Adi Parva: Chapter 194

ಆದಿ ಪರ್ವ: ವಿದುರಾಗಮನ ಪರ್ವ

೧೯೪

ಕರ್ಣನು ತನಗೆ ತೋಚಿದ ಉಪಾಯಗಳನ್ನು ಹೇಳುವುದು (೧-೨೨). ಧೃತರಾಷ್ಟ್ರನು ಇತರರೊಡನೆ ಸಮಾಲೋಚನೆ ಮಾಡುತ್ತೇನೆ ಎಂದು ಹೇಳುವುದು (೨೩-೨೫).

01194001 ಕರ್ಣ ಉವಾಚ|

01194001a ದುರ್ಯೋಧನ ತವ ಪ್ರಜ್ಞಾ ನ ಸಮ್ಯಗಿತಿ ಮೇ ಮತಿಃ|

01194001c ನ ಹ್ಯುಪಾಯೇನ ತೇ ಶಕ್ಯಾಃ ಪಾಂಡವಾಃ ಕುರುನಂದನ||

ಕರ್ಣನು ಹೇಳಿದನು: “ದುರ್ಯೋಧನ! ನಿನಗೆ ಪ್ರಜ್ಞೆ ಸರಿಯಿಲ್ಲ ಎಂದು ನನ್ನ ಅಭಿಪ್ರಾಯ. ಕುರುನಂದನ! ಉಪಾಯಗಳಿಂದ ಪಾಂಡವರನ್ನು ಗೆಲ್ಲಲು ಶಕ್ಯವಿಲ್ಲ.

01194002a ಪೂರ್ವಮೇವ ಹಿ ತೇ ಸೂಕ್ಷ್ಮೈರುಪಾಯೈರ್ಯತಿತಾಸ್ತ್ವಯಾ|

01194002c ನಿಗ್ರಹೀತುಂ ಯದಾ ವೀರ ಶಕಿತಾ ನ ತದಾ ತ್ವಯಾ||

ವೀರ! ಈ ಹಿಂದೆಯೂ ಕೂಡ ಅವರನ್ನು ನಿಗ್ರಹಿಸಲು ನೀನು ಸೂಕ್ಷ್ಮ ಉಪಾಯಗಳನ್ನು ಬಳಸಿದೆ. ಆದರೆ ಅದು ನಿನ್ನಿಂದ ಸಾಧ್ಯವಾಗಲಿಲ್ಲ.

01194003a ಇಹೈವ ವರ್ತಮಾನಾಸ್ತೇ ಸಮೀಪೇ ತವ ಪಾರ್ಥಿವ|

01194003c ಅಜಾತಪಕ್ಷಾಃ ಶಿಶವಃ ಶಕಿತಾ ನೈವ ಬಾಧಿತುಂ||

ಪಾರ್ಥಿವ! ಇನ್ನೂ ರೆಕ್ಕೆಬಾರದಿದ್ದ ಶಿಶುಗಳಾದ ಅವರು ಇಲ್ಲಿಯೇ ನಿನ್ನ ಸಮೀಪದಲ್ಲಿಯೇ ಇದ್ದರು. ಆದರೂ ಅವರನ್ನು ಬಾಧಿಸಲು ಸಾಧ್ಯವಾಗಲಿಲ್ಲ.

01194004a ಜಾತಪಕ್ಷಾ ವಿದೇಶಸ್ಥಾ ವಿವೃದ್ಧಾಃ ಸರ್ವಶೋಽದ್ಯ ತೇ|

01194004c ನೋಪಾಯಸಾಧ್ಯಾಃ ಕೌಂತೇಯಾ ಮಮೈಷಾ ಮತಿರಚ್ಯುತ||

ಈಗ ಅವರೆಲ್ಲರಿಗೆ ರೆಕ್ಕೆಗಳು ಬಂದಿವೆ. ವಿದೇಶದಲ್ಲಿದ್ದಾರೆ. ಬೆಳೆದಿದ್ದಾರೆ. ಈಗ ನಿನ್ನ ಉಪಾಯಗಳಿಂದ ಕೌಂತೇಯರನ್ನು ಗೆಲ್ಲಬಹುದೆಂದು ನನಗನ್ನಿಸುವುದಿಲ್ಲ.

