Adi Parva: Chapter 198

ಆದಿ ಪರ್ವ: ವಿದುರಾಗಮನ ಪರ್ವ

೧೯೮

ಧೃತರಾಷ್ಟ್ರನು ತನ್ನ ಸಂದೇಶವನ್ನಿತ್ತು, ಪಾಂಡವರನ್ನು ಕರೆದುಕೊಂಡು ಬರಲು ವಿದುರನನ್ನು ಪಾಂಚಾಲನಗರಿಗೆ ಕಳುಹಿಸುವುದು (೧-೬).  ವಿದುರನು ಧೃತರಾಷ್ಟ್ರನ ಸಂದೇಶವನ್ನು ದ್ರುಪದನಿಗೆ ನೀಡಿದುದು (೭-೨೫).

01198001 ಧೃತರಾಷ್ಟ್ರ ಉವಾಚ|

01198001a ಭೀಷ್ಮಃ ಶಾಂತನವೋ ವಿದ್ವಾನ್ದ್ರೋಣಶ್ಚ ಭಗವಾನೃಷಿಃ|

01198001c ಹಿತಂ ಪರಮಕಂ ವಾಕ್ಯಂ ತ್ವಂ ಚ ಸತ್ಯಂ ಬ್ರವೀಷಿ ಮಾಂ||

ಧೃತರಾಷ್ಟ್ರನು ಹೇಳಿದನು: “ವಿದ್ವಾನ್ ಶಾಂತನವ ಭೀಷ್ಮ ಮತ್ತು ಭಗವಾನೃಷಿ ದ್ರೋಣರು ನನಗೆ ಪರಮ ಹಿತವನ್ನು ತರುವಂಥ ಮಾತುಗಳನ್ನು ಹೇಳಿದ್ದಾರೆ. ನೀನೂ ಕೂಡ ನನಗೆ ಸತ್ಯವನ್ನು ನುಡಿದಿದ್ದೀಯೆ.

01198002a ಯಥೈವ ಪಾಂಡೋಸ್ತೇ ವೀರಾಃ ಕುಂತೀಪುತ್ರಾ ಮಹಾರಥಾಃ|

01198002c ತಥೈವ ಧರ್ಮತಃ ಸರ್ವೇ ಮಮ ಪುತ್ರಾ ನ ಸಂಶಯಃ||

ಧರ್ಮದ ಪ್ರಕಾರ ಆ ವೀರ ಕುಂತೀಪುತ್ರ ಮಹಾರಥಿ ಪಾಂಡುವಿನ ಮಕ್ಕಳು ಹೇಗೋ ಹಾಗೆ ನನ್ನ ಮಕ್ಕಳೂ ಹೌದು ಎನ್ನುವುದರಲ್ಲಿ ಸಂಶಯವೇ ಇಲ್ಲ.

01198003a ಯಥೈವ ಮಮ ಪುತ್ರಾಣಾಮಿದಂ ರಾಜ್ಯಂ ವಿಧೀಯತೇ|

01198003c ತಥೈವ ಪಾಂಡುಪುತ್ರಾಣಾಮಿದಂ ರಾಜ್ಯಂ ನ ಸಂಶಯಃ||

ಈ ರಾಜ್ಯವು ನನ್ನ ಮಕ್ಕಳಿಗೆ ಹೇಗೆ ವಿಧಿವತ್ತಾಗಿದೆಯೋ ಹಾಗೆ ಪಾಂಡುಪುತ್ರರಿಗೂ ಕೂಡ ಈ ರಾಜ್ಯವಿದೆ ಎನ್ನುವುದರಲ್ಲಿ ಸಂಶಯವಿಲ್ಲ.

01198004a ಕ್ಷತ್ತರಾನಯ ಗಚ್ಛೈತಾನ್ಸಹ ಮಾತ್ರಾ ಸುಸತ್ಕೃತಾನ್|

01198004c ತಯಾ ಚ ದೇವರೂಪಿಣ್ಯಾ ಕೃಷ್ಣಯಾ ಸಹ ಭಾರತ||

ಕ್ಷತ್ತ! ಭಾರತ! ಹೋಗಿ ಅವರನ್ನು ಅವರ ತಾಯಿ ಮತ್ತು ದೇವರೂಪಿಣಿ ಕೃಷ್ಣೆಯ ಸಹಿತ ಸುಸತ್ಕೃತರಾಗಿ ಕರೆದುಕೊಂಡು ಬಾ. 

