ಆದಿ ಪರ್ವ: ವೈವಾಹಿಕ ಪರ್ವ
೧೯೧
ದ್ರೌಪದಿಗೆ ಕುಂತಿಯ ಆಶೀರ್ವಾದ (೧-೧೨). ಕೃಷ್ಣನು ಪಾಂಡವರಿಗೆ ಉಡುಗೊರೆಗಳನ್ನಿತ್ತುದು (೧೩-೧೯).
01191001 ವೈಶಂಪಾಯನ ಉವಾಚ|
01191001a ಪಾಂಡವೈಃ ಸಹ ಸಂಯೋಗಂ ಗತಸ್ಯ ದ್ರುಪದಸ್ಯ ತು|
01191001c ನ ಬಭೂವ ಭಯಂ ಕಿಂ ಚಿದ್ದೇವೇಭ್ಯೋಽಪಿ ಕಥಂ ಚನ||
ವೈಶಂಪಾಯನನು ಹೇಳಿದನು: “ಪಾಂಡವರ ಜೊತೆ ಸೇರಿಕೊಂಡ ದ್ರುಪದನಿಗೆ ಯಾರ ಭಯವೂ, ದೇವತೆಗಳ ಭಯವೂ ಉಳಿಯಲಿಲ್ಲ.
01191002a ಕುಂತೀಮಾಸಾದ್ಯ ತಾ ನಾರ್ಯೋ ದ್ರುಪದಸ್ಯ ಮಹಾತ್ಮನಃ|
01191002c ನಾಮ ಸಂಕೀರ್ತಯಂತ್ಯಸ್ತಾಃ ಪಾದೌ ಜಗ್ಮುಃ ಸ್ವಮೂರ್ಧಭಿಃ||
ಮಹಾತ್ಮ ದ್ರುಪದನ ನಾರಿಯರು ಕುಂತಿಯ ಬಳಿಬಂದು ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಂಡು ತಮ್ಮ ನೆತ್ತಿಯನ್ನು ಅವಳ ಪಾದಗಳಿಗೆ ಮುಟ್ಟಿಸಿದರು.
01191003a ಕೃಷ್ಣಾ ಚ ಕ್ಷೌಮಸಂವೀತಾ ಕೃತಕೌತುಕಮಂಗಲಾ|
01191003c ಕೃತಾಭಿವಾದನಾ ಶ್ವಶ್ರ್ವಾಸ್ತಸ್ಥೌ ಪ್ರಹ್ವಾ ಕೃತಾಂಜಲಿಃ||
ರೇಷ್ಮೆಯ ವಸ್ತ್ರಗಳನ್ನು ಧರಿಸಿದ, ಮಾಂಗಲ್ಯವನ್ನು ಧರಿಸಿದ ಕೃಷ್ಣೆಯೂ ಕೂಡ ತನ್ನ ಅತ್ತೆಗೆ ನಮಸ್ಕರಿಸಿ ಕೈ ಮುಗಿದು ನಿಂತುಕೊಂಡಳು.
01191004a ರೂಪಲಕ್ಷಣಸಂಪನ್ನಾಂ ಶೀಲಾಚಾರಸಮನ್ವಿತಾಂ|
01191004c ದ್ರೌಪದೀಮವದತ್ಪ್ರೇಮ್ಣಾ ಪೃಥಾಶೀರ್ವಚನಂ ಸ್ನುಷಾಂ||
ಪೃಥೆಯು ತನ್ನ ರೂಪಲಕ್ಷಣಸಂಪನ್ನೆ, ಶೀಲಾಚಾರಸಮನ್ವಿತೆ ಸೊಸೆ ದ್ರೌಪದಿಗೆ ಪ್ರೀತಿಯಿಂದ ಆಶೀರ್ವಚನಗಳನ್ನಿತ್ತಳು.
