|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ರಾಜ್ಯಲಾಭ ಪರ್ವ
೧೯೯
ದ್ರುಪದ-ವಾಸುದೇವರ ಸಲಹೆಯ ಮೇರೆಗೆ ಪಾಂಡವರು ದ್ರೌಪದಿಯೊಂದಿಗೆ ಹಸ್ತಿನಾಪುರಕ್ಕೆ ಮರಳಿದುದು (೧-೧೧). ಪಾಂಡವರ ಸ್ವಾಗತ (೧೨-೨೩). “ಪುನಃ ಮನಸ್ತಾಪವಾಗದಿರಲೆಂದು ಅರ್ಧರಾಜ್ಯವನ್ನು ಪಡೆದು ಖಾಂಡವಪ್ರಸ್ಥಕ್ಕೆ ಹೋಗು” ಎಂದು ಧೃತರಾಷ್ಟ್ರನು ಹೇಳಲು ಪಾಂಡವರು ಅಲ್ಲಿ ಇಂದ್ರಪ್ರಸ್ಥ ನಗರಿಯನ್ನು ನಿರ್ಮಿಸಿ ವಾಸಿಸಿದುದು (೨೪-೫೦).
01199001 ದ್ರುಪದ ಉವಾಚ|
01199001a ಏವಮೇತನ್ಮಹಾಪ್ರಾಜ್ಞ ಯಥಾತ್ಥ ವಿದುರಾದ್ಯ ಮಾಂ|
01199001c ಮಮಾಪಿ ಪರಮೋ ಹರ್ಷಃ ಸಂಬಂಧೇಽಸ್ಮಿನ್ಕೃತೇ ವಿಭೋ||
ದ್ರುಪದನು ಹೇಳಿದನು: “ಮಹಾಪ್ರಜ್ಞ ವಿದುರ! ವಿಭೋ! ನೀನು ನನಗೆ ಹೇಳಿದ ಹಾಗೆಯೇ ನನಗೂ ಕೂಡ ಈ ಸಂಬಂಧವಾದುದರಿಂದ ಪರಮ ಹರ್ಷವಾಗುತ್ತಿದೆ.
01199002a ಗಮನಂ ಚಾಪಿ ಯುಕ್ತಂ ಸ್ಯಾದ್ಗೃಹಮೇಷಾಂ ಮಹಾತ್ಮನಾಂ|
01199002c ನ ತು ತಾವನ್ಮಯಾ ಯುಕ್ತಮೇತದ್ವಕ್ತುಂ ಸ್ವಯಂ ಗಿರಾ||
ಈ ಮಹಾತ್ಮರು ತಮ್ಮ ಮನೆಗೆ ತೆರಳುವುದು ಯುಕ್ತವಾಗಿದೆ. ಆದರೆ ಇದನ್ನು ನಾನೇ ನನ್ನ ಮಾತುಗಳಲ್ಲಿ ಹೇಳುವುದು ಸರಿಯೆನಿಸುತ್ತಿರಲಿಲ್ಲ.
01199003a ಯದಾ ತು ಮನ್ಯತೇ ವೀರಃ ಕುಂತೀಪುತ್ರೋ ಯುಧಿಷ್ಠಿರಃ|
01199003c ಭೀಮಸೇನಾರ್ಜುನೌ ಚೈವ ಯಮೌ ಚ ಪುರುಷರ್ಷಭೌ||
01199004a ರಾಮಕೃಷ್ಣೌ ಚ ಧರ್ಮಜ್ಞೌ ತದಾ ಗಚ್ಛಂತು ಪಾಂಡವಾಃ|
01199004c ಏತೌ ಹಿ ಪುರುಷವ್ಯಾಘ್ರಾವೇಷಾಂ ಪ್ರಿಯಹಿತೇ ರತೌ||
ವೀರ ಕುಂತೀಪುತ್ರ ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಪುರುಷರ್ಷಭ ಯಮಳರು ಒಪ್ಪಿದರೆ ಮತ್ತು ಧರ್ಮಜ್ಞ ಬಲರಾಮ- ಕೃಷ್ಣರು ಒಪ್ಪಿಕೊಂಡರೆ ಪಾಂಡವರು ಹೋಗಬಹುದು. ಈ ಈರ್ವರು ಪುರುಷವ್ಯಾಘ್ರರೂ ಅವರ ಪ್ರಿಯರೂ ಹಿತೈಷಿಗಳೂ ಹೌದು.”
01199005 ಯುಧಿಷ್ಠಿರ ಉವಾಚ|
01199005a ಪರವಂತೋ ವಯಂ ರಾಜಂಸ್ತ್ವಯಿ ಸರ್ವೇ ಸಹಾನುಗಾಃ|
01199005c ಯಥಾ ವಕ್ಷ್ಯಸಿ ನಃ ಪ್ರೀತ್ಯಾ ಕರಿಷ್ಯಾಮಸ್ತಥಾ ವಯಂ||
ಯುಧಿಷ್ಠಿರನು ಹೇಳಿದನು: “ರಾಜನ್! ನಾವೆಲ್ಲರೂ ನಿನ್ನ ಸಹಾನುಗರು ಮತ್ತು ಅವಲಂಬಿಸಿರುವೆವು. ನಮ್ಮ ಒಳ್ಳೆಯದಕ್ಕಾಗಿ ನೀನು ಏನನ್ನು ಹೇಳುತ್ತೀಯೋ ಹಾಗೆಯೇ ಮಾಡುತ್ತೇವೆ.””
