Adi Parva: Chapter 188

ಆದಿ ಪರ್ವ: ವೈವಾಹಿಕ ಪರ್ವ

೧೮೮

ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೆ ಧರ್ಮಸಂಕರವಾಗುವುದಿಲ್ಲವೇ ಎಂದು ಕೇಳಲು ವ್ಯಾಸನು ಎಲ್ಲರ ಅಭಿಪ್ರಾಯಗಳನ್ನು ಕೇಳುವುದು (೧-೧೯). ಸನಾತನ ಧರ್ಮವನ್ನು ದ್ರುಪದನಿಗೆ ಮಾತ್ರ ಹೇಳುವುದಾಗಿ ವ್ಯಾಸನು ದ್ರುಪದನನ್ನು ಅಂತಃಪುರದ ಏಕಾಂತಕ್ಕೆ ಕರೆದುಕೊಂಡು ಹೋದುದು (೨೦-೨೨).

01188001 ವೈಶಂಪಾಯನ ಉವಾಚ|

01188001a ತತಸ್ತೇ ಪಾಂಡವಾಃ ಸರ್ವೇ ಪಾಂಚಾಲ್ಯಶ್ಚ ಮಹಾಯಶಾಃ|

01188001c ಪ್ರತ್ಯುತ್ಥಾಯ ಮಹಾತ್ಮಾನಂ ಕೃಷ್ಣಂ ದೃಷ್ಟ್ವಾಭ್ಯಪೂಜಯನ್||

ವೈಶಂಪಾಯನನು ಹೇಳಿದನು: “ಮಾಹಾತ್ಮ ಕೃಷ್ಣನನ್ನು ನೋಡಿದಾಕ್ಷಣವೇ ಮಹಾಯಶ ಪಾಂಡವ ಮತ್ತು ಪಾಂಚಾಲ ಸರ್ವರೂ ಮೇಲೆದ್ದು ಪೂಜಿಸಿದರು.

01188002a ಪ್ರತಿನಂದ್ಯ ಸ ತಾನ್ಸರ್ವಾನ್ಪೃಷ್ಟ್ವಾ ಕುಶಲಮಂತತಃ|

01188002c ಆಸನೇ ಕಾಂಚನೇ ಶುಭ್ರೇ ನಿಷಸಾದ ಮಹಾಮನಾಃ||

ಅವರೆಲ್ಲರಿಗೂ ಪ್ರತಿವಂದಿಸಿ ಕುಶಲವನ್ನು ವಿಚಾರಿಸಿದ ಮಹಾಮನನು ಶುಭ್ರ ಕಾಂಚನದ ಆಸನದಲ್ಲಿ ಕುಳಿತುಕೊಂಡನು.

01188003a ಅನುಜ್ಞಾತಾಸ್ತು ತೇ ಸರ್ವೇ ಕೃಷ್ಣೇನಾಮಿತತೇಜಸಾ|

01188003c ಆಸನೇಷು ಮಹಾರ್ಹೇಷು ನಿಷೇದುರ್ದ್ವಿಪದಾಂ ವರಾಃ||

ಅಮಿತತೇಜಸ್ವಿ ಮಹರ್ಷಿ ದ್ವಿಪದರಲ್ಲಿ ಶ್ರೇಷ್ಠ ಕೃಷ್ಣನಿಂದ ಅನುಜ್ಞೆಯನ್ನು ಪಡೆದ ಎಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡರು.

01188004a ತತೋ ಮುಹೂರ್ತಾನ್ಮಧುರಾಂ ವಾಣೀಮುಚ್ಚಾರ್ಯ ಪಾರ್ಷತಃ|

01188004c ಪಪ್ರಚ್ಛ ತಂ ಮಹಾತ್ಮಾನಂ ದ್ರೌಪದ್ಯರ್ಥೇ ವಿಶಾಂ ಪತಿಃ||

ಸ್ವಲ್ಪಸಮಯದ ನಂತರ ವಿಶಾಂಪತಿ ಪಾರ್ಷತನು ಮಧುರ ವಾಣಿಯಲ್ಲಿ ದ್ರೌಪದಿಯ ಕುರಿತು ಮಹಾತ್ಮನನ್ನು ಕೇಳಿದನು.

