Adi Parva: Chapter 197

ಆದಿ ಪರ್ವ: ವಿದುರಾಗಮನ ಪರ್ವ

೧೯೭

ಭೀಷ್ಮ-ದ್ರೋಣರ ಸಲಹೆಯನ್ನು ಸ್ವೀಕರಿಸಬೇಕೆಂದು ವಿದುರನು ಧೃತರಾಷ್ಟ್ರನಿಗೆ ಹೇಳುವುದು (೧-೨೯).

01197001 ವಿದುರ ಉವಾಚ|

01197001a ರಾಜನ್ನಿಃಸಂಶಯಂ ಶ್ರೇಯೋ ವಾಚ್ಯಸ್ತ್ವಮಸಿ ಬಾಂಧವೈಃ|

01197001c ನ ತ್ವಶುಶ್ರೂಷಮಾಣೇಷು ವಾಕ್ಯಂ ಸಂಪ್ರತಿತಿಷ್ಠತಿ||

ವಿದುರನು ಹೇಳಿದನು: “ರಾಜನ್! ನಿನ್ನ ಬಾಂಧವರು ನಿನಗೆ ಶ್ರೇಯಸ್ಸನ್ನು ತರುವ ಮಾತುಗಳನ್ನೇ ಆಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಕೇಳಲಿಕ್ಕೆ ಮನಸ್ಸಿಲ್ಲದಿರುವವರಿಗೆ ಆ ಮಾತುಗಳು ಒಳ್ಳೆಯದೆನಿಸುವುದಿಲ್ಲ.

01197002a ಹಿತಂ ಹಿ ತವ ತದ್ವಾಕ್ಯಮುಕ್ತವಾನ್ಕುರುಸತ್ತಮಃ|

01197002c ಭೀಷ್ಮಃ ಶಾಂತನವೋ ರಾಜನ್ಪ್ರತಿಗೃಹ್ಣಾಸಿ ತನ್ನ ಚ||

ರಾಜನ್! ಕುರುಸತ್ತಮ ಭೀಷ್ಮ ಶಾಂತನವನು ನಿನ್ನ ಹಿತಕ್ಕಾಗಿಯೇ ಆ ಮಾತುಗಳನ್ನಾಡಿದನು. ಆದರೆ ನೀನು ಅವುಗಳನ್ನು ಸ್ವೀಕರಿಸಲಿಲ್ಲ.

01197003a ತಥಾ ದ್ರೋಣೇನ ಬಹುಧಾ ಭಾಷಿತಂ ಹಿತಮುತ್ತಮಂ|

01197003c ತಚ್ಚ ರಾಧಾಸುತಃ ಕರ್ಣೋ ಮನ್ಯತೇ ನ ಹಿತಂ ತವ||

ದ್ರೋಣನೂ ಕೂಡ ನಿನ್ನ ಹಿತವನ್ನುದ್ದೇಶಿಸಿ ಬಹಳಷ್ಟು ಮಾತನಾಡಿದನು. ಆದರೆ ಅವುಗಳು ನಿನಗೆ ಹಿತಕಾರಕವೆಂದು ರಾಧಾಸುತ ಕರ್ಣನು ಸ್ವೀಕರಿಸುವುದಿಲ್ಲ.

01197004a ಚಿಂತಯಂಶ್ಚ ನ ಪಶ್ಯಾಮಿ ರಾಜಂಸ್ತವ ಸುಹೃತ್ತಮಂ|

01197004c ಆಭ್ಯಾಂ ಪುರುಷಸಿಂಹಾಭ್ಯಾಂ ಯೋ ವಾ ಸ್ಯಾತ್ಪ್ರಜ್ಞಯಾಧಿಕಃ||

ರಾಜನ್! ಆದರೆ ನನ್ನ ಯೋಚನೆಯಲ್ಲಿ ಈ ಇಬ್ಬರು ಪುರುಷಸಿಂಹರನ್ನು ಬಿಟ್ಟು ಬೇರೆ ಯಾರೂ ನಿನ್ನ ಸುಹೃದಯರಲ್ಲಿ ಉತ್ತಮರೆಂದು ಕಾಣುತ್ತಿಲ್ಲ.