01191005a ಯಥೇಂದ್ರಾಣೀ ಹರಿಹಯೇ ಸ್ವಾಹಾ ಚೈವ ವಿಭಾವಸೌ|
01191005c ರೋಹಿಣೀ ಚ ಯಥಾ ಸೋಮೇ ದಮಯಂತೀ ಯಥಾ ನಲೇ||
01191006a ಯಥಾ ವೈಶ್ರವಣೇ ಭದ್ರಾ ವಸಿಷ್ಠೇ ಚಾಪ್ಯರುಂಧತೀ|
01191006c ಯಥಾ ನಾರಾಯಣೇ ಲಕ್ಷ್ಮೀಸ್ತಥಾ ತ್ವಂ ಭವ ಭರ್ತೃಷು||
“ಇಂದ್ರಾಣಿಯು ಹರಿಹಯನಿಗೆ ಹೇಗೋ ಹಾಗೆ, ಸ್ವಾಹಾಳು ವಿಭಾವಸುವಿಗೆ ಹೇಗೋ ಹಾಗೆ, ರೋಹಿಣಿಯು ಚಂದ್ರನಿಗೆ ಹೇಗೋ ಹಾಗೆ, ದಮಯಂತಿಯು ನಳನಿಗೆ ಹೇಗೋ ಹಾಗೆ, ಭದ್ರಳು ವೈಶ್ರವಣನಿಗೆ ಹೇಗೋ ಹಾಗೆ, ಅರುಂಧತಿಯು ವಸಿಷ್ಠನಿಗೆ ಹೇಗೋ ಹಾಗೆ, ಮತ್ತು ಲಕ್ಷ್ಮಿಯು ನಾರಾಯಣನಿಗೆ ಹೇಗೋ ಹಾಗೆ ನೀನು ನಿನ್ನ ಪತಿಯಂದಿರಿಗೆ ಆಗು.
01191007a ಜೀವಸೂರ್ವೀರಸೂರ್ಭದ್ರೇ ಬಹುಸೌಖ್ಯಸಮನ್ವಿತಾ|
01191007c ಸುಭಗಾ ಭೋಗಸಂಪನ್ನಾ ಯಜ್ಞಪತ್ನೀ ಸ್ವನುವ್ರತಾ||
01191008a ಅತಿಥೀನಾಗತಾನ್ಸಾಧೂನ್ಬಾಲಾನ್ವೃದ್ಧಾನ್ಗುರೂಂಸ್ತಥಾ|
01191008c ಪೂಜಯಂತ್ಯಾ ಯಥಾನ್ಯಾಯಂ ಶಶ್ವದ್ಗಚ್ಛಂತು ತೇ ಸಮಾಃ||
ಜೀವಂತ ಮಕ್ಕಳಿಗೆ ಮತ್ತು ವೀರ ಪುತ್ರರಿಗೆ ಜನ್ಮ ನೀಡು, ಸುಭದ್ರೇ! ಬಹುಸೌಖ್ಯಸಮನ್ವಿತಳಾಗಿರು ಸುಭಗೇ! ಬೋಗ ಸಂಪನ್ನಳಾಗು. ಯಜ್ಞಪತ್ನಿಯಾಗು. ಒಳ್ಳೆಯ ಅನುವ್ರತಳಾಗು. ಆಗಮಿಸುವ ಅತಿಥಿಗಳ, ಸಾಧುಗಳ, ಬಾಲಕ-ವೃದ್ಧರ, ಮತ್ತು ಗುರುವರ್ಯರ ಯಥಾವತ್ತಾದ ಪೂಜೆಗಳಲ್ಲಿಯೇ ನಿನ್ನ ವರ್ಷಗಳು ಕಳೆಯಲಿ.
01191009a ಕುರುಜಾಂಗಲಮುಖ್ಯೇಷು ರಾಷ್ಟ್ರೇಷು ನಗರೇಷು ಚ|
01191009c ಅನು ತ್ವಮಭಿಷಿಚ್ಯಸ್ವ ನೃಪತಿಂ ಧರ್ಮವತ್ಸಲಂ||
ಕುರುಜಂಗಲದ ಮುಖ್ಯ ರಾಷ್ಟ್ರಗಳಲ್ಲಿ ಮತ್ತು ನಗರಗಳಲ್ಲಿ ಧರ್ಮವತ್ಸಲ ನೃಪತಿಯೊಡನೆ ಅಭಿಷಿಕ್ತಳಾಗು.