01198005a ದಿಷ್ಟ್ಯಾ ಜೀವಂತಿ ತೇ ಪಾರ್ಥಾ ದಿಷ್ಟ್ಯಾ ಜೀವತಿ ಸಾ ಪೃಥಾ|

01198005c ದಿಷ್ಟ್ಯಾ ದ್ರುಪದಕನ್ಯಾಂ ಚ ಲಬ್ಧವಂತೋ ಮಹಾರಥಾಃ||

01198006a ದಿಷ್ಟ್ಯಾ ವರ್ಧಾಮಹೇ ಸರ್ವೇ ದಿಷ್ಟ್ಯಾ ಶಾಂತಃ ಪುರೋಚನಃ|

01198006c ದಿಷ್ಟ್ಯಾ ಮಮ ಪರಂ ದುಃಖಮಪನೀತಂ ಮಹಾದ್ಯುತೇ||

ಅದೃಷ್ಟವಶಾತ್ ಪಾರ್ಥರು ಜೀವಂತವಾಗಿದ್ದಾರೆ. ಅದೃಷ್ಟವಶಾತ್ ಪೃಥೆಯು ಜೀವಂತವಾಗಿದ್ದಾಳೆ. ಮಹಾರಥಿಗಳು ದ್ರುಪದಕನ್ಯೆಯನ್ನು ಪಡೆದಿದ್ದಾರೆ. ತುಂಬಾ ಒಳ್ಳೆಯದಾಯಿತು. ಒಳ್ಳೆಯದಾಯಿತು ನಾವೆಲ್ಲರೂ ಅಭಿವೃದ್ಧಿ ಹೊಂದುತ್ತಿದ್ದೇವೆ. ಒಳ್ಳೆಯದಾಯಿತು ಪುರೋಚನನು ಸುಮ್ಮನಾಗಿದ್ದಾನೆ. ಮಹಾದ್ಯುತಿ! ಒಳ್ಳೆಯದಾಯಿತು. ನನ್ನ ಪರಮ ದುಃಖವನ್ನು ಕೊಂಡೊಯ್ಯಲಾಗಿದೆ.””

01198007 ವೈಶಂಪಾಯನ ಉವಾಚ|

01198007a ತತೋ ಜಗಾಮ ವಿದುರೋ ಧೃತರಾಷ್ಟ್ರಸ್ಯ ಶಾಸನಾತ್|

01198007c ಸಕಾಶಂ ಯಜ್ಞಸೇನಸ್ಯ ಪಾಂಡವಾನಾಂ ಚ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ನಂತರ ಧೃತರಾಷ್ಟ್ರನ ಶಾಸನದಂತೆ ವಿದುರನು ಯಜ್ಞಸೇನ ಮತ್ತು ಪಾಂಡವರ ಬಳಿ ಹೋದನು.

01198008a ತತ್ರ ಗತ್ವಾ ಸ ಧರ್ಮಜ್ಞಃ ಸರ್ವಶಾಸ್ತ್ರವಿಶಾರದಃ|

01198008c ದ್ರುಪದಂ ನ್ಯಾಯತೋ ರಾಜನ್ಸಂಯುಕ್ತಮುಪತಸ್ಥಿವಾನ್||

ರಾಜನ್! ಧರ್ಮಜ್ಞನೂ ಸರ್ವಶಾಸ್ತ್ರವಿಶಾರದನೂ ಆದ ಅವನು ದ್ರುಪದನಲ್ಲಿಗೆ ಹೋಗಿ ನ್ಯಾಯಪೂರ್ವಕ ಸರಿಯಾಗಿ ಬರಮಾಡಿಸಿಕೊಂಡನು.

01198009a ಸ ಚಾಪಿ ಪ್ರತಿಜಗ್ರಾಹ ಧರ್ಮೇಣ ವಿದುರಂ ತತಃ|

01198009c ಚಕ್ರತುಶ್ಚ ಯಥಾನ್ಯಾಯಂ ಕುಶಲಪ್ರಶ್ನಸಂವಿದಂ||

ಅವನೂ ಕೂಡ ವಿದುರನನ್ನು ಧಾರ್ಮಿಕವಾಗಿ ಬರಮಾಡಿಕೊಂಡನು ಮತ್ತು ನ್ಯಾಯದಂತೆ ಪರಸ್ಪರರ ಕುಶಲಪ್ರಶ್ನೆಗಳನ್ನು ಕೇಳಿಕೊಂಡರು.