01197005a ಇಮೌ ಹಿ ವೃದ್ಧೌ ವಯಸಾ ಪ್ರಜ್ಞಯಾ ಚ ಶ್ರುತೇನ ಚ|

01197005c ಸಮೌ ಚ ತ್ವಯಿ ರಾಜೇಂದ್ರ ತೇಷು ಪಾಂಡುಸುತೇಷು ಚ||

ಇವರಿಬ್ಬರೂ ವಯಸ್ಸಿನಲ್ಲಿ, ಪ್ರಜ್ಞೆಯಲ್ಲಿ, ಮತ್ತು ಕಲಿಕೆಯಲ್ಲಿ ವೃದ್ಧರಾಗಿದ್ದಾರೆ. ರಾಜೇಂದ್ರ! ಮತ್ತು ಇವರಿಗೆ ನಿನ್ನ ಮತ್ತು ಪಾಂಡುಸುತರು ಇಬ್ಬರೂ ಒಂದೇ.

01197006a ಧರ್ಮೇ ಚಾನವಮೌ ರಾಜನ್ಸತ್ಯತಾಯಾಂ ಚ ಭಾರತ|

01197006c ರಾಮಾದ್ದಾಶರಥೇಶ್ಚೈವ ಗಯಾಚ್ಚೈವ ನ ಸಂಶಯಃ||

ರಾಜನ್! ಭಾರತ! ಧರ್ಮದಲ್ಲಿಯಾಗಲೀ ಸತ್ಯದಲ್ಲಿಯಾಗಲೀ ಅವರೀರ್ವರೂ ದಾಶರಥಿ ರಾಮ ಮತ್ತು ಗಯನಿಗಿಂಥ ಕಡಿಮೆಯಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.

01197007a ನ ಚೋಕ್ತವಂತಾವಶ್ರೇಯಃ ಪುರಸ್ತಾದಪಿ ಕಿಂ ಚನ|

01197007c ನ ಚಾಪ್ಯಪಕೃತಂ ಕಿಂ ಚಿದನಯೋರ್ಲಕ್ಷ್ಯತೇ ತ್ವಯಿ||

ಹಿಂದೆ ಎಂದೂ ಅವರು ನಿನಗೆ ಅಶ್ರೇಯ ಸಲಹೆಯನ್ನಾಗಲೀ ಅಥವಾ ನಿನಗೆ ಯಾವುದೇ ಅಪಕೃತವನ್ನೆಸಗಿದ್ದುದನ್ನು ನೀನು ಕಂಡಿಲ್ಲ.

01197008a ತಾವಿಮೌ ಪುರುಷವ್ಯಾಘ್ರಾವನಾಗಸಿ ನೃಪ ತ್ವಯಿ|

01197008c ನ ಮಂತ್ರಯೇತಾಂ ತ್ವಚ್ಛ್ರೇಯಃ ಕಥಂ ಸತ್ಯಪರಾಕ್ರಮೌ||

ನೃಪ! ಹಾಗಿದ್ದಾಗ ಈಗ ಏಕೆ ಈ ಸತ್ಯಪರಾಕ್ರಮಿ ಪುರುಷವ್ಯಾಘ್ರರು ನಿನಗೆ ಅಶ್ರೇಯ ಸಲಹೆಯನ್ನು ನೀಡುತ್ತಾರೆ?

01197009a ಪ್ರಜ್ಞಾವಂತೌ ನರಶ್ರೇಷ್ಠಾವಸ್ಮಿಽಲ್ಲೋಕೇ ನರಾಧಿಪ|

01197009c ತ್ವನ್ನಿಮಿತ್ತಮತೋ ನೇಮೌ ಕಿಂ ಚಿಜ್ಜಿಹ್ಮಂ ವದಿಷ್ಯತಃ|

01197009e ಇತಿ ಮೇ ನೈಷ್ಠಿಕೀ ಬುದ್ಧಿರ್ವರ್ತತೇ ಕುರುನಂದನ||

ನರಾಧಿಪ! ಲೋಕದಲ್ಲೇ ಪ್ರಜ್ಞಾವಂತ ಈ ನರಶ್ರೇಷ್ಠರು ನಿನ್ನ ವಿಷಯದಲ್ಲಿ ಎಂದೂ ವಿರುದ್ಧ ಮಾತುಗಳನ್ನಾಡುವುದಿಲ್ಲ. ಕುರುನಂದನ! ಇದು ನನ್ನ ಮೂಲಭೂತ ಯೋಚನೆಯಾಗಿದೆ. 