01188005a ಕಥಮೇಕಾ ಬಹೂನಾಂ ಸ್ಯಾನ್ನ ಚ ಸ್ಯಾದ್ಧರ್ಮಸಂಕರಃ|

01188005c ಏತನ್ನೋ ಭಗವಾನ್ಸರ್ವಂ ಪ್ರಬ್ರವೀತು ಯಥಾತಥಂ||

“ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೂ ಧರ್ಮಸಂಕರವಾಗದೇ ಇರುವುದು ಹೇಗೆ ಸಾಧ್ಯ? ಭಗವನ್! ಇವೆಲ್ಲವನ್ನೂ ಯಥಾವತ್ತಾಗಿ ನಮಗೆ ಹೇಳು.”

01188006 ವ್ಯಾಸ ಉವಾಚ|

01188006a ಅಸ್ಮಿನ್ಧರ್ಮೇ ವಿಪ್ರಲಂಭೇ ಲೋಕವೇದವಿರೋಧಕೇ|

01188006c ಯಸ್ಯ ಯಸ್ಯ ಮತಂ ಯದ್ಯಚ್ಛ್ರೋತುಮಿಚ್ಛಾಮಿ ತಸ್ಯ ತತ್||

ವ್ಯಾಸನು ಹೇಳಿದನು: “ಧರ್ಮಕ್ಕೆ ವಿಪ್ರಲಂಭವೆನಿಸಿಕೊಂಡ, ಲೋಕವೇದಗಳಿಗೆ ವಿರೋಧವೆನಿಸುವ ಇದರ ಕುರಿತು ನೀವು ಪ್ರತಿಯೊಬ್ಬರ ಸ್ವಂತ ಅಭಿಪ್ರಾಯಗಳನ್ನು ತಿಳಿಯ ಬಯಸುತ್ತೇನೆ.”

01188007 ದ್ರುಪದ ಉವಾಚ|

01188007a ಅಧರ್ಮೋಽಯಂ ಮಮ ಮತೋ ವಿರುದ್ಧೋ ಲೋಕವೇದಯೋಃ|

01188007c ನ ಹ್ಯೇಕಾ ವಿದ್ಯತೇ ಪತ್ನೀ ಬಹೂನಾಂ ದ್ವಿಜಸತ್ತಮ||

ದ್ರುಪದನು ಹೇಳಿದನು: “ಲೋಕವೇದ ವಿರುದ್ಧವಾದ ಇದು ಅಧರ್ಮವೆಂದು ನನ್ನ ಮತ. ದ್ವಿಜಸತ್ತಮ! ಬಹುಮಂದಿಗಳಿಗೆ ಪತ್ನಿಯು ಒಬ್ಬಳೇ ಇರುವುದಿಲ್ಲ.

01188008a ನ ಚಾಪ್ಯಾಚರಿತಃ ಪೂರ್ವೈರಯಂ ಧರ್ಮೋ ಮಹಾತ್ಮಭಿಃ|

01188008c ನ ಚ ಧರ್ಮೋಽಪ್ಯನೇಕಸ್ಥಶ್ಚರಿತವ್ಯಃ ಸನಾತನಃ||

ಹಿಂದೆಂದೂ ಮಹಾತ್ಮರು ಯಾರೂ ಈ ಧರ್ಮವನ್ನು ಆಚರಿಸಲಿಲ್ಲ. ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದುವುದು ಸನಾತನ ಧರ್ಮವಲ್ಲ ಮತ್ತು ಆಚರಿಸುವಂತಿಲ್ಲ.

01188009a ಅತೋ ನಾಹಂ ಕರೋಮ್ಯೇವಂ ವ್ಯವಸಾಯಂ ಕ್ರಿಯಾಂ ಪ್ರತಿ|

01188009c ಧರ್ಮಸಂದೇಹಸಂದಿಗ್ಧಂ ಪ್ರತಿಭಾತಿ ಹಿ ಮಾಮಿದಂ||

ಆದುದರಿಂದ ನಾನು ಇದನ್ನು ನಡೆಸಿಕೊಡಬೇಕೋ ಬೇಡವೋ ಎಂದು ನಿರ್ಧರಿಸಲಾರೆ. ನನಗೆ ಇದೊಂದು ಧರ್ಮಸಂದೇಹ ಸಂದಿಗ್ಧವೆಂದು ತೋರುತ್ತದೆ.”