01199006 ವೈಶಂಪಾಯನ ಉವಾಚ|
01199006a ತತೋಽಬ್ರವೀದ್ವಾಸುದೇವೋ ಗಮನಂ ಮಮ ರೋಚತೇ|
01199006c ಯಥಾ ವಾ ಮನ್ಯತೇ ರಾಜಾ ದ್ರುಪದಃ ಸರ್ವಧರ್ಮವಿತ್||
ವೈಶಂಪಾಯನನು ಹೇಳಿದನು: ““ಸರ್ವಧರ್ಮವನ್ನೂ ತಿಳಿದ ರಾಜ ದ್ರುಪದನು ಒಪ್ಪಿಕೊಂಡರೆ ಅವರು ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ!” ಎಂದು ವಾಸುದೇವನು ಹೇಳಿದನು.
01199007 ದ್ರುಪದ ಉವಾಚ|
01199007a ಯಥೈವ ಮನ್ಯತೇ ವೀರೋ ದಾಶಾರ್ಹಃ ಪುರುಷೋತ್ತಮಃ|
01199007c ಪ್ರಾಪ್ತಕಾಲಂ ಮಹಾಬಾಹುಃ ಸಾ ಬುದ್ಧಿರ್ನಿಶ್ಚಿತಾ ಮಮ||
ದ್ರುಪದನು ಹೇಳಿದನು: “ವೀರ ದಾಶಾರ್ಹ ಮಹಾಬಾಹು! ಬುದ್ಧಿನಿಶ್ಚಿತ ಪುರುಷೋತ್ತಮನ ಸಮಯಕ್ಕೆ ಸರಿಯಾದ ಅಭಿಪ್ರಾಯವೇನಿದೆಯೋ ಅದೇ ನನ್ನ ಅಭಿಪ್ರಾಯ.
01199008a ಯಥೈವ ಹಿ ಮಹಾಭಾಗಾಃ ಕೌಂತೇಯಾ ಮಮ ಸಾಂಪ್ರತಂ|
01199008c ತಥೈವ ವಾಸುದೇವಸ್ಯ ಪಾಂಡುಪುತ್ರಾ ನ ಸಂಶಯಃ||
ಯಾಕೆಂದರೆ ಮಹಾಭಾಗ ಕೌಂತೇಯರು ನನಗೆಷ್ಟು ಹತ್ತಿರದವರೋ ಹಾಗೆಯೇ ಪಾಂಡುಪುತ್ರರು ವಾಸುದೇವನ ಹತ್ತಿರದವರು ಎನ್ನುವುದರಲ್ಲಿ ಸಂಶಯವಿಲ್ಲ.
01199009a ನ ತದ್ಧ್ಯಾಯತಿ ಕೌಂತೇಯೋ ಧರ್ಮಪುತ್ರೋ ಯುಧಿಷ್ಠಿರಃ|
01199009c ಯದೇಷಾಂ ಪುರುಷವ್ಯಾಘ್ರಃ ಶ್ರೇಯೋ ಧ್ಯಾಯತಿ ಕೇಶವಃ||
ಪುರುಷವ್ಯಾಘ್ರ ಕೇಶವನು ಇವರ ಶ್ರೇಯಸ್ಸಿನ ಕುರಿತು ಚಿಂತಿಸುವಷ್ಟು ಕೌಂತೇಯ ಧರ್ಮಪುತ್ರ ಯುಧಿಷ್ಠಿರನೂ ಚಿಂತಿಸುವುದಿಲ್ಲ.””
01199010 ವೈಶಂಪಾಯನ ಉವಾಚ|
01199010a ತತಸ್ತೇ ಸಮನುಜ್ಞಾತಾ ದ್ರುಪದೇನ ಮಹಾತ್ಮನಾ|
01199010c ಪಾಂಡವಾಶ್ಚೈವ ಕೃಷ್ಣಶ್ಚ ವಿದುರಶ್ಚ ಮಹಾಮತಿಃ|
01199011a ಆದಾಯ ದ್ರೌಪದೀಂ ಕೃಷ್ಣಾಂ ಕುಂತೀಂ ಚೈವ ಯಶಸ್ವಿನೀಂ|
01199011c ಸವಿಹಾರಂ ಸುಖಂ ಜಗ್ಮುರ್ನಗರಂ ನಾಗಸಾಹ್ವಯಂ||
ವೈಶಂಪಾಯನನು ಹೇಳಿದನು: “ನಂತರ ಮಹಾತ್ಮ ದ್ರುಪದನು ಅವರಿಗೆ ಅನುಜ್ಞೆಯನ್ನಿತ್ತನು. ಪಾಂಡವರು, ಕೃಷ್ಣ, ಮಹಾಮತಿ ವಿದುರ, ಮತ್ತು ಯಶಸ್ವಿನಿ ಕುಂತಿಯು ದ್ರೌಪದಿ ಕೃಷ್ಣೆಯನ್ನು ಕರೆದುಕೊಂಡು ಸುಖವಾಗಿ ಅಲ್ಲಲ್ಲಿ ತಂಗುತ್ತಾ ನಾಗಸಾಹ್ವಯ ನಗರಕ್ಕೆ ಹೋದರು.