01197010a ನ ಚಾರ್ಥಹೇತೋರ್ಧರ್ಮಜ್ಞೌ ವಕ್ಷ್ಯತಃ ಪಕ್ಷಸಂಶ್ರಿತಂ|

01197010c ಏತದ್ಧಿ ಪರಮಂ ಶ್ರೇಯೋ ಮೇನಾತೇ ತವ ಭಾರತ||

ಈ ಇಬ್ಬರು ಧರ್ಮಜ್ಞರು ತಮ್ಮ ವೈಯಕ್ತಿಕ ಲಾಭಕ್ಕೋಸ್ಕರ ಯಾವುದೇ ಒಂದು ಪಕ್ಷದ ಪರವಾಗಿ ಮಾತನಾಡುವುದಿಲ್ಲ. ಭಾರತ! ನಿನ್ನ ಪರಮ ಶ್ರೇಯಸ್ಸನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ.

01197011a ದುರ್ಯೋಧನಪ್ರಭೃತಯಃ ಪುತ್ರಾ ರಾಜನ್ಯಥಾ ತವ|

01197011c ತಥೈವ ಪಾಂಡವೇಯಾಸ್ತೇ ಪುತ್ರಾ ರಾಜನ್ನ ಸಂಶಯಃ||

ರಾಜನ್! ದುರ್ಯೋಧನರೇ ಮೊದಲಾದವರು ನಿನಗೆ ಹೇಗೆ ಪುತ್ರರೋ ಹಾಗೆ ಪಾಂಡವರೂ ಕೂಡ ನಿನ್ನ ಪುತ್ರರು. ರಾಜನ್! ಇದರಲ್ಲಿ ಯಾವುದೇ ಸಂಶಯವಿಲ್ಲ.

01197012a ತೇಷು ಚೇದಹಿತಂ ಕಿಂ ಚಿನ್ಮಂತ್ರಯೇಯುರಬುದ್ಧಿತಃ|

01197012c ಮಂತ್ರಿಣಸ್ತೇ ನ ತೇ ಶ್ರೇಯಃ ಪ್ರಪಶ್ಯಂತಿ ವಿಶೇಷತಃ||

ಒಂದು ವೇಳೆ ನಿನ್ನ ಮಂತ್ರಿಗಳು ಅವಿವೇಕದಿಂದ ಪಾಂಡವರಿಗೆ ಶ್ರೇಯಸ್ಸಾಗದ ಸಲಹೆಗಳನ್ನು ನೀಡಿದರೆ, ಅವರು ವಿಶೇಷವಾಗಿ ನಿನ್ನ ಶ್ರೇಯಸ್ಸನ್ನು ಪರಿಗಣಿಸುತ್ತಿಲ್ಲ ಎನ್ನುವುದು ಸ್ಪಷ್ಟ.

01197013a ಅಥ ತೇ ಹೃದಯೇ ರಾಜನ್ವಿಶೇಷಸ್ತೇಷು ವರ್ತತೇ|

01197013c ಅಂತರಸ್ಥಂ ವಿವೃಣ್ವಾನಾಃ ಶ್ರೇಯಃ ಕುರ್ಯುರ್ನ ತೇ ಧ್ರುವಂ||

ರಾಜನ್! ಅಥವಾ, ನಿನ್ನ ಹೃದಯದಲ್ಲಿ ನಿನ್ನ ಮಕ್ಕಳ ಮೇಲೇ ವಿಶೇಷ ಪ್ರೀತಿಯಿದ್ದರೆ, ನಿನ್ನ ಒಳಗಿದ್ದ ಅದನ್ನು ಬಹಿರಂಗಪಡಿಸುವುದರಿಂದ ನಿನಗೆ ಶ್ರೇಯಸ್ಸಾಗುವುದಿಲ್ಲ ಎನ್ನುವುದೂ ಖಂಡಿತ.

01197014a ಏತದರ್ಥಮಿಮೌ ರಾಜನ್ಮಹಾತ್ಮಾನೌ ಮಹಾದ್ಯುತೀ|

01197014c ನೋಚತುರ್ವಿವೃತಂ ಕಿಂ ಚಿನ್ನ ಹ್ಯೇಷ ತವ ನಿಶ್ಚಯಃ|

ರಾಜನ್! ಹಾಗಿದ್ದರೆ, ಈ ಮಹಾತ್ಮ ಮಹಾದ್ಯುತಿಗಳಿಬ್ಬರೂ ಬಹಿರಂಗವಾಗಿ ಮಾತನಾಡದೇ ಇದ್ದರೂ ನಿನ್ನ ನಿರ್ಧಾರಗಳು ಎಂದೂ ಬದಲಾವಣೆಯಾಗಲಾರದು.