01194005a ನ ಚ ತೇ ವ್ಯಸನೈರ್ಯೋಕ್ತುಂ ಶಕ್ಯಾ ದಿಷ್ಟಕೃತಾ ಹಿ ತೇ|

01194005c ಶಂಕಿತಾಶ್ಚೇಪ್ಸವಶ್ಚೈವ ಪಿತೃಪೈತಾಮಹಂ ಪದಂ||

ಆ ದಿಷ್ಟಕೃತರನ್ನು ವ್ಯಸನಗಳಿಗೆ ಬಂಧಿಸಲಿಕ್ಕೂ ಆಗುವುದಿಲ್ಲ. ಪಿತೃಪಿತಾಮಹರ ರಾಜ್ಯವನ್ನು ಪಡೆಯಲು ಬಯಸುತ್ತಿರುವ ಅವರು ಶಂಕಿತರಾಗಿದ್ದಾರೆ. 

01194006a ಪರಸ್ಪರೇಣ ಭೇದಶ್ಚ ನಾಧಾತುಂ ತೇಷು ಶಕ್ಯತೇ|

01194006c ಏಕಸ್ಯಾಂ ಯೇ ರತಾಃ ಪತ್ನ್ಯಾಂ ನ ಭಿದ್ಯಂತೇ ಪರಸ್ಪರಂ||

ಪರಸ್ಪರರಲ್ಲಿ ಭೇದವನ್ನುಂಟುಮಾಡಲೂ ಶಕ್ಯವಿಲ್ಲ. ಒಬ್ಬಳೇ ಪತ್ನಿಯಲ್ಲಿ ಅನುರಕ್ತರಾದ ಪರಸ್ಪರರಲ್ಲಿ ಭೇದವುಂಟಾಗುವುದಿಲ್ಲ. 

01194007a ನ ಚಾಪಿ ಕೃಷ್ಣಾ ಶಕ್ಯೇತ ತೇಭ್ಯೋ ಭೇದಯಿತುಂ ಪರೈಃ|

01194007c ಪರಿದ್ಯೂನಾನ್ವೃತವತೀ ಕಿಮುತಾದ್ಯ ಮೃಜಾವತಃ||

ಅವರಿಂದ ಕೃಷ್ಣೆಯನ್ನು ಬೇರೆಮಾಡಲಿಕ್ಕೂ ಸಾಧ್ಯವಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದಾಗಲೇ ಅವರನ್ನು ವರಿಸಿದ್ದವಳು ಅವರು ಇನ್ನೂ ಅಭಿವೃದ್ಧಿಪರರಾಗಿದ್ದಾಗ ಏನು ಹೇಳಬಹುದು?

01194008a ಈಪ್ಸಿತಶ್ಚ ಗುಣಃ ಸ್ತ್ರೀಣಾಮೇಕಸ್ಯಾ ಬಹುಭರ್ತೃತಾ|

01194008c ತಂ ಚ ಪ್ರಾಪ್ತವತೀ ಕೃಷ್ಣಾ ನ ಸಾ ಭೇದಯಿತುಂ ಸುಖಂ||

ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದಿರುವುದು ಒಂದು ಈಪ್ಸಿತ ಗುಣವೆಂದು ಸ್ತ್ರೀಯರು ಯೋಚಿಸುತ್ತಾರೆ. ಅದನ್ನು ಪಡೆದ ಕೃಷ್ಣೆಯನ್ನು ಅದರಿಂದ ದೂರಮಾಡುವುದು ಅಷ್ಟು ಸುಲಭವಲ್ಲ.

01194009a ಆರ್ಯವೃತ್ತಶ್ಚ ಪಾಂಚಾಲ್ಯೋ ನ ಸ ರಾಜಾ ಧನಪ್ರಿಯಃ|

01194009c ನ ಸಂತ್ಯಕ್ಷ್ಯತಿ ಕೌಂತೇಯಾನ್ರಾಜ್ಯದಾನೈರಪಿ ಧ್ರುವಂ||

ಪೂಜನೀಯ ನಡವಳಿಕೆಯ ರಾಜ ಪಾಂಚಾಲ್ಯನು ಧನಪ್ರಿಯನಲ್ಲ. ರಾಜ್ಯಗಳನ್ನು ಇತ್ತರೂ ಕೂಡ ಅವನು ಕೌಂತೇಯರನ್ನು ತ್ಯಜಿಸುವುದಿಲ್ಲ ಎನ್ನುವುದು ನಿಶ್ಚಯ.