01191010a ಪತಿಭಿರ್ನಿರ್ಜಿತಾಮುರ್ವೀಂ ವಿಕ್ರಮೇಣ ಮಹಾಬಲೈಃ|
01191010c ಕುರು ಬ್ರಾಹ್ಮಣಸಾತ್ಸರ್ವಾಮಶ್ವಮೇಧೇ ಮಹಾಕ್ರತೌ||
ಮಹಾಬಲಶಾಲಿಗಳಾದ ನಿನ್ನ ಪತಿಗಳು ತಮ್ಮ ವಿಕ್ರಮದಿಂದ ಈ ಭೂಮಿಯನ್ನು ಜಯಿಸಿದಾಗ ಮಹಾಕ್ರತು ಅಶ್ವಮೇಧದ ಸಮಯದಲ್ಲಿ ಎಲ್ಲ ಬ್ರಾಹ್ಮಣರಿಗೂ ಕಾಣಿಕೆಗಳನ್ನು ನೀಡುವಂಥವಳಾಗು.
01191011a ಪೃಥಿವ್ಯಾಂ ಯಾನಿ ರತ್ನಾನಿ ಗುಣವಂತಿ ಗುಣಾನ್ವಿತೇ|
01191011c ತಾನ್ಯಾಪ್ನುಹಿ ತ್ವಂ ಕಲ್ಯಾಣಿ ಸುಖಿನೀ ಶರದಾಂ ಶತಂ||
ಗುಣಾನ್ವಿತೇ! ಕಲ್ಯಾಣೀ! ಪೃಥ್ವಿಯಲ್ಲಿ ಎಷ್ಟು ಬೆಲೆಬಾಳುವ ರತ್ನಗಳು ಇವೆಯೋ ಅವೆಲ್ಲವನ್ನೂ ಪಡೆದು ನೂರಾರು ವರ್ಷಗಳು ಸುಖದಿಂದ ಬಾಳು.
01191012a ಯಥಾ ಚ ತ್ವಾಭಿನಂದಾಮಿ ವಧ್ವದ್ಯ ಕ್ಷೌಮಸಂವೃತಾಂ|
01191012c ತಥಾ ಭೂಯೋಽಭಿನಂದಿಷ್ಯೇ ಸೂತಪುತ್ರಾಂ ಗುಣಾನ್ವಿತಾಂ||
ಮದುವೆಯ ಪತ್ತಲವನ್ನುಟ್ಟಿರುವ ನಿನಗೆ ಈಗ ನಾನು ಹೇಗೆ ಆಶೀರ್ವದಿಸುತ್ತಿದ್ದೇನೆಯೋ ಹಾಗೆ ಇನ್ನೊಮ್ಮೆ ಗುಣಾನ್ವಿತ ಪುತ್ರರನ್ನು ಪಡೆದಾಗಲೂ ನಿನಗೆ ಆಶೀರ್ವದಿಸುತ್ತೇನೆ.”
01191013a ತತಸ್ತು ಕೃತದಾರೇಭ್ಯಃ ಪಾಂಡುಭ್ಯಃ ಪ್ರಾಹಿಣೋದ್ಧರಿಃ|
01191013c ಮುಕ್ತಾವೈಡೂರ್ಯಚಿತ್ರಾಣಿ ಹೈಮಾನ್ಯಾಭರಣಾನಿ ಚ||
ಪಾಂಡವರು ಪತ್ನಿಯನ್ನು ಪಡೆದ ನಂತರ ಹರಿಯು ಮುಕ್ತವೈಡೂರ್ಯ ಚಿತ್ರಗಳನ್ನೊಡಗೂಡಿದ ಹೇಮ ಆಭರಣಾದಿಗಳನ್ನು ಅವರಿಗೆ ಕಳುಹಿಸಿದನು.
01191014a ವಾಸಾಂಸಿ ಚ ಮಹಾರ್ಹಾಣಿ ನಾನಾದೇಶ್ಯಾನಿ ಮಾಧವಃ|
01191014c ಕಂಬಲಾಜಿನರತ್ನಾನಿ ಸ್ಪರ್ಶವಂತಿ ಶುಭಾನಿ ಚ||
01191015a ಶಯನಾಸನಯಾನಾನಿ ವಿವಿಧಾನಿ ಮಹಾಂತಿ ಚ|
01191015c ವೈಡೂರ್ಯವಜ್ರಚಿತ್ರಾಣಿ ಶತಶೋ ಭಾಜನಾನಿ ಚ||
ಮಾಧವನು ಅವರಿಗೆ ಬೇರೆ ಬೇರೆ ದೇಶಗಳ ಅತ್ಯಂತ ಬೆಲೆಬಾಳುವ ವಸ್ತ್ರಗಳನ್ನೂ, ಮುಟ್ಟಲು ಚೆನ್ನಾಗಿರುವ ಸುಂದರ ಕಂಬಳಿ, ಜಿನ ಮತ್ತು ರತ್ನಗಳನ್ನೂ, ಬೇರೆ ಬೇರೆ ತರಹದ ಹಾಸಿಗೆ, ಆಸನ ಮತ್ತು ಪಲ್ಲಕ್ಕಿಗಳನ್ನು ಬಹಳ ಸಂಖ್ಯೆಯಲ್ಲಿ, ವೈಡೂರ್ಯ ವಜ್ರ ಚಿತ್ರಗಳಿಂದೊಡಗೂಡಿದ ನೂರಾರು ಪಾತ್ರೆಗಳನ್ನು ಕಳುಹಿಸಿದನು.