01197015a ಯಚ್ಚಾಪ್ಯಶಕ್ಯತಾಂ ತೇಷಾಮಾಹತುಃ ಪುರುಷರ್ಷಭೌ|

01197015c ತತ್ತಥಾ ಪುರುಷವ್ಯಾಘ್ರ ತವ ತದ್ಭದ್ರಮಸ್ತು ತೇ||

ಪುರುಷವ್ಯಾಘ್ರ! ಪಾಂಡವರನ್ನು ಗೆಲ್ಲುವುದು ಅಶಕ್ಯ ಎನ್ನುವ ಈ ಪುರುಷರ್ಷಭರ ಮಾತು ಸತ್ಯ. ಇನ್ನು ನಿನಗೆ ಮಂಗಳವಾಗಲಿ.

01197016a ಕಥಂ ಹಿ ಪಾಂಡವಃ ಶ್ರೀಮಾನ್ಸವ್ಯಸಾಚೀ ಪರಂತಪಃ|

01197016c ಶಕ್ಯೋ ವಿಜೇತುಂ ಸಂಗ್ರಾಮೇ ರಾಜನ್ಮಘವತಾ ಅಪಿ||

ರಾಜನ್! ಶ್ರೀಮಾನ್, ಪರಂತಪ, ಪಾಂಡವ ಸವ್ಯಸಾಚಿಯನ್ನು ಸಂಗ್ರಾಮದಲ್ಲಿ ಮಘವತನಿಗೂ ಕೂಡ ಗೆಲ್ಲಲು ಹೇಗೆ ಶಕ್ಯ?

01197017a ಭೀಮಸೇನೋ ಮಹಾಬಾಹುರ್ನಾಗಾಯುತಬಲೋ ಮಹಾನ್|

01197017c ಕಥಂ ಹಿ ಯುಧಿ ಶಕ್ಯೇತ ವಿಜೇತುಮಮರೈರಪಿ||

ಮಹಾಬಾಹು, ಸಾವಿರ ಆನೆಗಳ ಬಲವನ್ನುಳ್ಳ ಮಹಾ ಭೀಮಸೇನನನ್ನು, ಅಮರರೂ ಕೂಡ ಹೇಗೆ ಯುದ್ಧದಲ್ಲಿ ಜಯಿಸಲು ಶಕ್ಯ?

01197018a ತಥೈವ ಕೃತಿನೌ ಯುದ್ಧೇ ಯಮೌ ಯಮಸುತಾವಿವ|

01197018c ಕಥಂ ವಿಷಹಿತುಂ ಶಕ್ಯೌ ರಣೇ ಜೀವಿತುಮಿಚ್ಛತಾ||

ಹಾಗೆಯೇ ಯಮಸುತರಂತಿರುವ ಯುದ್ಧ ಕೃತಿ ಯಮಳರನ್ನು ಜೀವಂತವಿರಲು ಇಚ್ಛಿಸುವವನು ಹೇಗೆ ರಣದಲ್ಲಿ ಗೆಲ್ಲಲು ಸಾಧ್ಯ?

01197019a ಯಸ್ಮಿನ್ಧೃತಿರನುಕ್ರೋಶಃ ಕ್ಷಮಾ ಸತ್ಯಂ ಪರಾಕ್ರಮಃ|

01197019c ನಿತ್ಯಾನಿ ಪಾಂಡವಶ್ರೇಷ್ಠೇ ಸ ಜೀಯೇತ ಕಥಂ ರಣೇ||

ಯಾರಲ್ಲಿ ಧೃತಿ, ಅನುಕ್ರೋಶ, ಕ್ಷಮೆ, ಸತ್ಯ ಮತ್ತು ಪರಾಕ್ರಮಗಳು ನಿತ್ಯವೂ ನೆಲೆಸಿರುವೆಯೋ ಆ ಪಾಂಡವಶ್ರೇಷ್ಠನನ್ನು ರಣದಲ್ಲಿ ಹೇಗೆ ಜಯಿಸಬಹುದು?

