ ಸುಹೃಜ್ಜನರೂ ಪ್ರಮೋದಿತರಾದರು.
01201028a ತತಸ್ತೌ ತು ಜಟಾ ಹಿತ್ವಾ ಮೌಲಿನೌ ಸಂಬಭೂವತುಃ|
01201028c ಮಹಾರ್ಹಾಭರಣೋಪೇತೌ ವಿರಜೋಂಬರಧಾರಿಣೌ||
ಅವರು ಜಟೆಗಳನ್ನು ಕತ್ತರಿಸಿ, ಮಾಲಿನ್ಯವನ್ನು ತೊಳೆದು, ಮಹಾ ಬೆಲೆಬಾಳುವ ಆಭರಣಗಳು ಮತ್ತು ವಸ್ತ್ರಗಳನ್ನು ಧರಿಸಿ ವಿರಾಜಿಸಿದರು.
01201029a ಅಕಾಲಕೌಮುದೀಂ ಚೈವ ಚಕ್ರತುಃ ಸಾರ್ವಕಾಮಿಕೀಂ|
01201029c ದೈತ್ಯೇಂದ್ರೌ ಪರಮಪ್ರೀತೌ ತಯೋಶ್ಚೈವ ಸುಹೃಜ್ಜನಃ||
ಅದಕ್ಕೆ ಕಾಲವಲ್ಲದಿದ್ದರೂ ಅವರು ಸಾರ್ವಕಾಮಿಕಿ ಕೌಮುದಿಯನ್ನು ನೆರೆವೇರಿಸಿದರು. ಮತ್ತು ಆ ದೈತ್ಯೇಂದ್ರರೀರ್ವರು ತಮ್ಮ ಸುಹೃಜ್ಜನರೊಂದಿಗೆ ಪರಮಪ್ರೀತರಾದರು.
01201030a ಭಕ್ಷ್ಯತಾಂ ಭುಜ್ಯತಾಂ ನಿತ್ಯಂ ರಮ್ಯತಾಂ ಗೀಯತಾಮಿತಿ|
01201030c ಪೀಯತಾಂ ದೀಯತಾಂ ಚೇತಿ ವಾಚಾಸನ್ಗೃಹೇ ಗೃಹೇ||
ಮನೆಮನೆಗಳಲ್ಲಿ “ತಿನ್ನು! ಔತಣಮಾಡು! ರಮಿಸು! ಹಾಡು! ಕುಡಿ! ಮತ್ತು ಕೊಡು!”ಎನ್ನುವ ಮಾತುಗಳೇ ನಿತ್ಯವೂ ಕೇಳಿಬರುತ್ತಿದ್ದವು.
01201031a ತತ್ರ ತತ್ರ ಮಹಾಪಾನೈರುತ್ಕೃಷ್ಟತಲನಾದಿತೈಃ|
01201031c ಹೃಷ್ಟಂ ಪ್ರಮುದಿತಂ ಸರ್ವಂ ದೈತ್ಯಾನಾಮಭವತ್ಪುರಂ||
ಅಲ್ಲಲ್ಲಿ ಮಹಾಪಾನಗಳಿಂದ, ಚಪ್ಪಾಳೆಯ ಶಬ್ಧಗಳಿಂದ ಆ ದೈತ್ಯರ ಪುರವಿಡೀ ಹರ್ಷದಿಂದ ತೇಲಾಡಿತು.
01201032a ತೈಸ್ತೈರ್ವಿಹಾರೈರ್ಬಹುಭಿರ್ದೈತ್ಯಾನಾಂ ಕಾಮರೂಪಿಣಾಂ|
01201032c ಸಮಾಃ ಸಂಕ್ರೀಡತಾಂ ತೇಷಾಮಹರೇಕಮಿವಾಭವತ್||
ಈ ರೀತಿ ಆ ಕಾಮರೂಪಿ ದೈತ್ಯರು ಬಹಳ ಕ್ರೀಡೆಗಳಲ್ಲಿ ತೊಡಗಿರಲು ವರ್ಷಗಳು ಒಂದೇ ಒಂದು ದಿನದಂತೆ ಕಳೆದವು.”
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ಏಕಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ಒಂದನೆಯ ಅಧ್ಯಾಯವು.
[1]ಹಿರಣ್ಯಕಶಿಪುವಿನ ವಂಶಾವಳಿ: ಹಿರಣ್ಯಕಶಿಪು, ಪ್ರಹ್ಲಾದ...
[2]ಗೀತಾ ಪ್ರೆಸ್: ಸುಂದೋಪಸುಂದೌ ದೈತ್ಯೇಂದ್ರೌ ದಾರುಣೌ ಕ್ರೂರಮಾನಸೌ|| ತಾವೇಕನಿಶ್ಚಯೌ ದೈತ್ಯಾತ್ವೇಕಕಾರ್ಯಾರ್ಥಸಮ್ಮತೌ| ನಿರಂತರಮವರ್ತೇತಾಂ ಸಮದುಹ್ಕಸುಖಾವುಭೌ||
[3]ದೈತ್ಯರ ತಪಸ್ಸು ಯಾವಾಗಲೂ ಉಗ್ರವಾಗಿಯೇ ಇರುತ್ತದೆ!
[4]ದೈತ್ಯರು ತಪಸ್ಸು ಮಾಡಿದಾಗಲೆಲ್ಲಾ ದೇವತೆಗಳಿಗಾಗುವ ಕಷ್ಟ ಏನು? ಏಕೆ ಅವರು ತಪಸ್ಸನ್ನು ಭಂಗಪಡಿಸಲು ಪ್ರಯತ್ನಿಸುತ್ತಾರೆ? ತಪಸ್ಸು ಒಳ್ಳೆಯದಲ್ಲವೇ? ಪುರಾಣಗಳಲ್ಲೆಲ್ಲಾ ಇದರ ಪುನರಾವೃತ್ತಿ ಆಗುತ್ತಲೇ ಬರುತ್ತದೆ.
[5]ಇಷ್ಟ ಬಂದಂತೆ ಶರೀರದ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಬರಲಿ.
[6]ದೇವತೆಗಳಂತೆ ಶಾಶ್ವತವಾಗಿ ಇರಲು ಸಾಧ್ಯವಾಗುವಂತೆ