01188010 ಧೃಷ್ಟದ್ಯುಮ್ನ ಉವಾಚ|

01188010a ಯವೀಯಸಃ ಕಥಂ ಭಾರ್ಯಾಂ ಜ್ಯೇಷ್ಠೋ ಭ್ರಾತಾ ದ್ವಿಜರ್ಷಭ|

01188010c ಬ್ರಹ್ಮನ್ಸಮಭಿವರ್ತೇತ ಸದ್ವೃತ್ತಃ ಸಂಸ್ತಪೋಧನ||

ಧೃಷ್ಟಧ್ಯುಮ್ನನು ಹೇಳಿದನು: “ದ್ವಿಜರ್ಷಭ! ಬ್ರಹ್ಮನ್! ತಪೋಧನ! ಜ್ಯೇಷ್ಠ ಭ್ರಾತನು ತನ್ನ ತಮ್ಮನ ಭಾರ್ಯೆಯೊಂದಿಗೆ ಕೂಡಿಕೊಂಡೂ ಧರ್ಮವಂತನಾಗಿರಲು ಹೇಗೆ ಸಾಧ್ಯ?

01188011a ನ ತು ಧರ್ಮಸ್ಯ ಸೂಕ್ಷ್ಮತ್ವಾದ್ಗತಿಂ ವಿದ್ಮಃ ಕಥಂ ಚನ|

01188011c ಅಧರ್ಮೋ ಧರ್ಮ ಇತಿ ವಾ ವ್ಯವಸಾಯೋ ನ ಶಕ್ಯತೇ||

01188012a ಕರ್ತುಮಸ್ಮದ್ವಿಧೈರ್ಬ್ರಹ್ಮಂಸ್ತತೋ ನ ವ್ಯವಸಾಮ್ಯಹಂ|

01188012c ಪಂಚಾನಾಂ ಮಹಿಷೀ ಕೃಷ್ಣಾ ಭವತ್ವಿತಿ ಕಥಂ ಚನ||

ಸೂಕ್ಷ್ಮ ಧರ್ಮದ ಗತಿಯನ್ನು ಅರ್ಥಮಾಡಿಕೊಳ್ಳಲು ಎಂದೂ ಸಾಧ್ಯವಾಗಲಾರದು. ಬ್ರಹ್ಮನ್! ಇದು ಧರ್ಮವೋ ಅಧರ್ಮವೋ ಎಂದು ನಿರ್ಧರಿಸುವುದು ನಮ್ಮಂಥವರಿಗೆ ಶಕ್ಯವಿಲ್ಲ. ಆದುದರಿಂದ ಕೃಷ್ಣೆಯು ಐವರ ರಾಣಿಯಾಗಬಹುದೋ ಅಥವಾ ಇಲ್ಲವೋ ಎಂದು ನಿರ್ಧರಿಸಲು ನಮಗೆ ಸಾಧ್ಯವಾಗುತ್ತಿಲ್ಲ.”

01188013 ಯುಧಿಷ್ಠಿರ ಉವಾಚ|

01188013a ನ ಮೇ ವಾಗನೃತಂ ಪ್ರಾಹ ನಾಧರ್ಮೇ ಧೀಯತೇ ಮತಿಃ|

01188013c ವರ್ತತೇ ಹಿ ಮನೋ ಮೇಽತ್ರ ನೈಷೋಽಧರ್ಮಃ ಕಥಂ ಚನ||

ಯುಧಿಷ್ಠಿರನು ಹೇಳಿದನು: “ನನ್ನ ಮಾತು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಮತಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ಮನಸ್ಸು ಇದನ್ನು ಪ್ರೋತ್ಸಾಹಿಸುತ್ತಿದೆ ಎಂದರೆ ಇದು ಎಂದೂ ಅಧರ್ಮವಾಗಿರಲು ಸಾಧ್ಯವಿಲ್ಲ.