01199012a ಶ್ರುತ್ವಾ ಚೋಪಸ್ಥಿತಾನ್ವೀರಾನ್ಧೃತರಾಷ್ಟ್ರೋಽಪಿ ಕೌರವಃ|
01199012c ಪ್ರತಿಗ್ರಹಾಯ ಪಾಂಡೂನಾಂ ಪ್ರೇಷಯಾಮಾಸ ಕೌರವಾನ್||
01199013a ವಿಕರ್ಣಂ ಚ ಮಹೇಷ್ವಾಸಂ ಚಿತ್ರಸೇನಂ ಚ ಭಾರತ|
01199013c ದ್ರೋಣಂ ಚ ಪರಮೇಷ್ವಾಸಂ ಗೌತಮಂ ಕೃಪಮೇವ ಚ||
ಆ ವೀರರು ಬರುತ್ತಿದ್ದಾರೆ ಎಂದು ಕೇಳಿದ ಕೌರವ ಧೃತರಾಷ್ಟ್ರನು ಪಾಂಡವರನ್ನು ಸ್ವಾಗತಿಸಲು ಕೌರವರನ್ನು ಕಳುಹಿಸಿದನು: ವಿಕರ್ಣ, ಮಹೇಷ್ವಾಸ ಚಿತ್ರಸೇನ, ಪರಮೇಷ್ವಾಸ ದ್ರೋಣ ಮತ್ತು ಗೌತಮ ಕೃಪ.
01199014a ತೈಸ್ತೇ ಪರಿವೃತಾ ವೀರಾಃ ಶೋಭಮಾನಾ ಮಹಾರಥಾಃ|
01199014c ನಗರಂ ಹಾಸ್ತಿನಪುರಂ ಶನೈಃ ಪ್ರವಿವಿಶುಸ್ತದಾ||
ಅವರಿಂದ ಸುತ್ತುವರೆಯಲ್ಪಟ್ಟು ಶೋಭಾಯಮಾನರಾದ ಆ ವೀರ ಮಹಾರಥಿಗಳು ನಿಧಾನವಾಗಿ ಹಸ್ತಿನಪುರ ನಗರವನ್ನು ಪ್ರವೇಶಿಸಿದರು.
01199015a ಕೌತೂಹಲೇನ ನಗರಂ ದೀರ್ಯಮಾಣಮಿವಾಭವತ್|
01199015c ಯತ್ರ ತೇ ಪುರುಷವ್ಯಾಘ್ರಾಃ ಶೋಕದುಃಖವಿನಾಶನಾಃ||
ಶೋಕದುಃಖವಿನಾಶಕ ಪುರುಷವ್ಯಾಘ್ರರು ಪ್ರವೇಶಿಸಿದ ಆ ನಗರವು ಕುತೂಹಲದಿಂದ ಬಿರಿದು ಒಡೆಯುವಂತೆ ತೋರುತ್ತಿತ್ತು.
01199016a ತತ ಉಚ್ಚಾವಚಾ ವಾಚಃ ಪ್ರಿಯಾಃ ಪ್ರಿಯಚಿಕೀರ್ಷುಭಿಃ|
01199016c ಉದೀರಿತಾ ಅಶೃಣ್ವಂಸ್ತೇ ಪಾಂಡವಾ ಹೃದಯಂಗಮಾಃ||
ಅವರ ಪ್ರಿಯರು ಪ್ರೀತಿಯುಕ್ತ ಮಾತುಗಳನ್ನು ಚೀರಿ ಹೇಳುತ್ತಿದ್ದರು. ಅವನ್ನು ಕೇಳಿದ ಪಾಂಡವರ ಹೃದಯಗಳು ತುಂಬಿಬಂದವು.
01199017a ಅಯಂ ಸ ಪುರುಷವ್ಯಾಘ್ರಃ ಪುನರಾಯಾತಿ ಧರ್ಮವಿತ್|
01199017c ಯೋ ನಃ ಸ್ವಾನಿವ ದಾಯಾದಾನ್ಧರ್ಮೇಣ ಪರಿರಕ್ಷತಿ||
“ಧರ್ಮವಿದ ಪುರುಷವ್ಯಾಘ್ರನು ಪುನಃ ಬಂದಿದ್ದಾನೆ! ತನ್ನ ದಾಯಾದಿಗಳೋ ಎನ್ನುವಂತೆ ಇನ್ನು ನಮ್ಮನ್ನು ಧರ್ಮದಿಂದ ಪರಿರಕ್ಷಿಸುತ್ತಾನೆ.
01199018a ಅದ್ಯ ಪಾಂಡುರ್ಮಹಾರಾಜೋ ವನಾದಿವ ವನಪ್ರಿಯಃ|
01199018c ಆಗತಃ ಪ್ರಿಯಮಸ್ಮಾಕಂ ಚಿಕೀರ್ಷುರ್ನಾತ್ರ ಸಂಶಯಃ||
ಇಂದು ವನಪ್ರಿಯ ಮಹಾರಾಜ ಪಾಂಡುವು ವನದಿಂದ ನಮಗೆಲ್ಲ ಒಳ್ಳೆಯದನ್ನು ಮಾಡಲಿಕ್ಕಾಗಿ ಬಂದಂತೆ ತೋರುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.
01199019a ಕಿಂ ನು ನಾದ್ಯ ಕೃತಂ ತಾವತ್ಸರ್ವೇಷಾಂ ನಃ ಪರಂ ಪ್ರಿಯಂ|
01199019c ಯನ್ನಃ ಕುಂತೀಸುತಾ ವೀರಾ ಭರ್ತಾರಃ ಪುನರಾಗತಾಃ||
ವೀರ ಭರ್ತಾರ ಕುಂತೀಸುತರು ಪುನಃ ಬಂದಿದ್ದಾರೆ ಎನ್ನುವುದನ್ನು ಬಿಟ್ಟು ಇನ್ನೂ ಅತಿಯಾದ ಸಂತೋಷವು ಇಂದು ನಮಗೆ ಎಲ್ಲರಿಗೂ ಬೇರೆ ಯಾವುದಿದೆ?