01194010a ತಥಾಸ್ಯ ಪುತ್ರೋ ಗುಣವಾನನುರಕ್ತಶ್ಚ ಪಾಂಡವಾನ್|

01194010c ತಸ್ಮಾನ್ನೋಪಾಯಸಾಧ್ಯಾಂಸ್ತಾನಹಂ ಮನ್ಯೇ ಕಥಂ ಚನ||

ಅವನಂತೆಯೇ ಅವನ ಪುತ್ರನೂ ಕೂಡ ಗುಣವಂತ ಮತ್ತು ಪಾಂಡವರಲ್ಲಿ ಅನುರಕ್ತ. ಆದುದರಿಂದ ಯಾವುದೇ ಉಪಾಯವೂ ಅವರ ಮೇಲೆ ಯಶಸ್ವಿಯಾಗುವುದಿಲ್ಲ ಎನ್ನುವುದು ನನ್ನ ಅನಿಸಿಕೆ.

01194011a ಇದಂ ತ್ವದ್ಯ ಕ್ಷಮಂ ಕರ್ತುಮಸ್ಮಾಕಂ ಪುರುಷರ್ಷಭ|

01194011c ಯಾವನ್ನ ಕೃತಮೂಲಾಸ್ತೇ ಪಾಂಡವೇಯಾ ವಿಶಾಂ ಪತೇ|

01194011e ತಾವತ್ಪ್ರಹರಣೀಯಾಸ್ತೇ ರೋಚತಾಂ ತವ ವಿಕ್ರಮಃ||

ಪುರುಷರ್ಷಭ! ಆದರೆ ನಾವು ಇಷ್ಟನ್ನು ಮಾಡಬಹುದು. ವಿಶಾಂಪತೇ! ಎಲ್ಲಿಯೂ ನೆಲೆಯೂರುವುದರೊಳಗೆ ಪಾಂಡವರನ್ನು ಹೊಡೆದುರುಳಿಸಬಹುದು. ಇದು ನಿನ್ನ ವಿಕ್ರಮಕ್ಕೆ ಹಿಡಿಸಬಹುದು.

01194012a ಅಸ್ಮತ್ಪಕ್ಷೋ ಮಹಾನ್ಯಾವದ್ಯಾವತ್ಪಾಂಚಾಲಕೋ ಲಘುಃ|

01194012c ತಾವತ್ಪ್ರಹರಣಂ ತೇಷಾಂ ಕ್ರಿಯತಾಂ ಮಾ ವಿಚಾರಯ||

ನಮ್ಮ ಪಕ್ಷವು ದೊಡ್ಡದಾಗಿರುವಾಗ ಮತ್ತು ಪಾಂಚಾಲನ ಪಕ್ಷವು ಸಣ್ಣದಾಗಿರುವಾಗಲೇ ನಾವು ಅವರನ್ನು ಹೊಡೆದುರುಳಿಸಬೇಕು. ಈ ವಿಷಯದಲ್ಲಿ ವಿಳಂಬಮಾಡಬಾರದು.

01194013a ವಾಹನಾನಿ ಪ್ರಭೂತಾನಿ ಮಿತ್ರಾಣಿ ಬಹುಲಾನಿ ಚ|

01194013c ಯಾವನ್ನ ತೇಷಾಂ ಗಾಂಧಾರೇ ತಾವದೇವಾಶು ವಿಕ್ರಮ||

ಗಾಂಧಾರೇ! ಅವರ ವಾಹನಗಳು ಹೆಚ್ಚಾಗುವುದರ ಮತ್ತು ಮಿತ್ರರು ಬಹಳವಾಗುವುದರ ಮೊದಲೇ ಅವರ ಮೇಲೆ ಯುದ್ಧಸಾರಬೇಕು.

01194014a ಯಾವಚ್ಚ ರಾಜಾ ಪಾಂಚಾಲ್ಯೋ ನೋದ್ಯಮೇ ಕುರುತೇ ಮನಃ|

01194014c ಸಹ ಪುತ್ರೈರ್ಮಹಾವೀರ್ಯೈಸ್ತಾವದೇವಾಶು ವಿಕ್ರಮ||

ಪುತ್ರರೊಂದಿಗೆ ರಾಜ ಪಾಂಚಾಲ್ಯನು ಏನನ್ನಾದರೂ ಮಾಡಲು ಮನಸ್ಸು ಮಾಡುವುದಕ್ಕಿಂತ ಮೊದಲೇ ಅವರ ಮೇಲೆ ಆಕ್ರಮಣಮಾಡು.