01197020a ಯೇಷಾಂ ಪಕ್ಷಧರೋ ರಾಮೋ ಯೇಷಾಂ ಮಂತ್ರೀ ಜನಾರ್ದನಃ|

01197020c ಕಿಂ ನು ತೈರಜಿತಂ ಸಂಖ್ಯೇ ಯೇಷಾಂ ಪಕ್ಷೇ ಚ ಸಾತ್ಯಕಿಃ||

ಯಾರ ಪಕ್ಷಧರನಾಗಿ ರಾಮನಿದ್ದಾನೆಯೋ, ಯಾರ ಮಂತ್ರಿಯಾಗಿ ಜನಾರ್ದನನಿದ್ದಾನೆಯೋ, ಮತ್ತು ಯಾರ ಪಕ್ಷದಲ್ಲಿ ಸಾತ್ಯಕಿಯ ಬೆಂಬಲವಿದೆಯೋ ಅವರು ಗೆಲ್ಲದೇ ಇರುವವರು ಇನ್ನು ಯಾರಿದ್ದಾರೆ?

01197021a ದ್ರುಪದಃ ಶ್ವಶುರೋ ಯೇಷಾಂ ಯೇಷಾಂ ಶ್ಯಾಲಾಶ್ಚ ಪಾರ್ಷತಾಃ|

01197021c ಧೃಷ್ಟದ್ಯುಮ್ನಮುಖಾ ವೀರಾ ಭ್ರಾತರೋ ದ್ರುಪದಾತ್ಮಜಾಃ||

ಮಾವನನ್ನಾಗಿ ದ್ರುಪದನನ್ನು ಪಡೆದ ಮತ್ತು ದೃಷ್ಟದ್ಯುಮ್ನನೇ ಮೊದಲಾದ ಪಾರ್ಷತ ದ್ರುಪದಾತ್ಮಜರನ್ನು ಬಾವಂದಿರನ್ನಾಗಿ ಹೊಂದಿದ ಅವರನ್ನು ಗೆಲ್ಲಲು ಹೇಗೆ ಸಾದ್ಯ?

01197022a ಸೋಽಶಕ್ಯತಾಂ ಚ ವಿಜ್ಞಾಯ ತೇಷಾಮಗ್ರೇಣ ಭಾರತ|

01197022c ದಾಯಾದ್ಯತಾಂ ಚ ಧರ್ಮೇಣ ಸಮ್ಯಕ್ತೇಷು ಸಮಾಚರ||

ಭಾರತ! ಅವರನ್ನು ಗೆಲ್ಲುವುದು ಅಶಕ್ಯ ಮತ್ತು ಧರ್ಮದ ಪ್ರಕಾರ ಅವರು ಮೊದಲೇ ಈ ರಾಜ್ಯದ ದಾಯಾದಿಗಳು ಎಂದು ತಿಳಿದು ಅವರೊಂದಿಗೆ ಒಳ್ಳೆಯದಾಗಿ ನಡೆದುಕೋ.

01197023a ಇದಂ ನಿರ್ದಿಗ್ಧಮಯಶಃ ಪುರೋಚನಕೃತಂ ಮಹತ್|

01197023c ತೇಷಾಮನುಗ್ರಹೇಣಾದ್ಯ ರಾಜನ್ಪ್ರಕ್ಷಾಲಯಾತ್ಮನಃ||

ರಾಜನ್! ಪುರೋಚನನ ಕೃತ್ಯದಿಂದ ನಿನಗಾದ ನಿರ್ದಿಗ್ಧ ಅಯಶವನ್ನು ಅವರ ಮೇಲೆ ಅನುಗ್ರಹಮಾಡುವುದರ ಮೂಲಕ ನೀನೇ ಶುದ್ಧಪಡಿಸಿಕೋ.

01197024a ದ್ರುಪದೋಽಪಿ ಮಹಾನ್ರಾಜಾ ಕೃತವೈರಶ್ಚ ನಃ ಪುರಾ|

01197024c ತಸ್ಯ ಸಂಗ್ರಹಣಂ ರಾಜನ್ಸ್ವಪಕ್ಷಸ್ಯ ವಿವರ್ಧನಂ||

ರಾಜನ್! ಹಿಂದೆ ಮಹಾರಾಜ ದ್ರುಪದನೂ ಕೂಡ ವೈರವನ್ನು ಸಾಧಿಸುತ್ತಿದ್ದನು. ಅವನ ಸಂಬಧದ ಮೂಲಕ ನಿನ್ನ ಪಕ್ಷವನ್ನು ವೃದ್ಧಿಪಡಿಸಿಕೋ.