01199020a ಯದಿ ದತ್ತಂ ಯದಿ ಹುತಂ ವಿದ್ಯತೇ ಯದಿ ನಸ್ತಪಃ|
01199020c ತೇನ ತಿಷ್ಠಂತು ನಗರೇ ಪಾಂಡವಾಃ ಶರದಾಂ ಶತಂ||
ನಾವು ಎಂದಾದರೂ ದಾನ ಮಾಡಿದ್ದರೆ, ಯಜ್ಞಗಳನ್ನು ಮಾಡಿದ್ದರೆ ಅಥವಾ ತಪಸ್ಸನ್ನು ಮಾಡಿದ್ದರೆ ಅದರ ಕಾರಣದಿಂದಲಾದರೂ ಪಾಂಡವರು ಈ ನಗರದಲ್ಲಿ ನೂರು ಶರದಗಳ ಕಾಲ ನಿಲ್ಲಲಿ!”
01199021a ತತಸ್ತೇ ಧೃತರಾಷ್ಟ್ರಸ್ಯ ಭೀಷ್ಮಸ್ಯ ಚ ಮಹಾತ್ಮನಃ|
01199021c ಅನ್ಯೇಷಾಂ ಚ ತದರ್ಹಾಣಾಂ ಚಕ್ರುಃ ಪಾದಾಭಿವಂದನಂ||
01199022a ಕೃತ್ವಾ ತು ಕುಶಲಪ್ರಶ್ನಂ ಸರ್ವೇಣ ನಗರೇಣ ತೇ|
01199022c ಸಮಾವಿಶಂತ ವೇಶ್ಮಾನಿ ಧೃತರಾಷ್ಟ್ರಸ್ಯ ಶಾಸನಾತ್||
ನಂತರ ಅವರು ಧೃತರಾಷ್ಟ್ರ, ಮಹಾತ್ಮ ಭೀಷ್ಮ ಮತ್ತು ಇತರ ಅರ್ಹರ ಪಾದಗಳನ್ನು ಹಿಡಿದು ಅಭಿನಂದಿಸಿದರು, ಮತ್ತು ನಗರದಲ್ಲಿ ಸರ್ವರ ಕುಶಲಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಧೃತರಾಷ್ಟ್ರನ ಹೇಳಿಕೆಯಂತೆ ಅವನ ಅರಮನೆಯನ್ನು ಪ್ರವೇಶಿಸಿದರು.
01199023a ವಿಶ್ರಾಂತಾಸ್ತೇ ಮಹಾತ್ಮಾನಃ ಕಂ ಚಿತ್ಕಾಲಂ ಮಹಾಬಲಾಃ|
01199023c ಆಹೂತಾ ಧೃತರಾಷ್ಟ್ರೇಣ ರಾಜ್ಞಾ ಶಾಂತನವೇನ ಚ||
ಆ ಮಾಹಾತ್ಮ ಮಹಾಬಲಿಗಳು ವಿಶ್ರಾಂತಿ ಹೊಂದಿದ ಸ್ವಲ್ಪ ಸಮಯದಲ್ಲಿ ರಾಜ ಧೃತರಾಷ್ಟ್ರ ಮತ್ತು ಶಾಂತನವರು ಅವರನ್ನು ಕರೆಸಿದರು.
01199024 ಧೃತರಾಷ್ಟ್ರ ಉವಾಚ|
01199024a ಭ್ರಾತೃಭಿಃ ಸಹ ಕೌಂತೇಯ ನಿಬೋಧೇದಂ ವಚೋ ಮಮ|
01199024c ಪುನರ್ವೋ ವಿಗ್ರಹೋ ಮಾ ಭೂತ್ಖಾಂಡವಪ್ರಸ್ಥಮಾವಿಶ||
ಧೃತರಾಷ್ಟ್ರನು ಹೇಳಿದನು: “ಕೌಂತೇಯ! ಭ್ರಾತೃಗಳ ಸಹಿತ ನನ್ನ ಈ ಮಾತುಗಳನ್ನು ಗಮನವಿಟ್ಟು ಕೇಳು. ಪುನಃ ಮನಸ್ತಾಪವಾಗದಿರಲೆಂದು ನೀನು ಖಾಂಡವಪ್ರಸ್ಥಕ್ಕೆ ಹೋಗು.
01199025a ನ ಚ ವೋ ವಸತಸ್ತತ್ರ ಕಶ್ಚಿಚ್ಛಕ್ತಃ ಪ್ರಬಾಧಿತುಂ|
01199025c ಸಂರಕ್ಷ್ಯಮಾಣಾನ್ಪಾರ್ಥೇನ ತ್ರಿದಶಾನಿವ ವಜ್ರಿಣಾ|
01199025e ಅರ್ಧಂ ರಾಜ್ಯಸ್ಯ ಸಂಪ್ರಾಪ್ಯ ಖಾಂಡವಪ್ರಸ್ಥಮಾವಿಶ||
ತ್ರಿದಶ ವಜ್ರಿಯಂತಿರುವ ಪಾರ್ಥನಿಂದ ರಕ್ಷಿಸಲ್ಪಟ್ಟು ಅಲ್ಲಿ ವಾಸಿಸಿದರೆ ನಿನ್ನನ್ನು ಯಾರೂ ಕೂಡ ಬಾಧಿಸಲು ಶಕ್ಯವಿಲ್ಲ. ಅರ್ಧ ರಾಜ್ಯವನ್ನು ಪಡೆದು ಖಾಂಡವಪ್ರಸ್ಥಕ್ಕೆ ಹೋಗು.””