01188014a ಶ್ರೂಯತೇ ಹಿ ಪುರಾಣೇಽಪಿ ಜಟಿಲಾ ನಾಮ ಗೌತಮೀ|

01188014c ಋಷೀನಧ್ಯಾಸಿತವತೀ ಸಪ್ತ ಧರ್ಮಭೃತಾಂ ವರ||

ಧರ್ಮಭೃತರಲ್ಲಿ ಶ್ರೇಷ್ಠ! ಪುರಾಣಗಳಲ್ಲಿಯೂ ಕೂಡ ಜಟಿಲಾ ಎಂಬ ಹೆಸರಿನ ಗೌತಮಿಯೋರ್ವಳು ಏಳು ಋಷಿಗಳೊಡನೆ ಕೂಡಿದ್ದಳು ಎಂದು ನಾವು ಕೇಳಿದ್ದೇವೆ.

01188015a ಗುರೋಶ್ಚ ವಚನಂ ಪ್ರಾಹುರ್ಧರ್ಮಂ ಧರ್ಮಜ್ಞಸತ್ತಮ|

01188015c ಗುರೂಣಾಂ ಚೈವ ಸರ್ವೇಷಾಂ ಜನಿತ್ರೀ ಪರಮೋ ಗುರುಃ||

ಧರ್ಮಜ್ಞಸತ್ತಮ! ಗುರುವಿನ ವಚನವೇ ಧರ್ಮವೆಂದು ಹೇಳುತ್ತಾರೆ. ಗುರುಗಳಲ್ಲೆಲ್ಲಾ ಜನನಿಯೇ ಪರಮ ಗುರುವು.

01188016a ಸಾ ಚಾಪ್ಯುಕ್ತವತೀ ವಾಚಂ ಭೈಕ್ಷವದ್ಭುಜ್ಯತಾಮಿತಿ|

01188016c ತಸ್ಮಾದೇತದಹಂ ಮನ್ಯೇ ಧರ್ಮಂ ದ್ವಿಜವರೋತ್ತಮ||

ದ್ವಿಜವರೋತ್ತಮ! ಅವಳೇ ನಮಗೆ ಭಿಕ್ಷೆಯಂತೆ ಹಂಚಿಕೊಳ್ಳಿ ಎಂದು ಹೇಳಿದ್ದಾಳೆ. ಆದುದರಿಂದ ನಾನು ಇದನ್ನೇ ಧರ್ಮವೆಂದು ತಿಳಿಯುತ್ತೇನೆ.”

01188017 ಕುಂತ್ಯುವಾಚ|

01188017a ಏವಮೇತದ್ಯಥಾಹಾಯಂ ಧರ್ಮಚಾರೀ ಯುಧಿಷ್ಠಿರಃ|

01188017c ಅನೃತಾನ್ಮೇ ಭಯಂ ತೀವ್ರಂ ಮುಚ್ಯೇಯಮನೃತಾತ್ಕಥಂ||

ಕುಂತಿಯು ಹೇಳಿದಳು: “ಧರ್ಮಚಾರಿ ಯುಧಿಷ್ಠಿರನು ಹೇಳಿದ ಹಾಗೆಯೇ ನಡೆಯಿತು. ಸುಳ್ಳಿನ ಕುರಿತು ನನಗೆ ತೀವ್ರ ಭಯವಿದೆ. ಈ ಸುಳ್ಳಿನಿಂದ ನಾನು ಹೇಗೆ ಹೊರಬರಲಿ?”