01194015a ಯಾವನ್ನಾಯಾತಿ ವಾರ್ಷ್ಣೇಯಃ ಕರ್ಷನ್ಯಾದವವಾಹಿನೀಂ|

01194015c ರಾಜ್ಯಾರ್ಥೇ ಪಾಂಡವೇಯಾನಾಂ ತಾವದೇವಾಶು ವಿಕ್ರಮ||

ಪಾಂಡವರಿಗೆ ರಾಜ್ಯವನ್ನು ದೊರಕಿಸಲು ವಾರ್ಷ್ಣೇಯನು ಯಾದವ ಸೇನೆಯನ್ನು ತರುವುದರ ಮೊದಲೇ ಅವರ ಮೇಲೆ ಆಕ್ರಮಣಮಾಡಬೇಕು.

01194016a ವಸೂನಿ ವಿವಿಧಾನ್ಭೋಗಾನ್ರಾಜ್ಯಮೇವ ಚ ಕೇವಲಂ|

01194016c ನಾತ್ಯಾಜ್ಯಮಸ್ತಿ ಕೃಷ್ಣಸ್ಯ ಪಾಂಡವಾರ್ಥೇ ಮಹೀಪತೇ||

ಮಹೀಪತೇ! ಪಾಂಡವರಿಗೋಸ್ಕರ ಕೃಷ್ಣನು ತನ್ನ ಸಂಪತ್ತು, ವಿವಿಧ ಭೋಗಗಳು ಮತ್ತೇನು ರಾಜ್ಯವನ್ನೂ ತ್ಯಾಗಮಾಡುತ್ತಾನೆ.

01194017a ವಿಕ್ರಮೇಣ ಮಹೀ ಪ್ರಾಪ್ತಾ ಭರತೇನ ಮಹಾತ್ಮನಾ|

01194017c ವಿಕ್ರಮೇಣ ಚ ಲೋಕಾಂಸ್ತ್ರೀಂಜಿತವಾನ್ಪಾಕಶಾಸನಃ||

ಮಹಾತ್ಮ ಭರತನು ತನ್ನ ವಿಕ್ರಮದಿಂದಲೇ ಈ ಮಹಿಯನ್ನು ಪಡೆದನು. ಪಾಕಶಾಸನನೂ ಕೂಡ ತನ್ನ ವಿಕ್ರಮದಿಂದಲೇ ಮೂರುಲೋಕಗಳನ್ನು ಗೆದ್ದನು.

01194018a ವಿಕ್ರಮಂ ಚ ಪ್ರಶಂಸಂತಿ ಕ್ಷತ್ರಿಯಸ್ಯ ವಿಶಾಂ ಪತೇ|

01194018c ಸ್ವಕೋ ಹಿ ಧರ್ಮಃ ಶೂರಾಣಾಂ ವಿಕ್ರಮಃ ಪಾರ್ಥಿವರ್ಷಭ||

ವಿಶಾಂಪತೇ! ಕ್ಷತ್ರಿಯರಲ್ಲಿ ವಿಕ್ರಮವನ್ನೇ ಪ್ರಶಂಸಿಸುತ್ತಾರೆ. ಪಾರ್ಥಿವರ್ಷಭ! ಶೂರರಿಗೆ ವಿಕ್ರಮವೇ ಸ್ವಧರ್ಮ.

01194019a ತೇ ಬಲೇನ ವಯಂ ರಾಜನ್ಮಹತಾ ಚತುರಂಗಿಣಾ|

01194019c ಪ್ರಮಥ್ಯ ದ್ರುಪದಂ ಶೀಘ್ರಮಾನಯಾಮೇಹ ಪಾಂಡವಾನ್||

ರಾಜನ್! ಮಹಾ ಚತುರಂಗಬಲದಿಂದ ದ್ರುಪದನನ್ನು ಸದೆಬಡಿದು ಶೀಘ್ರವಾಗಿ ಪಾಂಡವರನ್ನು ಇಲ್ಲಿಗೆ ಕರೆತರಬೇಕು.

01194020a ನ ಹಿ ಸಾಮ್ನಾ ನ ದಾನೇನ ನ ಭೇದೇನ ಚ ಪಾಂಡವಾಃ|

01194020c ಶಕ್ಯಾಃ ಸಾಧಯಿತುಂ ತಸ್ಮಾದ್ವಿಕ್ರಮೇಣೈವ ತಾಂಜ ಹಿ|

ಸಾಮ, ದಾನ, ಭೇದ, ಯಾವುದರಿಂದಲೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ವಿಕ್ರಮದಿಂದ ಮಾತ್ರ ಅವರನ್ನು ಜಯಿಸಬಹುದು.