01199026 ವೈಶಂಪಾಯನ ಉವಾಚ|
01199026a ಪ್ರತಿಗೃಹ್ಯ ತು ತದ್ವಾಕ್ಯಂ ನೃಪಂ ಸರ್ವೇ ಪ್ರಣಮ್ಯ ಚ|
01199026c ಪ್ರತಸ್ಥಿರೇ ತತೋ ಘೋರಂ ವನಂ ತನ್ಮನುಜರ್ಷಭಾಃ|
01199026e ಅರ್ಧಂ ರಾಜ್ಯಸ್ಯ ಸಂಪ್ರಾಪ್ಯ ಖಾಂಡವಪ್ರಸ್ಥಮಾವಿಶನ್||
ವೈಶಂಪಾಯನನು ಹೇಳಿದನು: “ನೃಪನ ಆ ಮಾತುಗಳನ್ನು ಸ್ವೀಕರಿಸಿದ ಅವರೆಲ್ಲರೂ ಅವನಿಗೆ ನಮಸ್ಕರಿಸಿದರು. ನಂತರ ಆ ಮನುಜರ್ಷಭರು ಅರ್ಧ ರಾಜ್ಯವನ್ನು ಪಡೆದು ಘೋರ ವನವಾಗಿದ್ದ ಖಾಂಡವಪ್ರಸ್ಥವನ್ನು ಪ್ರವೇಶಿಸಿದರು.
01199027a ತತಸ್ತೇ ಪಾಂಡವಾಸ್ತತ್ರ ಗತ್ವಾ ಕೃಷ್ಣಪುರೋಗಮಾಃ|
01199027c ಮಂಡಯಾಂ ಚಕ್ರಿರೇ ತದ್ವೈ ಪುರಂ ಸ್ವರ್ಗವದಚ್ಯುತಾಃ||
ಕೃಷ್ಣನ ಮುಂದಾಳುತ್ವದಲ್ಲಿ ಪಾಂಡವರು ಅಲ್ಲಿಗೆ ಹೋಗಿ ಸ್ವರ್ಗದಷ್ಟೇ ಸುಂದರ ಪುರವೊಂದನ್ನು ನಿರ್ಮಿಸಿದರು.
01199028a ತತಃ ಪುಣ್ಯೇ ಶಿವೇ ದೇಶೇ ಶಾಂತಿಂ ಕೃತ್ವಾ ಮಹಾರಥಾಃ|
01199028c ನಗರಂ ಮಾಪಯಾಮಾಸುರ್ದ್ವೈಪಾಯನಪುರೋಗiಃ||
ದ್ವೈಪಾಯನನ ನಾಯಕತ್ವದಲ್ಲಿ ಒಂದು ಪುಣ್ಯ ಕಾಲದಲ್ಲಿ ಶುಭ ಪ್ರದೇಶವನ್ನು ಶಾಂತಿಗೊಳಿಸಿ ಮಹಾರಥಿಗಳು ನಗರದ ಮಾಪನ ಮಾಡಿದರು.
01199029a ಸಾಗರಪ್ರತಿರೂಪಾಭಿಃ ಪರಿಖಾಭಿರಲಂಕೃತಂ|
01199029c ಪ್ರಾಕಾರೇಣ ಚ ಸಂಪನ್ನಂ ದಿವಮಾವೃತ್ಯ ತಿಷ್ಠತಾ|
01199030a ಪಾಂಡುರಾಭ್ರಪ್ರಕಾಶೇನ ಹಿಮರಾಶಿನಿಭೇನ ಚ|
01199030c ಶುಶುಭೇ ತತ್ಪುರಶ್ರೇಷ್ಠಂ ನಾಗೈರ್ಭೋಗವತೀ ಯಥಾ||
ಅದು ಸಾಗರದಂತಿದ್ದ ಪರಿಖಗಳಿಂದ ಅಲಂಕೃತವಾಗಿತ್ತು. ಆಕಾಶವನ್ನು ವ್ಯಾಪಿಸಿದ ಸುಂದರ, ಅಭ್ರಪ್ರಕಾಶದಿಂದ ಬಿಳಿಯಾದ, ಅಥವಾ ಹಿಮರಾಶಿಯಂತಿರುವ ಪ್ರಾಕಾರಗಳಿಂದ ಸುತ್ತುವರೆಯಲ್ಪಟ್ಟಿತ್ತು. ನಾಗಗಳಿಂದ ಬೋಗವತಿಯು ಹೇಗೆ ಶೋಭಿಸುತ್ತದೆಯೋ ಹಾಗೆ ಆ ಶ್ರೇಷ್ಠ ಪುರವೂ ಶೋಭಿಸುತ್ತಿತ್ತು.
01199031a ದ್ವಿಪಕ್ಷಗರುಡಪ್ರಖ್ಯೈರ್ದ್ವಾರೈರ್ಘೋರಪ್ರದರ್ಶನೈಃ|
01199031c ಗುಪ್ತಮಭ್ರಚಯಪ್ರಖ್ಯೈರ್ಗೋಪುರೈರ್ಮಂದರೋಪಮೈಃ||
ಅದು ಘೋರವಾಗಿ ಕಾಣುತ್ತಿದ್ದ ಗರುಡನ ಎರಡು ರೆಕ್ಕೆಗಳಂತಿರುವ ದ್ವಾರಗಳಿಂದ ರಕ್ಷಿತವಾಗಿತ್ತು. ದ್ವಾರದ ಗೋಪುರಗಳು ಮಂದರವನ್ನು ಮುಚ್ಚಿರುವ ಮೋಡಗಳಂತೆ ತೋರುತ್ತಿದ್ದವು.