01188018 ವ್ಯಾಸ ಉವಾಚ|

01188018a ಅನೃತಾನ್ಮೋಕ್ಷ್ಯಸೇ ಭದ್ರೇ ಧರ್ಮಶ್ಚೈಷ ಸನಾತನಃ|

01188018c ನ ತು ವಕ್ಷ್ಯಾಮಿ ಸರ್ವೇಷಾಂ ಪಾಂಚಾಲ ಶೃಣು ಮೇ ಸ್ವಯಂ||

01188019a ಯಥಾಯಂ ವಿಹಿತೋ ಧರ್ಮೋ ಯತಶ್ಚಾಯಂ ಸನಾತನಃ|

01188019c ಯಥಾ ಚ ಪ್ರಾಹ ಕೌಂತೇಯಸ್ತಥಾ ಧರ್ಮೋ ನ ಸಂಶಯಃ||

ವ್ಯಾಸನು ಹೇಳಿದನು: “ಭದ್ರೇ! ಸುಳ್ಳಿನಿಂದ ಬಿಡುಗಡೆಯಾಗುತ್ತದೆ. ಇದೇ ಸನಾತನ ಧರ್ಮ. ಆದರೆ ನಾನು ಇದನ್ನು ನಿಮಗೆಲ್ಲರಿಗೂ ಹೇಳುವುದಿಲ್ಲ. ಈ ಸನಾತನ ಧರ್ಮವು ಏನು ಮತ್ತು ಅದು ಹೇಗೆ ಬಂದಿತು ಎನ್ನುವುದನ್ನು ಸ್ವಯಂ ಪಾಂಚಾಲನು ಮಾತ್ರ ನನ್ನಿಂದ ಕೇಳುತ್ತಾನೆ. ಕೌಂತೇಯನು ಹೇಳಿದ್ದುದೇ ಧರ್ಮ ಎನ್ನುವುದರಲ್ಲಿ ಸಂಶಯವೇ ಇಲ್ಲ.””

01188020 ವೈಶಂಪಾಯನ ಉವಾಚ|

01188020a ತತ ಉತ್ಥಾಯ ಭಗವಾನ್ವ್ಯಾಸೋ ದ್ವೈಪಾಯನಃ ಪ್ರಭುಃ|

01188020c ಕರೇ ಗೃಹೀತ್ವಾ ರಾಜಾನಂ ರಾಜವೇಶ್ಮ ಸಮಾವಿಶತ್||

ವೈಶಂಪಾಯನನು ಹೇಳಿದನು: “ಭಗವಾನ್ ಪ್ರಭು ದ್ವೈಪಾಯನ ವ್ಯಾಸನು ರಾಜನ ಕೈಗಳನ್ನು ಹಿಡಿದು ರಾಜನ ಅಂತಃಪುರವನ್ನು ಪ್ರವೇಶಿಸಿದನು.

01188021a ಪಾಂಡವಾಶ್ಚಾಪಿ ಕುಂತೀ ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

01188021c ವಿಚೇತಸಸ್ತೇ ತತ್ರೈವ ಪ್ರತೀಕ್ಷಂತೇ ಸ್ಮ ತಾವುಭೌ||

ಪಾಂಡವರು, ಕುಂತಿ, ಮತ್ತು ಪಾರ್ಷತ ಧೃಷ್ಟಧ್ಯುಮ್ನನು ವಿಚೇತಸರಾಗಿ ಅವರಿಬ್ಬರ ಪ್ರತೀಕ್ಷೆಯಲ್ಲಿ ಅಲ್ಲಿಯೇ ನಿಂತುಕೊಂಡರು.

01188022a ತತೋ ದ್ವೈಪಾಯನಸ್ತಸ್ಮೈ ನರೇಂದ್ರಾಯ ಮಹಾತ್ಮನೇ|

01188022c ಆಚಖ್ಯೌ ತದ್ಯಥಾ ಧರ್ಮೋ ಬಹೂನಾಮೇಕಪತ್ನಿತಾ||

ಆಗ ದ್ವೈಪಾಯನನು ಮಹಾತ್ಮ ನರೇಂದ್ರನಿಗೆ ಒಬ್ಬಳಿಗೇ ಬಹುಮಂದಿ ಪತಿಗಳಾಗುವ ಧರ್ಮವು ಹೇಗೆ ಬಂದಿತೆಂದು ಹೇಳಿದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ವ್ಯಾಸವಾಕ್ಯೇ ಅಷ್ಟಾಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ವ್ಯಾಸವಾಕ್ಯದಲ್ಲಿ ನೂರಾಎಂಭತ್ತೆಂಟನೆಯ ಅಧ್ಯಾಯವು.

Related image

Comments are closed.