01198010a ದದರ್ಶ ಪಾಂಡವಾಂಸ್ತತ್ರ ವಾಸುದೇವಂ ಚ ಭಾರತ|

01198010c ಸ್ನೇಹಾತ್ಪರಿಷ್ವಜ್ಯ ಸ ತಾನ್ಪಪ್ರಚ್ಛಾನಾಮಯಂ ತತಃ||

ಭಾರತ! ಅಲ್ಲಿ ಅವನು ಪಾಂಡವರನ್ನು ಮತ್ತು ವಾಸುದೇವನನ್ನು ನೋಡಿದನು ಮತ್ತು ಅವರನ್ನು ಸ್ನೇಹಪೂರ್ವಕ ಆಲಂಗಿಸಿ ಅವರ ಆರೋಗ್ಯದ ಕುರಿತು ವಿಚಾರಿಸಿದನು.

01198011a ತೈಶ್ಚಾಪ್ಯಮಿತಬುದ್ಧಿಃ ಸ ಪೂಜಿತೋಽಥ ಯಥಾಕ್ರಮಂ|

01198011c ವಚನಾದ್ಧೃತರಾಷ್ಟ್ರಸ್ಯ ಸ್ನೇಹಯುಕ್ತಂ ಪುನಃ ಪುನಃ||

01198012a ಪಪ್ರಚ್ಛಾನಾಮಯಂ ರಾಜಂಸ್ತತಸ್ತಾನ್ಪಾಂಡುನಂದನಾನ್|

01198012c ಪ್ರದದೌ ಚಾಪಿ ರತ್ನಾನಿ ವಿವಿಧಾನಿ ವಸೂನಿ ಚ||

ರಾಜನ್! ಒಬ್ಬೊಬ್ಬರಾಗಿ ಅವರು ಆ ಅಮಿತಬುದ್ಧಿಯನ್ನು ಸಮಸ್ಕರಿಸಿದರು ಮತ್ತು ಅವನು ಧೃತರಾಷ್ಟ್ರನ ಸ್ನೇಹಯುಕ್ತ ಮಾತುಗಳಂತೆ ಪುನಃ ಪುನಃ ಆ ಪಾಂಡುನಂದನರ ಆರೋಗ್ಯದ ಕುರಿತು ಕೇಳಿದನು. 

01198013a ಪಾಂಡವಾನಾಂ ಚ ಕುಂತ್ಯಾಶ್ಚ ದ್ರೌಪದ್ಯಾಶ್ಚ ವಿಶಾಂ ಪತೇ|

01198013c ದ್ರುಪದಸ್ಯ ಚ ಪುತ್ರಾಣಾಂ ಯಥಾ ದತ್ತಾನಿ ಕೌರವೈಃ||

ವಿಶಾಂಪತೇ! ಕೌರವರು ಕಳುಹಿಸಿದ್ದ ವಿವಿಧ ರತ್ನ ಮತ್ತು ಐಶ್ವರ್ಯಗಳನ್ನು ಪಾಂಡವರಿಗೆ, ಕುಂತಿಗೆ, ದ್ರೌಪದಿಗೆ ಮತ್ತು ದ್ರುಪದನ ಪುತ್ರರಿಗೆ ಕೊಟ್ಟನು.

01198014a ಪ್ರೋವಾಚ ಚಾಮಿತಮತಿಃ ಪ್ರಶ್ರಿತಂ ವಿನಯಾನ್ವಿತಃ|

01198014c ದ್ರುಪದಂ ಪಾಂಡುಪುತ್ರಾಣಾಂ ಸನ್ನಿಧೌ ಕೇಶವಸ್ಯ ಚ||

ನಂತರ ಆ ಅಮಿತಮತಿ ವಿನಯಾನ್ವಿತನು ಕೇಶವ ಮತ್ತು ಪಾಂಡುಪುತ್ರರ ಸನ್ನಿಧಿಯಲ್ಲಿ ದ್ರುಪದನನ್ನುದ್ದೇಶಿಸಿ ಹೇಳಿದನು:

01198015a ರಾಜಂಶೃಣು ಸಹಾಮಾತ್ಯಃ ಸಪುತ್ರಶ್ಚ ವಚೋ ಮಮ|

01198015c ಧೃತರಾಷ್ಟ್ರಃ ಸಪುತ್ರಸ್ತ್ವಾಂ ಸಹಾಮಾತ್ಯಃ ಸಬಾಂಧವಃ||

01198016a ಅಬ್ರವೀತ್ಕುಶಲಂ ರಾಜನ್ಪ್ರೀಯಮಾಣಃ ಪುನಃ ಪುನಃ|

01198016c ಪ್ರೀತಿಮಾಂಸ್ತೇ ದೃಢಂ ಚಾಪಿ ಸಂಬಂಧೇನ ನರಾಧಿಪ||

“ರಾಜನ್! ಅಮಾತ್ಯ ಮತ್ತು ಪುತ್ರರ ಸಹಿತ ನನ್ನ ಮಾತುಗಳನ್ನು ಕೇಳು. ರಾಜನ್! ತನ್ನ ಪುತ್ರರು, ಅಮಾತ್ಯರು ಮತ್ತು ಬಾಂಧವರನ್ನು ಸೇರಿ ಧೃತರಾಷ್ಟ್ರನು ಪ್ರೀತಿಯುತವಾಗಿ ಪುನಃ ಪುನಃ ನಿನ್ನ ಕುಶಲದ ಕುರಿತು ಕೇಳಿದ್ದಾನೆ. ನರಾಧಿಪ! ನಿನ್ನೊಡನೆ ಸಂಬಂಧವಾದುದರಿಂದ ಅವನು ಅತ್ಯಂತ ಸಂತಸಗೊಂಡಿದ್ದಾನೆ.

01198017a ತಥಾ ಭೀಷ್ಮಃ ಶಾಂತನವಃ ಕೌರವೈಃ ಸಹ ಸರ್ವಶಃ|

01198017c ಕುಶಲಂ ತ್ವಾಂ ಮಹಾಪ್ರಾಜ್ಞಃ ಸರ್ವತಃ ಪರಿಪೃಚ್ಛತಿ||

ಮಹಾಪ್ರಾಜ್ಞ! ಶಾಂತನವ ಭೀಷ್ಮ ಮತ್ತು ಸರ್ವ ಕೌರವರೂ ಕೂಡ ನಿನ್ನ ಮತ್ತು ಎಲ್ಲರ ಕುಶಲತೆಯನ್ನು ಕೇಳಿದ್ದಾರೆ.

01198018a ಭಾರದ್ವಾಜೋ ಮಹೇಷ್ವಾಸೋ ದ್ರೋಣಃ ಪ್ರಿಯಸಖಸ್ತವ|

01198018c ಸಮಾಶ್ಲೇಷಮುಪೇತ್ಯ ತ್ವಾಂ ಕುಶಲಂ ಪರಿಪೃಚ್ಛತಿ||

ನಿನ್ನ ಪ್ರಿಯಸಖ ಮಹೇಷ್ವಾಸ ದ್ರೋಣ ಭಾರದ್ವಾಜನು ನಿನ್ನನ್ನು ಆಲಿಂಗಿಸಿ ನಿನ್ನ ಕುಶಲವನ್ನು ಕೇಳುತ್ತಾನೆ.

01198019a ಧೃತರಾಷ್ಟ್ರಶ್ಚ ಪಾಂಚಾಲ್ಯ ತ್ವಯಾ ಸಂಬಂಧಮೀಯಿವಾನ್|

01198019c ಕೃತಾರ್ಥಂ ಮನ್ಯತೇಽತ್ಮಾನಂ ತಥಾ ಸರ್ವೇಽಪಿ ಕೌರವಾಃ||

ಪಾಂಚಾಲ್ಯ! ನಿನ್ನೊಡನೆ ಸಂಬಂಧವನ್ನು ಪಡೆದ ಧೃತರಾಷ್ಟ್ರ ಮತ್ತು ಹಾಗೆಯೇ ಇತರ ಕೌರವರೂ ತಮ್ಮನ್ನು ತಾವು ಕೃತಾರ್ಥರೆಂದು ಭಾವಿಸುತ್ತಾರೆ.

01198020a ನ ತಥಾ ರಾಜ್ಯಸಂಪ್ರಾಪ್ತಿಸ್ತೇಷಾಂ ಪ್ರೀತಿಕರೀ ಮತಾ|

01198020c ಯಥಾ ಸಂಬಂಧಕಂ ಪ್ರಾಪ್ಯ ಯಜ್ಞಸೇನ ತ್ವಯಾ ಸಹ||

ಯಜ್ಞಸೇನ! ನಿನ್ನೊಡನೆಯ ಈ ಸಂಬಂಧದಿಂದ ಆದ ಸಂತೋಷವೂ ನಿನ್ನ ರಾಜ್ಯವನ್ನು ಪಡೆದರೆ ಸಿಗುತ್ತಿರಲಿಲ್ಲ.