01199032a ವಿವಿಧೈರತಿನಿರ್ವಿದ್ಧೈಃ ಶಸ್ತ್ರೋಪೇತೈಃ ಸುಸಂವೃತೈಃ|
01199032c ಶಕ್ತಿಭಿಶ್ಚಾವೃತಂ ತದ್ಧಿ ದ್ವಿಜಿಹ್ವೈರಿವ ಪನ್ನಗೈಃ|
01199032e ತಲ್ಪೈಶ್ಚಾಭ್ಯಾಸಿಕೈರ್ಯುಕ್ತಂ ಶುಶುಭೇ ಯೋಧರಕ್ಷಿತಂ||
ದ್ವಾರಗಳಲ್ಲಿ ತುಂಬಾ ಹರಿತ ವಿವಿಧ ಶಸ್ತ್ರಗಳನ್ನಿಟ್ಟಿದ್ದರು. ಎರಡು ನಾಲಿಗೆಗಳ ಪನ್ನಗಗಳಂತಿರುವ ಶಕ್ತಿಗಳಿಂದ ಸುತ್ತುವರೆಯಲ್ಪಟ್ಟಿತ್ತು. ಖಡ್ಗ ಡಮರುಗಳನ್ನು ಹಿಡಿದ ಶುಭ ಯೋಧರಿಂದ ರಕ್ಷಿಸಲ್ಪಟ್ಟಿತ್ತು.
01199033a ತೀಕ್ಷ್ಣಾಂಕುಶಶತಘ್ನೀಭಿರ್ಯಂತ್ರಜಾಲೈಶ್ಚ ಶೋಭಿತಂ|
01199033c ಆಯಸೈಶ್ಚ ಮಹಾಚಕ್ರೈಃ ಶುಶುಭೇ ತತ್ಪುರೋತ್ತಮಂ|
ನೂರಾರು ತೀಕ್ಷ್ಣ ಅಂಕುಶ ಮತ್ತು ಯಂತ್ರಜಾಲಗಳಿಂದ ಶೋಭಿತವಾಗಿತ್ತು. ಆ ಉತ್ತಮ ಪುರವು ಆಯಸ ಮಹಾಚಕ್ರಗಳಿಂದ ಶೋಭಿತವಾಗಿತ್ತು.
01199034a ಸುವಿಭಕ್ತಮಹಾರಥ್ಯಂ ದೇವತಾಬಾಧವರ್ಜಿತಂ|
01199034c ವಿರೋಚಮಾನಂ ವಿವಿಧೈಃ ಪಾಂಡುರೈರ್ಭವನೋತ್ತಮೈಃ||
ಅಲ್ಲಿ ಮಹಾರಥಗಳು ಹೋಗಲು ಬೇರೆ ಬೇರೆ ಹೊಂಡ ಅಪಘಾತಗಳು ಆಗದಂತಿದ್ದ, ಎರಡೂ ಕಡೆ ಉತ್ತಮ ಶ್ವೇತವರ್ಣ ಭವನಗಳಿಂದ ಕೂಡಿದ್ದ ವಿಶಾಲ ರಸ್ತೆಗಳಿದ್ದವು.
01199035a ತತ್ತ್ರಿವಿಷ್ಟಪಸಂಕಾಶಮಿಂದ್ರಪ್ರಸ್ಥಂ ವ್ಯರೋಚತ|
01199035c ಮೇಘವೃಂದಮಿವಾಕಾಶೇ ವೃದ್ಧಂ ವಿದ್ಯುತ್ಸಮಾವೃತಂ||
ಸ್ವರ್ಗದಂತೆ ಹೊಳೆಯುತ್ತಿದ್ದ ಇಂದ್ರಪ್ರಸ್ಥವು ಆಕಾಶದಲ್ಲಿ ಮಿಂಚಿನಿಂದ ಸಮಾವೃತ ಮೋಡಗಳ ರಾಶಿಯಂತೆ ಕಾಣುತ್ತಿತ್ತು.
01199036a ತತ್ರ ರಮ್ಯೇ ಶುಭೇ ದೇಶೇ ಕೌರವ್ಯಸ್ಯ ನಿವೇಶನಂ|
01199036c ಶುಶುಭೇ ಧನಸಂಪೂರ್ಣಂ ಧನಾಧ್ಯಕ್ಷಕ್ಷಯೋಪಮಂ||
ಈ ರಮ್ಯ ಶುಭ ಪ್ರದೇಶದಲ್ಲಿ ಶುಭ ಸಂಪತ್ತು ಅಕ್ಷಯವಾಗಿದೆಯೋ ಎನ್ನುವಂತೆ ಧನಸಂಪೂರ್ಣವಾದ ಕೌರವನ ನಿವೇಶನವಿತ್ತು.
01199037a ತತ್ರಾಗಚ್ಛನ್ದ್ವಿಜಾ ರಾಜನ್ಸರ್ವವೇದವಿದಾಂ ವರಾಃ|
01199037c ನಿವಾಸಂ ರೋಚಯಂತಿ ಸ್ಮ ಸರ್ವಭಾಷಾವಿದಸ್ತಥಾ||
ರಾಜನ್! ಸರ್ವವೇದವಿದರಲ್ಲಿ ಶ್ರೇಷ್ಠ ದ್ವಿಜರು ಅಲ್ಲಿಗೆ ಬಂದರು. ಸರ್ವ ಭಾಷೆಯ ಜನರೂ ಅಲ್ಲಿ ವಾಸಿಸಲು ಬಯಸುತ್ತಿದ್ದರು.