01197025a ಬಲವಂತಶ್ಚ ದಾಶಾರ್ಹಾ ಬಹವಶ್ಚ ವಿಶಾಂ ಪತೇ|

01197025c ಯತಃ ಕೃಷ್ಣಸ್ತತಸ್ತೇ ಸ್ಯುರ್ಯತಃ ಕೃಷ್ಣಸ್ತತೋ ಜಯಃ||

ವಿಶಾಂಪತೇ! ಬಹುಸಂಖ್ಯೆಯಲ್ಲಿರುವ ದಾಶಾರ್ಹರು ಬಲವಂತರು. ಅವರು ಕೃಷ್ಣನಿದ್ದಲ್ಲೇ ಇರುತ್ತಾರೆ ಮತ್ತು ಎಲ್ಲಿ ಕೃಷ್ಣನಿರುವನೋ ಅಲ್ಲಿಯೇ ಜಯ.

01197026a ಯಚ್ಚ ಸಾಮ್ನೈವ ಶಕ್ಯೇತ ಕಾರ್ಯಂ ಸಾಧಯಿತುಂ ನೃಪ|

01197026c ಕೋ ದೈವಶಪ್ತಸ್ತತ್ಕಾರ್ತುಂ ವಿಗ್ರಹೇಣ ಸಮಾಚರೇತ್||

ನೃಪ! ಸಮಾಚರದಿಂದ ತಡೆಯಬಹುದಾದ ಈ ಯುದ್ಧವನ್ನು ಕೈಗೊಳ್ಳುವ ಯಾರು ತಾನೇ ವಿಧಿಯ ಶಾಪಕ್ಕೊಳಗಾಗಿಲ್ಲ?

01197027a ಶ್ರುತ್ವಾ ಚ ಜೀವತಃ ಪಾರ್ಥಾನ್ಪೌರಜಾನಪದೋ ಜನಃ|

01197027c ಬಲವದ್ದರ್ಶನೇ ಗೃಧ್ನುಸ್ತೇಷಾಂ ರಾಜನ್ಕುರು ಪ್ರಿಯಂ||

ನಗರ ಮತ್ತು ಗ್ರಾಮೀಣ ಜನರು ಪಾರ್ಥರು ಜೀವಂತವಿದ್ದಾರೆ ಎಂದು ಕೇಳಿದ್ದಾರೆ ಮತ್ತು ಅವರನ್ನು ನೋಡಲು ಕಾತರರಾಗಿದ್ದಾರೆ. ರಾಜನ್! ಅವರಿಗೆ ಆ ಸಂತೋಷವನ್ನು ನೀಡು.

01197028a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ|

01197028c ಅಧರ್ಮಯುಕ್ತಾ ದುಷ್ಪ್ರಜ್ಞಾ ಬಾಲಾ ಮೈಷಾಂ ವಚಃ ಕೃಥಾಃ||

ದುರ್ಯೋಧನ, ಕರ್ಣ, ಮತ್ತು ಶಕುನಿ ಸೌಬಲರು ಅಧರ್ಮಯುಕ್ತ ದುಷ್ಪ್ರಜ್ಞ ಬಾಲಕರಾಗಿದ್ದಾರೆ. ಅವರ ಮಾತುಗಳಂತೆ ಮಾಡಬೇಡ!

01197029a ಉಕ್ತಮೇತನ್ಮಯಾ ರಾಜನ್ಪುರಾ ಗುಣವತಸ್ತವ|

01197029c ದುರ್ಯೋಧನಾಪರಾಧೇನ ಪ್ರಜೇಯಂ ವಿನಶಿಷ್ಯತಿ||

ಗುಣವಂತ ರಾಜನ್! ದುರ್ಯೋಧನನ ಅಪರಾಧದಿಂದ ಈ ರಾಜ್ಯವು ವಿನಾಶವಾಗುತ್ತದೆ ಎಂದು ನಾನು ನಿನಗೆ ಹಿಂದೆಯೇ ಹೇಳಿದ್ದೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ವಿದುರವಾಕ್ಯೇ ಸಪ್ತನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ವಿದುರವಾಕ್ಯದಲ್ಲಿ ನೂರಾತೊಂಭತ್ತೇಳನೆಯ ಅಧ್ಯಾಯವು.

Related image

Comments are closed.