01194021a ತಾನ್ವಿಕ್ರಮೇಣ ಜಿತ್ವೇಮಾಮಖಿಲಾಂ ಭುಂಕ್ಷ್ವ ಮೇದಿನೀಂ|

01194021c ನಾನ್ಯಮತ್ರ ಪ್ರಪಶ್ಯಾಮಿ ಕಾರ್ಯೋಪಾಯಂ ಜನಾಧಿಪ||

ಜನಾಧಿಪ! ವಿಕ್ರಮದಿಂದ ಅವರನ್ನು ಜಯಿಸಿ ಅಖಿಲ ಮೇದಿನಿಯನ್ನು ಭೋಗಿಸು. ಬೇರೆ ಯಾವ ಕಾರ್ಯೋಪಾಯವೂ ನನಗೆ ತೋಚುತ್ತಿಲ್ಲ.””

01194022 ವೈಶಂಪಾಯನ ಉವಾಚ|

01194022a ಶ್ರುತ್ವಾ ತು ರಾಧೇಯವಚೋ ಧೃತರಾಷ್ಟ್ರಃ ಪ್ರತಾಪವಾನ್|

01194022c ಅಭಿಪೂಜ್ಯ ತತಃ ಪಶ್ಚಾದಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ರಾಧೇಯನ ಮಾತುಗಳನ್ನು ಕೇಳಿದ ಪ್ರತಾಪಿ ಧೃತರಾಷ್ಟ್ರನು ಅದನ್ನು ಪ್ರಶಂಸಿಸಿ ನಂತರ ಈ ಮಾತುಗಳನ್ನಾಡಿದನು:

01194023a ಉಪಪನ್ನಂ ಮಹಾಪ್ರಾಜ್ಞೇ ಕೃತಾಸ್ತ್ರೇ ಸೂತನಂದನೇ|

01194023c ತ್ವಯಿ ವಿಕ್ರಮಸಂಪನ್ನಮಿದಂ ವಚನಮೀದೃಶಂ||

“ಮಹಾಪ್ರಾಜ್ಞ ಕೃತಾಸ್ತ್ರ ಸೂತನಂದನ! ಈ ವಿಕ್ರಮ ಮಾತುಗಳು ನಿನ್ನಂಥವರಿಗೆ ಸರಿಯೆನಿಸುತ್ತದೆ.

01194024a ಭೂಯ ಏವ ತು ಭೀಷ್ಮಶ್ಚ ದ್ರೋಣೋ ವಿದುರ ಏವ ಚ|

01194024c ಯುವಾಂ ಚ ಕುರುತಾಂ ಬುದ್ಧಿಂ ಭವೇದ್ಯಾ ನಃ ಸುಖೋದಯಾ||

ಆದರೆ ಭೀಷ್ಮ, ದ್ರೋಣ, ವಿದುರ ಮತ್ತು ನೀವಿಬ್ಬರೂ ಸೇರಿ ನಮಗೆ ಸುಖವನ್ನು ತರುವಂತೆ ಏನಾದರೂ ಯೋಚಿಸಿ.”

01194025a ತತ ಆನಾಯ್ಯ ತಾನ್ಸರ್ವಾನ್ಮಂತ್ರಿಣಃ ಸುಮಹಾಯಶಾಃ|

01194025c ಧೃತರಾಷ್ಟ್ರೋ ಮಹಾರಾಜ ಮಂತ್ರಯಾಮಾಸ ವೈ ತದಾ||

ನಂತರ ಆ ಸುಮಹಾಯಶ ಮಹಾರಾಜ ಧೃತರಾಷ್ಟ್ರನು ಆ ಎಲ್ಲ ಮಂತ್ರಿಗಳನ್ನೂ ಕರೆಯಿಸಿ, ಅವರೊಂದಿಗೆ ಮಂತ್ರಾಲೋಚನೆ ಮಾಡಿದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ಧೃತರಾಷ್ಟ್ರಮಂತ್ರಣೇ ಚತುರ್ನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ಧೃತರಾಷ್ಟ್ರಮಂತ್ರಣದಲ್ಲಿ ನೂರಾತೊಂಭತ್ತ್ನಾಲ್ಕನೆಯ ಅಧ್ಯಾಯವು.

Related image

Comments are closed.