01199038a ವಣಿಜಶ್ಚಾಭ್ಯಯುಸ್ತತ್ರ ದೇಶೇ ದಿಗ್ಭ್ಯೋ ಧನಾರ್ಥಿನಃ|
01199038c ಸರ್ವಶಿಲ್ಪವಿದಶ್ಚೈವ ವಾಸಾಯಾಭ್ಯಾಗಮಂಸ್ತದಾ||
ಆ ದೇಶಕ್ಕೆ ಎಲ್ಲ ಕಡೆಗಳಿಂದಲೂ ಧನಾರ್ಥಿಗಳಾದ ವ್ಯಾಪಾರಿಗಳು, ವರ್ತಕರು ಬಂದರು ಮತ್ತು ಸರ್ವ ಶಿಲ್ಪ ವಿದ್ವಾಂಸರೂ ಅಲ್ಲಿ ವಾಸಿಸಲು ಬಂದರು.
01199039a ಉದ್ಯಾನಾನಿ ಚ ರಮ್ಯಾಣಿ ನಗರಸ್ಯ ಸಮಂತತಃ|
01199039c ಆಮ್ರೈರಾಮ್ರಾತಕೈರ್ನೀಪೈರಶೋಕೈಶ್ಚಂಪಕೈಸ್ತಥಾ||
01199040a ಪುನ್ನಾಗೈರ್ನಾಗಪುಷ್ಪೈಶ್ಚ ಲಕುಚೈಃ ಪನಸೈಸ್ತಥಾ|
01199040c ಶಾಲತಾಲಕದಂಬೈಶ್ಚ ಬಕುಲೈಶ್ಚ ಸಕೇತಕೈಃ||
01199041a ಮನೋಹರೈಃ ಪುಷ್ಪಿತೈಶ್ಚ ಫಲಭಾರಾವನಾಮಿತೈಃ|
01199041c ಪ್ರಾಚೀನಾಮಲಕೈರ್ಲೋಧ್ರೈರಂಕೋಲೈಶ್ಚ ಸುಪುಷ್ಪಿತೈಃ||
01199042a ಜಂಬೂಭಿಃ ಪಾಟಲಾಭಿಶ್ಚ ಕುಬ್ಜಕೈರತಿಮುಕ್ತಕೈಃ|
01199042c ಕರವೀರೈಃ ಪಾರಿಜಾತೈರನ್ಯೈಶ್ಚ ವಿವಿಧೈರ್ದ್ರುಮೈಃ||
01199043a ನಿತ್ಯಪುಷ್ಪಫಲೋಪೇತೈರ್ನಾನಾದ್ವಿಜಗಣಾಯುತಂ|
01199043c ಮತ್ತಬರ್ಹಿಣಸಂಘುಷ್ಟಂ ಕೋಕಿಲೈಶ್ಚ ಸದಾಮದೈಃ||
ನಗರವು ಮಾವು, ಅಮ್ರಾತಕ, ನಿಪ, ಅಶೋಕ, ಚಂಪಕ, ಪುನ್ನಾಗ, ನಾಗಪುಷ್ಪ, ಲಕುಚ, ಪನಸ, ಶಾಲತಾಲ, ಕದಂಬ, ಬಕುಲ, ಸಕೇತ, ಮೊದಲಾದ ಮನೋಹರ ಪುಷ್ಪಿತ, ಫಲಗಳ ಭಾರದಿಂದ ಬಾಗಿದ್ದ, ಮರಗಳಿಂದ ಕೂಡಿದ ಸುಂದರ ಉದ್ಯಾನವನಗಳಿಂದ ಆವೃತವಾಗಿತ್ತು. ಆ ವನಗಳು ಗಳಿತ ಅಮಲಕ, ಲೋದ್ರ, ಹೂಬಿಟ್ಟ ಅಂಕೋಲಗಳು, ಜಂಬೂ, ಪಾಟಲ, ಕುಬ್ಜಕ, ಅತಿಮುಕ್ತಕ, ಕರವೀರ, ಪಾರಿಜಾತ, ಮತ್ತು ಅನ್ಯ ವಿವಿಧ ಮರಗಳಿಂದ, ನಿತ್ಯವೂ ಪುಷ್ಪ-ಫಲಗಳಿಂದ ತುಂಬಿರುವ ನಾನಾಪಕ್ಷಿಗಳ ಸಂಕುಲಗಳಿಂದ ಕೂಡಿದ, ಮತ್ತಿನಲ್ಲಿದ್ದ ನವಿಲುಗಳ ಮತ್ತು ಸದಾ ಮದದಲ್ಲಿದ್ದ ಕೋಕಿಲಗಳ ಧ್ವನಿಗಳಿಂದ ಕೂಡಿದ್ದವು.