01191016a ರೂಪಯೌವನದಾಕ್ಷಿಣ್ಯೈರುಪೇತಾಶ್ಚ ಸ್ವಲಂಕೃತಾಃ|
01191016c ಪ್ರೇಷ್ಯಾಃ ಸಂಪ್ರದದೌ ಕೃಷ್ಣೋ ನಾನಾದೇಶ್ಯಾಃ ಸಹಸ್ರಶಃ||
01191017a ಗಜಾನ್ವಿನೀತಾನ್ಭದ್ರಾಂಶ್ಚ ಸದಶ್ವಾಂಶ್ಚ ಸ್ವಲಂಕೃತಾನ್|
01191017c ರಥಾಂಶ್ಚ ದಾಂತಾನ್ಸೌವರ್ಣೈಃ ಶುಭೈಃ ಪಟ್ಟೈರಲಂಕೃತಾನ್||
ಕೃಷ್ಣನು ನಾನಾ ದೇಶಗಳಿಂದ ಪಡೆದ ರೂಪ-ಯೌವನ-ದಾಕ್ಷಿಣ್ಯಗಳಿಂದೊಡಗೂಡಿದ ಸ್ವಲಂಕೃತ ಸಹಸ್ರಾರು ದಾಸಿಯರನ್ನೂ, ಸುರಕ್ಷಿತ ಪಳಗಿದ ಆನೆಗಳನ್ನೂ, ಪಳಗಿದ ಸ್ವಲಂಕೃತ ಒಳ್ಳೆಯ ಅಶ್ವಗಳನ್ನೂ, ಮತ್ತು ಸುಂದರ ಚಿನ್ನದ ಬಾವುಟಗಳಿಂದ ಅಲಂಕೃತ ರಥಗಳನ್ನೂ ಕಳುಹಿಸಿದನು.
01191018a ಕೋಟಿಶಶ್ಚ ಸುವರ್ಣಂ ಸ ತೇಷಾಮಕೃತಕಂ ತಥಾ|
01191018c ವೀತೀಕೃತಮಮೇಯಾತ್ಮಾ ಪ್ರಾಹಿಣೋನ್ಮಧುಸೂದನಃ||
ಅಮೇಯಾತ್ಮ ಮಧುಸೂದನನು ಕೋಟಿ ಸಂಖ್ಯೆಗಳಲ್ಲಿ ಅವರಿಗೆ ಚಿನ್ನದ ಗಟ್ಟಿಗಳನ್ನು ಕಳುಹಿಸಿದನು.
01191019a ತತ್ಸರ್ವಂ ಪ್ರತಿಜಗ್ರಾಹ ಧರ್ಮರಾಜೋ ಯುಧಿಷ್ಠಿರಃ|
01191019c ಮುದಾ ಪರಮಯಾ ಯುಕ್ತೋ ಗೋವಿಂದಪ್ರಿಯಕಾಮ್ಯಯಾ||
ಗೋವಿಂದನಿಗೆ ಪ್ರಿಯವನ್ನೇ ಬಯಸಿದ ಧರ್ಮರಾಜ ಯುಧಿಷ್ಠಿರನು ಅತ್ಯಂತ ಸಂತೋಷಗೊಂಡು ಅವುಗಳೆಲ್ಲವನ್ನೂ ಸ್ವೀಕರಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಏಕನವತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ನೂರಾತೊಂಭತ್ತೊಂದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೩/೧೦೦, ಅಧ್ಯಾಯಗಳು-೧೯೧/೧೯೯೫, ಶ್ಲೋಕಗಳು-೬೧೯೪/೭೩೭೮೪