01198021a ಏತದ್ವಿದಿತ್ವಾ ತು ಭವಾನ್ಪ್ರಸ್ಥಾಪಯತು ಪಾಂಡವಾನ್|

01198021c ದ್ರಷ್ಟುಂ ಹಿ ಪಾಂಡುದಾಯಾದಾಂಸ್ತ್ವರಂತೇ ಕುರವೋ ಭೃಶಂ||

ಇದನ್ನು ತಿಳಿದು ನೀನು ಪಾಂಡವರಿಗೆ ಹೊರಡಲು ಅನುಮತಿಕೊಡಬೇಕು. ಕೌರವರು ಪಾಂಡುದಾಯಾದಿಗಳನ್ನು ನೋಡಲು ತುಂಬ ತವಕದಿಂದಿದ್ದಾರೆ.

01198022a ವಿಪ್ರೋಷಿತಾ ದೀರ್ಘಕಾಲಮಿಮೇ ಚಾಪಿ ನರರ್ಷಭಾಃ|

01198022c ಉತ್ಸುಕಾ ನಗರಂ ದ್ರಷ್ಟುಂ ಭವಿಷ್ಯಂತಿ ಪೃಥಾ ತಥಾ||

ಈ ನರರ್ಷಭರು ದೀರ್ಘಕಾಲದವರೆಗೆ ಹೊರಗಡೆಯೇ ಇದ್ದಾರೆ. ಅವರು ಮತ್ತು ಪೃಥೆಯು ನಗರವನ್ನು ನೋಡಲು ಉತ್ಸುಕರಾಗಿರುತ್ತಾರೆ.

01198023a ಕೃಷ್ಣಾಮಪಿ ಚ ಪಾಂಚಾಲೀಂ ಸರ್ವಾಃ ಕುರುವರಸ್ತ್ರಿಯಃ|

01198023c ದ್ರಷ್ಟುಕಾಮಾಃ ಪ್ರತೀಕ್ಷಂತೇ ಪುರಂ ಚ ವಿಷಯಂ ಚ ನಃ||

ದೇಶ, ಪುರ ಮತ್ತು ಕುರುವರಸ್ತ್ರೀಯರೆಲ್ಲರೂ ಪಾಂಚಾಲಿ ಕೃಷ್ಣೆಯನ್ನು ನೋಡಲು ಆಸೆಯಿಂದ ಕಾಯ್ದು ಕೊಂಡಿದ್ದಾರೆ.

01198024a ಸ ಭವಾನ್ಪಾಂಡುಪುತ್ರಾಣಾಮಾಜ್ಞಾಪಯತು ಮಾಚಿರಂ|

01198024c ಗಮನಂ ಸಹದಾರಾಣಾಮೇತದಾಗಮನಂ ಮಮ||

ತಡಮಾಡದೇ ಪತ್ನಿಯೊಂದಿಗೆ ಪಾಂಡುಪುತ್ರರು ಹೊರಡುವುದಕ್ಕೆ ಮತ್ತು ನನಗೆ ಹಿಂದಿರುಗುವುದಕ್ಕೆ ಅನುಮತಿಯನ್ನು ನೀಡು.

01198025a ವಿಸೃಷ್ಟೇಷು ತ್ವಯಾ ರಾಜನ್ಪಾಂಡವೇಷು ಮಹಾತ್ಮಸು|

01198025c ತತೋಽಹಂ ಪ್ರೇಷಯಿಷ್ಯಾಮಿ ಧೃತರಾಷ್ಟ್ರಸ್ಯ ಶೀಘ್ರಗಾನ್|

01198025e ಆಗಮಿಷ್ಯಂತಿ ಕೌಂತೇಯಾಃ ಕುಂತೀ ಚ ಸಹ ಕೃಷ್ಣಯಾ||

ರಾಜನ್! ಮಹಾತ್ಮ ಪಾಂಡವರಿಗೆ ಅನುಮತಿಯನ್ನಿತ್ತರೆ ಕುಂತಿ ಮತ್ತು ಕೌಂತೇಯರು ಕೃಷ್ಣೆಯ ಸಹಿತ ಬರುತ್ತಿದ್ದಾರೆ ಎಂದು ನಾನು ಧೃತರಾಷ್ಟ್ರನಲ್ಲಿಗೆ ಶೀಘ್ರಗರನ್ನು ಕಳುಹಿಸುತ್ತೇನೆ.”

 

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ವಿದುರದ್ರುಪದಸಂವಾದೇ ಅಷ್ಟನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ವಿದುರದ್ರುಪದರ ಸಂವಾದದಲ್ಲಿ ನೂರಾತೊಂಭತ್ತೆಂಟನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೪/೧೦೦, ಅಧ್ಯಾಯಗಳು-೧೯೮/೧೯೯೫, ಶ್ಲೋಕಗಳು-೬೩೬೮/೭೩೭೮೪

Related image

Comments are closed.