01199044a ಗೃಹೈರಾದರ್ಶವಿಮಲೈರ್ವಿವಿಧೈಶ್ಚ ಲತಾಗೃಹೈಃ|
01199044c ಮನೋಹರೈಶ್ಚಿತ್ರಗೃಹೈಸ್ತಥಾ ಜಗತಿಪರ್ವತೈಃ|
01199044e ವಾಪೀಭಿರ್ವಿವಿಧಾಭಿಶ್ಚ ಪೂರ್ಣಾಭಿಃ ಪರಮಾಂಭಸಾ||
01199045a ಸರೋಭಿರತಿರಮ್ಯೈಶ್ಚ ಪದ್ಮೋತ್ಪಲಸುಗಂಧಿಭಿಃ|
01199045c ಹಂಸಕಾರಂಡವಯುತೈಶ್ಚಕ್ರವಾಕೋಪಶೋಭಿತೈಃ||
01199046a ರಮ್ಯಾಶ್ಚ ವಿವಿಧಾಸ್ತತ್ರ ಪುಷ್ಕರಿಣ್ಯೋ ವನಾವೃತಾಃ|
01199046c ತಡಾಗಾನಿ ಚ ರಮ್ಯಾಣಿ ಬೃಹಂತಿ ಚ ಮಹಾಂತಿ ಚ||
ಅದು ಕನ್ನಡಿಗಳಂತೆ ಶುಭ್ರ ಮನೆಗಳಿಂದ, ವಿವಿಧ ಲತಾಗೃಹಗಳಿಂದ, ಬಣ್ಣಬಣ್ಣದ ಮನೋಹರ ಮನೆಗಳಿಂದ, ಸುಖಮಯ ಪರ್ವತಗಳಿಂದ, ಶುದ್ಧ ನೀರು ತುಂಬಿದ ಕೊಳಗಳಿಂದ, ಪದ್ಮ ಕುಸುಮಗಳ ಸುಗಂಧದಿಂದ ತುಂಬಿದ, ಹಂಸ ಬಾತುಕೋಳಿಗಳ ಕಲರವದಿಂದ, ಚಕ್ರವಾಕ ಪಕ್ಷಿಗಳಿಂದ ಶೋಭಿತ ಅತಿರಮ್ಯ ಸುಂದರ ಸರೋವರಗಳಿಂದ, ರಮ್ಯ ವನಗಳಿಂದ ಆವೃತ ವಿವಿಧ ಪುಷ್ಕರಿಣಿಗಳಿಂದ, ಮತ್ತು ಅಗಲ ಮತ್ತು ದೊಡ್ಡ ರಮ್ಯ ಕೆರೆಗಳಿಂದ ಕೂಡಿತ್ತು.
01199047a ತೇಷಾಂ ಪುಣ್ಯಜನೋಪೇತಂ ರಾಷ್ಟ್ರಮಾವಸತಾಂ ಮಹತ್|
01199047c ಪಾಂಡವಾನಾಂ ಮಹಾರಾಜ ಶಶ್ವತ್ಪ್ರೀತಿರವರ್ಧತ||
01199048a ತತ್ರ ಭೀಷ್ಮೇಣ ರಾಜ್ಞಾ ಚ ಧರ್ಮಪ್ರಣಯನೇ ಕೃತೇ|
01199048c ಪಾಂಡವಾಃ ಸಮಪದ್ಯಂತ ಖಾಂಡವಪ್ರಸ್ಥವಾಸಿನಃ||
ಮಹಾರಾಜ! ಆ ಪುಣ್ಯಜನೋಪೇತ ಮಹಾ ರಾಷ್ಟ್ರದಲ್ಲಿ ವಾಸಿಸುತ್ತಿದ್ದ ಪಾಂಡವರ ಸಂತೋಷವು ನಿರಂತರವೂ ಹೆಚ್ಚಾಗುತ್ತಿತ್ತು. ಈ ರೀತಿ ಭೀಷ್ಮ ಮತ್ತು ರಾಜನ ಧರ್ಮ ಪ್ರಣಯದಿಂದ ಪಾಂಡವರು ಖಾಂಡವಪ್ರಸ್ಥದಲ್ಲಿ ವಾಸಿಸಲು ಪ್ರಾರಂಭಿಸಿದರು.
01199049a ಪಂಚಭಿಸ್ತೈರ್ಮಹೇಷ್ವಾಸೈರಿಂದ್ರಕಲ್ಪೈಃ ಸಮನ್ವಿತಂ|
01199049c ಶುಶುಭೇ ತತ್ಪುರಶ್ರೇಷ್ಠಂ ನಾಗೈರ್ಭೋಗವತೀ ಯಥಾ||
ಆ ಐದು ಇಂದ್ರಕಲ್ಪ ಮಹೇಷ್ವಾಸರಿದ ಕೂಡಿದ ಆ ಶ್ರೇಷ್ಠ ಪುರವು ನಾಗಗಳಿಂದ ಭೋಗವತಿಯು ಹೇಗೋ ಹಾಗೆ ಶೋಭಿಸುತ್ತಿತ್ತು.
01199050a ತಾನ್ನಿವೇಶ್ಯ ತತೋ ವೀರೋ ರಾಮೇಣ ಸಹ ಕೇಶವಃ|
01199050c ಯಯೌ ದ್ವಾರವತೀಂ ರಾಜನ್ಪಾಂಡವಾನುಮತೇ ತದಾ||
ರಾಜನ್! ಅಲ್ಲಿ ಅವರ ತಳವನ್ನೂರಿಸಿ ಕೇಶವನು ವೀರ ರಾಮನ ಸಹಿತ ಪಾಂಡವರ ಅನುಮತಿಯನ್ನು ಪಡೆದು ದ್ವಾರವತಿಗೆ ಹಿಂದಿರುಗಿದರು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ರಾಜ್ಯಲಾಭಪರ್ವಣಿ ಏಕೋನದ್ವಿಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ರಾಜ್ಯಲಾಭಪರ್ವದಲ್ಲಿ ನೂರಾತೊಂಭತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ರಾಜ್ಯಲಾಭಪರ್ವ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ರಾಜ್ಯಲಾಭಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೫/೧೦೦, ಅಧ್ಯಾಯಗಳು-೧೯೯/೧೯೯೫, ಶ್ಲೋಕಗಳು-೬೪೧೮/೭೩೭೮೪